ಕೋಮುವಾದ ಎಂಬ ಜಗತ್ತಿನ ಅತ್ಯಂತ ದೊಡ್ಡ ಇಂಡಸ್ಟ್ರಿ

ಜಗತ್ತಿನ ಅತ್ಯಂತ ದೊಡ್ಡ ಇಂಡಸ್ಟ್ರಿಯ
ಹೆಸರನ್ನು ನೀವು ಕೇಳಿದ್ದೀರಾ?

R T Vittal Murthy

ಆರ್.ಟಿ.ವಿಠ್ಠಲಮೂರ್ತಿ

ವಿಠ್ಠಲಮೂರ್ತಿ,ಜಗತ್ತಿನ ತುಂಬ ದೊಡ್ಡ ಇಂಡಸ್ಟ್ರಿ ಯಾವುದು ಅಂತ ನಿಮಗೆ ಗೊತ್ತಾ? ಅಂತ ಅವರು ಕೇಳಿದರು.

ಅಷ್ಟೊತ್ತಿಗಾಗಲೇ ಸದಾಶಿವನಗರದ ಆ ಬಂಗಲೆಯಲ್ಲಿ ನೀರವ ಮೌನ. ಕತ್ತಲ ಗರ್ಭದಲ್ಲಿ ಅಡಗುವ ನೀರವ ಮೌನ ನಿಜಕ್ಕೂ ಅದ್ಭುತವಾದದ್ದು. ಅಂದ ಹಾಗೆ ಅವತ್ತು ಎದುರಿಗೆ ಧ್ವನಿ ಕೇಳುತ್ತಿದೆ. ಆದರೆ ಮಾತನಾಡುತ್ತಿರುವ ಅವರು ಕಾಣುತ್ತಿಲ್ಲ. ಥೋ! ಪವರ್ ಪ್ರಾಬ್ಲಮ್ಮು ನೋಡಿ? ಅದಕ್ಕೇ ಈ ರೀತಿಯ ಕತ್ತಲು ಅಂತ ಅವರ ಲೊಚಗುಟ್ಟಿದರು. ಆದರೆ ನನ್ನ ಮನಸ್ಸು ಜಗತ್ತಿನ ಆ ದೊಡ್ಡ ಇಂಡಸ್ಟ್ರಿ ಯಾವುದು? ಎಂಬ ಕುರಿತು ಯೋಚಿಸುತ್ತಿತ್ತು.

ದರ್ಗಾದಲ್ಲಿ ವಿಠ್ಠಲಮೂರ್ತಿ

ದರ್ಗಾದಲ್ಲಿ ವಿಠ್ಠಲಮೂರ್ತಿ

ಹೀಗೆ ಯೋಚಿಸುತ್ತಿದ್ದಂತೆಯೇ ಅವರು ಹೇಳಿದರು: ಕೋಮುವಾದದಂತಹ ದೊಡ್ಡ ಇಂಡಸ್ಟ್ರಿಯೇ ಜಗತ್ತಿನಲ್ಲಿಲ್ಲ. ಬೇಕಿದ್ದರೆ ನಿಮಗೆ ಗೊತ್ತಿರುವ ಮಹಾನ್ ಉದ್ಯಮಿಗಳ ಹೆಸರು ಹೇಳಿ. ಅವರು ವರ್ಷಕ್ಕೆಷ್ಟು ಲಾಭ ಮಾಡುತ್ತಾರೋ? ಅದಕ್ಕಿಂತ ಹೆಚ್ಚಿನ ಲಾಭವನ್ನು ಕೋಮುವಾದ ಎಂಬ ಇಂಡಸ್ಟ್ರಿ ಮಾಡುತ್ತದೆ ಅಂತ ಅವರು ಹೇಳಿದರು.

ಅವರ ಹೆಸರು- ಎಂ.ರಾಜಶೇಖರ ಮೂರ್ತಿ.

ಅವತ್ತು ನಾನು ಕುಳಿತು ಮಾತನಾಡುವ ಹೊತ್ತಿಗಾಗಲೇ ವೀರೇಂದ್ರಪಾಟೀಲರ ಸರ್ಕಾರ ಕುಸಿದು ಬಿದ್ದಿತ್ತು. ನಿಮಗೆ ಮನ:ಪೂರ್ವಕವಾಗಿ ಹೇಳುತ್ತೇನೆ. ನಾನು ನನ್ನ ಬದುಕಿನಲ್ಲಿ ನೋಡಿದ ಅತ್ಯುತ್ತಮ ಇಬ್ಬರು ಫೈನಾನ್ಸ್ ಮಿನಿಸ್ಟರುಗಳೆಂದರೆ ಒಂದು, ರಾಜಶೇಖರ ಮೂರ್ತಿ. ಇನ್ನೊಬ್ಬರು ಈಗ ಮುಖ್ಯಮಂತ್ರಿಯಾಗಿರುವ ಸಿದ್ಧರಾಮಯ್ಯ.

ವೀರೇಂದ್ರಪಾಟೀಲರ ಕಾಲದಲ್ಲಿ ಹಣಕಾಸು ಸಚಿವರಾಗಿದ್ದ ರಾಜಶೇಖರ ಮೂರ್ತಿ ಒಂದೇ ವರ್ಷದಲ್ಲಿ ಸುಮಾರು ಐನೂರಾ ಎಂಭತ್ತೆರಡು ಕೋಟಿ ರೂಪಾಯಿಗಳನ್ನು ಸಂಗ್ರಹಿಸಿ ಸರ್ಕಾರದ ಬೊಕ್ಕಸದಲ್ಲಿಟ್ಟಿದ್ದರು ಎಂದರೆ ನೀವು ನಂಬುತ್ತೀರಾ?

ಆನಂತರ ಬಂದ ಯಾವ ಫೈನಾನ್ಸ್ ಮಿನಿಸ್ಟರುಗಳೂ ಈ ಪ್ರಮಾಣದ ಹಣವನ್ನು ಸ್ಟಾಕ್ ಆಗಿ ಬೊಕ್ಕಸದಲ್ಲಿಟ್ಟುಕೊಳ್ಳಲು ಸಾಧ್ಯವಾಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಜಾಗತೀಕರಣ ಎಂಬುದು ಅವತ್ತಿಗಿನ್ನೂ ದೇಶದ ಒಳಗೆ ಕಾಲಿಟ್ಟಿರಲಿಲ್ಲ. ಹೀಗಾಗಿ ಪೈಸೆ ಪೈಸೆಗೂ ಅವತ್ತು ಮೌಲ್ಯವಿತ್ತು. ಅಂತಹ ಕಾಲದಲ್ಲಿ ಮದ್ಯದ ದೊರೆಗಳನ್ನು ಬಾರಿಸಿದ ರಾಜಶೇಖರ ಮೂರ್ತಿ, ಸರ್ಕಾರದ ಬೊಕ್ಕಸ ಆ ಮಟ್ಟದಲ್ಲಿ ಶ್ರೀಮಂತವಾಗಿರುವಂತೆ ನೋಡಿಕೊಂಡಿದ್ದರು. ಇದೆಲ್ಲವನ್ನೂ ನೆನಪಿಸಿಕೊಳ್ಳುತ್ತಲೇ ನಾನು ಕೇಳಿದೆ. ಸಾರ್, ವೀರೇಂದ್ರ ಪಾಟೀಲರನ್ನು ಕೆಳಗಿಳಿಸಲು ಕೋಮುವಾದ ಎಂಬ ಇಂಡಸ್ಟ್ರಿ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿತ್ತಲ್ಲವಾ? ಎಂದೆ.

ನೋ ಡೌಟ್, ವೀರೇಂದ್ರಪಾಟೀಲರು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಯಲು ಅದೇ ಮುಖ್ಯ ಕಾರಣ. ರಾಮನಗರ, ಚನ್ನಪಟ್ಟಣ, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಹಲವೆಡೆ ಕೋಮುಗಲಭೆ ಭುಗಿಲೇಳಲು ಇದೇ ಇಂಡಸ್ಟ್ರಿ ಕಾರಣವಾಯಿತು ಎಂದರು ರಾಜಶೇಖರಮೂರ್ತಿ.

ಕೋಮುವಾದ ಎಂದರೆ ಇಂಡಸ್ಟ್ರಿಎಂಬುದು ಅವತ್ತಿನ ಮಟ್ಟಿಗೆ ನನಗೆ ಹೊಸ ಪದ. ಹಾಗಂತಲೇ ಬೆಕ್ಕಸ ಬೆರಗಿನಿಂದ ಕುಳಿತಿದ್ದಾಗಲೇ ಅವರು ಹೇಳಿದರು. ಈ ಕೋಮುವಾದ ಎಂಬ ಇಂಡಸ್ಟ್ರಿಯ ಹೊಡೆತ ಕೇವಲ ಕರ್ನಾಟಕದಲ್ಲಲ್ಲ ವಿಠ್ಠಲಮೂರ್ತಿ, ಜಗತ್ತಿನ ಬಹುತೇಕ ದೇಶಗಳಲ್ಲಿ ಇದ್ದೇ ಇದೆ. ಕೋಮುವಾದ ಎಂದರೆ ನಾನು ಯಾವುದೋ ಎರಡು ಜನಾಂಗಕ್ಕೆ ಸೀಮಿತಗೊಳಿಸಿ ಹೇಳುತ್ತಿಲ್ಲ ಎಂದರು.

ಅವರಾಡುತ್ತಿದ್ದ ಮಾತು ಕೇಳಿದ ಕೂಡಲೇ ನಾನು ಮೌನವಾಗಿ ಕುಳಿತು ಕೇಳತೊಡಗಿದೆ. ವಿಠ್ಠಲಮೂರ್ತಿ, ಧರ್ಮಗಳ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ಬಡಿದಾಟಗಳು ನಡೆಯುತ್ತವಲ್ಲ? ಈ ಬಡಿದಾಟಗಳನ್ನು ಮಾಡುವವರು ನಿಷ್ಪಾಪಿಗಳು. ಅವರಿಗೆ ಇದರ ತುದಿ, ಬಾಲ ಎರಡೂ ಗೊತ್ತಿರುವುದಿಲ್ಲ. ಆದರೆ ತಮ್ಮ ಬಾವನೆಗೆ ಘಾಸಿಯಾಯಿತು ಎಂಬ ಕಾರಣಕ್ಕಾಗಿ ಅವರು ಬಡಿದಾಟ ಶುರು ಮಾಡುತ್ತಾರೆ.

ಹೀಗೆ ಬಡಿದಾಟ ಶುರು ಮಾಡುವಂತೆ ಕೋಮುವಾದ ಎಂಬ ಇಂಡಸ್ಟ್ರಿ ನೋಡಿಕೊಳ್ಳುತ್ತದೆ. ಇದರ ಲಾಭ ಪಡೆಯುವವರು, ಇದಕ್ಕಾಗಿ ಬಂಡವಾಳ ಹೂಡುವವರು ಯಾರು ಗೊತ್ತಾ ವಿಠ್ಠಲಮೂರ್ತಿ? ನೀವು ಊಹಿಸಲೂ ಸಾಧ್ಯವಾಗದ ಜನ ಇವರು. ವಾಸ್ತವವಾಗಿ ಕೋಮುಗಲಭೆಯನ್ನು ಮಾಡಿಸುವುದರ ಹಿಂದೆ ದೊಡ್ಡ ದೊಡ್ಡ ಇಂಡಸ್ಟ್ರಿಯಲಿಸ್ಟುಗಳು ಇರುತ್ತಾರೆ. ಇವರೆಲ್ಲ ಸೇರಿ ಕೋಮುವಾದ ಎಂಬ ಇಂಡಸ್ಟ್ರಿ ಬೆಳೆಯಲು ಟೈಮು ಟೈಮಿಗೆ ಬಂಡವಾಳ ಹಾಕುತ್ತಾರೆ.
ಮನುಷ್ಯನ ಬಾವನೆಗೆ ಘಾಸಿ ಮಾಡಿದರೆ ಆತ ರಕ್ತ ಚೆಲ್ಲಲು ಸಿದ್ದನಾಗುತ್ತಾನೆ ಎಂಬುದು ಇವರಿಗೆ ಗೊತ್ತಿರುತ್ತದೆ. ಹೀಗೆ ಜನರ ಬಾವನೆಗೆ ಘಾಸಿ ಮಾಡುವ ಮೂಲಕ ಇವರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಪರಸ್ಪರ ಬಡಿದಾಡಿಕೊಳ್ಳುವವರಿಗೆ ನಷ್ಟ ನಿಶ್ಚಿತವಾದರೂ, ಈ ಇಂಡಸ್ಟಿಗಳ ಮಾಲೀಕರಿಗೆ ಲಾಭ ಗ್ಯಾರಂಟಿ ಎಂದರು ರಾಜಶೇಖರ ಮೂರ್ತಿ.

ಇವತ್ತು ಆಗಾಗ ನಡೆಯುತ್ತಿರುವ ಕೋಮುಗಲಭೆಗಳ ಹಿಂದೆ ಇರುವ ಕಾರಣವನ್ನು ನೀವು ಕೇಳಿರುತ್ತೀರಿ. ಒಂದು ಧರ್ಮದ ಹುಡುಗಿ ಮತ್ತೊಂದು ಧರ್ಮದ ಹುಡುಗನನ್ನು ಪ್ರೀತಿಸಿದಳು ಅಂತಲೋ? ಗೋಹತ್ಯೆ ನಡೆಯುತ್ತಿದೆ ಅಂತಲೋ? ಇನ್ಯಾವುದೋ ಕಾರಣಕ್ಕೆ ಆಗಿಂದಾಗ ಕೋಮುಗಲಭೆ ಭುಗಿಲೇಳುತ್ತಲೇ ಇರುತ್ತದೆ. ಇದು ಸರ್ಕಾರಗಳನ್ನು ಉರುಳಿಸುವಷ್ಟರ ಮಟ್ಟಿಗೆ ಪ್ರಬಲವಾಗಿರುತ್ತದೆ.

ಹೀಗಾಗಿ ಯಾವತ್ತೂ ನಾವು, ನಮ್ಮ ಬಾವನೆಗೆ ಘಾಸಿಯಾಗದಂತೆ ನೋಡಿಕೊಳ್ಳಬೇಕು. ಅದೇ ರೀತಿ ಇನ್ನೊಬ್ಬರ ಬಾವನೆಗೆ ಘಾಸಿಯಾಗಂತೆ ನಡೆದುಕೊಳ್ಳಬೇಕು. ಅಲ್ಲಿಯ ತನಕ ಈ ಸಿಸ್ಟಮ್ಮಿಗೆ ಒಳ್ಳೆಯ ಭವಿಷ್ಯವಿದೆ ಅಂತ ನನಗನ್ನಿಸುವುದಿಲ್ಲ ಎಂದರು ರಾಜಶೇಖರ ಮೂರ್ತಿ.
ಆ ಕ್ಷಣದಲ್ಲಿ ನಾನು ನನ್ನನ್ನು ಕಾಡುತ್ತಿದ್ದ ಪ್ರಶ್ನೆಯನ್ನುಕೇಳಿದೆ. ಸಾರ್, ಬದನವಾಳು ಹಾಗೂ ಉಮ್ಮತ್ತೂರಿನಲ್ಲಿ ಲಿಂಗಾಯತರು ಹಾಗೂ ದಲಿತರ ಮಧ್ಯೆ ನಡೆದ ಸಂಘರ್ಷದಲ್ಲಿ ನಿಮ್ಮ ಪಾತ್ರವೂ ಇತ್ತಲ್ಲವೇ?

ಅದಕ್ಕವರು ದೊಡ್ಡದಾಗಿ ನಿಟ್ಟುಸಿರುಬಿಟ್ಟು ಹೇಳಿದರು. ವಿಠ್ಠಲಮೂರ್ತಿ. ನಾವು ಫೀಲ್ಡಿಗೆ ಎಂಟ್ರಿಯಾಗುವ ವೇಳೆಗೆ ಎಲ್ಲವೂ ಕೈ ಮೀರಿ ಹೋಗಿತ್ತು. ಯಾವ ಶಕ್ತಿಗಳು ಆ ಗಲಭೆಯನ್ನು ಮಾಡಿಸಬೇಕು ಎಂದು ಬಯಸಿದ್ದವೋ? ಅವುಗಳ ಬಯಕೆ ಈಡೇರಿ ಆಗಿತ್ತು. ನನ್ನ ಹೆಸರು ನಿರಾಯಾಸವಾಗಿ ಎಂಟ್ರಿ ಪಡೆಯಿತು. ಬಿಕಾಸ್ ಆಫ್ ಮೈ ಕ್ಯಾಸ್ಟ್. ಅದಕ್ಕೇ ನಾನು ಹೇಳಿದ್ದು: ಯಾವತ್ತೂ ನೀವು ಇನ್ನೊಬ್ಬರ ಬಾವನೆಗೆ ಘಾಸಿ ಮಾಡಬೇಡಿ. ಹಾಗೆಯೇ ನಿಮ್ಮ ಬಾವನೆಗೆ ಘಾಸಿಯಾಗಲು ಬಿಡಬೇಡಿ.

ಅವರ ಈ ಮಾತುಗಳು ಮೊನ್ನೆ ನೆನಪಿಗೆ ಬರುತ್ತಿದ್ದಂತೆಯೇ ಥಟ್ಟಂತ ನನ್ನ ಕಣ್ಣ ಮುಂದೆ ನಿಂತವಳು ಗುಂಡಮ್ಮ! ಅವಳ ಹೆಸರು ಸವಿತಾ. ವಾವೆಯಲ್ಲಿ ನನ್ನ ತಂಗಿ. ಆದರೆ ಅವಳು ನನಗೆ ಐದು ತಲೆಮಾರಿನ ಮೂಲಕ ದಕ್ಕಿದ ತಂಗಿ. ಪರಸ್ಪರ ನನ್ನ ಹಾಗೂ ಆಕೆಯ ಕುಟುಂಬದವರ ಮನಸ್ಸುಗಳ ನಡುವೆ ಘಾಸಿಯಾಗಿಲ್ಲ ಎಂಬ ಕಾರಣಕ್ಕಾಗಿ ಈ ಬಾಂಧವ್ಯ ಹಾಗೇ ಉಳಿದಿರಬೇಕು.

ನನ್ನ ತಾಯಿ ಪ್ರಭಾವತಿ ಬಾಯಿ. ಅವರ ಮುತ್ತಜ್ಜನ ಹೆಸರು ರಂಗಪ್ಪ. ಅವರ ಮಗನ ಹೆಸರು ಪಿಂಟಿ ಬಸಪ್ಪ. ಸದರಿ ಬಸಪ್ಪ ಅವರಿಗೆ ತಿಮ್ಮಪ್ಪ, ಹಿರೋಜಪ್ಪ, ಕೃಷ್ಣಪ್ಪ, ರಾಮಚಂದ್ರಪ್ಪ ಅಂತ ಸಹೋದರರು. ಅಂದ ಹಾಗೆ ಪಿಂಟಿ ಬಸಪ್ಪ ಅವರಿಗೆ ಮಕ್ಕಳಾದರೂ, ಅವರ ಸಹೋದರ ತಿಮ್ಮಪ್ಪ ಅವರಿಗೆ ಮಕ್ಕಳಾಗಲಿಲ್ಲ. ಆಗ ಚಿಂತಾಕ್ರಾಂತರಾದ ಪಿಂಟಿ ಬಸಪ್ಪ,ತಮ್ಮ ಸಹೋದರನಿಗೆ ಮಕ್ಕಳಾಗಲಿ. ಅವನ ಸಂತಾನ ಬೆಳೆಯಲಿ ಎಂದು ಹಣಗೆರೆ ಕಟ್ಟೆಯ ದರ್ಗಾದ ಮೊರೆ ಹೋದರು. ಇದು ನಡೆದಿದ್ದು ಹೆಚ್ಚು ಕಡಿಮೆ ಒಂದು ಶತಮಾನದಷ್ಟು ಹಿಂದೆ.

ಹಣಗೆರೆ ಕಟ್ಟೆ ಎಂಬುದು ಶಿವಮೊಗ್ಗದಿಂದ ಮುಂದೆ ಬರುವ ಆಯನೂರಿನಿಂದ ಇಪ್ಪತ್ತೆರಡು ಕಿಲೋಮೀಟರುಗಳಷ್ಟು ದೂರದಲ್ಲಿರುವ ಗ್ರಾಮ. ಅಲ್ಲಿ ಸೈಯ್ಯದ್ ಹಜರತ್ ಅಲಿ ದರ್ಗಾ ಇದೆ. ಈ ದರ್ಗಕ್ಕೆ ಹೋಗಿ ಪಿಂಟಿ ಬಸಪ್ಪ ಹರಕೆ ಮಾಡಿಕೊಂಡು ಬಂದ ನಂತರ ತಿಮ್ಮಪ್ಪ ಅವರಿಗೆ ಮಕ್ಕಳಾದವು ಎಂಬ ನಂಬಿಕೆ ಈಗಲೂ ನಮ್ಮ ಕುಟುಂಬದಲ್ಲಿದೆ. ಹೀಗಾಗಿಯೇ ತಿಮ್ಮಪ್ಪ ಅವರಿಗೆ ಹುಟ್ಟಿದ ಮೊದಲ ಮಗನಿಗೆ ಫಕೀರಪ್ಪ ಅಂತ ಹೆಸರಿಟ್ಟರು. ಈ ಫಕೀರಪ್ಪನವರ ದೊಡ್ಡ ಮಗಳು ಮಂಜುಳಾಬಾಯಿ. ಅವರ ಮಗಳೇ ಗುಂಡಮ್ಮ.

ಈ ಕಡೆಯಿಂದ ಬಂದರೆ ಪಿಂಟಿ ಬಸಪ್ಪನವರ ಮಗ, ಅಂದರೆ ನನ್ನಜ್ಜ ಡೋಯಿಜೋಡೆ ರಂಗಪ್ಪ. ಅವರ ಹಿರಿಯ ಮಗಳು ಪ್ರಭಾವತಿ ಬಾಯಿ (ನನ್ನ ತಾಯಿ) ಮತ್ತು ಆಕೆಯ ಎರಡನೇ ಮಗ ನಾನು. ಹೀಗಾಗಿ ನಮ್ಮದು ಐದು ತಲೆ ಮಾರಿನ ಅಣ್ಣ-ತಂಗಿ ಬಾಂಧವ್ಯ ಕಣೇ ಗುಂಡಮ್ಮ ಅಂತ ನಾನು ಆಗಾಗ ತಮಾಷೆ ಮಾಡುವುದಿದೆ.

ತಮಾಷೆ ನಾನು ಮಾಡಬಹುದು. ಆದರೆ ಆಕೆ ಸೀರಿಯಸ್. ಮದುವೆಗೂ ಮುನ್ನ ಕೆಲ ವರ್ಷಗಳ ಕಾಲ ಸಾಗರದಲ್ಲಿ ನಮ್ಮ ಮನೆಯಲ್ಲಿದ್ದು ಓದುತ್ತಿದ್ದಳು. ಮದುವೆಯಾದ ನಂತರ ಶಿವಮೊಗ್ಗಕ್ಕೆ ಹೋದಳು. ಅಲ್ಲಿನ ಅಮೀರ್ ಅಹ್ಮದ್ ಸರ್ಕಲ್ ನಲ್ಲಿರುವ ಮಾಂಡ್ರೆ ಮನೆತನದ ಹುಡುಗನೊಂದಿಗೆ ಆಕೆಯ ವಿವಾಹವಾಯಿತು. ಆಕೆಗೆ ಮೊದಲ ಮಗು ಹುಟ್ಟುವ ಮುನ್ನ ಮನೆಗೆ ಹತ್ತಿರದ ಜ್ಯೋತಿಷಿಗಳು, ಗಂಡು ಮಗುವಾದರೆ ಇಂತಹ ಹೆಸರಿಡು, ಹೆಣ್ಣು ಮಗುವಾದರೆ ಇಂತಹ ಹೆಸರಿಡು ಎಂದರು. ಸರಿ, ಆಕೆಗೆ ಹೆಣ್ಣು ಮಗು ಹುಟ್ಟಿತು.

ಇನ್ನೇನು ಹೆಸರಿಡಬೇಕು? ಆಗ ಆಕೆಯದು ತನ್ನ ತಂದೆಯ ಬಳಿ ಒಂದೇ ವರಾತ. ಕೆಲಸ ಸಿಕ್ಕು ನನ್ನ ವಿಠ್ಠು ಅಣ್ಣ ಬೆಂಗಳೂರಿಗೆ ಹೋದಾಗ ಮೊದಲು ಕೆಲಸ ಮಾಡಿದ್ದು ಅರ್ಪಿತಾ ಪತ್ರಿಕೆಯಲ್ಲಿ. ಅದರ ನೆನಪಿಗಾಗಿ ನನ್ನ ಮಗಳಿಗೆ ನಾನು ಅರ್ಪಿತಾ ಎಂದೇ ಹೆಸರಿಡುತ್ತೇನೆ. ಸರಿ, ನನ್ನ ಚಿಕ್ಕಪ್ಪ ಕೂಡಾ ದುಸುರಾ ಮಾತನಾಡಲಿಲ್ಲ. ಆಯಿತು ಗುಂಡಮ್ಮ. ನಿನ್ನ, ನಿನ್ನಣ್ಣನ ಮಧ್ಯೆ ನಾನು ಬರುವುದಿಲ್ಲ. ಅರ್ಪಿತಾ ಎಂದೇ ಹೆಸರಿಡು ಎಂದು ಹೇಳಿದರು. ಫೈನಲಿ, ಅದೇ ಹೆಸರು ನಿಕ್ಕಿಯಾಯಿತು. ಆ ಹುಡುಗಿ ಇದೀಗ ಮರದಂತೆ ಬೆಳೆದು ನಿಂತಿದ್ದಾಳೆ.

ಇದೇನೇ ಗುಂಡಮ್ಮ? ಎಲ್ಲರೂ ಯಾವ್ಯಾವುದೋ ನೆನಪಿಗೆ ಹೆಸರಿಡುತ್ತಾರೆ. ಆದರೆ ನಾನು ಮೊದಲು ಕೆಲಸ ಮಾಡಿದ ಪತ್ರಿಕೆಯ ಹೆಸರನ್ನು ನಿನ್ನ ಮಗಳಿಗೆ ಇಟ್ಟಿದ್ದೀಯಲ್ಲ? ಅಂತ ನಾನು ಕೇಳಿದರೆ, ಅರೇ, ಈ ಹೆಸರಿಟ್ಟರೆ ಒಳ್ಳೆಯದಾಗುತ್ತದೆ ಎಂಬುದು ನನ್ನ ನಂಬಿಕೆ ಕಣಣ್ಣ. ನನ್ನಣ್ಣ ಯಾರಿಗೂ ಅನ್ಯಾಯ ಮಾಡಿದವನಲ್ಲ. ಹೀಗಾಗಿ ಅಣ್ಣ ಕೆಲಸ ಮಾಡಿದ ಮೊದಲ ಪೇಪರಿನ ಹೆಸರು ನೆನಪಿನಲ್ಲಿರಲಿ ಅಂತ ಅವಳಿಗೆ ಈ ಹೆಸರಿಟ್ಟಿದ್ದೇನೆ ಎನ್ನುತ್ತಾಳೆ.

ನೆನಪಿಸಿಕೊಂಡಾಗ ಯಾಕೋ ಮನಸ್ಸು ಅರ್ದ್ರವಾಗುತ್ತದೆ. ನಂಬಿಕೆ ಎಂಬುದು ಎಷ್ಟು ಪ್ರಭಾವಿ ಮತ್ತು ಪ್ರಖರವಾದದ್ದು? ಇಂತಹ ನಂಬಿಕೆಗೆ ಯಾರಾದರೂ ಹೊಡೆತ ಕೊಟ್ಟರೆ ತಕ್ಷಣ ಮನಸ್ಸುಗಳು ರಿಯಾಕ್ಟ್ ಮಾಡುತ್ತವೆ. ಮತ್ತು ಇದರ ಲಾಭವನ್ನು ಇನ್ಯಾರೋ ಪಡೆಯುತ್ತಾರೆ. ಇದು ಕೇವಲ ನನ್ನ ಕುಟುಂಬದ ಪ್ರಶ್ನೆಯಲ್ಲ. ಇಡೀ ಜಗತ್ತಿನ ಪ್ರಶ್ನೆ.

ಅಂದ ಹಾಗೆ ಗುಂಡಮ್ಮನ ಕತೆಯನ್ನು ಯಾಕೆ ಹೇಳಿದೆ ಎಂದರೆ ಅದೇನೂ ಕೋಮುವಾದಕ್ಕೆ ಸಂಬಂಧಿಸಿದ ವಿಷಯವಲ್ಲ. ನಂಬಿಕೆಗೆ ಸಂಬಂಧಿಸಿದ ವಿಷಯ. ಇದುವರೆಗೆ ಅದಕ್ಕೆ ಘಾಸಿಯಾಗಿಲ್ಲ ಎಂಬ ಕಾರಣಕ್ಕಾಗಿ. ಐದು ತಲೆಮಾರುಗಳಿಂದ ಈ ವಿಶ್ವಾಸ ಉಳಿದುಕೊಂಡು ಬಂದಿದೆ. ಘಾಸಿಯಾದರೆ? ಸಹಜವಾಗಿಯೇ ಅದು ಕಳಚಿ ಬೀಳುತ್ತದೆ.

ಹೀಗಿರುವಾಗ ಕೋಮು ಕೋಮುಗಳ ನಡುವಣ ಬಾವನೆಗೆ ಘಾಸಿ ಉಂಟು ಮಾಡಿದರೆ? ಜನ ಸಹಜವಾಗಿಯೇ ರಿಯಾಕ್ಟ್ ಮಾಡುತ್ತಾರೆ. ಜಗತ್ತಿನ ಜನಶಕ್ತಿಯ ಮುಂದೆ ಎಂತೆಂತವರೋ ಉರುಳಿ ಬಿದ್ದಿದ್ದಾರೆ. ಈ ಕೋಮುವಾದ ಎಂಬ ಇಂಡಸ್ಟ್ರಿ ಕೂಡಾ ಹೀಗೇ ನಾಶವಾದರೆ ಎಷ್ಟು ಚೆನ್ನಾಗಿರುತ್ತದೆ?
ಹಾಗನ್ನಿಸುತ್ತಿದ್ದಂತೆಯೇ ತಕ್ಷಣ ಹಣಗೆರೆ ಕಟ್ಟೆಗೆ ಹೋಗಿ ಬಂದೆ. ಇದನ್ನೆಲ್ಲ ನಿಮ್ಮೆದುರು ಹೇಳಿಕೊಂಡೆ.

‍ಲೇಖಕರು Admin

January 28, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಶಮ, ನಂದಿಬೆಟ್ಟ

    ಈ ಕೋಮುವಾದ ಎಂಬ ಇಂಡಸ್ಟ್ರಿ ಕೂಡಾ ಹೀಗೇ ನಾಶವಾದರೆ ಎಷ್ಟು ಚೆನ್ನಾಗಿರುತ್ತದೆ?

    ಪ್ರತಿಯೊಬ್ಬರೂ ಇದೇ ಕನಸು ಕಂಡು ಶ್ರಮಿಸಿದರೆ ಆದೀತೇನೋ ನೋಡೋಣ

    ಪ್ರತಿಕ್ರಿಯೆ
  2. balakrishna.t.G.

    idu bari janagalinda udbhava aagilla.
    karanibhootaroo bahala mandi.
    haradalu bahushaha yaru ………..?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: