
ಗೀತಾ ಹೆಗ್ಡೆ
ಇದಾವ ನೃತ್ಯದ ಭಂಗಿ!
ಕಟ್ಟು ಮಸ್ತಾದ ದೇಹದ
ಬೆನ್ನೇರಿ ಛಂಗನೆ ಹತ್ತಿ ನಿಂತ
ಶೋಡಷ ಚೆಲುವೆ.
ಕಣ್ಣೆರಡೂ ದುರುಗುಟ್ಟಿ
ಕೈ ಮೇಲೆತ್ತಿ ನತ್ತು ಕೊಂಕಿಸಿ
ಕೆಂಪು ಕುಂಕುಮ ಹಣೆಯೆ ಕಾಣದಲ್ಲ;
ಕಾಲು ಎತ್ತಿ ನಿಂತ ನೀ ಯಾಕೆ
ರೌದ್ರಾವತಾರ ತಾಳಿದೆ ಬಾಲೆ?
ಬಾ…. ಹೆಡೆಮುರಿ ಕಟ್ಟಿ
ರಕ್ತ ಚಂಡಾಡುವೆ ನೋಡು
ಬೆಂಕಿಯಂತೆ ಕಿಡಿ ಕಾರುತಿರುವೆಯಲ್ಲೆ
ಚಾಮುಂಡಿ ಅವತಾರವೇನೆ?
ಅದೋ ನೋಡು ಆ ಗಂಡಸು
ನಿನ್ನ ಅವತಾರಕ್ಕೆ
ಬೆರಗಾಗಿ ಅದೇನಾಶ್ಚಯ೯
ಎಂಬಂತಿದೆ ಅವನ ಭಾವ
ಭಲೆ ಭಲೆ ಹೆಣ್ಣೆ
ನಾಟ್ಯದ ಪಟ್ಟು
ಅದಾವ ಪರಿ ಅರಗಿಸಿಕೊಂಡೆ ನೀ.
ಸೊಂಟ ಬಗ್ಗಿಸಿದ ಮನ್ಮಥ
ನಿನ್ನ ಭಾರಹೊತ್ತು
ಬಗ್ಗೇ ಬಿಟ್ಟನಲ್ಲೆ
ಹ..ಹ..ಹ..
ಕಾಲೆರಡೂ ಇಷ್ಟಗಲ
ಪಾದ ಹಿಮ್ಮೇಳ
ಕಣ್ಣೆರಡೂ ಮೃದಂಗ
ಬುಜದಲ್ಲಿ ಹಚ್ಚೆಯ ಸೊಬಗು ಬೇರೆ
ಅದ್ಯಾಕೊ ಪರ ಶಿವನ ಜುಟ್ಟು
ಗಡ್ಡದಾರಿ ದುರುಗುಟ್ಟಿ
ನೋಡುವುದ ನೋಡು ಹೇಗಿದೆ
ಬಣ್ಣ ಬಳಿದ ಕೈ ಅಮುಕಿ
ನಿನ್ನ ತೂಕಕ್ಕೆ ಗೂಟ ಕೊಟ್ಟಂತಿದೆ.
ಇದು ಶಿವ ಪಾವ೯ತಿಯರ
ನಟನಾ ಪಟ್ಟು ಅಂತ
ನಾನೆಂದೂ ಹೇಳುವುದೆ ಇಲ್ಲ
ಯಾಕೆ ಗೊತ್ತಾ?
ಪಟ್ಟೆ ಪಿತಾಂಬರ ನೀನುಟ್ಟಿಲ್ಲ
ಸವಾ೯ಭರಣ ಸುಂದರಿ ನೀನಲ್ಲ
ಅವನೋ… ವಿಭೂತಿ ಬಳಿದಿಲ್ಲ
ಏನೊ ವೇಷ ಹಾಕಿ ಕುಣಿದರಾಯಿತೆ?
ಇದು ಕಲಿಗಾಲಕ್ಕೆ ತಕ್ಕಂತಿದೆ ಅಷ್ಟೆ.
ಎಲ್ಲ ನಾಟಕ ನೋಡಿ ನೋಡಿ
ಮನಸ್ಸು ಮರಗಟ್ಟಿ ಹೋಗಿದೆ
ಡೊಂಬರಾಟದ ಬದುಕಲ್ಲಿ
ಮೂರು ದಿನದ ಕಸರತ್ತು
ಪರದೆ ಬಿದ್ದ ಮೇಲೆ
ಮತ್ತದೆ ಮಸಲತ್ತು.
ಇಂಥ ಶಿವ ಪಾವ೯ತಿಯರ
ಅನುಕರಣೆ ನನಗೆ ಸರಿ ಬರೋಲ್ಲ
ಏನಿದ್ದರೂ
ಶಿವ ಪಾವ೯ತಿಯರು
ಶಿವ ಪಾವ೯ತಿಯರೆ
ಅವರ ಸರಿ ಸಾಟಿ
ನೀವೆಂದೂ ಆಗಲಾರಿರಿ
ಅವರು ಅವರೆ
ನೀವು ನೀವೆ
ಹೋಗ್!!





ಚೆನ್ನಾಗಿ ಭಂಗಿಯನ್ನು ತಿಳಿಸಿದ್ದಿರಿ. ಮನದಲ್ಲಿ ಮಿಡಿಯುವ ಹೃದಯವಿದ್ದರೇ ಸವಿರುಚಿ. ಇಲ್ಲಾಂದ್ರೆ ಭಂಗಿಯ ಮತ್ತು ಏರಿಬುಡತ್ತೆ..
ಓದಿ ಹರಸಿದ್ದಕ್ಕೆ ಧನ್ಯವಾದಗಳು ಸರ್