ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಲಿಕ್ ಆಯ್ತು ಕವಿತೆ : ಲೆಕ್ಕಕ್ಕೆ ಸಿಗದಷ್ಟು ರೀಲುಗಳು

ಕಾಲನ ಲೀಲೆಯಲ್ಲಿ [ಕ್ಯಾಮೆರಾ] ಕಣ್ಣು

nagarekha-gaokar

ನಾಗರೇಖಾ ಗಾಂವಕರ್  

ಗತವೈಭವಕ್ಕೆ ಹಾಕಿದ ರುಜುವಂತಿದೆ
ಈ ಕಣ್ಣು
ಕಪ್ಪು ವರ್ತುಲವಾಗಿ ತುಕ್ಕನ್ನೆ ಧರಿಸಿ.
ತಾತನ ಕಾಲದ್ದೆಂದು ಜೋಪಾನ ಮಾಡುವ
ಬಯಕೆ
ಚಿನ್ನದ ಗುಣವಿದೆ ಹಳಬನಲ್ಲಿ ಅದಕ್ಕಾಗಿ.

ಸತ್ತು ಬದುಕುವ ಪರಿ ಎಂದರೆ
ಇದೇ ಎಂದೆನ್ನಿಸುತ್ತದೆ.
ಅದೆಷ್ಟೋ ಪಾತ್ರಗಳು, ಮುಖ, ಮುಸುಡಿಗಳು
ಭಾವಚಿತ್ರಗಳಾಗಿ ಶಾಲೆ ಕಾಲೇಜು, ಕೋರ್ಟ್ ಕಛೇರಿಗಳ
ಕಡತಗಳಲ್ಲಿ ಅಂಟಿಕೂತರೂ,
ಜಡಕ್ಕೆ ಚೇತನದ ಚೈತನ್ಯ ಕೊಟ್ಟವರು
ಚಟ್ಟವೇರಿದರೂ,
ಅದೆಷ್ಟೋ ಜನ ಕಣ್ಣು ಹೊಡೆಸಿಕೊಂಡು
ಭಾವಚಿತ್ರ ಪಡೆದು ನಲಿಯುತ್ತ
ಹೊರಟವರು ಗೋಡೆಗೆ ಪಟವಾಗಿ ನೇತು ಬಿದ್ದರೂ,
ಕಣ್ಣು ಹೊಡೆದು ಹೊಡೆದೂ ಸುಸ್ತಾದರೂ,
ಮುಪ್ಪು ಆವರಿಸಿದರೂ,
ಜಗತ್ತಿನ್ನು ಛಾಯಾಗ್ರಹಣದ ಕೋಣೆಯಾಗಿಸಿ
ತೆಗೆದ ನೆನಪುಗಳು ಅದುಮಿ ಕೂತಿವೆ
ಕಣ್ಣ ಗರ್ಭದೊಳಗೆ.

ಲೆಕ್ಕಕ್ಕೆ ಸಿಗದಷ್ಟು ರೀಲುಗಳು
ಗರ್ಭಧರಿಸಿ
ಬಣ್ಣಬಣ್ಣದ ಮುಖಗಳಲ್ಲಿ ತೆರೆದುಕೊಂಡಿದ್ದು
ಎಲ್ಲ ಎಲ್ಲವೂ ನೆನಪಿನ ಬಲೆಯಲ್ಲಿ ಭದ್ರವಾಗಿವೆ.

ಆದರೆ ಹೊಸ ದೇಹಗಳಿಗೆ
ಶೆಲ್ಪಿ ಕ್ಲಿಕ್ಕಿಸಿಕೊಂಡಲ್ಲವೇ ಅಭ್ಯಾಸ.
ತುಕ್ಕಾದರೂ ಮುಕ್ಕಾದರೂ ಬಿಡರು
ಅಂಟಿದ ಚಟ.

ಕಣ್ಣು ಈಗ ಪಳಿಯುಳಿಕೆ ಮಾತ್ರ.
ಪಡಿಮೂಡಿಸದು ಪರಿಪೂರ್ಣ ಚಿತ್ರ.
ಕಾಲನ ಲೀಲೆಯೋ ವಿಚಿತ್ರ.

‍ಲೇಖಕರು Admin

24 October, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading