ಕೋಟ್ಯಾಧೀಶರಾಗೋದು ಅಷ್ಟು ಸುಲಭ ಅಲ್ಲ

Santosh-Tamraparni

ಸಂತೋಷ ತಾಮ್ರಪರ್ಣಿ

ನಮ್ಮಲ್ಲಿ ಅಥವಾ ನಮಗೆ ಗೊತ್ತಿರುವವರಲ್ಲಿ (ಅವರಿಗೂ ನಾವು ಗೊತ್ತಿರಬೇಕು) ಎಷ್ಟು ಜನ ಕೋಟ್ಯಾಧೀಶರು? ಇಲ್ಲವೇ ಇಲ್ಲ, ಅಥವಾ ಇದ್ದರೂ ಇಲ್ಲವೆಂಬಷ್ಟು ಕಡಿಮೆ. ‘ಕೋಟ್ಯಾಧೀಶರಾಗುವುದು ಹೇಗೆ?’ ‘ದುಡ್ಡು ಮಾಡುವುದು ಹೇಗೆ?’ ಅನ್ನೋ ತಲೆಬರಹದ ಸುಮಾರು ಪುಸ್ತಕಗಳು ಬಂದು ಹೋಗಿವೆ ಮತ್ತು ಮುಂದೆಯೂ ಬರುತ್ತವೆ. ಆದರೂ ಅವುಗಳನ್ನು ಓದಿ ಯಾರೂ ಉದ್ಧಾರ ಆಗಿಲ್ಲ, ಕೋಟಿ ಗಟ್ಟಲೆ ಸಂಪಾದನೆ ಮಾಡಿಲ್ಲ. ಅವುಗಳಿಂದ ದುಡ್ಡು ಮಾಡಿದವರೆಂದರೆ ಪ್ರಕಾಶಕರು ಮಾತ್ರ. ಲೇಖಕರೂ ದುಡ್ಡು ಮಾಡಿದ್ದಾರೆಂದು ಖಚಿತವಾಗಿ ಹೇಳಲಾಗದು.

laughingಒಳ್ಳೆ ಐಡಿಯಾ, ಕಠಿಣ ಪರಿಶ್ರಮ ಮತ್ತು ಸಾಧಿಸುವ ಛಲದ ಜೊತೆ ಅದೃಷ್ಟ ಒಂದು ಜೊತೆಗೂಡಿದರೆ, ನಿಮಗೆ ಯಶಸ್ಸು ಗ್ಯಾರಂಟಿ. ಆದರೆ ಒಂದು ಮಾತು ನೆನಪಿಡಿ, ಕೋಟ್ಯಾಧೀಶರಾಗೋದು ಅಷ್ಟು ಸುಲಭ ಅಲ್ಲ.

ಆದರೆ, ನಾನಿಲ್ಲಿ ಹೇಳುತ್ತಿರುವ ಪ್ರಾಡಕ್ಟ್ ಗಳು ಬಹು ಬೇಡಿಕೆಯಲ್ಲಿವೆ. ಎಷ್ಟೆಂದರೆ, ನೀವು ಇವುಗಳನ್ನು ಮಾಡುತ್ತೀರಿ ಅಂದರೆ ಸಾಕು ನಿಮ್ಮ ಮನೆ ಮುಂದೆ ಜನರ ದೊಡ್ಡ ಕ್ಯೂ ಕ್ಷಣ ಮಾತ್ರದಲ್ಲಿ ನಿಂತು ಬಿಡುತ್ತದೆ. ಇವುಗಳನ್ನು ನೀವೇನಾದರು ಮಾಡಲು ಪ್ರಾರಂಭಿಸಿದಿರೋ ನೀವು ಕೋಟಿ, ಕೋಟಿ ಬಾಚುವುದರಲ್ಲಿ ಸಂಶಯವೇ ಇಲ್ಲ. ಯಾಕೆಂದರೆ, ಲಕ್ಷಾಂತರ ಜನರಿಗೆ ಈ ಐಟಂ ಗಳ ಅವಶ್ಯಕತೆ ಇದೆ. ಇನ್ನೊಂದು ಪಾಸಿಟಿವ್ ಅಂಶವೆಂದರೆ ಇವುಗಳ ಬೇಡಿಕೆ ಎಂದೂ ಕುಗ್ಗಲಾರದು. ಇವುಗಳನ್ನು ನೀವೇನಾದರೂ ಮಾಡಿದರೆ ಟಾಟಾ, ಬಿರ್ಲಾ, ಅಂಬಾನಿಯಂತಹವರನ್ನು ನಿಮ್ಮ ಮನೆ ಆಳಾಗಿ ಇಟ್ಟುಕೊಳ್ಳಬಹುದು. ಅವರಷ್ಟೇ ಅಲ್ಲ. ಬಿಲ್ ಗೇಟ್ಸ್, ಮಾರ್ಕ್ ಜುಕರ್ ಬರ್ಗ್ ಅಂಥವರನ್ನೂ ಕೆಲಸಕ್ಕಿಟ್ಟು ಕೊಳ್ಳಬಹುದು. ಅಷ್ಟು ಐಶ್ವರ್ಯ ನಿಮ್ಮ ಕಾಲ ಬಳಿ ಬಿದ್ದಿರುತ್ತದೆ. ಇವು ಜಾತಿ, ಕುಲ, ಗೋತ್ರ, ದೇಶ, ಬುದ್ಧಿವಂತಿಕೆ ಎಲ್ಲವನ್ನೂ ಮೀರಿದ ಪ್ರಾಡಕ್ಟಗಳು. ಈಗಾಗಲೇ ಇವುಗಳನ್ನು ಜಗತ್ತಿನ ಬೇರೆ ಮೂಲೆಯಲ್ಲಿ ಮಾರಿ, ಕೆಜಿ ಗಟ್ಟಲೆ ಹಣ ಮಾಡಲು ಜನ ಶುರು ಮಾಡಿದ್ದಾರೆ.

ಈ ಉತ್ಪನ್ನಗಳನ್ನು ಮಹಿಳೆಯರಿಗೆಂದೇ ತಯಾರಿಸಲಾಗಿವೆ. ಪುರುಷರಿಗಾಗಿ ಮಾಡಿದ ಪ್ರಾಡಕ್ಟ್ ಗಳ ಬಗ್ಗೆ ಮುಂದಿನ ಲೇಖನದಲ್ಲಿ ವಿವರಿಸುತ್ತೇನೆ.

೧. ಮ್ಯಾಜಿಕಲ್ ಮಿರರ್: ಏನಿಲ್ಲದೇನೇ ಕನ್ನಡಿ ಜಾದು ಮಾಡುತ್ತೆ. ಅದರಲ್ಲಿ ಇದು ಹೇಳಿ ಕೇಳಿ ಮ್ಯಾಜಿಕಲ್ ಮಿರರ್ ಬೇರೆ. ಇದು ಜಾದು ಮಾಡದೇ ಇರುತ್ತಾ? ಆದರೆ ಇದು ಮಾಡುವ ಜಾದು ಮಾತ್ರ ಅದ್ಭುತ. ಅಂಥಾದ್ದೇನಿದೆ ಇದರಲ್ಲಿ ಅಂತೀರಾ? ಇದರ ವಿಶೇಷತೆ ಎಂದರೆ, ಇದು ನಿಮ್ಮ ವಯಸ್ಸನ್ನು ಹತ್ತು ವರ್ಷ ಕಡಿಮೆ ತೋರಿಸುತ್ತೆ. ಸುಕ್ಕು, ಪಕ್ಕು, ನೆರಿಗೆ, ಗುಳಿ, ಇವುಗಳಂತೂ ಈ ಮಿರರ್ ಗೆ ಗೊತ್ತೇ ಇಲ್ಲ. ತಾನು ಹೇಗೆ ಸಪಾಟಾಗಿ ಇರುತ್ತೋ, ಮುಖವನ್ನೂ ಅದೇ ರೀತಿ ತೋರಿಸುತ್ತೆ. ಆಗಲೇ ಇದರ ಹವಾ ‘ಫಾಲ್ಸ್ ಬುಕ್’ , ‘ಯೂ ಠುಸ್’ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹೋಗಿದೆ. ‘ಎಲ್ಲ ವಯಸ್ಸಿನ ಮಹಿಳೆಯರ must have ಪ್ರಾಡಕ್ಟ್’ ಎಂದು ಪ್ರಸಿದ್ಧಿಯಾಗಿದೆ. ‘ಡ್ರೀಮ್ ಸಿಟಿ’ ಯಲ್ಲಿ ಈಗಾಗಲೇ ಹಾಟ್ ಕೇಕ್ ನಂತೆ ಬಿಕರಿಯಾಗುತ್ತಿರುವ ಇದು ಇನ್ನೇನು ಇಂಡಿಯನ್ ಮಾರ್ಕೆಟ್ ಗೆ ಬರಬೇಕಷ್ಟೇ. ಆದರೆ, ಕೆಲವು ಕಿಡಿಗೇಡಿಗಳು ಎರಡು ಕನ್ನಡಿ ಕೊಂಡರೆ ಇಪ್ಪತ್ತು, ಮೂರು ಕೊಂಡರೆ ಮೂವತ್ತು ವರ್ಷ ಚಿಕ್ಕವರಾಗಿ ಕಾಣುತ್ತಾರೆಂದು ಪ್ರಚಾರ ಮಾಡುತ್ತಿದ್ದಾರೆ. ಅಂಥ ಸುದ್ದಿಗಳಲ್ಲಿ ಹುರುಳಿಲ್ಲ.

೨. ಚಷ್ಮಾ ಕರಿಷ್ಮಾ : ಮ್ಯಾಜಿಕಲ್ ಮಿರರ್ ನ ಯಶಸ್ಸಿನಿಂದ ಪ್ರೇರಿತವಾದ ಉತ್ಪನ್ನ ಇದು. ಇದನ್ನು ವಿಶೇಷವಾಗಿ ತಯಾರಿಸಲಾದ ಗಾಜಿನಿಂದ ಮಾಡಿರುತ್ತಾರೆ. ಈಗಾಗಲೇ, cooling glass, anti-glare glass ಗಳು ಲಭ್ಯವಿದ್ದರೂ, ಅವುಗಳನ್ನೆಲ್ಲಾ ಧೂಳಿಪಟ ಮಾಡುವ ತಾಕತ್ತಿರುವ ಚಷ್ಮಾ (ಕನ್ನಡಕ) ಇದು. ಇದರ ತಾಕತ್ತೆಂದರೆ, ಈ ಚಷ್ಮಾ ಹಾಕಿಕೊಂಡು ನೋಡಿದರೆ, ಎದುರಿಗಿನವರು ಹತ್ತು ವರ್ಷ ಚಿಕ್ಕವರಾಗಿ ಕಾಣಿಸುತ್ತಾರೆ. ಎದುರಿಗಿನವರು ಚಿಕ್ಕವರಾಗಿ ಕಾಣಿಸುತ್ತಾರಂತ ನಾವೇಕೆ ಈ ಚಷ್ಮಾ ಖರೀದಿಸಬೇಕು ಅಂತೀರಾ? ಅಲ್ಲೇ ನಾವು ಎಡವೋದು. ಹೆಣ್ಣು ಮಕ್ಕಳು ಈ ಚಷ್ಮಾ ಖರೀದಿಸಿ, ಎದುರಿಗೆ ಯಾರಾದರೂ ಸಿಕ್ಕ ಕೂಡಲೇ, ಅವರಿಗೆ ಮೊದಲು ಇದನ್ನು ಹಾಕಿಬಿಡುತ್ತಾರೆ. ಆಮೇಲೇನೆ ಮುಂದಿನ ಮಾತುಕತೆ. ಡ್ರೀಮ್ ಸಿಟಿ ಯಲ್ಲಿನ ಕೆಲವರಂತೂ ಇದನ್ನು ಹಾಕಿಕೊಳ್ಳಲು ರೆಡಿ ಇದ್ದವರ ಜೊತೆ ಮಾತ್ರ ಮುಖಾಮುಖಿಯಾಗಿ ಮಾತನಾಡುತ್ತಾರಂತೆ, ಇಲ್ಲದಿದ್ದರೆ, ಫೋನ್ ನಂಬರ್ ಕೊಟ್ಟು ಮಾತನಾಡಲು ಹೇಳಿ ಹೋಗಿಬಿಡುತ್ತಾರಂತೆ. ಗಂಡಂದಿರು ಈ ಚಷ್ಮಾ ಹಾಕಿಕೊಂಡು ಬೇರೆ ಹುಡುಗಿಯರನ್ನು ನೋಡುತ್ತಿದ್ದಾರೆ ಅಂತ ಅವರವರ ಹೆಂಡಂದಿರು ಕಂಪ್ಲೇಂಟ್ ಮಾಡ್ತಾ ಇದಾರೆ ಅಂತ ಸುದ್ದಿ. ಆದರೂ, ಇದರ ಸೇಲ್ಸ್ ನಲ್ಲೇನೂ ಇಳಿಮುಖವಾಗಿಲ್ಲ.

specs man

೩. ಆಂಖೋಕಾ ಅಜೂಬಾ: ಮೇಲಿನ ಪ್ರಾಡಕ್ಟ್ ಬಗ್ಗೆ ಇರುವ ಕಂಪ್ಲೇಂಟ್ ನ್ನು ಗಂಭೀರವಾಗಿ ಪರಿಗಣಿಸಿ, ಅದನ್ನು ಒಂದು opportunity ಅಂತಾ ತಿಳಿದು, ತಯಾರಿಸಿದ ಉತ್ಪನ್ನವೇ ಈ ಚಷ್ಮಾ. ಇದರ ವಿಶೇಷತೆ ಏನೆಂದರೆ, ಇದನ್ನು ಹಾಕಿಕೊಂಡರೆ ಎದುರಿಗಿನವರು ಹತ್ತು ವರ್ಷ ದೊಡ್ಡವರಾಗಿ ಕಾಣುತ್ತಾರೆ. ಇದನ್ನು ಯಾವ ಹೆಂಗಸರೂ ಕೊಳ್ಳುವುದಿಲ್ಲ ಅಂತಾ ಅನ್ನಿಸುತ್ತದೆಯೇ? ಸ್ವಾಮೀ, ನಿಮ್ಮ ಊಹೆ ತಪ್ಪು. ಹೆಂಡತಿಯರು ಇದನ್ನು ಖರೀದಿಸಿ ಮನೆಯಿಂದ ಹೊರಗೆ ಬಿದ್ದ ತಕ್ಷಣ ತಮ್ಮ ತಮ್ಮ ಗಂಡಂದಿರ ಕಣ್ಣಿಗೆ ಹಾಕಿ ಬಿಡುತ್ತಾರೆ. ಇದರಿಂದ ಬೀದಿಯಲ್ಲಿ ಯಾವುದೇ ಹುಡುಗಿ ಸಿಕ್ಕಾಗ ಗಂಡಂದಿರು ಅವರತ್ತ ಪದೇ ಪದೇ ತಿರುಗಿ ನೋಡುವುದು ತಪ್ಪುತ್ತಿದೆ. ಸದ್ಯದ ಅತ್ಯಂತ ಬೇಡಿಕೆಯಲ್ಲಿರುವ ಐಟಂ ಇದೇ. ಡ್ರೀಮ್ ಸಿಟಿ ಯ e-commerce ಸೈಟ್ ಗಳಾದ ‘ಅಮೇಜಿಂಗ್ ಜಾನ್’ ಮತ್ತು ‘ಫೂಲ್ ಕಾರ್ಟ್’ ಗಳ ಸಮೀಕ್ಷೆ ಪ್ರಕಾರ ‘ನವ ವಿವಾಹಿತೆಯ ಅಚ್ಚು ಮೆಚ್ಚಿನ ಗಿಫ್ಟ್’ ಪಟ್ಟಿಯಲ್ಲಿ ಈ ಪ್ರಾಡಕ್ಟ್ ಮೊದಲನೇ ಸ್ಥಾನದಲ್ಲಿದೆ. ಕೆಲವು ಕಡೆಯಂತೂ ಇದನ್ನು ರಿಟರ್ನ್ ಗಿಫ್ಟ್ ಆಗಿಯೂ ಕೊಡುತ್ತಿದ್ದಾರಂತೆ.

೪. ಟೆರಿಫಿಕ್ ಟ್ಯಾಬ್ಲೆಟ್: ನವ ವಿವಾಹಿತೆಯರಲ್ಲದಿದ್ದರೂ, ಮದುವೆಯಾಗಿ ಮೂರ್ನಾಲ್ಕು ವರ್ಷ ಆದ ಹೆಣ್ಣು ಮಕ್ಕಳು ಇದರ ಗ್ರಾಹಕರು. ಹಾಗಂತ ಇದೇನೂ birth control ಗೆ ಸಂಬಂಧಪಟ್ಟ ಗುಳಿಗೆಯಲ್ಲ. ಇದರ ವಿಶೇಷತೆ ಏನೆಂದರೆ, ಇದನ್ನು ಬಿಸಿಯಾದ ಯಾವುದೇ liquid (ಟೀ, ಕಾಫಿ, ಹಾಲು, ಬಿಸಿನೀರು, ಇತ್ಯಾದಿ) ನಲ್ಲಿ ಹಾಕಿ ಕುಡಿದರೆ ಕಣ್ಣು ಮಂಜು ಮಂಜಾಗಿ ಕಾಣಿಸಲು ಶುರುವಾಗುತ್ತವೆ. ಇದರ ಪ್ರಭಾವ ಸುಮಾರು ೨-೩ ಗಂಟೆ ಇರುತ್ತದೆ. ಹೆಂಡಂದಿರು, ಬೆಳಿಗ್ಗೆ ಮೊದಲನೇ ಕಾಫಿ, ಟೀ ಯಲ್ಲಿ ಇದನ್ನು ಕರಗಿಸಿ ತಮ್ಮ ಗಂಡಂದಿರಿಗೆ ಕೊಡಲು ಶುರು ಮಾಡಿದ್ದಾರಂತೆ. ಇದರಿಂದ ಕಣ್ಣು ಮಂಜಾಗಿ, ಗಂಡಂದಿರು ಪೇಪರ್ ಓದುವುದನ್ನೇ ಬಿಟ್ಟು ಬಿಟ್ಟಿದ್ದಾರಂತ ಸುದ್ದಿ. ಅಷ್ಟಾಗಿಯೂ ಗಂಡಂದಿರಿಗೆ ಈ ಗುಳಿಗೆ ಬಗ್ಗೆ ಗೊತ್ತಾಗಿಲ್ಲ. ಈಗ ಹೆಂಡಂದಿರ ವರ್ತುಲದಲ್ಲಿ ಇದು ‘ಪೇಪರ್ ಪಿಲ್’ ಅಂತಾ ಫೇಮಸ್ ಆಗಿಬಿಟ್ಟಿದೆ.

ಈ ಪ್ರಾಡಕ್ಟ್ ಗಳನ್ನು ನೀವೂ ಮಾಡಲು ಪ್ರಾರಂಭಿಸಿ. ಅಥವಾ ಇವುಗಳ ಮಾರಾಟದ ಡೀಲರಶಿಪ್ ತೆಗೆದುಕೊಳ್ಳಿ. ಖಂಡಿತವಾಗಿಯೂ ಕೋಟಿ ಕೋಟಿ ಬಾಚುತ್ತೀರಿ.

ಇದೆಲ್ಲ ಆಗದ ಮಾತು, ಸಾಧ್ಯ ಇಲ್ಲ ಅಂತೀರಾ? ಸ್ವಾಮೀ, ನಾನು ಮೊದಲೇ ಹೇಳಿದ್ದೆ, ಕೋಟ್ಯಾಧೀಶರಾಗೋದು ಸುಲಭ ಅಲ್ಲ ಅಂತ.

ವಿಶೇಷ ಕೋರಿಕೆ: ನೀವೇನಾದರೂ ಒಂದು ವೇಳೆ ಇಂಥಾ ಪ್ರಾಡಕ್ಟ್ ಮಾರಲು ಪ್ರಾರಂಭಿಸಿದರೆ, ನನ್ನ ಹೆಂಡತಿಗೆ ಮಾತ್ರ ದಯವಿಟ್ಟು ತಿಳಿಸಬೇಡಿ.

‍ಲೇಖಕರು admin

May 13, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

4 ಪ್ರತಿಕ್ರಿಯೆಗಳು

  1. ಪ್ರಮೊದ್ ಹಾವನೂರ್

    Hi Santosh,

    Very interesting and a nifty article. Void of all the serious stuff . Good to see a different flavour all together. Albeit it is very interesting , there is a tacit message. Article definitely makes one to enter into his/her own nebulous pack of thoughts.
    Enjoyed reading it.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: