ಆಹಾ… ಚಹಾ! ಸರಣಿ
ದಿಟ್ಟಿ ಕೂಡಿಸಿದ ನಿನ್ನ ಕಣ್ಣಲ್ಲಿ

ಶ್ರೀದೇವಿ ಕೆರೆಮನೆ
ಬೆಳಿಗ್ಗೆ ಬೆಳಿಗ್ಗೆಯೇ ನಿನ್ನ ಮುಖದಲ್ಲಿ
ಎಂದೂ ಕಾಣದ ಸಿಡುಕು
ಕಾರಣ ಕೇಳ ಹೋದರೂ ಉತ್ತರವಿಲ್ಲ
ಕಣ್ಣಂಚಲ್ಲೊಂದು ಬೆಂಕಿಯ ಕಿಡಿ
ಚಿಮ್ಮುವಾಗಲೆಲ್ಲ ನನಗೋ ಆತಂಕ
ಜೊತೆಗೆ ಅಷ್ಟೇ ಮುಸಿನಗು

ನನ್ನ ಮುಖದಲ್ಲಿ ನಗುವಿನ ಗೆರೆ ಕಂಡ
ನಿನ್ನ ಮುಖದಲ್ಲಿ ಮತ್ತಿಷ್ಟು ಕೋಪ,
ಹೆಚ್ಚಾದ ದುಸುಮುಸು, ಮುನಿಸು
ಗೀಸರ್ ಬಿಸಿನೀರು ಸುರಿದುಕೊಳ್ಳುವಾಗ
ಲೋಕದ ಕೋಪವೆಲ್ಲ ತೊಳೆದು ಹಾಕುವ ರಭಸ
ಮೈಮೇಲೆ ಉಕ್ಕುವ ಹಬೆಗೆ
ಮತ್ತೆ ಸೆಳೆದುಕೊಳ್ಳುವ ತವಕ
ಕೈಗಿಟ್ಟ ಚಹಾದೊಂದಿಗೆ ಮೆಲ್ಲಗೆ
ಮಿಟುಕಿಸಿದ ಕಣ್ಣಂಚಿನ ನಗುವಿಗೆ
ದಿಟ್ಟಿ ಕೂಡಿಸಿದ ನಿನ್ನ ಕಣ್ಣಲ್ಲಿ
ಮೂಡಿದ ಪ್ರಶ್ನೆ, ಕಂಡೂ ಕಾಣದ ಹುಮ್ಮಸ್ಸು
ನಿನ್ನ ಕೋಪದ ಕಾವು ಆರಿ
ಕಣ್ಣಲ್ಲಿ ಮುಗುಳ್ನಗು ಮೂಡುವ ಹೊತ್ತಿಗೆ
ಕಪ್ಪಿನೊಳಗಿನ ಚಹಾ ಕೆನೆಗಟ್ಟುತ್ತಿದೆ





Very nice
ಕವನಗಳು ಚೆನ್ನಾಗಿದೆ