ನಾ ದಿವಾಕರ್
ಸಾವಿರಾರು ಅಮಾಯಕರ ಜನರ ಸಾವಿಗೆ ಕಾರಣವಾಗಿ, ಚರಾಚರ ಜೀವ ಜಂತುಗಳಿಗೆ ಸಂಚಕಾರವಾಗಿ, ಮುಂದಿನ ಹಲವು ಪೀಳಿಗೆಯ ಜನರಿಗೆ ಮಾರಕವಾಗಿ ಪರಿಣಮಿಸುವ ಒಂದು ಮಾನವ ನಿರ್ಮಿತ ದುರಂತ ಒಂದು ಪ್ರಜ್ಞಾವಂತ ಸಮಾಜದ ಸ್ಮೃತಿಪಟಲದಿಂದಲೇ ಮರೆಯಾಗುತ್ತದೆ ಎಂದರೆ ಮಾನವ ಸಮಾಜ ಎಷ್ಟು ಸ್ವಾರ್ಥಿಯಾಗಿದೆ ಎಂದು ಅರಿವಾದೀತು. ಸಿಖ್ ಹತ್ಯಾಕಾಂಡ, ಬಾಬ್ರಿ ಮಸೀದಿ, ಮುಂಬೈ ದಾಳಿ, ಸಿಖ್ ಗಲಭೆ, ಗೋಧ್ರಾ, ಗುಜರಾತ್ ಹತ್ಯಾಕಾಂಡ ಮುಂತಾದ ವಿಕೃತ ಮನಸುಗಳು ಸೃಷ್ಟಿಸಿದ ಸನ್ನಿವೇಶಗಳನ್ನು ವಾರ್ಷಿಕೋತ್ಸವದ ಮೂಲಕ ನೆನೆಯುತ್ತೇವೆ. ಆದರೆ ಆಳುವ ವರ್ಗಗಳ ಮತ್ತು ಆಳ್ವಿಕರನ್ನು ನಿಯಂತ್ರಿಸುವ ಕಾರ್ಪೋರೇಟ್ ಉದ್ಯಮಿಗಳು ಸೃಷ್ಟಿಸಿದ ಒಂದು ದುರಂತ ನೆನಪಾಗುವುದೇ ಇಲ್ಲ. ಭೂಪಾಲ್ ಇಂತಹ ದುರಂತಗಳಲ್ಲಿ ಒಂದು. ಬಹುಶಃ ಸ್ವತಂತ್ರ ಭಾರತದ ದುರಂತದ ಶಿಖರ.
ಜಾಗತಿಕ ಇತಿಹಾಸದಲ್ಲಿ ಕೈಗಾರಿಕಾ ದುರಂತಗಳ ಇತಿಹಾಸವನ್ನು ಪರಿಶೀಲಿಸಿದಾಗ ಮೂರು ಪ್ರಮುಖ ಘಟನೆಗಳು ಎದುರಾಗುತ್ತವೆ. ಅಮೆರಿಕದ ತ್ರೀ ಮೈಲ್ ದ್ವೀಪದ ದುರಂತ, ರಷ್ಯಾದ ಚೆರ್ನೋಬಿಲ್ ದುರಂತ ಮತ್ತು ಭೂಪಾಲ್ ವಿಷಾನಿಲ ದುರಂತ. ಈ ಮೂರು ಘಟನೆಗಳ ಪೈಕಿ ಭೂಪಾಲ್ ದುರಂತ ಅತ್ಯಂತ ಭೀಕರವೆಂದೂ, ಭೀಭತ್ಸವೆಂದೂ, ಅಮಾನುಷವೆಂದೂ ಗುರುತಿಸಲ್ಪಟ್ಟಿದೆ. ಡಿಸೆಂಬರ್ 2-3 1984ರ ರಾತ್ರಿ, ಕಾರ್ಬೈಡ್ ಕಾರ್ಖಾನೆಯ ಕ್ರಿಮಿನಾಶಕ ಘಟಕದಿಂದ ಮಿಥೈಲ್ ಐಸೋಸೈನೇಟ್ ಎಂಬ ವಿಷಾನಿಲ ಸೋರಲಾರಂಭಿಸಿತು. ಕಾರ್ಖಾನೆಯ ಕಾರ್ಮಿಕರು ಕಂಗಾಲಾದರು. ಇಡೀ ಆಕಾಶವನ್ನು ದಟ್ಟ ಹೊಗೆ ಆವರಿಸಿತ್ತು. ಈ ದಟ್ಟ ಆಕಾಶದಲ್ಲಿ ಕವಿದಿದ್ದ ಹೊಗೆ ಒಂದು ಮಾರಕ ವಿಷಾನಿಲ ಎಂಬ ಊಹೆಯೂ ಇರಲಿಲ್ಲ. ಎಲ್ಲರ ಕಣ್ಣುಗಳು ಉರಿಯಲಾರಂಭಿಸಿದವು, ಉಸಿರಾಡುವುದು ಕಷ್ಟವಾಯಿತು, ಅನೇಕರು ವಾಂತಿ ಮಾಡಲಾರಂಭಿಸಿದರು. ಮಕ್ಕಳು ಮುದುಕರು ಮೂಛರ್ೆ ಹೋದರು. ವೇಗವಾಗಿ ಓಡಲು ಶಕ್ತಿಯಿದ್ದವರು ತಪ್ಪಿಸಿಕೊಂಡರು. ಉಳಿದವರು ಜೀವಂತ ಶವಗಳಾದರು. ಡಿಸೆಂಬರ್ 3ರ ಮುಂಜಾನೆ ಭೂಪಾಲದ ಜನತೆಗೆ ಸೂರ್ಯೋದಯವಾಗಲೇ ಇಲ್ಲ. ಇಡೀ ನಗರವೇ ಸ್ಮಶಾನವಾಗಿತ್ತು. ನಾಲ್ಕು ಸಾವಿರ ಜನ ಜವರಾಯನ ಪಾದ ಸೇರಿದ್ದರು. ಅನಧಿಕೃತ ವರದಿಯ ಪ್ರಕಾರ ಎಂಟು ಸಾವಿರ ಎಂದು ಹೇಳಲಾಗುತ್ತದೆ. ಎಣಿಸಿದವರಾರು ? 42 ಟನ್ ರಾಸಾಯನಿಕವನ್ನು ಹೊಂದಿದ್ದ ಟ್ಯಾಂಕಿನಿಂದ ವಿಷಾನಿಲ ಹೊರಸೂಸಲಾರಂಭಿಸಿದ್ದು ಕಾಖರ್ಾನೆಯ ಆಡಳಿತ ವರ್ಗದವರಿಗೇ ತಿಳಿಯಲಿಲ್ಲ. ತಕ್ಷಣ ಮಡಿದವರ ಸಂಖ್ಯೆ 8 ಸಾವಿರ ಆದರೆ ನಂತರದ ದಿನಗಳಲ್ಲಿ ಈ ವಿಷಾನಿಲದ ಪ್ರಭಾವದಿಂದ ಉಂಟಾಗುವ ಸಂಕೀರ್ಣ ಸಮಸ್ಯೆಗಳಿಗೆ ಬಲಿಯಾದವರ ಸಂಖ್ಯೆ 25 ಸಾವಿರಕ್ಕೂ ಹೆಚ್ಚು. ವಿಷಾನಿಲದಿಂದ ಬಾಧಿತರಾದವರ ಸಂಖ್ಯೆ 5 ಲಕ್ಷಕ್ಕೂ ಹೆಚ್ಚಾಗಿರಬಹುದೆಂದು ಸರ್ಕಾರವೇ ಒಪ್ಪಿಕೊಂಡಿದೆ ಅಷ್ಟೇ. ನ್ಯಾಯ ಒದಗಿಸಿಲ್ಲ.

ಈ ದುರಂತ ಸಂಭವಿಸಿ ಮೂರು ದಶಕಗಳಾಗಿವೆ (ಡಿಸೆಂಬರ್ 3 1984). 50 ಸಾವಿರ ಕುಟುಂಬಗಳಿಗೆ ಮಾರಕವಾಗಿ ಪರಿಣಮಿಸಿರುವ ಅಮೆರಿಕದ ಬಹುರಾಷ್ಟ್ರೀಯ ಕಂಪನಿ ಯೂನಿಯನ್ ಕಾರ್ಬೈಡ್ ಇಂದಿಗೂ ಭೂಪಾಲ್ನ ಮತ್ತು ನಗರದ ಹೊರವಲಯದ ಜನರಿಗೆ ಮಾರಕವಾಗಿಯೇ ಇದೆ. ಭೂಪಾಲ್ ದುರಂತದ ಕೆಲವೇ ವರ್ಷಗಳ ನಂತರ ಸಂಭವಿಸಿದ ಮತ್ತೊಂದು ದುರಂತದಿಂದ ಕಳೆದ 24 ವರ್ಷಗಳಿಂದ ಜನರು ಸಾವು ನೋವು ಅನುಭವಿಸುತ್ತಲೇ ಇದ್ದಾರೆ. ಕ್ಯಾನ್ಸರ್, ಜನ್ಮತಃ ಉಂಟಾಗುವ ನ್ಯೂನತೆಗಳು, ಜಠರ, ಮೂತ್ರಪಿಂಡ, ಶ್ವಾಸಕೋಶ, ಮೆದುಳು ಮತ್ತಿತರ ಸೂಕ್ಷ್ಮ ಅಂಗಾಂಗಗಳಿಗೆ ಮಾರಕವಾದ ರಾಸಾಯನಿಕ ವಸ್ತುಗಳು ಮತ್ತು ಘನ ಲೋಹಗಳನ್ನು ಸೇವಿಸುತ್ತಾ ಬದುಕುತ್ತಿದ್ದಾರೆ, ಸಾಯುತ್ತಲೂ ಇದ್ದಾರೆ. ಅಂತರ್ಜಲದಲ್ಲಿ ಮಿಶ್ರಿತವಾಗಿರುವ ಈ ವಸ್ತುಗಳ ಸೇವನೆಯಿಂದ ಮತ್ತು ಯೂನಿಯನ್ ಕಾಬರ್ೈಡ್ ಕಂಪನಿ ಕಾಖರ್ಾನೆಯ ಸುತ್ತ ಗುಡ್ಡೆ ಮಾಡಿರುವ ಅಪಾಯಕಾರಿ ತ್ಯಾಜ್ಯ ಮನುಕುಲಕ್ಕೆ ಹಾನಿಕರ ಎಂದು ವಿಜ್ಞಾನಿಗಳೂ ನಿರೂಪಿಸಿದ್ದಾರೆ.
ಅನಿಲ ದುರಂತದಲ್ಲಿ ಆದಂತೆ ಈ ದುರಂತದಲ್ಲಿ ಜನರು ಹಠಾತ್ ದಾಳಿಗೆ ತುತ್ತಾಗುವುದಿಲ್ಲ. ಆದರೆ ಅಲ್ಪ ಪ್ರಮಾಣದಲ್ಲೇ ವಿಷಾನಿಲಗಳು ಜನಸಾಮಾನ್ಯರ ದೇಹದಲ್ಲಿ ಸಂಗ್ರಹವಾಗುತ್ತಿರುತ್ತವೆ. ಈ ದುರಂತ ಭೂಫಾಲ್ ದುರಂತದ ಎರಡು ವರ್ಷದ ಮುನ್ನವೇ ಆರಂಭವಾಗಿದ್ದರೂ ಬಹಿರಂಗವಾದದ್ದು ತಡವಾಗಿಯೇ. ಆದರೆ ಈ ಎರಡೂ ದುರಂತಗಳಿಗೆ ಕಾರಣ ವಾರನ್ ಅಂಡರ್ಸನ್ ನೇತೃತ್ವದ 11 ಸದಸ್ಯರ ಸಮಿತಿಯ ಶಿಫಾರಸಿನ ಮೇರೆಗೆ ಸ್ಥಾಪಿಸಲಾದ ಮೆತಿಲ್ ಇಸೋಸಿಯಾನೇಟ್ ಅನಿಲ ಕಾಖರ್ಾನೆ. ನೂತನ ವಿನ್ಯಾಸ ಮತ್ತು ಕಡಿಮೆ ವೆಚ್ಚದ ತಂತ್ರಜ್ಞಾನ ಭೂಪಾಲ್ ದುರಂತಕ್ಕೆ ಕಾರಣವಾದರೆ ತ್ಯಾಜ್ಯ ನಿರ್ವಹಣೆಯಲ್ಲಿ ಅನುಸರಿಸಿದ ಸುರಕ್ಷಿತವಲ್ಲದ ವಿಧಾನಗಳು ಎರಡನೆಯ ದುರಂತಕ್ಕೆ ಕಾರಣವಾಗಿದೆ. ಈ ಅಪಾಯದ ಸೂಚನೆ ಘಟಕದ ಸ್ಥಾಪನೆಗಾಗಿ ಒದಗಿಸಿದ್ದ ಪ್ರಸ್ತಾವನೆಯಲ್ಲೇ ಪ್ರಸ್ತಾಪವಾಗಿರುವುದು ಕುತೂಹಲಕಾರಿ ಅಂಶ. ಈ ದುರಂತದ ಸೂಚನೆಗಳು ಕಂಪನಿಗೆ ಎರಡು ವರ್ಷದ ಮುನ್ನವೇ ಲಭ್ಯವಾಗಿತ್ತು. ವರ್ಜೀನಿಯಾದಲ್ಲಿದ್ದ ಇದೇ ರೀತಿಯ ಘಟಕದಲ್ಲಿ ಸಂಭವಿಸಿದ ಅನಿಲ ಸೋರಿಕೆ ಕಂಪನಿಯ ಆಡಳಿತ ವ್ಯವಸ್ಥೆಯನ್ನು, ಸಕರ್ಾರವನ್ನು ಜಾಗೃತಗೊಳಿಸಬೇಕಿತ್ತು. ಆದರೆ ಹಾಗಾಗಲಿಲ್ಲ.
ಅನಿಲ ದುರಂತದ ಪ್ರಭಾವವನ್ನು ಕುರಿತು ಕಂಪನಿಗೆ ಸ್ಪಷ್ಟ ಮಾಹಿತಿ ಲಭ್ಯವಾಗಿದ್ದರೂ ಅದನ್ನು ಗೋಪ್ಯವಾಗಿರಿಸಲಾಯಿತು. ಅಂತರ್ಜಲ ಮಾಲಿನ್ಯದ ವಿಚಾರದಲ್ಲೂ ಇದೇ ಧೋರಣೆ ಅನುಸರಿಸಲಾಯಿತು. ಯೂನಿಯನ್ ಕಾಬರ್ೈಡ್ ಕಂಪನಿಯ ವಿಜ್ಞಾನಿಗಳು ಕಾಖರ್ಾನೆಯ ಸುತ್ತಲಿನ ಅಂತರ್ಜಲ ಪರೀಕ್ಷಿಸಿ ನೀಡಿದ ವರದಿಯಲ್ಲಿ ಎಲ್ಲ ಸ್ತರಗಳಲ್ಲೂ ಮೀನುಗಳು ಪ್ರತಿಶತಃ ಸಾಯುತ್ತವೆ ಎಂದು ಹೇಳಲಾಗಿತ್ತು. ಆದರೆ ಈ ವರದಿ ಬಹಿರಂಗವಾಗಲೇ ಇಲ್ಲ. ಕಾರಣ ? ಹೇಳಬೇಕಿಲ್ಲ. ಈ ಎರಡೂ ದುರಂತಗಳಲ್ಲಿ ವಿಜ್ಞಾನಿಗಳ ಪಾತ್ರವೂ ಪ್ರಶ್ನಾರ್ಹವಾಗುತ್ತದೆ. ಅನಿಲ ದುರಂತ ಮತ್ತು ಅಂತರ್ಜಲ ಮಾಲಿನ್ಯದಿಂದ ಉಂಟಾಗುವ ಅಪಾಯವನ್ನು ಅರಿತಿದ್ದೂ ವಿಜ್ಞಾನಿಗಳು ದಿವ್ಯ ಮೌನ ವಹಿಸಿದ್ದರು, ಕಂಪನಿಯ ಹೊಣೆಗಾರಿಕೆಯನ್ನು ತಪ್ಪಿಸಲು. ಎರಡೂ ದುರಂತಗಳಲ್ಲಿ ರಾಜ್ಯ ಮತ್ತು ಕೇಂದ್ರ ಸಕರ್ಾರಗಳ ನಿಷ್ಕ್ರಿಯತೆ ಮತ್ತು ವೈಫಲ್ಯವೂ ಎದ್ದು ಕಾಣುತ್ತದೆ. ಅನಿಲ ದುರಂತಕ್ಕೆ ಬಲಿಯಾದವರ ಪೈಕಿ ಶೇ 93ರಷ್ಟು ಸಂತ್ರಸ್ತರಿಗೆ 25 ಸಾವಿರ ರೂ ಪರಿಹಾರ ದೊರೆತರೆ, ಅಂತರ್ಜಲ ಮಾಲಿನ್ಯಕ್ಕೆ ಬಲಿಯಾಗುತ್ತಿರುವ ಜನಸಮುದಾಯಗಳ ಬಗ್ಗೆ ಸಕರ್ಾರಗಳು ಆಸಕ್ತಿಯನ್ನೇ ತೋರುತ್ತಿಲ್ಲ. ಯಾವುದೇ ಸಮೀಕ್ಷೆಯನ್ನೂ ನಡೆಸಿಲ್ಲ.
ಎರಡೂ ದುರಂತಗಳಲ್ಲಿ ನ್ಯಾಯಾಂಗದ ವೈಫಲ್ಯವನ್ನೂ ಕಾಣಬಹುದು. ನ್ಯಾಯ ವಿತರಣೆಗೆ ದೇಶದ ಆಡಳಿತ ವ್ಯವಸ್ಥೆ ಉಂಟುಮಾಡುವ ಎಡರು ತೊಡರುಗಳು, ತಮ್ಮ ಉತ್ತರದಾಯಿತ್ವ ಮತ್ತು ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಕಾಪರ್ೋರೇಟ್ ಉದ್ಯಮಿಗಳು ನಡೆಸುವ ಕಸರತ್ತು, ಈ ಕಾಪರ್ೋರೇಟ್ ಅಪರಾಧದಲ್ಲಿ ನೇರವಾಗಿ, ಪರೋಕ್ಷವಾಗಿ, ಸೂಕ್ಷ್ಮವಾಗಿ ಭಾಗಿಯಾಗುವ ಆಡಳಿತಾತ್ಮಕ ಸಂಸ್ಥೆಗಳು ಮತ್ತು ಸಕರ್ಾರಿ ವಿಭಾಗಗಳು ಈ ಎಲ್ಲದರ ನಡುವೆ ಸಿಲುಕಿ ಮೂರು ದಶಕಗಳಿಂದ ನ್ಯಾಯದೇವತೆಯ ಮುಂದೆ ಬ್ರಹ್ಮ ಕಪಾಲ ಹಿಡಿದು ನಿಂತಿರುವವರು ಭೂಪಾಲ್ನ ಸಂತ್ರಸ್ತರು. ಶಿಶುನಾಳ ಷರೀಫ್ ಕೋಡಗನ್ನ ಕೋಳಿ ನುಂಗಿತ್ತಾ ಎಂದು ಕೇಳಿದಾಗ ಈ ದುರಂತ ನೆನಪಾಗುತ್ತದೆ.






0 Comments