ಕೊಡೆಯರಳಿ ಹೂವಾಗಿ

ಸುಮಾವೀಣಾ

“ಮಡಿಸಿದರೆ ಮೊಗ್ಗು ಬಿಡಿಸಿದರೆ ಹೂವು ಕೊಡೆ” “ಅರಳುತ್ತದೆ ಹೂವಲ್ಲ ಬಿಸಿಲಲ್ಲಿ ಬಾಡುವುದಿಲ್ಲ” ಎಂಬ ಒಗಟನ್ನು ಯಾರಾದರೂ ಕೇಳಿದರೆ ‘ಕೊಡೆ’ ಎಂಬ ಉತ್ತರವನ್ನು ಯಾರಾದರೂ ಕೊಡುತ್ತಾರೆ. ಸತ್ತಿಗೆ’, ‘ಛತ್ರಿಕಾ’, ‘ಕೊಡೆ’, ‘ಚತ್ರಿಗೆ’, ‘ಚತ್ತರಿಗೆ’, ‘ಸತ್ತುಗೆ’ ಮೊದಲಾದ ಹೆಸರುಗಳಿಂದ ಇದು ಕರೆಸಿಕೊಂಡಿದೆ. ಲ್ಯಾಟಿನ್ ಭಾಷೆಯ ‘ಉಂಬ್ರ’ ಎಂಬ ಪದದಿಂದ ಅಂಬ್ರೆಲ್ಲಾ ಬಂದಿದೆ. ಉಂಬ್ರ ಎಂದರೆ ನೆರಳು ಅಥವಾ ಛಾಯೆ ಎಂದರ್ಥ. ಇದನ್ನೇ ಇಂಗ್ಲಿಷಿನಲ್ಲಿ ಅಂಬ್ರೆಲ್ಲಾ ಎಂದು ಕರೆಯುತ್ತೇವೆ.

‘ಕೊಡೆ’ ನಾಮಪದ. ‘ಕೊಡೆ’ ‘ಕೊಡೆನು’ ‘ಕೊಡುವುದಿಲ್ಲ’ ಇವುಗಳು ‘ಕೊಡುತ್ತೇನೆ’ ಎಂಬ ಪದದ ನಿಷೇಧಾರ್ಥಕ ರೂಪಗಳು. ‘ಕೊಡೆ ಹಿಡಿ’ ಎಂಬ ನುಡಿಗಟ್ಟನ್ನು ತೆಗೆದುಕೊಂಡರೆ ಅದರ ವಿಶೇಷಾರ್ಥ “ಸ್ವಕಾರ್ಯ ಸಾಧಿಸಿಕೊಳ್ಳಲು ಇತರರನ್ನು ಓಲೈಸು” ಎಂಬುದಾಗಿದೆ, ‘ಬಕೆಟ್ ಹಿಡಿ’ ಎಂಬ ಮಾತಿದೆಯಲ್ಲ ಹಾಗೆ. ‘ಛತ್ರಿಕಾ’  ‘ಛತ್ರಿ’ ಎಂದರೆ ಕುತಂತ್ರಿ ಎಂದೇ ಮೋಸ ಮಾಡುವವರಿಗೆ, ಟೋಪಿ ಹಾಕುವವರಿಗೆ ಪರ್ಯಾಯವಾಗಿ ಬಳಸಲಾಗುತ್ತದೆ.

ಛತ್ರಿ-ಚಾಮರ ಎಂಬ ಪೂರಕ ಅರ್ಥ ನೀಡುವ ಜೋಡು ನುಡಿಯೂ ಇದೆ. ‘ಹೊತ್ತು ಬಂದತ್ತ ಕೊಡೆ ಹಿಡಿ’ ಎಂಬ ಗಾದೆ ಅವಕಾಶವನ್ನು ಸದುಪಯೋಗ ಮಾಡಿಕೋ ಎಂಬ ನೀತಿಯನ್ನೂ ಹೇಳುತ್ತದೆ.

ಈ ಕೊಡೆ ಬಹುಪಯೋಗಿ! ಬಿಸಿಲಿಗೆ, ಮಳೆಗೆ, ಫ್ಯಾಷನ್ನಿಗೆ, ಉರುಗೋಲಾಗಿ, ಬೆದರಿಸುವ ಕೋಲಾಗಿ, ದಾರಿ ಬಿಡಿಸುವ ಪೊಲೀಸ್ ಲಾಟಿಯಾಗಿಯೂ, ಬಸ್ಸಿನಲ್ಲಿ ಸೀಟು ಹಿಡಿಯಲೂ ಇದೇ ಕೊಡೆ ಉಪಯೋಗಕ್ಕೆ ಬರುತ್ತದೆ. ಪ್ರಾದೇಶಿಕ ಭಿನ್ನತೆಯನ್ನು ಅನುಸರಿಸಿ ‘ಕೊಡೆ; ‘ಛತ್ರಿ’ ಎಂದೆಲ್ಲಾ ಕರೆಸಿಕೊಳ್ಳುತ್ತದೆ. ಮಲೆನಾಡಿಗರ ಬದುಕಿನ ಅವಿಭಾಜ್ಯ ಅಂಗ ಎಂದರೆ ಕೊಡೆ. ಕೊಡೆ ಬೇಕೇ.. ಬೇಕು! ನಾಯಿಗಳು ಅಡ್ಡ ಸಿಕ್ಕೆರೆ ಬೆದರಿಸಲು. ದನಗಳನ್ನು ಮೇಯಿಸುವಾಗ ಈ ಕೊಡೆ ಹಿಡಿದೇ ಇರುತ್ತಾರೆ.

ಮನೆಯಿಂದ ಹೋಗುವಾಗ ತಿಂಡಿ-ತೀರ್ಥ ತೆಗೆದುಕೊಂಡು ಹೋದರೆ  ಸಂಜೆ ಬರುವಾಗ ಸೊಪ್ಪು, ಹೂಗಳೇನಾದರೂ ಸಿಕ್ಕರೆ ಈ ಕೊಡೆಯೊಳಗೆ ಇಟ್ಟುಕೊಂಡು ಬಂದು ಜಗುಲಿಯ ಮೇಲೆ ಸುರಿಯುವ ಅಜ್ಜಿಯರನ್ನು ನೋಡಿದ ನೆನಪು ಇಂದಿಗೂ ಹಸಿರಾಗಿದೆ. ಅಜ್ಜಂದಿರು “U” ಆಕೃತಿಯ ಬೆತ್ತದ ಹಿಡಿಯ ಕೊಡೆಯನ್ನು ಬೆನ್ನಲ್ಲಿ ಶರ್ಟಿಗೆ, ಪ್ಯಾಂಟ್ ಧರಿಸುವವರಾದರೆ ಪ್ಯಾಂಟ್ ಜೇಬಿಗೆ ಸಿಕ್ಕಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಹಾಗೆ ಸಂಜೆ ತರುತ್ತಿದ್ದ ಕುರುಕಲು ತಿಂಡಿಗಳು ಇದೇ ಕೊಡೆಗಳಲ್ಲಿ ಅವಿತಿರುತಿದ್ದವು.   

ಕೆ ಎಸ್ ನಿಸಾರ್ ಅಹ್ಮದ್  ರವರ ಗಾಂಧೀ ಬಜಾರ್ ಕವಿತೆಯಲ್ಲಿ ಮಾಸ್ತಿಯವರ ಕೊಡೆಯ ಪ್ರಸ್ತಾಪವಿದೆ. ಸದಾ ಇವರು ಹೀಗೆಯೇ.. ಎಂದು ಆರಂಭವಾಗುವ ಪದ್ಯದಲ್ಲಿ 

ಸಾಂತ್ವನ ಮುಡಿದಿರುವ ಹಳೆ ನಮೂನೆಯ ಚಶ್ಮ
ಅದೇ ಕೊಡೆಯ ಗದೆ:
ಬೆದರಿಸಲು ಭಿಕ್ಷುಕರ ಹುಡುಗರನ್ನ,
ಬೀದಿ ಕುನ್ನಿಯ, ಪೋಲಿ ದನಗಳನ್ನ,
ಎದುರಿಸಲು ಮಳೆ ಬಿಸಿಲ ದಾಳಿಯನ್ನ,

ಸಾಲು ವೃಕ್ಷದ ಹಕ್ಕಿ ಹಿಕ್ಕೆಯನ್ನ, ಎಂಬ ಸಾಲುಗಳನ್ನು ನೋಡಬಹುದು. ಕೊಡೆಯನ್ನು ಗದೆಗೆ ಹೋಲಿಸಿರುವುದು ಇಲ್ಲಿ ವಿಶೇಷವೇ. ಕೈಯಲ್ಲಿ ಕೊಡೆಯಿದ್ದರೆ ಇಷ್ಟು ಲಾಭವೇ ಎಂದೂ ಅನ್ನಿಸುತ್ತದೆ.

ಕೊಡೆಗಳ ಈ ಬರೆಹ ಕೊಡೆಗಳ ನೆನಪನ್ನು ಮತ್ತಷ್ಟು ಕೊಡುತ್ತಿವೆ. ಶಾಲಾ ದಿಗಳಲ್ಲಿ ಕೊಡೆಗಳು ಅದಲು ಬದಲಾಗಬಾರದೆಂದು ಇನಿಶಿಯಲ್ಸ್ ಅನ್ನು ಕೊಡೆಗಳ ಹಿಡಿಗಳಲ್ಲಿ ಬರೆದುಕೊಳ್ಳುತ್ತಿದ್ದೆವು. ಕೆಲವೊಮ್ಮೆ ಪೋಷಕರೇ ಸೂಜಿದಾರದಿಂದ ಇನಿಶಿಯಲ್ಸ್  ಹೊಲೆದು ಕೊಡುತ್ತಿದ್ದರು. ಆದರೂ ಕೊಡೆಗಳು ಕಳೆದು ಹೋಗುತ್ತಿದ್ದೆವು. ಒದ್ದೆಯಾದ ಕೊಡೆ ನೀರನ್ನು ಗೆಳತಿಯರ ಮುಖಕ್ಕೆಲ್ಲ ಎರಚುವುದು ಕೀಟಲೆ ಮಾಡಿಕೊಳ್ಳುವುದು ಇದ್ದೇ ಇತ್ತು. ಹಾಗೆ ಮಡಿಕೇರಿಯ ಡೇರಿ ಫಾರ್ಮ್ ನಿಂದ ಫೀಲ್ಡ್ ಮಾರ್ಷಲ್ ಕಾಲೇಜಿನ ಏರು ದಾರಿಯಲ್ಲಿ ಕೊಡೆ ಹಿಡಿದು ಹೋಗುವ ಕಾಲೇಜು ವಿದ್ಯಾರ್ಥಿಗಳನ್ನು ನೋಡಲು ಇವತ್ತಿಗೂ ಚಂದವೇ! 

ಇಪ್ಪತ್ತು ವರ್ಷಗಳ ಹಿಂದೆ ಕಾಲೇಜಿಗೆ ಬಣ್ಣದ ಕೊಡೆ ಒಯ್ಯುತ್ತಿದ್ದ ಬೆರಳೆಣಿಕೆ ಮಂದಿಯಲ್ಲಿ ನಾನೂ ಒಬ್ಬಳಾಗಿದ್ದೆ. ಗೆಳತಿಯರು ಕೊಡೆ ಗುರುತಿಸಿ ನನ್ನ ಹೆಸರು ಹಿಡಿದು ಕರೆಯಲು ಪ್ರಾರಂಭಿಸಿದ ನಂತರ ಇಷ್ಡದ ಬಣ್ಣದ ಕೊಡೆ ಬಿಟ್ಟು ಕಪ್ಪು ಕೊಡೆ ತೆಗೆದುಕೊಂಡು ಹೋಗುವ ಹಾಗಾಗಿತ್ತು. ಈಗ ‘ಕಪ್ಪು ಕೊಡೆ’ ಹಿಡಿಯುವವರೆ ಕಡಿಮೆ. ಅದೇ ಏರು ದಾರಿಯಲ್ಲಿ ಬಣ್ಣದ ಛತ್ರಿಗಳನ್ನು ಅರಳಿಸಿ ನಿಧಾನವಾಗಿ ಹೋಗುವ ವಿದ್ಯಾರ್ಥಿಗಳನ್ನು ಈಗ ನೋಡಿದರೆ ಹೂವಿನಮಾಲೆ ಅಲೆಅಲೆಯಂತೆ ಮುಂದೆ ಸರಿಯುತ್ತಿದೆಯೇನೋ ಅನ್ನಿಸುತ್ತದೆ.

ಕೊಡೆ ಹಿಡಿಯುವುದೂ ಒಂದು ಕೌಶಲ್ಯವೇ ಸರಿ! ಕೊಡೆಯನ್ನು ನೆಟ್ಟಗೆ ಮೇಲ್ಮುಖವಾಗಿ ಹಿಡಿಯುವುದಲ್ಲ. ಗಾಳಿ ಬೀಸುವ  ವಿರುದ್ಧ  ದಿಕ್ಕಿಗೆ ಹಿಡಿಯಬೇಕು. ಒಂದು ವೇಳೆ ಇಬ್ಬರು ಒಂದೇ ಕೊಡೆಯಲ್ಲಿ ಹೋಗುವುದಾದರೆ ಎತ್ತರದವರು ಬಲಗೈಯಲ್ಲಿ ಕೊಡೆ ಹಿಡಿದರೆ ಬಲಗಡೆ ಕೊಡೆ ಹಿಡಿಸಿಕೊಳ್ಳುವವರು ಇರಬೇಕು. ಎದುರು ಮಳೆ ಬರುತ್ತಿದ್ದರೆ ಕೊಡೆ ಹಿಡಿಯುವುದು ಕಷ್ಟ. ಸಂಪೂರ್ಣ ಮುಖ ಮುಚ್ಚಿಕೊಂಡರೆ ಮುಂದೆ ಬರುವ ವಾಹನಗಳು ತಿಳಿಯುವುದಿಲ್ಲ. ಮಳೆಯ ಜೊತೆಗೆ ಗಾಳಿ ಬರುತ್ತಿದ್ದರೆ ಕೊಡೆ ಹಿಡಿಯುವುದು ಕಷ್ಟ. ಮಳೆ ನೀರು ರಭಸವಾಗಿ ಮುಖಕ್ಕೆ ರಾಚುತ್ತದೆ. ಮುಖವೆಲ್ಲಾ ಉರಿಯುತ್ತದೆ. 

ಬಾರೀ ಮಳೆಗೆ ಸ್ವಿಚ್ ಕೊಡೆಗಳು ಅಂದರೆ ಬಟನ್ ಕೊಡೆಗಳು ಅಲ್ಲವೇ ಅಲ್ಲ! ಹುಚ್ಚಾಟ ತೋರಿಸಿಬಿಡುತ್ತವೆ, ಮುಜುಗರ ತರಿಸಿಬಿಡುತ್ತವೆ. ಇಂಗ್ಲಿಷಿನಲ್ಲಿ ಅಂಬ್ರೆಲ್ಲಾ..! ಎನ್ನುವುದಿಲ್ಲವೇ ಹಾಗೆ ಕೊಡೆ ಹಿಡಿಯಲು ಬಾರದೆ ಇದ್ದರೆ ಬಟನ್ ಕೊಡೆಗಳು ಕೈ ಬಿಟ್ಟು ಅಂಬರಕ್ಕೆ ನೆಗೆದು ಇನ್ನೆಲ್ಲೋ ಬೀಳುತ್ತವೆ ಮತ್ತೆ ನೋಡುವುದೇ ಅಂಬರ ಎಲ್ಲವನ್ನೂ. ಒಂದು ವೇಳೆ ಕೊಡೆ ಹಿಡಿಯಲು ಬಾರದವರು ಮಳೆನಾಡಿನ ಹುಚ್ಚು ಮಳೆಗೆ ಕೊಡೆ ತೋರಿಸಿದರೆ ಕೊಡೆಗಳು ಕೆದರಿದ ತಲೆಯ, ಆಕ್ರೋಶಗೊಂಡ ಹಲ್ಲು ಬಿಟ್ಟ ಕರಡಿಗಳಂತಾಗುತ್ತವೆ. ಅದನ್ನೀನ್ನೇನು ಮಾಡಲು ಸಾಧ್ಯವಾಗುವುದಿಲ್ಲ. ಅರಳಿದ ತಾವರೆಗಳಂತೆ ಇದ್ದ ಕೊಡೆಗಳು ಒಂದೇ ಬಿರುಗಾಳಿ, ಮಳೆಗೆ ತರಚಿದ ತಾವರೆಯಂತೆ ಅರ್ಥಾತ್ ಮುರುಕಲು ಕೊಡೆಗಳಾಗಿಬಿಡುತ್ತವೆ.

ಕುಮಾರವ್ಯಾಸ ತನ್ನ ‘ಗದುಗಿನ ಭಾರತ’ದಲ್ಲಿ ಶಾಪಗ್ರಸ್ಥ ಪಾಂಡುವಿನ ಮರಣದ ಸಂದರ್ಭದಲ್ಲಿ “ಸಿಡಿಲು ಹೊಡೆವಡೆ ಹಿಡಿದ ಕೊಡೆ ಕಾವುದೇ?” ಎಂದಿದ್ದಾನೆ. ಈ ಬರಹಕ್ಕೆ ಪೂರಕವಾಗಿ ಬರೆ ಪದಶಃ ಅರ್ಥ ತೆಗೆದುಕೊಂಡರೆ ಸಿಡಿಲು, ಗಾಳಿ ಇದ್ದಾಗ ಕೊಡೆಯಿಂದ ರಕ್ಷಣೆ ಸಿಗಲಾಗದು ಎಂಬ ಅರ್ಥ ಬರುತ್ತದೆ. “ಅಲಾ ಬಲಾ ಪಾಪಿ ತಲೀ ಮ್ಯಾಲೆ ಸಿಡಿಲು ಬಡಿದರೆ ಅಂಗೈಲಿ ಹಿಡಿದ ಕೊಡೆ ಕಾಪಾಡೀತೆ..” ಎಂಬ ಗಾದೆಯೂ ಇದೇ ಅರ್ಥವನ್ನು ಕೊಡುತ್ತದೆ.

ಕೊಡೆಯ ಪರಿಭಾಷೆ ಭಾರತೀಯರಿಗೆ ಪೌರಾಣಿಕ ಹಿನ್ನೆಲೆಯಿಂದಲೂ ಚಿರಪರಿಚಿತವೇ. ಹಾಗಂದ ಕೂಡಲೆ ಎಲ್ಲರಿಗೂ ವಾಮನ ಅವತಾರಿ ವಿಷ್ಣು  ಕೊಡೆ ಹಿಡಿದ ಚಿತ್ರ ಕಣ್ಮುಂದೆ ಬಂದೇ ಬರುತ್ತದೆ. ಈ ರೀತಿಯ ಕೊಡೆಗಳು ದಕ್ಷಿಣ ಕನ್ನಡದಲ್ಲಿ ಈಗಲೂ ಕ್ವಚಿತ್ತಾಗಿ ಇವೆ. ದಕ್ಷಿಣ ಕನ್ನಡದಲ್ಲಿ ಭೂತಾರಾಧನೆಯಲ್ಲಿ ಪಾತ್ರಿಗಳು ಈ ಕೊಡೆ ಹಿಡಿಯುತ್ತಾರೆ. ಪನೆ ಮರದ ಗರಿಗಳು, ಬಿದಿರುಗಳ ಮತ್ತು ಕೈರೋಳಿ ಬಳ್ಳಿ ಮುಂತಾದವುಗಳಿಂದ  ಕೊಡೆ ಮಾಡುತ್ತಾರೆ. ದೀಪಾವಳಿ ಸಮಯದಲ್ಲಿ ಇಂಥ ಕೊಡೆಗಳನ್ನು ತಯಾರಿಸಲಾಗುತ್ತದೆ. ಜಾನಪದ ಆಚರಣೆ “ಆಟಿ ಕಳೆಂಜ”ದಲ್ಲಿಯೂ ಈ ಕೊಡೆಗಳನ್ನು ಬಳಕೆ ಮಾಡಲಾಗುತ್ತದೆ. 

ದೇವಸ್ಥಾನಗಳಲ್ಲಿ, ರಥೋತ್ಸವ, ಉತ್ಸವಾದಿಗಳಲ್ಲಿ ಹಿಡಿಯುವ ಕೊಡೆಗಳು ಆಳೆತ್ತರಕ್ಕೆ ಇರುತ್ತವೆ ಬಿಳಿಯ ಬಣ್ಣದ್ದಾಗಿರುತ್ತವೆ. ಶ್ರೀವೈಷ್ಣವ, ಶೈವ, ಮೊದಲಾದ ಸಂಪ್ರದಾಯಕ್ಕೆ ತಕ್ಕಂತೆ ಛತ್ರಿಗಳಲ್ಲಿ ಚಿತ್ರಗಳನ್ನು ಯಥಾವತ್ ಅಳವಡಿಸಲಾಗಿರುತ್ತದೆ. 

ಷಟ್ಪದಿ ಬ್ರಹ್ಮ ಎಂದು ಕರೆಸಿಕೊಂಡಿರುವ ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ ಸತ್ತಿಗೆಯ ಅಂದರೆ ಬಿಳಿಯ ಕೊಡೆಯ ಉಲ್ಲೇಖವಿದೆ.

 “ನಿನ್ನ ಮುತ್ತಿನ ಸತ್ತಿಗೆರಯನ್ನಿತ್ತು ಸಲಹು” ಎಂದು  ಹರಿಶ್ಚಂದ್ರನನ್ನು ಗಾನರಾಣಿಯರು ಕೇಳುತ್ತಾರೆ

ಕಡಲೊಳಾಳ್ವಂಗೆ ತೆಪ್ಪವನು
ಕಡವರನತಿರೋಗಿಗಮೃತಮಂ ಕೊಟ್ಟಡವ
ರಡಿಗಡಿಗದಾವ ಹರುಷವನೆಯ್ದು ತಿಪ್ಪವರಂ ಪೋಲ್ವರೀ ಪೊತ್ತಿನ
ಸುಡುಸುಡನೆ ಸುಡುವ ಬಿರುಬಿಸಿಲ ಸೆಕೆಯುಸುರ ಬಿಸಿ
ಹೊಡೆದುದುರಿ ಹತ್ತಿ ಬಾಯ್ ಬತ್ತಿ ಡಗೆ ಸುತ್ತಿ ಸಾ
ವಡಸುತಿಹ ನಿನ್ನ ಮುತ್ತಿನ ಸತ್ತಿಗೆಯನ್ನಿತ್ತು ಸಲಹು ಭೂಭುಜಯೆಂದರು
ಎಂದು ಹರಿಶ್ಚಂದ್ರನನ್ನು ಗಾನರಾಣಿಯರು ಕೇಳುತ್ತಾರೆ

(ಈ ಬಿರು ಬೇಸಗೆಯಲ್ಲಿ ಬಾಯಾರಿಕೆ ಹೆಚ್ಚಾಗಿ ನಮ್ಮ ಬಾಯೊ ಬತ್ತಿ ಹೋಗಿವೆ. ಬಿಸಿಲ ಝಳದಿಂದ ನಮಗೆ ಸಾಯುವ ಭಯ ಆವರಿಸಿದೆ ಆದ ಕಾರಣ ನಿನ್ನ ಮುತ್ತಿನ ಸತ್ತಿಗೆಯನ್ನು ಕೊಡು ಎಂದು ಗಾನ ರಾಣಿಯರು ಕೇಳುತ್ತಾರೆ)

ಅದಕ್ಕೆ ಹರಿಶ್ಚಂದ್ರ ಉತ್ತರವಾಗಿ
ರವಿಕುಲದ ಪೀಳಿಗೆಯೊಳೊಗೆದ ರಾಯರ್ಗೆ ಪ
ಟ್ವವ ಕಟ್ಟುವಂದಿದಿಲ್ಲದಡೆರಸುತನ ಸಲ್ಲ
ದವನಿಯೊಳು ಯುದ್ಧರಂಗದೊಲಿದಂ ಕಂಡ ಹಗೆಗಳು ನಿಲ್ಲರಿದರ ಕೆಳಗೆ
ಕವಿವ ನೆಳಲೊಳಗಾವನಿರ್ದತಾಂಗೆ  ತಾಂ
ತವಿಲೆಡರು ಬಡತನಂ ರೋಗವ ಪಕೀರ್ತಿ ಪರಿ
ಭವ ಭಯಂ ಹರತೆವುದಿದನರಿದರಿದು ಸತ್ತಿಗೆಯ ಕೊಡಬಹುದೆ ಹೇಳೆಂದನು

(ಪರಂಪರೆಯಲ್ಲಿ ಹುಟ್ಟಿದ ರಾಜರಿಗೆ ಪಟ್ಟವನ್ನು ಕಟ್ಟುವ ಸಂದರ್ಭದಲ್ಲಿ ರಾಜಲಾಂಛನವಾದ ಈ ಸತ್ತಿಗೆಯಿಲ್ಲದಿದ್ದರೆ ರಾಜತನವು ದೊರೆಯುವುದಿಲ್ಲ. ಈ ಭೂಮಿಯ ಮೇಲೆ ಈ ಸತ್ತಿಗೆಯನ್ನು ಕಂಡ ಶತ್ರುಗಳು ನಿಂತೆಡೆ ನಿಲ್ಲುವುದಿಲ್ಲ. ಈ ಸತ್ತಿಗೆಯ ನೆರಳು ಇರುವವರಿಗೆ ಅಡಚಣೆಗಳು, ರೋಗ ಅಪಕೀರ್ತಿ, ಸೋಲು, ಭಯ ಇರುವುದಿಲ್ಲ. ಹಾಗಾಗಿ ರಾಜ ಲಾಂಛನವಾದ ಸತ್ತಿಗೆಯನ್ನು ಹೇಗೆ ಕೊಡಲಿ ಎಂದು ಕೇಳುತ್ತಾನೆ).

“ಅನುನಯದೊಳೆಲ್ಲವವಂ ಕೊಡಬಹುದು ಬಿಡಬಹುದು, ತಂದೆ ತಾಯಿಗಳನ್ನು ಹೆಂಡರಿಯನ್ನು ದೇವರನ್ನು ಪ್ರಜೆಗಳನ್ನು ಕೊಡುವ ಕಲಿಗಳು ಹುಟ್ಟಲಾರರು.” ಅದನ್ನು ಬಿಟ್ಟು ಬೇರೆ ಕೇಳಿ ಎಂದು ಹರಿಶ್ಚಂದ್ರ ಗಾನರಾಣಿಯರು. “ಅವರ್ಯಾರು ಬೇಡ ನಮಗೆ ಮುತ್ತಿನ ಸತ್ತಿಗೆ ಮಾತ್ರ ಕೊಡು” ಎಂದರೆ ಇದಿಲ್ಲದೆ ಬೇರೆ ತಂದೆ ತಾಯಿಯರು ಇಲ್ಲ ಎನ್ನುತ್ತಾರೆ. ಇದು ಜನಸಾಮಾನ್ಯರಿಗೆ ಕೊಡುವಂಥದ್ದಲ್ಲ. ದೇವರ ಆಶೀರ್ವಾದ, ತಾಯಿಯ ಪೋಷಣೆಯ ಪ್ರೀತಿ, ನೆರಳಿನ ತಂಪು, ಶತ್ರುಗಳ ನಡುಗಿಸುವ ಚತುರಂಗ ಬಲ ಇದರಲ್ಲಿದೆ. ಇದನ್ನು ಕೇಳುವವರು ಲೋಕದ ಅತೀ ಮೂರ್ಖರು ಎಂದು ರಾಜಸತ್ತಿಗೆಯ ಮಹತ್ವವನ್ನು ಹೇಳುತ್ತಾನೆ.

ರನ್ನ ತನ್ನ  ‘ಗದಾಯುದ್ಧ’ ಕೃತಿಯ ‘ದುರ್ಯೋಧನ ವಿಲಾಪ’ದಲ್ಲಿಯೂ 

ನೀನುಳ್ಳೊಡೆಯುಂಟು ರಾಜ್ಯಂ
ನೀಮನುಳ್ಳೊಡೆ ಪಟ್ಟಮುಂಟು
ಬೆಳ್ಗೊಡೆಯುಂಟಯ್ ಎಂದು ಆತ್ಮೀಯ ಸ್ನೇಹಿತ ಕರ್ಣನನ್ನು ಬಿಟ್ಟು ರಾಜ್ಯಾಧಿಕಾರ ಬೇಡ ಎನ್ನುತ್ತಾನೆ. ಅಂದರೆ ರಾಜ್ಯಾಧಿಕಾರದ ಸಂಕೇತ  “ಬೆಳ್ಗೊಡೆ” ಆಗಿತ್ತು ಎಂದಾಯಿತಲ್ಲವೆ.. ಶ್ರೇಷ್ಠತೆಯ, ಅಧಿಕಾರದ ಸಂಕೇತ ಈ “ಸತ್ತಿಗೆ” ಎನ್ನಬಹುದು. ರನ್ನ ಅಜಿತನಾಥ ಪುರಾಣದಲ್ಲಿ “ಬುದ್ಧಿಯೇ ಭಂಡಾರ. ಪದವಿದ್ಯೆಯೇ ಕತ್ತಿನ ಹಾರ ಯಶಸ್ಸು ಬಿಳಿಯ ಛತ್ರಿ ಎಂದು ಛತ್ರಿಯನ್ನು ಯಶಸ್ಸಿಗೆ ಹೋಲಿಸಿದ್ದಾನೆ.

ಇನ್ನು ನಮ್ಮ ಹೊಸಗನ್ನಡ ಕವಿಗಳ ವಿಚಾರಕ್ಕೆ ಬಂದರೆ ಡಿವಿಜಿಯವರನ್ನು ಮೊದಲ್ಗೊಂಡಂತೆ ಸರಿಸುಮಾರು ಎಲ್ಲಾ ಕವಿಗಳ ಚಿತ್ರಗಳು ಉದ್ದನೆಯ ಚೂಪಾದ ತುದಿಯ ಯು ಆಕಾರದ  ಹಡಿಯ ಕೊಡೆಗಳೊಂದಿಗೆ ಕಾಣಸಿಗುತ್ತವೆ. ಡಿವಿಜಿಯವರ ಪ್ರತಿಮೆಯನ್ನೂ ಬೃಹತ್ ಛತ್ರಿಯ ಅಡಿಯೇ ಕುಳಿತಿರುವಂತೆ ಮಾಡಿರುವುದು ವಿಶೇಷವಾಗಿದೆ.

ಇನ್ನು ಬೇಂದ್ರೆಯವರ ಕೈಯಲ್ಲಿ ಯಾವಾಗಲೂ ಕೊಡೆ ಇರುತ್ತಿತ್ತು. “ಬೇಂದ್ರೆ ಕೈಯಾಗ ನೋಡ್ರಿ ಕೊಡೆ ಕಡೆಯ ತನಕ ಅವರ ಜೊತೆಗಿತ್ತು ಅವರ ನಡೆ ಅನ್ನುವಷ್ಟರ ಮಟ್ಟಿಗೆ ಬೇಂದ್ರೆ ತಮ್ಮ ಕೊಡೆಯಿಂದ ಗುರುತಿಸಿಕೊಂಡಿದ್ದರು. ಅವರನ್ನು ಸ್ವಾಗತಿಸಲು ಹೋದಾಗೊಮ್ಮೆ ಆಯೋಜಕರೊಬ್ಬರು ಅವರ ಅನುಮತಿಯ ವಿನಃ ಕೊಡೆ ಹಿಡಿದರು ಅನ್ನುವ ಕಾರಣಕ್ಕೇ ಬೇಂದ್ರೆ ಸಿಟ್ಟಾಗಿದ್ದರಂತೆ. ಅವರ ಕೈಯಲ್ಲಿನ ಕೊಡೆ ಕಂಡು “ಕೊಡಿ ಕೊಡಿ ಅಂತದ ಅವರು ಯಾರಿಗೂ ಕೊಡೆ ಕೊಡೆ ಅಂತಾರ” ನೋಡ್ರಿ ಎಂದು ಚೇಷ್ಟೆ ಮಾಡಿದ್ದು ಇದೆ.

ಬೇಂದ್ರೆಯವರ ಕೈಯಕೊಡೆ ವಿಶೇಷವೇ “ಮಳೆ ಇರಲಿ ಬಿಸಿಲು ಇರಲಿ ಅದರ ಉಪಯೋಗವಿದೆ “ ಎನ್ನುತ್ತಿದ್ದರು ಬೇಂದ್ರೆ. ಬಿಸಿಲೂ ಮಳೆ ಎರಡೂ ಇರದಿದ್ದಾಗ ಯಾರೋ ಒಬ್ಬರು ಬೇಂದ್ರೆಯವರನ್ನು ಕೊಡೆ ವಿಷಯ ತೆಗೆದು ಛೇಡಿಸುತ್ತಿದ್ದರಂತೆ ಆಗ ಬೇಂದ್ರೆ “ಬೊಗಳುವ ನಾಯಿಗೆ ಧಾರವಾಡದಲ್ಲಿ ಕೊರತೆಯಿಲ್ಲ ನನ್ ಕೊಡೆ ನೋಡಿದರೆ ಅವು ದಾರಿ ಬಿಡುತ್ತವೆ” ಎಂದರೆ ಆ ಮಾತುಗಳಿಗೆ ನಕ್ಕ ಬೇಂದ್ರೆ ಅಭಿಮಾನಿಗಳು “ಛತ್ರಪತಿ, ಛತ್ರೀಪತಿಯಲ್ಲಿ ಬಹಳ ವ್ಯತ್ಯಾಸವಿಲ್ಲ, ಇಬ್ಬರೂ ತಮ್ಮ ತಲೆ  ಕಾಯ್ದುಕೊಳ್ಳುತ್ತಾರೆ”  ಎಂದು ನಗುತ್ತಾರೆ.

ಇನ್ನು ಕುವೆಂಪುರವರು ಬಳಸುತ್ತಿದ್ದ ಮಧ್ಯಮ, ಸಣ್ಣ ಹಾಗು ದೊಡ್ಡ ಗಾತ್ರದ ಕೊಡೆಗಳನ್ನು ಊರುಗೋಲಾಗಿಯೂ ಬಳಸುತ್ತಿದ್ದ ಕೊಡೆಗಳನ್ನು ವಸ್ತು ಸಂಗ್ರಹಾಲಯದಲ್ಲಿ ಇರಿಸಿದ್ದಾರೆ. ಹೆಚ್ ಕೆ ರಂಗನಾಥ್ ರವರು ನ್ಯೂಯಾರ್ಕ್ ನ ವಿಮಾನ ನಿಲ್ದಾಣದಿಂದ ವೈಎಂಸಿಎ ಗೆ ಹೋಗಬೇಕಾಗಿ ಸರದಿಯಲ್ಲಿ ಟ್ಯಾಕ್ಸಿಗಾಗಿ ಕಾಯುತ್ತಾ ಇರುವಾಗ ನೆಲವನ್ನು ಹರಿವಂತೆ ಕೀಚಲು ಸದ್ದು ಮಾಡಿಕೊಂಡು ಬಂದ ಟ್ಯಾಕ್ಸಿಯನ್ನು ನೋಡಿ, ದಢೂತಿ ಆಕಾರದ ಚಾಲಕನನ್ನು ಕಂಡು ದಂಗಾಗಿ, ಜಡರಾಗಿ ನಿಂತಿರಬೇಕಾದರೆ ಹಿಂದಿದ್ದ ವ್ಯಕ್ತಿಯೊಬ್ಬರು “ಹೊರಡು” ಎಂಬಂತೆ ಚೂಪಾದ ಕೊಡೆಯ ತುದಿಯಿಂದ ಚುಚ್ಚಿದರು ಎಂದು “ಒಂದು ಅನುಭವದ ಎರಡು ಮುಖ” ಎಂಬ ತಮ್ಮ ಪ್ರವಾಸ ಕಥನದಲ್ಲಿ ಬರೆಯುತ್ತಾರೆ. “ಸರದಿ” ಬಂದಿದೆ ಎನ್ನುವುದನ್ನು ಸೂಚಿಸಲು, ತುಸು ದೂರದಲ್ಲಿರುವವರನ್ನು ಕರೆಯಲು ಈ ಛತ್ರಿ ಸಹಾಯ ಎಂದಾಯಿತಲ್ಲ!

ಇಂಗ್ಲಿಷ್  ಸಾಹಿತ್ಯದಲ್ಲೂ ಕೊಡೆಗಳ ಬಗ್ಗೆ ಅಪೂರ್ವ ಕೃತಿಗಳು ಬಂದಿವೆ. ‘The Umbrella’ ಕೃತಿಯನ್ನು ಜಾನ್ ಬ್ರೆಟ್ ಬರೆದಿರುವುದು ಇದರಲ್ಲಿ  ಕಥಾನಾಯಕ ಕಾರ್ಲೋಸ್ ಕೋಸ್ಟಾ ರಿಕನ್ ಕಾಡುಗಳಲ್ಲಿ ವಾಸಿಸುವ ಪ್ರಾಣಿಗಳನ್ನು ನೋಡಲೆಂದು ಕಾಡಿಗೆ ಹೋಗಿ ಮರವೊಂದರ ಕಲೆಳಗೆ ತನ್ನ ಛತ್ರಿಯನ್ನು ಮರೆಯುತ್ತಾನೆ. ಎಲ್ಲಾ ಪ್ರಾಣಿಗಳು ಒಂದಿಷ್ಟೂ ಜಾಗವಿಲ್ಲದಂತೆ ಆ ಛತ್ರಿಯ ಕೆಳಗೆ ಸೇರಿಕೊಳ್ಳುತ್ತವೆ. ನಾಯಕ ಪ್ರಾಣಿಗಳನ್ನು ಕಾಣದ ನಿರಾಸೆಯಿಂದ ಕೆಳಗಿಳಿದರೆ ಎಲ್ಲಾ ಪ್ರಾಣಿಗಳು ಛತ್ರಿಯ ಸೂರಿನ ಕೆಳಗೇ ಇರುತ್ತವೆ. ಹಾಗೆ ಇನ್ನೊಂದು ಕೃತಿ ‘Umbrella’ ಕೃತಿ ವಿಲ್ ಸೆಲ್ಫ್ 2012 ರ ಬೂಕರ್ ಪ್ರಶಸ್ತಿಯ ನಾಮನಿರ್ದೇಶನ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿತ್ತು

ಕೈಯಲ್ಲಿ ಹಿಡಿಯಲು ಮಾತ್ರವಲ್ಲ ಬೀಚ್ ಗಳಲ್ಲಿ. ಡಾಬಾಗಳಲ್ಲಿ, ಟೆಲಿಫೋನ್ ಕಂಪೆನಿ ಮತ್ತು ಮೋಟಾರ್ ವಾಹನ ಕಂಪೆನಿಗಳು, ಮೊಬೈಲ್ ಕಂಪೆನಿಗಳವರು ಸದಸ್ಯತ್ವ, ಸೇಲ್ಸ್ ಇತ್ಯಾದಿಗಳಲ್ಲಿ ಭಾಗವಹಿಸುವಾಗ ಜಾಹೀರಾತಿಗೆ, ನೆರಳಿಗೆ ಬೃಹತ್ ಕೊಡೆಗಳನ್ನು ಬಳಕೆ ಮಾಡುವುದಿದೆ. ಫೋಟೊ ಸ್ಟುಡಿಯೋಗಳಲ್ಲಿ ಬೆಳಕಿನ ಹೊಂದಾಣಿಕೆ ಗೋಸ್ಕರ ಬಿಳಿ ಬಣ್ಣದ ಚಿಕ್ಕ ಚಿಕ್ಕ ಛತ್ರಿಗಳನ್ನು ಅನುಕೂಲಕ್ಕೆ ತಕ್ಕಂತೆ ಇರಿಸಿರುತ್ತಾರೆ. ಶೂಟಿಂಗ್ ಸ್ಪಾಟ್ ಗಳಲ್ಲಿಯೂ ಕ್ಯಾಮೆರಾಕ್ಕೆ ಸಹಾಯವಾಗುವಂತೆ ಇರುವ ಚಿಕ್ಕ ಕೊಡೆಗಳಿಂದ ಮೊದಲುಗೊಂಡು ನಾಯಕ ನಾಯಕರಿಗೆ ಹಿಡಿಯುವ ಬೃಹತ್ ಅಳತೆಯ ಕೊಡೆಗಳೂ ಇರುತ್ತವೆ.

“ಗಾಲ್ಫ್ ಅಂಬ್ರೆಲ್ಲ” ಎಂದು ಗಾಲ್ಫ್ ಆಟದ ಮೈದಾನದಲ್ಲಿಯೂ ಕೊಡೆಗಳ ಬಳಕೆಯಿದೆ. “ಗಾರ್ಡನ್ ಅಂಬ್ರೆಲ್ಲಾ” ಎಂದು ಕರೆಸಿಕೊಳ್ಳುವ ವೃತ್ತಾಕಾರದ ಕೊಡೆಗಳನ್ನು ಉದ್ಯಾನವನಗಳಲ್ಲಿ, ಹೋಟೇಲುಗಳ ಲೌಂಜ್ ಗಳಲ್ಲಿಯೂ ಅಳವಡಿಸಿರುತ್ತಾರೆ. ಸೈಡ್ ಅಲ್ಯೂಮಿನಿಯಮ್ ಪೋಲ್ ಸಹಾಯದಿಂದ ನಿಲ್ಲಬಲ್ಲ ಚೌಕಾಕಾರದ ಕೊಡೆಗಳು ಇರುತ್ತವೆ. ಇವನ್ನು ರೆಸಾರ್ಟ್ ಗಳಲ್ಲಿ, ಕಡಲ ಕಿನಾರೆಗಳ ಬಳಿ ಅಳವಡಿಸಬಹುದು.

ಸರ್ಕಸ್ ಟೆಂಟಿನ ವಿನ್ಯಾಸವೂ ಕೊಡೆಯಾಕಾರದಲ್ಲಿಯೇ ಇರುತ್ತದೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಪ್ರಪಂಚದ ಅತೀ ದೊಡ್ಡ ಮಡಿಸಿ ಇಡಬಹುದಾದ ಕೊಡೆ ಮೆಕ್ಕಾದಲ್ಲಿ 2017ರಲ್ಲಿ ಸ್ಥಾಪಿಸಲಾಗಿದೆ. 53*53 ಮೀಟರ್ ವಿಸ್ತಾರದ ಬೃಹತ್ ಕೊಡೆ ಇದು. ಹವಾಮಾನ ಮುನ್ಸೂಚನೆ, ಯಾತ್ರಾರ್ಥಿಗಳಿಗೆ ಮಾರ್ಗದರ್ಶನ, ಬೃಹತ್ ಎಲ್ ಇಡಿ ಪರದೆಗಳನ್ನು, ಸಿಸಿ ಕ್ಯಾಮೆರಾಗಳನ್ನು ಇಲ್ಲಿ ಅಳವಡಿಸಲಾಗಿದೆ. ಅಂದಹಾಗೆ ಫೆಬ್ರವರಿ 10ನ್ನು ವಿಶ್ವ ಕೊಡೆಗಳ ದಿನವನ್ನಾಗಿ ಆಚರಿಸುತ್ತಾರೆ.

ಕಪ್ಪು ಬಣ್ಣದ ಉದ್ದನೆಯ ಕೊಡೆಯನ್ನು ತಾತನ ಕೊಡೆ, ಅಜ್ಜನ ಕೊಡೆ ಎನ್ನುವುದು, ಬಣ್ಣದ ಕೊಡೆ ಎಂದರೆ ಕಾಲೇಜು ಕನ್ಯೆಯರು, ಶ್ರೀಮಂತರು ಮಾತ್ರ ಬಳಸುವುದು ಎಂಬುದೆಲ್ಲಾ ಈಗ ತಪ್ಪಿಹೋಗಿದೆ.  ‘ಚಿನ್ನಾರಿ ಮುತ್ತ’ ಚಲನಚಿತ್ರದಲ್ಲಿ “ಬಣ್ಣದ ಕೊಡೆಯೋರು” ಎಂಬ ಮಾತು ಶ್ರೀಮಂತ ವರ್ಗದ ಸಂಕೇತವಾಗಿ ಬಂದದ್ದನ್ನು ಇಲ್ಲಿ ಗಮನಿಸಬಹುದು. “ಕಪ್ಪು ಕೊಡೆ” ಹೋಗಿ “ಕಲರ್ ಕೊಡೆ”ಗಳ ಹವಾ ಈಗ! ಕಪ್ಪು ಬಣ್ಣದ ಮೊದಲ ಕೊಡೆಗಳ ಮೇಲಾವರಣ ಕಾಟನ್ ಬಟ್ಟೆಯಿಂದ ಇರುತ್ತಿತ್ತು ಈಗ ನೈಲಾನ್, ಟ್ರಾನ್ಸಪರೆಂಟ್ ಕೊಡೆಗಳು ಬಂದಿವೆ. ನೆರವಾಗಿ ನಿಲ್ಲಿಸಿದರೆ ಎದೆ ಮಟ್ಟಕ್ಕೆ ಬರುತ್ತಿದ್ದ ಕೊಡೆಗಳು ಈಗ ಪೌಚ್ ಗಳ ಒಳಗೆ ಹಿಡಿಸಬಲ್ಲವು.

ಕೊಡೆಗಳು ಈಗ ಕಾಂಪ್ಯಾಕ್ಟ್ ಕೂಡ, ಡಬ್ಬಲ್, ತ್ರಿಬ್ಬಲ್ ಫೋಲ್ಡ್, ಐದು ಫೋಲ್ಡ್ ಗಳಾಗಿ ಮುದುರಿ ಪೌಚ್ಗಳ ಒಳಗೆ ಕೂರಬಲ್ಲವು. ಅಲ್ಲದೆ ಹಿಡಿಯುವವರ ಅನುಕೂಲಕ್ಕೆ ತಕ್ಕಂತೆ ಹಿಡಿಕೆಗಳಲ್ಲೂ ಅನೇಕ ವಿನ್ಯಾಸಗಳು ಬಂದಿವೆ. ಅಲ್ಲದೆ ಹಿಡಿಗಳು ಫೈಬರ್ ನಿಂದ ತಯಾರಿಸಲ್ಪಟ್ಟು ಕೈಯಿಂದ ಸುಲಭವಾಗಿ ಜಾರದಂತೆ ತಯಾರಿಸಲ್ಪಟ್ಟಿರುತ್ತವೆ. ಕೊಡೆಗಳನ್ನು ಮಡಿಸಿ ಇಟ್ಟರೆ ಬಾಟಲಿನಾಕೃತಿಗೆ ಬರುವ ಕೊಡೆಗಳನ್ನೂ ಕಾಣಬಹುದು. ಕಲರ್ ಕೊಡೆಗಳ ಜೊತೆಗೆ ಅವುಗಳ ಮೇಲೆ ಅಚ್ಚಾದ ಪ್ರಿಂಟ್ಗಳು ವಿಶಿಷ್ಟವಾಗಿರುತ್ತವೆ. ಯಾವುದೋ ನ್ಯೂಸ್ ಪೇಪರಿನ  ಸುದ್ದಿಯನ್ನು ಅಚ್ಚು ಹಾಕಿದಂತೆ, ಹೂ ಬಳ್ಳಿಗಳ ಸಾಲನ್ನು ಬಿಡಿಸಿದಂತೆ, ಚಿಕ್ಕ ಹೂಗಳು ದೊಡ್ಡ ಹೂಗಳು, ಆ್ಯನಿಮಲ್ ಪ್ರಿಂಟ್ ಗಳು, ಡಾಟೆಡ್, ಚೆಕ್ಸ್ ಆಥವಾ ಇನ್ಯಾವುದೋ ಚಿತ್ರವನ್ನು ಅಚ್ಚು ಹಾಕಿದಂತೆ ಇರುತ್ತವೆ. ಇಂಥ ಪ್ರಿಂಟ್ ಹಾಕಿದ ಕೊಡೆಗಳು ಉದ್ದವಾಗಿಯೇ ಇರುತ್ತವೆ. 

ಒಂದೇ ಪದರುಗಳಿರುವ ಕೊಡೆಗಳು ಅಲ್ಲದೆ ಎರಡು ಮೂರು ಪದರುಗಳಿರುವುದನ್ನೂ ಕಾಣಬಹುದು. ಮತ್ತು ಕೊಡೆಯ ಸುತ್ತಲೂ ಅತೀ ಚಿಕ್ಕ ನೆರಿಗೆ ಇರುವ ಬಣ್ಣದ ಕೊಡೆಗಳನ್ನು ಕಾಣಬಹುದು. “ಮಳೆ ಬಿಲ್ಲೆ ಮಳೆ ಬಿಲ್ಲೆ ಕೊಡೆ ಹಿಡಿಯೇ ಮಳೆ  ಬಿಲ್ಲೆ” ಎಂಬಂತೆ ಪ್ರೀ ವೆಡ್ಡಿಂಗ್ ಶೂಟ್ ಗಳಲ್ಲಿಯೂ ಕಾಮನ ಬಿಲ್ಲಿನ ಬಣ್ಣಗಳ ಉದ್ದ ಕೊಡೆಗಳ ಉಪಯೋಗ ಹೆಚ್ಚಾಗಿ ಆಗುತ್ತಿರುವುದನ್ನು ಗಮನಿಸಬಹುದು. ಹಿಂದಿ ಚಲನಚಿತ್ರದ ‘ಪ್ಯಾರ್ ಹುವಾ ಇಕರಾರ್ ಹುವಾ’ ಹಾಡಿನಲ್ಲಿ ನರ್ಗಿಸ್ ದತ್ ಹಾಗು ರಾಜ್ ಕಪೂರ್ ಅವರು ಒಂದೇ ಕೊಡೆಯಲ್ಲಿರುವ ಮಳೆ ಸುರಿಯುತ್ತಿರುವ ಚಿತ್ರ ಸಿನಿಮಾಪ್ರಿಯರಲ್ಲಿ ಅಚ್ಚಳಿಯದೆ ಉಳಿದಿದೆ.

ಇಷ್ಟೆಲ್ಲಾ ಹೇಳಿದ ಮೇಲೆ ಮಕ್ಕಳ ಕೊಡೆಗಳ ಕುರಿತು ಹೇಳಲೇ ಬೇಕು! ಮಳೆ ಬಂತೋ ಮಳೆ ರಾಯ… ಕೊಡೆ ಹಿಡಿಯೋ ಸುಬ್ರಾಯ.. ಎಂಬ ಶಿಸು ಗೀತೆಯನ್ನು ನೆನಪಿಸಿಕೊಳ್ಳುತ್ತಾ…. ಚಿತ್ರದಿಂದ ಚಿತ್ತಾರದವರೆಗೆ ಎಂಬಂತೆ ಬಣ್ಣದ ಕೊಡೆಗಳು ಮಕ್ಕಳಿಗೆ ಖುಷಿ ನೀಡುತ್ತವೆ. ನರ್ಸರಿ ಮಕ್ಕಳ ಮೊದಲ ಚಿತ್ರಗಳಲ್ಲಿ ಕೊಡೆಯ ಚಿತ್ರವೂ ಇರುತ್ತದೆ, ಅದರಲ್ಲೂ ಕಾಮನ ಬಿಲ್ಲಿನ ಬಣ್ಣದ ಕೊಡೆಯ ಚಿತ್ರ. ಮಕ್ಕಳ ಕೊಡೆಗಳು ಮೊದಲ ನೋಟದಲ್ಲಿಯೇ ಮಕ್ಕಳನ್ನು ಆಕರ್ಷಿಸಿ ಬಿಡುತ್ತವೆ. ಇವು ಕಿವಿ ನಿಮಿರಿಸಿರುವ ಮೊಲದ ಹಾಗೆಯೋ, ಬೆಕ್ಕಿನ ಹಾಗೆಯೋ ಇಲ್ಲವೇ ಇಷ್ಟ ಪಡುವ ಕಾರ್ಟೂನ್ ಚಿತ್ರ ಇರುವ ಕೊಡೆಗಳು ಇವೆ.

ಹೆಣ್ಣು ಮಕ್ಕಳಿಗೆ ಬಾರ್ಬಿ ಅಥವಾ ಇತರ ಗೊಂಬೆಗಳ ಇಲ್ಲವೇ  ಹೂವಿನ ಚಿತ್ರಗಳ ಪ್ರಿಂಟ್ ಇರುವ ಕೊಡೆಗಳನ್ನು ಕಾಣಬಹುದು. ಮಕ್ಕಳಿಗೆ ಚಾಕೊಲೇಟ್ ಇತ್ಯಾದಿಗಳ ಪ್ಯಾಕ್ ಕೂಡ ಕೆಲವು ಕಾಲ ಇರಿಸಿಕೊಳ್ಬಹುದಾದ ಆಟಿಕೆಯ ಛತ್ರಿಗಳಲ್ಲಿ ಇರುತ್ತದೆ. ಇನ್ನು ಐಸ್ಕ್ರೀಂ ಪಾರ್ಲರ್ಗಳಲ್ಲಿ, ರೆಸ್ಟೋರಂಟ್ ಗಳಲ್ಲಿ ತಂಪು ಪಾನೀಯ ತುಂಬಿದ ಗ್ಲಾಸಿನ್ನು ಅಲಂಕರಿಸಲು ಪೇಪರ್ ಛತ್ರಿಗಳನ್ನು ಬಳಸುವುದು ಗೊತ್ತೇ ಇದೆ ಅಲ್ವ!

ಬಿಸಿಲಿಗೆ ಕಪ್ಪು ಕೊಡೆ ಹಿಡಿದರೆ ಶೆಖೆ ಹೆಚ್ಚು, ಸನ್ ಬರ್ನ್ ಆಗದಂತೆ ತಡೆಯಲು ಬಣ್ಣದ ಕೊಡೆಗಳಿಗೆ ಕೊಡುತ್ತಿದ್ದ ಆದ್ಯತೆ ವರ್ಷಗಳ ಹಿಂದೆ ಇತ್ತು. (ಕಾರಣ ಕಪ್ಪು ಬಣ್ಣದ ಬಟ್ಟೆಗಳು ಬೇಗನೆ ಒಣಗುತ್ತವೆ. ಗಾಢ ವರ್ಣದ ಯಾವುದೇ ಬಟ್ಟೆಗಳು ಸೂರ್ಯನ ಶಾಖವನ್ನು ಬೇಗ ಹೀರಿಕೊಳ್ಳುತ್ತವೆ. ಆದ್ದರಿಂದ ಭಾಷ್ಪೀಕರಣ (evaporation) ಪ್ರಕ್ರಿಯೆ ಬೇಗ ಆಗುತ್ತದೆ). ಮೊದಲೆಲ್ಲಾ ಕೊಡೆ ಹಳೆಯದಾದಂತೆ ಕೊಡೆಯ ಒಳಗೆ ನೀರು ಬರುತ್ತಿತ್ತು ಆದರೆ ಈಗ ಈ ಸಮಸ್ಯೆಯಿಲ್ಲ. ಆಧುನಿಕ ಕೊಡೆಗೆ ಹೊದಿಸುವ ಬಟ್ಟೆ ನ್ಯಾನೋ ತಂತ್ರಜ್ಞಾನದಿಂದ ಮಾಡಲಾಗಿದ್ದು ಜೊತೆಗೆ ಯು ವಿ ತಂತ್ರಜ್ಞಾನವನ್ನೂ ಅಳವಡಿಸಲಾಗಿರುತ್ತದೆ. ಇಲ್ಲಿ ಶಾಖವೂ ಇರುವುದಿಲ್ಲ. ಮಳೆ ನೀರು ಒಳಗೆ ಬರುವುದನ್ನೂ ತಡೆಯುತ್ತದೆ. ಅಂದ ಹಾಗೆ ಪೇಪರ್ ಛತ್ರಿಗಳಿಗೆ ವ್ಯಾಕ್ಸ್ ಹಾಕಿ ಮೊದಲು ವಾಟರ್ ಪ್ರೂಫ್ ಕೊಡೆಗಳನ್ನು ಬಳಸಲು ಪ್ರಾರಂಭ ಮಾಡಿದವರು ಚೀನಾದವರು.1830ರಲ್ಲಿ ವಿಶ್ವದ ಮೊಟ್ಟ ಮೊದಲ ಅಂಬ್ರೆಲ್ಲಾ ಶಾಪ್ ಪ್ರಾರಂಭವಾಯಿತು

ಕೊಡೆಗಳಲ್ಲಿ ಮೊದಲಿಗೆ ಆರು ಕಡ್ಡಿಗಳು ಮಾತ್ರ ಇದ್ದವು, ನಂತರ ಎಂಟಕ್ಕೆ ಏರಿದ್ದು ಈಗ ಇಪ್ಪತ್ತನಾಲ್ಕು ಕಡ್ಡಿಗಳಿಗೆ ಬಂದಿವೆ. ಇವು ಮಳೆ ಗಾಳಿಗೆ ಅಷ್ಟು ಸುಲಭವಾಗಿ ಮಡಿಸಿಕೊಳ್ಳುವುದಿಲ್ಲ. ಈ ರೀತಿ ಕೊಡೆಗಳು ಗಾಳಿಯನ್ನು ವ್ಯಕ್ತಿಯ ಮಟ್ಟಿಗೆ ತಡೆಯಬಲ್ಲ ವ್ಯವಸ್ಥೆಯನ್ನು ಹೊಂದಿರುತ್ತವೆ. ಇವುಗಳಲ್ಲಿ ಅಳವಡಿಸುವ ತಂತಿಗಳು, ಹಿಡಿಕೆಗಳು ನಿಕಲ್ ಕೋಟಿಂಗ್ ಮಾಡಲ್ಪಟ್ಟಿರುತ್ತವೆ. ಹಾಗಾಗಿ ಅಷ್ಟು ಸುಲಭವಾಗಿ ಇವು ತುಕ್ಕು ಹಿಡಿಯುವುದಿಲ್ಲ. ಇವುಗಳನ್ನು ಅಟೋಮ್ಯಾಟಿಕ್ ತೆರೆಯಬಹುದು ಬೇಡವಾದಾಗ ಕೈಯಿಂದ ಮಡಿಸಬೇಕಾಗುತ್ತದೆ. ಫ್ಯಾಷನ್, ಸೌಂದರ್ಯ, ಅನುಕೂಲ ಎಲ್ಲವೂ ಒಂದೇ ಸೂರು ಅರ್ಥಾತ್ ಆಧುನಿಕ ಛತ್ರಿಗಳಲ್ಲಿ ಇರುತ್ತದೆ.

ಮೊಬೈಲ್ ನಲ್ಲಿ ಇರಬಹುದಾದ ಎಲ್ಲಾ ಆಯ್ಕೆಗಳು ಆಧುನಿಕ ಕೊಡೆಗಳಲ್ಲಿ ಸಿಗುತ್ತವೆ. (ಭಾರತದಲ್ಲಿ ಈ ಕೊಡೆಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿಲ್ಲ) ಜಿಪಿಎಸ್ ಅಳವಡಿಕೆಯಾಗಿ, ಸೆಲ್ಫಿ ಸ್ಟಿಕ್ ನಂತೆಯೂ, ಮರೆವಿಂದ ಮಳೆ ಬರುತ್ತಿಲ್ಲೆಂದೂ ಮೈಮರೆತರೆ ನೆನಪಿಸುವ ರಿಮೈಂಡರ್ನಂತೆ, ಕಳೆದರೆ ಟ್ರ್ಯಾಕ್ ಮಾಡುವ ವ್ಯವಸ್ಥೆ, ಟಾರ್ಚ್,  ಥರ್ಮಾಮೀಟರ್, ಬ್ಲೂಟೂತ್ ಸ್ಪೀಕರ್ ಇತ್ಯಾದಿಗಳನ್ನೂ ಅಳವಡಿಸಲಾಗಿರುತ್ತದೆ. ರಾತ್ರಿಯಲ್ಲಿ ಬೆಳಕನ್ನು ತೋರಿಸಲು ಎಲ್ ಈ ಡಿ ಲೈಟಿನ ವ್ಯವಸ್ಥೆ ಕೂಡ ಇದರಲ್ಲಿ ಇರುತ್ತದೆ. ಇನ್ನೂ ವಿಶೇಷವೆಂದರೆ ಆಧುನಿಕ ತಂತ್ರಜ್ಞಾನದ ಕೊಡೆಗಳನ್ನು ಕೈಯಲ್ಲಿ ಹಿಡಿಯಬೇಕಿಲ್ಲ ತಲೆಗೆ ಹಾಕಿಕೊಳ್ಳಬಹುದು, ಇದನ್ನು ಹ್ಯಾಟ್ ಕೊಡೆಗಳು ಎನ್ನುತ್ತಾರೆ. ಸಾಧಾರಣವಾಗಿ ಕ್ರಿಕೆಟ್ ಮ್ಯಾಚ್ ವೀಕ್ಷಿಸುವವರು ಇದನ್ನು ಧರಿಸಿರುತ್ತಾರೆ. 

ಇನ್ನು ಕೆಲವನ್ನು ಬ್ಯಾಕ್ ಬ್ಯಾಗ್ ನ ಹಾಗೆ ಹೆಗಲಿಗೆ, ಮುಂಗೈಗೂ ಅಳವಡಿಸಿಕೊಳ್ಳಬಹುದು. ಈ ರೀತಿಯ ಕೊಡೆಗಳು ವಾಕಿಂಗ್ ಮಾಡುವಾಗ, ಟ್ರೆಕಿಂಗ್ ಮಾಡುವಾಗ‌ ಉಪಯೋಗವಾಗುತ್ತದೆ. ಪ್ರವಾಹ, ಅತೀವೃಷ್ಟಿ ಮೊದಲಾದ ಪ್ರಕೃತಿ ವಿಕೋಪಗಳುಂಟಾದಾಗ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗುವವರಿಗೆ ಈ ಕೊಡೆಗಳು ಬಹು ಉಪಯೋಗಿ. ಇನ್ನೂ ಪ್ರಯೋಗದ ಹಂತದಲ್ಲಿರುವ ಢ್ರೋನ್ ಗಳಿಂದ ನಿಯಂತ್ರಿಸಲ್ಪಡುವ ಕೊಡೆಗಳು ಇವೆ. “ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರಿಯಲ್ಲಿ ಕೊಡೆ ಹಿಡಿದ  ಹಾಗೆ” ಎಂಬ ಗಾದೆ ಪ್ರತಿಷ್ಠೆ ತೋರಿಸುವವರನ್ನು ಕುರಿತಾಗಿತ್ತು. ಆದರೆ ಈಗ ಹಣವಿದ್ದವರು ದುಬಾರಿ ಬೆಲೆ ತೆತ್ತು ಎಲ್ಲಾ ರಕ್ಷಣಾ ತಂತ್ರಜ್ಞಾನ ಹೊಂದಿರುವ ಕೊಡೆಗಳನ್ನು  ರಾತ್ರಿಯಲ್ಲಿಯೂ ಹಿಡಿದು ನಿರ್ಭಿಡೆಯಿಂದ ಓಡಾಡಬಹುದು.

ಮನುಷ್ಯ ನಾಗರಿಕತೆಗೆ ಹೊಂದಿಕೊಂಡಂತೆ ತಾನು ಬಳಸುವ ವಸ್ತುಗಳನ್ನು ತನ್ನ ವೇಗಕ್ಕೆ ಹೊಂದಿಸಿಕೊಳ್ಳುವ ಮನುಷ್ಯನ ಬುದ್ದಿಗೆ ಇಲ್ಲಿ ಮೆಚ್ಚುಗೆ ಇರಲೇಬೇಕು. ಹೊಸ ಕೊಡೆಗಳಲ್ಲಿ ಬಿದ್ದ ಮಳೆ ಹನಿಗಳು ತಾವರೆ ಎಲೆಯ ಮೇಲೆ ಬಿದ್ದು ಜಾರುವಂತೆ ನೆನಪುಗಳು ಜಾರುತ್ತಿವೆ. ಮಡಿಸಿದರೆ ಮೊಗ್ಗಾಗಿ ಬಿಡಿಸಿದರೆ ಹೂವಾಗಿ ಅರಳುವ ಕೊಡೆಗಳ ಮಡಿಕೆಗಳ ಒಳಗೆ ಕೊಡೆ ಹಿಡಿದ ನೆನಪಿನ ಮಡಿಕೆಗಳು ಇದ್ದೇ ಇರುತ್ತವೆ.  ತಿಂಗಳುಗಳ ಕಾಲ ಮಡಿಸಿಟ್ಟಕೊಡೆಯನ್ನು ಬಿಡಿಸಿ ಧೂಳು ಕೊಡಹಿ ಮತ್ತೆ ಜೋಪಾನ ಮಾಡುವಂತೆ ನೀವೂ ಅಂಥ ನೆನಪಿನ ಕೊಡೆ ಬಿಡಿಸಿ ಅನುಭವದ ಮೇಲಾವರಿಸಿರುವ ಧೂಳು ತೆಗೆದು, ಸಹೃದಯರಲ್ಲಿ ಹಂಚಿಕೊಳ್ಳಿ. ಕೊಡೆಗಳ ಕುರಿತ ಮಧುರ ಅನುಭವಿರುವಾಗ “ಕೊಡೆ” ಎನ್ನುವುದೇಕೆ..?

‍ಲೇಖಕರು Avadhi

December 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: