ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆ ಸತ್ಯನಾರಾಯಣ ಅವರ 'ಪ್ರಸಂಗಗಳು'

ಕೆ ಸತ್ಯನಾರಾಯಣ ಅವರ ಹೊಸ ಕೃತಿ ‘ಮಾನ್ಯ ಸಾಮಾನ್ಯರ ಪ್ರಸಂಗಗಳು’ ಸದ್ಯದಲ್ಲೇ ಬಿಡುಗಡೆಯಾಗಲಿದೆ.
ಸನ್ನಿಧಿ ಪ್ರಕಾಶನ ಹೊರತರುತ್ತಿರುವ ಈ ಕೃತಿಯಲ್ಲಿ ಕೆ ಸತ್ಯನಾರಾಯಣ ಅವರು ಓದುಗರೊಡನೆ ಹಂಚಿಕೊಂಡ ಮಾತುಗಳು ಇಲ್ಲಿವೆ-

ಕೆ ಸತ್ಯನಾರಾಯಣ
ಓದುಗರೊಡನೆ
ಮೌಖಿಕ ಸಂಸ್ಕೃತಿಯು ರೂಪಿಸಿಕೊಂಡಿದ್ದ ಹಲವಾರು ನಿರೂಪಣಾ ಕ್ರಮಗಳಲ್ಲಿ ಪ್ರಸಂಗವೂ ಒಂದು. ಕತೆಯನ್ನೋ, ಅನುಭವವನ್ನೋ, ವಿಚಾರವನ್ನೋ ಇಲ್ಲ ಕೇಳಿದ ಒಂದೇ ಒಂದು ಮಾತನ್ನೋ ಇಲ್ಲ ನೋಡಿದ ಘಟನೆಯನ್ನೋ ಒಬ್ಬರಿಂದ ಒಬ್ಬರಿಗೆ ಬಾಯಿ ಮಾತಿನಲ್ಲಿ ಪ್ರಸಂಗದ ರೂಪದಲ್ಲಿ ದಾಟಿಸುತ್ತಿದ್ದರು/ ದಾಟಿಸುತ್ತಿದ್ದೆವು.
ಹೀಗೆ ದಾಟಿಸುವಾಗ ಅದು ಕತೆಯಾಗಬಹುದಿತ್ತು, ವ್ಯಾಖ್ಯಾನವಾಗಬಹುದಿತ್ತು, ಹರಟೆಯಾಗಬಹುದಾಗಿತ್ತು ಅಥವಾ ಈ ಎಲ್ಲ ಅಂಶಗಳು ಕೂಡ ಬೆರೆತು ಹೋಗುತ್ತಿದ್ದವು. ಇತಿಹಾಸ, ಪುರಾಣದಿಂದ ಕೂಡ ಆಪ್ತವಾದ ಭಾಗಗಳನ್ನು ಕೂಡ ಪ್ರಸಂಗಗಳನ್ನಾಗಿ ಪರಿವರ್ತಿಸಿಕೊಳ್ಳುತ್ತಿದ್ದುದು ಉಂಟು. ಇವುಗಳನ್ನೇ ಆಧರಿಸಿ ನಾಟಕಗಳನ್ನು ಆಡಿದ್ದು ಉಂಟು. ಅದಕ್ಕಾಗಿ ಒಂದು ಸಡಿಲವಾದ ಲಿಖಿತ ಪಠ್ಯವನ್ನು ಕೂಡ ತಯಾರಿಸಿಕೊಳ್ಳುತ್ತಿದ್ದರು. ಆದರೆ ಬಹುಪಾಲು ಪ್ರಸಂಗಗಳು ಲಿಖಿತ ರೂಪವನ್ನು ತಳೆಯುತ್ತಿರಲಿಲ್ಲ. ಹಲವು ರೀತಿಯ ಸೊಗಡಿನ/ಒಗರಿನ ಮಾತುಕತೆಯೇ ಪ್ರಸಂಗದ ಜೀವಾಳ. ಬಯಲಾಟ, ಯಕ್ಷಗಾನದ ಪ್ರಸಂಗಗಳಲ್ಲಿ ಪ್ರಸಂಗವು ತಳೆಯುತ್ತಿದ್ದ, ಬೆಳೆಯುತ್ತಿದ್ದ ರೂಪವನ್ನು ಕೂಡ ಗಮನಿಸಬಹುದು. ಪ್ರಸಂಗ ದಿನನಿತ್ಯದ ಬದುಕಿನಲ್ಲಿ, ಬವಣೆಯಲ್ಲಿ ಲೋಕಾಭಿರಾಮವಾಗಿ ಚಾಲ್ತಿಯಲ್ಲಿದ್ದುದೇ ಹೆಚ್ಚು.
ಕಥೆ ಲಿಖಿತ ಪಠ್ಯದ ರೂಪಕ್ಕೆ ಹೆಚ್ಚಾಗಿ ಹೊರಳಿಕೊಂಡ ಮೇಲೆ ಮಾತಿನ ಅಂಶ, ಅಗತ್ಯ ಮತ್ತು ಆತ್ಮೀಯತೆ ಎಲ್ಲವೂ ಕಡಿಮೆಯಾದವು. ಮನುಷ್ಯನು ಆಡುವ ಮಾತಿಗಿಂತ ಬರೆದ / ಮುದ್ರಿಸಿದ ಅಕ್ಷರಕ್ಕೆ ಹೆಚ್ಚು ಮಹತ್ವ ಬಂತು. ಕಥನದ ಕೆಲವು ಮಾದರಿಗಳು ಮಾತುಕತೆಯನ್ನು ಉಪಯೋಗಿಸಿಕೊಂಡರೂ ಕಥೆಯು ಈಗ ಸಮುದಾಯದ ಸೃಷ್ಟಿಯಲ್ಲ. ಕಲಾವಿದನ, ಬರೆಯುವವನ ವೈಯಕ್ತಿಕ ಸೃಷ್ಟಿ. ಸಮುದಾಯವು ಕಥೆಯೊಂದನ್ನು ಸೃಷ್ಟಿಸುವಾಗ, ಜೀವಂತವಾಗಿ ಇಡುವಾಗ ಸಮುದಾಯದ ಮಂದಿಯೆಲ್ಲ ಅದರಲ್ಲಿ ಸಮಾನ ನೆಲೆಯಲ್ಲಿ ಭಾಗವಹಿಸುತ್ತಾರೆ. ಲಿಖಿತ ಸ್ವಭಾವಕ್ಕೆ ಬಂದರೆ, ಬರೆಯುವವನೇ ಬೇರೆ, ಓದುವವನೇ ಬೇರೆ, ಓದುಗರು ಕೂಡ ಸಹಲೇಖಕರು ಎಂದು ನವ್ಯೋತ್ತರ ಮೀಮಾಂಸೆ ಹೇಳಿದರೂ, ಕಥೆಯ ಸೃಷ್ಟಿ ಮತ್ತು ಪ್ರಸಾರ ಎರಡೂ ತನ್ನ ಸಾಮದಾಯಿಕ ಗುಣವನ್ನು ಕಳೆದುಕೊಂಡಿದೆ. ಇವೆಲ್ಲ ಮಾತುಗಳು ಈಗ ಕೇವಲ ಹಳೆಯ ಸಮಾಚಾರವಾಗಿ ಮಾತ್ರ ಕಾಣುವ ಕಾಲದಲ್ಲಿ ನಾವು ಬದುಕುತ್ತಿದ್ದೇವೆ.
ಈ ಕೃತಿಯಲ್ಲಿ ಬರಹ ರೂಪ ತಾಳಿರುವ ಪ್ರಸಂಗಗಳನ್ನು ಅಕ್ಷರದಲ್ಲಿ ಇಳಿಸುತ್ತಿದ್ದಾಗ ನನ್ನ ಮನಸ್ಸಿನಲ್ಲಿ ಮೂಡಿದ ವಿಚಾರಗಳನ್ನು ಓದುಗರೊಡನೆ ಹಂಚಿಕೊಂಡಿದ್ದೇನೆ.
ನನ್ನ ಬಾಲ್ಯ, ಕೌಟುಂಬಿಕ ಜೀವನ, ವೃತ್ತಿ ಬದುಕು, ಸಾಂಸ್ಕೃತಿಕ ಒಡನಾಟದಲ್ಲಿ ಕಂಡು ಕೇಳಿದ ಕೆಲವು ಪ್ರಸಂಗಗಳನ್ನು ಓದುಗರ ಮುಂದೆ ಮಂಡಿಸುತ್ತಿದ್ದೇನೆ. ಇವುಗಳಲ್ಲಿ ಕೆಲವು ವ್ಯಾಖ್ಯಾನಗಳಾಗಿವೆ. ಇನ್ನು ಕೆಲವು ಕತೆಯ, ಪ್ರಬಂಧದ ಜಾಡನ್ನು ಹಿಡಿಯುತ್ತಿರುವಂತೆ ಕಂಡರೂ ನಿಜದಲ್ಲಿ ಅವು ಕತೆಗಳಲ್ಲ, ಪ್ರಬಂಧಗಳಲ್ಲ. ಹಾಗೆ ಆಗಬೇಕೆಂಬ ಆಸೆ ಕೂಡ ನನಗಿಲ್ಲ. ಇವುಗಳ ಜೀವಂತಿಕೆ, ಆತ್ಮೀಯತೆ, ಮುಕ್ತಸಾಧ್ಯತೆ-ಸ್ವಭಾವ ನನ್ನನ್ನು ಆಕರ್ಷಿಸಿದೆ. ಓದುಗರಿಗೂ ಅವರವರ ಬದುಕಿನ ಪ್ರಸಂಗಗಳನ್ನು ಮತ್ತೆ ರೂಪಿಸಿಕೊಳ್ಳಲು, ಹಂಚಿಕೊಳ್ಳಲು ಈ ಬರವಣಿಗೆಯಿಂದ ಪ್ರೇರಣೆ ಸಿಕ್ಕರೆ ನನಗೆ ಸಂತೋಷವಾಗುತ್ತದೆ.
ಒಂದು ಆಪ್ತ ಮತ್ತು ಸೂಕ್ಷ್ಮ ಸಂದರ್ಭದಲ್ಲಿ ಹಿರಿಯರಾದ ಪ್ರಿಯ ಶ್ರೀ ಡಿ ಕೆ ಶ್ಯಾಮಸುಂದರರಾವ್ ನನ್ನಿಂದ ಒಂದು ಕೃತಿಯನ್ನು ಅವರ ಪ್ರಕಾಶನಕ್ಕೆ ಅಪೇಕ್ಷಿಸಿ ಪ್ರೀತಿಯಿಂದ ಆಗ್ರಹಿಸಿದರು. ಮೂರು ದಶಕಗಳಿಂದ ಬಲ್ಲ ಈ ನಿಸ್ಪೃಹ ಹಿರಿಯರ ಒತ್ತಾಯಕ್ಕೆ ಇಲ್ಲವೆನ್ನಲು ನನಗೆ ಯಾವ ಕಾರಣಗಳೂ ಇರಲಿಲ್ಲ. ಮನಸ್ಸೂ ಇರಲಿಲ್ಲ.
ಒಂದು ಇಳಿ ಮಧ್ಯಾಹ್ನ ಹೀಗೆ ಮಾತನಾಡುತ್ತಾ ಕುಳಿತಿದ್ದಾಗ ಟಿ ಎಸ್ ರಘುನಾಥ್, ಶ್ರೀ ಟಿ ವಿ ವೆಂಕಟಾಚಲ ಶಾಸ್ತ್ರಿಗಳ ‘ಉದಾರ ಚರಿತರು’ ‘ಉದಾತ್ತ ಪ್ರಸಂಗಗಳು’ ಕೃತಿಯ ಬಗ್ಗೆ ಪ್ರಸ್ತಾಪಿಸಿದರು. ಮಾತುಕತೆ ಡಿವಿಜಿಯವರ ‘ಜ್ಞಾಪಕ ಚಿತ್ರಶಾಲೆ’ಯ ಕಡೆ ಕೂಡ ಹೊರಳಿತು. ನಾವು ಬಹುಪಾಲು ಜನ ಉದಾತ್ತರಲ್ಲ. ಉದಾತ್ತರೊಡನೆ ನಮಗೆ ಸಿಕ್ಕುವ ಒಡನಾಟ ಕೂಡ ಕಡಿಮೆ. ಉದಾತ್ತವಾದ ಅನುಭವಗಳು, ಘಟನೆಗಳು ಕೂಡ ನಮಗೆ ಎದುರಾಗುವುದಿಲ್ಲ. ಬಹುಪಾಲು ನಮ್ಮ ಜೀವನ ಕ್ಷುದ್ರವಾದದ್ದು, ಸಾಧಾರಣವಾದದ್ದು. ಅದನ್ನು ಮೀರುವ ಆಸೆ ಕೂಡ ನಮಗಿಲ್ಲದಿರಬಹುದು. ಆಸೆ ಪಟ್ಟರೂ ನಮ್ಮ ಆಸೆ ತೀವ್ರವಾಗಿಲ್ಲದಿರಬಹುದು. ಆದರೂ ನಮ್ಮಂತವರ ಯಃಕಶ್ಚಿತ್ ಜೀವನದಲ್ಲೂ ಅನೇಕ ಪ್ರಸಂಗಗಳು ನಡೆಯುತ್ತವೆ, ಎದುರಾಗುತ್ತವೆ, ಜೀವಂತಿಕೆಯಿಂದ ಕಂಗೊಳಿಸುತ್ತವೆ. ಇಲ್ಲಿರುವುದು ಅಂತಹ ಪ್ರಸಂಗಗಳ ಪರಟಾವಣೆ.
ರಘುನಾಥರ ಹತ್ತಿರ ಮಾತನಾಡಿದ ಮೇಲೆ ಬರವಣಿಗೆ ಶುರು ಮಾಡಿಕೊಂಡು ಕೆಲವು ಪ್ರಸಂಗಗಳನ್ನು ಅವರೊಡನೆ ಹಂಚಿಕೊಂಡೆ. ಮಾನ್ಯರಿಗೆ ಇಷ್ಟವಾದವು. ದೂರವಾಣಿಯಲ್ಲಿ ಮಾತ್ರ ಸಿಗುವ ಎಚ್ ಎಸ್ ರಾಘವೇಂದ್ರರಾವ್ ರೊಡನೆ ಪ್ರಸಂಗವೆಂಬ ಪ್ರಕಾರದ ಬಗ್ಗೆ ಕೆಲವು ಸ್ಪಷ್ಟೀಕರಣಗಳನ್ನು ಪಡೆದುಕೊಂಡೆ. ಮತ್ತೆ ಇನ್ನೊಂದಿಷ್ಟು ಪ್ರಸಂಗಗಳನ್ನು ಬರೆದಾದ ಮೇಲೆ ರಘುನಾಥರೊಡನೆ ಕೆ ವಿ ನಾರಾಯಣರನ್ನು ಕಂಡು ಪ್ರಸಂಗ ಪ್ರಕಾರದ ಸ್ವರೂಪ-ಸಾಧ್ಯತೆ, ಬದಲಾಗುತ್ತಿರುವ ಸ್ವರೂಪದ ಬಗ್ಗೆ ಮತ್ತಷ್ಟು ಒಳ ನೋಟಗಳನ್ನು ಪಡೆದೆವು. ಈ ಮೂವರು ಮಹನೀಯರ ಜೊತೆ ನಡೆಸಿದ ಮಾತುಕತೆಯಿಂದ ಮೂಡಿದ ವಿಶ್ವಾಸದ ಹಿನ್ನೆಲೆಯಲ್ಲಿ ಕೃತಿ ಈ ರೂಪದಲ್ಲಿ ಓದುಗರ ಮುಂದಿದೆ.
ತಮ್ಮ ನೂರೆಂಟು ಕೆಲಸ-ಪ್ರವಾಸಗಳ ನಡುವೆ ಸಮಯ ಮಾಡಿಕೊಂಡು ಎಚ್ ಆರ್ ಪ್ರಕಾಶ್ ಬರವಣಿಗೆಯನ್ನು ಪ್ರಕಟಣೆಗೆ ಸಿದ್ಧಪಡಿಸಿದರು. ವಿನಾಯಕ್ ಕುಲಕರ್ಣಿ ಕರಡು ತಿದ್ದುವುದರಲ್ಲಿ ನೆರವಾದರು. ಸೌಮ್ಯ ಕಲ್ಯಾಣ್ ಕರರು ಮುಖಪುಟವನ್ನು ರಚಿಸಿಕೊಟ್ಟರು.
ಈ ಪ್ರಸಂಗಗಳನ್ನು ಓದಿ ತಮ್ಮ ಅಭಿಪ್ರಾಯ ತಿಳಿಸಿದ ಗಿರೀಶ್ ವಾಘ್, ಆನಂದರಾಮ ಉಪಾಧ್ಯ, ಜಿ ಎಸ್ ಶ್ರೀನಿವಾಸನ್ ರವರಿಗೆ ಕೂಡ ವಂದಿಸುತ್ತೇನೆ.
ಈ ಕೃತಿ ಪ್ರಕಟವಾಗುತ್ತಿರುವಾಗ ಬರಹಗಾರನಾಗಿ ನನಗೊಂದು ಆತಂಕವೂ ಇದೆ. ಈ ಪ್ರಸಂಗಗಳೆಲ್ಲ ನಾನು ನೋಡಿದ್ದು, ಕೇಳಿದ್ದು, ಭಾಗವಹಿಸಿದ್ದು. ಪ್ರತಿಯೊಬ್ಬ ಮನುಷ್ಯನಿಗೂ ಒಂದು ಜೀವನ ಮಾದರಿಯಿರುತ್ತದೆ. ಅದರ ಪ್ರಕಾರ ಅವನಿಗೆ ಬದುಕುವ, ಸಾಯುವ ಹಕ್ಕಿರುತ್ತದೆ. ಮನುಷ್ಯರ ಖಾಸಗಿತನ, ಘನತೆಯನ್ನು ಬರವಣಿಗೆ ಪರಿಣಾಮಕಾರಿಯಾಗಲೆಂದು ಕೊಂದು ಹಾಕುವ ಹಕ್ಕು ಲೇಖಕನಿಗೂ ಇರುವುದಿಲ್ಲ ಎಂದು ನಂಬಿದವನು ನಾನು. ಈ ಬರವಣಿಗೆಯಿಂದ ಯಾರೊಬ್ಬರ ಘನತೆ, ಪಾವಿತ್ರ್ಯಕ್ಕೆ ಮುಕ್ಕು ಬಂದಿಲ್ಲವೆಂದು ನಂಬಿದ್ದೇನೆ. ನನ್ನನ್ನು ಮೀರಿ ಆಗಿರಬಹುದಾದ ಪ್ರಮಾದಗಳಿಗಾಗಿ ಅವರೆಲ್ಲರ ಕ್ಷಮೆ ಕೋರುತ್ತೇನೆ.

‍ಲೇಖಕರು avadhi

17 May, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading