ಬಿ ಶ್ರೀಪತಿ ರಾವ್
ಕೇವಲ ಎರಡೇ ಎರಡು ದೂರವಾಣಿ ಕರೆಗಳು:
ಅಷ್ಟೇನೂ ಓದದ ಒಬ್ಬ ಹುಡುಗನ ಜೀವನಕ್ಕೊಂದು ಹೊಸದಾರಿ ನೀಡಿತೇ……..?

ಸಮೂಹ ಸಂವಾದ ಕಾರ್ಯಕ್ರಮವೊಂದರಲ್ಲಿ ಆತನ ಮುಖಾಮುಖಿ. ನಂತರ ಒಮ್ಮೆ ನೇರವಾಗಿ ಹುಡುಕಿಕೊಂಡು ಬಂದ. ಇನ್ನೂ ಹದಿನೆಂಟು ಇಪ್ಪತ್ತರ ಹರೆಯ. ಉಡುಪಿ ಕಡೆಯ ಹುಡುಗ.
ಸಾರ್. ಕಬ್ಬನ್ ಪಾರ್ಕ್ ಲೈಬ್ರೆರಿಯಲ್ಲಿ ಟ್ರೈನಿಂಗ್ ಕೋರ್ಸ್ ಗೆ ಕರೆದಿದ್ದಾರೆ. ನೀವು ನನಗೆ ಹೆಲ್ಪ್ ಮಾಡಬೇಕು… ಸಚಿವರು ನನ್ನ ಪರಿಚಿತರು ಎನ್ನುವುದನ್ನು ತಿಳಿದೇ ಆತ ಬಂದಿದ್ದ. ಅವನ ವಿವರ ಎಲ್ಲ ತಿಳಿದು ಆ ಸಚಿವರಿಗೆ ದೂರವಾಣಿಯಲ್ಲೇ ತಿಳಿಸಿದೆ.
ತುಂಬಿದ ಸಂತೋಷದೊಂದಿಗೆ ಸಿಹಿಪ್ಯಾಕ್ ಒಂದನ್ನು ತಂದ ಆತ ಟ್ರೈನಿಂಗ್ ಕೋರ್ಸ್ ಗೆ ಸಿಲೆಕ್ಟ್ ಆದುದನ್ನು ತಿಳಿಸಿದ.
ಆತನ ಸಂತೋಷದಲ್ಲಿ ಭಾಗಿಯಾಗಿ ಸಿಹಿ ತಿನ್ನುತ್ತಲೇ ಕೇಳಿದೆ. ಏನು, ಸ್ಟೈಫಂಡ್ ಏನಾದರೂ ಕೊಡ್ತಾರಾ..?
ಇಲ್ಲ, ಸಾರ್. ಅವರು ಆರು ತಿಂಗಳು ಟ್ರೈನಿಂಗ್ ಕೊಟ್ಟು ಒಂದು ಸರ್ಟಿಫಿಕೆಟ್ ಮಾತ್ರ ಕೊಡ್ತಾರೆ. ಬೇರೇನೂ ಕೊಡೋಲ್ಲ. ಹೋಗಿ ಬರುವ ಖರ್ಚು ಎಲ್ಲ ನಮ್ಮದೇ..
ಮತ್ತೆ ಊಟ ತಿಂಡಿಗೆಲ್ಲ ಏನು ಮಾಡ್ತ್ರಿಯಾ..?
ಈಗ ಒಂದು ಬೇಕರಿಯಲ್ಲಿ ಪಾರ್ಟ್ ಟೈಂ ಕೆಲಸ ಮಾಡ್ತ್ರಿದ್ದೇನೆ. ಊಟ, ತಿಂಡಿ, ಮಲಗಲು ಜಾಗ ಕೊಟ್ಟು ತಿಂಗಳಿಗೆ ಸ್ವಲ್ಪ ಖರ್ಚಿಗೆ ಕೊಡ್ತಾರೆ.
ಎಷ್ಟು ಕೊಡ್ತಾರೆ ಎಂದು ಕೇಳಿ ತಿಳಿದುಕೊಂಡಾಗ ಗಾಬರಿಯಾಯಿತು. ಅದು ಸೌತ್ ಎಂಡ್ ಸರ್ಕಲ್‍ನಿಂದ ಕಬ್ಬನ್ ಪಾರ್ಕ್‍ಗೆ ಹೋಗಿ ಬರಲು ಬಸ್ ಚಾರ್ಚಿಗೂ ಸಾಲದಷ್ಟಿತ್ತು.
ಏನಯ್ಯಾ! ಅಷ್ಟರಲ್ಲಿ ಹೇಗೆ ಆರು ತಿಂಗಳು ಜೀವನ ಮಾಡ್ತ್ತಿಯಾ? ಬಟ್ಟೆ ಸೋಫು ಎಲ್ಲ ಖರ್ಚಿರುವುದಿಲ್ವಾ?
ಆತ ಕಷ್ಟಪಡಲು ತಯಾರಾಗಿದ್ದ. ಆರು ತಿಂಗಳು ಕಷ್ಟ ಪಟ್ಟು ಟ್ರೈನಿಂಗ್ ತೆಗೆದುಕೊಂಡರೆ ನಂತರ ಯಾವುದಾದರೊಂದು ಕಾಲೇಜಿನಲ್ಲಿ ಲೈಬ್ರೈರಿ ಅಸಿಸ್ಟಂಟ್ ಆಗಿ ಸೇರಬಹುದೆನ್ನುವ
ಲೆಕ್ಕಾಚಾರದ ಖಚಿತ ಗುರಿ ಆತನದು.
ಸಂತೋಷ, ದುಃಖ ಎರಡೂ ಜತೆಯಾಗಿ ಹೃದಯ ಅಯ್ಯೋ ಎಂದರೂ ಕಣ್ಣಲ್ಲಿ ತೋರಗೊಡದಂತೆ- ಕೊನೆಗೆ ಕೇಳಿದೆ.
ಪಾರ್ಟ್ ಟೈಂ, ಸಂಜೆ ಆರು ಘಂಟೆಯ ನಂತರ ಒಂದು ಹೋಟ್ಲಲ್ಲಿ ಕೆಲಸ ಮಾಡ್ತೀಯಾ? ಒಳ್ಳೆ ಸಂಬಳ ಸ್ಟಾಫ್ ರೂಂ ಎಲ್ಲ ಇರ್ತದೆ.
ಅವನಿಗೆ ಸ್ವಲ್ಪವಾದರೂ ಹೆಚ್ಚು ಸಂಪಾದನೆಯಾಗಲಿ, ಕಷ್ಟಪಡುವವನಿಗೆ ಒಂದಷ್ಟು ಸಹಾಯವಾಗಲಿ- ಅಂತ ಕೇಳಿದೆ.
ಆಯ್ತು ಸಾರ್. ಕೆಲಸ ಮಾಡಲಿಕ್ಕೆ ಎಲ್ಲಿ ಆದರೆ ಏನು, ಮಾಡ್ತೇನೆ.
ಕಿಚ್ಚ ಸುದೀಪನ ತಂದೆ ಆಗ ರಿಚ್‍ಮಂಡ್ ವೃತ್ತದಲ್ಲಿ ಸರೋವರ ಬಾರ್ ನಡೆಸುತ್ತಿದ್ದರು. ಅವರಿಗೆ ಫೋನ್ ಮಾಡಿದೆ. ಓಳ್ಳೆಯ ಸಂಬಳದ ಜತೆಗೆ ದಿನಕ್ಕೆ ನೂರು, ನೂರೈವತ್ತು ರೂಗಳಿಗೂ ಹೆಚ್ಚು
ಟಿಪ್ಸ್ ಸಂಪಾದಿಸತೊಡಗಿದ. ಒಳ್ಳೆಯ ಹುಡುಗ ಅಂತ ಎಲ್ಲರಿಂದಲೂ ಭೇಷ್ ಎನಿಸಿಕೊಂಡ…..
ಗುರಿ ಇರಿಸಿಕೊಂಡೇ ಮುಂದೋಡುವವನಿಗೆ ಬೆಟ್ಟದಲ್ಲೂ ಹೊಸದಾರಿ ಗೋಚರಿಸುತ್ತದಂತೆ.
ದಾರಿ ಯಾವತ್ತೂ ಯಾರನ್ನೂ ಮುಂದೊಯ್ದುದಿಲ್ಲ. ದಾರಿ ಕಂಡುಕೊಂಡವರೇ ಅಭಿವೃದ್ಧಿಯ ಪಥದಲ್ಲಿ ಮುಂದಡಿ ಇಡಬಲ್ಲರು ಎನ್ನುವುದಕ್ಕೇ ಈತನೇ ದೃಷ್ಟಾಂತನಾದ…………….
ಲೈಬ್ರೆರಿ ಟ್ರೈನಿಂಗ್ ಆದ ಸ್ವಲ್ಪ ಸಮಯದ ನಂತರ ಕಾಲೇಜೊಂದರಲ್ಲಿ ಸೇರಿಕೊಂಡು ಸಂಸಾರ, ಸ್ವಂತ ಮನೆ, ಮಕ್ಕಳೊಂದಿಗನಾದ. ಜೀವಮಾನದ ಗೆಳೆಯನಾಗುಳಿದ….
ಆಗಿನ ಹುಡುಗ ಇಂದಿಗೂ ಅಷ್ಟೇ ಪ್ರೀತಿಯಿಂದ ತನ್ನ ಜೀವನಕ್ಕೊಂದು ದಾರಿ ತೋರಿಸಿದವರು ಎಂದುಕೊಂಡು ಎಲ್ಲರಲ್ಲಿ, ಎಲ್ಲೆಂದರಲ್ಲಿ ಹೇಳುತ್ತಿರುತ್ತಾನೆ.
ಆದರೆ, ಅನೇಕಬಾರಿ ಯೋಚಿಸುತ್ತೇನೆ. ಆತನಿಗೆ ನಾನು ಮಾಡಿದ ಸಹಾಯವಾದರೂ ಏನು?
ಕೇವಲ ಎರಡು ದೂರವಾಣಿ ಕರೆಗಳು..!
ಕೇವಲ ಎರಡು ದೂರವಾಣಿ ಕರೆಗಳು..!






Nice read!
ನಮ್ಮ ಸಣ್ಣ ಸಹಾಯ ಇನ್ನೊಬ್ಬರ ದೊಡ್ಡ, ನೆಮ್ಮದಿಯ ಬದುಕಿಗೆ ಕಾರಣವಾಗುತ್ತದೆ ಎಂಬುದಕ್ಕೆ ಉದಾಹರಣೆ ಇದು. ಈ ಯಶಸ್ಸಿನ ಶ್ರೇಯಸ್ಸು ದೂರವಾಣಿ ಕರೆಗಳ ಮೂಲಕ ಸಹಾಯ ಮಾಡಿದ ಲೇಖಕರಿಗೂ ಮತ್ತು ಇಟ್ಟ ವಿಶ್ವಾಸಕ್ಕೆ ಚ್ಯುತಿ ಬರದಂತೆ, ಸಿಕ್ಕ ಹುಲ್ಲುಕಡ್ಡಿಯನ್ನೇ ಆಧಾರವಾಗಿಟ್ಟುಕೊಂಡು, ದುಡಿದು ಮೇಲೆ ಬಂದ ಆ ಸಾಹಸಿ ಇಬ್ಬರಿಗೂ ಸಲ್ಲಬೇಕು. ಧನ್ಯವಾದಗಳು ಧನಾತ್ಮಕ ಪ್ರೇರಣೆ ಕೊಡುವ ಲೇಖನಕ್ಕೆ.