ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೋವಿಡ್ ಭಯದ ನೆರಳಲ್ಲಿಯೇ ಅಮೇರಿಕಾ ಯಾತ್ರೆ

ಡಾ ಮಂಗಳಾ ಪ್ರಿಯದರ್ಶಿನಿ

ಸಾಮಾನ್ಯವಾಗಿ ವಿದೇಶ ಪ್ರವಾಸಗಳನ್ನು ಮಾಡುವಲ್ಲಿ ಸಂಭ್ರಮ , ಸಂತೋಷ , ಕುತೂಹಲಗಳಿದ್ದರೂ , ಈ ಬಾರಿಯ ಅಮೇರಿಕಾ ಯಾತ್ರೆ ಇದೆಲ್ಲವನ್ನೂ ಒಳಗೊಂಡಂತೆ ಭಯದಿಂದ ಕೂಡಿದ ಅನಿವಾರ್ಯದ ಯಾತ್ರೆಯೂ ಆಗಿತ್ತು . ಅಕ್ಟೋಬರ್ ತಿಂಗಳಿನಲ್ಲಿ ನಲ್ಲಿ ಪ್ರವಾಸಿಗರನ್ನು ಅಮೇರಿಕಾ ದೇಶಕ್ಕೆ ತಲುಪಿಸಲು ಯಾವ ಏರ್ ಲೈನ್ ಕಂಪನಿಗಳೂ ಸಿದ್ಧವಿರಲಿಲ್ಲ. ಕೋವಿಡ್ ಎಲ್ಲರನ್ನೂ ಅವರವರ ದೇಶದಲ್ಲಿಯೇ ಬಂಧಿಸಿತ್ತು.

ಕೊನೆಗೆ ಅಮೇರಿಕಾದ ಯುನೈಟಡ್ ಏರ್ ಲೈನ್ಸ್ ತನ್ನ ಟಿಕೇಟುಗಳನ್ನು ಕಾದಿರಿಸುವ ಕಿಟಕಿಗಳನ್ನು ವಿದೇಶಿಯರಿಗೆ ತರೆದಾಗ , ನನಗೆ ಹೋಗಲೊಂದು ರಹದಾರಿ ಸಿಕ್ಕಿತ್ತು . ಈ ಬಾರಿ ಕೋವಿಡ್ ಕಾರಣದಿಂದ ಆದಷ್ಟೂ ಸುರಕ್ಷಿತ ಮಾರ್ಗವಾಗಿ ಅಮೇರಿಕಾ ಪ್ರಯಾಣ ಮಾಡುವಾಗ ದುಬಾರಿಯಾದ ಬಿಸಿನೆಸ್ ಕ್ಲಾಸೇ ಇದ್ದುದರಲ್ಲಿ ಸುರಕ್ಷಿತ ಎಂಬುದು ಮಗಳು ಹಾಗೂ ಪತಿಯ ಅಭಿಪ್ರಾಯವಾಗಿದ್ದಿತು . ಸರಿ , ಒಂದಕ್ಕೆ ನಾಲ್ಕರಷ್ಟು ದುಡ್ಡು ತೆತ್ತು ದುಬಾರಿ ಬೆಲೆಯ ಎರಡು ಟಿಕೇಟ್ಟುಗಳನ್ನು ಖರೀದಿಸಲಾಗಿತ್ತು .

ಟಿಕೇಟು ಕೈಗೆ ಬಂದ ಕೂಡಲೇ ಪ್ರವಾಸದ ಚಟುವಟಿಕೆಗಳಿಗೆ ಜೋಷ್ ಬಂದಿತ್ತು .ಒಬ್ಬೊಬ್ಬರಿಗೆ ಎಪ್ಪತ್ತೆಂಟು ಕೇಜಿಗಳನ್ನು ತೆಗೆದುಕೊಂಡು ಹೋಗುವ ಅವಕಾಶವಿದ್ದುದರಿಂದ ಮನೆಯಲ್ಲಿ ವಾರದ ಹಿಂದಿನಿಂದಲೇ ಸಾರಿನ ಪುಡಿ , ಹುಳಿ ಪುಡಿ , ವಾಂಗೀಭಾತ್ ಪುಡಿ , ಗೊಜ್ಜಿನ ಪುಡಿ , ಚಟ್ಟ್ನೀ ಪುಡಿ , ಮೆಂತ್ಯದ ಹಿಟ್ಟು – ಹೀಗೆ ಪುಡಿಗಳ ಕಾರ್ಖಾನೆಗಳು ಪ್ರಾರಂಭವಾಗಿದ್ದವು .

ಇದೆಲ್ಲದರ ಜೊತೆ ಕಷಾಯಪುಡಿ ಕೂಡ ಈ ಬಾರಿಯ ಹೊಸ ಸೇರ್ಪಡೆಯಾಗಿತ್ತು . ಒಟ್ಟು ಹತ್ತು ಕೇಜಿಗಳಷ್ಟು ಪುಡಿಗಳು , ಅದರೊಂದಿಗೆ ಕರಿದ ತಿಂಡಿಗಳು , ಬಟ್ಟೆಬರೆಗಳು , ಬಹುಪಾಲು ಖಾದ್ಯ ವಸ್ತುಗಳು ತಯಾರಾದವು . ಮಗಳದು ಎಳೆ ಮಗುವಾಗಿದ್ದಾಗಿನಿಂದ ರುಚಿಯಲ್ಲೇ ಅದ್ದಿ ತೆಗೆದ ನಾಲಿಗೆ . ಗಾಂಧೀ ಬಜಾರಿನ ಸುಬ್ಬಮ್ಮನ ಅಂಗಡಿಯಿಂದಲೇ ಚಕ್ಕುಲಿ ,ಕೋಡುಬಳೆ ,ತೇಂಗೊಳಲು , ಮುಚ್ಚೊರೆಗಳಾದರೆ ,ಡಿ ವಿಜಿ ರಸ್ತೆಯ ಬ್ರಾಮ್ಹಣರ ಬೇಕರಿಯಿಂದಲೇ ಇಂಗಿನಲ್ಲಿ ಮುಳುಗಿಸಿದ , ತುಸು ಖಾರವೇ ಎನ್ನುವಂತಹ ಕಾಂಗ್ರೆಸ್ ಕಡಲೇ ಬೀಜವೇ ಆಗಬೇಕು .

ವೆಂಕಟೇಶ್ವರದಿಂದ ಮೈಸೂರು ಪಾಕು … ಹೀಗೆ ರುಚಿ ,ಅಭಿರುಚಿಗಳ ಪ್ರಜ್ಞೆ ಇರುವ ಅವಳಿಗೆ ಯಾವುದರಲ್ಲಿಯೂ ಹೆಚ್ಚು ಕಡಿಮೆಯಾಗುವಂತೆಯೇ ಇಲ್ಲ . ಇವುಗಳ ಜೊತೆಗೆ ಬಟ್ಟೆ , ಬರೆಗಳು , ಬಹುಪಾಲು ಖಾದ್ಯ ವಸ್ತುಗಳು – ಇವನ್ನೆಲ್ಲ ಹೊತ್ತು ತಲುಪಿಸುವ ಸಂಭ್ರಮಕ್ಕೇನು ಕೊರತೆ ಇರಲಿಲ್ಲ . ವರ್ಷಕ್ಕೊಮ್ಮೆ ಆರು ತಿಂಗಳ ಅಮೇರಿಕಾ ವಾಸವಾಗದಿದ್ದರೆ ವರ್ಷವಾಯಿತು ಎಂದೆನಿಸುವುದೇ ಇಲ್ಲ . ಈ ವರ್ಷಬೇಡ ಎಂದು ಕೊಂಡಿದ್ದರೂ ಹೋಗಲೇ ಬೇಕಾದ ಅನಿವಾರ್ಯತೆ .

ಅಕ್ಟೋಬರ್ ಎಂಟಕ್ಕೆ ಬೆಂಗಳೂರಿನಿಂದ ‘ವಿಸ್ತಾರ ‘ ವಿಮಾನದಿಂದ ನವದೆಹಲಿ , ಅಲ್ಲಿಂದ ಯುನೈಟೆಡ್ ಏರ್ಲೈನ್ಸ್ ನಲ್ಲಿ ನ್ಯೂಯಾರ್ಕ್ , ನ್ಯೂಯಾರ್ಕ್ ನಿಂದ ಡೆಟ್ರಾಯ್ಟ್ . ಇದು ಸ್ವಲ್ಪ ಸುತ್ತುಯಾತ್ರೆ . ಯಾವಾಗಲೂ ಲುಫ್ತಾನ್ಸಾ , ಏರ್ ಫ್ರಾನ್ಸ್ ನಲ್ಲೇ ಹೊರಡುವ ನನಗೆ ಇದು ಹೊಸ ಮಾರ್ಗದ ಯಾತ್ರೆಯೂ ಹೌದು .

ಪ್ರಯಾಣದ ಸುರಕ್ಷತತೆಯ ಬಗ್ಗೆ ಯುನೈಟೆಡ್ ಸಾಕಷ್ಟು ವಿವರಣೆ , ಕ್ರಮ , ನಿಯಮಗಳನ್ನು ಕಳಿಸಿತ್ತು . ಬಿಸಿನೆಸ್ ಕ್ಲಾಸಿನಲ್ಲಿ ಸಾಲಿಗೆ ನಾಲ್ಕೇ ಸೀಟುಗಳು . ಒಬ್ಬೊಬ್ಬರ ಮುಖವೇ ಕಾಣದಂತಹ ಆವರಣಗಳು . ಮೊದಲಾದರೋ ಪಕ್ಕದಲ್ಲಿ ಕುಳಿತ ಪತಿ ಪರಮೇಶ್ವರನೊಂದಿಗೆ ಅಹೋರಾತ್ರಿ ಗೌರಿಯ ಸುಖ ದುಃಖಗಳ ಮಾತುಕತೆ .

ಈಗಲಾದರೋ ನಮ್ಮ ಸೀಟಿಂಗ್ ವ್ಯವಸ್ಥೆ ಹೇಗಿತ್ತೆಂದರೆ ಪತಿ – ಪತ್ನಿಯರಿಬ್ಬರ ಮುಖಗಳೂ ಕಾಣದಂತೆ ಕೋವಿಡ್ ಮಾರಿ ಇಬ್ಬರ ನಡುವೆ ಮರದ ಗೋಡೆಗಳನ್ನು ಸೃಷ್ಟಿಸಿತ್ತು . ಗೋಡೆಯಾಚೆ ಕುಳಿತ ಪರಮೇಶ್ವರನ ಕಿವಿಗಳು ಜಡವಾಗಿ ಗೌರಿಯ ಬಿಕ್ಕುಗಳು ಅವಳ ಎದೆಯಾಳದಲ್ಲೇ ಉಳಿದು ಹೋಗಿತ್ತು .ಇಬ್ಬರದೂ ಒಬ್ಬರಿಗೊಬ್ಬರು ಹಂಚಿಕೊಳ್ಳಲಾರದ ಖಾಸಗೀ ಪಯಣಗಳು , ಆವರಣ ಕಟ್ಟಿಕೊಂಡು ದ್ವೀಪವಾದ ಪಯಣಗಳು.

ಗುಂಡಿಯೊತ್ತಿದರೆ ಸಾಕು , ನಮ್ಮ ಸೀಟೇ ಮಂಚವಾಗಿ , ಕಾಲನ್ನು ನಿಡಿದಾಗಿ ಚಾಚಿ ಸುಖ ನಿದ್ರೆಗೆ ಜಾರಿಸಿತ್ತು . ಎದುರಿಗಿರುವ ದೊಡ್ಡ ಟೀವಿಯ ಪರದೆಯ ಮೇಲೆ ಎಂತೆಂಥದೋ ಇಂಗ್ಲಿಷ್ ಚಿತ್ರಗಳು ಸಾಗುತ್ತಿದ್ದರೂ ವಾರದಿಂದ ಕರಿದ, ಹುರಿದ , ಕಟ್ಟಿಉಂಡೆ ಮಾಡಿದ ದೈಹಿಕ ಶ್ರಮಗಳ ಅನುಭವಗಳು ಅವಾವುದನ್ನೂ ನೋಡಲಾರದಂತೆ ಮಾಯಾನಿದ್ರೆಗೆ ಜಾರಿಸಿತ್ತು .

ಈ ಬಾರಿಯ ಪಯಣ ಭಿನ್ನ ಸ್ವರೂಪದಲ್ಲಿ ಸಾಗಿತ್ತು . ಸದಾ ತುಸು ಹೆಚ್ಚೇ ತುಟಿಗೆ ರಂಗು ಬಳಿದು , ದಪ್ಪ ಬೇಸ್ , ಪೌಡರ್ರ್ , ಕಾಂಪ್ಯಾಕ್ಟಗಳನ್ನು ಮೆತ್ತಿ , ಕಣ್ಣಿಗೆ ಕಾಡಿಗೆ ಬರೆದು , ತುಟಿಯಂಚಿನಲ್ಲೇ ಮಾದಕ ನಗೆ ನಕ್ಕು , ಪುನುಗಿನ ಬೆಕ್ಕುಗಳಂತೆ ಘಮಘಮಿಸುತ್ತ ಅತ್ತಿಂದಿತ್ತ ನಲಿಯುತ್ತಿದ್ದ ಗಗನ ಸುಂದರಿಯರು ಕೋವಿಡ್ ಮಾರಿಗೆ ತಮ್ಮ ಬಣ್ಣ , ಬೆರಗುಗಳನ್ನು ತೆತ್ತು , ತೆಪ್ಪಗೆ ಕೂತಲ್ಲೇ ಕೂತಿದ್ದರು .ಊಟ , ತಿಂಡಿಗಳನ್ನು ಸರಬರಾಜು ಮಾಡುವಾಗಲೂ ಅಡಿಗಳಷ್ಟು ಅಂತರದ ಪಾಲನೆ .

ಕೈಯ್ಯಲ್ಲಿ ಮುಟ್ಟದೆ ಪ್ಯಾಕೆಟ್ಟುಗಳನ್ನು ತಟ್ಟೆಯಿಂದಲೇ ಟೇಬಲ್ಲಿಗೆ ಜಾರಿಸುತ್ತಿದ್ದರು. ಕರೆದಾಗ ಬರುವಂತೆ ಒತ್ತಾಯಿಸುವ ಕರೆ ಗುಂಡಿಗಳೇ ಮಾಯವಾಗಿದ್ದವು . ಯಾರ ಮುಖವೂ ಯಾರಿಗೂ ಕಾಣದಂತಹ ಕ್ಯಾಬಿನ್ನುಗಳ ಸೃಷ್ಟಿ . ಎಲ್ಲ ಘೋಷಣೆಗಳೂ ನಮ್ಮ ಟೀವೀ ಪರದೆಗಳ ಮೇಲೆ ಮಿಂಚಿ ಮಾಯವಾಗುತ್ತಿದ್ದವು .

ಗಗನಗಾಮಿಯರ ನವಿರು ಮಾತುಗಳಿಲ್ಲ , ಸಕ್ಕರೆಯ ನಗೆ ಇಲ್ಲ , ಬಣ್ಣದ ತುಟಿ , ರಂಗಿನ ಮುಖ – ಯಾವುವೂ ಇಲ್ಲದ ಸೂತಕದ ವಾತಾವರಣವನ್ನು ಪಾಪಿ ಕೋವಿಡ್ ಸೃಷ್ಟಿ ಮಾಡಿತ್ತು . ಮೊದಲ ಬಾರಿಗೆ ಏರಿದ ನಮ್ಮ ಭಾರತದ ಹೊಸ ಡೊಮೆಸ್ಟಿಕ್ ಏರ್ ಬಸ್ , ಟಾಟಾದವರ ‘ ವಿಸ್ತಾರ ‘ ಯಾವುದೇ ಅಂತಾರಾಷ್ಟ್ರೀಯ ವಿಮಾನಗಳಿಗೂ ಕಮ್ಮಿ ಇಲ್ಲ ಎನ್ನುವಂತೆ ನಮ್ಮನ್ನು ಬೆಂಗಳೂರಿನಿಂದ ನವದೆಹಲಿಗೆ ತಂದು ಬಿಟ್ಟಿತ್ತು .

ಇನ್ನು ಮುಂದಿನ ಹತ್ತೊಂಭತ್ತು ಗಂಟೆಗಳ ಅವ್ಯಾಹತ ಹಾರಾಟ ಮಾಡಿದ ಅಮೆರಿಕೆಯ ಯುನೈಟೆಡ್ ಏರ್ ಲೈನ್ಸ್ , ಕುಡಿದ ನೀರು ಅಲ್ಲಾಡದಂತೆ ನವಿರಾಗಿ ಬೆಳಗಿನ ನಾಲ್ಕೂವರೆ ಗಂಟೆಗೆಲ್ಲ ನ್ಯೂಯಾರ್ಕಿನ ಹಡ್ಸನ್ ನದಿ ದಂಡೆ ತಲುಪಿಸಿತ್ತು.

ನಮ್ಮ ಅಮೇರಿಕಾದ ಇಮಿಗ್ರೇಷನ್ ನ್ಯೂಯಾರ್ಕಿನಲ್ಲಿಯೇ ನಡೆಯ ಬೇಕಿತ್ತು. ಇದು ನನ್ನ ಒಂಭತ್ತನೆಯ ಅಮೇರಿಕಾ ಯಾತ್ರೆಯಾದರೂ , ಬದಲಾದ ಸಂದರ್ಭ, ಇಕ್ಕಟ್ಟು ,ಬಿಕ್ಕಟ್ಟುಗಳ ಕಾರಣದಿಂದ ಬಂಧು ಮಿತ್ರರು ಕೋವಿಡ್ ಕಾಲದ ಇಮಿಗ್ರೇಷನ್ ಬಗೆಗೆ ಸಾಕಷ್ಟು ಎಚ್ಚರಿಕೆ ನೀಡಿದ್ದರು . ಎರಡು ಸೂಟ್ ಕೇಸುಗಳಲ್ಲಿ ಅಡಗಿದ್ದ ತಿಂಡಿ , ಪುಡಿಗಳ ಬ್ರಹ್ಮಾಂಡ ಕಂಡು ಹಾಗೆ ಹಾಗೆ ತಿಪ್ಪೆಗೆ ಸುರಿದಾರು , ಜೋಕೆ . ಕೋವಿಡ್ ವೈರಾಣುಗಳ ಕಾರಣದಿಂದ ಹೊರ ಜಗತ್ತಿನ ತಿಂಡಿ , ಪದಾರ್ಥಗಳಿಗೆ ಕುತ್ತೇ ಇದೆ ಎಂದು .

ಇರಲಿ , ನೋಡೇ ಬಿಡುವ ಎಂದು ಬೆಲ್ಟಿನ ಮೇಲೆ ಗೆದ್ದು ಬೀಗಿದೆವೆಂದು ವೈಯ್ಯಾರವಾಗಿ ನಲಿದು ಬಂದ ನಾಲ್ಕು ದೊಡ್ಡ ಬ್ಯಾಗಗುಗಳನ್ನು ಹೊತ್ತು ಇಮಿಗ್ರೇಷನ್ ಕೌಂಟರಿಗೆ ಬಂದಾಗ , ಪರಮಾಶ್ಚರ್ಯವೆಂದರೆ ಎಲ್ಲಿಯೂ ದೊಡ್ಡ ದೊಡ್ಡ ಸಾಲುಗಳಿರಲಿಲ್ಲ .

ಜಾನ್ ಎಫ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಗತ್ತಿನ ಅನೇಕ ದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದ್ದು , ಸದಾ ಜನ ಜಂಗುಳಿಯಿಂದ ಗಿಜುಗುಟ್ಟುತ್ತಿದ್ದು , ಇಮಿಗ್ರೇಷನ್ ಸಾಲಿನಲ್ಲಿ ನಿಂತರೆ ಕನಿಷ್ಟ ಮೂರು ಗಂಟೆಗಳಾದರೂ ಬೇಕು. ಮುಂದಿನ ಕನೆಕ್ಟಿಂಗ್ ವಿಮಾನದ ಸಮಯ ಚಿಕ್ಕದಿದ್ದರೆ , ನಿಮ್ಮ ಮುಂದಿನ ವಿಮಾನ ಹಾರಿ ಹೋಗಿ ತೊಂದರೆಗೆ ಒಳಗಾಗುವ ಅಪಾಯವೇ ಹೆಚ್ಚು .

ಅಮೇರಿಕಾದ ಅಧ್ಯಕ್ಷೀಯ ಚುನಾವಣೆಗಳು ನಮ್ಮೂರಿನಂತೆ ಯಾವ ಸಂಭ್ರಮವನ್ನೇನೂ ಪಡೆದಿರಲಿಲ್ಲ . ಕೋವಿಡ್ ಮಾರಿಯ ತಲ್ಲಣಗಳಿಗೆ ಅತಿ ಹೆಚ್ಚು ಘಾಸಿಗೊಂಡಿದ್ದು ನ್ಯೂಯಾರ್ಕ್ ಎಂಬ ಮಹಾ ಮಾಯಾನಗರಿಯೇ . ಆದರೂ ಎಲ್ಲಿಯೂ ನಮ್ಮ ದೇಹದ ಉಷ್ಣಾಂಶವನ್ನು ಮಾಪನ ಮಾಡಲೇ ಇಲ್ಲ . ಯಥಾ ಪ್ರಕಾರ ಅಲ್ಲಲ್ಲಿ ಗುಂಪುಗೂಡಿಕೊಂಡು ಹರಟೆ ಹೊಡೆಯುವವರಿದ್ದರು .

ನಮ್ಮೂರಿನ ಮೆಡಿಕಲ್ ಸ್ಟೋರ್ ಗಳಲ್ಲಿ ಲಭ್ಯವಾಗುವ ತೆಳು ನೀಲಿ ಬಣ್ಣದ ಸರ್ಜಿಕಲ್ ಮಾಸ್ಕುಗಳನ್ನು ಎಲ್ಲರೂ ತೊಟ್ಟಿದ್ದರೆಂಬುದು ಪುಣ್ಯ . ಆತ್ಮೀಯರನ್ನು ತಬ್ಬುವುದು , ಆಲಂಗಿಸುವುದು , ಕೈ ಕುಲುಕುವುದು ನಡದೇ ಇತ್ತು . ಬೇರೆ ಕಡೆಗಳಿಂದ ಬಂದ ಪ್ರಯಾಣಿಕರು ಮುಖ ಗವುಸುಗಳು , ಮುಖದ ಗಾರ್ಡ್ ಗಳನ್ನು ಹಾಕಿ ಅವಸರವಸರವಾಗಿ ತಿರುಗಾಡುತ್ತಿದ್ದರು . ಜನನಿಬಿಡ ವಿಮಾನ ನಿಲ್ದಾಣ ಖಾಲಿ ಖಾಲಿಯಾಗಿ ಭಣಗುಟ್ಟುತ್ತಿತ್ತು .

ಈ ಬಾರಿಯ ಇಮಿಗ್ರೇಷನ್ ಕ್ಯೂ ಖಾಲಿಖಾಲಿ. ನಮ್ಮ ಮುಂದೆ ಇಸ್ರೇಲಿ ಪ್ರಯಾಣಿಕರ ದಂಡೊಂದಿತ್ತು . ನಮ್ಮೂರಿನ ಜಾದುಗಾರರು ಧರಿಸುವಂತಹ ಕರಿಯ ಪ್ಯಾಂಟ್ , ಕರಿಯ ಕೋಟು , ಚಿತ್ರ ವಿಚಿತ್ರ ಕೇಶ ವಿನ್ಯಾಸ , ಅದನ್ನು ಮುಚ್ಚುವಂತೆ ಧರಿಸಿದ್ದ ಕರಿಯ ವಿಚಿತ್ರ ಮಾದರಿಗಳ ಟೋಪಿಗಳು ,ಅವರ ಕೈ ತುಂಬಿದ್ದ , ಅಮೇರಿಕೆಯ ಅಗ್ಗದ ಮಾರುಕಟ್ಟೆಗಳಲ್ಲಿ ಕೊಂಡ ಗಿಫ್ಟುಗಳು , ಆಟದ ಸಾಮಾನುಗಳು .

ಅವರೆಲ್ಲರೂ ಅಮೇರಿಕಾ ನೋಡಲು ಬಂದ ಪ್ರವಾಸಿಗರಿರಬಹುದು . ಅಷ್ಟು ಬಿಟ್ಟರೆ ಉಳಿದವರು ಹೆಚ್ಚೂ ಕಡಿಮೆ ನಮ್ಮ ವಿಮಾನದಿಂದಿಳಿದ ಭಾರತೀಯರು , ಇಷ್ಟೆ. ಉಳಿದಂತೆ ಹೆಚ್ಚು ಪ್ರಯಾಣಿಕರಿರಲಿಲ್ಲ . ಝಗಮಗಿಸಿ ಗಿಜುಗುಟ್ಟುವ ನ್ಯೂಯಾರ್ಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ‘ ಕೇಳುವವರಿಲ್ಲದ ಮಗು ‘ವಿನಂತಾಗಿತ್ತು .

ಈ ಕಾಲಕ್ಕೆ ಏಕೆ ಅಮೇರಿಕಾ ಯಾತ್ರೆ ಎಂದು ಇಮಿಗ್ರೇಷನ್ಅಧಿಕಾರಿ ಕೇಳ ಬಹುದಾದ ಈ ಪ್ರಶ್ನೆಯನ್ನೂ ಒಳಗೊಂಡಂತೆ ಮತ್ತೆ ಅನೇಕ ಪ್ರಶ್ನೆಗಳನ್ನು ಎದುರಿಸಲು ಮಾನಸಿಕವಾಗಿ ಸಾಕಷ್ಟು ತಯಾರಿ ಮಾಡಿ ಕೊಂಡು ಅಧಿಕಾರಿಯ ಮುಂದೆ ನಿಂತಿದ್ದೆ .ಪಾಸ್ ಪೋರ್ಟ್ , ಟಿಕೇಟ್ಟುಗಳನ್ನು ಪರಿಶೀಲಿಸಿ ಆತ ಚುಟುಕಾಗಿ , ‘ ಏಕೆ ಬಂದಿರಿ? ಎಂದು ಹೊರಡುವಿರಿ ? ‘ ಎಂಬ ಎರಡು ಪ್ರಶ್ನೆಗಳನ್ನು ಕೇಳಿದ್ದ .

ಇಷ್ಟು ಪ್ರಶ್ನೆ ಬಿಟ್ಟರೆ ಆತನಿಗೇನೋ ನನ್ನ ಬಳಿ ಮಾತನಾಡಲು ಆಸಕ್ತಿಯೇ ಇದ್ದಂತಿರಲಿಲ್ಲ. ಅವನೂ ಕೋವಿಡ್ ಕಾಟಕ್ಕೆ ಸೋತು ಹೈರಾಣಾಗಿದ್ದ. ನನ್ನ ಕಣ್ಣು , ಕೈ ಬೆರಳುಗಳ ಸ್ಕ್ಯಾನಿಂಗ್,ಫೋಟೋ …. ಉಹುಂ ,ಏನೊಂದನೂ ಮಾಡಲಿಲ್ಲ . ಕೊನೆಗೆ ಪಾಸ್ ಪೋರ್ಟಿನಲ್ಲಿ ಸ್ಟಾಂಪ್ ಆದರೂ ಮಾಡಿದ್ದಾನಾ ? ಎಂದರೆ ಅದನ್ನೂ ಮಾಡಿರಲಿಲ್ಲ . ಸಾಮಾನುಗಳನ್ನು ನೋಡಿ , ‘ ನೋ ಸ್ಕ್ಯಾನಿಂಗ್ , ಗೋ ಡೈರೆಕ್ಟ್ ‘ ಎಂಬ ಉದಾರೀ ವಾದದ ನಿಲುವುಗಳನ್ನು ಪ್ರಕಟ ಪಡಿಸಿ , ಅಮೇರಿಕಾ ದೇಶಕ್ಕೆ ಹತ್ತೇ ನಿಮಿಷಗಳಲ್ಲಿ ಪ್ರವೇಶ ಕಲ್ಪಿಸಿ ಕೊಟ್ಟಿದ್ದ.

ನನ್ನ ಸಾಮಾನುಗಳನ್ನು ಮತ್ತೆ ಟ್ರಾನ್ಸಿಟ್ ಕೌಂಟರಿಗೆ ನೀಡಿ , ಕೈ ಚೀಲದೊಂದಿಗೆ ಡೆಟ್ರಾಯ್ಟ್ ವಿಮಾನವೇರಿ ಮುಂದಿನ ಮೂರು ಗಂಟೆಗಳ ಕಾಲ ಸುಖ ನಿದ್ರೆ ಮಾಡಿ , ಮಟ ಮಟ ಮಧ್ಯಾನ್ಹ ಸರೋವರಗಳ ನಾಡಾದ ಮಿಷಿಗನ್ ವಿಮಾನ ನಿಲ್ದಾಣದಲ್ಲಿ ಇಳಿದಿದ್ದೆ .ಸಾಮಾನು ಸಾಗಿಸಿಕೊಂಡು ಅಳಿಯನೊಡನೆ ಕಾರೇರಿ ಮನೆದಾರಿ ಹಿಡಿದಿದ್ದೆವು .

ಮೋಟಾರು ನಗರಿಯ ರಸ್ತೆಯ ಎರಡೂ ಪಕ್ಕದಲ್ಲಿರುವ ಹಸಿರಿಗೆಲ್ಲ ಶರತ್ತಿನ ಸಂಭ್ರಮ . ಎಲೆಗಳು ಉದುರಿ ಬೀಳಲು ತಯಾರಿ ನಡೆಸಿದ್ದವು. ಚಳಿ ನಾಡಿನ ‘ಫಾಲ್’ ಸಡಗರ ನೋಡಲು ಕಂಗಳೆರಡು ಸಾಲವು .ಹಸಿರು , ಗಿಣಿ ಹಸಿರು , ದಟ್ಟ ಕಪ್ಪು ಹಸಿರೆಲೆಗಳು ಕೇಸರಿ, ಕೆಂಪಾಗಿ ಹಿಮವಂತನ ಆಗಮನಕ್ಕೆ ನಾಚಿ ನೆಲಕ್ಕೆ ಉದುರುತ್ತಿದ್ದವು . ಇನ್ನು ಹದಿನೈದು , ಇಪ್ಪತ್ತು ದಿನಗಳಲ್ಲಿ ಆಗಮಿಸುವ ಹಿಮವಂತನಿಗೆ ಈ ಹಸಿರು ಮಾಡುವ ತ್ಯಾಗ. ಇಡೀ ಬದುಕನ್ನೇ ಆವರಿಸುವ ಹಿಮರಾಜನಿಗೆ ಜನ ಈಗಿನಿಂದಲೇ ಬೆಚ್ಚನೆಯ ತಯಾರಿ ನಡೆಸುತ್ತಿದ್ದಾರೆ.

ಫಾಲ್ ಸಂಭ್ರಮವನ್ನು ಅನುಭವಿಸುತ್ತಲೇ ಕನ್ನಡದ ಮೊದಲ ಚಿತ್ರ ಸಾಹಿತಿ , ನಾಟಕಕಾರರಾದ ಬೆಳ್ಳಾವೆ ನರಹರಿ ಶಾಸ್ತ್ರಿಗಳ ಮೊಮ್ಮಗ ಶ್ರೀ ಲಕ್ಷ್ಮೀನಾರಾಣ ಶಾಸ್ತ್ರಿಗಳ ಮನೆಯಲ್ಲಿ ಹದಿನಾಲ್ಕು ದಿನಗಳ ಕ್ವಾರೆಂಟೈನ್ ವಾಸಕ್ಕೆ ತೆರಳಿದೆ. ಅವರು ತಮ್ಮ ತುಂಬಿದ ಮನೆ ಬಿಟ್ಟು ಕೊಟ್ಟು ಮಗಳ ಮನೆಯಲ್ಲಿ ವಾಸ್ತವ್ಯ ಮಾಡಿದ್ದಾರೆ . ದೇಶ ವಿದೇಶವೆನ್ನದೆ ವಿಶ್ವದ ಎಲ್ಲರ ಬದುಕುಗಳನ್ನೂ ಮುಟ್ಟಿ , ತಟ್ಟಿರುವ ಕೋವಿಡ್ ರಾಕ್ಷಸನ ಕಾರಣದಿಂದ ಅಮೇರಿಕೆಯ ಬದುಕೂ ಸ್ತಬ್ಧವಾಗಿದೆ . ಸ್ಮಶಾನ ಮೌನ ಆವರಿಸಿದೆ . ಹಾಗೆ ನೋಡಿದರೆ , ನಮ್ಮೂರೇ ಎಷ್ಟೊ ವಾಸಿ .

‍ಲೇಖಕರು Avadhi

12 October, 2020

1 Comment

  1. Shyamala Madhav

    ಫೇಸ್ ಬುಕ್ ನಲ್ಲಿ ಓದಿ ಸಂತೋಷಿಸಿದ್ದರೂ, ಅವಧಿಯ ಮರು ಓದು ಖುಶಿ ಕೊಟ್ಟಿತು.‌ ಇನ್ನೂ ಹಲವರನ್ನು ತಲುಪುವಂತಾಯ್ತು. ಅಲ್ಲಿಂದಲೂ ಬರೆಯುತ್ತಿರಿ, ಪ್ರಿಯ ಮಂಗಳಾ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading