ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೇಕೆ ಹಾಕುವ ಕುದುರೆಯನೇರಿ

-ದಸ್ತಗೀರಸಾಬ್ ದಿನ್ನಿ

ನನ್ನೊಳಗೊಬ್ಬ ರಾಜಕುಮಾರ

ಸಪ್ತ ಸಮುದ್ರಗಳ ದಾಟಿ
ಕೇಕೆ ಹಾಕುವ ಕುದುರೆಯನೇರಿ
ಬಯಲ ಆಲಯದಿ ಒಂಟಿ ಸವಾರಿ.

ಹಾದಿಯುದ್ಧಕೂ ಇಬ್ಬನಿ
ಕತ್ತಲ ಗವಿಯಲಿ ಬೆಳ್ಳಿ ಬೆಳಕು
ಹೂವಿನ ಹಾಸಿಗೆ
ಘಮ ಘಮಿಸೋ ಗಂಧ
ಸ್ವಾತಿ ಮಳೆಯ ಸುಖ ಉಂಡ ನೆಲ
ಕವಿತೆಗಳ ಹೊತ್ತು ಬರೋ ಗಾಳಿ.

ಜಗದಗಲ ಮುಗಿಲಗಲ
ಅವಳ ನೆನಪ ಒನಪ ತೇರು.

ಮನಸು ಪ್ರೀತಿಯ ಮೋಜಿಗೆ
ಒಳಗೊಳಗೆ ಸಿಲುಕಿ ಆಲಾಪಿಸುವ
ಬೆಚ್ಚನೆ ಕನಸಿಗೆ
ಕರಗುವ ಮೇಣಬತ್ತಿ.

ಹೃದಯದ ಅನಂತ ಬಯಲಲಿ
ಹರಿದಾಡೋ ಹಳವಂಡ
ರಂಗು ರಂಗಿನ ಚಿಟ್ಟೆ
ಬೆಳ್ಳಕ್ಕಿಗಳ ಸಾಲು.

ಕಚಗುಳಿ ಇಡುವ ಕಡಲ ಕಿನ್ನರಿ
ಮುಂಗುರುಳು ತೀಡಿದ ಚೆಲುವೆ
ಎದೆ ಪಣತಿಯಲಿ ಬೆಳಗು ದೀಪ
ಕೈಯ ಬೆರಳ ಸ್ಪರ್ಶ ಭಾಷೆಗೆ
ಧಿಮಿಗುಡುವ ಒಲವ ಒಡಲು.

ಸೂಜಿಗಲ್ಲಿನ ಕಣ್ಣಲಿ
ಪ್ರೀತಿ ಸುಗ್ಗಿ.

ಕುಲು ಕುಲು ನಗು ನಗುವಲ್ಲ
ಅದೆಂತಹದ್ದೋ ಮಿಂಚು ಮತ್ತು ತರಿಸೋ ಸಂಚು.

ನಿದಿರೆಗೆ ಜಾರಿದ ಕಂಗಳಿಗೆ
ನಕ್ಷತ್ರಗಳ ಝಲ್ಲರಿ , ಗೆಜ್ಜನಾದ
ದುಂಡು ಮಲ್ಲಿಗೆ ಮುಡಿದು
ನಗುತ್ತ ನಿಂತ
ಮಲ್ಲಿಗೆ ತೂಕದ ರಾಜಕುಮಾರಿ.

ದಿನವೂ ಕನಸಿನಲಿ ಕಂಡು
ಖುಷಿಯಿಂದ ನರಳುವ
ರಾಜಕುಮಾರಗೆ ಸುಖದ ಗಳಿಗೆ.

ಎದ್ದು ಹಿಡಿಯಲು ಹೋದವನ
ಕನಸ ಬಲೂನಿಗೆ
ಕತ್ತಲಿನ ವಾಸ್ತವ ಸೂಜಿ.

‍ಲೇಖಕರು Admin

7 July, 2026

1 Comment

  1. Savita Mudgal

    ಚಂದದ ರಚನೆ ಸರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading