ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ರಾಂತಿ ಮತ್ತು ಬೆಳದಿಂಗಳನ್ನು ಬೆಸೆದ ಕವಿ‌..

ನಾಗರಾಜ್ ಹರಪನಹಳ್ಳಿ

ಹೊಲೆಮಾದಿಗರ ಹಾಡನ್ನು ನಮ್ಮ ಕೈಗಿಟ್ಟು, ಹೋರಾಟಕ್ಕೆ ಸಾವಿರಾರು ಧ್ವನಿಗಳನ್ನು ಸೇರಿಸಿ, ಗುಡಿಸಲಿನಿಂದ ಅರಮನೆತನಕ ಪಯಣಿಸಿ ಹೊರಟುಹೋದರು ನಮ್ಮ ನೆಲದ ನಿಜದನಿಯ ಕವಿ. ಕವಿ ಸಿದ್ದಲಿಂಗಯ್ಯನವರು ನನಗೆ ಮುಖ್ಯ ಅ‌ನಿಸಿದ್ದು ಈ ಕಾರಣಗಳಿಗೆ : ಕವಿ ಸಿದ್ದಲಿಂಗಯ್ಯ ಕನ್ನಡದ ಕಾವ್ಯಕ್ಕೆ ಹೊಸ ಸ್ವರೂಪ ಕೊಟ್ಟರು, ನಮ್ಮ ವಚನಕಾರರಂತೆ. ಭಾಷೆಯನ್ನು ಮುರಿದು ಕಟ್ಟಿದರು.

ಕಾವ್ಯದಲ್ಲಿ ಹೊಸ ಸಾಧ್ಯತೆಗಳನ್ನು ತೋರಿಸಿದರು. ಬಹಳ ಮುಖ್ಯವಾಗಿ ಕ್ರಾಂತಿ ಮತ್ತು ಬೆಳದಿಂಗಳನ್ನು ಮುಖಾಮುಖಿಯಾಗಿಸಿ ಬೆಸೆದರು. ಅವರ ಕಾವ್ಯ ಆರಂಭವಾಗುವುದೇ ಜನ ಸಾಮಾನ್ಯರಿಂದ. ಬೆವರಿನ ಜನರಿಂದ. ಹರಿದ ಬಟ್ಟೆಯಲ್ಲಿ,‌ ಪುಟ್ಟ ಗುಡಿಸಲ್ಲಿ ಕುಳಿತು ಕನಸು ಕಾಣುವುದರಿಂದ. ಹಾಗೆ ಚಲಿಸಿದ ಕಾವ್ಯ ; ಜಾತಿ ವ್ಯವಸ್ಥೆ, ಮೂಢ ನಂಬಿಕೆ, ಶ್ರೀಮಂತಿಕೆ,‌ ಅಹಂಕಾರ, ದೇವರನ್ನು ಪ್ರಶ್ನಿಸಿದೆ. ಅಧಿಕಾರಶಾಹಿ, ಪೊಲೀಸರು, ಶೋಷಕ ವ್ಯವಸ್ಥೆಯ ಎಲ್ಲಾ ಆಯಾಮಗಳನ್ನು ತಡಕಾಡಿ‌ ಕಾಡಿದೆ.‌ ಶೋಷಕನನ್ನು ಹಿಡಿದು ಜಾಡಿಸಿದೆ. ಜನ್ಮ ಜಾಲಾಡಿದೆ. ಹೆಜ್ಜೆ ಹೆಜ್ಜೆಗೂ ಅಸಮಾನತೆ, ಅನ್ಯಾಯಕ್ಕೆ, ಶೋಷಣೆಗೆ ಪ್ರತಿರೋಧ ತೋರಿದೆ.

ಕೆಲವೊಮ್ಮೆ ಕಾವ್ಯ ಪರಂಪರೆಯೊಳಗಿನ ಕೆಲವು ಕೇಂದ್ರ ಪ್ರತೀಕಗಳು ಐತಿಹಾಸಿಕ ಪಲ್ಲಟಗಳನ್ನು ತುಂಬಾ ಸೂಕ್ಷ್ಮವಾಗಿ ವಿವರಿಸುತ್ತವೆ. ಸಂಪ್ರದಾಯದ ಬಗ್ಗೆ ಸರಳ ಆದರೆ ತುಂಬ ತೀವ್ರವಾದ ಸಿಟ್ಟು ಇರುವಾತನಿಗೆ ಇರುವ ಸಮಸ್ಯೆಗಳನ್ನು ಸಿದ್ದಲಿಂಗಯ್ಯನವರ ಪ್ರಮುಖ ಕವಿತೆಯಾದ ಸಾವಿರಾರು ನದಿಗಳಲ್ಲಿನ ‘ನೀರಿನ’ ಪ್ರತಿಮೆಯನ್ನು ಗಮನಿಸಿ ಚರ್ಚಿಸಬಹುದು ಎನ್ನುತ್ತಾರೆ ವಿಮರ್ಶಕ ಡಿ.ಆರ್.ನಾಗರಾಜ್, ಬೇಂದ್ರೆ ಯ ಗಂಗಾವತರಣ ಹಾಗೂ ಅಡಿಗರ ಭೂತಕ್ಕಿಂತ, ಸಿದ್ದಲಿಂಗಯ್ಯನವರ ಸಾವಿರಾರು ನದಿಗಳು ಪ್ರತಿಮೆಯ ಸಾರ್ಥಕತೆಯನ್ನು ವಿಮರ್ಶಕ ಡಿ.ಆರ್. ನಾಗರಾಜ್ ಗಮನಿಸಿದ್ದಾರೆ.

‘ನೆನ್ನೆ ದಿನ
ನನ್ನ ಜನ
ಬೆಟ್ಟದಂತೆ ಬಂದರು
ಕಪ್ಪು ಮುಖದ ಬೆಳ್ಳಿಗಡ್ಡ ಉರಿಯುತಿರುವ ಕಣ್ಣುಗಳು
ಹಗಲು ರಾತ್ರಿಗಳನು ಸೀಳಿ
ನಿದ್ದೆಯನು ಒದ್ದರು…’

‘ಧಿಕ್ಕಾರ ಧಿಕ್ಕಾರ ಅಸಮಾನತೆಗೆ ಎಂದೆಂದಿಗೂ ಧಿಕ್ಕಾರ ಶ್ರೀಮಂತರ ಸೊಕ್ಕಿಗೆ’

‘ಕ್ರಾಂತಿಯ ಬಿರುಗಾಳಿಯಲ್ಲಿ ಕೈ ಬೀಸಿದ ನನ್ನ ಜನ
ಛಡಿಯೇಟು ಹೊಡೆದವರ
ಕುತ್ತಿಗೆಗಳ ಹಿಡಿದವರು’

‘ಪೊಲೀಸರ ದೊಣ್ಣೆಗಳು ಏಜೆಂಟರ ಕತ್ತಿಗಳು
ವೇದಶಾಸ್ತ್ರ ಪುರಾಣ ಬಂದೂಕುಗಳ ಗುಡಾಣ
ತರಗೆಲೆ ಕಸಕಡ್ಡಿಯಾಗಿ
ತೇಲಿ ತೇಲಿ ಹರಿದವು
ಹೋರಾಟದ ಸಾಗರಕ್ಕೆ
ಸಾವಿರಾರು ನದಿಗಳು…’

ಹೀಗೆ ಸಿದ್ದಲಿಂಗಯ್ಯನವರ ಕಾವ್ಯ ನದಿ ಹರಿಯುತ್ತದೆ.‌ ಇದರ ಮೂಲ ಈ ನಾಡಿನ ಅಸ್ಪೃಶ್ಯತೆ, ಅಸಮಾನತೆ ಹಾಗೂ ದೌರ್ಜನ್ಯದಲ್ಲಿ.
ಈ ರೀತಿಯ ಕಾವ್ಯ ಕನ್ನಡದಲ್ಲೇ ಅದಾಗಲೇ ಬಂದಿತ್ತು. ಅದು ೧೨ ನೇ‌ ಶತಮಾನದ ವಚನ ಸಾಹಿತ್ಯ. ‌ಕವಿ ಸಿದ್ದಲಿಂಗಯ್ಯನವರ ಕೋಪ, ಸಿಟ್ಟು ಬಸವಣ್ಣನಲ್ಲಿತ್ತು. ಅಂಬಿಗರ ಚೌಡಯ್ಯನಲ್ಲಿತ್ತು. ಅನೇಕ ವಚನಕಾರರಲ್ಲಿತ್ತು. ಅದಕ್ಕೆ ನಾ ಹೇಳಿದ್ದು ಕನ್ನಡದ ಕಾವ್ಯ ಭಾಷೆಯನ್ನು, ಕನ್ನಡದ ನುಡಿಕಟ್ಟನ್ನು ಸಿದ್ದಲಿಂಗಯ್ಯ ‌ಮುರಿದು ಕಟ್ಟಿದರು ಎಂದು.

ಕನ್ನಡದ ಯಾವ ಚಳುವಳಿ ಅಸ್ಪೃಶ್ಯತೆಯ ವಿರುದ್ಧ, ಅಸಮಾನತೆಯ ವಿರುದ್ಧ ಹೋರಾಡಿತ್ತೋ, ಅದೇ ಸನ್ನಿವೇಶ ೮೦೦ ವರ್ಷಗಳ ನಂತರವೂ ಕರ್ನಾಟಕದಲ್ಲಿ, ಭಾರತದಲ್ಲಿ ಇತ್ತು. ಅದಕ್ಕೆ ಹೊಲೆಮಾದಿಗರ ಹಾಡು‌ ಬಂದದ್ದು. ಅದಕ್ಕಾಗಿಯೇ ಸಿದ್ದಲಿಂಗಯ್ಯ ಪ್ರಶ್ನಿಸಿದ್ದು
‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ
ಟಾಟಾ ಬಿರ್ಲಾ ಜೋಬಿಗೆ ಬಂತು
ಕೋಟ್ಯಾಧೀಶನ ಕೋಣೆಗೆ ಬಂತು
ನಾಲವತ್ತೇರ ಸ್ವಾತಂತ್ರ್ಯ’

‘ಬಡವರ ಮನೆಗೆ ಬರಲಿಲ್ಲ
ಬೆಳಕಿನ ಕಿರಣ ತರಲಿಲ್ಲ
ಗೋಳಿನ ಕಡಲನು ಬತ್ತಿಸಲಿಲ್ಲ
ಸಮತೆಯ ಹೂವನು ಅರಳಿಸಲಿಲ್ಲ’

‘ಹಣವಂತರು ಕೈ ಸನ್ನೆ ಮಾಡಿದರೆ
ಕತ್ತಲೆಯಲ್ಲಿ ಬೆತ್ತಲೆಯಾಯಿತು
ಯಾರು ಕಾಣದ ಸ್ವಾತಂತ್ರ್ಯ’

‘ಸಾವಿರಾರು ಜನ ಗೋರಿಯಾದರು
ಲಕ್ಷ ಲಕ್ಷ ಜನ ಗಲ್ಲಿಗೇರಿದರು
ರೈತರು ಕಾರ್ಮಿಕರು ರಕ್ತವ ಕೊಟ್ಟರು
ಯಾರಿಗೆ ಬಂತು ಸ್ವಾತಂತ್ರ್ಯ’

‘ಪೊಲೀಸರ ಬೂಟಿಗೆ ಬಂತು
ಮಾಲೀಕರ ಚಾಟಿಗೆ ಬಂತು
ಬಂದೂಕದ ಗುಂಡಿಗೆ ಬಂತು ನಾಲ್ವತ್ತೇಳರ ಸ್ವಾತಂತ್ರ್ಯ’

(ಕಪ್ಪು ಕಾಡಿನ ಹಾಡು – ೧೯೮೩.)
ಹೀಗೆ ಓದಿದವ ಎದೆ ಬಿರಿಯುವ, ಕಿಚ್ಚು, ಆಕ್ರೋಶದ ಜೊತೆ ವಿವೇಕ ಹುಟ್ಟಿಸುವ ಕಾವ್ಯ ಕನ್ನಡದಲ್ಲಿ ಬಂತು. ದುರಾದೃಷ್ಟವಶಾತ್ ಈ ಕಾವ್ಯದ ಬಗ್ಗೆ ಅಕ್ಷರ ಲೋಕ ದಿವ್ಯ ನಿರ್ಲಕ್ಷ್ಯ ತಾಳಿತು. ಹೋರಾಟಕ್ಕೆ, ಪ್ರತಿಭಟನೆಗೆ ಈ ಕಾವ್ಯ ಬಳಕೆಯಾಯಿತು.‌ ಅಷ್ಟರ ಮಟ್ಟಿಗೆ ಕವಿ ಸಿದ್ದಲಿಂಗಯ್ಯ ಮನೆಮಾತಾದರು.‌ ಜನ ಮಾನಸದಲ್ಲಿ ಬೆರೆತರು.

ಹೊಲೆಮಾದಿಗರ ಹಾಡು ಬಂದದ್ದು ೧೯೭೫ ರಲ್ಲಿ.‌ ಅದರ ಮೊದಲ ಕವಿತೆಯನ್ನೇ ಗಮನಿಸೋಣ;
‘ಹಸಿವಿನಿಂದ ಸತ್ತೋರು ಸೈಜುಗಲ್ಲು ಹೊತ್ತೋರು ವದೆಸಿಕೊಂಡು ವರಗಿದೋರು ನನ್ನ ಜನಗಳು
ಬರೀಗೈಲೇ ಬಂದೋರು ಉಸ್ಸೆಂದು ಕೂತೋರು
ಹೊಟ್ಟೆ ಬಟ್ಟೆ ಕಟ್ಟಿದೋರು
ನನ್ನ ಜನಗಳು’

‘ಚಿನ್ನವನ್ನು ತೆಗೆದೋರು ಅನ್ನವನ್ನು ಕಾಣದೋರು
ಹೇಳಿದಂತೆ ಕೇಳುತಾರೆ
ಗಾಳಿಯಲ್ಲೇ ಬಾಳುತಾರೆ
ನನ್ನ ಜನಗಳು’

ಈ ದೇಶದಲ್ಲಿ ಅಸ್ಪೃಶ್ಯತೆ ಇನ್ನೂ ಇದೆ. ಸತ್ತ ದನದ ಚರ್ಮ ಸುಲಿದದ್ದಕ್ಕೆ, ಕುದುರೆ ಮೇಲೆ ಕುಳಿತು ಸಾಗಿದಕ್ಕೆ, ಊರ ಮುಂದಿನ ದೇವರ ಕಟ್ಟೆಯ ಮೇಲೆ ಕುಳಿತದ್ದಕ್ಕೆ, ವಾಚ್ ಕಟ್ಟಿದ್ದಕ್ಕೆ, ಅಂಬೇಡ್ಕರ್ ಪೋಟೋವನ್ನು ಮನೆಯ‌ ಮುಂದೆ ಹಾಕಿಕೊಂಡದ್ದಕ್ಕೆ ದಲಿತರ ಕೊಲೆಯಾದ ಕಹಿ ಘಟನೆಗಳು ಭಾರತದ ವಿವಿಧ ರಾಜ್ಯಗಳಲ್ಲಿ ಈಚಿನ ವರ್ಷಗಳಲ್ಲಿ ನಡೆದಿವೆ. ಹಾಗಾಗಿ ಸಿದ್ದಲಿಂಗಯ್ಯನವರ ಕಾವ್ಯ ೧೯೭೫ ರಲ್ಲಿ ಬಂದರೂ, ಅದು ೨೦೨೧ ರಲ್ಲಿಯೂ ಜೀವಂತ ಎನ್ನುವ ಘಟನೆಗಳು ನಡೆಯುತ್ತಿವೆ.

ಕಾವ್ಯದಲ್ಲಿ ಪ್ರಾಸ ಬಳಕೆ:
ಪ್ರಾಸವನ್ನು ಸಮರ್ಥವಾಗಿ ದುಡಿಸಿಕೊಳ್ಳುವ ಮೂಲಕ ಕಾವ್ಯಕ್ಕೆ ಲಯ ಹಾಗೂ ಜನಪದ ಗುನಗಿಕೊಳ್ಳುವಂತೆ ಮಾಡಿದರು.
‘ಬಡವರ ಜೋಪಡಿ ನೆಲಸಮವಾದ
ನೋವಿನ ಕಥೆ ಕೇಳಿ
ದುಡಿಯುವ ಜನಗಳ ಪ್ರಾಣವು ಹೋದ
ಗೋಳಿನ ಕಥೆ ಕೇಳಿ’
‘ಗುಡಿಸಲಿನಲ್ಲಿ ಅರಳುವ ಗುಲಾಬಿ ನಕ್ಷತ್ರ ನನ್ನ ಕವನ
ಕತ್ತಲೆಯಲ್ಲಿ ಕಾಣುವ ಬೆಳಕು
ಬಂಡಾಯದ ಈ ಕವನ’

ಹೀಗೆ ಬಹುತೇಕ ಕವಿತೆಗಳಲ್ಲಿ ಪ್ರಾಸ ಬಳಕೆ ಸಿದ್ದಲಿಂಗಯ್ಯನವರ ಕಾವ್ಯದಲ್ಲಿ ದೆ.

ವ್ಯಕ್ತಿತ್ವ ಕಟ್ಟಿಕೊಡುವ ಕವಿತೆಗಳು;

ಡಿ.ಆರ್. ನಾಗರಾಜ್, ಕೀರಂ ನಾಗರಾಜ್, ಶೂದ್ರ, ಲಂಕೇಶ್, ಬಿ.ಸಿ.ರಾಮಚಂದ್ರ‌ ಶರ್ಮಾ, ಬೆಂಜಮಿನ್ ಲೂಯಿಸ್, ಕಾರ್ಲ ಮಾರ್ಕ್ಸ, ಗಾಂಧಿ, ಅಂಬೇಡ್ಕರ್, ರಾಮಕೃಷ್ಣ ‌ಹೆಗಡೆ ತನಕ ಕಾವ್ಯದಲ್ಲಿ ವ್ಯಕ್ತಿ ಚಿತ್ರ ಕಟ್ಟಿದ್ದಾರೆ ಸಿದ್ದಲಿಂಗಯ್ಯ. ಅದರಲ್ಲಿ ಅಂಬೇಡ್ಕರ್ ಬಗ್ಗೆ ಬರೆದ ಕವಿತೆ ಟಾಪ್ ಒನ್. ಹಾಗೆ ಗಾಂಧಿಯವರ ಕುರಿತದ್ದು, ಬೆಂಜಮಿನ್ ಮೊಲಾಯಿಸ್ ಬಗ್ಗೆ ಬರೆದ ಕವಿತೆಗಳು ಅರ್ಥಪೂರ್ಣ. ಹಾಗೂ ಅವರನ್ನು ಭಿನ್ನ ಬಗೆಯಲ್ಲಿ ಅರಿಯಲು ಸಾಧ್ಯವಾಗುತ್ತದೆ..

ಅಂಬೇಡ್ಕರ್ ಬಗ್ಗೆ :
‘ನಾಡನಡುವಿನಿಂದ ಸಿಡಿದ
ನೋವಿನ ಕೂಗೇ
ಆಕಾಶದ ಅಗಲಕ್ಕೂ ನಿಂತ ಆಲವೆ’

ಮಲಗಿದ್ದವರ ಕೂರಿಸಿದೆ
ನಿಲಿಸುವವರು ಯಾರೋ?
ಛಲದ ಜೊತೆಗೆ ಬಲದ ಪಾಠ
ಕಲಿಸುವವರು ಯಾರೋ?

ಗಾಂಧಿ ಕವಿತೆ ಹೀಗಿದೆ:

‘ಜನವು ದಿಕ್ಕೆಟ್ಟಿರಲು ಹಾರಿದಿರಿ ಹಕ್ಕಿಯಂತೆ
ಭಾರತದ ಕಡುನೀಲ ಗಗನದಲ್ಲಿ’

ಜಾತಿಮತಗಳ ವಿಷದ ಮಂಜು ಕರಗಲಿ ಎಂದು
ಬಿಸಿಲಿನಲಿ ತಿರುಗಿದಿರಿ ದೇಶವೆಲ್ಲ,
ಹುಲ್ಲುಗರಿಕೆಗು ಕೂಡಾ ಪ್ರಾಣಮಾನಗಳುಂಟು
ಎಂಬುದ ಸಾರಿದಿರಿ ಲೋಕಕ್ಕೆಲ್ಲ

ಬೆಂಜಮಿನ್ ಮೊಲಾಯಿಸ್ ಕುರಿತು:

‘ಆಫ್ರಿಕಾದ ಕತ್ತಲಲ್ಲಿ ಮಂಕಾಗಿ ಮಿನುಗುತ್ತಿದ್ದ ಕ್ರಾಂತಿ ಹಣತೆ
ಇದ್ದಕ್ಕಿದ್ದಂತೆ ಹತ್ತೂ ದಿಕ್ಕುಗಳನ್ನು ಬೆಳಗಿತು
ಮಾಯಾವಿ ಮಾಂಡೆಲಾ ಎಣ್ಣೆಯಾಗಿದ್ದ
ಬೆಂಜಮಿನ್ ಮೊಲಾಯಿಸ್ ಬತ್ತಿಯಾಗಿದ್ದ

ಸಾವಿನ ಕುಣಿಕೆ ಬೆಂಜಮಿನ್ನನ ಕೊರಳ ತಬ್ಬಿತು
ಸಾವು ಬಿಳಿಯರ ಸಾಮ್ರಾಜ್ಯಕ್ಕೊದಗಿ ಬಂದಿತ್ತು’

ಕಾರ್ಲಮಾರ್ಕ್ಸ ಬಗ್ಗೆ:
‘ಮರೆಮಾಚಿ ಹೋಗಿದ್ದ ಜಗದ ನಿಜಗಳನೆಲ್ಲ
ಅರಿಯಲೆಂದಡಿಯಿಟ್ಟೆ ಮುಳ್ಳುಗಳ ಮೇಲೆ
ನಿದ್ದೆ ಮಂಪರುಕವಿದ ಮನುಕುಲವನೆಚ್ಚರಿಸಿ
ದುಡಿವ ಜನತೆಗೆ ನೀನು ಕಣ್ಣಾಗಿ ನಿಂತೆ’

ರಾಮಚಂದ್ರ ಶರ್ಮರ ಕುರಿತು:

‘ಭೋಗಾದಿಯಲ್ಲಿ ಹುಟ್ಟಿದರೂ ಭೋಗಲಾಲಸೆಯಿಲ್ಲ
ಯೋಗಿಯ ಧಿಮಾಕಿಲ್ಲ
ಶರ್ಮಾರದ್ದು ಅಖಂಡ ಜೀವನ ಪ್ರೀತಿ’

ಲಂಕೇಶರ ಕುರಿತು:

‘ಕಂಡ‌ ಕಂಡಲೆಲ್ಲ ನುಗ್ಗುತಿದೆ ಮದ್ದಾನೆ
ಮಾವುತನ ಅಂಕುಶದ ಭಯವಿಲ್ಲದೆ’

‘ಜಾಣ ಜಾಣೆಯರೆದೆಯ
ನಂದನವು ಬೆಂಗಾಡು
ಹುಳಿಮಾವು ವರಗಿತ್ತು ಬೂದಿಯಾಗಿ
ಉಪ್ಪರಿಗೆ ಮೇಲಿಂದ ಊಳಿಡುವ ನರಿಹಿಂಡು
ಪಿಂಡಕ್ಕೆ ಕಾದಿತ್ತು ಕಾಗೆಯಾಗಿ’

ಗೆಳೆಯ ಶೂದ್ರನ ಕುರಿತು:

‘ಕ್ಷೌರ ಮಾಡಿಕೊಂಡರೆ ಬುದ್ಧನಂತೆ ಕಾಣುವ
ಶೂದ್ರ ಹಲವು ಸಾರಿ
ಬುಲ್ಗಾನಿನ್ ಗಡ್ಡಧಾರಿ’

ಡಿ.ಆರ್.ನೆನಪು:
‘ಕುಸಿದು ಬಿದ್ದನೆ ವೀರಯೋಧ ಇದ್ದಕ್ಕಿದ್ದಂತೆ
ನುಗ್ಗಿ ಬರುವ ಒಂಟಿ‌ ಸಲಗ ಹಿಂದೆ ಸರಿದಂತೆ’

‘ಚಂಡಮಾರುತಗಳನು ತಡೆದು ಸ್ತಬ್ಧ ಗೊಳಿಸಿದವನು
ಕಂಡ‌ ಕಾಮನಬಿಲ್ಲ ಸೆಳೆದು ಬಾಚಿ ತಬ್ಬಿದವನು’

ಕಿ.ರಂ.ನಾಗರಾಜ್ ಕುರಿತು;
‘ತಾಪತ್ರಯದ ಬಗ್ಗೆ ಎಂದೂ ಚಿಂತಿಸದ ಕಿ.ರಂ.
ಸಮುದಾಯದ ಹಿತ ಚಿಂತಕ
ಈ ಜೆನ್ ಮಾಸ್ಟರ್ ಸೂಫಿಯೂ ಹೌದು
ಎಲ್ಲಕ್ಕಿಂತ ಕನ್ನಡದ ಸಂತ…

ಹೀಗೆ ತನ್ನ ಒಡನಾಡಿಗಳನ್ನು ಅತ್ಯಂತ ಬಲವಾಗಿ ಅವರ ವ್ಯಕ್ತಿತ್ವವನ್ನು ಕಾವ್ಯದಲ್ಲಿ ಕಟೆದು ನಿಲ್ಕಿಸಿದವರು ಸಿದ್ದಲಿಂಗಯ್ಯ.

ಯುಗಾದಿ ಬಗ್ಗೆ ಸರಣಿ ಕವಿತೆಗಳು:

ಯುಗಾದಿ ಬಗ್ಗೆ ಸಿದ್ದಲಿಂಗಯ್ಯ ನವರು ೫ ಕವಿತೆಗಳನ್ನು ಬರೆದಿದ್ದಾರೆ. ಪ್ರಕೃತಿಯ ರಮ್ಯತೆಯ ಬಗ್ಗೆ ಅಲ್ಲಲ್ಲಿ ಬಂದರೂ ಸಹ ಬಡತನ, ದಣಿದ ದೇಹದ ಬಗ್ಗೆ ಪ್ರಸ್ತಾಪಿಸುತ್ತಾರೆ. ‌ಸಮಾನತೆ, ಪ್ರೀತಿ ಹುಟ್ಟಲಿ ಎಂದೇ ಅವರ ಆಶಯ ಕನಸು ಯುಗಾದಿ ಬಗ್ಗೆ ಬರೆದ ಸರಣಿ ಕವಿತೆಗಳಲ್ಲಿದೆ. ಯುಗಾದಿ ಬಗ್ಗೆ ಬರೆದ ನಾಲ್ಕನೇ ಕವಿತೆಯಲ್ಲಿ ನೆಲ್ಸನ್ ಮಂಡೆಲಾ ಬಿಡುಗಡೆಯ ಬೆನ್ನಹಿಂದೆ ಬಂದ ಯುಗಾದಿ ಹೇಗಿರಬೇಕು ಎಂದು ಕವಿ ಕನಸು ಕಂಡದ್ದು ದಾಖಲಾಗಿದೆ.

‘ಬೇವು ಬೆಲ್ಲದ ಅದೇ ಹಳೆಯ ಪಾಠ
ಸ್ವಂತದ್ದೋ ಸಾಲದ್ದೋ ಒಬ್ಬಟ್ಟಿನೂಟ
ಬದುಕೇ ಇಲ್ಲದ ಅನಾದಿ ಲೆಕ್ಕಕ್ಕೆ
ನೀನೊಂದು ಶಬ್ದ ಮಾತ್ರ’

‘ಎದೆ ಸೆಟೆದು ನಿಲ್ಲಲಾರದ ದೇಹಗಳು
ಕಣ್ಣು ಕುಕ್ಕುವಾಗ ಇದು ಯಾರ ಯುಗಾದಿ?’
(ಯುಗಾದಿ -೧)

ಉಳ್ಳವರಿಗೆ ಹಬ್ಬವಾಯ್ತು
ಕವಿ ಕುಲಕೆ ಕಬ್ಬವಾಯ್ತು
ಇಲ್ಲದವರಿಗೇನಾಯಿತು
ಹಳೇ ಯುಗಾದಿ
(ಯುಗಾದಿ -೨)

‘ಮಂಡೆಲಾ ಬಿಡುಗಡೆಯ ಬೆನ್ನ ಹಿಂದೆ ಬಂದ ಈ ಯುಗಾದಿ
ಜಾತಿಮತಗಳ ಜೈಲುವಾಸಿಗಳನ್ನು
ಬಿಡಿಸಿ ಕರೆತಂದೀತೇ
ಪ್ರೀತಿ ಮಾನವತೆಗಳ ಬಯಲ ಕಡೆಗೆ’
(ಯುಗಾದಿ -೪)

ಹೀಗೆ ಸಿದ್ದಲಿಂಗಯ್ಯ ನವರು ಕಂಡ ಯುಗಾದಿ ಸಹ ಕವಿ ಮನದ ದಿಕ್ಸೂಚಿಯಾಗಿವೆ.

ಕ್ರಾಂತಿ ಮತ್ತು ಗೆಳತಿಯರು :

ಆರಂಭದಲ್ಲಿ ಕ್ರಾಂತಿ ಮತ್ತು ಬೆಳದಿಂಗಳ ಬೆಸೆದ ಕವಿ ಎಂಬ ಪದ ಬಳಸಿದೆ. ಇದಕ್ಕೆ ಪುಷ್ಠಿಕೊಡುವಂತೆ ಅವರ ಕೆಲ ಕವಿತೆಗಳನ್ನು ಗಮನಿಸೋಣ. ‘ಸುಟ್ಟಾವು ಬೆಳ್ಳಿಕಿರಣ’, ‘ರಾಣಿಯ ಪ್ರೇಮ’, ‘ನಿನ್ನ ಕಣ್ಣಿನ ಮಾತು’,‌ ಕವಿತೆಗಳು ಗೆಳತಿ ಬಗ್ಗೆ ಆತಂಕವನ್ನು, ಬಡತನ ಮತ್ತು ಸಿರಿತನದ‌, ಜಾತಿಯ ಅಂತರಗಳ ಕಾರಣವಾಗಿ ಪ್ರೇಮ ತ್ಯಾಗದ, ದುಃಖವನ್ನೇ ಸಾರುತ್ತವೆ. ‘ನನ್ನವಳಿಗೆ’ ಕವಿತೆ ಪ್ರೇಮ‌ ಮತ್ತು ಕ್ರಾಂತಿಯ ಬೆಸುಗೆಯನ್ನು ಅತ್ಯಂತ ದಿಟ್ಟವಾಗಿ, ಖಚಿತವಾಗಿ ಹೇಳುತ್ತದೆ.

ಗೆಳತಿಗೆ ಬಡವರ ಬದುಕಿನ ಆಯಾಮ, ಅಲ್ಲಿ ನಡೆವ ಜಾತಿಯ ಸಂಘರ್ಷ, ಕೊಲೆಯಲ್ಲಿ ಆಗುವ ಅಂತ್ಯ ಗಳನ್ನೇ ಕವಿ ದಾಖಲಿಸುತ್ತಾನೆ. ಸಮಾಜದ ಕೆಳ ವರ್ಗ ಬದುಕಿಗೆ ಹೋರಾಡುವಾಗ, ಪ್ರೇಮ ಎಂಬುದು ಮತ್ತೊಂದು ಅಂಚಿನ ದುಃಖವೇ ಆಗಿದೆ ಎಂಬುದು ಸ್ಪಷ್ಟ. ಇಲ್ಲಿಯ ಕವಿತೆಗಳಲ್ಲಿ ‌ಹೆಣ್ಣಿನ ಬಗ್ಗೆ ಕಂಡು ಬರುವ ಕಾಳಜಿ, ಪ್ರೇಮದ ಔನ್ನತ್ಯ ಎರಡೂ ಗಮನಾರ್ಹ.‌
‘ಕ್ರಾಂತಿ ಕನ್ಯೆ ಮೋಹಜನ್ಯೆ
ನಿನ್ನ ಮದುವೆ ಆಗುವೆ
ಕ್ರಾಂತಿ ಕಿಡಿಯ ಸಿಡಿಸುವಾಗ
ನಾನು ನಿನ್ನ ತಬ್ಬುವೆ’

ಮೆರೆಯುವವ ಚರ್ಮ ಸುಲಿದು
ಸೀರೆ ಕುಬುಸ‌ ಹೊಲಿಸುವೆ
ಮೋಸಗಾರ್ರ ಕೊರಳ ಹಿಡಿದು
ತಲೆಯ ಹಾರ ಹಾಕುವೆ’
‘ಕೊಬ್ಬಿದವರ ಕರುಳಕಿತ್ತು
ಮುಡಿಗೆ ಹೂವ ಮುಡಿಸುವೆ
ಕ್ರಾಂತಿಯಲ್ಲಿ ನಿನ್ನ ಎದೆಗೆ
ನನ್ನ ಎದೆಯ ಒತ್ತುವೆ’

ಕ್ರಾಂತಿ, ಪ್ರೀತಿ, ಕಾಳಜಿ ಜೊತೆಗೆ ಪ್ರೇಮಿಯ ಮೇಲೆ ಕಣ್ಣು ಹಾಕುವ ಮೋಸಗಾರ್ರ, ಮೆರೆಯುವವರ, ಕೊಬ್ಬಿದವರ ಕೊನೆಯಾಗಿಸುವ ಆಕ್ರೋಶ ಕ್ರಾಂತಿಯ ಮತ್ತೊಂದು ತುದಿಯನ್ನು ಕವಿ ಹೇಳುತ್ತಾನೆ. ಸಮಾಜ ಬದಲಾವಣೆಗೆ ಕ್ರಾಂತಿ ಹಾಗೂ ಪ್ರೇಮಿಯನ್ನು ಉಳಿಸಿಕೊಳ್ಳುವ ಕ್ರಾಂತಿಯ ಜೊತೆ, ಕವಿ ತನ್ನ ಪ್ರೇಮಿಗೆ ನೀಡುವ ಎಚ್ಚರ ಗಮನಿಸಿ:
‘ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸುಳಿದಾಡ ಬೇಡ ಗೆಳತಿ
ಚೆಲುವಾದ ನಿನ್ನ ಮಲ್ಲಿಗೆಯ ಮಯ್ಯ
ಸುಟ್ಟಾವು ಬೆಳ್ಳಿ ಕಿರಣ’

‘ನನ್ನೆದೆಯ ತೋಟದಲ್ಲಂದು ನೀನು
ನೆಟ್ಟಂತ ಪ್ರೀತಿ ಬಳ್ಳಿ
ಫಲಕೊಟ್ಟಿತೇನೆ ಹೂ ಬಿಟ್ಟಿತೇನೆ
ಉಲ್ಲಾಸವನ್ನು ಚೆಲ್ಲಿ’

ನೀ ಕೊಟ್ಟ ಜೀವ ನಾ ಕೊಟ್ಟ ಸಾವು
ಸಮನಾಗಬಹುದೆ ಗೆಳತಿ
ಕಂಡಂಥ ಕನಸು ಫಲಿಸಿತ್ತೆ ಗೆಳತಿ
ಕನಸಿತ್ತು ಕಡಲಿನಲ್ಲಿ
ತೆಂಗು ತಾರೆಗಳ ಸಂಗಮವು ಮುಗಿದು
ಮನಸಿತ್ತು ಮುಗಿಲಿನಲ್ಲಿ
(ಸುಟ್ಟಾವು ಬೆಳ್ಳಿ ಕಿರಣ)

ಹೀಗೆ ಕವಿತೆ ವಿಷಾದದಲ್ಲಿ ಮುಗಿಯುತ್ತದೆ. ಗೆಳತಿಯ ಒಲವನ್ನು, ಪ್ರೇಮಿಯ ಅಸಹಾಯಕತೆಯನ್ನು ಕವಿ ಸಿದ್ದಲಿಂಗಯ್ಯ ದಾಖಲಿಸುತ್ತಾರೆ. ರಾಣಿಯ ಪ್ರೇಮ ಕವಿತೆ ಸಹ ಜೀತಗಾರ ಮತ್ತು ರಾಣಿಯ ನಡುವಿನ ಸಂಬಂಧವನ್ನೇ ಪ್ರಸ್ತಾಪಿಸುತ್ತದೆ. ಕೊನೆಯಲ್ಲಿ ಜೀತಗಾರನ ಹೆಣ ಬೇಲಿಯ ಮರೆಯಲ್ಲಿತ್ತು ಎಂದು ಕವಿ ಹೇಳುವ ಮೂಲಕ ದುರಂತದ ಪ್ರೇಮ ಕತೆಗಳನ್ನು ಕವಿತೆಯಾಗಿಸುತ್ತಾರೆ.

‘ಜಾತಿ ಜಾತಿಯ ನಡುವೆ
ನಿಂತ ಸಾಗರದಲ್ಲಿ
ನಮ್ಮ ಪ್ರೀತಿಯ ಹಡಗು ಮುಳುಗಿತಲ್ಲೆ
ತುಂಬೆ ತೆಂಗುಗಳ ಅಂತರವು ಹತ್ತಿರವೆ
ಗುಡಿಯ ಗೋಪುರದೊಡನೆ
ಜೋಪಡಿಯ ಗರಿಗಳಿಗೆ ನಂಟಾಗಲಿಲ್ಲ’
(ನಿನ್ನ ಕಣ್ಣಿನ ಮಾತು)… ಹೀಗೆ ಪ್ರೀತಿಗೆ ಜಾತಿ ಅಡ್ಡ ಬಂದ ಅಸಮಾನತೆಯ ಸಮಾಜವನ್ನು ಕವಿ ಮಂಡಿಸುತ್ತಾರೆ.

ಕೊನೆಯದಾಗಿ ಅವರ ‘ಭೂಮಿ‌ ಗುಂಡಗಿದೆ’ ಕವಿತೆಯಲ್ಲಿ ಕವಿ ಹೇಳುವ ಸಾಲು ‘ತನ್ನನ್ನೆ ಸುತ್ತುವ ಭೂಮಿ ಕತ್ತಲೆ ಬೆಳಕ‌ ಕಾಣುವುದು, ದೇವರು ಆತ್ಮ ಕಂಡವರಿಲ್ಲ ಶಾಸ್ತ್ರ ಪುರಾಣ ಸುಳ್ಳಿನ ಕಂತೆ, ಅರಮನೆ ಗುರುಮನೆ ಮೋಸದ‌ ಜಾಲ,‌ ಮುಗಿಯಲಿ ಶೋಷಣೆ ಮಾಡುವ ಕಾಲ’ ಎಂಬುದನ್ನು ನೆನಪಿಡೋಣ.

ಬದುಕಿನ ಸಂತೆಯಲ್ಲಿ ‘ದೇವಮಾನವರೆಲ್ಲ ಮಾರಾಟವಾಗುವರು, ಪಡುವಣದ ಏಳೂರ ಸಂತೆಯಲ್ಲಿ’ ಎಂಬ ಕವಿಯ ಎಚ್ಚರಿಕೆಯನ್ನು ನೆನಪಿಟ್ಟು ಬದುಕೋಣ. ಕಾಯುತ್ತೇನೆ, ಆಸೆಯನ್ನು ಪುಟ್ಟಗೂಡಿನಲ್ಲಿ ಜೋಪಾನವಾಗಿಟ್ಟುಕೊಂಡು ಮತ್ತೆ ಹೊತ್ತು ಹುಟ್ಟುವತನಕ ಎಂಬ ಕವಿಯ ಆಶಯ ನಮ್ಮ ಬದುಕಿನ ಆಶಯವೂ ಆಗಿರಲಿ.

‍ಲೇಖಕರು Admin

22 June, 2021

2 Comments

  1. ಸಂಗೀತ ರವಿರಾಜ್

    ಕಾಯ ಅಳಿದರು ಅಮರವಾದ ಅವರ ಕವಿತೆಗಳ ಕುರಿತ ವಸ್ತುನಿಷ್ಠ ಅಭಿಪ್ರಾಯ ಮನಮುಟ್ಟುವಂತಿದೆ ಸರ್

  2. Ramesh

    ಕೆಂಡದಂತಹ ಕವಿಗೆ
    ಹೊಟ್ಟೆಯಲಿ
    ಇತ್ತು
    ಬೆಟ್ಟದಷ್ಟು ನೋವು

    *

    ಬದುಕಿಗೆ
    ಜಟಕಾ ಬಂಡಿ ಅಲ್ಲ ರೂಪಕ
    ಹಳಿ
    ಸುಡುವ ಕಲ್ಲಿದ್ದಲು

    *

    ಚಿತ್ತ ಹುತ್ತ ಕಟ್ಟವ ಮುನ್ನ
    ಆಗಲಿ
    ಹೃದಯ
    ಸಾರಾಸಗಟು ಬೆತ್ತಲು.

    *

    ಚಪ್ಪಲಿ ಹೊಲೆಯುವವನ
    ಬರಿಕಾಲು ಬಲ್ಲದು
    ಮುಳ್ಳಿನ ಆಳ
    ಮೆಟ್ಟಿದವ ಅಲ್ಲ

    *

    ನೋವ ಮರೆಸುವ
    ನವಿರು ಕಾವ್ಯ
    ಒಗ್ಗರಣೆ
    ಬರೀ ಚಿತಾವಣೆ

    *

    ಕೆಂಡ ಆರಿಸಿ
    ಇದ್ದಿಲ ಮಾರುವ ಕೆಲಸ
    ಉದ್ದಿಮೆ
    ಅಲ್ಲ ಸುಧಾರಣೆ.

    -Pora

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading