ಜಯಶ್ರೀ ಬಿ ಕದ್ರಿ
“ನಾನ್ಯಾವ ಪಾಪ ಮಾಡಿದ್ದೀನಂತ ನಂಗೆ ಈ ಶಿಕ್ಷೆ ” ಹೀಗೆ ಕನ್ನಡ ಫಿಲ್ಮ್ ನಲ್ಲಿ (ಸಾಮಾನ್ಯವಾಗಿ ತಾಯಿ ಇಲ್ಲವೇ ರಾಜ್ ಕುಮಾರ್ ರಂತಹ ಸಜ್ಜನ ಹೀರೋ) ಗೋಳಾಡುತ್ತಿದ್ದರೆ ನೋಡುಗರ ಕಣ್ಣಾಲಿಯಲ್ಲಿ ನೀರು. ಹುಲುಮಾನವರಾದ ನಾವೂ ಆಗೊಮ್ಮೆ ಈಗೊಮ್ಮೆ ಈ ರೀತಿ ಹಲುಬುವುದಿದೆ. ದುರಂತ ನಾಯಕರಂತೆ ಇಲ್ಲವೇ ನಾಯಕಿಯರಂತೆ ಮರುಗುವುದೂ ಮನುಷ್ಯರ ಹಾಬಿ ಇರಬೇಕು. ‘ಕಷ್ಟ ಮನುಷ್ಯರಿಗಲ್ಲದೆ ಮರಕ್ಕೆ ಬರುತ್ತದೆಯೇ’ ,ಈಸಬೇಕು ಇದ್ದು ಜೈಸಬೇಕು” ಹೀಗೆ ಹತ್ತು ಹಲವು ಫಿಲಾಸಫಿಗಳು ನೆನಪಾಗುವುದೂ ಇನ್ನೇನು ಮುಗಿಲು ತಲೆಯ ಮೇಲೆ ಬೀಳುತ್ತದೆ ಎನಿಸುವಾಗ. ಪುಸ್ತಕ ಮಳಿಗೆಗಳ ವ್ಯಾಪಾರಿಗಳಲ್ಲಿ ಕೇಳಿದರೆ ಅವರು ಕೂಡ ವ್ಯಕ್ತಿತ್ವ ವಿಕಸನ ಪುಸ್ತಕಗಳೇ ಹೆಚ್ಚಾಗಿ ಸೇಲ್ ಅಗುತ್ತವೆ ಎನ್ನುತ್ತಾರೆ. ನಾನಂತೂ ಅದೆಷ್ಟು ವ್ಯಕಿತ್ವ ವಿಕಸನ ಪುಸ್ತಕಗಳನ್ನು ಓದುತ್ತಿದ್ದೆ ಎಂದರೆ ನನ್ನ ಕಲೀಗ್ ಗಳು ‘ವಿಚ್ ಪಿಡಿ ಬುಕ್ (ಪರ್ಸನಾಲಿಟಿ ಡೆವಲಪ್ ಮೆಂಟ್ ಬುಕ್ )ಯು ಆರ್ ರೀಡಿಂಗ್’ ಎಂದು ಛೇಡಿಸುತ್ತಿದ್ದರು.
ಇಂತಹ ಪುಸ್ತಕಗಳು ಕಮರ್ಷಿಯಲ್ ಎಂದೇನೇ ಹೇಳಲಿ ಆ ಕ್ಷಣಕ್ಕೆ ಅವು ಸಾಂತ್ವನ ಒದಗಿಸುವುದು ಸುಳ್ಳಲ್ಲ. ಈ ಜಗತ್ತಿನಲ್ಲಿ ಎಲ್ಲರೂ ಮೋಸಗಾರರು, ಕೃತ್ರಿಮ, ವಂಚನೆ ತುಂಬಿದ ಲೋಕ ಇದು ಎಂದು ಒಮ್ಮೆಯಾದರೂ ಅನಿಸದ ವ್ಯಕ್ತಿಗಳೇ ಇರಲಾರರು ಹಾಗೂ ಆಸರೆಯಿಲ್ಲದ, ಬೆಳಕಿಲ್ಲದ ವಸ್ತುಸ್ಥಿತಿ ತುಂಬ ಘೋರ. ಈ ಯಾತನೆಯನ್ನು ಮರೆಯಲೋಸ್ಕರವೇ ಬಹುಶ: ಮನುಷ್ಯರು ಕುಡಿತ, ಸಿಗರೇಟ್, ಪುಸ್ತಕಗಳು, ಆಧ್ಯಾತ್ಮ ಹೀಗೆಲ್ಲ ಅಮಲನ್ನು ಹುಡುಕಿಕೊಳ್ಳುತ್ತಾರೆ.

ಈ ಭೂಮಿಯಲ್ಲಿ ಹುಟ್ಟಿದ ಮನುಷ್ಯರೆಲ್ಲ ತೀವ್ರವಾಗಿ ಹಂಬಲಿಸುವುದು ಒಂದು ಹಿಡಿ ಪ್ರೀತಿಗೆ, ಘನತೆಗೆ. ಯಾವಾಗ ತಮ್ಮ ನಿರೀಕ್ಷೆಗಳು ಹುಸಿಯಾಗುತ್ತ, ಆತ್ಮಕ್ಕೆ ಘಾಸಿಯಾಗುವಂತಹ ಘಟನೆಗಳು ನಡೆಯುತ್ತವೋ ಆಗ ಅವರು ಇಂಚಿಂಚಾಗಿ ಕುಸಿಯಲಾರಂಭಿಸುತ್ತಾರೆ. ತಮಾಷೆ ಎಂದರೆ ಯಾವ ಸಮಾಜ ಒಬ್ಬ ವ್ಯಕ್ತಿ ನರಳಿ ನರಳಿ ನೋಯುತ್ತಿರುವಾಗ ತನಗೆ ಸಂಬಂಧವೇ ಇಲ್ಲದಂತಿರುತ್ತದೋ ಅದೇ ಅವರು ಮಣ್ಣುಪಾಲಾದಾಗ ಅವರನ್ನು ಹೊಗಳಲಾರಂಭಿಸುತ್ತದೆ. ಅವೇ ಒಳ್ಳೆಯ ಮಾತುಗಳನ್ನು ಮೊದಲೇ ಹೇಳಿದ್ದರೆ ಆ ಜೀವಗಳು ಉಳಿಯುತ್ತಿದ್ದವು ಎಂದೆನಿಸುವಷ್ಟು. ತಮ್ಮದಲ್ಲದ ತಪ್ಪಿಗೆ ಗಾಸಿಪ್ ಗೆ ತುತ್ತಾಗುವವರು, ಕೋಟರ್್ ಕೇಸ್, ವ್ಯಾಜ್ಯಗಳಲ್ಲಿ ಸಿಲುಕಿಕೊಳ್ಳುವವರು, ಹೃದಯವಿದ್ರಾವಕವಾಗಿ ಮನಸ್ಸಿನ ಸ್ತಿಮಿತವನ್ನೇ ಕಳೆದುಕೊಳ್ಳುವವರು… ಇವರೆಲ್ಲ ಯಾವುದೋ ನಾಟಕದ ಪಾತ್ರಗಳಲ್ಲ, ನಿಜಜೀವನದಲ್ಲಿ ಕಾಣಸಿಗುವವರು.
ಇದಕ್ಕೆಲ್ಲ ಕಾರಣ ಮನುಷ್ಯರಲ್ಲಿರುವ ಕ್ರೌರ್ಯ. ಆದಿಮಾನವನಲ್ಲಿದ್ದ ಬೇಟೆಯಾಡುವ ಪ್ರವೃತ್ತಿ. ಚಿತ್ತಾಲರ ‘ಶಿಕಾರಿ’ಯಂತೆ.(ಇದಕ್ಕೆ ನಾವು ಸ್ಫಧರ್ಾತ್ಮಕತೆ, ಮುನ್ನುಗ್ಗುವಿಕೆ ಇತ್ಯಾದಿ ಹೆಸರುಗಳನ್ನು ಕೊಟ್ಟುಕೊಳ್ಳುತ್ತೇವೆ.) ಗಂಟಲಿನಲ್ಲಿ ಒತ್ತಿ ಹಿಡಿದ ಚೀತ್ಕಾರ ಕೂಡ ಕೇಳಿಸದ ನಮ್ಮ ನಿಭರ್ಾವುಕತೆಯನ್ನು ಕೂಡ ನಾವು ಸಮಥರ್ಿಸಿಕೊಳ್ಳಬಲ್ಲೆವು. ಚರಿತ್ರೆಯ ಪುಟಗಳಲ್ಲಿ ನ್ಯಾಯದ ಹೆಸರಿನಲ್ಲಿ ಸಾಕ್ಷಿ, ಪುರಾವೆಗಳಿದ್ದರೆ ಸಾಕು ಕಣ್ಣು ಕೀಳುವುದು, ತಲೆ ಕತ್ತರಿಸುವುದು, ಆನೆಗಳಿಂದ ತುಳಿಸುವುದು ಹೀಗೆಲ್ಲ ಮಾಡುತ್ತಿದ್ದರು. ಇನ್ನು ಹೆಣ್ಣು ಜೀವಗಳನ್ನು ಮಾಟಗಾತಿಯರೆಂದೋ ಮದ್ದು ಹಾಕುತ್ತಾರೆಂದೋ ಇತ್ತೀಚೆಗೆ ಕೂಡ ಕಲ್ಲು ಹೊಡೆದು , ಮೆರವಣಿಗೆ ಮಾಡಿ ಕೊಲ್ಲುವುದನ್ನು ನೋಡಿದ್ದಾಯಿತು. ದೇವರು, ಧರ್ಮ, ಸಾಮಾಜಿಕ ನ್ಯಾಯ, ಗ್ರಹಗತಿ, ಜ್ಯೋತಿಷ್ಯ, ಹೀಗೆ ಯಶಸ್ಸೆಂಬ ಕುದುರೆಯ ಹಿಂದೆ ನಾವು ನಾಗಾಲೋಟದಿಂದ ಓಡುತ್ತಿದ್ದೇವೆ. ಈ ಪಯಣದಲ್ಲಿ ಮುಗ್ಗರಿಸಿ, ಎದ್ದು, ಮರಳಿ ನಡೆಯುವುದೇ ಜೀವನ ಇರಬೇಕು.
ಈ ನಿಟ್ಟಿನಲ್ಲಿ ವ್ಯಕ್ತಿತ್ವ ವಿಕಾಸ ಪುಸ್ತಕಗಳು ತಮ್ಮದೇ ರೀತಿಯಲ್ಲಿ ಕೌನ್ಸೆಲರ್ ಗಳಂತೆ. ಉದಾಹರಣೆಗೆ ‘ಕಷ್ಟಪಟ್ಟು ಓದಬೇಡಿ ಇಷ್ಟಪಟ್ಟು ಓದಿ’ ಪುಸ್ತಕ ಓದಿದ ವಿದ್ಯಾರ್ಥಿಯ ಕಣ್ಣಲ್ಲೊಂದು ಹೊಸ ಭರವಸೆ, ಮಿಂಚು ಕಾಣಿಸುತ್ತದೆ. ‘ಅದೃಷ್ಟ’ ಎಂಬ ಪುಸ್ತಕ ಓದಿದ ಫ್ರೆಂಡ್ ಗೆ ತನ್ನ ಜೀವನದ ಸೋಲಿನ ಸರಮಾಲೆಯಿಂದ ಬಿಡಿಸಿಕೊಳ್ಳುವ ಆಸೆ ಮೊಳಕೆಯೊಡೆಯುತ್ತದೆ. ‘ದ ಅಮೇಜಿಂಗ್ ರಿಸಲ್ಟ್ಸ್ ಆಫ್ ಪಾಸಿಟಿವ್ ಥಿಂಕಿಂಗ್ ಓದಿದವರಲ್ಲಿ ಕಾದು ನೋಡುವ, ಆಶಾದಾಯಕವಾಗಿ ಬದುಕುವ ಪ್ರವೃತ್ತಿ ಹೆಚ್ಚಾಗುತ್ತದೆ. ‘ದ ಲಾಸ್ಟ್ ಲೆಕ್ಚರ್’, ‘ಬದುಕು ಬದಲಿಸಬಹುದು’ , ಈ ರೀತಿಯ ಜೀವನ್ಮುಖಿ ಪುಸ್ತಕಗಳು , ಅವುಗಳಲ್ಲಿನ ಕೋಮಲವಾದ ಅಂತ:ಕರಣ, ನಲ್ಮೆ ಎಷ್ಟೋ ಜೀವಗಳಿಗೆ ಬದುಕುವ ಭರವಸೆ ಕೊಡುತ್ತವೆ. ಇವಲ್ಲದೆ ನಾನು ಮೆಚ್ಚುವುದು ಆತ್ಮಕತೆಗಳನ್ನು. ಅವುಗಳಲ್ಲಿನ ಹೋರಾಟದ ಕೆಚ್ಚು ಅನೇಕರಿಗೆ ದಾರಿ ದೀಪವಾಗಬಲ್ಲವು. ವ್ಯಕ್ತಿತ್ವ ವಿಕಾಸ ಪುಸ್ತಕಗಳಿಗೆ ಜಯವಾಗಲಿ!






0 Comments