ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆ ರಾಮಯ್ಯ ಗುಡುಗು: ‘ಇಂದಿನ ದಲಿತ ನಾಯಕತ್ವ ಡಕಾಯಿತರ ತಂಡ’

ಕೆ ರಾಮಯ್ಯ ಅವರು ಸಂಡೆ ಇಂಡಿಯನ್ ಗೆ ನೀಡಿದ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ. ಚರ್ಚೆಗೆ ಸ್ವಾಗತ

ಹರ್ಷಕುಮಾರ್ ಕುಗ್ವೆ

70ರ ದಶಕದಲ್ಲಿ ಕುಡಿಯೊಡೆದು ಹಬ್ಬಿದ ದಲಿತ ಚಳವಳಿಯ ಸ್ಥಾಪಕ ಸದಸ್ಯರಲ್ಲೊಬ್ಬರಾದ ಕೋಟಗಾನಹಳ್ಳಿ ರಾಮಯ್ಯನವರು ತಮ್ಮದೇ ವಿಶಿಷ್ಟ ಚಿಂತನೆ, ಪ್ರಯೋಗಗಳಿಗೆ ಹೆಸರಾದವರು. ಇತ್ತೀಚೆಗೆ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಇವರು ಸಮಕಾಲೀನ ಸ್ಥಿತಿಗತಿಗಳ ಬಗ್ಗೆ ಹರ್ಷಕುಮಾರ್ ಕುಗ್ವೆ ಜೊತೆ ನಡೆಸಿದ ಮಾತುಕತೆ

ಕನ್ನಡ ಸಾಹಿತ್ಯ ಇಂದು ಯಾವ ದಿಸೆಯಲ್ಲಿ ಸಾಗುತ್ತಿದೆ ಎಂದು ಭಾವಿಸುತ್ತೀರಿ?

ಇಂದು ಸಾಹಿತಿಗಳೆನಿಸಿಕೊಂಡವರು ಅದನ್ನು ಒಂದು ಮಾಹಿತಿಯಾಗಿ ಮಾತ್ರ ನೋಡುತ್ತಿದ್ದಾರೆಯೇ ವಿನಃ ಅದರಾಚೆಗೆ ನೋಡುತ್ತಿಲ್ಲ. ಇವರಿಗೆ ಸಾಹಿತ್ಯ ರಚನೆ ಒಂದು ಚಟದ ಮಟ್ಟಕ್ಕೆ ಉಳಿದಿದೆಯೇ ಹೊರತು ಬದುಕಿಗೆ ಅನ್ವಯವಾಗುವ ನಿಟ್ಟಿನಲ್ಲಿ ಅಲ್ಲ. ಕಳೆದ ಹತ್ತು ವರ್ಷಗಳಲ್ಲಿ ಒಂದೇ ಒಂದು ಮೌಲಿಕ ಸಾಹಿತ್ಯ ರಚನೆಯಾಗಿದ್ದು ನನಗಂತೂ ಗೊತ್ತಿಲ್ಲ. ಬರೀ ಮಾತು, ಚರ್ಚೆ ಹಾಗೂ ಜ್ಞಾನವನ್ನು ಹೆಚ್ಚಿಸಿಕೊಂಡರೆ ಉಪಯೋಗವಿಲ್ಲ. ಅಂಕ ಸಿಗಬಹುದು, ಪಿಎಚ್‌ಡಿ ಗೌರವ ಸಿಗಬಹುದಷ್ಟೆ. ಯಾವುದೇ ಸಾಹಿತ್ಯದ ಪ್ರಸ್ತುತತೆಯನ್ನು ನಿರ್ಧರಿಸುವುದು ಅದು ಆಯಾ ಕಾಲದಲ್ಲಿ ಎಷ್ಟರ ಮಟ್ಟಿಗೆ ಅನ್ವಯವಾಗುತ್ತದೆ ಎನ್ನುವುದು. ಎಪ್ಪತ್ತರ ದಶಕದಲ್ಲಿ ಅಂತಹ ಒಂದು ಅರ್ಥಪೂರ್ಣ ಸಾಹಿತ್ಯ ಹೊರಹೊಮ್ಮಿದ್ದನ್ನು ನಾವು ಕಾಣಬಹುದು. ಆಗ ನಮ್ಮ ಸಮಾಜವೇ ಒಂದು ಸ್ಫೋಟಕ್ಕೆ ಕಾಯ್ತಿದೆ ಎನ್ನುವ ರೀತಿ ಕುದಿಯುತ್ತಾ ಇತ್ತು. ಆದರೆ ಆ ಒತ್ತಡದ ಸ್ಥಿತಿ ಈಗ ಏರ್ಪಡುತ್ತಿಲ್ಲ. ಎಲ್ಲವೂ ವಿಭಜನೆಗೊಂಡು ಹೋಗುತ್ತಿದೆ. ಒಟ್ಟಾರೆಯಾಗಿ ನೋಡುತ್ತಿದ್ದ ದೃಷ್ಟಿಗಿಂತ ವ್ಯಕ್ತಿಗತ ನೆಲೆಯಲ್ಲಿ, ಅವರವರದೇ ಆದ ಅನನ್ಯತೆಗಳಲ್ಲಿ ರಾಜಕಾರಣದ ಹುಡುಕಾಟದಲ್ಲಿದ್ದಾರೆ. ಒಬ್ಬೊಬ್ಬರೂ ಒಂದೊಂದು ರೀತಿ ನೋಡುತ್ತಾ ಅಂತಿಮವಾಗಿ ಎಲ್ಲಿ ತಲುಪಬೇಕೋ ಆ ದಿಕ್ಕಿನಲ್ಲಿ ಸಂಘಟಿತ ರೀತಿಯಲ್ಲಿ ಚಲಿಸುತ್ತಿಲ್ಲ. ಹೀಗಾದಾಗ ರಾಜಕಾರಣ, ಸಂಸ್ಕೃತಿ, ಚಳವಳಿಗಳಲ್ಲಿ ಒಂದು ಪ್ರತಿರೋಧದ ನೆಲೆಯೇ ಇಲ್ಲವಾಗಿ ಬಿಡುತ್ತದೆ. ಜಾಗತೀಕರಣದ ಮಾರುಕಟ್ಟೆ ಆರ್ಥಿಕತೆಯ ಸಾಂಸ್ಕೃತಿಕ ಅಜೆಂಡಾಗಳೂ ಇದಕ್ಕೆ ಕಾರಣವಾಗಿವೆ. ಇದು ಮನುಷ್ಯನನ್ನು ವ್ಯಕ್ತಿಯಲ್ಲಿ ಕೊನೆಗೊಳಿಸುತ್ತಿದೆ. ವ್ಯಕ್ತಿ ಹಾಗೂ ಸಮಷ್ಟಿ ನಡುವಿನ ಬಿಕ್ಕಟ್ಟನ್ನು ಪರಿಹಾರ ಮಾಡಿಕೊಳ್ಳಲು ನಾವು ಅಸಮರ್ಥರಾಗುತ್ತಿದ್ದೇವೆ. ನಮ್ಮ ಉಳಿವಿನ ಪ್ರಶ್ನೆಯನ್ನು ಕೇವಲ ವೈಯಕ್ತಿಕ ನೆಲೆಯಲ್ಲಿ ತೆಗೆದುಕೊಂಡು ಹೋಗುತ್ತಿರುವುದು ದುರಂತ.

ಮಂಟೇಸ್ವಾಮಿ, ಮಲೆಮಾದೇಶ್ವರ, ಜುಂಜಪ್ಪಗಳಂಥ ನಾಡಿನ ಮೌಖಿಕ ಕಾವ್ಯಗಳ ಪ್ರಾಮುಖ್ಯತೆಯನ್ನು ಹೇಗೆ ಗುರುತಿಸುತ್ತೀರಿ?

ಜನಪದರು ಸೃಷ್ಟಿಸಿರುವ ಮಹಾಕಾವ್ಯಗಳ ಕಡೆ ಗಮನ ಹರಿಸಬೇಕು ಎಂದು ಮನವರಿಕೆಯಾಗುತ್ತಿರುವುದು ತೀರಾ ಇತ್ತೀಚೆಗೆ. ನಮ್ಮ ಸಾಂಸ್ಕೃತಿಕ ಅಧ್ಯಯನಗಳು ಹಾಗೂ ಸಮಾಜಶಾಸ್ತ್ರೀಯ ಅಧ್ಯಯನಗಳು ಅಥವಾ ಜನಪದ ಅಧ್ಯಯನಗಳು ಕಾಲ ಕಾಲಕ್ಕೆ ಬಿಕ್ಕಟ್ಟನ್ನು ಸೃಷ್ಟಿಸಿದಾಗ ಅವಕ್ಕೆ ಉತ್ತರಗಳನ್ನು ಹುಡುಕುವ ಪ್ರಕ್ರಿಯೆಯಲ್ಲಿ ಇದುವರೆಗೆ ಕೇವಲ ಶಾಸ್ತ್ರೀಯ ಆಕರಗಳನ್ನು ಆಧಾರವಾಗಿಟ್ಟುಕೊಳ್ಳಲಾಗುತ್ತಿತ್ತು. ಈಗ ಈ ಕ್ರಮಕ್ಕೆ ಹೊರತಾಗಿ ಮೌಖಿಕವನ್ನು ಪರಿಗಣಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಲಾಗಾಯ್ತಿನಿಂದಲೂ ನಮ್ಮ ಸಾಂಸ್ಕೃತಿಕ ಅಧ್ಯಯನದ ತಳಹದಿ ಯಾವಾಗಲೂ ಶಾಸ್ತ್ರೀಯವಾದದ್ದೇ. ನಂತರ ಈ ನೆಲಕ್ಕೆ ಸಂಬಂಧಿಸಿದ್ದನ್ನು ನೋಡಿದಾಗ ಮಲೆಮಾದೇಶ್ವರ, ಜುಂಜಪ್ಪ ಕಾವ್ಯ, ಧರೆಗೆ ದೊಡ್ಡವರು ಕಾವ್ಯ ಅಥವಾ ಜನಪದ ಮಹಾಭಾರತ, ಇತ್ಯಾದಿಗಳೆಲ್ಲಾ ಸಿಕ್ಕಿವೆ. ಆದರೆ ವಿಶ್ವವಿದ್ಯಾನಿಲಯಗಳಲ್ಲಿರುವ ವಿದ್ವಾಂಸರು ತಮ್ಮ ವೈಯಕ್ತಿಕವಾದ ವರ್ಚಸ್ಸು, ಅಥವಾ ಡಾಕ್ಟರೇಟ್‌ಗಳಿಗಾಗಿ ಇವುಗಳನ್ನು ನೋಡುತ್ತಿದ್ದಾರೆಯೇ ವಿನಃ ಅದರಾಚೆಗೆ ಅವುಗಳ ಸಾಧ್ಯತೆಯನ್ನು ನೋಡುವ ಪ್ರಯತ್ನ ಅಷ್ಟಾಗಿ ಮಾಡಿಲ್ಲ. ನಮ್ಮ ಪರಂಪರೆಯನ್ನು ಕಟ್ಟುವುದು ಅಥವಾ ಅರ್ಥಮಾಡಿಕೊಳ್ಳುವುದು ಎಂದರೆ ಇವನ್ನು ಶ್ರದ್ಧೆಯಿಂದ ನೋಡುವ ಅಗತ್ಯ ಬೀಳುತ್ತದೆ. ನಮ್ಮ ಸಾಂಸ್ಕೃತಿಕ, ಪರಂಪರೆಯಲ್ಲಿ ಪ್ರತಿರೋಧದ ನೆಲೆಗಳನ್ನು ಅರ್ಥ ಮಾಡಿಕೊಳ್ಳಲು ನಮಗಿರುವ ಪ್ರಮುಖ ಆಕರಗಳು ಇವೇ. ಅವುಗಳ ಪ್ರತಿ ವಿವರಗಳನ್ನೂ ಸಹ ಬೇರೆ ಬೇರೆ ರೀತಿಯ ಜ್ಞಾನ ಶಿಸ್ತುಗಳ ಮೂಲಕ ಕಂಡುಕೊಳ್ಳಬೇಕಾಗುತ್ತದೆ.

 

ನಮ್ಮಲ್ಲಿ ಜನಪದ ಅಧ್ಯಯನ ಉತ್ತಮ ಮಟ್ಟದಲ್ಲಿ ಇದೆಯಲ್ಲಾ?

ಜನಪದ ಕುರಿತಂತೆ ಕರ್ನಾಟಕ ಬಿಟ್ಟರೆ ಬೇರೆಲ್ಲೂ ಹೆಚ್ಚಿನ ಕೆಲಸ ಆಗಿಲ್ಲ ಎಂದು ಹೇಳುತ್ತಾರೆ. ಸಂಗ್ರಹ, ಸಂರಕ್ಷಣೆ ಹಾಗೂ ಮುಖ್ಯವಾಹಿನಿಗೆ ಅದನ್ನು ಮರುಪರಿಚಯ ಬಹಳ ದೊಡ್ಡ ಮಟ್ಟದಲ್ಲಿ ಆಗಿದೆ ಎನ್ನುತ್ತಾರೆ. ನಾನೂ ಸಹ ಗಮನಿಸಿದ್ದೇನೆ. ಸಂಖ್ಯೆಯ ಹಾಗೂ ಪ್ರಮಾಣದ ದೃಷ್ಟಿಯಿಂದ ಈ ಮಾತು ನಿಜ. ಆದರೆ ದೃಷ್ಟಿಕೋನದ ವಿಷಯಕ್ಕೆ ಬಂದರೆ ನಾನು ಗಮನಿಸಿರುವ ಯಾವುದೇ ಅಧ್ಯಯನದಲ್ಲಿ ಬಹಳ ಜವಾಬ್ದಾರಿಯುತ ಹುಡುಕಾಟ ಬಹಳ ಕಡಿಮೆ. ಅದು ತೀರಾ ಬೆರಳೆಣಿಕೆಯಷ್ಟಿದೆ. ಈ ಕಾವ್ಯಗಳು ನಮ್ಮ ಹಿಂದಿನ ಜನಪದರು ತಮ್ಮ ಉಳಿವಿಗೋಸ್ಕರ ತಾವೇ ಕಟ್ಟಿಕೊಂಡಿರುವ ಆಕರಗಳು. ’ಉಳಿವಿಗಾಗಿನ ಪಠ್ಯಗಳು’ ಎಂದು ನಾನವುಗಳನ್ನು ಕರೆಯುತ್ತೇನೆ. ನಮ್ಮ ಅಕಡೆಮಿಕ್ಸ್‌ನ ಮಿತಿಯಿಂದಾಗಿ ಅವು ಇಂದು ಬರೀ ಪಠ್ಯಗಳಾಗಿ ಕಾಣುತ್ತಿವೆ. ರಾಷ್ಟ್ರ ಮಟ್ಟದಲ್ಲಿ ಸಬಾಲ್ಟರ್ನ್ ಅಧ್ಯಯನ ಎಂದು ಶುರುವಾಯ್ತು. ರಾಜ್ಯದಲ್ಲೂ ಬರಗೂರು ರಾಮಚಂದ್ರಪ್ಪ, ಹಂಪಿ ವಿವಿಗಳಂತಹ ಕಡೆ ಉಪಸಂಸ್ಕೃತಿಗಳ ಅಧ್ಯಯನ ಮುಂತಾಗಿ ಸಾಕಷ್ಟು ಕೃಷಿ ನಡೆಸುತ್ತಿದ್ದಾರೆ. ಆದರೆ ಈ ಕೃಷಿಯಲ್ಲಿರುವ ತೊಡಕು ಏನೆಂದರೆ ಅವುಗಳನ್ನು ಕೂಡಾ ಒಂದು ರೀತಿ ಅಕೆಡೆಮಿಕ್ ಕಸರತ್ತಾಗಿ ನೋಡಲಾಗುತ್ತಿದೆ. ಅದನ್ನು ಬಿಟ್ಟು ನಮ್ಮೆಲ್ಲರ ಭವಿಷ್ಯ ರಾಜಕಾರಣಕ್ಕೆ ಇವುಗಳನ್ನು ನೋಡಬೇಕಾದ ದೃಷ್ಟಿಕೋನದ ಕೊರತೆ ಇದೆ. ಪರಿಣಾಮವಾಗಿ ಅವು ಮ್ಯೂಸಿಯಂನಲ್ಲಿಡುವ ಸ್ಮಾರಕಗಳಾಗಿ ಮಾತ್ರ ಆಗಿಬಿಡುತ್ತಿವೆ.

 

ಇತ್ತೀಚೆಗೆ ನಡೆದ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ತೀರಾ ಕಡಿಮೆ ಜನರು ಪಾಲ್ಗೊಂಡಿದ್ದರಲ್ಲಾ?

ಸಂಖ್ಯೆ ಮುಖ್ಯ ಅಲ್ಲ. ಅಂದು ದಲಿತ ಲೇಖಕ ಯುವಕರ ಸಂಘದ ಸಮಾವೇಶ ಭದ್ರಾವತಿಯಲ್ಲಿ ಮೊದಲ ಬಾರಿಗೆ ನಡೆದಾಗ ಅಬ್ಬಬ್ಬಾ ಎಂದರೆ ನೂರು ಜನ ಸೇರಿದ್ದರು ಅಷ್ಟೆ. ಆದರೆ ಅಷ್ಟು ಜನ ಸೇರಿಕೊಂಡು ಏನು ಮಾಡುತ್ತಾರೆ? ಏನು ಮಾತಾಡುತ್ತಾರೆ ಎಂಬುದು ಮುಖ್ಯ. ನನಗಂತೂ ಇವತ್ತಿನ ಈ ದಲಿತ ಸಾಹಿತ್ಯ, ಚಳವಳಿ ಬಗ್ಗೆ ಆಸಕ್ತಿಯೂ ಉಳಿದಿಲ್ಲ. ಆ ಅಧ್ಯಾಯವನ್ನು ನನ್ನ ನೆನಪಿನಿಂದಲೇ ಅಳಿಸಿ ಹಾಕಿಬಿಡಬೇಕು ಎಂದುಕೊಂಡಿದೀನಿ. ನನ್ನ ಪ್ರಕಾರ ಇಲ್ಲಿ ಮಾಡ್ತಿರೋದೆಲ್ಲ ಶವಸಂಸ್ಕಾರಕ್ಕೆ ಸಮಾನವಾದದ್ದು. ದಲಿತ ಸಂಘಟನೆ ಎಂದೋ ಸತ್ತು ಹೋಗಿದೆ. ಅದಕ್ಕೆ ಶ್ರಾದ್ಧದ ಮೂಲಕ ಉಳಿಸೋಕೆ ನೋಡುತ್ತಿದ್ದಾರೆ. ಅದನ್ನು ಹೂತು ಹಾಕಿ ಅದರ ಸ್ಫೂರ್ತಿಯಲ್ಲಿ ಬೇರೆ ಬೇರೆಯದನ್ನು ನೋಡಬೇಕಾದ ತಾಕತ್ತಾಗಲಿ, ದೃಷ್ಟಿಕೋನವಾಗಲಿ ಅಥವಾ ಅದು ಮುಖ್ಯ ಎನ್ನುವ ಪ್ರಜ್ಞೆಯಾಗಲಿ ಅವರಿಗಿಲ್ಲ. ಹೀಗಾಗಿ ಪ್ರಜ್ಞಾಹೀನರ ಜೊತೆಗೆ ಒಡನಾಟ ಬೇಡ ಎಂದು ನಿಲ್ಲಿಸಿ ಬಿಟ್ಟಿದ್ದೇನೆ. ಬಹುಪಾಲು ದಲಿತ ಜಗತ್ತು ನನ್ನನ್ನು ದೂರ ಇಟ್ಟಿದೆ. ’ನೀವು ಮಾತಾಡಬಾರದು’ ಎಂದು ಆಜ್ಞೆ ಮಾಡಿದೆ. ಇಂದು ದಲಿತ ನಾಯಕತ್ವ ಏನಿದೆಯಲ್ಲಾ ಅದು ನಾಯಕತ್ವ ಅಲ್ಲ. ಅದು ಡಕಾಯಿತರ ತಂಡ. ಇವರು ದುಡ್ಡು ವಸೂಲಿಗೆ ಇಳಿದಿರುವಂತವರು. ಈ ಬಗ್ಗೆ ನನ್ನನ್ನು ಹೆಚ್ಚು ಕೇಳದಿರುವುದು ಒಳ್ಳೆಯದು. ಇಂದಿನ ಚಳವಳಿಗಾರರು ಅಂದಿನ ದಲಿತ ಚಳವಳಿಯ ಪರಂಪರೆಯ ಮುಂದುವರಿಕೆಯಾಗಿ ನನಗೆ ಕಾಣುತ್ತಿಲ್ಲ.

 

ನಾಡಿನ ಸಮಕಾಲೀನ ಸಾಂಸ್ಕೃತಿಕ ಲೋಕಕ್ಕೆ ನೀವು ನಡೆಸುತ್ತಿರುವ ’ಆದಿಮ’ದ ಕೊಡುಗೆ ಏನು?

ಆದಿಮವನ್ನು ತುಂಬಾ ಆದರ್ಶವಾಗಿ ನೋಡುವ ಅಗತ್ಯ ಇಲ್ಲ. ಅದು ತನ್ನ ಅತ್ಯಂತ ಕಡಿಮೆ ಮಿತಿಯಲ್ಲೇ ನಮ್ಮ ನೆಲಪಠ್ಯಗಳನ್ನು ಆಧರಿಸಿದರೆ ಒಂದು ತಿಳಿವಳಿಕೆ ಹೇಗೆ ವಿಸ್ತರಿಸಬಹುದು ಮತ್ತು ಅದೇ ಒಂದು ನಡೆಗೆ ಕಾರಣವಾಗಬಹುದಾ ಎಂಬ ಪ್ರಯೋಗದಲ್ಲಿದೆ. ಆ ಪ್ರಯೋಗ ಪರಿಪೂರ್ಣವಾಗಿ ಕೈಗೆ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಈಗಿರುವಂತಹ ಎಲ್ಲ ಸಾಂಸ್ಕೃತಿಕ ನೆಲೆಗಟ್ಟುಗಳಿಗಿಂತಲೂ, ಇಲ್ಲಿ ಸ್ಥಾಪಿತವಾಗಿರುವ ಬೆಂಚ್ ಮಾರ್ಕ್‌ಗಳೇನಿವೆ- ಎನ್‌ಎಸ್‌ಡಿ, ನೀನಾಸಂ ಇತ್ಯಾದಿಗಳ ಬೌದ್ಧಿಕ ದಾರಿದ್ರ್ಯ ಮತ್ತು ಜನನಿಷ್ಠೆಯಿಲ್ಲದಿರುವ ಆಷಾಢಭೂತಿತನಕ್ಕೆ ಬದಲಾಗಿ ಸ್ವಲ್ಪವಾದರೂ ಜೀವಂತ ನೆಲಪಠ್ಯಗಳೆಡೆ ಕಣ್ಣಾಡಿಸುವ ಪ್ರಯೋಗ ಇದು. ಮುಂದಿನ ದಿನಗಳಲ್ಲಿ ಅದನ್ನು ಬೇಕಾದ ರೀತಿಯಲ್ಲಿ ನೋಡಬಹುದು. ಅದೊಂದು ಮುಕ್ತ ಜಾಗ. ಯಾರು ಬೇಕಾದರೂ ಇಲ್ಲಿ ಪ್ರಯೋಗ ನಡೆಸಬಹುದು.

 

ಪತ್ರಕರ್ತರಾಗಿ ಹಲವಾರು ವರ್ಷ ಕೆಲಸ ಮಾಡಿದ್ದೀರಿ. ಅಂದಿನ ಪತ್ರಿಕೋದ್ಯಮಕ್ಕೂ ಇಂದಿನ ಪತ್ರಿಕೋದ್ಯಮಕ್ಕೂ ತುಲನೆ ಮಾಡಿದಾಗ ಏನೆನ್ನಿಸುತ್ತದೆ?

ಇಂದು ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ ಎರಡೂ ಆರ್ಥಿಕ ಹಿತಾಸಕ್ತಿಗಳ ನಿರ್ದೇಶನದಲ್ಲಿರುವುದರಿಂದ ಅದರ ಎಲ್ಲ ಮೌಲ್ಯಗಳ ನೆಲೆಗಟ್ಟು ನಾಶವಾಗಿ ಹೋಗಿದೆ. ಹೀಗಾಗಿ ಮಾರುಕಟ್ಟೆಗೆ ಪೂರಕವಾದ ಸಂವಹನವನ್ನು ಮಾತ್ರ ನೆಲೆಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇಂದು ಮಾಧ್ಯಮದ ಒಟ್ಟಾರೆ ಹಿತಾಸಕ್ತಿ ಜನಪರವಾದದ್ದಾಗಿಲ್ಲ. ಅದೇನಿದ್ದರೂ ವ್ಯಾಪಾರಿ, ಬಂಡವಾಳಿಗರ ಹಾಗೂ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಪೂರಕವಾಗಿ ಜನರ ಮನಸ್ಸುಗಳನ್ನು ಸಂವಹನಕ್ಕೆ ಸಿದ್ಧಪಡಿಸುತ್ತಿವೆ. ಇಂತಹ ದಲ್ಲಾಳಿ ಕೆಲಸಕ್ಕೆ ಪತ್ರಿಕೋದ್ಯಮ ಎಂದು ಕರೆಯಬೇಕಾದ ಅಗತ್ಯ ಇಲ್ಲ. ಇವರು ಹೊಸ ಆರ್ಥಿಕತೆಯ ಮಧ್ಯವರ್ತಿಗಳಾಗಿದ್ದಾರೆ. ಮಾರುಕಟ್ಟೆ ವಿಸ್ತರಣೆಗೆ ಪೂರಕವಾಗಿ ಜನರ ಮನಸ್ಸನ್ನು ಸಿದ್ಧಗೊಳಿಸುವುದು ಇಂದಿನ ಮಾಧ್ಯಮಗಳ ಗುರಿಯಾಗಿದೆ. ಇಂದು ಸ್ಪರ್ಧೆ ಯಾವ ಮಟ್ಟಿಗಿದೆ ಎಂದರೆ ಮುಂಬರುವ ಕೆಲವೇ ವರ್ಷಗಳಲ್ಲಿ ಇವರ ಎಲ್ಲ ತಳಹದಿಗಳೂ ನಿರ್ನಾಮವಾಗುವುದು ಖಚಿತ. ಜನರ ಹಿತಾಸಕ್ತಿಯಾಗಲಿ, ಜನರ ಸಾವು ಬದುಕಿನ ಹೋರಾಟಗಳಾಗಲಿ, ಜನರ ಗುರುತುಗಳು ಅಳಿಸಿ ಹೋಗುತ್ತಿರುವುದಾಗಲೀ ಇವುಗಳಾವುದೂ ಮಾಧ್ಯಮಗಳಿಗೆ ಸುದ್ದಿಗಳಾಗಿ ಕಾಣಿಸುತ್ತಿಲ್ಲ. ಮಾರುಕಟ್ಟೆ ವಿಸ್ತರಣೆ ಏನಾದರೂ ಪ್ರೇರಣೆ ಇದ್ದರೆ ಮಾತ್ರ ಅದನ್ನು ಸುದ್ದಿಯಾಗಿ ಪರಿಗಣಿಸುತ್ತದೆ. ನಾವು ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವಾಗ ಅದು ಒಂದು ಆದರ್ಶವಾಗಿತ್ತು. ಲಂಕೇಶ್ ಪತ್ರಿಕೆ, ಸುದ್ದಿ ಸಂಗಾತಿ, ಮುಂಗಾರು ಇವೆಲ್ಲವೂ ನಮಗೆ ಒಂದು ಆದರ್ಶವಾಗಿದ್ದವು. ಹೀಗಾಗಿ ಪತ್ರಿಕೋದ್ಯಮವೆ ಒಂದು ಪ್ರವಾಹದ ವಿರುದ್ಧದ ಈಜಾಗಿ ನಮಗೆ ಚೈತನ್ಯ ನೀಡುತ್ತಿತ್ತು. ಇಂದು ಜನಪರ ಪತ್ರಿಕೋದ್ಯಮ ಎನ್ನುವುದೇ ಇಲ್ಲ. ಸಂವಹನ ಎಂಬುದೇ ಇಲ್ಲ. ಎಲ್ಲೋ ಕೆಲವು ಪತ್ರಕರ್ತರನ್ನು ಇದರಿಂದ ಹೊರಗಿಡಬಹುದಷ್ಟೆ.

 

ಚಳವಳಿಗಳು ಕ್ಷೀಣವಾಗಿರುವ ಇಂದಿನ ಸಾಮಾಜಿಕ ಸಂದರ್ಭ ನಿರಾಶದಾಯಕ ಅನ್ನಿಸುತ್ತದೆಯೆ?

ನಮ್ಮ ಹಿಂದಿನ ಗುರುತುಗಳು ಅಳಿಸಿ ಹೋಗುತ್ತಿರುವ ವೇಗ ಅದೆಷ್ಟು ಭಯಾನಕವಾಗಿದೆ ಎಂದರೆ ಈ ಕ್ಷಣದ ಇರವು ಇನ್ನೊಂದು ಕ್ಷಣದ ನೆನಪು ಮಾತ್ರ ಆಗಿರಲು ಸಾಧ್ಯವಿದೆ. ನೆಲಗುರುತುಗಳು ಅಷ್ಟು ಕ್ಷಿಪ್ರಗತಿಯಲ್ಲಿ ಅಳಿಸಿ ಹೋಗುವಂತಹ ಕಾಲಘಟ್ಟದಲ್ಲಿ ಮುಂದಿನ ಭವಿಷ್ಯಕ್ಕೆ ಬೇಕಾದ ನೆಲನಿಷ್ಠ ರಾಜಕಾರಣವನ್ನು ಕಟ್ಟುವುದು ದುಸ್ತರವಾಗಿದೆ. ನಮ್ಮ ಕುರುಹುಗಳು ಮಹತ್ವದ್ದಾಗಿ ಕಾಣಿಸದಿದ್ದಾಗ ಅವು ಬರೀ ಸಂಪನ್ಮೂಲವಾಗಿ ಕಾಣಿಸತೊಡಗುತ್ತವೆ. ಹಾಗಾದಾಗ ಅವನ್ನು ದೋಚಬೇಕು, ಅದನ್ನು ವ್ಯಾಪಾರೀ ಹಿತಾಸಕ್ತಿಗೆ ಕೊಡಬೇಕು, ಅದರ ಮೂಲಕ ಲಾಭದ ಆರ್ಥಿಕತೆಯನ್ನು ಸೃಷ್ಟಿಸಬೇಕು ಎನ್ನುವುದನ್ನು ವಸಾಹತುಶಾಹಿ ಆಳ್ವಿಕೆ ನಮಗೆ ಹೇಳಿಕೊಟ್ಟಿದೆ. ನಮ್ಮೆಲ್ಲಾ ಜ್ಞಾನಶಿಸ್ತುಗಳು ಕೈಗಾರಿಕಾ ಕ್ರಾಂತಿಯಿಂದಾದವು. ದರೋಡೆಗಳ ಫಲವೇ ಕೈಗಾರಿಕಾ ಕ್ರಾಂತಿ. ಪ್ರಪಂಚದ ಸಂಪನ್ಮೂಲಗಳ ದರೋಡೆಗೆ ನಾವು ಆ ಹೆಸರಿಟ್ಟಿದ್ದೆವಷ್ಟೆ. ನಾವು ಪ್ರಶ್ನೆಯನ್ನೇ ಹಾಕದೇ ಅದನ್ನು ಸಾರಾಸಗಟಾಗಿ ಒಪ್ಪಿಕೊಂಡು ಅದರ ಆಧಾರದ ಮೇಲೆ ನಮ್ಮ ಪ್ರಜ್ಞೆಯನ್ನು ರೂಪಿಸಿಕೊಂಡಿದ್ದೇವೆ. ಇಂತಹ ರೂಪಿತ ಪ್ರಜ್ಞೆಯಲ್ಲಿ ನೆಲದ ಸತ್ಯ ಗೋಚರಿಸುವುದಿಲ್ಲ. ಹೀಗೆ ನಮ್ಮ ಆಲೋಚನೆಗಳ ಚೌಕಟ್ಟಿನಲ್ಲೇ ಲೋಪವಿದೆ. ನಮ್ಮ ಬೌದ್ಧಿಕ ಮಟ್ಟದ ಈ ಬಿಕ್ಕಟ್ಟಿನಿಂದ ಹೊರಬರಬೇಕೆಂದರೆ ನಾವು ಡಿಲರ್ನಿಂಗ್, ಅಪವರ್ಗೀಕರಣಕ್ಕೆ ಒಳಗಾಗಬೇಕಾಗುತ್ತದೆ. ಅಥವಾ ಸಂಪೂರ್ಣ ಹಿಂದಕ್ಕೆ ಹೋಗುವ ತಿರುವು ತೆಗೆದುಕೊಳ್ಳಬೇಕಾಗುತ್ತದೆ. ಜಗತ್ತಿನಲ್ಲಿ ಈ ಬಗೆಯ ಪ್ರಕ್ರಿಯೆಗೆ ಒಳಗಾದ ಮಹಾನುಭಾವರಿದ್ದಾರೆ. ಉದಾಹರಣೆಗೆ ಗೂಗಿ ವಾ ಥಿಯಾಂಗೋನಂತವರು ಇಂಗ್ಲಿಷ್ ಬಿಟ್ಟು ಸ್ವಾಹಿಲಿಯಲ್ಲಿ ಬರೆಯಲು ಆರಂಭಿಸಿದ್ದು. ಭಾರತದಲ್ಲಿ ಇಂತಹುದು ಯಾಕೆ ಸಾಧ್ಯವಾಗುವುದಿಲ್ಲ ಎಂದರೆ ಭಾರತೀಯ ಚಿಂತನೆಯಲ್ಲೇ ಇಬ್ಬಂದಿತನವಿದೆ. ಅದರ ಚಿಂತನೆ ಒಂದಿರುತ್ತದೆ, ನಡೆ ಇನ್ನೊಂದು ಇರುತ್ತದೆ. ನಡೆಯಲ್ಲಿ ಒಪ್ಪಿತವಾದ್ದು ಚಿಂತನೆಯಲ್ಲಿರುವುದಿಲ್ಲ. ಚಿಂತನೆಯಲ್ಲಿ ಒಪ್ಪಿತವಾದದ್ದು ನಡೆಯಲ್ಲಿರುವುದಿಲ್ಲ. ಅದರಿಂದಾಗಿಯೇ ಇಷ್ಟೆಲ್ಲಾ ಎದ್ದು ಕಾಣುವ ಸಾಮಾಜಿಕ ಅಸಮಾನತೆಗಳು ಕಾಣುತ್ತಿದ್ದರೂ ಸಹ ಅವೆಲ್ಲಾ ಏನೂ ಅಲ್ಲ ಎನ್ನುವ ರೀತಿ ಇರುತ್ತೇವೆ. ಅಸಹಜವಾದದ್ದನ್ನೂ ಸಹಜ ಎಂದು ಒಪ್ಪಿಕೊಂಡು, ನಮ್ಮ ಪ್ರಜ್ಞೆಗೆ ಒಗ್ಗಿಸಿಕೊಂಡು ಬಿಡುತ್ತಿದ್ದೇವೆ.

 

ನಮ್ಮ ರಾಜಕೀಯ ಆಣೆ ಪ್ರಮಾಣದವರೆಗೆ ಬಂದು ನಿಂತಿದೆಯಲ್ಲಾ?

ಕರ್ನಾಟಕದ ರಾಜಕೀಯ ಇಂದಿನಷ್ಟು ಅಧೋಗತಿಯನ್ನು ಎಂದೂ ಕಂಡಿಲ್ಲ. ಅದು ಯಾವ ಪಕ್ಷವೇ ಇರಲಿ. ಒಂದೇ ಒಂದು ಕಣದಷ್ಟೂ ನಾಚಿಕೆ, ಮಾನ, ಮರ್ಯಾದೆ, ವಿವೇಕ, ತಿಳಿವಳಿಕೆ ಇಲ್ಲ. ಈ ನೆಲದ ನೀರು ಕುಡಿದಿದ್ದೇವೆ, ಈ ನೆಲದ ಮಣ್ಣಿನಲ್ಲಿ ಬೆಳೆದಿರುವುದನ್ನು ತಿಂದಿದ್ದೇವೆ, ಈ ಗಾಳಿಯಲ್ಲಿ ಉಸಿರಾಡುತ್ತಿದ್ದೇವೆ, ಅದನ್ನೆಲ್ಲಾ ಶುದ್ಧವಾಗಿಡುವುದು ನಮ್ಮ ಕತವ್ಯ ಎಂಬ ಸಾಮಾನ್ಯ ಜ್ಞಾನದ ಲವಲೇಶವೂ ಅವರ ಪ್ರಜ್ಞೆಯಲ್ಲಿ ಇಲ್ಲ. ಇಡೀ ಕರ್ನಾಟಕವನ್ನು ಎಷ್ಟು ಬೇಗ ಹರಾಜಿಗೆ ಹಾಕಿದರೆ, ಎಷ್ಟು ಬೇಗ ಮಾರಿಬಿಟ್ಟರೆ ಒಟ್ಟಾರೆಯಾಗಿ, ಅದರ ಮೂಲಕ ಸಿಗುವ ಲಾಭಗಳನ್ನು ತೆಗೆದುಕೊಂಡು ಹೋಗಿ ವೈಯಕ್ತಿಕ ಬಂಡವಾಳ ಮಾಡಿಕೊಳ್ಳುವುದು ಹೇಗೆ ಎಂದು ಲೆಕ್ಕ ಹಾಕುತ್ತಿರುವ ರಾಜಕಾರಣ ಇದು. ಇನ್ನು ಈ ಮಠಾಧೀಶರಿಗಂತೂ ಮಾನ, ಮರ್ಯಾದೆಯೇ ಇಲ್ಲ. ಅವರು ಸಣ್ಣವರಿರಲೀ, ದೊಡ್ಡವರಿರಲೀ ಕಣ್ಣು, ಕಿವಿ ಎರಡನ್ನೂ ಕಳೆದುಕೊಂಡಿದ್ದಾರೆ. ಒಂದು ಪ್ರಜಾಪ್ರಭುತ್ವಕ್ಕೆ ಸಲಹೆ ಕೊಡಲು ಇವರ‍್ಯಾರ್ರೀ? ಇವರೇನು ಪ್ರಜಾಪ್ರಭುತ್ವಕ್ಕಿಂತ ದೊಡ್ಡವರಾ? ಇದೇನು ರಾಜಪ್ರಭುತ್ವವಾ? ಇವರೇನು ರಾಜಪುರೋಹಿತರಾ? ನಾವೇನು ಧರ್ಮ ಪ್ರಭುತ್ವ ಒಪ್ಪಿಕೊಂಡಿದ್ದೇವಾ? ಇವರು ಮಠಗಳನ್ನು ಕಟ್ಟಿಕೊಂಡಿರಬೇಕಷ್ಟೆ. ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಲಿಕ್ಕೆ ಇವರಿಗೇನು ಹಕ್ಕಿದೆ? ಇದೆಲ್ಲಾ ಪ್ರಜಾಪ್ರಭುತ್ವಕ್ಕೇ ಮಾಡುವ ಅಪಮಾನ. ಇದನ್ನು ಕೇಳಿದರೆ ಜಾತಿಗಳು ಎದ್ದು ನಿಲ್ಲುತ್ತವೆ. ನಮ್ಮ ಜಾತಿ ಮಠಕ್ಕೆ ಯಾಕೆ ಕೇಳಿದ್ರಿ ಅಂತ. ಒಂದು ಜಾತಿಗೆ ಒಂದು ಮಠ ಸೀಮಿತವಾಗಿಯೆಂದಾದರೆ ಇನ್ನೇನಾಗುತ್ತೆ?

 

ರಾಜ್ಯದಲ್ಲಿ ಇಂಗ್ಲಿಷ್ ಶಾಲೆಗಳನ್ನು ತೆರೆಯಬೇಕು ಎಂದು ಸರ್ಕಾರ ತೀರ್ಮಾನ ಕೈಗೊಂಡಿದೆ. ಇದು ಶಿಕ್ಷಣ ಮತ್ತು ಭಾಷೆಯ ಮೇಲೆ ಯಾವ ಪರಿಣಾಮ ಬೀರಬಲ್ಲದು?

ಇಂದು ಶಿಕ್ಷಣ ಎನ್ನುವುದು ದೊಡ್ಡ ಅನೈತಿಕ ದಂಧೆಯಾಗಿದೆ. ಅದು ಪೂರ್ತಿ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಪೂರಕವಾಗಿ, ಖಾಸಗಿ ವಲಯಗಳನ್ನು ಭದ್ರ ಮಾಡಲು ಬಳಕೆಯಾಗಿದೆ. ಇಂದು ಇಂಗ್ಲಿಷ್ ಶಾಲೆಗಳನ್ನು ಆರಂಭಿಸುವುದರ ಪರಿಣಾಮವೇನೆಂದರೆ ಸರ್ಕಾರಿ ಶಾಲೆಯಲ್ಲಿ ನಾಲ್ಕಕ್ಷರ ಕಲಿಯುವ ಅವಕಾಶ ಕೂಡಾ ಕೈತಪ್ಪಿ ಹೋಗುತ್ತದೆ. ಇಂದು ಪ್ರಾಥಮಿಕ ಶಿಕ್ಷಣ ನೀಡುವ ಕರ್ತವ್ಯದಿಂದ ನುಣುಚಿಕೊಳ್ಳಲು ಏನು ಬೇಕೋ ಅದನ್ನು ಸರ್ಕಾರ ಮಾಡುತ್ತಿದೆ. ಇಂದು ಶಾಲೆಗಳನ್ನು ಮುಚ್ಚುತ್ತಿರುವ ವೇಗ ಹಾಗೂ ಅಲ್ಲಿನ ಗುಣಮಟ್ಟ ನೋಡಿದರೆ ಅರ್ಥವಾಗುತ್ತದೆ. ಅಲ್ಲೆಲ್ಲಾ ಬಡವರ ಮಕ್ಕಳೇ ಇರುವುದು. ಅದರಲ್ಲಿ ದಲಿತರ ಸಂಖ್ಯೆ ಜಾಸ್ತಿ ಇರುತ್ತದೆ. ಕನ್ನಡದಲ್ಲೂ ಕಲಿಯುವ ಅವಕಾಶದಿಂದ ವಂಚಿಸಿದಾಗ ಅನಿವಾರ್ಯವಾಗಿ ದುಡ್ಡು ಕೊಟ್ಟೇ ಶಿಕ್ಷಣ ಪಡೆಯಬೇಕು. ಯಾರಿಂದ ಸಾಧ್ಯ ಇದು? ಪ್ರಾಥಮಿಕ ಶಾಲೆಯ ನೀತಿಗಳನ್ನು ಮಾಡಲು ವಿಪ್ರೋಗೆ ಬಿಟ್ಟಿದ್ದಾರೆ. ಸರ್ಕಾರ ತಲುಪಿರುವ ಮಟ್ಟ ಇದು. ಟಿಎಸ್‌ಐ

 

‍ಲೇಖಕರು G

10 July, 2011

13 Comments

  1. Ramesh Aroli

    Dear Harsha,

    ನಿಜವಾಗಿಯೂ ದಲಿತ ಚಳುವಳಿ (ನಾಯಕರು ಕಾರಣವೋ-ಅಥವಾ ಕಾಲಗ್ರಹಿಕೆಯ ಕೊರತೆಯೋ) ತಲುಪಿರುವ ಸ್ಥಿತಿ ನೆನೆಸಿಕೊಂಡರೆ ಅಸಲು ಯಾವ ದಿಕ್ಕಿನಲ್ಲಿ ನಡೆಯುತ್ತಿದ್ದೇವೆ ಎಂಬುದೇ ಅರ್ಥವಾಗುತ್ತಿಲ್ಲ. ಚಳುವಳಿಯ ಕಳೆದ ಕಾಲದ ಉಚ್ಪ್ರಾಯದ ದಿನಗಳನ್ನು ನೆನೆಸಿಕೊಂಡು ಮರುಕಪಡುವ ಹೊರೆತು ಮತ್ತೇನು ಉಳಿದಿಲ್ಲ ಅನಿಸುತ್ತಿದೆ. ಇಂತಹ ಗೊಂದಲದಲ್ಲಿ ರಾಮಯ್ಯನವರು ಹಾಕಿದ ಮೆಲುಕು ಒಮ್ಮೆ ಇಡೀ ಎಪ್ಪತ್ತರ ದಶಕದ ಬೀದಿಯನ್ನು ಹಾದು ಹೋದಂತಿದೆ. ಮತ್ತು ಏನು ಮಾಡಿದರು “ನನ್ನ CV ಗೆ ಇದು ಕೆಲಸಕ್ಕೆ ಬರುತ್ತಾ?” ಎಂದು ಆಲೋಚಿಸುವ ದುರಂತ ನಮ್ಮದು. ಮನಸ್ಸು ಬಿಚ್ಚಿ ಮಾತನಾಡಿದ ರಾಮಯ್ಯನವರಿಗೆ,
    ಮಾತನಾಡಿಸಿದ ಹರ್ಷ ಗೆ ಪ್ರಕಸಿದ ಅವಧಿಗೆ ಧನ್ಯವಾದ.

    ರಮೇಶ ಅರೋಲಿ
    ನವ ದೆಹಲಿ.

  2. Divakara

    ಸಿದ್ದಲಿಂಗಯ್ಯನವರು ಒಂದೆಡೆ ತಮ್ಮಲ್ಲಿ ಎಪ್ತತ್ತರ ದಶಕದ ಆಕ್ರೋಶ ಉಳಿದಿಲ್ಲ ಎಂಬ ಹತಾಶ ಭಾವನೆ ವ್ಯಕ್ತಪಡಿಸುತ್ತಾರೆ. ರಾಮಯ್ಯನವರು ದಲಿತ ನಾಯಕರನ್ನು ಡಕಾಯಿತರಿಗೆ ಹೋಲಿಸುತ್ತಾ ದಲಿತ ಚಳುವಳಿಯ ಅವಸಾನವನ್ನು ಪರೋಕ್ಷವಾಗಿ ಬಿಂಬಿಸುತ್ತಾರೆ.ಈ ಎರಡೂ ಅಭಿಪ್ರಾಯಗಳನ್ನು ನೋಡಿದರೇನೇ ದಲಿತ ಚಳುವಳಿಯ ಸ್ಥಿತಿಗತಿ ತಿಳಿಯುತ್ತದೆ. ಆದರೆ ಸಮಸ್ಯೆ ಕೇವಲ ಸಮಕಾಲೀನ ಸನ್ನಿವೇಶದ್ದಲ್ಲ ಎಂಬ ಸಂಗತಿಯನ್ನು ಗಮನಿಸಬೇಕಿದೆ. ಕ್ರಾಂತಿಯ ಕಿಡಿಗಳನ್ನು ಹೊತ್ತಿಸುತ್ತಿದ್ದ ದಲಿತ ಸಾಹಿತಿಗಳು, ನಾಯಕರು,ಕಾರ್ಯಕರ್ತರು ಇಂದು ಈ ರೀತಿಯ ಹತಾಶ ಭಾವನೆ ವ್ಯಕ್ತಪಡಿಸುವುದರ ಹಿಂದೆ ಚಳುವಳಿಯ ಮೂಲಭೂತ ನ್ಯೂನತೆ ಸಹ ಅಡಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ತಮ್ಮ ಪ್ರಾರಂಭಿಕ ದಿನಗಳಲ್ಲಿ ತಾವು ಗ್ರಹಿಸಲಾಗದ ಕೆಲವು ಸತ್ಯಗಳನ್ನು ಈ ನಾಯಕರುಗಳು ಇಂದು ಗ್ರಹಿಸುತ್ತಿರುವುದೇ ಈ ಹತಾಶೆಗೆ ಕಾರಣವೆಂದು ಹೇಳಬೇಕಿಲ್ಲ.ಇಂದು ದಲಿತ ಚಳುವಳಿ ಕವಲು ಹಾದಿಯಲ್ಲಿದೆ ಆದರೆ ಸತ್ತಿದೆ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಸಮಸ್ಯೆಗಳಿರುವವರೆಗೂ ಚಳುವಳಿಯ ಪ್ರಸ್ತುತತೆಯೂ ಇದ್ದೇ ಇರುತ್ತದೆ.ದಲಿತ ನಾಯಕರುಗಳು ಡಕಾಯಿತರುಗಳಾಗಿ ಕಾಣುವುದಾದರೆ ಅದಕ್ಕೆ ಕಾರಣ ದಲಿತ ಚಳುವಳಿ ನಗರಕೇಂದ್ರಿತವಾಗಿರುವುದು ಮತ್ತು ದಲಿತ ಸಮುದಾಯಗಳ ಮೂಲಭೂತ ಪ್ರಶ್ನೆಯಾದ ಭೂಮಿ ಪ್ರಶ್ನೆಯನ್ನು ಕೈಗೆತ್ತಿಕೊಳ್ಳದಿರುವುದು. ನವ ಉದಾರವಾದ ಮತ್ತು ಜಾಗತೀಕರಣ ದಲಿತ ಸಮುದಾಯಗಳ ಮೇಲೆ ನಡೆಸುತ್ತಿರುವ ಆಕ್ರಮಣವನ್ನು ಸೂಕ್ತವಾಗಿ ಗ್ರಹಿಸುವುದರಲ್ಲೇ ದಲಿತ ಚಳುವಳಿ ಎಡವಿರುವುದು ಪ್ರಸ್ತುತ ಸಮಸ್ಯೆಗಳಿಗೆ ಮತ್ತು ಹತಾಶ ಮನೋಭಾವಕ್ಕೆ ಕಾರಣ. ರಾಮಯ್ಯನವರ ಆಳವಾದ ಅಧ್ಯಯನ ಮತ್ತು ಅಪಾರ ಅನುಭವಗಳು ಅವರ ಅಭಿಪ್ರಾಯದ ಹಿಂದೆ ಸ್ಪಷ್ಟವಾಗಿ ಕಾಣುತ್ತದೆ. ಆದರೆ ಪ್ರಸಕ್ತ ದಲಿತ ಯುವ ಪೀಳಿಗೆಗೆ ಈ ಅನುಭವದ ಮನನ ಮಾಡಬೇಕಿದೆ. ಈ ಕೆಲಸ ರಾಮಯ್ಯ,ಸಿದ್ಧಲಿಂಗಯ್ಯ ಮುಂತಾದವರಿಂದ ಸಾಧ್ಯವಾಗಬಹುದು. ಪ್ರಯತ್ನಿಸಿ ನೋಡಿ. ಇಡೀ ಚಳುವಳಿಯ ಪರಾಮರ್ಶೆ ಮತ್ತು ಪುನರ್ ವಿಮರ್ಶೆ ಅತ್ಯಗತ್ಯವಾಗಿರುವ ಸಂದರ್ಭದಲ್ಲಿ ಹತಾಶೆಯ ನುಡಿಗಳಿಗಿಂತಲೂ ಭರವಸೆಯ ಮಾತುಗಳು ಹೆಚ್ಚು ಪ್ರಸ್ತುತ ಎನಿಸುತ್ತದೆ. ಬಾಯಿ ಮುಚ್ಚಿಸುವವರು ಎಲ್ಲೆಡೆ ಇದ್ದೇ ಇರುತ್ತಾರೆ. ಆದರೆ ಬಾಯಿ ತೆರೆದರೆ ಕೇಳಿಸಿಕೊಳ್ಳುವವರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರಲ್ಲವೇ ?

    ನಾ ದಿವಾಕರ

    • ಲಕ್ಷ್ಮೀಕಾಂತ್.ಎಸ್.ಬಿ

      ನಾ.ದಿವಾಕರ್ ಅವರ ಮಾತುಗಳನ್ನು ನಾನು ಒಪ್ಪುತ್ತೇನೆ.ಹಾಗು ಅವರು ಹೇಳುವ ಹಾಗೆ ಸಿದ್ದಲಿಂಗಯ್ಯ ಮತ್ತು ರಾಮಯ್ಯ ನವರು ದಲಿತ ಕಾವನ್ನು ಯುವ ಪೀಳಿಗೆಯಲ್ಲಿ ತುಂಬಬಹುದಾಗಿದೆ. ಆದರೆ ಮನಸ್ಸು ಮಾಡಬೇಕಷ್ಟೆ.ಸಿದ್ದಲಿಂಗಯ್ಯ ರಾಜಕಾರಣದ ಬೆನ್ನೇರಿ ಹೋಗಿದ್ದಾರೆ,ಆದ್ದರಿಂದ ಅದನ್ನು ಬಿಡದ ಹೊರತು ಅವರಿಂದ ಸಾದ್ಯವಾಗುವುದಿಲ್ಲ ಎನಿಸುತ್ತಿದೆ.ಇನ್ನು ರಾಮಯ್ಯನವರಿಗೆ ಆ ಶಕ್ತಿ ಉಳಿದಿರುವುದು ಎನಿಸುತ್ತಿದೆ.ಇನ್ನೂ ಒಂದು ಪ್ರಶ್ನೆ ಕಾಡುವುದೇನೆಂದರೆ ದಲಿತ ನಾಯಕರ ಆವೇಶ ಕುಂದಿದೆ ನಿಜ ಅವರನ್ನು ಬಿಟ್ಟು ಈ ದಲಿತ ಯುವ ಮನಸ್ಸುಗಳಿಗೆ ಏನಾಗಿವೆ? ನಾವು ಸಿದ್ದಲಿಂಗಯ್ಯ ಮಾಡಲಿಲ್ಲ ಎಂದು ಏಕೆ ದೂರುತಿದ್ದೇವೆಯೋ ತಿಳಿಯುತ್ತಿಲ್ಲ.

  3. Vasanth

    Very insightful and thought provoking.

  4. ushakirana

    ramaiah avara anisike e kaalaghattadalli sari enisidaru .idu hige iralu saadyvilla.ramiah avara maatugalannu dalitara bagge bereyavaru heliddare paristiti bere aagirutittu.dalita munchuni naayakara adhikara vyamoha innu kadime aagilla ………..ramiah sadyada vaastavavanna bichhittiddare

  5. Shankarappa

    ರಾಮಯ್ಯನವರಿಗೆ ಒಂದೇ ಒಂದು ಪ್ರಶ್ನೆ,

    ರಾಮಯ್ಯರೊಂದಿಗೆ ಮಾಡಿದ ಸಂದರ್ಶನದ ವರದಿಯಲ್ಲಿ ಒಟ್ಟು ಒಂಭತ್ತು ಪ್ರಶ್ನೆಗಳಿವೆ. ಈ ಒಂಭತ್ತು ಪ್ರಶ್ನೆಗಳು ಒಂಭತ್ತು ಕ್ಷೇತ್ರಗಳಿಗೆ ಮತ್ತು ಆಯಾಯ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರಿಗೆ ಸಂಬಂಧಿಸಿದವುಗಳಾಗಿವೆ. ಈ ಕ್ಷೇತ್ರಗಳ ಬಗ್ಗೆ ಕೇವಲ ಟೀಕೆ ಅಥವಾ ವಿಮರ್ಶೆ ಮಾಡಿದರೆ ಈ ವರದಿಯ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇರಲಿಲ್ಲ. ಆದರೆ ಈ ವರದಿಯಲ್ಲಿ ರಾಮಯ್ಯನವರು ಈ ಒಂಭತ್ತು ಕ್ಷೇತ್ರಗಳ ಬಗ್ಗೆ ಒಂದು ರೀತಿಯ ಹಗೆತನದ ಮಾತುಗಳನ್ನು ಆಡಿರಿವುದು ಇಲ್ಲಿನ ಸಮಸ್ಯೆಯಾಗಿದೆ. ಇದರಿಂದ ಸಮಾಜಕ್ಕೆ ಉಪಯೋಗವಾಗುವುದರ ಬದಲು ಅಪಾಯಗಳೇ ಹೆಚ್ಚು. ಆದರೆ ಈ ಸಂಗತಿಯನ್ನು ಅರಿತಿಲ್ಲದಿರುವುದು ಈ ವರದಿಯನ್ನು ನೋಡಿದರೆ ತಿಳಿಯುತದೆ. ಉದಾಹರಣೆಗೆ ಹೇಳಬೇಕೆಂದರೆ, “ಎನ್‌ಎಸ್‌ಡಿ, ನೀನಾಸಂ ಇತ್ಯಾದಿಗಳ ಬೌದ್ಧಿಕ ದಾರಿದ್ರ್ಯ ಮತ್ತು ಜನನಿಷ್ಠೆಯಿಲ್ಲದಿರುವ ಆಷಾಢಭೂತಿತನ” ಮತ್ತು “ನಮ್ಮೆಲ್ಲಾ ಜ್ಞಾನಶಿಸ್ತುಗಳು ಕೈಗಾರಿಕಾ ಕ್ರಾಂತಿಯಿಂದಾದವು. ದರೋಡೆಗಳ ಫಲವೇ ಕೈಗಾರಿಕಾ ಕ್ರಾಂತಿ. ಪ್ರಪಂಚದ ಸಂಪನ್ಮೂಲಗಳ ದರೋಡೆಗೆ ನಾವು ಆ ಹೆಸರಿಟ್ಟಿದ್ದೆವಷ್ಟೆ” ಎಂದು ಹೇಳುತಿರುವುದು. ಹೀಗೆ ಒಂದು ಸಂಸ್ಥೆ ಅಥವಾ ಕ್ಷೇತ್ರದ ಬಗ್ಗೆ ದ್ವೇಷಿಸುವ ಮಾತುಗಳನ್ನಡುವುದೇ ಬೌದ್ಧಿಕತೆ ಎಂದುಕೊಂಡರೆ ಯಾರ ತಪ್ಪು ಹೇಳಿ?

    ಉತ್ತರಕ್ಕಾಗಿ ಕಾಯುವವ,

    ಶಂಕರಪ್ಪ

    • ಹುಲಿಕುಂಟೆ ಮೂರ್ತಿ

      ಶಂಕರಪ್ಪನವರು ತಮ್ಮ ಪ್ರಶ್ನೆಯನ್ನು ರಾಮಯ್ಯನವರಿಗೇ ಕೇಳಬೇಕಿಲ್ಲ; ಮಾನವಪ್ರೀತಿಯಿರುವ ಸಮಕಾಲೀನ ಸಾಮಾಜಿಕ ವಿದ್ಯಮಾನಗಳನ್ನು ಹತ್ತಿರದಿಂದ ಗಮನಿಸುತ್ತಿರುವ ಯಾರಿಗಾದರೂ ಕೇಳಬಹುದು. ಅವರು ರಾಮಯ್ಯನವರ ಸಂದರ್ಶನವನ್ನು ಇನ್ನೂ ಒಂದುಬಾರಿ, ಪೂರ್ವಗ್ರಹೀತ ಭಾವನೆಯನ್ನು ಹೊರತುಪಡಿಸಿ ಓದಿದರೆ ಅದರಲ್ಲಿ ಹಗೆತನದ ಮಾತುಗಳಿಲ್ಲದಿರುವುದನ್ನು ಕಾಣಬಹುದು. ಕೈಗಾರಿಕಾ ಕ್ರಾಂತಿಯ ಬಗ್ಗೆ ಈಗಾಗಲೇ ಎಡಪಂಥೀಯ ವಿಚಾರಧಾರೆ ಸಾಕಷ್ಟು ಬೆಳಕು ಚೆಲ್ಲಿದೆ. ರಾಮಯ್ಯನವರು ಆ ಬೆಳಕಿನಲ್ಲಿ ಕಂಡಿದ್ದನ್ನು ಮಾನವೀಯ ಕಾಳಜಿ ಮತ್ತು ತತ್ಕಾಲದ ದರ್ದಿನಿಂದ ಹೇಳುತ್ತಿದ್ದಾರೆ. ಅವರಿಗೆ ಕಾಣುವುದೆಲ್ಲಾ ನಮಗೂ ಕಾಣಬೇಕೆನ್ನುವುದು ಅಸಾಧ್ಯವಾದ ಮಾತಾದರೂ, ಭಾರತದಂತಹ ದೇಶದಲ್ಲಿ ಚರಿತ್ರಯಿಂದ ನಾವು ಪಾಠ ಕಲಿಯದಿದ್ದರೆ ಹೀಗೆ ಪ್ರತಿಕ್ರಿಯಿಸುವ ಅಪಾಯ ಒದಗುತ್ತದೆ. ಇನ್ನು ‘ನೀನಾಸಂ, ಎನ್ಎಸ್ಡಿ’ ಗಳ ಬೌದ್ಧಿಕತೆಯ ಬಗ್ಗೆ ರಾಮಯ್ಯನವರು ಇವತ್ತು ಮಾತಾಡುತ್ತಿಲ್ಲ. ಅವುಗಳ ಬೌದ್ಧಿಕ ಸಾಮರ್ಥ್ಯವನ್ನು ಅವರು ಎಂದೋ ‘ಹೊಗಳಿದ್ದಾಗಿದೆ’ ಹಾಗೂ ಈ ವಿಷಯ ಕುರಿತು ರಾಮಯ್ಯನವರ ಮಾತುಗಳು ಬಹುಸಂಖ್ಯಾತ ಕನ್ನಡ ಮನಸ್ಸುಗಳ ಪ್ರಾತಿನಿಧಿಕ ಅಭಿಪ್ರಾಯಗಳೆಂಬುದು ನೆನಪಿರಬೇಕು. ತಮ್ಮ ಯಾವುದರ ಬಗ್ಗೆಯೂ ಪ್ರಶ್ನೆಗಳಿರಬಾರದು ಎಂಬ ಶಂಕರಪ್ಪನವರ ‘ಸೇಫರ್ ಝೋನ್’ ಪ್ರಜ್ಞೆ ನಲವತ್ತು ವರುಷಗಳು ದಮನಿತರ ಬದುಕುವ ಹಕ್ಕಿಗಾಗಿ ಕಾತರಿಸಿ, ನಮ್ಮೆಲ್ಲರ ಹೆಜ್ಜೆಗಳಿಗೆ ದಾರಿದೀಪವಾಗಿರುವ ರಾಮಯ್ಯನವರನ್ನು ‘ಈ ರೇಂಜಿನಲ್ಲಿ’ ಪ್ರಶ್ನಿಸಬಾರದಿತ್ತು. ಹಾಗೇನಾದರೂ ಅವರಿಗೆ ಇಷ್ಟವಾಗದ ಅಂಶಗಳು ಈ ಸಂದರ್ಶನದಲ್ಲಿದ್ದರೆ, ಅಥವಾ ಅವರು ಮಾತಾಡಿರುವ ಕ್ಷೇತ್ರಗಳ ಬಗ್ಗೆ ಅವರಿಗಿಂತಲೂ ಹೆಚ್ಚಾಗಿ ತಿಳಿವಳಿಕೆಯಿದ್ದರೆ ಅವರು ಈ ನಾಡಿನ ಜನಕ್ಕೆ ದಯಮಾಡಿ ತಿಳಿಸಿಕೊಡಬೇಕು.

  6. Shankarappa

    ಹುಲಿಕುಂಟೆ ಮೂರ್ತಿಯವರಿಗೆ,

    ನನ್ನ ಪ್ರಶ್ನೆಯು ಪುರ್ವಗ್ರಹಿತವಾದರೆ ರಾಮಯ್ಯರವರ ಮುಂದಿನ ಹೇಳಿಕೆಗಳ ಬಗ್ಗೆ ಸ್ವಲ್ಪ ತಿಳಿಸಿಕೊಡಿ:

    1. “ಎಪ್ಪತ್ತರ ದಶಕದಲ್ಲಿ ಅಂತಹ ಒಂದು ಅರ್ಥಪೂರ್ಣ ಸಾಹಿತ್ಯ ಹೊರಹೊಮ್ಮಿದ್ದನ್ನು ನಾವು ಕಾಣಬಹುದು. ಆಗ ನಮ್ಮ ಸಮಾಜವೇ ಒಂದು ಸ್ಫೋಟಕ್ಕೆ ಕಾಯ್ತಿದೆ ಎನ್ನುವ ರೀತಿ ಕುದಿಯುತ್ತಾ ಇತ್ತು”. ಈ ಹೇಳಿಕೆಯ ಹಿನ್ನಲೆಯನ್ನು ಸ್ವಲ್ಪ ಬಿಡಿಸಿ ಹೇಳಿ.

    2. “ನಮ್ಮ ಸಾಂಸ್ಕೃತಿಕ, ಪರಂಪರೆಯಲ್ಲಿ ಪ್ರತಿರೋಧದ ನೆಲೆಗಳನ್ನು ಅರ್ಥ ಮಾಡಿಕೊಳ್ಳಲು ನಮಗಿರುವ ಪ್ರಮುಖ ಆಕರಗಳು ಇವೇ(ಮಂಟೇಸ್ವಾಮಿ, ಮಲೆಮಾದೇಶ್ವರ, ಜುಂಜಪ್ಪಗಳಂಥ ನಾಡಿನ ಮೌಖಿಕ ಕಾವ್ಯಗಳ)”. ರಾಮಯ್ಯನವರು ಈ ಆಕರಗಳನ್ನು ಪ್ರತಿರೋದದ ನೆಲೆಯಲ್ಲಿಯೇ ಅರ್ಥಮಾಡಿಕೊಳ್ಳಬೇಕೆಂದು ಏಕೆ ಹೇಳುತ್ತಾರೆ? ಒಂದು ವೇಳೆ, ಈ ಪ್ರಶ್ನೆಗೆ ಉತ್ತರ ಭಾರತೀಯ ಸಮಾಜದಲ್ಲಿ ಜನರು ಶೋಷಿತರಾಗಿದ್ದಾರೆ ಎನ್ನುವುದಾರೆ, ಆ ಶೋಷಕರನ್ನು ಶೋಷಿತರು ಪ್ರೀತಿಸಲು ಸಾಧ್ಯವೇ?

    ಶೋಷಿತರು ಶೋಷಕರನ್ನು ಪ್ರೀತಿಸಲು ಸಾಧ್ಯವೇ ಇಲ್ಲ ಎನ್ನುವುದಕ್ಕೆ ರಾಮಯ್ಯನವರ ಮುಂದಿನ ಹೇಳಿಕೆಯನ್ನು ಗಮನಿಸಿ: “ಈ ಮಠಾಧೀಶರಿಗಂತೂ ಮಾನ, ಮರ್ಯಾದೆಯೇ ಇಲ್ಲ. ಅವರು ಸಣ್ಣವರಿರಲೀ, ದೊಡ್ಡವರಿರಲೀ ಕಣ್ಣು, ಕಿವಿ ಎರಡನ್ನೂ ಕಳೆದುಕೊಂಡಿದ್ದಾರೆ”.

    ಇಂತಹ ಹೇಳಿಕೆಗಳು ಯಾವ ಮಟ್ಟಕ್ಕೆ ತಲುಪಿವೆ ಎನ್ನುವುದನ್ನು ತಿಳಿಯಲು ಮುಂದಿನ ಹೇಳಿಕೆಯನ್ನು ಗಮನಿಸಿ: “ಇಂದು ದಲಿತ ನಾಯಕತ್ವ ಏನಿದೆಯಲ್ಲಾ ಅದು ನಾಯಕತ್ವ ಅಲ್ಲ. ಅದು ಡಕಾಯಿತರ ತಂಡ. ಇವರು ದುಡ್ಡು ವಸೂಲಿಗೆ ಇಳಿದಿರುವಂತವರು”. ಅಂದರೆ ಇಂದು ದಲಿತರು ತಮ್ಮಲ್ಲಿರುವವರ ಬಗ್ಗೆಯೇ ನಿಂದಿಸುವ ಮಟ್ಟಕ್ಕೆ ತಲುಪಿರುವುದು. ಹೀಗೆ ದೂಷಿಸುವುದರಿಂದ ಶೋಷಿತರಿಗೆನದರು ಉಪಯೋಗವಾದುತದೆಯೇ?

    “ನಾವು ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವಾಗ ಅದು ಒಂದು ಆದರ್ಶವಾಗಿತ್ತು. ಲಂಕೇಶ್ ಪತ್ರಿಕೆ, ಸುದ್ದಿ ಸಂಗಾತಿ, ಮುಂಗಾರು ಇವೆಲ್ಲವೂ ನಮಗೆ ಒಂದು ಆದರ್ಶವಾಗಿದ್ದವು. ಹೀಗಾಗಿ ಪತ್ರಿಕೋದ್ಯಮವೆ ಒಂದು ಪ್ರವಾಹದ ವಿರುದ್ಧದ ಈಜಾಗಿ ನಮಗೆ ಚೈತನ್ಯ ನೀಡುತ್ತಿತ್ತು”. ಈ ವಿಚಾರವು ನಿಜವೆಂದು ಒಪ್ಪಿಕೊಳ್ಳುವ, ಆದರೆ, ಆ ಕಾಲದಲ್ಲಿ ಈ ಪತ್ರಿಕೆಗಳಲ್ಲಿದ್ದ ಮಾನವ ಕಾಳಜಿ ಮತ್ತು ಆದರ್ಶಗಳು ಎಂಬ ಶಿರ್ಶಿಕೆಗಳಡಿಯಲ್ಲಿದ್ದ ವಿಚಾರಗಳು ಮತ್ತು ಚೈತನ್ಯಗಳ ಬಗ್ಗೆ ಸ್ವಲ್ಪ ಬಿಡಿಸಿ ಹೇಳಿ.

    ನಿಮ್ಮ ಉತ್ತಗಲಿಗಾಗಿ ಕಾಯವವ,
    ಶಂಕರಪ್ಪ

    • ಹುಲಿಕುಂಟೆ ಮೂರ್ತಿ

      ಮಾನ್ಯ ಶಂಕರಪ್ಪನವರೇ.. ನೀವು ರಾಮಯ್ಯನವರಿಗೆ ಕೇಳಿದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತೋ ಇಲ್ಲವೋ.. ಈಗ ಮತ್ತೆ ತಮ್ಮ ಪ್ರಶ್ನೆಗಳ ಸಂಖ್ಯೆಯನ್ನು ಹೆಚ್ಚಿಸಿದ್ದೀರಿ. ಹೀಗೆ ನೀವು ಕೇಳುತ್ತಿರುವ ಪ್ರಶ್ಬೆಗಳು ಉತ್ತರಗಳನ್ನು ನಿರೀಕ್ಷಿಸಿ ಹುಟ್ಟಿದವುಗಳಲ್ಲ ಎಂಬುದನ್ನು ಅರಿತು ಈ ಮುಂದಿನ ಮಾತುಗಳಿಗೆ ತೊಡಗುತ್ತಿದ್ದೇನೆ. ತಾವು ರಾಮಯ್ಯನವರಿಂದ ನನಗೆ ಪ್ರಶ್ನೆಗಳನ್ನು ವರ್ಗಾಯಿಸಿರುವುದು ನನಗೆ ಖುಷಿ ತಂದಿದೆ. ಯಾಕೆಂದರೆ ತಾವು ರಾಮಯ್ಯನವರಿಗಾಗಿ ಸಿದ್ಧಪಡಿಸಿದ ಪ್ರಶ್ನೆಗಳನ್ನು ನನ್ನ ಕಡೆಗೆ ಎಸೆದಿದ್ದೀರಿ. ಸಮಸ್ಯೆಯೆಂದರೆ, ನಾನೂ ರಾಮಯ್ಯನವರ ಮಗ್ಗುಲಲ್ಲೇ ನಿಂತು ಲೋಕವನ್ನು ಕಾಣಲು ಹವಣಿಸುತ್ತಿರುವವ. ಇರಲಿ..
      ನಿಮ್ಮ ಮೊದಲ ಪ್ರಶ್ನೆಗೆ ಉತ್ತರ ಮೂರುಕಾಲು ದಶಕಗಳ ಕರ್ನಾಟಕದ ಚರಿತ್ರೆಯಲ್ಲಿಯೇ ಇದೆ. ಐದು ಸಾವಿರ ವರ್ಷಗಳ ಶೋಷಣೆಯ ಹೊಡೆತದಿಂದ ಬಸವಳಿದುಹೋಗಿದ್ದ ದಲಿತರು ಒಂದೇ ನೆಗೆತಕ್ಕೆ ಆಕಾಶಕ್ಕೆ ಎಗರಿನಿಂತು ಸಾಹಿತ್ಯ-ಸಂಸ್ಕೃತಿಯಲ್ಲಿ ನಭವಿಷ್ಯ ಗುರುತು ಮಾಡಿದ್ದು ತಮ್ಮ ಅರಿವಿಗೆ ಬಂದಿಲ್ಲದ್ದರ ಬಗ್ಗೆ ನನಗೆ ವಿಷಾದವಿದೆ. ದಸಂಸಂ ದ ಹುಟ್ಟು ಮತ್ತು ಅದು ಹೊತ್ತಿಸಿದ ಬೆಳಕಿನ ದೊಂದಿಗಳು ನಾಡಿನ ಶೋಷಿತರ ಅಸ್ಥಿಪಂಜರಗಳಲ್ಲಿ ಬೆಳಕು ಮೂಡಿಸಿ ಶೋಷಣೆಯ ವಿರುದ್ಧ ಸಿಡಿದೆದ್ದು ನಿಲ್ಲಲು ತ್ರಾಣ ಒದಗಿಸಿದ್ದನ್ನು ದೇಶ ಮರೆತುಬಿಟ್ಟಿತೇ..? ದಯಮಾಡಿ ಅಂದು ಸೃಷ್ಟಿಯಾದ ದಲಿತ-ಬಂಡಾಯ ಸಾಹಿತ್ಯವನ್ನು ಹೊಂದಿಸಿಕೊಂಡು ಓದಿ. ರಾಮಯ್ಯನವರು ಬರೆದ ಹಾಡುಗಳು ರಾಜ್ಯದ ಮೂಲೆಮೂಲೆಗಳಲ್ಲಿ ಜನಪದವೇ ಆಗಿಹೋಗಿರುವುದನ್ನು ನಿಮ್ಮ ವಾದ ಅಳಿಸಬಲ್ಲುದೇ..? ಸಿದ್ಧಲಿಂಗಯ್ಯನವರು ಅಂದು ಬರೆದ ಪದ್ಯಗಳು, ಸುದ್ದಿಸಂಗಾತಿ, ಪಂಚಮ ಪತ್ರಿಕೆಗಳು ಹಚ್ಚಿದ ವೈಚಾರಿಕತೆಯ ಕಿಡಿ ನಮ್ಮಂಥ ಯುವಜನರ ಎದೆಗಳಲ್ಲಿ ಇಂದಿಗೂ ಉಳಿದಿರುವುದನ್ನು ಕಾಣಲು ತಮ್ಮಂಥವರಿಗೆ ಕನ್ನಡಕದ ಅಗತ್ಯವಿದೆಯೇ..? ದೇವನೂರು ಮಹಾದೇವರ ಕತೆಗಳು ಕನ್ನಡ ಸಾಹಿತ್ಯದ ಸ್ಪೋಟಕಗಳಂತೆ ಕಂಡು ಇಡೀ ಸಾಹಿತ್ಯ ವಿಮರ್ಶೆ ತನ್ನ ಪರಿಕರಗಳನ್ನು ಬದಲಿಸಿಕೊಂಡದ್ದು ಸುಳ್ಳೇ..? ರಾಮಯ್ಯನವರು “ಎಪ್ಪತ್ತರ ದಶಕದಲ್ಲಿ ಅಂತಹ ಒಂದು ಅರ್ಥಪೂರ್ಣ ಸಾಹಿತ್ಯ ಹೊರಹೊಮ್ಮಿದ್ದನ್ನು ನಾವು ಕಾಣಬಹುದು. ಆಗ ನಮ್ಮ ಸಮಾಜವೇ ಒಂದು ಸ್ಫೋಟಕ್ಕೆ ಕಾಯ್ತಿದೆ ಎನ್ನುವ ರೀತಿ ಕುದಿಯುತ್ತಾ ಇತ್ತು” ಎಂದಿರುವುದನ್ನು ನಾನೇ ಯಾಕೆ, ಕನ್ನಡ ಸಾಹಿತ್ಯ-ಸಂಸ್ಕೃತಿಯ ನೈಜ ಅಧ್ಯಯನದಲ್ಲಿ ತೊಡಗಿರುವ ಯಾರಾದರೂ ಒಪ್ಪಿಯೇ ಒಪ್ಪುತ್ತಾರೆ.
      ಇನ್ನು ನಮ್ಮ ಸಾಂಸ್ಕೃತಿಕ ಪರಂಪರೆಗಳ ಪ್ರತಿರೋಧದ ನೆಲೆಗಳ ಬಗ್ಗೆ ರಾಮಯ್ಯನವರ ಅಭಿಪ್ರಾಯ ಕುರಿತು ತಮ್ಮ ಪ್ರಶ್ನೆಯೇ ವಿಚಿತ್ರವಾಗಿದೆ. ‘ರಾಮಯ್ಯನವರು ಈ ಆಕರಗಳನ್ನು ಪ್ರತಿರೋದದ ನೆಲೆಯಲ್ಲಿಯೇ ಅರ್ಥಮಾಡಿಕೊಳ್ಳಬೇಕೆಂದು ಏಕೆ ಹೇಳುತ್ತಾರೆ?’ ಎಂಬ ನಿಮ್ಮ ಪ್ರಶ್ನೆಯಲ್ಲಿ ಗರ್ಭಗುಡಿಯ ವಾಸನೆ ಇದೆ ಎಂಬುದು ತಮ್ಮ ಪ್ರಶ್ನೆಯನ್ನು ಕೇಳಿದ ಯಾರಿಗಾದರೂ ಅರ್ಥವಾಗುತ್ತದೆ. ಆ ಪ್ರಶ್ನೆಗೆ ತಾವೇ ‘ರಾಮಯ್ಯನವರು ಹೀಗೆ ಹೇಳಿದರೆ..’ ಎಂದು ಕೊಟ್ಟುಕೊಂಡಿರುವ ಉತ್ತರ ನಗು ತರಿಸುತ್ತದೆ. ಮಂಟೇಸ್ವಾಮಿ, ಮಾದಪ್ಪ, ಜುಂಜಪ್ಪ, ಕರಿಬಂಟದಂತ ಜನಪದರ ಮಹಾಕಲಾವ್ಯಗಳು ಶಿಷ್ಟ ಸಂಸ್ಕೃತಿಯ ಅಮಾನವೀಯ ಮೌಲ್ಯಗಳೆದುರು ಪ್ರತಿರೋಧವನ್ನು ದಾಖಲಿಸಲೆಂದೇ ಹುಟ್ಟಿಕೊಂಡವು ಎಂಬುದನ್ನು ಅವುಗಳನ್ನು ಒಂದೇ ಒಂದು ಬಾರಿ ಓದಿದರೂ ಅರ್ಥ ಮಾಡಿಕೊಳ್ಳಬಹುದು.
      ಇನ್ನು ತಮ್ಮ ಮುಂದಿನ ಶೋಷಿತ-ಶೋಷಕರ ಪ್ರಶ್ನೆಗಳಲ್ಲಿ ರಾಮಯ್ಯನಂಥವರು “ಈ ಮಠಾಧೀಶರಿಗಂತೂ ಮಾನ, ಮರ್ಯಾದೆಯೇ ಇಲ್ಲ. ಅವರು ಸಣ್ಣವರಿರಲೀ, ದೊಡ್ಡವರಿರಲೀ ಕಣ್ಣು, ಕಿವಿ ಎರಡನ್ನೂ ಕಳೆದುಕೊಂಡಿದ್ದಾರೆ” ಎಂದು ಹೇಳುತ್ತಿರುವ ಕಾರಣಕ್ಕೆ ಆ ಮಠಾಧೀಶರು ಪ್ರತಿನಿಧಿಸುತ್ತಿರುವ ಸಮುದಾಯಗಳು ರಾಮಯ್ಯ ಪ್ರತಿನಿಧಿಸುವ ಸಮುದಾಯಗಳನ್ನು ಶೋಷಸುವ ಅಧಿಕಾರ ಪಡೆದಿದ್ದಾರೆ ಎಂಬರ್ಥದಲ್ಲಿ ಮಾತನಾಡಿದ್ದೀರಿ. ಈ ಬಗ್ಗೆ ನಿಮ್ಮಲ್ಲಿಯೇ ಉತ್ತರವಿದೆ.
      ಮುಂದುವರಿದು “ಇಂದು ದಲಿತ ನಾಯಕತ್ವ ಏನಿದೆಯಲ್ಲಾ ಅದು ನಾಯಕತ್ವ ಅಲ್ಲ. ಅದು ಡಕಾಯಿತರ ತಂಡ. ಇವರು ದುಡ್ಡು ವಸೂಲಿಗೆ ಇಳಿದಿರುವಂತವರು” ಎಂಬ ರಾಮಯ್ಯನವರ ಗುಡುಗಿನ ಬಗ್ಗೆ ತೀರಾ ತೆಳುವಾದ ಗ್ರಹಿಕೆಯಿಂದ ಪ್ರಶ್ನಿಸಿದ್ದೀರಿ. ಅವರು ಹೇಳಿದ ಮಾತು ಸುಳ್ಳೇ..? ಅವರನ್ನು ಡಕಾಯಿತರು ಎಂದು ಬೈಯದೆ ಇದ್ದರೆ ಅವರಿಂದ ಶೋಷಿತರಿಗೆ ಅನುಕೂಲವಾಗಿಬಿಡುತ್ತದೆಯೇ..? ನಮ್ಮೊಳಗಿನ ಗಾಯ ನಮಗೇ ತಾನೇ ನೋವುಂಟು ಮಾಡುವುದು..? ನಾವೇ ತಾನೇ ಅದಕ್ಕೆ ಮುಲಾಮು ಹಚ್ಚಿಕೊಲ್ಳಬೇಕು..? ‘ನಮ್ಮ ಕಾಲೊಳಗಣ ಮುಳ್ಳ ನಾನೇ ತೆಗೆಯಬೇಕು’ ಎಂದು ಅಮುಗೆ ರಾಯಮ್ಮ ಹೇಳಿದ ಅರ್ಥದಲ್ಲಿ ರಾಮಯ್ಯನವರ ಮಾತುಗಳಿಲ್ಲವೇ…? ರಾಮಯ್ಯನವರು ನಾವು ನೋಡಿಕೊಳ್ಳಲಾಗದ ಅಂಗೈ ಹುಣ್ಣುಗಳನ್ನು ನಮಗೆ ಕಾಣಿಸಿದ್ದಾರೆ ಎಂದು ಯಾಕೆ ನೀವು ಅರ್ಥ ಮಾಡಿಕೊಲ್ಳಲಾರಿರಿ…? ಇನ್ನು ದಯಮಾಡಿ
      ಸುದ್ದಿಸಂಗಾತಿ, ಮುಂಗಾರು, ಲಂಕೇಶ್ ಪತ್ರಿಕೆಗಳನ್ನು ಹುಡುಕಿ ಓದದಿದ್ದರೆ ತಮ್ಮ ಕೊನೆಯ ಪ್ರಶ್ನೆಗೆ ಅರ್ಥವಿಲ್ಲ ಎಂಬ ವಿನಮ್ರ ನಂಬಿಕೆ ನನ್ನದು.

  7. GN NAGARAJ

    EE SPHOTAKA VICHARAGALU GAMBHIRA CHARCHEGOLGAGABEKIDE.ADARE RAMAIAHANAVARA MATHUGALU SITTINA KAVACHA HODDA THEEVRA NIRASEYA MATHUGLAGIVE.NANAGE KANNADADALLI ACHCHISUDU BARUVUDILLA.ADDARINDA NANNA VICHARAGALANNU ILLI DHVANISALAGUTTILLA.70RA DASHAKADA UTTUNGA SHIKARADALLI NINTHU NODIDARE INDU ELLAVOO KUBJAVAGI KANUTTADE. ADARE SAMAJA 60RA DASHAKADA THAGGININDA ERALARAMBISIDDU HEGE? RAMAIAHANATAVRU SIDDALINGAIAH DEVANOORARANTHAHARU ROOPUGONDIDDU SAMAJADA YAVA KULUMEYALLI? EE PRASHNEGALIGE UTTARVANNU KANDUKOLLUVUDARALLIYE 60,70,90 RA DASHAKAGALA SAMAJADA CHALANEYANNU OTTIGE GRAHISUVUDARALLIYE EE SITTU NIRASEGALIGE ASHADAYAKA UTTARA,MUNDINA DARI IDE.

  8. ಸಿ ಪಿ ನಾಗರಾಜ

    ಈ ಸ್ಫೋಟಕ ವಿಚಾರಗಳು ಗಂಭೀರ ಚರ್ಚೆಗೊಳಪಡಬೇಕಾಗಿದೆ . ಆದರೆ ರಾಮಯ್ಯನವರ ಮಾತುಗಳು ಸಿಟ್ಟಿನ ಕವಚ ಹೊದ್ದ ತೀವ್ರ ನಿರಾಶೆಯ ಮಾತುಗಳಾಗಿವೆ . ನನಗೆ ಕನ್ನಡದಲ್ಲಿ ಅಚ್ಚಿಸುವುದು ಬರುವುದಿಲ್ಲ. ಅದ್ದರಿಂದ ನನ್ನ ವಿಚಾರಗಳನ್ನು ಇಲ್ಲಿ ಧ್ವನಿಸಲಾಗುತ್ತಿಲ್ಲ . ಎಪ್ಪತ್ತರ ದಶಕದ ಉತ್ತುಂಗ ಶಿಖರದಲ್ಲಿ ನಿಂತು ನೋಡಿದರೆ ಇಂದು ಎಲ್ಲವೂ ಕುಬ್ಜವಾಗಿ ಕಾಣುತ್ತಿದೆ . ಆದರೆ ಸಮಾಜ ಅರವತ್ತರ ದಶಕದ ತಗ್ಗಿನಿಂದ ಏಳಲಾರಂಭಿಸಿದ್ದು ಹೇಗೆ? ರಾಮಯ್ಯನಂಥವರು , ಸಿದ್ದಲಿಂಗಯ್ಯ ದೇವನೂರುರಂಥವರು ರೂಪುಗೊಂಡಿದ್ದು ಸಮಾಜದ ಯಾವ ಕುಲುಮೆಯಲ್ಲಿ ? ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವುದರಲ್ಲಿಯೇ ಅರವತ್ತು – ಎಪ್ಪತ್ತು – ತೊಂಬತ್ತರ ದಶಕಗಳ ಸಮಾಜದ ಚಲನೆಯನ್ನು ಒಟ್ಟಿಗೆ ಗುರುತಿಸುವುದರಲ್ಲಿಯೇ ಈ ಸಿಟ್ಟು ನಿರಾಶೆಗಳಿಗೆ ಆಶಾದಾಯಕ ಉತ್ತರ , ಮುಂದಿನ ದಾರಿ ಇದೆ . ( ಜಿ ಎನ್ ನಾಗರಾಜ ಅವರ ಪ್ರತಿಕ್ರಿಯೆಯ ಲಿಪಿ ಬದಲಾವಣೆಯನ್ನು ಮಾಡಿದ್ದು : ಸಿ ಪಿ ನಾಗರಾಜ )

    • GN NAGARAJ

      cp nagarajravarige vadanegalu.onde ondu sanna marpadide.’60ra dashakada thaggininda eralarambisiddu’ endirabeku.
      nanu ninne baredudara uddesha idu:
      samajada chalaneyallina ondu ghattavagi, aa ghattada[ex:70ra 80ra aarambhada chaluvaligala ghatta] ugamakke karanavada samajika paristhithi enu emba bagge vishleshane nadesabeku. hageye adu ilimukhavagalu karanavada paristhithiya bagge kooda.aga vyakthigalu avara doshagale ee avanathige karana emba nirase sittige badalagi samajika chaluvaligalige agathyavada paristhithiyannu roopisuvudaralli nammella shaktiyannu thodagisabahudu.
      samajada chalaneya bagavagi chaluvaligala eru ilivu sahaja.yavagalu erumukhavagiye athava ilimukhavgiye iralu samajika paristhithi biduvudilla.
      hege swathanthrya chaluvali namma janara pragneyannu ettarakkerisideyo hageye 70ra chaluvaligalu andu thakadidda jana samoohavannu echcharagoliside.idaralli yava anumanavoo illa.ee echchara mundina chaluvaligalu maththastu eththarakkeralu hakida asthivara.addarinda nammellara prayathna ee asthivaravannu adastoo vistharisuvudu hagoo gattigolisuvudaraththa thudiyabeku.

  9. shankar halagatti

    Ramayya adida matugalalli kalagigint hatase eddu kanuttade. yaru yarnnoo doora idlu aguvadilla namge nave hage namma manssige beli hakikollutteve enisuttade. bree dalita chaluvaligararashte hadi tappilla ella chaluvaligloo hadiyallilla yembudannu gamanisabeku.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading