ಶ್ರೀದೇವಿ ಕೆರೆಮನೆ
ನಾನು ಎಷ್ಟು ಕೂಲ್ ಮನುಷ್ಯ ಗೊತ್ತಾ? ನಾನು ಕೋಪ ಮಾಡ್ಕೊಳ್ಳೋದೇ ಇಲ್ಲ. ಎಲ್ಲೋ ಅಪರೂಪಕ್ಕೊಮ್ಮೆ ಕೋಪ ಬರುತ್ತೆ ಅಷ್ಟೆ. ಅವರು ಮನೆಗೆ ಬಂದ ನೆಂಟರ ಬಳಿ ಹೇಳುವುದನ್ನು ಕೇಳುತ್ತಿದ್ದರೆ ಆಕೆಗೆ ತಲೆ ಸುತ್ತುವುದೊಂದೇ ಬಾಕಿ. ಆ ಮಾತಿಗೆ ಅವರ ಪತ್ನಿಯೂ ಮೌನವಾಗಿ ತಲೆ ಆಡಿಸುವುದು ಕಂಡಾಗ ನಿಜಕ್ಕೂ ಮೂರ್ಚೆ ಬಂದಂತಾಗಿತ್ತು. ಎಲ್ಲೋ ಅಪರೂಪಕ್ಕೊಮ್ಮೆ ಎನ್ನುವುದು ಎಷ್ಟು ನಿಮಿಷಕ್ಕೊಮ್ಮೆ ಎಂಬ ನಾಲಿಗೆಯ ತುದಿಗೆ ಬಂದ ಮಾತನ್ನು ಅಲ್ಲೇ ಕಚ್ಚಿ ನುಂಗಿಕೊಂಡಳು. ಬೆಳಿಗ್ಗೆಯೇ ಸುಪ್ರಭಾತದಂತೆ ಮಕ್ಕಳಿಗೆ ಸಹಸ್ರ ನಾಮಾರ್ಚನೆ ಮಾಡುತ್ತಲೇ ಪ್ರಾರಂಭವಾಗುವ ಅವರ ದಿನಚರಿಯಲ್ಲಿ ಹೆಂಡತಿಗೆ ಬೈಯ್ಯುವುದು ಹೆಚ್ಚಿನ ಆಧ್ಯತೆ ಪಡೆಯುತ್ತದೆ. ಬೆಳಗಿನ ತಿಂಡಿ ಸರಿಯಾಗಿಲ್ಲ ಎಂದು ಪ್ರಾರಂಭವಾಗುವ ಅವರ ವಟಗುಟ್ಟುವಿಕೆ ರಾತ್ರಿ ಹಾಸಿದ್ದು ಸರಿಯಾಗಿಲ್ಲ, ಹೊದಿಕೆ ಮಡಚಿಟ್ಟಿಲ್ಲ, ಕುಡಿಯಲು ತಲೆದಿಂಬಿನ ಬಳಿ ನೀರಿಟ್ಟಿಲ್ಲ ಎಂದು ಕಣ್ಣು ಮುಚ್ಚುವ ಕೊನೆಯ ಕ್ಷಣದವರೆಗೂ ಒಂದಲ್ಲ ಒಂದು ಇಲ್ಲಗಳ ಪಟ್ಟಿಯನ್ನು ಎದುರಿಗಿಡುತ್ತಲೇ ಇರುವುದು ಈಕೆಗೆ ಗೊತ್ತಿದೆ.
ಅವರ ಮನೆಗೆ ಬಾಡಿಗೆಗೆ ಬಂದ ಹೊಸದರಲ್ಲಿ ಎಲ್ಲಾ ಊಟ ತಿಂಡಿಗೂ ಚೆನ್ನಾಗಿಲ್ಲ ಎಂದು ಯಜಮಾನರು ಬೈಯ್ಯುವುದು, ಅದಕ್ಕೆ ಅವರ ಪತ್ನಿ ಮೌನವಾಗಿರುವುದನ್ನು ಕಂಡಾಗ ಆ ಅಮ್ಮನಿಗೆ ನಿಜಕ್ಕೂ ಅಡುಗೆ ಮಾಡಲು ಬರುವುದಿಲ್ಲ ಎಂದೇ ಈಕೆ ತಿಳಿದಿದ್ದಳು. ಒಂದು ಹಬ್ಬದ ದಿನ ಆರೋಗ್ಯ ಚೆನ್ನಾಗಿಲ್ಲದೇ ಮಲಗಿದವಳಿಗೆ ಅವರ ಮನೆಯಿಂದ ಊಟ ಬಂದ ನಂತರ ಆಕೆಗೆ ಆಶ್ಚರ್ಯವಾಗಿತ್ತು, ಅಮೃತದಂತಹ ಅಡುಗೆಯನ್ನು ಯಾವ ಕಾರಣ ಕೊಟ್ಟು ಅವರು ಹೀಯಾಳಿಸುತ್ತಾರೆ ಎಂಬುದೇ ಈಕೆಗೆ ಅರ್ಥವಾಗಿರಲಿಲ್ಲ. ಆದರೆ ತಿಂಗಳಾಗುವಷ್ಟರಲ್ಲಿ ಏನಾದರೂ ಒಂದು ಕಾರಣವಿಟ್ಟು ಬೈಯ್ಯುವುದು ಯಜಮಾನರ ಮೂಲಗುಣ ಎಂದು ಅರಿವಾಗಿತ್ತು. ಇದ್ದ ಎರಡೂ ಮಕ್ಕಳೂ ಅಪ್ಪನ ಬೈಗುಳಕ್ಕೆ ಹೆದರಿ ಊರಲ್ಲಿಯೇ ಇದ್ದ ಕೆಲಸ ಬಿಟ್ಟು ದೂರದ ಊರುಗಳಿಗೆ ಹೋಗಿ ಅಲ್ಲಿಯೇ ಸೆಟಲ್ ಆಗಿದ್ದರು. ಅದಕ್ಕೂ ಹೆಂಡತಿಯೇ ಕಾರಣ ಎಂಬಂತೆ ಆಗಾಗ ಗೊಣಗಾಟ, ರೇಗುವಿಕೆ ಎಲ್ಲಾ ಮುಗಿಸಿ ಕೊನೆಗೆ ಅವರವರ ಕರ್ಮ. ನಾನ್ಯಾಕೆ ಸುಮ್ಮನೆ ರೇಗಾಡಿ ನನ್ನ ಬಿ.ಪಿ ಹೆಚ್ಚು ಮಾಡಿಕೊಳ್ಳಲಿ? ಎಂದು ತುಂಬಾ ಸರಳವಾಗಿದ್ದವರಂತೆ ಆಡುತ್ತಿದ್ದರು. ಎಲ್ಲೋ ರಜೆಯಲ್ಲಿ ಬರುತ್ತಿದ್ದ ಮೊಮ್ಮಕ್ಕಳು ಅಜ್ಜನ ಕೋಪಕ್ಕೆ ಹೆದರಿ, ಬೇಸಿಗೆ ಶಿಬಿರಗಳಿಗೆ ಸೇರಿಕೊಳ್ಳ ತೊಡಗಿದ್ದರು. ಮೊಮ್ಮಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಅದಕ್ಕೆ ಮೊಮ್ಮಕ್ಕಳೊಬ್ಬರೂ ಮನೆಗೆ ಬರುತ್ತಿಲ್ಲ. ಎನ್ನುವ ಅಪವಾದ ಹೊರೆಸಿ ಹೆಂಡತಿಯ ಕಣ್ಣಲ್ಲಿ ನೀರು ತರಿಸಿ ಸಮಾಧಾನ ಪಟ್ಟುಕೊಂಡಿದ್ದರು.
ಕೆಲವರ ಗುಣವೇ ಹಾಗೆ. ಎಲ್ಲದಕ್ಕೂ ವಟಗುಟ್ಟುತ್ತಲೇ ಇರುವುದು ಮತ್ತು ಇಲ್ಲದ ಕಾರಣಗಳನ್ನು ಇಟ್ಟು ಬೈಯ್ಯುತ್ತಲೇ ಇರುವುದು. ಕೋಪವೇ ಅವರ ಸ್ಥಾಯಿಭಾವ. ಯಾಕೋ ಕೋಪದ ಬಗ್ಗೆ ಯೋಚಿಸಿದಾಗಲೆಲ್ಲ ನನಗೆ ನೆನಪಾಗುವುದು ನಾನು ಎಂದೋ ನೋಡಿದ ಯಕ್ಷಗಾನ ಪ್ರಸಂಗವೊಂದರ ಜಮದಗ್ನಿಯ ಕೋಪದ ಕಥೆ. ಹೆಂಡತಿಯ ತಲೆ ಕಡಿದು ಎಲ್ಲಾ ಅವಾಂತರಗಳೂ ಮುಗಿದ ಮೇಲೆ ಪಾಪ ಜಮದಗ್ನಿಗೆ ಕೋಪ ಬಲು ಕೆಟ್ಟದ್ದು ಎನ್ನುವ ಜ್ಞಾನೋದಯವಾಯಿತು. ಹೀಗಾಗಿ ಆತ ಕೋಪವನ್ನು ತ್ಯಜಿಸಲು ತೀರ್ಮಾನಿಸಿದ. ಕೋಪದ ಅಧಿದೇವತೆ ಆತನನ್ನು ಬಿಟ್ಟು ಹೊರಡುವಾಗ ತನ್ನನ್ನು ಹೊರದೂಡದಂತೆ ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ. ತನ್ನನ್ನು ತ್ಯಜಿಸಿದರೆ ಮುಂದೆ ಅನಾಹುತ ಎದುರಿಸ ಬೇಕಾದೀತು ಎನ್ನುವ ಎಚ್ಚರಿಕೆ ಸಹ ನೀಡುತ್ತಾಳೆ ಆದರೆ ಜಮದಗ್ನಿಯದ್ದು ಒಂದೇ ಹಟ. ‘ತಾನು ಕೋಪವನ್ನು ಬಿಡಬೇಕು’ ಕೊನೆಗೂ ಒಪ್ಪಿದ ಕೋಪ ಮುಂದಿನ ಆತನ ದುರ್ಗತಿಯನ್ನು ನೆನೆದು ಕಣ್ಣೀರಿಡುತ್ತ ಆತನನ್ನು ಬಿಟ್ಟು ಹೊರಡುತ್ತದೆ. ಅದಾದ ನಂತರ ಅಲ್ಲಿಗೆ ಬಂದ ಕಾರ್ತವೀರ್ಯ ಜಮದಗ್ನಿಯ ಆಶ್ರಮದಲ್ಲಿರುವ ಕಾಮಧೇನುವನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಹವಣಿಸುತ್ತಾನೆ. ಆಗ ಜಮದಗ್ನಿಗೆ ಕೋಪದ ಅಧಿದೇವತೆ ಪುನಃ ತನ್ನನ್ನು ಕರೆದುಕೊಳ್ಳುವಂತೆ ವಿನಂತಿಸುತ್ತದೆ. ಆದರೆ ಒಮ್ಮೆ ತ್ಯಜಿಸಿದ್ದನ್ನು ಮತ್ತೆ ಸ್ವಿಕರಿಸಲಾರೆ ಎಂದು ಜಮದಗ್ನಿ ಕೋಪವನ್ನು ನಿರಾಕರಿಸುತ್ತಾನೆ. ಜಮದಗ್ನಿಯನ್ನು ನಿರ್ಲಕ್ಷಿಸಿ ಕಾಮಧೇನುವನ್ನು ಕಾರ್ತ್ಯವೀರ್ಯ ಕರೆದೊಯ್ಯುತ್ತಾನೆ. ಕಾಮಧೇನುವನ್ನು ಬಿಡಿಸಿ ಬರಲು ಹೋದ ಪರಶುರಾಮ ಕಾರ್ತ್ಯವೀರ್ಯನನ್ನು ಕೊಂದ ಸೇಡು ತೀರಿಸಿಕೊಳ್ಳಲು ಆತನ ಮಕ್ಕಳು ಜಮದಗ್ನಿಯನ್ನು ಕೊಲ್ಲುವುದನ್ನು ಕಂಡ ಕೋಪದ ಅಧಿದೇವತೆ ಕೋಪ ಹತಾಶೆಯಿಂದ ಅಧೋಮುಖಿಯಾಗುತ್ತದೆ. ಆ ಯಕ್ಷಗಾನ ನೋಡಿದ ಮೇಲೆ ಇನ್ನು ಮುಂದೆ ಯಾವುದೇ ಕಾರಣಕ್ಕೂ ಕೋಪವನ್ನು ಬಿಡಲೇ ಬಾರದು ಎಂದು ತೀರ್ಮಾನಿಸಿಕೊಂಡು ಬಿಟ್ಟಿದ್ದೆ. ಆ ಕಾರಣಕ್ಕಾಗಿಯೇ ನಮ್ಮ ಕರಾವಳಿ ಭಾಗದಲ್ಲಿ ಜಮದಗ್ನಿ ಕೋಪ ಬಿಟ್ಟ ಹಾಗೆ ಎನ್ನುವ ಗಾದೆ ಮಾತೊಂದು ಪ್ರಚಲಿತದಲ್ಲಿದೆ.

ಕೋಪ ಸ್ಥಾಯಿ ಭಾವ ಆದವರನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಒಂದಿಷ್ಟು ಕುತೂಹಲಕಾರಿ ಅಂಶಗಳು ಕಂಡು ಬರುತ್ತದೆ. ಅವರ ಸ್ವಭಾವದಲ್ಲಿರುವುದು ಕೇವಲ ಕೋಪವಲ್ಲ. ಅದರ ಹಿಂದೆ ಅವರಲ್ಲಿರುವ ಮೇಲರಿಮೆ, ಅಹಂಕಾರ ಕೂಡ ಕೆಲಸ ಮಾಡುತ್ತಿರುತ್ತದೆ. ಯಾರಲ್ಲಿ ಸುಪಿರಿಯಾರಿಟಿ ಕಾಂಪ್ಲೆಕ್ಸ ಹೆಚ್ಚೋ ಅವರಲ್ಲಿ ಕೋಪ ಹಟ ಸ್ಥಾಯಿ ಭಾವ. ನನ್ನ ಒಬ್ಬ ಸ್ನೇಹಿತನಿಗೆ ಮೂಗಿನ ತುದಿಯಲ್ಲಿಯೇ ಕೋಪ. ಮಾತಿಗೆ ಮೊದಲೇ ಮೂಗು ಕೆಂಪೇರಿಸಿಕೊಳ್ಳುವ ಆತನಿಗೆ ಸಿಟ್ಟು ಬರುವ ಸಂದರ್ಭ ಯಾವುದು ಎಂದು ಗಮನಿಸಿದಾಗ ಇಂತಹ ಒಂದಿಷ್ಟು ಆಸಕ್ತಿದಾಯಕ ವಿಷಯಗಳು ನನ್ನ ಊಹೆಗೆ ನಿಲುಕಿತ್ತು. ಆತ ಮಾಡುವ ಯಾವ ಕೆಲಸವನ್ನೂ ತಪ್ಪು ಎಂದು ಹೇಳುವಂತಿಲ್ಲ; ಅದು ಎಷ್ಟೇ ತಪ್ಪಾಗಿದ್ದರೂ ಕೂಡ!! ನೀನು ಮಾಡಿದ್ದೇ ಸರಿ ಎಂದು ಒಂದಿಷ್ಟು ಹೊಗಳಿ ಬಿಟ್ಟರೆ ಆತ ಪುಲ್ ಕುಷ್. ಮತ್ತೂ ಆಸಕ್ತಿದಾಯಕವೆಂದರೆ ಆತನ ಕೋಪದ ಆಟಾಟೋಪ ತಾಳಲಾಗದೇ ಉದಾಸೀನ ಮಾಡಿದಾಗಲೂ ಆತನ ‘ಈಗೋ’ಗೆ ಹರ್ಟ್ ಆಗಿ ಮತ್ತಿಷ್ಟು ವೈಲ್ಡ್ ಆಗುವುದನ್ನು ಗಮನಿಸಿದ್ದೇನೆ. ಅಂದರೆ ಆತನಲ್ಲಿರುವ ಸುಪಿರಿಯಾರಿಟಿ ಕಾಪ್ಲೆಕ್ಸ್ ಗೆ ಯಾವುದೇ ರೀತಿಯ ಧಕ್ಕೆ ಆದರೂ ಆತ ಸಿಡಿದೇಳುತ್ತಿದ್ದ. ಅಂದರೆ ಸ್ವಾಭಿಮಾನವಷ್ಟೇ ಅಲ್ಲ, ಕೆಲವರೊಳಗಿನ ದುರಭಿಮಾನವೂ ಕೋಪವನ್ನು ಜಾಸ್ತಿ ಮಾಡುತ್ತದೆ.
ಕೆಲವು ವರ್ಷಗಳ ಹಿಂದೆ ತೀರಿಕೊಂಡ ನನ್ನ ಚಿಕ್ಕಪ್ಪನಿಗೆ ಬರುತ್ತಿದ್ದ ಕೋಪ ಬೇರೆಯದ್ದೇ ತೆರನಾದದ್ದು. ಮೊದಲೆಲ್ಲ ಇಡೀ ದಿನ ಶ್ರಮವಹಿಸಿ ಕೆಲಸ ಮಾಡುತ್ತಿದ್ದ ಆತ ವೈದ್ಯರ ನಿರ್ಲಕ್ಷ ಹಾಗೂ ತಪ್ಪು ಡೈಗ್ನೋಸಿ ಸ್ ನಿಂದಾಗಿ ತೀವೃ ಅನಾರೋಗ್ಯಕ್ಕೀಡಾಗಿದ್ದ. ಕೆಲಸ ಮಾಡಲಾಗದ ತನ್ನ ಅಸಹಾಯಕತೆಯನ್ನು ಬೇರೆಯವರ ಮೇಲೆ ವ್ಯಕ್ತ ಪಡಿಸುತ್ತಿದ್ದ. ಅಸಹಾಯಕತೆ ಜಾಸ್ತಿ ಆದಷ್ಟೂ ನಮ್ಮೊಳಗು ಜ್ವಾಲಾಮುಖಿಯಾಗುತ್ತಿರುತ್ತದೆ.
ಮೊನ್ನೆ ಯಾವುದೋ ಧಾರಾವಾಹಿಯ ಕೆಲವು ವಾಕ್ಯಗಳು ಕಿವಿಗೆ ಬಿದ್ದಿದ್ದು ನಿಜಕ್ಕೂ ಯೋಚನೀಯವಾಗಿತ್ತು. ನಾನು ಮಾಡಿರೋದು ತಪ್ಪು ಅಂತಾ ನನಗೆ ಗೊತ್ತು ಅತ್ತೆ. ಕಂಪನಿಯ ಹತ್ತು ಲಕ್ಷವನ್ನು ಬಳಸಿಕೊಂಡಿದ್ದು ನಾನು ಮಾಡಿದ ಅಕ್ಷಮ್ಯ ಅಪರಾಧ. ಆ ತಪ್ಪನ್ನು ಮುಚ್ಚಿಟ್ಟುಕೊಳ್ಳುವುದಕ್ಕಾಗಿಯೇ ನಾನು ಇಡೀ ದಿನ ಕೋಪ ಪ್ರದರ್ಶಿಸುತ್ತಿರುತ್ತೇನೆ. ಅವರೆದುರು ನಿಂತು ಮಾತನಾಡುವ, ಅವರ ಪ್ರಶ್ನೆಗಳಿಗೆ ಉತ್ತರಿಸುವ ನೈತಿಕ ಧೈರ್ಯ ನನಗಿಲ್ಲ ಹೀಗಾಗಿ ಅವರನ್ನು ನನ್ನ ಎದುರಿಂದ ಆದಷ್ಟು ಬೇಗ ದೂರ ಸರಿಸುವುದಕ್ಕಾಗಿ ಕೋಪ ಮಾಡುತ್ತೇನೆ. ಎನ್ನುವುದನ್ನು ಕೇಳಿದಾಗ ಕೋಪಮಾಡಿಕೊಳ್ಳಲು ಇರುವ ಕಾರಣಗಳು ಎಷ್ಟೊಂದಿದೆ ಅನ್ನಿಸಿತ್ತು. ಇಂತಹ ಕಾರಣಗಳು ಮಕ್ಕಳಲ್ಲಿ ಹೆಚ್ಚು ಕಾಣ ಬಹುದು. ತಮ್ಮ ಯಾವುದೋ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಮುಖ ಉಬ್ಬಿಸಿಕೊಂಡು ಮೂಲೆ ಹಿಡಿಯುವುದು ತುಂಬಾ ಮಾಮೂಲು.
ಇಷ್ಟಾಗಿ ಕೂಡ ಕೆಲವರಿಗೆ ಕೋಪ ಮಾಡಿಕೊಳ್ಳಲು ನಿರ್ಧಿಷ್ಟ ಕಾರಣಗಳೇ ಬೇಕೆಂದಿಲ್ಲ. ದೇಶದ ಆಗು ಹೋಗುಗಳಿಂದ ಹಿಡಿದು ಸೊಳ್ಳೆ ಕಚ್ಚುವುದರವರೆಗೂ ತಮ್ಮ ಕೆಳಗಿನವರ ಮೇಲೆ ಕೋಪ ಪ್ರದರ್ಶಿಸಲು ಇರುವ ಇಶ್ಯುಗಳೇ ಎಂದು ಅವರು ತಿಳಿದು ಕೊಳ್ಳುತ್ತಾರೆ. ಅದರಲ್ಲೂ ಕೆಲವು ಅಧಿಕಾರಿ ವರ್ಗದವರಿಗೆ ತಮ್ಮಿಂದ ಕೆಲಸ ಮಾಡಿಸಲು ಆಗದಿದ್ದಾಗ, ತಾವೂ ಕೆಲಸ ಮಾಡುವಷ್ಟು ಸಾಮರ್ಥ್ಯ ಹೊಂದಿರದಿದ್ದಾಗ ಅಥವಾ ತಮ್ಮ ಸಬ್ಒರ್ಡಿನೇಟ್ ಗಳು ತಮಗಿಂತ ಬುದ್ಧಿವಂತರು ಎಂಬ ಕೀಳರಿಮೆ ಕಾಡಿದಾಗ ಅದನ್ನು ಹೋಗಲಾಡಿಸಿಕೊಳ್ಳಲು ತಮ್ಮ ಅಧಿಕಾರ ಉಪಯೋಗಿಸಿ ಅವರ ಮೇಲೆ ಕೋಪ ಪ್ರದರ್ಶಿಸುವುದು ಮಾಮೂಲು.
ಒಟ್ಟಿನಲ್ಲಿ ಕೋಪ ಎನ್ನುವುದು ಅವರವರ ಭಾವಕ್ಕೆ ತಕ್ಕಂತೆ ಆಯಾ ಕ್ಷೇತ್ರಗಳಲ್ಲಿ, ಸ್ಥಳಗಳಲ್ಲಿ ಕೆಲಸ ಮಾಡುತ್ತಿರುತ್ತದೆ. ಆದರೂ ಅತಿಯಾದ ಕೋಪ ಪ್ರದರ್ಶನ ಆರೋಗ್ಯವನ್ನು ಏರುಪೇರನ್ನಾಗಿ ಮಾಡುವುದರಲ್ಲಿ ಸಂಶಯವಿಲ್ಲ. ಕೋಪ ಪ್ರದರ್ಶಿಸಿ ರಕ್ತದೊತ್ತಡ ಹೆಚ್ಚಿಸಿಕೊಂಡು ಅಕಾಲವಾಗಿ ವಿಧಿವಶರನ್ನಾಗಿಸಿದ್ದನ್ನೂ ಈ ಸಂದರ್ಭದಲ್ಲಿ ನೆನೆಸಿಕೊಳ್ಳಲೇಬೇಕು. ಒಂದು ಚಿಕ್ಕ ಮುಗುಳ್ನಗೆ ಸಾಧಿಸಬಹುದಾಗಿದ್ದನ್ನು ಕೋಪ ಪ್ರದರ್ಶಿಸಿ ಅವಾಂತರ ಮಾಡಿಕೊಂಡ ಹಲವಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಕೋಪದಿಂದ ಆಡುವ ಮಾತುಗಳು ಒಂದು ಸುಂದರವಾದ ಸಂಬಂಧವನ್ನು ಹಾಳು ಮಾಡಿದ ಹಲವು ಉದಾಹರಣೆಗಳು ಕಣ್ಣ ಮುಂದಿದೆ. ಜೀವ, ಜೀವನವನ್ನೇ ನಾಶ ಪಡಿಸುವ ಕೋಪದ ಬಗ್ಗೆ ತೀರಾ ಎಚ್ಚರಿಕೆಯಿಂದ ಇರಬೇಕಾದದ್ದು ನಮ್ಮ ಇಂದಿನ ತುರ್ತು ಅಗತ್ಯ.






Very nice… inferiority complex kooda kopakke karana…. kailaagadavaru mai parachikondante