ಸರಳ ಹಿಂದೆ ಬಂದಿ
ಸರೋಜಿನಿ ಪಡಸಲಗಿ
ಎದೆಯಲೊಂದು ಪ್ರೀತಿಯ ಕರೆ ಮೊರೆಯುತಿದೆ
ಮನ ಕರಗಿ ಹುಚ್ಚಾಗಿ ಅತ್ತ ಇತ್ತ ವಾಲುತಿದೆ.
ಬರಲಾರೆಯಾ ಪ್ರಿಯೆ ಕಾದಿಹೆನು ನಿನಗಾಗಿ
ನನ್ನೆದೆಯ ಕದ ತೆರೆದಿಹುದು ನೀ ಕಾಣೆಯಾ
ನನ್ನ ಜೀವ ನೀ ಎಂದುಕೊಂಬಿಹೆನು ಇನ್ನೂ
ಒಮ್ಮೆ ನನ್ನ ನೋಡಿ ಹೇಳು ನೀನರಿಯೆ ಎಂದು.
ಆ ಪ್ರೀತಿಗೆ ಆ ನೋವಿಗೆ ಜೀವ ಹುಚ್ಚಾಗಿ ಹೋಯ್ತು
ನೀ ಅರಿಯೆಯಾ ನಾ ಬಂಧಿ ಇಲ್ಲಿ ಸರಳ ಹಿಂದೆ
ಬಿಡಿಸಲಾಗದ ನೂರೆಂಟು ಬಂಧಗಳ ನಡುವೆ ನಾನು
ತಿಳಿಯಲಾಗದ ಎಳೆತ ಸೆಳೆತಗಳ ಸುಳಿವಲ್ಲಿ
ನಾನು.
ಮನ ಉಲಿಯುತಿದೆ ಈ ಬಾಳು ನಮ್ಮ ಕಥೆಯೆಂದು
ಅದಕುಂಟೆ ಒಂದು ಅರ್ಥ ಇರಲಹುದೇ ಒಂದು ತಥ್ಯ
ಸಿಲುಕಿಹೆನು ಬಂಧನದಿ ಎಲ್ಲಿಹುದು ಒಂದಾಯ್ಕೆ
ಬಿಡಲಹುದೇ ಈ ಮಾಯೆ ಬಿಟ್ಟೀತೆ ಈ ಛಾಯೆ
ಈಗ ಈ ಕತ್ತಲೆಯೇ ಮನಕೊಂದು ಹಿತ ತಂದಿದೆ
ಅಲ್ಲಿಹ ಅನಂತ ನಿಶ್ಯಬ್ದದಲಿ ಕನಸೊಂದ ಕಾಣುತಿದೆ
ಸರಳುಗಳ ಜಗ್ಗಿ ಹಲ್ಲು ಕಚ್ಚಿ ಬಂಧನದಿ ಇರುವಾಸೆ
ಅಲ್ಲಿಯೇ ಒಂದು ಕನಸಿನ ಲೋಕ ಸೃಷ್ಟಿಸುವಾಸೆ.
0 ಪ್ರತಿಕ್ರಿಯೆಗಳು