ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ರಿಪ್ಟೋಕರೆನ್ಸಿ ಎಂಬ ಗ್ಲೋಬಲ್ ಗುಳ್ಳೆ ಮತ್ತು ನೋಟು ರದ್ಧತಿ ಎಂಬ ಇಂಡಿಯನ್ ಸೂಜಿ!

ಸ್ಟಾಕ್ ಮಾರ್ಕೆಟಿನಲ್ಲಿ ಕೂತಲ್ಲಿಗೆ ಕಾಸು ಗಳಿಸಿಕೊಳ್ಳುವ ಮತ್ತು ಕಳೆದುಕೊಳ್ಳುವ ವ್ಯವಹಾರದಲ್ಲಿ ಪರಿಣತಿ ಪಡೆದ ಬಳಿಕ ದೇಶದ ವಣಿಕವರ್ಗ ಕಳೆದ ಒಂದು ವರ್ಷದಿಂದ ಹೊಸದೊಂದು ಅಂಗಡಿಗೆ ಹೆಚ್ಚುಹೆಚ್ಚು ಎಡತಾಕುತ್ತಿದ್ದಾರೆ. ಈ ಹೊಸ ಅಂಗಡಿಯವರು ಮೊಣಕೈಗೆ ಹಚ್ಚಿದ ಬೆಲ್ಲ ಈಗ ಹಳಸುವ ದಿನ ಹತ್ತಿರಾದಂತೆ ಕಾಣಿಸತೊಡಗಿದೆ!

ಸುದ್ದಿ ಏನೆಂದರೆ ನವೆಂಬರ್ 8, 2016ರಂದು ಒಂದು Bitcoin ನಾಣ್ಯಕ್ಕೆ ಕೇವಲ 46,942/- ರೂಪಾಯಿ ಇದ್ದ ಬೆಲೆ ಈವತ್ತು 9-12-2017ರಂದು, 11,18, 807/-ರೂಪಾಯಿಗಳಾಗಿವೆ. ಅದರಲ್ಲೂ ಈ ಏರಿಕೆಯಲ್ಲಿ ನಲವತ್ತು ಪ್ರತಿಶತ ಏರಿರುವುದು ಕಳೆದ ಒಂದು ವಾರದಲ್ಲಿ. ಹಾಗಾಗಿ, ಮಾರುಕಟ್ಟೆಯಲ್ಲಿ ಒಂದಿಷ್ಟು ಆಘಾತ, ಅಪನಂಬಿಕೆಗಳು ಕಾಣಿಸಿಕೊಳ್ಳತೊಡಗಿದ್ದು, ಮೊನ್ನೆ ಸ್ವತಃ ಭಾರತೀಯ ರಿಸರ್ವ್ ಬ್ಯಾಂಕ್ ಮೂರನೇ ಬಾರಿಗೆ ಹೇಳಿಕೆಯೊಂದನ್ನು ನೀಡಿ Bitcoinಗಳಲ್ಲಿ ಹೂಡಿಕೆ ಮಾಡಿದರೆ “economic, financial, operational, legal, customer protection and security” ಅಪಾಯ ಇದೆ ಎಂದು ಎಚ್ಚರಿಸಿದೆ.

ಯಾವುದೇ ದೇಶದಲ್ಲಿ ಸರ್ಕಾರಿ ನಿಯಂತ್ರಣವಾಗಲೀ, ಲೆಕ್ಕಾಚಾರವಾಗಲೀ ಇರದ ಈ ಕಣ್ಣಿಗೆ ಕಾಣಿಸುವ- ಕೈಗೆ ಸಿಗದ ವರ್ಚುವಲ್ ಕರೆನ್ಸಿ, ಕಳೆದ ವರ್ಷ ಕೇಂದ್ರ ಸರಕಾರ ನೋಟು ರದ್ಧತಿಯ ಪ್ರಕಟಣೆ ಹೊರಡಿಸಿದ ಮರುದಿನದಿಂದಲೇ ಒಂದೇ ಸವನೆ ಏರಿಕೆ ಕಾಣುತ್ತಾ ಬಂದಿದೆ. ಸ್ವತಃ ಗೂಗಲ್ ಸಂಸ್ಥೆ, ಕಳೆದೊಂದು  ವರ್ಷದಿಂದ ಭಾರತದಲ್ಲಿ Bitcoin ಬಗ್ಗೆ ಮಾಹಿತಿ ಅರಸುವವರ ಸಂಖ್ಯೆ ಹಠಾತ್ತಾಗಿ ಗಗನಕ್ಕೇರಿದೆ ಎಂದು ಹೇಳಿದೆಯಂತೆ. ಯಾವುದೇ ತೆರಿಗೆ ಭಾರವಿರದ ಈ ವರ್ಚುವಲ್ ಕರೆನ್ಸಿಯನ್ನು ಭಾರತದಲ್ಲಿ ಜಾಗತಿಕ 20% ಹೆಚ್ಚುವರಿ ಪ್ರಿಮಿಯಂ ಹಣ ನೀಡಿ ಖರೀದಿಸಲಾಗುತ್ತಿದೆ. ಅಧಿಕ್ರತವಾಗಿ ಕೇಳಿದರೆ, ಅದಕ್ಕೆ ಭಾರತದಲ್ಲಿ ಲಿಕ್ವಿಡಿಟಿ ಸಾಧ್ಯತೆ ಕಡಿಮೆ ಇದೆ ಎಂಬ ಕಾರಣ ಸಿಗುತ್ತಿದೆ.

ಏನಿದು ಕ್ರಿಪ್ಟೋಕರೆನ್ಸಿ?

ಕಳೆದ ಒಂಭತ್ತು ವರ್ಷಗಳಿಂದ ಚಾಲ್ತಿಯಲ್ಲಿರುವ  ಡಿಜಿಟಲ್ ಕರೆನ್ಸಿ ಇದು. ಸರಳವಾಗಿ ಹೇಳಬೇಕೆಂದರೆ, ಹೊಟೇಲುಗಳಲ್ಲಿ ಚಿಲ್ಲರೆ ಅಭಾವ ಬಂದಾಗಲೆಲ್ಲ ಕಾಗದದ ಚೀಟಿಗಳಲ್ಲಿ ಐದು ರೂ, ಹತ್ತು ರೂ. ಅಂತ ಬರೆದು ಚಲಾವಣೆಗೆ ತರುತ್ತಾರಲ್ಲ ಅಂತಹದು. ಈಗಿನ ಸ್ಥಿತಿಯಲ್ಲಿ ಈ ಐದು ರೂಪಾಯಿ ಚೀಟಿಯನ್ನು ಐನೂರು ರೂಪಾಯಿ ಕೊಟ್ಟು ಖರೀದಿಸಿಟ್ಟುಕೊಳ್ಳುವ “ಹಣದ ಹುಚ್ಚು”ಹಿಡಿದಿದೆ.  ಇದಕ್ಕೆ ಯಾವ ನಿಯಂತ್ರಣವೂ ಇಲ್ಲದಿರುವುದರಿಂದ, ಯಾವುದೇ ತೆರಿಗೆ ಬಲೆಯಾಗಲೀ ಅಥವಾ ಸರಕಾರಿ ನಿಯಮಗಳಾಗಲೀ ಇದನ್ನು ಹಿಡಿದಿಡಲಾರದು. ಕೇಂದ್ರ ಸರಕಾರ 2018ರಲ್ಲಿ ಈ ಕರೆನ್ಸಿಗೆ ನಿಯಂತ್ರಣ ತರಲು ಉದ್ದೇಶಿಸಿದೆಯಂತೆ!

ದೇಶದಲ್ಲಿಂದು 11 ಫ್ಲಾಟ್ ಫಾರಂ ಗಳ ಮೂಲಕ ಅಂದಾಜು 30,000ಕ್ಕೂ ಮಿಕ್ಕಿ ಮಂದಿ ಭಾರೀ ಪ್ರಮಾಣದಲ್ಲಿ ಈ ವರ್ಚುವಲ್ ಕರೆನ್ಸಿಯಲ್ಲಿ ಹಣ ತೊಡಗಿಸಿದ್ದಾರೆ. ಇದು ಸುರಕ್ಷಿತ ಹೂಡಿಕೆ ಎಂದು ಕಥೆ ಹೇಳ ಹೇಳುತ್ತಲೇ, ಇದೇ  ನವೆಂಬರ್ 19ರಂದು ಜಾಗತಿಕ ಫ್ಲಾಟ್ ಫಾರಂ ಒಂದರಲ್ಲಿ (ತೆಥರ್ ಟ್ರೆಶರಿ ವಾಲೆಟ್) ಒಂದೇ ದಿನ $30,950,010ಮೊತ್ತ ಹ್ಯಾಕರ್ ಗಳ ಪಾಲಾಗಿದೆ!

ಜಗತ್ತಿನಾದ್ಯಂತ ಬಿಟ್ ಕಾಯ್ನ್ ಸೇರಿದಂತೆ ಸುಮಾರು 1337ಬ್ರಾಂಡಿನ ಕ್ರಿಪ್ಟೋಕರೆನ್ಸಿಗಳು ಇಂದು ಲಭ್ಯವಿದ್ದು, ಅವುಗಳ ಒಟ್ಟು ಜಾಗತಿಕ ಮಾರುಕಟ್ಟೆ ಬಂಡವಾಳ ಮೌಲ್ಯ $421,150,367,599 ಎಂದು ದಾಖಲೆಗಳು ಹೇಳುತ್ತವೆ.

ನೋಟು ರದ್ಧತಿಗೆ ಮೊದಲು ಜಗತ್ತಿನ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆಯಲ್ಲಿ ಬರಿಯ 0.4% ಪಾಲು ಹೊಂದಿದ್ದ ಭಾರತ ಆರು ತಿಂಗಳ ಹಿಂದೆ ಮೇ ತಿಂಗಳ ಹೊತ್ತಿಗೆ ಜಾಗತಿಕ ವ್ಯವಹಾರದ 10% ಪಾಲು ಮೀರಿತ್ತು ಎಂದು ತಜ್ನರು ಹೇಳಿದ್ದಾರೆ. ಅದು ಕಳೆದ ಆರು ತಿಂಗಳಲ್ಲಿ ಅಲ್ಲಿಂದ ಮತ್ತಷ್ಟು ಮೇಲೇರಿರುವ ಎಲ್ಲ ಸೂಚನೆಗಳೂ ಇವೆ. ತೆರಿಗೆ ಮತ್ತು ಸರಕಾರದ ಕಣ್ಣು ತಪ್ಪಿಸಿ ಇಲ್ಲಿ ಹೂಡಿಕೆ ಆಗಿರುವ ಅಗಾಧ ಮೊತ್ತ, ಕ್ಯಾಶ್ ಲೆಸ್ ಆರ್ಥಿಕತೆಯ ಹೆಸರಲ್ಲಿ ಹೂಡಿಕೆದಾರರಿಗೆ ಕೋಟಿಗಟ್ಟಲೆ ಲಾಭ ತರುತ್ತಿದೆ. ಈ ಲಾಭ ಬಂದಿರುವ ವೇಗ ಎಷ್ಟಿದೆ ಎಂದರೆ, ಕಳೆದ ಒಂದು ವಾರದಲ್ಲಿ ಸ್ವತಃ ಹೂಡಿಕೆದಾರರು ಮತ್ತು ಸರಕಾರ ಬೆಚ್ಚಿಬಿದ್ದಿದೆ!

ಒಂದು ವೇಳೆ, ಕ್ರಿಪ್ಟೋ ಕರೆನ್ಸಿ ದೇಶದಲ್ಲಿ ಕಾನೂನುಬದ್ಧ  ಆದರೆ, ಅದು :

* ರಿಸರ್ವ್ ಬ್ಯಾಂಕ್ ಕಾಯಿದೆ 1934ರ ಅಡಿ ಬರಬೇಕು.

* ಅಲ್ಲಿನ ಹೂಡಿಕೆದಾರರು ತೆರಿಗೆ ಬಲೆಯೊಳಗೆ ಬರಬೇಕು.

* ಹೂಡಿಕೆ-ಖರೀದಿಗಳು ರಿಸರ್ವ್ ಬ್ಯಾಂಕಿನ ಸೂಚನೆಗಳಡಿ ನಡೆಯಬೇಕು.

*ವಿದೇಶಿ ಪಾವತಿಗಳು FEMA ಕಾಯಿದೆ ವ್ಯಾಪ್ತಿಗೆ ಬರಬೇಕು.

* ಕ್ರಿಪ್ಟೋ ಕರೆನ್ಸಿಗಳಲ್ಲಿ ಬಂದ ಲಾಭಕ್ಕೆ ಫಲಾನುಭವಿ ತೆರಿಗೆ ತೆರಬೇಕು.

ಇದಾವುದನ್ನೂ ಮಾಡದೇ, ನೇರವಾಗಿ ಈ ಮಾರುಕಟ್ಟೆಯಲ್ಲಿ ಆಡುವುದಕ್ಕೆ ದೇಶದ ಸಿರಿವಂತ ಹೂಡಿಕೆದಾರರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ ಮತ್ತು ಬಡವರಿಗೆ ಮಾತ್ರ ಸಬ್ಸಿಡಿ ಮನ್ನಾ, ದೊಡ್ಡ ಪ್ರಮಾಣದ ಜಿ ಎಸ್ ಟಿ ತೆರಿಗೆ, ಆದಾಯ ತೆರಿಗೆ ಬಲೆ ವ್ಯಾಪ್ತಿ ಹೆಚ್ಚಳ ಎಂಬ ಹೆಸರುಗಳಲ್ಲಿ ಬದುಕು ನರಕ ಮಾಡಲಾಗುತ್ತಿದೆ ಎಂದರೆ ಇದನ್ನು ‘ಹಗರಣ’ ಎನ್ನದೆ ಬೇರಾವ ಹೆಸರಿನಿಂದ ಕರೆಯಬೇಕು?

 

ಹೆಚ್ಚುವರಿ ಓದು:

ಕ್ರಿಪ್ಟೋ ಕರೆನ್ಸಿ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಈ ಲಿಂಕ್ ನೋಡಿ: https://blockgeeks.com/guides/ what-is-cryptocurrency/

ನೋಟು ರದ್ಧತಿಯ ಬಳಿಕ ಒಂದೇ ಸಮನೆ ಏಕೆ ಕಂಡ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆ

ಜಗತ್ತಿನ ಹದಿನೈದು ಪ್ರಮುಖ ಕ್ರಿಪ್ಟೋ ಕರೆನ್ಸಿಗಳ ಈವತ್ತಿನ ಚಲನವಲನ.

 ಜಗತ್ತಿನ ಹದಿನೈದು ಪ್ರಮುಖ ಕ್ರಿಪ್ಟೋ ಕರೆನ್ಸಿಗಳ ಈವತ್ತಿನ ಚಲನವಲನ.

ನೋಟು ರದ್ಧತಿಯ ಬಳಿಕ ಒಂದೇ ಸಮನೆ ಏಕೆ ಕಂಡ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆ

 

 

‍ಲೇಖಕರು avadhi

11 December, 2017

1 Comment

  1. ನೂತನ ದೋಶೆಟ್ಟಿ

    ಕ್ರಿಪ್ಟೊಕರೆನ್ಸಿ…intellectual crime..
    ಬಹಳ ಒಳ್ಳೆಯ ಮಾಹಿತಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading