ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಕೊಟ್ಟು ಖುಷಿ ಪಡುವ ಆ ಕ್ಷಣ…’ – ಶ್ರೀದೇವಿ ಕೆರೆಮನೆ

ಕೊಟ್ಟು ಕೆಟ್ಟವರಿಲ್ಲ

ಶ್ರೀದೇವಿ ಕೆರೆಮನೆ

ಜೀವನದಲ್ಲಿ ನಾವೆಷ್ಟು ಪಡೆದುಕೊಂಡೆವು ಎಂಬುದು ಮುಖ್ಯವಲ್ಲ. ನಾವು ಎಷ್ಟು ಕೊಟ್ಟೆವು ಎನ್ನುವುದು ಮುಖ್ಯ. ಪಡೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿಯೇ ಜೀವನದ ಸಾರ್ಥಕತೆ ಹೆಚ್ಚಿದೆ. ಯಾರೂ ನಮ್ಮನ್ನು ನಾವು ಎಷ್ಟು ಪಡೆದುಕೊಂಡೆವು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ. ನಾವೆಷ್ಟು ಕೊಟ್ಟೆವು ಎನ್ನುವುದರ ಮೇಲೆ ನಮ್ಮ ಯೋಗ್ಯತೆ ತೀರ್ಮಾನವಾಗುವುದು. ನಾವು ಎಷ್ಟು ಕೊಡುತ್ತೇವೆ ಎನ್ನುವುದರ ಆಧಾರದ ಮೇಲೆ ಜೀವನ ನಿಂತಿದೆಯೇ ಹೊರತೂ ಎಷ್ಟು ಪಡೆದೆವು ಎನ್ನುವುದರ ಮೇಲಲ್ಲ. ಹೌದು ನಾವು ಜೀವನದಲ್ಲಿ ಎಲ್ಲವನ್ನೂ ಪಡೆಯಲೆತ್ನಿಸುತ್ತೇವೆ. ಕೊಡುವುದರ ಬಗ್ಗೆ ಯೋಚಿಸುವುದೇ ಇಲ್ಲ. ಸುಂದರವಾದದ್ದು ಏನೇ ಕಂಡರೂ ಅದು ನಮ್ಮದಾಗಬೇಕು ಎಂಬ ಹಳಹಳಿಕೆ. ನಮ್ಮದಾಗಲಿಲ್ಲ ಎಂದರೆ ಏನೋ ಕಳೆದುಕೊಂಡ ವೇದನೆ. ಬದುಕು ಕೇವಲ ಹಣ, ಅಂತಸ್ಥಿನ ಮೇಲೆ ನಿಂತಿಲ್ಲ. ಅದರಲ್ಲಿ ನಾವು ಕೊಡಬೇಕಾದ ಬಹಳಷ್ಟು ಸಂಗತಿಗಳಿವೆ. ಅಂತೆಯೇ ಪಡೆಯಲೇ ಬೇಕಾದ ವಿಷಯಗಳೂ ಇವೆ. ಕೊಟ್ಟಷ್ಟೂ ಮುಗಿಯದ ಪ್ರೀತಿ, ದಕ್ಕಿದ್ದು ಎರಡೇ ತುತ್ತಾದರೂ ಅದನ್ನೇ ಹಂಚಿಕೊಳ್ಳುವ ನಿಸ್ವಾರ್ಥತೆ, ಇವೆಲ್ಲದರ ಜೊತೆ ಪಡೆದುಕೊಳ್ಳಲೇ ಬೇಕಾದ ಹಲವಾರು ಅಂಶಗಳೂ ಇವೆ. ‘ಆನೋ ಭದ್ರ ಕೃತವೋ ವಿಶ್ವತಃ’ ಎನ್ನುವ ವೇದದ ಮಾತಿನಂತೆ ಒಳ್ಳೆಯ ವಿಚಾರಗಳು ಜಗತ್ತಿನ ಯಾವ ಮೂಲೆಯಿಂದಾದರೂ ಬರಲಿ, ಅದು ಸ್ವಾಗತಾರ್ಹವೇ.

ಕೆಲವು ದಿನಗಳ ಹಿಂದೆ ಒಂಬತ್ತನೆ ತರಗತಿಯಲ್ಲಿ ಇಂಗ್ಲೀಷ್ ಪಾಠ ಮಾಡುತ್ತಿದ್ದೆ. ಪುಸ್ತಕದಲ್ಲಿ ಬಂದ ಒಂದು ವಾಕ್ಯ ನಿಜಕ್ಕೂ ಗಮನಸೆಳೆಯಿತು.  “The value of a man resides not in what is capable of receiving but in what he is capable of giving”. ಎಷ್ಟೇ ಪ್ರಯತ್ನ ಪಟ್ಟರೂ ಆ ವಾಕ್ಯದಿಂದ ತಪ್ಪಿಸಿಕೊಂಡು ಮುಂದೆ ಹೋಗಲಾಗಲಿಲ್ಲ. ತರಗತಿ ಮುಗಿದ ಘಂಟೆ ಶಬ್ಧ ಕೇಳಿದ ನಂತರವಷ್ಟೆ ನನಗೆ ಅದರ ಬಗ್ಗೆ ವಿವರಣೆ ನಿಲ್ಲಿಸಲು ಸಾಧ್ಯವಾಗಿದ್ದು. ಜೀವನದಲ್ಲಿ ನಾವೆಷ್ಟು ಪಡೆದುಕೊಂಡೆವು ಎಂಬುದು ಮುಖ್ಯವಲ್ಲ. ನಾವು ಎಷ್ಟು ಕೊಟ್ಟೆವು ಎನ್ನುವುದು ಮುಖ್ಯ. ಪಡೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿಯೇ ಜೀವನದ ಸಾರ್ಥಕತೆ ಹೆಚ್ಚಿದೆ. ಯಾರೂ ನಮ್ಮನ್ನು ನಾವು ಎಷ್ಟು ಪಡೆದುಕೊಂಡೆವು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ. ನಾವೆಷ್ಟು ಕೊಟ್ಟೆವು ಎನ್ನುವುದರ ಮೇಲೆ ನಮ್ಮ ಯೋಗ್ಯತೆ ತೀರ್ಮಾನವಾಗುವುದು. ಒಬ್ಬ ಶ್ರೀಮಂತ ಬೇಕಷ್ಟು ಹಣಗಳಿಸಿರಬಹುದು. ಬದುಕಿದ್ದಾಗ ಆತನ ಸುತ್ತಲೂ ಜನಸಂದಣಿಯೇ ಇದ್ದಿರಬಹುದು. ಆದರೆ ಆತನ ಕಾಲಾನಂತರ ಆತ ಮರೆತೇ ಹೊಗುತ್ತಾನೆ. ಆದರೆ ಯಾವ ವ್ಯಕ್ತಿ ತನ್ನಲ್ಲಿದ್ದುದನ್ನು ಹಂಚುಕೊಳ್ಳುತ್ತಾನೆಯೋ ಆತ ತನ್ನ ಮರಣದ ನಂತರವೂ ಜನಮಾನಸದಲ್ಲಿ ಅಚ್ಚಳಿಯದ ನೆನಪಾಗಿ ಉಳಿಯುತ್ತಾನೆ.

ನಾವು ಎಷ್ಟು ಕೊಡುತ್ತೇವೆ ಎನ್ನುವುದರ ಆಧಾರದ ಮೇಲೆ ಜೀವನ ನಿಂತಿದೆಯೇ ಹೊರತೂ ಎಷ್ಟು ಪಡೆದೆವು ಎನ್ನುವುದರ ಮೇಲಲ್ಲ. ಹೌದು ನಾವು ಜೀವನದಲ್ಲಿ ಎಲ್ಲವನ್ನೂ ಪಡೆಯಲೆತ್ನಿಸುತ್ತೇವೆ. ಕೊಡುವುದರ ಬಗ್ಗೆ ಯೋಚಿಸುವುದೇ ಇಲ್ಲ. ಸುಂದರವಾದದ್ದು ಏನೇ ಕಂಡರೂ ಅದು ನಮ್ಮದಾಗಬೇಕು ಎಂಬ ಹಳಹಳಿಕೆ. ನಮ್ಮದಾಗಲಿಲ್ಲ ಎಂದರೆ ಏನೋ ಕಳೆದುಕೊಂಡ ವೇದನೆ. ಜಗತ್ತಿನ ಎಲ್ಲವನ್ನೂ ನಮ್ಮದಾಗಿಸಿಕೊಳ್ಳುವ ಹಪಾಹಪಿಯಲ್ಲಿ ಎಷ್ಟೆಲ್ಲಾ ಅನಾಹುತಗಳನ್ನು ಸೃಷ್ಟಿಸಿಬಿಡುತ್ತಿದ್ದೇವೆ…ಕೊಟ್ಟವರಾರೂ ಬಡವರಾಗುವುದಿಲ್ಲ ಎನ್ನುವುದು ಒಂದು ಪ್ರಸಿದ್ಧ ಚೀನೀ ಗಾದೆ. ಇದು ಕೇವಲ ಹಣಕ್ಕಷ್ಟೇ ಅಲ್ಲ ಎಲ್ಲಾ ಕ್ಷೇತ್ರದಲ್ಲೂ ಅನ್ವಯಿಸುತ್ತದೆ. ಯಾರೋ ಬಡವನಿಗೆ ಒಂದು ಐದು ರೂಪಾಯಿ ಕೊಟ್ಟರೆ ಅದರಿಂದ ಹಣವಿದ್ದ ಶ್ರೀಮಂತ ಕಳೆದುಕೊಳ್ಳುವುದೇನಿಲ್ಲ. ಆದರೆ ಆ ಐದು ರೂಪಾಯಿ ಆ ಬಡವನ, ಅಶಕ್ತನ ಒಂದು ಹೊತ್ತಿನ ಹೊಟ್ಟೆಯ ಬಡಬಾನಿಲವನ್ನು ಶಮನ ಮಾಡಬಹುದು.  ಗಾಂಧೀಜಿ ಒಮ್ಮೆ ಅಸಹಕಾರ ಚಳುಳಿಗೆ ಕರೆಕೊಟ್ಟ ಸಂದರ್ಭ. ವಿದೇಶಿ ವಸ್ತುಗಳನ್ನು ಬಹಿಷ್ಕರಿಸಲಾಗಿತ್ತು. ನಿತ್ಯ ಜೀವನೋಪಯೋಗಿ ವಸ್ತುಗಳಿಗಾಗಿ ಹಾಗೂ ಸ್ವಾತಂತ್ರ್ಯ ಹೋರಾಟ ಮುಂದುವರೆಸಲು ಹಣದ ಅವಶ್ಯಕತೆ ಬಹಳವಿತ್ತು. ಹೀಗಾಗಿ ಸಾರ್ವಜನಿಕರಿಂದ ಚಂದಾ ಎತ್ತಲು ನಿರ್ಧರಿಸಿದರಂತೆ.

ಸ್ವತಃ ಗಾಂಧೀಜಿಯೇ ಬಂದು ಹಣ ಕೇಳಿದರೆ ಯಾರು ತಾನೆ ಇಲ್ಲವೆಂದಾರು? ಜನ ಕೊಡುಗೈ ದಾನಿಗಳಾದರು. ಸಾವಿರಗಟ್ಟಲೆ ಹಣ ಕೊಟ್ಟವರೂ ಇದ್ದಂತೆ ಒಂದು ರೂಪಾಯಿಯಿಂದ ಹತ್ತು ರೂಪಾಯಿಯವರೆಗೆ ಕೊಟ್ಟವರೂ ಇದ್ದರು. ಮಹಿಳೆಯರು ತಮ್ಮ ಮೈಮೇಲಿನ ಆಭರಣಗಳನ್ನು ಕಳಚಿ ಗಾಂಧೀಜಿಯವರಿಗೆ ನೀಡಿದರು. ಕುತ್ತಿಗೆಗೊಂದು ಅರಶೀಣದ ಕೊಂಬು ಕಟ್ಟಿಕೊಂಡು ತಮ್ಮ ಮಾಂಗಲ್ಯದ ಸರವನ್ನೇ ಬಿಚ್ಚಿಕೊಟ್ಟ ದೇಶಪ್ರೇಮಿ ಹೆಂಗಸರಿದ್ದರು. ಒಂದು ಸಾರ್ವಜನಿಕ ಸಭೆಗೆ ಮೊದಲು ಗಾಂಧೀಜಿ ಹಣ ಸಂಗ್ರಹಣೆ ಮಾಡುತ್ತಿದ್ದರಂತೆ. ಅಲ್ಲಿಯೂ ಅಷ್ಟೇ ಹಣ ಯಥೇಶ್ಚವಾಗಿ ಸೇರಿತು. ಆದರೆ ಗಾಂಧೀಜಿ ತಮ್ಮ ಬಾಷಣದಲ್ಲಿ ಅತೀ ಕಡಿಮೆ ಹಣ ಕೊಟ್ಟ ಒಬ್ಬ ಮಹಿಳೆಯನ್ನು ಉಲ್ಲೇಖಿಸಿದರಂತೆ. ಅವರ ಅನುಯಾಯಿಗಳಿಗೆ ಆಶ್ಚರ್ಯ. ಸಾವಿರಗಟ್ಟಲೇ, ಲಕ್ಷಗಟ್ಟಲೇ ಹಣ ಕೊಟ್ಟವರಿರುವಾಗ ಎಲ್ಲಾ ಬಿಟ್ಟು ಒಂದೋ ಎರಡೋ ರೂಪಾಯಿ ಕೊಟ್ಟ ಆ ಬಡವಿಯನ್ನು ನೆನೆದರಲ್ಲ ಎಂದು. ಕುತೂಹಲ ತಾಳಲಾಗದೆ ಆ ಬಗ್ಗೆ ಗಾಂಧೀಜಿಯವರನ್ನು ಕೇಳಿದಗ ಅವರು ಕೊಟ್ಟ ಉತ್ತರ ಮಾರ್ಮಿಕವಾಗಿತ್ತು. ಹೌದು ಹೆಚ್ಚಿಗೆ ಹಣ ಕೊಟ್ಟವರಿಗಿಂತ ಆಕೆಯೇ ಶ್ರೇಷ್ಠ. ಯಾಕೆಂದರೆ ಹೆಚ್ಚಿಗೆ ಕೊಟ್ಟವರೆಲ್ಲ ತಮ್ಮ ಲಾಭದಲ್ಲಿನ ಸ್ವಲ್ಪ ಪಾಲನ್ನು ನೀಡಿದ್ದಾರೆ. ಆ ಹಣ ಅವರ ತಿಂಗಳ ವರಮಾನಕ್ಕೆ, ಜೀವನಕ್ಕೆ ಯವುದೇ ವ್ಯತ್ಯಯವನ್ನು ಉಂಟು ಮಾಡುವುದಿಲ್ಲ. ಆದರೆ ಆ ತಾಯಿ ಹಾಗಲ್ಲ. ಆಕೆ ತನ್ನ ಒಂದು ತಿಂಗಳ ಆದಾಯವನ್ನೇ ನೀಡಿದ್ದಾಳೆ. ಈ ಹಣ ಕೊಟ್ಟರೆ ಇಡೀ ಒಂದು ತಿಂಗಳು ಊಟ ಮಾಡಲೂ ಸಹ ಅವಳು ಕಷ್ಟ ಪಡಬೇಕು ಅನ್ನುವುದು ಅವಳಿಗೆ ಗೊತ್ತು. ಆದರೂ ದೇಶಕ್ಕಾಗಿ ಆಕೆ ಮಾಡಿದ ತ್ಯಾಗ ಇದು. ಹೀಗಾಗಿ ಅವಳು ಕೊಟ್ಟಿದ್ದೇ ಹೆಚ್ಚು ಎಂದರು. ಹೌದು  ಇಂತಹ ಮಹಾನ್ ತಾಯಿಯರಿಂದಲೇ ಭಾರತ ಸ್ವತಂತ್ರವಾಗಲು ಕಾರಣವಾಯಿತು ಎಂದರೆ ಸುಳ್ಳಲ್ಲ.

ಈ ಹೊತ್ತಿನಲ್ಲಿ ನೆನಪಿಗೆ ಬರುವುದು ಇಬ್ಬೊಬ್ಬ ಸ್ವಾತಂತ್ರ ಹೋರಾಟಗಾರ್ತಿ ಪದ್ಮಾವತಿಬಾಯಿ ಬೂಲರ್. ರಾಷ್ಟ್ರಪ್ರೇಮವನ್ನೇ ಉಸಿರಾಗಿಸಿಕೊಂಡು ಸ್ವಾತಂತ್ರ್ಯ ಹೊರಾಟದಲ್ಲಿ ಭಾಗವಹಿಸಿ ಮನೆ ಸಂಸಾರವನ್ನು ಮರೆತ ಗಂಡ ಬಿಂದಾಚಾರ್ಯ ಬೂಲರ್. ಆದರೂ ಮನೆ ಸಂಸಾರ ನೋಡಿಕೊಂಡು ಮಕ್ಕಳ ಹೊಟ್ಟೆ ಬಟ್ಟೆ ನೋಡಿಕೊಂಡು ಸಂಸಾರ ನೋಡಿಕೊಳ್ಳುವುದಷ್ಟೇ ಅಲ್ಲ ತಾನೂ ಕೂಡ ಗುಟ್ಟಾಗಿ ಸ್ವಾತಂತ್ರ್ಯ ಹೋರಾಟಗಾರರಿಗೆ ಬೆಂಬಲಿಸುತ್ತ, ಭೂಗತರಾಗಿದ್ದ ಹೋರಾಟಗಾರರಿಗೆ ಪೋಲಿಸರ ಕಣ್ಣು ತಪ್ಪಿಸಿ ಊಟ ಕೊಟ್ಟು ಸಂತಸ ಪಡುತ್ತದ ಸಾತ್ವಿಕ ಗೃಹಿಣಿ ಆಕೆ. ತನ್ನ ಸ್ವಂತ ಮಕ್ಕಳಿಗೆ ‘ಸ್ವಲ್ಪ ಕಡಿಮೆ ಊಟ ಮಾಡಿ’ ಎಂದು ಹೇಳಿ ದೇಶಕ್ಕಾಗಿ ಹೋರಾಡುತ್ತಿರುವ ಭಾರತಮಾತೆಯ ಧೀರ ಕಂದಮ್ಮಗಳಿಗೆ ಉಣಬಡಿಸಿದ ಮಹಾನ್ ತಾಯಿ ಆಕೆ. ತನ್ನ ಮಕ್ಕಳಿಗೇ ಹೊಟ್ಟೆತುಂಬಾ ಊಟ ಇಲ್ಲದಿರುವಾಗಲೂ ಹೋರಾಟಗಾರರಿಗೆ ಊಟ ನೀಡಿದ ಪದ್ಮಾವತಿಬಾಯಿ ಬೂಲರ್ ಎಂದು ಕೊಟ್ಟು ದಣಿಯಲಿಲ್ಲ. ಭೂಗತರಾಗಿದ್ದ ಇನ್ನಿಬ್ಬರು ಧೀರ ಮಹಿಳೆಯರಾದ ಶಕುಂತಲಾ ದಾಬಡೆ ಹಾಗೂ ಶಾಂತಾಬಾಯಿ ಕರಮರ್ಕರ್ರವರಿಗೆ ಗುಟ್ಟಾಗಿ ಆಹಾರ ತೆಗೆದುಕೊಂಡು ಹೋಗಿ ಪೋಲಿಸರ ಕೈಗೆ ಸಿಕ್ಕಿಬಿದ್ದು ಜೈಲುವಾಸ ಅನುಭವಿಸುವಂತಾಗಿದ್ದರೂ ಕೊಡುವುದರಿಂದ ವಿಚಲಿತರಾಗದ ಪದ್ಮಾವತಿಬಾಯಿ ಬೂಲರ್ ಕೊಟ್ಟು ತೃಪ್ತಿ ಹೊಂದಿದ ಧೀರ ಮಹಿಳೆ.

ನಾನೀಗ ಈ ವಿಷಯ ಏಕೆ ಬರೆಯುತ್ತಿದ್ದೇನೆ ಎಂದರೆ  ಒಂದು ಕಾಲದಲ್ಲಿ ನಾನೂ ಕೂಡ ಹೀಗೆಯೇ ಇದ್ದೆ. ಭಿಕ್ಷೆ ನೀಡುವವರಿಂದಲೇ ನಮ್ಮ ದೇಶ ಹೀಗಿರುವುದು ಎಂದೆಲ್ಲ ಹುಚ್ಚು ಹುಚ್ಚಾಗಿ ಯೋಚಿಸುತ್ತಿದ್ದ ಕಾಲವೊಂದಿತ್ತು. ಭಿಕ್ಷೆ ನೀಡದೇ ಬಿಕ್ಷಾಟನೆಯನ್ನು ಕಿತ್ತು ಎಸೆದು ಬಿಡುತ್ತೇನೆ ಎಂದೆಲ್ಲ ಅಮ್ಯಾಚೂರ್ ಆಗಿ ಯೋಚಿಸುತ್ತಿದ್ದೆ. ಅಸಹಾಯಕರ ಕಷ್ಟವನ್ನು ಅರ್ಥೈಸಿಕೊಳ್ಳದೇ ಬಾಲೀಶವಾಗಿ ಮಾತನಾಡಿದ ಸಂದರ್ಭ ಕೂಡ ಕಡಿಮೆ ಏನಿರಲಿಲ್ಲ. ‘ಕೆಲಸ ಮಾಡೋಕೆ ಆಲಸ್ಯ. ಅದಕ್ಕೆ ಸುಲಭವಾಗಿ ಹಣ ಮಾಡಲು ಭಿಕ್ಷೆ ಬೇಡುತ್ತಿದ್ದಾರೆ’ ಎಂದೆಲ್ಲ ದೂರುತ್ತಿದ್ದೆ. ಆಗ ಕಣ್ಣೆದುರು ಕಾಣುತ್ತಿದ್ದವರೂ ಗಟ್ಟುಮುಟ್ಟಾದವರೇ. ಆದರೆ ನಂತರದ ದಿನಗಳಲ್ಲಿ ಬಡವರ ಕಷ್ಟದ ಬಗ್ಗೆ ಅರಿವಾಗತೊಡಗಿತು. ವಿದ್ಯಾರ್ಥಿ ಸಂಘಟನೆ, ಹೋರಾಟ, ವಿವಿಧ ಕಾರ್ಮಿಕ ಸಂಘಟನೆಗಳ ಸಾಹಚರ್ಯ, ಮಹಿಳಾ ಸಂಘಟನೆಗಳೊಂದಿಗಿನ ಒಡನಾಟ, ವಿದ್ಯಾರ್ಥಿ ಸಂಘಟನೆಯ ಜವಾಬ್ಧಾರಿಯಿಂದಾಗಿ ಬಡವರ ಕಷ್ಟಗಳನ್ನು ಹತ್ತಿರದಿಂದ ನೋಡಲು, ಬದುಕಿನ ದೃಷ್ಟಿಕೋನವನ್ನೇ ಬದಲಾಯಿಸಿಕೊಳ್ಳಲು ಸಹಾಯ ಮಾಡಿತು, ಆ ಒಡನಾಟವೇ ಕೊಡುವುದರಲ್ಲಿನ ತೃಪ್ತಿಯನ್ನು ತೋರಿಸಿದ್ದು.     ಕೊಟ್ಟು ತಿನ್ನುವುದರಲ್ಲಿನ ಸುಖವನ್ನು, ಹಂಚಿ ತಿನ್ನುವ ಗುಣವನ್ನು ನೋಡಬೇಕೆಂದರೆ ನಿಜಕ್ಕೂ ಬಡವರ ಮನೆಗಳಿಗೇ ಹೋಗ ಬೇಕು. ಯಾವುದೋ ಹಳ್ಳಿಯ ಮನೆಗೊಮ್ಮೆ ಹೊಗಿದ್ದೆ. ತೆಗೆದುಕೊಂಡು ಹೋಗಿದ್ದು ಸಣ್ಣ ಪೇಡಾ ಬಾಕ್ಸ್. ಆದರೆ ಅಲ್ಲಿಯವರಿಗೆ ಅದು ಯಾವುದೋ ಹೊಸ ತಿಂಡಿ. ಸರಿಯಾಗಿ ತಿಂದರೆ ಆ ಮನೆಯವರಿಗೆ ಒಂದೊಂದು ಸಿಗಲಾರದು. ಅಂತಹುದರಲ್ಲಿ ಆ ಪೇಡಾ ಬಾಕ್ಸ್ ತೆಗೆದುಕೊಂಡು ಹೋಗಿದ್ದ ಆ ಮನೆಯ ಚಿಕ್ಕ ಹುಡುಗಿ ಅಕ್ಕ ಪಕ್ಕದ ಮನೆಯ ಮಕ್ಕಳನ್ನೆಲ್ಲ ಕರೆದು ಇದ್ದುದನ್ನೆ ಸನ್ಣ ಭಾಗವನ್ನಾಗಿಸಿ ಎಲ್ಲರಿಗೂ ಹಂಚಿ ತಿಂದು ಖುಷಿ ಪಟ್ಟ ರೀತಿ ಮಾತ್ರ ನಿಜಕ್ಕೂ ನನಗೊಂದು ಅವಿಸ್ಮರಣೀಯ ನೆನಪಾಗಿ ಉಳಿದಿದೆ. ಕೊಟ್ಟು ಖುಷಿಪಡುವ ಆ ಕ್ಷಣ ನಿಜಕ್ಕೂ ನಾನು ಕಂಡ ಅದ್ಭುತ ವ್ಯಕ್ತಿಕಾವ್ಯದಲ್ಲೊಂದು.

ಕೆಲವು ಬುಡಕಟ್ಟು ಜನಾಂಗದ ಹಾಡಿಗಳಲ್ಲಿ ಇನ್ನೂ ಸಿಕ್ಕಿದ್ದನ್ನು ಹಂಚಿ ತಿನ್ನುವ ರೂಢಿ ಇದೆ. ಕಾಡು ಮೇಡು ಅಲೆಯುತ್ತ ಗೆಡ್ಡೆ ಗೆಣಸುಗಳನ್ನು ಸಂಗ್ರಹಿಸುವ ಜೇನು ಕುರುಬರ ಹಾಡಿಗಳಲ್ಲಿ, ಮಲೆಕುಡಿಯರ ಜನಾಂಗಗಳಲ್ಲಿ ಸಿಕ್ಕಷ್ಟನ್ನು ಸಂಜೆಯ ಹೊತ್ತಿಗೆ ಒಂದೆಡೆ ಸೇರಿಸಿ ಸಿಕ್ಕಷ್ಟನ್ನು ಸಮಪಾಲು ಮಾಡಿ ಹಂಚಿಕೊಳ್ಳುವ ಪರಿಪಾಟ ಇಂದಿಗೂ ಇದೆ. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವ ತತ್ವದಡಿಯ ಜೀವನ ನಿಜಕ್ಕೂ ಚೇತೋಹಾರಿ. ಇಡೀ ಹಾಡಿಯ ಜನರಿಗೆ ಊಟ ಸಿಕ್ಕೇ ಸಿಗುತ್ತದೆ. ಯಾರಿಗೋ ಒಂದು ದಿನ ಎಷ್ಟೇ ಕಷ್ಟ ಪಟ್ಟೂ ಅಂದಿನ ಆಹಾರ ಸಿಕ್ಕದೇ ಇರಬಹುದು. ಇನ್ಯಾರಿಗೋ ಅನಾರೋಗ್ಯದಿಂದಲೋ ಅಥವಾ ಇನ್ನಿತರ ಯಾವುದೋ ಕಾರ್ಯ ನಿಮಿತ್ತ ಆಹಾರ ಸಂಗ್ರಹಿಸಲು ಹೋಗಲಾಗದಿರಬಹುದು.  ಆ ದಿನ ಅವರಿಗೆ ಉಪವಾಸವೇ ಗತಿಯಾಗಬಹುದು. ಆದರೆ ಹಂಚಿ ತಿನ್ನುವುದರಿಂದ ಎಲ್ಲರಿಗೂ ಹೊಟ್ಟೆ ತುಂಬ ಊಟ ಸಿಗದಿದ್ದರೂ ಹೊಟ್ಟೆಯ ತಳಭಾಗಕ್ಕಾದರೂ ತಂಪಾದಿತು.  ಹಾಡಿಯ ಒಬ್ಬರು ಉಪವಾಸ ಇದ್ದು ಉಳಿದವರು ಹೊಟ್ಟೆ ತುಂಬಾ ತಿನ್ನುವ ಅಪದ್ಧ ಕ್ರಮಕ್ಕೊಂದು ಕಡಿವಾಣ ಈ ಪದ್ದತಿಯಿಂದ. ಇಲ್ಲಿ ಹೆಚ್ಚು ತಂದವರು ತಾವೇ ಹೆಚ್ಚು ಸಂಗ್ರಹಿಸಿದ್ದು, ತಮಗೇ ಜಾಸ್ತಿ ಪಾಲು ಬೇಕೆಂದು ತಕರಾರು ತೆಗೆಯುವುದಿಲ್ಲ. ಕೊಟ್ಟು ಸುಖಿಸುವ ಗುಣ ಅವರಲ್ಲಿದೆ.

ಜಗತ್ತಿನಲ್ಲಿ ಎಲ್ಲ ದಾನಕ್ಕಿಂತ ಅನ್ನದಾನವೇ ಮೇಲು ಎನ್ನುವ ನಾಣ್ಣುಡಿಯಿದೆ. ಹೌದು, ಹಸಿದವರಿಗೆ ಹೊಟ್ಟೆ ತುಂಬ ಉಣ ಬಡಿಸುವ ಖುಷಿ ಬೇರೆಯದರಲ್ಲಿಲ್ಲ. ಆದರೆ ಸಧ್ಯದ ಮೊಡರ್ನ ಯುಗದಲ್ಲಿ ರಕ್ತದಾನದಷ್ಟು ಮಹತ್ವ ಬೇರೆಯದಕ್ಕೆ ಇರಲಾರದು. ಬದುಕು ಸಾವಿನ ನಡುವೆ ಒದ್ದಾಡುತ್ತಿರುವ ಅಪಘಾತದಲ್ಲಿ ಗಾಯಗೊಂಡವರಿಗೇ ಇರಬಹುದು ಅಥವಾ ಇನ್ನಿತರ ಯಾವುದೇ ಕಾರಣಗಳಿಗಾಗಿ ರಕ್ತಪೂರಣದ ಅಗತ್ಯ ಇದ್ದವರಿಗೇ ಆಗಿರಬಹುದು ರಕ್ತವನ್ನು ನೀಡುವುದರಿಂದ ಆ ವ್ಯಕ್ತಿಯನ್ನು ಬದುಕಿಸಿದ್ದರಿಂದ ಸಿಗುವ ನೆಮ್ಮದಿ ಹೇಳಲು ಅಸಾಧ್ಯ. ರಕ್ತದಾನ ಎಂದ ತಕ್ಷಣ ನೆನಪಾಗುವುದು ಬಾಗಲಕೋಟದ ಗೆಳೆಯ ನಾಗರಾಜ ಹಂಡ್ಲಿ. ತನ್ನ ಹಲವಾರು ಸ್ನೇಹಿತರೊಂದಿಗೆ ಸೇರಿಕೊಂಡು ರಕ್ತದ ಅಗತ್ಯತೆ ಇದ್ದವರಿಗೆ ರಕ್ತದಾನ ಮಾಡುವ ಉತ್ಸಾಹಿ ಯುವಕ ನಾಗರಾಜ್. ಸುಮಾರು ಇನ್ನೂರರಷ್ಟು ಸದಸ್ಯರಿರುವ ಅವರ ಗುಂಪು ಯಾರಿಗೇ ರಕ್ತದ ಅವಶ್ಯಕತೆ ಇದೆ ಎಂದು ಯಾವುದೇ ಸಮಯದ ಕರೆ ಬರಲಿ ಹೋಗಿ ರಕ್ತ ನೀಡಿ ಆ ವ್ಯಕ್ತಿಗೆ ಬದುಕು ನೀಡುವ ಕಾಯಕವನ್ನು ಮಾಡುತ್ತಿದ್ದಾರೆ. ತಮ್ಮ ದೇಹದ ಒಂದು ಬಾಟಲ್ ರಕ್ತ ಒಂದು ಜೀವವನ್ನು ಉಳಿಸುವುದಾದರೆ ಅದಕ್ಕಿಂತ ಸಂತೋಷಪಡುವ ಕೆಲಸ ಬೇರೇನಿದೆ ಎನ್ನುವ ನಾಗರಾಜ ಮತ್ತವರ ಸ್ನೇಹಿತರಿಗೆ ಈಗಾಗಲೇ ರಕ್ತದಾನ ಮಾಡಿ ಹಲವಾರು ಜನರನ್ನು ಬದುಕಿಸಿದ ಗರಿಮೆಯಿದೆ, ಬೆನ್ನಿಗೆ ಅವರೆಲ್ಲರ ಆಶೀರ್ವಾದವಿದೆ. ‘ಕೊಡುವುದರಿಂದ ಯಾರೂ ಬಡವರಾಗುವುದಿಲ್ಲ’ ಎಂದು ದೃಢವಾಗಿ ನಂಬಿರುವ ನಾಗರಾಜ ಹಂಡ್ಲಿ ಇಂದಿನ ಯುವಕರಿಗೊಂದು ಮಾದರಿಯಾಗಿ ನಿಲ್ಲುತ್ತಾರೆ.

ನೇತ್ರದಾನ ಕೂಡ ಒಂದು ಅದ್ಭುತ ಕೊಡುವ ಪ್ರಕ್ರೀಯೆ. ನಮ್ಮ ಕೊನೆಯ ದಿನಗಳಲ್ಲಿ ನಮ್ಮ ಕಣ್ಣನ್ನು ಬೇರೆಯವರಿಗೆ ಕೊಡುವುದರಿಂದ ಜೀವನದಲ್ಲಿ ಕೆಲವರಿಗೆ ದೃಷ್ಟಿ ಭಾಗ್ಯವನ್ನು ನೀಡಬಹುದು. ನಮ್ಮ ಒಂದು ಕಣ್ಣು ವೈದ್ಯರ ಪ್ರಕಾರ ಕನಿಷ್ಟ ನಾಲ್ಕು ಜನರ ಬಾಳಿಗೆ ಬೆಳಕನ್ನು ನೀಡಲು ಬಳಸಬಹುದಂತೆ. ಸತ್ತ ನಂತರ ಯಾವುದೋ ಧಾರ್ಮಿಕ ಕಾರಣ ಅದೂ ಇದೂ ಎಂಬ ನಂಬಿಕೆಗೆ ಪಕ್ಕಾಗಿ ದೇಹದೊಂದಿಗೆ ಕಣ್ಣು ಹಾಗು ಇತರ ಅತ್ಯವಶ್ಯ ಹಾಗೂ ಬೇರೆಯವರಿಗೆ ಉಪಯೋಗ ಆಗುವ ಅಂಗಗಳನ್ನು ಮಣ್ಣಾಗಿಸುವ ಬದಲು  ಅಂಗಗಳನ್ನು ದಾನವಾಗಿ ನೀಡಿದರೆ ಅದು ಎಷ್ಟೋ ಜನರ ಬಾಳಿಗೊಂದು ವರವಾಗಬಹುದು. ಒಂದೆರಡು ವರ್ಷದ ಹಿಂದೆ ಒಬ್ಬ ವೈದ್ಯರ ತಾಯಿ ತನ್ನ ದೇಹದ ಎಲ್ಲಾ ಅಂಗಗಳನ್ನು ದಾನಮಾಡಿ ಜೀವನದ ಹಾಗೂ ಜೀವನದ ನಂತರವೂ ಆ ತಾಯಿ ಸಾರ್ಥಕತೆಯನ್ನು ಕಾಣುವಂತೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದದ್ದು ಇನ್ನು ಮನದಾಳದಲ್ಲಿ ಹಚ್ಚ ಹಸರಾಗಿದೆ.         ಕೆಲವು ದಿನಗಳ ಹಿಂದೆ ತಮ್ಮನಂತಿರುವ ಉಲ್ಲಾಸ ಹುದ್ದಾರ ತುಂಬಾ ದಿನಗಳಿಂದ ಓದಲೇ ಬೇಕು ಎಂದು ಬಯಸುತ್ತಿದ್ದ ಪ್ರತಿಭಾ ನಂದಕುಮಾರ್ರವರ ‘ಅನುದಿನದ ಅಂತರ ಗಂಗೆಯನ್ನು’ ಗಿಪ್ಟ ಮಾಡಿದ್ದರು. ಅದನ್ನು ಓದಿದ ನಂತರ ಪ್ರತಿಭಾನಂದಕುಮಾರ ನೀಡಿದ ಪ್ರೀತಿಯ ಕುರಿತೇ ಆಲೋಚಿಸುವಂತಾಗಿತ್ತು. ತನಗೆ ಸಿಗುತ್ತೋ ಬಿಡುತ್ತೋ, ಆದರೆ ತಾನೂ ಮಾತ್ರ ಪ್ರೀತಿ ಕೊಟ್ಟೆ ಸಿದ್ದ ಎನ್ನುವಂತೆ ತನ್ನ ಪರಿಧಿಯ ಒಳಗೆ ಬಂದ ಎಲ್ಲರಿಗೂ ಅದ್ಭುತ ಪ್ರೀತಿ ಧಾರೆ ಹರಿಸಿದ ಪ್ರೀತಿಯ ಕಡಲೋ ಎಂಬಂತೆ ನಡೆದು ಕೊಂಡಿದ್ದರು. ಪಡೆದ ಪ್ರೀತಿ ಅತ್ಯಲ್ಪವೇ ಆದರೂ ಕೊಟ್ಟು ಹಗುರಾದ ತಾಯಿ ಆಕೆ.

ಬದುಕು ಕೇವಲ ಹಣ, ಅಂತಸ್ಥಿನ ಮೇಲೆ ನಿಂತಿಲ್ಲ. ಅದರಲ್ಲಿ ನಾವು ಕೊಡಬೇಕಾದ ಬಹಳಷ್ಟು ಸಂಗತಿಗಳಿವೆ. ಅಂತೆಯೇ ಪಡೆಯಲೇ ಬೇಕಾದ ವಿಷಯಗಳೂ ಇವೆ. ಕೊಟ್ಟಷ್ಟೂ ಮುಗಿಯದ ಪ್ರೀತಿ, ದಕ್ಕಿದ್ದು ಎರಡೇ ತುತ್ತಾದರೂ ಅದನ್ನೇ ಹಂಚಿಕೊಳ್ಳುವ ನಿಸ್ವಾರ್ಥತೆ, ಇವೆಲ್ಲದರ ಜೊತೆ ಪಡೆದುಕೊಳ್ಳಲೇ ಬೇಕಾದ ಹಲವಾರು ಅಂಶಗಳೂ ಇವೆ. ‘ಆನೋ ಭದ್ರ ಕೃತವೋ ವಿಶ್ವತಃ’ ಎನ್ನುವ ವೇದದ ಮಾತಿನಂತೆ ಒಳ್ಳೆಯ ವಿಚಾರಗಳು ಜಗತ್ತಿನ ಯಾವ ಮೂಲೆಯಿಂದಾದರೂ ಬರಲಿ, ಅದು ಸ್ವಾಗತಾರ್ಹವೇ. ಕೇವಲ ದೊಡ್ಡವರು, ಸುಜ್ಞಾನಿಗಳು ಮಾತ್ರ ನಮಗೆ ವಿದ್ಯೆ, ಜ್ಞಾನವನ್ನು ಕೊಡುತ್ತಾರೆ ಎಂದು ಹೇಳುವಂತಿಲ್ಲ. ಕೆಲವೊಮ್ಮೆ ಅತಿ ಚಿಕ್ಕ ಮಗು ಕೂಡ ನಮಗಿಂತ ಹೆಚ್ಚು ಜ್ಞಾನ ಹೊಂದಿರಬಹುದು. ಅಥವಾ ಕೆಲವು ವಿಷಯಗಳಲ್ಲಿ ಮಗು ನೀಡಿದ ಸಲಹೆ ಉಪಯುಕ್ತವಾಗಿರಬಹುದು. ಕೇವಲ ಮಗು ಎಂಬ ಕಾರಣಕ್ಕೇ ಆ ಜ್ಞಾನವನ್ನು ತಿರಸ್ಕರಿಸದೇ ಅದನ್ನು ಪಡೆಯುವ, ಒಪ್ಫಿಕೊಳ್ಳುವ ಔದಾರ್ಯ ಕೂಡ ನಮ್ಮಲ್ಲಿರಬೇಕು. ಹೀಗೆ ಕೊಡುವ, ಪಡೆದುಕೊಳ್ಳುವ ಪ್ರಕ್ರೀಯೆ ನಿರಂತರವಾಗಿದ್ದಾಗ ಮಾತ್ರ ಜೀವನ ನಿರಾತಂಕವಾಗಿ ಸಾಗಲು ಸಾಧ್ಯ.

‍ಲೇಖಕರು avadhi

27 January, 2014

4 Comments

  1. D.Ravivarma

    ಬದುಕು ಕೇವಲ ಹಣ, ಅಂತಸ್ಥಿನ ಮೇಲೆ ನಿಂತಿಲ್ಲ. ಅದರಲ್ಲಿ ನಾವು ಕೊಡಬೇಕಾದ ಬಹಳಷ್ಟು ಸಂಗತಿಗಳಿವೆ. ಅಂತೆಯೇ ಪಡೆಯಲೇ ಬೇಕಾದ ವಿಷಯಗಳೂ ಇವೆ. ಕೊಟ್ಟಷ್ಟೂ ಮುಗಿಯದ ಪ್ರೀತಿ, ದಕ್ಕಿದ್ದು ಎರಡೇ ತುತ್ತಾದರೂ ಅದನ್ನೇ ಹಂಚಿಕೊಳ್ಳುವ ನಿಸ್ವಾರ್ಥತೆ, ಇವೆಲ್ಲದರ ಜೊತೆ ಪಡೆದುಕೊಳ್ಳಲೇ ಬೇಕಾದ ಹಲವಾರು ಅಂಶಗಳೂ ಇವೆ. ‘ಆನೋ ಭದ್ರ ಕೃತವೋ ವಿಶ್ವತಃ’ ಎನ್ನುವ ವೇದದ ಮಾತಿನಂತೆ ಒಳ್ಳೆಯ ವಿಚಾರಗಳು ಜಗತ್ತಿನ ಯಾವ ಮೂಲೆಯಿಂದಾದರೂ ಬರಲಿ, ಅದು ಸ್ವಾಗತಾರ್ಹವೇ. ಕೇವಲ ದೊಡ್ಡವರು, ಸುಜ್ಞಾನಿಗಳು ಮಾತ್ರ ನಮಗೆ ವಿದ್ಯೆ, ಜ್ಞಾನವನ್ನು ಕೊಡುತ್ತಾರೆ ಎಂದು ಹೇಳುವಂತಿಲ್ಲ. ಕೆಲವೊಮ್ಮೆ ಅತಿ ಚಿಕ್ಕ ಮಗು ಕೂಡ ನಮಗಿಂತ ಹೆಚ್ಚು ಜ್ಞಾನ ಹೊಂದಿರಬಹುದು. ಅಥವಾ ಕೆಲವು ವಿಷಯಗಳಲ್ಲಿ ಮಗು ನೀಡಿದ ಸಲಹೆ ಉಪಯುಕ್ತವಾಗಿರಬಹುದು. ಕೇವಲ ಮಗು ಎಂಬ ಕಾರಣಕ್ಕೇ ಆ ಜ್ಞಾನವನ್ನು ತಿರಸ್ಕರಿಸದೇ ಅದನ್ನು ಪಡೆಯುವ, ಒಪ್ಫಿಕೊಳ್ಳುವ ಔದಾರ್ಯ ಕೂಡ ನಮ್ಮಲ್ಲಿರಬೇಕು. ಹೀಗೆ ಕೊಡುವ, ಪಡೆದುಕೊಳ್ಳುವ ಪ್ರಕ್ರೀಯೆ ನಿರಂತರವಾಗಿದ್ದಾಗ ಮಾತ್ರ ಜೀವನ ನಿರಾತಂಕವಾಗಿ ಸಾಗಲು ಸಾಧ್ಯ…excellent and also thought provoking..ii sarala satyavannu naavella ariyabeku haagu alavadisikollabeku…

  2. h a patil

    – ತಮ್ಮ ಅಭಿಪ್ರಾಯ ಅಕ್ಷರಶಃ ನಿಜ, ಮನುಷ್ಯ ಸುಖವಾಗಿರಬೇಕಂದರೆ ತಾನು ಕೊಟ್ಟದ್ದನ್ನು ಮರೆಯಬೇಕು ಪಡೆದದ್ದನ್ನು ನೆನೆಯಬೇಕು, ಅದು ಸುಖ ಜಿವನದ ಸೂತ್ರ, ಆದರೆ ಇಂದು ನಮ್ಮ ಜೀವನದ ವ್ಯಾಖ್ಯಾನ ಬದಲಾಗಿದೆ. ನಾವು ಇಂದು ಕೊಟ್ಟದ್ದನ್ನು ನೆನೆದು ಪಡೆದದ್ದನ್ನು ಮರೆತು ಅಧಃಪತನದ ಅಂಚಿಗೆ ಸಾಗಿದ್ದೇವೆ. ಇದನ್ನು ಸದಮಾಜಕ್ಕೆ ತಿಳಿಯ ಹೇಳುವವರು ಯಾರು. ಇದು ಪ್ರತಿಯೊಬ್ಬನು ಅರಿಯ ಬೇಕಾದ ಜೀವನದ ಅರಿವಿನ ಪ್ರಶ್ನೆ, ನಾವು ಅರಿಯುವೆವೆ ಇದು ವರ್ತಮಾನದ ಪ್ರಶ್ನೆ.

  3. Lokesh Raj Mayya

    ಕೊಟ್ಟು ಕೆಟ್ಟವರಿಲ್ಲವೋ ನೀ ಕೇಳು…ಕೊಟ್ಟು ಕೆಟ್ಟವರಿಲ್ಲವ…..
    ನಿಜ ಮೇಡಂ ಕೊಟ್ಟು ಪಡೆಯೋದ್ರಲ್ಲಿ ಇರೋ ತೃಪ್ತಿ..ಪಡೆದು ಕಂಡಿರೋ್ದರಲ್ಲಿ ಅಷ್ಟಾಗಿ ಸಿಗೋದಿಲ್ಲ

  4. shubha

    :)..olleya lekhana…..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading