
-ಕಿರಣ್ ಭಟ್
ನನ್ಮಯಿಲ್ ಜೋನ್ ಕ್ವಿಕ್ಸೋಟ್
ಮಲಯಾಳಂ ನಾಟಕ
ನಿರ್ದೇಶನ: ಅಲಿಯಾರ್ ಕೆ.
ಹದಿನೇಳನೆಯ ಶತಮಾನದ ಸ್ಪಾನಿಶ್ ಕನಸುಗಾರ ಕೇರಳದ ಮಣ್ಣಲ್ಲಿ ಮತ್ತೆ ಹುಟ್ಟಿದರೆ ಹೇಗಿರುತ್ತದೆ?
ʼನನ್ಮಯಿಲ್ ಜೋನ್ ಕ್ವಿಕ್ಸೋಟ್ʼ ಸೆರ್ವಾಂಟೆಸ್ ರ ಕ್ಲಾಸಿಕ್ ಕೃತಿಯ ಮಲಯಾಳಂ ಸಾಸ್ಕೃತಿಕ ರೂಪಾಂತರ. ಇದು ಕನಸುಗಳ ಕುರಿತು ಮಾತನಾಡುತ್ತದೆ. ಅರಗಿಸಿಕೊಳ್ಲಲಾಗದ ಕನಸುಗಳ ಬಗ್ಗೆ.
ಮನೆ ತುಂಬ ಪುಸ್ತಕಗಳನ್ನು ತುಂಬಿಕೊಂಡ ಓದಿನ ಗೀಳಿನ ಹಳ್ಳಿಯ ಹೈದನೊಬ್ಬ ನಿಧಾನವಾಗಿ ಕನಸಿಗೆ ಜಾರುತ್ತ ಹೋಗುತ್ತಾನೆ. ತನ್ನೊಳಗೆ ಜೋನ್ ಕ್ವಿಕ್ಸೋಟ್ ನನ್ನು ಆವಾಹಿಸಿಕೊಳ್ಳುತ್ತ ಹೋಗುತ್ತಾನೆ. ಆತನ ಪಯಣ ಕೇರಳದ ಇತಿಹಾಸ, ವರ್ತಮಾನದಲ್ಲೆಲ್ಲ ಚಲಿಸುತ್ತ ಹುಸಿ ಹೀರೋಯಿಸಮ್ ನ್ನು ಭ್ರಮಿಸುತ್ತ ಹೋಗುತ್ತದೆ. ಇತಿಹಾಸವನ್ನು ತಪ್ಪಾಗಿ ಗ್ರಹಿಸುತ್ತ ಹೋಗುವ ಆತನ ನಡಿಗೆ ಹಾಸ್ಯಾಸ್ಪದವೂ ದುರಂತವೂ ಆಗುತ್ತ ಹೋಗುತ್ತದೆ. ಇದು ಸತ್ಯ ಮತ್ತು ಭ್ರಮೆಗಳ ನಡುವೆ ಬದುಕುವ ಮನುಷ್ಯನ ಕತೆಯೂ ಆಗುತ್ತದೆ. ಅವನನ್ನು ಅವನ ಭ್ರಮೆಯಿಂದ ಹೊರತರಲು ಚರ್ಚಿನ ಫಾದರ್ ಮತ್ತು ಮನೆಯವರು ಹೂಡುವ ಆಟದ ಕತೆಯಿದು.
ಈ ರಂಗಪ್ರದರ್ಶನ ಒಂದು ರೀತಿಯ ʼ ಕ್ರೀಡಾತ್ಮಕ ರಂಗಭೂಮಿʼ. ಜೋನ್ ಕ್ವಿಕ್ಸೋಟ್ ನ ಪ್ರಯಾಣದುದ್ದಕ್ಕೂ ಹೇರಳವಾಗಿ ಕಳರಿಪಯಟ್ಟ ನ್ನು ಅತ್ಯಂತ ನಿಖರವಾಗಿ ಬಳಸಲಾಗಿದೆ.
ವಿಶಿಷ್ಟ ವಿನ್ಯಾಸದ ನಾಟಕವಿದು. ತುಂಬ ವಿಸ್ತಾರವಾದ ರಂಗವೇದಿಕೆ. ಕ್ರೀಡಾಂಗಣದಂಥದ್ದು. ಅಲ್ಲಲ್ಲಿ ಬರುವ ಬಹು ಗಾತ್ರದ ರಂಗ ಪರಿಕರಗಳು, ಜನರ ನಡುವಿಂದ ಎದ್ದು ಬರುವ ತೆಯ್ಯಂ, ತುಸು ಹೆಚ್ಚೇ ಧ್ವನಿಸುವ ಸಂಗೀತ, ವಿಶಿಷ್ಟವಾದ ಅನುಭವ ನೀಡುತ್ತ ಹೋಗುತ್ತವೆ.
ಮುಖ್ಯ ಭೂಮಿಕೆಯಲ್ಲಿದ್ದ ಸಜಿ ತುಳಸಿದಾಸ್ ರ ಅಭಿನಯಕ್ಕೆ ನಿಜಕ್ಕೂ ಮಾರುಹೋದೆ. ಬರಿಯ ಅಭಿನಯ ಮಾತ್ರವಲ್ಲ, ಎರಡೂವರೆ ತಾಸು ನಿರಂತರವಾಗಿ ಯುದ್ಧ ಮಾಡುತ್ತ ಆವನ ಸಾಥಿ ಸ್ಯಾಂಚೋ ಪಾಚನ್ ರ ಜೊತೆಗಿನ ಪಯಣದಲ್ಲಿ ಕೊನೆಯವರೆಗೂ ಅದೇ ಕಸುವು ಉಳಿಸಿಕೊಳ್ಳುವದಿದೆಯಲ್ಲ, ಅದು ಅದ್ಭುತ. ಹ್ಯಾಟ್ಸ್ ಆಫ್!
ಅಂದ ಹಾಗೆ, ನಾಟಕೋತ್ಸವದಲ್ಲಿ ಅತಿ ಹೆಚ್ಚು ಜನ ನೋಡಿದ ನಾಟಕವಿದು. ಟಿಕಟ್ ಕೈಲಿದ್ದರೂ ಒಳ ಹೋಗುವದಕ್ಕಾಗಿ ನಾನು ಎರಡೂವರೆ ಘಂಟೆ ಕ್ಯೂನಲ್ಲಿ ನಿಲ್ಲಬೇಕಾಯ್ತು!








0 Comments