ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಲ್ಟಾ ಪುಲ್ಟಾ ಕೆ ಟಿ ಶಿವಪ್ರಸಾದ್

ಕೆಟಿಎಸ್ ಹೇಳಿದ ಒಂದೆರಡು ಪ್ರಸಂಗಗಳು

ನಾಗರಾಜ್ ಹೆತ್ತೂರು


ನೀವು ಯಾಕೆ ಸಾರ್ ಎಲ್ಲವನ್ನೂ ಉಲ್ಟಾ ಬರೆಯುತ್ತೀರಿ…?

ಬಹಳ ದಿನದಿಂದ ಇದ್ದ ಆನುಮಾನವನ್ನು ಹೊರಗೆಡವಿದೆ. ಚಿತ್ರ ಕಲಾವಿದರಾದ ಕೆ.ಟಿ ಶಿವಪ್ರಸಾದ್ ನನ್ನ ಮುಖವನ್ನು ನೋಡಿ ಒಮ್ಮೆ ನಕ್ಕರು. ನಿನಗೆ ಅನ್ನಿಸಿದಂತೆ ನೋಡು ಎಂದರು. ಸರಿಯಾಗಿ ನೋಡು..

ನಾನು ಮತ್ತೆ ಪೇಯಿಂಟಿಂಗ್ ನೋಡಿದೆ. ನನಗೆ ಅರ್ಥವಾಗುತ್ತಿಲ್ಲ ಎಂದೆ.

ಕರೆದು ಕೂರಿಸಿಕೊಂಡ ಕೆಟಿ ಒಂದು ಘಟನೆ ಹೇಳಿದರು. ` ಬೆಂಗಳೂರಿನ ಚಿತ್ರ ಕಲಾ ಪರಿಷತ್ ನಲ್ಲಿ ಹೀಗೆ ಒಂದು ನನ್ನ ಪೇಯಿಂಟಿಂಗ್ ಎಕ್ಸಿಬಿಷನ್ ಮಾಡಿದ್ದೆ. ಬೇರೆ ಬೇರೆ ರಾಜ್ಯದ ಕಲಾವಿದರೆಲ್ಲ ಬಂದಿದ್ದರು.

ಈ ಮಧ್ಯೆ ಒಬ್ಬ ಇಂಗ್ಲೀಷ್ ವ್ಯಕ್ತಿ ಬಂದು ನೀವೇನಾ ಶಿವಪ್ರಸಾದ್ ಎಂದರು.

ಹೌದು ಎಂದೆ.

ನನ್ನನ್ನೇ ಸ್ವಲ್ಪ ಹೊತ್ತು ನೋಡಿ ಬೇಸರ ಮಾಡಿಕೊಳ್ಳಬೇಡಿ `ನೀವು ಯಾಕೆ ತಲೆಕೆಳಗಾಗಿ ಯಾಕೆ ಪೇಯಿಂಟಿಂಗ್ ಮಾಡುತ್ತೀರಿ’ ಎಂದರು…

`ಅದು ಒಂದು ವಿಧಾನ ಸಾರ್’ ಎಂದೆ.

ಸ್ವಲ್ಪ ಹೊತ್ತು ನಿಂತು ಮಾತನಾಡಿ ಮತ್ತೆ ನನ್ನ ಪೇಯಿಂಟಿಂಗ್ ನೋಡಿ ಕೊಂಡು ಬಂದವನು `ಯೆಸ್’ ನೀವು ಹೇಳಿದ್ದು ಸರಿ ಎಂದರು.

ಪೇಯಿಂಟಿಂಗ್ ಒಳಗೆ ನಾವು ಓಡಾಡಲು ಸಾಧ್ಯವಿಲ್ಲ. ನೋಟಕ್ಕೆ ಸಂಬಂಧಿಸಿದ್ದನ್ನು ಡೀಲ್ ಮಾಡುವುದೇ ಪೇಯಿಂಟಿಂಗ್. ಇದು ಸಾಹಿತ್ಯದಂತಲ್ಲ. ಅದು ನಮ್ಮ ನೋಟದ ಲಿಮಿಟೇಷನ್ ಗೆ ಒಳಪಟ್ಟಿದೆ ಎಂದರು.

ಉದಾಹರಣೆಗೆ ನಮಗೆ ಭೂಮಿ ಹೇಗೆ ಕಾಣುತ್ತದೆ ಎಂಬುದು ಅವರ ನೋಟಕ್ಕೆ ಸೀಮಿತವಾಗಿದೆ. ಭೂಮಿ ಗುಂಡಗಿದೆ ಎಂಬುದು ಗೊತ್ತಾಗಿದ್ದೇ ವಿಜ್ಞಾನ ಮುಂದುವರೆದಂತೆ. ಹೀಗಾಗಿ ನೋಟಕ್ಕೆ ಲಿಮಿಟ್ ಇದೆ. ಇದು ಗೊತ್ತಾಗುವವರೆಗೆ ಭೂಮಿಯನ್ನು ಗುಂಡಾಗಿದೆ ಎಂದರೆ ನಂಬುತ್ತಿದ್ದರೇ…? ಹಾಗೆ ನೋಡುವ ದೃಷ್ಠಿಕೋನದಲ್ಲೂ ಬದಲಾವಣೆ ಇರಲಿಲ್ಲ.

ನಮ್ಮ ನೋಟದ ಲಿಮಿಟೇಷನ್ ಹೇಗಿದೆ ಎಂದರೆ, ಉದಾಹರಣೆಗೆ ದನಗಳಿಗೆ ಕಲರ್ ಕಾಣಲ್ಲ. ಆದರೆ ನಮಗೆ ಕಲರ್ ಕಾಣುತ್ತದೆ. ನಮಗೆ ರಾತ್ರಿ ಎನ್ನುವುದು ಗೂಬೆಗೆ ಹಗಲು, ನಮಗೆ ಹಗಲು ಎನಿಸಿದ್ದು ಗೂಬೆಗೆ ಕತ್ತಲು, ನಾಯಿಗೆ ಹಗಲು, ರಾತ್ರಿ ಎರಡೂ ಸಮಯ ಕಣ್ಣು ಕಾಣುತ್ತ್ತದೆ, ಹದ್ದು ಟೆಲಿಸ್ಕೋಪಿಕ್ ಕಣ್ಣುಗಳಿವೆ 300 ಅಡಿ ಮೇಲಿಂದ ಭೂಮಿ ಮೇಲಿನ ಒಂದು ಇಲಿಯನ್ನೂ ಗುರುತಿಸುತ್ತದೆ. ಹೀಗಿರುವಾಗ ನಾವು ನೋಡುತ್ತಿರುವುದೇ ಸತ್ಯ ಎಂದು ಯಾಕೆ ಹೇಳುತ್ತೇವೆ…? ಗೂಬೆ ಅಂದುಕೊಂಡಿರುವುದು ಸರಿ ಆಗಿರಬಹುದು… ನಾಯಿ ನೋಡುತ್ತಿರುವುದೇ ಸರಿ ಇರಬಹುದಲ್ಲ…!

ಹೀಗಾಗಿ ಭೂಮಿಗೆ ಅದರದೇ ಒಂದು ಕ್ಯಾರೆಕ್ಟರ್ ಇಲ್ಲ. ಎಲ್ಲಾ ನಾವು ಮಾಡಿಕೊಂಡಿರುವುದು. ನೀರಿಗೆ ಹೆಣ್ಣಿನ ಹೆಸರನ್ನೇ ಯಾಕೆ ಇಟ್ಟಿದ್ದಾರೆ..? ಅದು ಹೇಳಿತ್ತೇ ನಾನು ಹೆಣ್ಣೆಂದು ಆದರೆ ನಾವು ಹೆಣ್ಣು ಎಂದು ಮಾಡಿಕೊಂಡಿದ್ದೇವೆ. ಇವೆಲ್ಲ ನಮ್ಮ ಕಲ್ಪನೆಗಳು ಇದನ್ನು ಮೀರಿ ಹೇಳಬೇಕು. ಈ ಪ್ರಪಂಚ ಎನ್ನುವುದು ನಾವು ನೋಡಿದಂತೆ ಅದಕ್ಕೆ ತನ್ನದೇ ಆದ ಕ್ಯಾರೆಕ್ಟರ್ ಇಲ್ಲ . ತೇಜಸ್ವಿ ಇದನ್ನು ಕತೆ ಗಳಲ್ಲಿ ಹೇಳುತ್ತಿದ್ದರು. ನಾನು ಪೇಯಿಂಟಿಂಗ್ ನಲ್ಲಿ ಹೇಳುತ್ತಿದ್ದೇನೆ. ಎಲ್ಲವೂ ಚಲನೆಗೆ ಸಂಬಂಧಿಸಿದ್ದು. ಈ ಭೂಮು ಯಾವಾಗಲೂ ಹೇಗೆ ಸುತ್ತುತ್ತಿರುತ್ತದೆಯೋ ಹಾಗೆ ನಾವು ಸದಾ ಚಲನೆಯಲ್ಲಿರಬೇಕು.ಯಾವಾಗ ನಾವು ಚಲನೆಯನ್ನು ಕಳೆದುಕೋಳುತ್ತೆವೋ ಅವತ್ತು ನಾವು ಕಳೆದು ಹೋದಂತೆ ಹೀಗೆಂದು ನಿಟ್ಟುಸಿರುಬಿಟ್ಟರು ಕೆ.ಟಿ.

ಹೌದಲ್ಲವಾ ಎನಿಸಿತು.

ಬುದ್ದನ ಪಶ್ಚಾತ್ತಾಪ

ಈ ಮಧ್ಯೆ ಬುದ್ದನ ಕತೆಯೊಂದು ಪ್ರಸ್ತಾಪವಾಯಿತು. ಬುದ್ದ ಗುರು ಅದಾಗಲೇ ಖ್ಯಾತಿ ಪಡೆದಿದ್ದ ಕಾಲ. ಹೀಗೆ ಒಮ್ಮೆ ಕಪಿಲ ವಸ್ತುವಿಗೆ ಬಂದಿದ್ದರು. ಈ ಮಧ್ಯೆ ಬುದ್ದನ ನಾದಿನಿ ಇಬ್ಬರು ಮಕ್ಕಳನ್ನು ಕರೆತಂದು ದೀಕ್ಷೆ ಕೊಡಿಸಬೇಕೆಂದು ಬೇಡಿಕೊಂಡಳು. ಬುದ್ದ ಆಯಿತು ಎಂದು ಇಬ್ಬರಿಗೂ ದೀಕ್ಷೆ ನೀಡಿದ್ದಾಯಿತು. ಆತನ ನಾದಿನಿ `ಬುದ್ದ ಗುರು ನನಗೂ ದೀಕ್ಷೆ ನೀಡಿ ಎಂದಳು’ ಆದರೆ ಬುದ್ದ ಅದಕ್ಕೆ ನಿರಾಕರಿಸಿದ. ಆದರೆ ಇದನ್ನು ನಿರೀಕ್ಷಿಸದಿದ್ದ ಆತನ ಶಿಷ್ಯನೊಬ್ಬ ` ನೀವು ಮಾಡಿದ್ದು ತಪ್ಪು’ ಎಂದ. ತಕ್ಷಣವೇ ಬುದ್ದನಿಗೆ ಹೌದಲ್ಲವಾ…! ಎನ್ನಿಸಿ ಮತ್ತೆ ಆಕೆಯನ್ನು ಕರೆದು ದೀಕ್ಷೆ ನೀಡಿದರು. ಅದು ಬುದ್ದನ ದೊಡ್ಡತನ. ಆವತ್ತು ದೀಕ್ಷೆ ಪಡೆದವಳು ಬೌದ್ಧ ದೀಕ್ಷೆ ಪಡೆದ ಮೊದಲ ಮಹಿಳೆ.

ಕೆಲವೊಂದು ವೇಳೆ ದೊಡ್ಡವರೂ ತಪ್ಪು ಮಾಡುತ್ತಿರುತ್ತಾರೆ ಆದರೆ ಅರಿವಿರುವುದಿಲ್ಲ. ಅವರನ್ನೂ ಎಚ್ಚರಿಸಬೇಕು. ನಮ್ಮ ನಾಯಕರು ನಾವು ಮಾಡಿದ್ದೇ.., ಮಾತನಾಡಿದ್ದೇ ಸರಿ ಎಂಬ ಭ್ರಮೆಯಲಿರುತ್ತಾರೆ. ಅದಾಗಕೂಡದು. ಅಂತಹ ಇಗೋಗಳಿಂದ ಹೊರಬಂದು ನೋಡಿದಲ್ಲಿ ಮಾತ್ರ ಸುಂದರ ಪ್ರಪಂಚ ಕಾಣಿಸುತ್ತದೆ. ಅದನ್ನು ಬುದ್ದನಂತಹವರಿಂದ ನಾವು ಕಲಿಯಬೇಕು. ವಿಪರ್ಯಾಸ ಎಂದರೆ ಬುದ್ದನನ್ನೂ ಈ ಜನ ದೇವರು ಮಾಡಿದ್ದಾರೆ. ಬುದ್ದ ಯಾಕೆ ಇಷ್ಟ ಎಂದರೆ ಆತ ಚಲನೆಯನ್ನು ಒಪ್ಪಿಕೊಳ್ಳುತ್ತಾರೆ. ವಿಜ್ಞಾನವನ್ನು ಒಪ್ಪಿಕೊಳ್ಳುತ್ತಾನೆ. ಈ ಜನರಿಗೆ ನಾವು ವಿಜ್ಞಾನವನ್ನು ಸರಿಯಾಗಿ ಬೋಧಿಸಿದರೆ ಉಳಿದೆಲ್ಲವೂ ನಗಣ್ಯ ಎಂದು ಅರಿವಾಗುತ್ತದೆ.

ಸಾಹಿತಿಗಳು ಚಲನಶೀಲರಾಗಲಿ

ಕಲಾವಿದರು ರಾಜಕಾರಣ ಮಾಡುವ ಬಗ್ಗೆ ರಾಜಕೀಯದವರನ್ನು ಬೆಂಬಲಿಸುವ ಬಗ್ಗೆ ಚರ್ಚೆಯಾಗುತ್ತಿದೆ ಇದಕ್ಕೆ ಏನೆನ್ನುತ್ತೀರಿ…?

`ನೋಡೋ ಎಲ್ಲಾ ಆರ್ಟ್ ನಲ್ಲೂ ಪೋಲಿಟಿಕ್ಸ್ ಇದೆ. ಪೊಲಿಟಿಕ್ಸ್ ಇಲ್ಲದೇ ಆರ್ಟ್ ಅನ್ನೋದೇ ಇಲ್ಲ. ಅದು ಕಲೆ, ಸಾಹಿತ್ಯ, ಸಂಸ್ಕೃತಿ. ಯಾವುದನ್ನೂ ಬಿಟ್ಟಿಲ್ಲ ನನ್ನ ಪ್ರಕಾರ ಪೊಲಿಟಿಕ್ಸ್ನ್ನು ಬೆಳವಣಿಗೆಗೆ ಉಪಯೋಗಿಸಬಹುದು. ಕೆಲ ಪ್ರಮುಖ ಸಂದರ್ಭದಲ್ಲಿ ಕಲಾವಿದರು ಮಾತನಾಡಲೇಬೇಕು. ಅವರು ತಮ್ಮದೇ ಒಂದು ಸ್ಟಾಂಡ್ ತೆಎದುಕೊಳ್ಳಲೇಬೇಕು. ಸರಕಾರ ಹೇಗಿರಬೇಕು ಎಂದು ಅವರಿಗೂ ಒಂದು ನಿಲುವು ಇರುತ್ತದೆ. ಯಾಕೆಂದರೆ ನಮ್ಮದು ಡೆಮಾಕ್ರಸಿ. ಅದನ್ನು ಎಕ್ಸ್ಪ್ರೆಸ್ ಎಂದರೆ ಕಲಾವಿದರೂ ಮಾತನಾಡಲೇಬೇಕು. ಆದರೆ ಅದನ್ನೇ ಜೀವನ ಮಾಡಿಕೊಳ್ಳಬಾರದು. ಜನರನ್ನು ಜಾಗೃತಿ ಮೂಡಿಸುವಲ್ಲಿ ಇವರ ಪಾತ್ರವೂ ಅಪಾರ. ಆದರೆ ಅಧಿಕಾರದ ಹಿಂದೆ ಹೋಗಬಾರದು. ಕೊಟ್ಟರೂ ಬೇಡ ಎನ್ನಬೇಕು. ಕಾರಣ ಅಧಿಕಾರ ಮಾಡುವುದು ಕಲಾವಿದರ ಕೆಲಸವಲ್ಲ. ಇದೇ ಬೇರೆ ಕಸುಬು.. ಇದೇ ಬೇರೆ ಕಸುಬು.

ಕಲಾವಿದರು ಅಧಿಕಾರ ನಡೆಸಲು ಸಾಧ್ಯವಿಲ್ಲ. ಪಬ್ಲೊನ್ ನೆರೊಡ ಅಂತ ಚಿಲಿಯ ಕವಿ ಒಬ್ಬ ಇದ್ದ. ಅಲ್ಲಿನ ಸರ್ಕಾರ ಆತನನ್ನು ರಾಯಭಾರಿಯನ್ನಾಗಿ ಮಾಡಿತ್ತು. ನಮ್ಮ ಸಿದ್ದಲಿಂಗಯ್ಯ ಏನೇನಾದರು. ಅವರು ಬರೆಯುತ್ತಿದ್ದಾರೆಯೇ..? ಅವರು ಪೊಲಿಟಿಷಿಯನ್ ಆಗಿ ಹೋಗಿದ್ದಾರೆ. ಅಧಿಕಾರದ ಹಿಂದೆ ಹೋಗಿ ಸಾಹಿತ್ಯವನ್ನೇ ಮರೆತು ಹೋಗಿದ್ದಾರೆ. ಅದು ನಮ್ಮ ಕೆಲಸ ಅಲ್ಲ ಎಂದ ಮೇಲೆ ನಾವು ಅದರ ಹಿಂದೆ ಹೋಗಬಾರದು. ಹಳಿ ತಪ್ಪಿದಾಗ ಎಚ್ಚರಿಸುವ ಕೆಲಸವನಷ್ಟೇ ನಾವು ಮಾಡಬೇಕಿದೆ. ಒಳ್ಳೆಯ ಆರ್ಟಿಸ್ಟ್ ಎಂದೂ ರಾಜಕಾರಣಕ್ಕೆ ಹೋಗುವುದಿಲ್ಲ. ಅಲ್ಲಿ ಹೋಗಿ ಕೆಲಸ ಮಾಡಲು ಆಗುತ್ತದೆಯೇ..? ಅಂಥಹವನ್ನೆಲ್ಲ ಹ್ಯಾಂಡಲ್ ಮಾಡಲು ಸಾಹಿತಿಗಳು, ಆರ್ಟಿಸ್ಟ್ಗಳಿಗೆ ಸಾಧ್ಯವೇ ಇಲ್ಲ. ಸಾಹಿತ್ಯದ ಮೂಲಕವೇ ಹೊಸ ಸಾಹಿತ್ಯವನ್ನು ಕೊಡುವುದು ಅವರ ಕೆಲಸ. ಹೊಸ ಸಾಹಿತ್ಯಕ್ಕೆ ಚಲನೆ ಕೊಡಬೇಕು ಇಂದಿನ ಸಾಹಿತಿಗಳಿಗೆ ಅದೊಂದು ದೊಡ್ಡ ಸವಾಲು.

ಅಕ್ಕಿ ಧೈರ್ಯ ತಂದುಕೊಟ್ಟಿದೆ

ಹಾಗೆ ಹೊಸ ಸಿಎಂ ಸಿದ್ದರಾಮಯ್ಯನವರು 1 ರೂ ಗೆ ಒಂದು ಕೆಜಿಯಂತೆ ತಿಂಗಳಿಗೆ 30 ಕೆಜಿ ಅಕ್ಕಿ ಕೊಡುತ್ತೇನೆ ಎಂದು ಹೇಳಿದ್ದಾರೆ. ಕೆಲವರು ಇದು ಸೋಮಾರಿಗಳನ್ನಾಗಿ ಮಾಡುತ್ತದೆ ಎಂಬ ವಾದ ಎದ್ದಿದೆ ಏನನ್ನುತ್ತೀರಿ…?

`ನೋಡೋ ಈ ವಾದ ಮಾಡುತ್ತಿರುವುದು ಗುಲ್ಲೆಬ್ಬಿಸಿರುವುದು ಭೂಮಾಲೀಕರು. ಈಗ ಒಬ್ಬ ಕಾಲೇಜು ಪ್ರೊಫೆಸರ್ ಗೆ 1 ಲಕ್ಷ ಸಂಬಳ ಇದೆ. ಅಗತ್ಯಕ್ಕಿಂತ ಹೆಚ್ಚು ಕೊಡುತ್ತಾರೆ ಇದಕ್ಕೆ ಯಾರಾದರೂ ಆಕ್ಷೇಪ ಮಾಡುತ್ತಾರಾ ಇಲ್ಲವಲ್ಲಾ..? 30 ಕೆಜಿ ಅಕ್ಕಿ ಕೊಟ್ಟರೆ ಅವನು ತನ್ನ ಸಾಹುಕಾರನ ಬಳಿ ಹೆಚ್ಚು ಸಂಬಳ ಕೊಡಿ ಎಂದು ದೈರ್ಯದಿಂದ ಕೇಳಬಹುದು. ಒಂದು ವೇಳೆ ಸಾಹುಕಾರ ಆಗುವುದಿಲ್ಲ ಎಂದರೂ ಅವನಿಗೆ ಮನೆಯಲ್ಲಿ ಊಟಕ್ಕೆ ಕೊರತೆ ಇಲ್ಲ. ಆ ಒಂದು ಧೈರ್ಯವನ್ನು ಅಕ್ಕಿ ತಂದುಕೊಟ್ಟಿದೆ. ಎಲ್ಲರಿಗೂ ಹಣದ ಅವಶ್ಯಕತೆ ಇದೆ. ಹೆಚ್ಚು ಕೊಟ್ಟಷ್ಟು ಹೆಚ್ಚು ತೃಪ್ತನಾಗುತ್ತಾನೆ. ರೈತರು ಅಥವಾ ಕೂಲಿಕಾರ್ಮಿಕರು ಈಗ ರಿಸರ್ವ್ ಆಗುತ್ತಾರೆ ಯಾಕೆಂದರೆ ಅವರು ಈಗ ಅಕ್ಕಿಗೆ ಹೊಡೆದಾಡುವ ಪ್ರಮೇಯ ಇಲ್ಲ. ಆತ ಮುಂದಿನ ಬೇಕುಗಳಿಗೆ ಯೋಚಿಸುತ್ತಾನೆ. ಇದೊಂದು ಒಳ್ಳೆಯದನ್ನು ಸಿದ್ದರಾಮಯ್ಯ ಮಾಡಿದ್ದಾರೆ ಬಿಡು. ಈ ಮೂಲಕ ಬಡವರಿಗೆ ದೈರ್ಯ ಕೊಟ್ಟಿದ್ದಾರೆ.

ಸ್ಟೇಜ್ ಡೀಸೆನ್ಸಿ ಕಲಿತಿಲ್ಲ

ಸಾರ್ ನಾಳೆ ಅಂಬೇಡ್ಕರ್ ಜಾಗೃತಿ ಸಮಾವೇಶ ಇದೆ…ಬರುತ್ತಿದ್ದೀರಲ್ಲಾ?

ಬರಬೇಕೋ ಬೇಡವೋ ಒಂದು ಗೊತ್ತಾಗುತ್ತಿಲ್ಲ. ಈ ನಮ್ಮ ಭಾಷಣಕಾರರಿಗೆ ಇನ್ನೂ ಸ್ಟೇಜ್ ಡೀಸೆನ್ಸಿ ಎಂದರೇ ಏನೆಂದು ಗೊತ್ತಿಲ್ಲ. ಗಂಟೆಗಟ್ಟಲೆ ಮಾತನಾಡುತ್ತಾರೆ. ಸ್ಟೇಜ್ನಲ್ಲಿ ಹರಿಕತೆ ಹೇಳಿಕೊಂಡು ಕೂರುತ್ತಾರೆ. ಸ್ಟೇಜ್ ನಲ್ಲಿರುವ ಇತತರಿಗೆ ರೆಸ್ಪೆಕ್ಟ್ ಕೊಡುವುದಿಲ್ಲ. ಅಲ್ಲಾ ಕಣೋ ಅಂಬೇಡ್ಕರ್ ಬಗ್ಗೆ ಎಷ್ಟು ವರ್ಷದಿಂದ ಜೀವನವನ್ನೇ ಹೇಳಿಕೊಂಡು ಬರುತ್ತಿದ್ದೇವೆ…? ಎಂದಾದರೂ ಪ್ರಸ್ತುತ ಸಂದರ್ಭಕ್ಕೆ ಅಳವಡಿಸಿಕೊಂಡಿದ್ದೆವೆಯೇ..? ಸವಾಲುಗಳಿಗೆ ಉತ್ತರವನ್ನು ಯಾರೂ ಹೇಳುತ್ತಿಲ್ಲ. ಮಾತನಾಡಲು ಪ್ರಾರಂಭಿಸಿದರೆ ಮೈಮೇಲೆ ಏನೂ ಅವಾಹಿಸಿಕೊಂಡಂತೆ ಆಡುತ್ತಾರೆ. ಮೊನ್ನೆಯೂ ಹೀಗಾಯಿತು. ಕಾರ್ಯಕ್ರಮ ಹೇಳಿದ್ದೇ ಒಂದು ಟೈಂ, ಆರಂಭವಾಗಿದ್ದೇ ಇನ್ನೊಂದು ಟೈಂ ಈ ಮಧ್ಯೆ ಅದ್ಯಾರೋ ಬಂದು 2 ಗಂಟೆ ಮಾತನಾಡಿದರು.ಮದ್ಯಾಹ್ನ 3 ಗಂಟೆಯಾದರೂ ನಿಲ್ಲಿಸಲಿಲ್ಲ. ಎದುರಿಗೆ ಕುಳಿತವರು ಹೊಟ್ಟೆ ಹಸಿಯುತ್ತಿದೆ. ಸ್ಟೇಜ್ನಲ್ಲಿ ಕುಳಿತವರು ಅವರೂ ಮಾತನಾಡಬೇಕು ರೆಸ್ಪೆಕ್ಟ್ ಕೊಡಬೇಕು ಎಂಬ ಕನಿಷ್ಟ ಕಾಮನ್ಸೆನ್ಸ್ ಇಂದಿನ ಭಾಷಣಕಾರರಿಗೆ ತಿಳಿಯುತ್ತಿಲ್ಲ. ಟೈಂ ಸೆನ್ಸ್ ಇಲ್ಲದಿದ್ದರೆ ನಾವು ಏನು ಮಾಡಿದರೂ ಅದು ವ್ಯರ್ಥ ಕಣೋ…

ಸರಿ ನಾನು ಯಾವ್ದೊ ಪೇಯಿಂಟಿಂಗ್ ಮಾಡ್ಬೇಕು…ಮಧ್ಯೆ ಬಂದು ಡಿಸ್ಟರ್ಬ್ ಮಾಡ್ಬೆಡಾ…ಬೇರೆ ಮಾತನಾಡೋದು ಏನಾದ್ರೂ ಇದ್ರೆ ಈಗ್ಲೆ ಹೇಳು ಎಂದವರೇ ಬಾಗಿಲು ತೆಗೆಯಲು ಹೋದರು.

ಇವರ ಟೈಂ ನಾನು ಕಿಲ್ ಮಾಡೆದೆನಾ ಎಂದು ಅಲ್ಲಿಂದ ನಾನೂ ಎದ್ದು ಹೊರಬಂದೆ.

 

 

‍ಲೇಖಕರು avadhi

28 May, 2013

6 Comments

  1. Rupa hasana

    wonderful nagaraj!

  2. Satyanarayana BR

    ಕೆ.ಟಿ.ಯವರ ಮಾತುಗಳು ಆಯಸ್ಕಾಂತವಿದ್ದಂತೆ. ಅದನ್ನು ನಮ್ಮ ಮುಂದೆ ಸರಿಯಾಗಿಯೇ ಹಿಡಿದಿದ್ದಾರೆ ನಾಗರಾಜ್. ಇಬ್ಬರಿಗೂ ಅಭಿನಂದನೆಗಳು. ಕೆ.ಟಿ.ಯವರ ವಿಚಾರಧಾರೆ ಮೇ್ಲನೋಟಕ್ಕೆ ಸರಳವಾಗಿ ಕಂಡರೂ, ಹೊಸ ಅರಿವನ್ನು ಮನಸ್ಸಿನಲ್ಲಿ ಮೂಡಿಸುತ್ತವೆ. ಒಂದು ರೂಪಾಯಿಗೆ ಒಂದು ಕೇಜಿ ಅಕ್ಕಿ ಪ್ರಕರಣವನ್ನು ಇಂತಹ ಒಂದು ಆಯಾಮದಲ್ಲಿ ನೋಡಿರುವುದು ವಿನೂತನವಾಗಿದೆ. ಹಾಗೂ ಚಿಂತನಾರ್ಹವಾಗಿದೆ.

  3. chalam

    K.t yavaru nijakku namma naduvin athmasakshi…..e gowda.dalitha.lingayitha raadiya naduve avarannu parichayisuthiruvudakke danyavadagalu…

  4. ಲಿಂಗರಾಜು ಬಿ.ಎಸ್.

    ಬುದ್ಧ ಹೇಳಿದ್ದು ಇದನ್ನೇ, ಯಾಕೆ ಯಾರೋ ಹೇಳಿದರು ಅಂತ ಅದೇ ರೀತಿ ನೋಡ್ತಿರಿ. ಜಗತ್ತು ಹೀಗೂ ಇರಬಹುದು ನೋಡಿ ಎಂದು. ಈ ರೀತಿ ಹೇಳುವವರ ಸಾಲಿನಲ್ಲಿ ಕೆಟಿಎಸ್ ಕೂಡ ಒಬ್ಬರು. ಅವರ ಪೇಂಟಿಂಗ್ಸ್, ಬೀಗ ಹಾಕುವ ಪರಿಕಲ್ಪನೆ ಎಲ್ಲವೂ ಒಂಥರಾ ಉಲ್ಟ ಅನ್ನಿಸಿದರೂ ಕೂಡ ಅವೆಲ್ಲಾ ಪಾಠವಾಗುವಂಥವು(ಕಲಿಯುವವರಿಗೆ ಮಾತ್ರ).

  5. suvarna.c

    wonderfull painting sir kts
    very very nice .

  6. suvarna.c

    ಕೆ.ಟಿ.ಶಿವಪ್ರಸಾದ್ ಸರ್ ಚಿತ್ರಕಲೆ ಅದ್ಬುತವಾಗಿದೆ. ಅದಕ್ಕೆ ಅವರನ್ನು ಅಂತರಾಷ್ಟ್ರೀಯ ಚಿತ್ರಕಲಾವಿದ ೆನ್ನುವುದು. ಅವರ ಚಿಂತನೆಗಳನ್ನು ಇಂದಿನ ಯುವಜನತೆ ತಮ್ಮ ಬದುಕಿನಲ್ಲಿ ಆಳವಡಿಸಿಕೋಂಡರೆ ಸಮಾಜ ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಜಾಗತೀಕರಣದಲ್ಲಿ ಎಲ್ಲೆಡೆ ಸ್ಪಧೆ ಇದೆ ಅದರ ಜೋತೆಗೆ ರಾಗ ದ್ವೇಶ ಅಸೂಯೆ ತುಂಬಿದೆ. ಇದ್ಯವುದಕ್ಕೂ ತಲೆಕಡೆಸಿಕೋಳ್ಳದೆ
    ತಮ್ಮ ಪಾಡಿಗೆ ತಾವು ತಮ್ಮ ಪ್ರತಿಭೆಯನ್ನು ಕಲೆಯ ಮೂಲಕ ಸಮಾಜಕ್ಕೆ ನೀಡುತ್ತಿರುವುದು ನಿಜಕ್ಕೂ ಗ್ರೇಟ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading