ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಲಿಕ್ ಆಯ್ತು ಕವಿತೆ: ನಾ ಬರಿಯ ಹೆಣ್ಣಲ್ಲ ನಲ್ಲ..

ಎಸ್.ಪಿ.ವಿಜಯಲಕ್ಷ್ಮಿ

ನಾ ಬರಿಯ ಹೆಣ್ಣಲ್ಲ ನಲ್ಲ
ಕಟಿ, ತುಟಿ, ಜಘನ, ನಾಭಿಗಳಲ್ಲಿ
ಸೊಕ್ಕಿ ಉಕ್ಕುತ್ತ ಉಕ್ಕಿಸುವ
ಮದನಿಕೆಯ  ಬೊಂಬೆಯೂ ಏನಲ್ಲ,

ನಾನೊಂದು ನವಿರಾದ ಹೂವ್ವು
ಘಮದ ಅಮಲನ್ನು ನಿನ್ನ ಪರಿಧಿಯೊಳಿರಿಸಿ
ಮತ್ತೇರಿಸುತ್ತ, ನಿನ್ನರಳಿಸುತ್ತ
ನಾನೂ ಅರಳಿ ಘಮಘಮಿಪ ಹೂವ್ವು

click-aytu-kavite-5ನಾನೊಂದು ಕಂಠತುಂಬಿದ ಹಕ್ಕಿ
ಸಪ್ತಪದಿ ರಾಗವನು ಹದದಲ್ಲಿ ಉಲಿಯುತ್ತ
ಬಾಳಲಯ ತಂತುಗಳ ಮಂದ್ರದಲಿ ಮೀಟುತ್ತ
ಸುಪ್ತರಾಗದಿ ನಿನ್ನ ತೇಲಿಸುತ
ನಾ ತೇಲಬಯಸುವ ಹಕ್ಕಿ

ನಾನೊಂದು ಜಲಲಜಲ ಜೀವನದಿ
ಸಲಿಲದಲಿ ಹರಿದು, ಸುತ್ತ ತಂಪಾಗಿಸುತ
ಹಸಿರುಸಿರು ಬಸಿರೂಡುತ್ತ
ಕಿಲಕಿಲನೆ ನಗುವ
ಸೃಷ್ಟಿಸಂಕುಲ ಬೆಳೆಸುವ
ಜೀವದಾಯಿನಿ ನಾನು

ನಾನು ಪ್ರಕೃತಿ, ನಾನು ಶಿವೆ
ನಾನು ಸತಿ, ನಾನು ಹೆಣ್ಣು
ನಲಿಯುವುದು, ಹಾಡುವುದು, ಹರಸುವುದು
ಹರಿಯುವುದು ನನ ಹಕ್ಕು
ನಲಿಸುವುದು ನಿನ ಧರ್ಮ
ನನಗಾಗಿ ಎನ್ನದಿರು
ನಿನಗಾಗಿಯೇ ನಲ್ಲ
ಸೃಷ್ಟಿ ಉಳುಮೆಗು ಈ ಎಲ್ಲ…

ಪುರುಷಹಂಕಾರವ ಹೆದೆಗೇರಿಸಿದರೆ…
ನಾನಿನ್ನ ಕಾಲೊರೆಸು ಎಂದೆಣಿಸಿದರೆ…

ಹಕ್ಕಿ ಬಿಕ್ಕೀತು
ಹೂವು ಹಾವಾದೀತು
ಸಲಿಲದಲೆ ಉಕ್ಕೀತು…

ಢಣಢಣನೆ ಢಮರು
ಉರಿಬಾಣ ನೂರು
ಎದೆಯಾಳದಗ್ನಿಯಲಿ
ಬಡಬಾಗ್ನಿ ಧಗಧಗಿಸಿ
ಬೆನ್ನೇರಿ ನಿಂತೇನು, ಕುಣಿದೇನು
ನಿನ್ನ ಕಾಲು ಕುಸಿಯುವ ತನಕ
ನನ್ನ ರೋಷ ತಣಿಯುವ ತನಕ
ನನ್ನಸ್ಮಿತೆಯ ಹುಡುಕಾಟದನ್ನೆಕ

ಆಯ್ಕೆ ನಿನ್ನದು
ಹಸನ್ಮುಖಿ ಗೌರಿಯೋ…
ಚಾಮುಂಡಿಯೋ…

‍ಲೇಖಕರು Admin

13 October, 2016

1 Comment

  1. S.p.vijaya Lakshmi

    Thank you avadhi …

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading