ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೊನೆಗೂ ನಿಲ್ಲುವ ಮಾತು..

‘ಅವಧಿ’ಯಲ್ಲಿ ನವೀನ್ ಮಧುಗಿರಿ ಅವರು ಬರೆದ ಒಂದು ಪ್ರಬಂಧ ಅನೇಕ ಪ್ರತಿಕ್ರಿಯೆಗೆ ಕಾರಣವಾಗಿದೆ. ಆ ಲೇಖನ ಇಲ್ಲಿದೆ  ಈ ಲೇಖನದ ಮುಂದುವರಿಕೆಯಾಗಿ ನಿಸಾರ್ ಅಹ್ಮದ್ ಬರೆದ ಕವಿತೆ ಹಾಗೂ ರಾಘವೇಂದ್ರ ಜೋಶಿ ಅವರ ವಿಸ್ತರಣೆಯನ್ನು ಪ್ರಕಟಿಸಲಾಗಿತ್ತು.

ಇವು ಉಂಟುಮಾಡಿದ ಚರ್ಚೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ನರೇಂದ್ರ ಪೈ 

ನಾನು ಟ್ಯಾಗ್ ಆಗಿರುವುದರಿಂದ ಎರಡು ಮಾತು ಆಡುತ್ತೇನೆ. ಎಲ್ಲಿಯಾದರೂ ನಾನು ಎಡವಿದರೆ ಕ್ಷಮೆಯಿರಲಿ.

ಕೆಲವೊಮ್ಮೆ ನಾವು ಏನೋ ಹೇಳಲು ಹೋಗಿ ಇನ್ನೇನೊ ಹೇಳಿ ಎಡವುತ್ತೇವೆ. ದಿವಾಕರ್ ಕನ್ನಡ ಫಾಂಟ್‌ನಲ್ಲಿ ಬರೆದ ಮೂಲಕತೆಯನ್ನು ಅನುವಾದಿಸಿದ್ದಾರೆ ಎಂದು ತಮ್ಮದೇ ಕನ್ನಡದಲ್ಲಿ ಉಲ್ಲೇಖಿಸಿರುವುದು ಸರಿಯಲ್ಲ. ದಿವಾಕರ್ ಅನುವಾದವನ್ನು ತುಂಬ ಗಂಭೀರವಾಗಿ ತೆಗೆದುಕೊಂಡವರು. ಅವರು ಪೂರ್ತಿಯಾಗಿ ಅನುವಾದಿಸಿಟ್ಟ ಬರಹಗಳನ್ನು ಕೂಡ ಅಷ್ಟೇನೂ ಸಮಾಧಾನವಿಲ್ಲ ಎನ್ನುವ ಕಾರಣವೊಡ್ಡಿ ಪ್ರಕಟಿಸದೇ ಇರುವುದು ನನಗೆ ಗೊತ್ತು. ಹಾಗಾಗಿ ಹೇಳಬಲ್ಲೆ. ಅಂಥವರ ಅನುವಾದ ಇದು ಎನ್ನುವಾಗ, ಅದು ಲಿಖಿತವಾಗಿ ಲಭ್ಯವಿದೆಯೇ ಎನ್ನುವುದನ್ನು ಒಮ್ಮೆ ಯೋಚಿಸಿ ಬರೆಯುವುದು ಅಗತ್ಯ.

ಇಲ್ಲಿ ಸಂಬಂಧಿತ ವಿಚಾರವೇ ನೆಲೆಗಟ್ಟಿಲ್ಲದ್ದಾಗಿರುತ್ತ ಜೋಶಿಯವರು ಬರೆದ ಮಾತು, ಬಹುಶಃ ಅವರಿಗೆ ದಿವಾಕರ್ ಬಗ್ಗೆ ಇರುವ ಗೌರವ, ಅಭಿಮಾನಗಳಾಚೆ ಯಾವುದೇ ಅರ್ಥ ಹೊರಡಿಸಬಾರದು ಎಂದು ಬಯಸುತ್ತೇನೆ. ‘ಅನುವಾದಿಸಲು ಹೋದ ನನ್ನನ್ನು ಅಧೀರನನ್ನಾಗಿಸಿದ್ದು ಭಯವಲ್ಲ, ಧೈರ್ಯ’ ಎನ್ನುವ ಮಾತು ಆಡಿದ ವ್ಯಕ್ತಿಯ ಬಗ್ಗೆ ಪೂರ್ಣ ವಿಶ್ವಾಸವಿರದಿದ್ದರೆ ಹೊರಡಿಸುವ ಶಬ್ದ ಸ್ವಲ್ಪ ವಿಚಿತ್ರವಾಗಿರುತ್ತದೆ ಎನ್ನುವುದನ್ನು ಒಪ್ಪುತ್ತೇನೆ. ಬಹುಶಃ ಜೋಶಿಯವರು ತಮ್ಮ ವಾಕ್ಯದ ಭಯ ಯಾರದ್ದು, ಧೈರ್ಯ ಯಾರದ್ದು ಎನ್ನುವುದಕ್ಕೆ ಒಂದು ಅಪಾರ್ಥ ಹೊರಡಿಸುವಷ್ಟು ಶಕ್ತಿ ಇದೆ ಎನ್ನುವುದನ್ನು ಕಂಡುಕೊಂಡರೆ ಇದನ್ನು ಒಪ್ಪುತ್ತಾರೆಂದು ಭಾವಿಸುತ್ತೇನೆ.

ನನಗೆ ಜೋಶಿಯವರು ಗೊತ್ತು ಅನಿಸುವುದರಿಂದ ಅವರ ಅಂತಃಕರಣದಲ್ಲಿ ಕಲ್ಮಶವಿಲ್ಲ ಎನ್ನುವ ಕಾರಣಕ್ಕೇ ನಾನು ಅವರ ವಾಕ್ಯವನ್ನು ಒಡೆದು ಓದಲು ಹೋಗುವುದಿಲ್ಲ. ಆದರೆ ಹೀಗೆ ಒಡೆದು ಓದುವ ಕೆಟ್ಟ ಹಠವನ್ನು ಸ್ವತಃ ನಾನು ಬೇರೊಬ್ಬ ವ್ಯಕ್ತಿಯ ವಿಚಾರದಲ್ಲಿ ಮಾಡಿದ್ದಿದೆ. ಆದರೆ ಕೆಲವೊಮ್ಮೆ ನಮ್ಮನ್ನು ಹಾಗೆ ಮಾಡುವಂತೆ ಪ್ರೇರೇಪಿಸುವ ನೋವೂ ನನಗೆ ಅರ್ಥವಾಗುತ್ತದೆ. ಮೇಡಮ್ ಅವರಿಗೆ ನೋವಾಗಿರುವುದು ಸ್ಪಷ್ಟ ಮತ್ತು ಸಹಜ.

ಕೊನೆಗೂ ನಿಲ್ಲುವ ಮಾತು, ಎಸ್ ದಿವಾಕರ್ ಅವರಂಥ ಧೀಮಂತ ವ್ಯಕ್ತಿಯ ಬಗ್ಗೆ ಎಲ್ಲಿಯೂ ಸಣ್ಣಮಾತು, ಕೊಂಕು ಬರಲು ಸಾಧ್ಯವಿಲ್ಲ. ಅವರ ಬಗ್ಗೆ ಪ್ರತಿಯೊಬ್ಬರಿಗೂ, ಅವರ ಸಾಮರ್ಥ್ಯದ ಬಗ್ಗೆ ಅಪಾರ ಹೊಟ್ಟೆಕಿಚ್ಚು ಇರುವವರನ್ನೂ ಸೇರಿಸಿ, ಇರುವುದು ಅಪಾರ ಅಭಿಮಾನ, ಗೌರವ ಮತ್ತು ಪ್ರೀತಿ.

‍ಲೇಖಕರು sakshi

23 July, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading