ಖ್ಯಾತ ರಂಗಕರ್ಮಿ ಡಾ ಸಾಸ್ವೆಹಳ್ಳಿ ಸತೀಶ್ ಅವರ ಎರಡು ನಾಟಕ ಕೃತಿಗಳು ಶಿವಮೊಗ್ಗದಲ್ಲಿ ಬಿಡುಗಡೆಯಾಗುತ್ತಿವೆ.
ಕೆ ಗಣೇಶಯ್ಯ ಅವರ ಕಥೆಯನ್ನು ಆಧರಿಸಿ ಸತೀಶ್ ‘ಕಿತ್ತೂರ ನಿರಂಜನಿ’ ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ. ಇದಕ್ಕೆ ವಿಮರ್ಶಕ, ಕಥೆಗಾರ ಶಿವಕುಮಾರ ಮಾವಲಿ ಬರೆದ ಮುನ್ನುಡಿ ಇಲ್ಲಿದೆ-
ಕಿತ್ತೂರ ನಿರಂಜನಿ -ಅಜ್ಞಾತ ಇತಿಹಾಸ ಅನಾವರಣದ ಒಂದು ಕಥೆ.
ಶಿವಕುಮಾರ ಮಾವಲಿ
‘ಕನ್ನಡ ರಂಗಭೂಮಿ’ಗೆ ಹೊಸ ನಾಟಕಗಳ ಕೊರತೆಯಿದೆ ಎಂಬ ಮಾತು ಆಗಾಗ ಕೇಳಿಬರುತ್ತಲೇ ಇರುತ್ತದೆ. ಅದಕ್ಕಾಗಿಯೇ ಏನೋ ಗ್ರೀಕ್ ರುದ್ರ ನಾಟಕಗಳು ಷೇಕ್ಸ್ಪಿಯರ್‌ನ ಐತಿಹಾಸಿಕ ನಾಟಕಗಳು, ಇಲ್ಲವೇ ನಮ್ಮದೇ ಐತಿಹ್ಯವುಳ್ಳ ಹಳೆಯ ನಾಟಕಗಳು ಹೊಸ ಹೊಸ ರೂಪ ಪಡೆದು ಪ್ರದರ್ಶನಗೊಳ್ಳುತ್ತಿರುತ್ತವೆ.
ಆದರೆ ಇದಕ್ಕೆ ಅಪವಾದವೆಂಬಂತೆ ಕೆಲವು ಕಡೆ ರಂಗಭೂಮಿಯ ಸಕ್ರಿಯರು ಕಥೆಗಳನ್ನೊ, ಕಾದಂಬರಿಗಳನ್ನೊ, ಒಂದು ಐತಿಹಾಸಿಕ ಘಟನೆ ಅಥವಾ ಸತ್ಯದ ಜಾಡು ಹಿಡಿದು ಕೆಲವು ಹೊಸ ನಾಟಕಗಳನ್ನು ರಚಿಸಿ ತಮ್ಮದೇ ಶೈಲಿಯಲ್ಲಿ ಪ್ರದರ್ಶಿಸುತ್ತಾರೆ. ಇಂಥ ಕೆಲಸ ರಾಜಧಾನಿ ಬೆಂಗಳೂರಲ್ಲಾದರೆ ತಕ್ಕಮಟ್ಟಿನ ಮನ್ನಣೆಯೂ ಸಿಗುತ್ತದೆ. ರಾಜ್ಯದ ನಾನಾ ಭಾಗಗಳಲ್ಲಿರುವ ಹವ್ಯಾಸಿ ಕಲಾತಂಡಗಳು ಇಂಥ ಪ್ರಯತ್ನವನ್ನು ನಡೆಸುತ್ತಲೇ ಇರುವುದು ಅಭಿನಂದನಾರ್ಹ.
ಮಲೆನಾಡಿನ ಶಿವಮೊಗ್ಗ ಈ ಕೆಲಸದಲ್ಲಿ ಸದಾ ಮಂಚೂಣಿಯಲ್ಲಿರುತ್ತೆ. ಸಾಕಷ್ಟು ರಂಗತಂಡಗಳಿರುವ ಶಿವಮೊಗ್ಗದಲ್ಲಿ ವರ್ಷಕ್ಕೆ ಒಂದಿಷ್ಟು ಹೊಸ ನಾಟಕಗಳು ಪ್ರದರ್ಶಿತವಾಗುತ್ತವೆ. ಇಂತಹ ಪ್ರಯತ್ನದಲ್ಲೇ ಇತ್ತೀಚೆಗೆ ಶಿವಮೊಗ್ಗದಲ್ಲಿ ಪ್ರದರ್ಶಿತಗೊಂಡ ನಾಟಕವೆಂದರೆ “ಕಿತ್ತೂರ ನಿರಂಜನಿ”. ನಾಟಕದ ರಚನೆಕಾರರು ಡಾ ಸಾಸ್ವೆಹಳ್ಳಿ ಸತೀಶ್. ಇಪ್ಪತ್ತು ವರ್ಷಗಳ ಕಾಲ ರಂಗಭೂಮಿಯ ಒಡನಾಟವಿರುವ ಇವರು ಈಗಾಗಲೇ ಅನೇಕ ಕಥೆಗಳನ್ನು ನಾಟಕ ರೂಪಾಂತರಿಸಿ ಯಶಸ್ವಿ ಪ್ರದರ್ಶನ ನೀಡಿದ್ದಾರೆ. ಆದರೆ ‘ಕಿತ್ತೂರ ನಿರಂಜನಿ’ ನಾಟಕ ಮಾತ್ರ ಅವರ ಪ್ರವೃತ್ತಿಯ ಮತ್ತೊಂದು ಪ್ರಮುಖ ಹೆಜ್ಜೆ.
‘ಕಿತ್ತೂರ ನಿರಂಜನಿ’ ಒಂದು ಪತ್ತೇದಾರಿ ಕತೆಯಿರುವ ಮತ್ತು ಐತಿಹಾಸಿಕ ಸತ್ಯವೊಂದರ ಸುತ್ತ ಸಾಗುವ ನಾಟಕ, ಚಾರಿತ್ರಿಕ ಥ್ರಿಲ್ಲರ್‌ಗಳನ್ನು ಬರೆಯುವುದರಲ್ಲಿ ಸಿದ್ಧಹಸ್ತರಾದ ಕೆ. ಗಣೇಶಯ್ಯನವರ ಕಥೆಯನ್ನಾಧರಿಸಿ ಈ ನಾಟಕ ರಚನೆಯಾಗಿದೆ.
ಇತಿಹಾಸದ ಗರ್ಭದಲ್ಲಿ ಅಡಗಿರುವ ಸಾವಿರಾರು ಅಜ್ಞಾತ ಸತ್ಯಗಳ ಪೈಕಿ ‘ ಕಿತ್ತೂರಿನ ನಿರಂಜನಿ’ಯ ಕಥೆಯೂ ಒಂದು. ಕಿತ್ತೂರು ಎಂದಾಕ್ಷಣ ಚೆನ್ನಮ್ಮ ಮಾತ್ರ ನೆನಪಾಗುವ ಇತಿಹಾಸದಲ್ಲಿ ನಿರಂಜನಿ ಎಂಬ ಮುಸ್ಲಿಂ ಹೆಣ್ಣುಮಗಳೊಬ್ಬಳ ದುರಂತ ಪ್ರೇಮದ ಕತೆಯನ್ನು ನಾಟಕ ಶೋಧಿಸುತ್ತದೆ. ಈ ಕಥೆಯನ್ನು ಹೇಳುವಲ್ಲಿ ನಾಟಕಕಾರ ಬಳಸಿರುವ ತಂತ್ರಗಾರಿಕೆ ವಿನೂತನವಾದದ್ದು.
ಬೆಂಗಳೂರಿನಿಂದ ಕಿತ್ತೂರಿನ ಬಗ್ಗೆ ಅಭ್ಯಸಿಸಸಲು ಬಂದಿರುವ ವಿಜ್ಞಾನಿ ಗಣೇಶ್ ಮತ್ತು ಅವರ ಮಗಳು ಪುಣ್ಯ; ಇವರ ಕುತೂಹಲದ ಫಲಿತಾಂಶವಾಗಿ ನಿರಂಜನಿಯ ಕಥೆ ಪ್ರೇಕ್ಷಕರೆದುರು ಅನಾವರಣಗೊಳ್ಳುತ್ತದೆ. ವಿಜ್ಞಾನಿಯೊಬ್ಬ ಇತಿಹಾಸದ ಬಗ್ಗೆ ಅಷ್ಟೊಂದು ಕುತೂಹಲಕಾರಿಯಾಗಿರುವುದು ‘ಇತಿಹಾಸವಿಲ್ಲದ ವಿಜ್ಞಾನಕ್ಕೂ- ವಿಜ್ಞಾನವಿಲ್ಲದ ಇತಿಹಾಸಕ್ಕೂ’ ಇರುವ ಮಿತಿಗಳನ್ನು ಸೂಚಿಸುತ್ತದೆ. ಕಿತ್ತೂರಿನ ಇತಿಹಾಸದ ಬಗ್ಗೆ ಆಸಕ್ತರಾಗಿದ್ದ ಇವರು ‘ನಿರಂಜನಿ’ ಎಂಬ ಹೆಸರಿನ ಹಿಂದೆ ಹೋಗಲು ಕಾರಣ ಕಲ್ಮಠದ ಹೊರಗಿದ್ದ ವಂಶಾವಳಿ ಪಟ್ಟಿಯಲ್ಲಿ ಕಿತ್ತೂರು ಗುತ್ತಿಯನ್ನು ಆಳಿದ ರಾಜರ ಪೈಕಿ ೯ನೇಯವನ ಹೆಸರು ‘ ಮಾಳವ ರುದ್ರಗೌಡ ಉರೂಫ್ ಫಕೀರ ರುದ್ರಸರ್ಜ’ ಎಂದು ನಮೂದಾಗಿದ್ದುದು.
ನಾಟಕದ ಮೊದಲ ಮಾತು ಗಣೇಶ್ ಅವರ ಮಗಳು ಪುಣ್ಯ ಕೇಳುವುದು “ಅಪ್ಪ ಕಿತ್ತೂರ ರಾಣಿ ಚೆನ್ನಮ್ಮನ ವಂಶದಲ್ಲಿ ಮುಸ್ಲಿಂರಿದ್ದರೆ?” ಎಂದು. ಇಲ್ಲಿಂದಲೇ ನಾಟಕ ಕುತೂಹಲ ಪಡೆಯಲಾರಂಭಿಸುತ್ತದೆ. ಕಿತ್ತೂರಿನ ಇತಿಹಾಸವನ್ನು ಒಬ್ಬ ಇತಿಹಾಸ ಪ್ರೊಪೆಸರ್ ನಿಂದ ತಿಳಿಯುವ ಯತ್ನದಲ್ಲಿರುವ ಗಣೇಶ್ ಮತ್ತು ಪುಣ್ಯರಿಗೆ ‘ಚೆನ್ನಮಲ್ಲಪ್ಪ’ ಎಂಬ ಲಾವಣಿ ಹಾಡುವವ ಕೊಟ್ಟ ಕ್ಯಾಸೆಟ್‌ನಲ್ಲಿ ನಿರಂಜನಿಯ ಕಥೆಯು ಬಿಚ್ಚಿಕೊಳ್ಳುತ್ತದೆ. ಬಾವಿಯಲ್ಲಿ ಕೈ ಜಾರಿಬಿದ್ದ ಕ್ಯಾಸೆಟ್‌ನ್ನು ಹೊರತೆಗೆಯುವ ತಂತ್ರ ಮತ್ತು ಆ ಕ್ಯಾಸೆಟ್‌ನಲ್ಲಿ ನಿರಂಜನಿ ಕಥೆಯ ರಹಸ್ಯವಿರುವುದನ್ನು ಇತಿಹಾಸದ ಉತ್ಖನನ ಕ್ರಿಯೆಗೆ ಹೋಲಿಸಿರುವುದು ಅರ್ಥಗರ್ಭಿತವಾಗಿದೆ. ಆದರೆ ನಾಟಕ ಓದುವ ಪಠ್ಯವಾಗಿ ಕುತೂಹಲವೇನೋ ಉಳಿಯುತ್ತದೆ. ರಂಗದ ಮೇಲೆ ಆರಂಭವನ್ನು ಹೇಗೆ ತೋರಿಸಬೇಕೆಂಬುದು ಆಯಾ ನಿರ್ದೇಶಕರ ಜಾಣ್ಮೆಗೆ ಬಿಟ್ಟಿದ್ದು.
ವೀರಶೈವ ರಾಜನಾಗಿದ್ದ ‘ಮಾಳವ ರುದ್ರಗೌಡ’ ಫಕೀರನಾದ ಬಗೆ ಹೇಗೆ? ‘ನಿರಂಜನಿ’ ಎಂಬುದು ವಾಸ್ತವವಾಗಿ ಹೆಸರಲ್ಲ, ಹಿಂದೂಧರ್ಮದ ಸಂನ್ಯಾಸ ಧೀಕ್ಷೆಯ ಒಂದು ಬಗೆ, ಎಂಬ ಗೊಂದಲಗಳಿಗೆ ಉತ್ತರವಾಗಿ ನಾಟಕ ಮುಂದುವರಿಯುತ್ತದೆ.
ತೀರ್ಥಯಾತ್ರೆಗೆಂದು ಉತ್ತರ ಭಾರತಕ್ಕೆ ಹೋದ ಮಾಳವ ರುದ್ರಗೌಡ ‘ಲಕ್ನೊÃದ’ ನವಾಬನಲ್ಲಿ ಆಶ್ರಯ ಪಡೆದ ಸಂದರ್ಭದಲ್ಲಿ ಅವನ ಮಗಳಲ್ಲಿ ಅನುರಕ್ತನಾಗುತ್ತಾನೆ. ಇಬ್ಬರೂ ಪ್ರೀತಿಸುತ್ತಾರೆ. ಇವರ ವಿವಾಹಕ್ಕೆ ಮೊದಲು ಒಪ್ಪದ ನವಾಬ ಮಗಳ ಮಾತಿಗೆ ಕಟ್ಟುಬಿದ್ದು ಹಿಂದೂ ದೊರೆಗೆ ತನ್ನ ಮುಸ್ಲಿಂ ಮಗಳನ್ನು ಒಪ್ಪಿಸುತ್ತಾನೆ. ಇದರಿಂದ ಕಿತ್ತೂರಿನಲ್ಲಿ ಏಳಬಹುದಾದ ಸಂದಿಗ್ಧಗಳನ್ನು ಊಹಿಸಿದ ರುದ್ರಗೌಡ ಅಲ್ಲಿಂದ ೩೦. ಕಿ.ಮೀ ದೂರದಲ್ಲಿರುವ ‘ದೇಶನೂರು’ ನಲ್ಲಿ ನಿರಂಜನಿಯನ್ನಿಟ್ಟು. ಅಲ್ಲೆÃ ಹೆಚ್ಚು ಕಾಲ ವಾಸಿಸುತ್ತಾನೆ. ಅವಳಿಗೊಂದು ಅರಮನೆಯನ್ನು ಕಟ್ಟಿಸುತ್ತಾನೆ. ಆದರೆ ಈ ಮಧ್ಯೆ ಅವನ ತಮ್ಮ ಮಲ್ಲಪ್ಪನ ಹೆಂಡತಿ ಮತ್ತು ನಿರಂಜನಿ ಇಬ್ಬರೂ ಒಂದೇ ಸಮಯದಲ್ಲಿ ಗಂಡು ಮಕ್ಕಳಿಗೆ ಜನ್ಮ ನೀಡುತ್ತಾರೆ. ಮುಸ್ಲಿಂ ಹೆಣ್ಣಿಗೆ ಹುಟ್ಟಿದ ಮಗುವೊಂದು ರಾಜನಾಗಬಾರದೆಂದು ಮಲ್ಲಪ್ಪನ ಹಠ, ಹಾಗೂ ನಿರಂಜನಿಯ ಮಗನೇ ರಾಜನಾಗಬೇಕೆಂಬ ಅವಳ ಸೇವಕಿ ಬಾಬಮ್ಮಳ ಕುತಂತ್ರಕ್ಕೆ ಬಲಿಯಾಗಿ ನಿರಂಜನಿಯ ‘ಮಗು’ವನ್ನು ಕೊಲ್ಲಲಾಗುತ್ತದೆ. ಅಲ್ಲಿ ಕೊಂಚ ಗೊಂದಲದಿಂದಾಗಿ ಮಲ್ಲಪ್ಪನ ಕೊಲೆಯೂ ನಡೆಯುತ್ತದೆ.
ಇದನ್ನೆಲ್ಲ ಅರಿತ ನಿರಂಜನಿ ವಿರಕ್ತಳಾಗಿ ಮಠವನ್ನು ಸೇರಿ ಸ್ವಾಮಿಗಳ ಆಶ್ರಯ ಕೋರುತ್ತಾಳೆ. ಅಲ್ಲದೇ ನಿರಂಜನಿ ದೀಕ್ಷೆ ಪಡೆಯುತ್ತಾಳೆ. ಈ ವಿಷಯ ತಿಳಿದ ರುದ್ರಗೌಡ ತನ್ನ ನಂಬಿ ಬಂದ, ಪ್ರೇಮಕ್ಕಾಗಿ ತನ್ನೊಡನೆ ದೂರದಿಂದ ಬಂದ ಹೆಣ್ಣಿಗೆ ನನ್ನಿಂದ ಇಂಥ ಸ್ಥಿತಿ ಬಂತೆಂದು ನೊಂದು ತಾನೂ ಫಕೀರನಾಗುತ್ತಾನೆ. ಸತ್ತ ನಂತರ ಇಬ್ಬರನ್ನು ಪಕ್ಕದಲ್ಲಿ ಸಮಾಧಿ ಮಾಡಿ ಎಂದು ಕೋರಿಕೆಯಿಡುತ್ತಾನೆ. ಹಾಗೆಯೇ ಮಾಡಲಾಯಿತು. ಆದರೆ ಜನ ಗುಲ್ಲೆಬ್ಬಿಸುತ್ತಾರೆಂದು ಸಮಾಧಿ ಕಟ್ಟಲಿಲ್ಲ ಎಂಬ ವಿಷಯ ಕಥೆಯಲ್ಲಿ ಪ್ರಸ್ತಾಪವಾಗುತ್ತದೆ. ಕಿತ್ತೂರಿನಲ್ಲಿ ಮುಸ್ಲಿಂ ಹೆಸರಿನ ರಾಜನಿದ್ದನೆ? ಎಂಬ ‘ಪುಣ್ಯ’ ಳ ಪ್ರಶ್ನೆಗೆ ಉತ್ತರ ಸಿಗುವುದರೊಂದಿಗೆ ನಾಟಕ ಮುಗಿಯುತ್ತದೆ.”
ನಾಟಕ ಒಂದು ರಂಗಪಠ್ಯವಾಗುವಲ್ಲಿ ಕೆಲವು ಅನಿರೀಕ್ಷಿತ ತಿರುವುಗಳಿವೆ ‘ಪ್ಲಾಷ್‌ಬ್ಯಾಕ್’ ತಂತ್ರದಲ್ಲಿ ‘ಮಗು ಬದಲಾವಣೆ’ಯಗುವ ದೃಶ್ಯವನ್ನು ನಾಟಕಕಾರ ಕಟ್ಟಿಕೊಡುತ್ತಾರೆ. ಈ ಸಾಧ್ಯತೆ ನಾಟಕದ ಮಟ್ಟಿಗೆ ಎಷ್ಟು ಸೂಕ್ತ ಎಂಬುದನ್ನು ಪ್ರದರ್ಶನದಲ್ಲಿ ಮಾತ್ರ ಕಾಣಬಹುದು. ಅಲ್ಲದೆ ಕ್ಯಾಸೆಟ್‌ನಿಂದ ನಿರಂಜನಿಯ ಕಥೆ ಹೇಳುವಾಗ ಕ್ಯಾಸೆಟ್‌ನ ದ್ವನಿಯನ್ನು ಹೇಗೆ ಬಳಸಿಕೊಳ್ಳಬೇಕೆಂದು ನಿರ್ದೇಶಕರಿಗೆ ಬಿಟ್ಟಿದ್ದು.
ನಾಟಕದ ಕೆಲವು ಡೈಲಾಗ್‌ಗಳ ಬಗ್ಗೆ ಪ್ರಸ್ತಾಪಿಸಲೇಬೇಕು. ನಿರಂಜನಿಯ ಸೇವಕಿ ಬಾಬಮ್ಮ ಹೇಳುವ, “ ಯಾವ ಬೆಂಕಿಯೂ ನಾಯಕರನ್ನು ಸುಡುವುದಿಲ್ಲ ದೊರೆ. ಹಿಂಬಾಲಕರನ್ನು, ಅಸಹಾಯಕರನ್ನು ಮೊದಲು ಸುಡುತ್ತದೆ” ಎಂಬ ಮಾತು ಸರ್ವಕಾಲದ ಸತ್ಯದಂತೆ ತೋರುತ್ತದೆ. ‘ಇತಿಹಾಸಕಾರರು ರಾಜರಿಗೆ ಅವರ ವಂಶಕ್ಕೆ ನಿಷ್ಟರಾಗಿ ಏನೇನೋ ತಿರುಚಿ ರ‍್ದಿರ‍್ತಾರೆ’, ‘ಎರಡು ಧರ್ಮಗಳ ಸಂಘರ್ಷ ಅಂತ ಯಾಕೆ ಅನ್ನುತ್ತೀರಿ? ಎರಡು ಧರ್ಮಗಳ ಸೌಹಾರ್ಧ ಯಾಕಾಗಬಾರದು?’ ಎಂಬಂತಹ ಡೈಲಾಗ್‌ಗಳೂ ನಾಟಕದ ಹೊರಗಿಟ್ಟು ನೋಡಿದರೂ ಒಪ್ಪಿತವಾಗುತ್ತವೆ.
ಯಾವುದೇ ಸಾಹಿತ್ಯಕ ಕೃತಿ ಅಥವಾ ಅಭಿನಯ ಕಲೆಯ ಸಾರ್ಥಕತೆಯಿರುವುದು ಅದರ ಸಮಕಾಲೀನತೆಗೆ ಒಗ್ಗುವ ಗುಣದಿಂದ ‘ ಮ್ಯೌಕ್‌ಬೆತ್’ ‘ಈಡಿಪಸ್’ ‘ಒಥೆಲೋ’ ‘ ಕಿಂಗ್‌ಲಿಯರ್’ ‘ಯೂರಿಪಿಡಿಸ್’ ನಂತಹ ನಾಟಕಗಳ ಶ್ರೇಷ್ಠತೆಯಿರುವುದು ಅವುಗಳ ವಸ್ತು, ಇತಿಹಾಸ ಅಥವಾ ಪುರಾಣವೇ ಆದರೂ ಪಾತ್ರಗಳ ತುಡಿತ ಸಮಕಾಲೀನವಾಗಿರುತ್ತದೆ.’ All the perfumes of Arabia will not sweeten this little and ’ ಎಂದು ಲೇಡಿ ಮ್ಯಾಕ್‌ಬೆತ್ ಹೇಳುತ್ತಾಳಾದರೆ ಅದು ಮಹತ್ವಾಕಾಂಕ್ಷೆಯ ಪ್ರಲೋಭನೆಗೆ ಗುರಿಯಾದ ಯಾವುದೇ ವ್ಯಕ್ತಿ ಕೊನೆಗೊಮ್ಮೆ ಹೇಳುವ ಪಶ್ಚಾತ್ತಾಪದ ಮಾತಾಗಿರುತ್ತದೆ. ಈ ದಿಕ್ಕಿನಲ್ಲಿ ನೋಡಿದಾಗ ‘ ಕಿತ್ತೂರು ನಿರಂಜನಿ’ ನಾಟಕದಲ್ಲಿ ಮುಖ್ಯವಾದ ಎರಡು ವಿಷಯಗಳೆಂದರೆ ‘ಪ್ರೀತಿ ಮತ್ತು ಧರ್ಮ’ ಇವೆರೆಡೂ ಅಂದು, ಇಂದು- ಮುಂದೆಂದೂ ಜಗತ್ತಿನಲ್ಲಿ ಸಂದಿಗ್ಧಕ್ಕೆ ಸಿಕ್ಕಿಕೊಳ್ಳುವ ವಸ್ತುಗಳಿವು. ಆದರೆ ಇವರೆರಡನ್ನು ನಾಟಕಕಾರರು ನಿಭಾಯಿಸುವ ರೀತಿ ಶ್ಲಾಘನೀಯ. ನಿರಂಜನಿಯನ್ನು ಪ್ರೀತಿಸಿದಾಗ ಮದುವೆಯಾಗಲು ಮುಸ್ಲಿಂ ಧರ್ಮಕ್ಕೆ ಮತಾಂತರವಾಗಬೇಕೆಂಬ ಇತ್ತಾಯ ರುದ್ರಗೌಡನಿಗೆ ಎದುರಾಗುತ್ತೆ. ಆತ ಒಪ್ಪುವುದಿಲ್ಲ ಅಲ್ಲದೆ ನಿರಂಜನಿ ವೀರಶೈವ ಧರ್ಮದ ಮಠದಲ್ಲಿ ದೀಕ್ಷೆ ತೆಗೆದುಕೊಳ್ಳುವುದು ಮತ್ತು ರುದ್ರಗೌಡ ಅವಳಿಗಾಗಿ ಮುಸ್ಲಿಂ ಧರ್ಮದ ‘ ಫಕೀರ’ ದೀಕ್ಷೆ ತೆಗೆದುಕೊಂಡು ಅಮರರಾಗುವುದು ಕ್ರಾಂತಿಕಾರಿ ಮತ್ತು ಉಚಿತವಾದ ಹೆಜ್ಜೆ. ನಾಟಕದ ಆಶಯವಿರುವುದೇ ಇಲ್ಲಿ ಎಂಬುದು ನನ್ನ ಭಾವನೆ. ‘ಹಿಂದೂ –ಮುಸ್ಲಿಂ’ಪ್ರೇಮಿಗಳಿಬ್ಬರ ಸಂಬಂಧಕ್ಕೆ ‘ಲವ್ ಜಿಹಾದ್’ ಎಂಬ ಹಣೆಪಟ್ಟಿ ಕಟ್ಟಿ ಸಮಾಜದಲ್ಲಿ ಅವರನ್ನು ಅಸ್ಪೃಶ್ಯರಂತೆ ಕಾಣುವ ಈ ಸಂದರ್ಭದಲ್ಲಿ ‘ಪ್ರೇಮ’ಕ್ಕಾಗಿ ಎರಡು ಧರ್ಮಗಳ ನಡುವೆ ಸಾಮರಸ್ಯ ಮೂಡಿದರೆ ಒಳಿತಲ್ಲವೆ? ಎಂಬ ನೀತಿ ಇಲ್ಲಿದೆ.
ದುರಂತ ಮತ್ತು ರುದ್ರನಾಟಕಗಳ ಪ್ರಮುಖ ಅಂಶವೆಂದರೆ ಅಲ್ಲಿನ ಪಾತ್ರಗಳು, ಕ್ರಿಯೆಗಳು ಮನುಷ್ಯನ ಸ್ವಭಾವವನ್ನು ಮೀರಿ ವಿಧಿಯಿಚ್ಚೆಯಂತೆ ಜರುಗುವುದು. ಇಲ್ಲಿಯೂ ಕೆಲವು ಘಟನೆಗಳು ಆ ತತ್ವಕ್ಕೆ ಬದ್ಧವಾಗಿವೆ. ಬಾಬಮ್ಮ ಮತ್ತು ಮಲ್ಲಪ್ಪನ ಷಡ್ಯಂತ್ರಗಳಿಂದಾಗಿ ನಿರಂಜನಿಯ ಮಗು ಸಾಯುವುದು ಸತ್ಯವೇ ಆದರೂ ಆ ರಹಸ್ಯ ನಾಟಕದ ಕೊನೆಯ ದೃಶ್ಯದಲ್ಲಿ ಬಿಚ್ಚಿಕೊಳ್ಳುವುದು, ಅದೂ ಒಂದು ಮಠದಲ್ಲಿ ಎನ್ನುವುದು ಕಥೆಯ ಥ್ರಿಲ್ಲಿಂಗ್ ಅಂಶ. ಇಲ್ಲವಾದರೆ ಮೊದಲಿನಿಂದಲೂ ಸೃಷ್ಟಿಸಿದ ನಿರಂಜನಿಯ ಮೇಲಿನ ಕುತೂಹಲ ಅನವಶ್ಯಕವೆನಿಸಿ ಬಿಡುತ್ತಿತ್ತು.
ಈ ನಾಟಕದ ಮತ್ತೊಂದು ಗಮನಾರ್ಹ ಅಂಶವೆಂದರೆ ಕಿತ್ತೂರಿನ ಇತಿಹಾಸವನ್ನು ‘ಚೆನ್ನಮ್ಮ’ಳನ್ನು ಬಿಟ್ಟು ಬೇರೊಬ್ಬಳು ಹೆಣ್ಣಿನ ಕಡೆಯಿಂದ ನೋಡಲು ಯತ್ನಿಸಿರುವುದು. ಅಲ್ಲೊಂದು ಅನನ್ಯ ಪ್ರೇಮಕಥೆಯಿದ್ದರೂ ಅದು ಧರ್ಮ ಮತ್ತು ರಾಜ ಮನೆತನದ ರಾಗ-ದ್ವೆÃಷಗಳ ಅಡಕತ್ತರಿಯಲ್ಲಿ ಸಿಕ್ಕಿಕೊಂಡು ನಲುಗುತ್ತದೆ. ಧರ್ಮವನ್ನೂ ಮೀರಿ ಪ್ರೇಮವನ್ನು ಗೆಲ್ಲುತ್ತೇನೆಂದು ಹೊರಟ ರಾಜನಿಗೆ ಇಂಥ ಸ್ಥಿತಿ ಎಂದಾದರೆ? ಸಾಮಾನ್ಯರ, ಅಳಿಸಿಕೊಳ್ಳುವವರ ಜೀವನದಲ್ಲಿ ಪ್ರೇಮ-ಧರ್ಮಗಳು ಬೀರಬಹುದಾದ ಪರಿಣಾಮವಾದರೂ ಎಂಥದ್ದು? ಎಂದು ಆಲೋಚನೆಗೆ ಈಡು ಮಾಡುತ್ತದೆ.
ಇತಿಹಾಸದ ಪುಟಗಳ ತುಂಬ ಆಳುವ ವರ್ಗದ ಪ್ರಸಿದ್ಧರ ವೈಭವವೇ ತುರುಕಿಕೊಂಡಿರುವ ಹೊತ್ತಿನಲ್ಲಿ ಅದೇ ವರ್ಗದ ಪಟ್ಟದರಾಣಿಯಲ್ಲದವಳ ಕಥೆಯನ್ನು ಒಳಗೊಳ್ಳುವ ಇತಿಹಾಸ ಈ ಕಾಲದ ಜರೂರತ್ತು. ಆ ಕಾರಣಕ್ಕೆ ಈ ನಾಟಕ ವಿಭಿನ್ನ ಪ್ರಯತ್ನ ಎನ್ನಬಹುದು. ಇದನ್ನು ಸಾಕಾರಗೊಳಿಸಲು ಬಳಸಿರುವ ಬಾವಿ, ಕ್ಯಾಸೆಟ್, ಇತಿಹಾಸತಜ್ಞನೊಂದಿಗಿನ ಮುಖಾಮುಖಿ ಇವೆಲ್ಲ ಉದ್ಧೇಶಿತ. “ಇತಿಹಾಸ ಹುಡುಕುವ, ( ಮರೆತವರ) ಅಗೆದು ತೆಗೆಯುವ ಕ್ರಿಯೆಯ ಸಂಕೇತಗಳಾಗಿ ನಿಲ್ಲುತ್ತವೆ.
ಇಡೀ ನಾಟಕದಲ್ಲಿ “ಮಠ” ಒಂದು ದೃಷ್ಟಾಂತವಾಗಿ ನಿಲ್ಲುತ್ತದೆ. ಮತೀಯತೆ ಮತ್ತು ಕೋಮುವಾದದ ಕೇಂದ್ರಗಳಾಗುತ್ತಿರುವ ಧಾರ್ಮಿಕ ಕೇಂದ್ರಗಳಲ್ಲೇ ನಿಜವಾದ ‘ಧರ್ಮಸಂಕರಣ’ ಮತ್ತು ‘ಧರ್ಮಗಳ ಸಾಮರಸ್ಯ’ ಹುಟ್ಟಬೇಕು ಎಂದು ತಿಳಿಸುವ ಪ್ರಯತ್ನ ಇಲ್ಲಿದೆ. ಮಠದ ಸ್ವಾಮಿಗಳು ನಿರಂಜನಿಗೆ ವೀರಶೈವ ಧೀಕ್ಷೆಯನ್ನು ನೀಡುವಾಗ ಮುಸ್ಲಿಂ ಮಹಿಳೆ ಎಂಬ ಯಾವ ಅಡ್ಡಿಯೂ ಬರುವುದಿಲ್ಲ. ಹಾಗೆಯೇ ರುದ್ರಗೌಡ ವೀರಶೈವನಾಗಿದ್ದು ಮುಸ್ಲಿಂ ‘ಫಕೀರ’ನಾಗುತ್ತೇನೆ ಎಂದಾಗ ಸ್ವಾಮಿಗಳು ಯಾವುದೇ ಅಡ್ಡಿ ಪಡಿಸುವುದಿಲ್ಲ. ಇದು ಇಂದಿನ ಎಲ್ಲ ಮಠ ಮತ್ತು ಧಾರ್ಮಿಕ ಕೇಂದ್ರಗಳಿಗೆ ಮಾದರಿಯಾಗಿದೆ.
ನಾಟಕ ನೋಡುವಾಗ ನಾಟಕದ ಧರ್ಮ ಮುಖ್ಯವಾದರೆ ಅದೇ ನಾಟಕವನ್ನು ಓದುವಾಗ ನಾಟಕದ ವಿವರಗಳು ಬಹುಮುಖ್ಯವಾಗುತ್ತವೆ. ಆ ದೃಷ್ಟಿಯಿಂದ ನಾಟಕ ಪಠ್ಯವಾಗಿ ಆರಂಭದಲ್ಲಿ ಕೊಂಚ ವೇಗ ಪಡೆದುಕೊಂಡರೆ ಒಳ್ಳೆಯದು. ಸಂಭಾಷಣಾ ದೃಷ್ಟಿಯಿಂದ ಕಿತ್ತೂರಿನ ಕಥೆಯಾದ್ದರಿಂದ ಆ ಭಾಗದ ಕನ್ನಡವನ್ನೇ ಬಳಸಲಾಗಿದೆಯಾದರೂ ತೀರ ಒಂದೆರೆಡು ಕಡೆ ಅದು ಮಾಯವಾದಂತೆ ಕಾಣುತ್ತದೆ. ಕ್ಯಾಸೆಟ್‌ನ ಧ್ವನಿ ಮರುಪ್ರಯೋಗವಾಗುವುದು ಓದಲು ಕೂತಾಗ ಕೊಂಚ ವೇಗಕ್ಕೆ ಅಡ್ಡಿ ಪಡಿಸಿದರೂ ಪ್ರದರ್ಶನದಲ್ಲಿ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದರ ಮೇಲೆ ನಿರ್ಧಾರಿತವಾಗಿದೆ.
ಒಟ್ಟಿನಲ್ಲಿ ಒಂದು ಐತಿಹಾಸಿಕ ಸತ್ಯವನ್ನು ಪತ್ತೆದಾರಿಯಾಗಿ ತೋರಿಸುವಲ್ಲಿ ‘ಕಿತ್ತೂರ ನಿರಂಜನಿ’ ನಾಟಕ ಗೆಲ್ಲುತ್ತದೆ. ‘ಚೆನ್ನಮ್ಮ’ಳೇ ಆವರಿಸಿಕೊಂಡಿರುವ ಕಿತ್ತೂರಿನ ಇತಿಹಾಸದ ನೆನಪಲ್ಲಿ ಈ ನಾಟಕ ‘ನಿರಂಜನಿ’ ಎಂಬ ನಿಸ್ವಾರ್ಥ ಹೆಣ್ಣು ಮಗಳ ತ್ಯಾಗ ಬಲಿದಾನಗಳನ್ನು ಎತ್ತಿ ಹಿಡಿಯುತ್ತದೆ. ಅಲ್ಲದೆ ‘ಸಂಶಯ ಮತ್ತು ಪ್ರಶ್ನೆಗಳೆ ಮುಖೇನವೇ ಇತಿಹಾಸದ ಶೋಧನೆ ‘ಸಾಧ್ಯ’ ಎಂಬುದನ್ನು ಮನದಟ್ಟು ಮಾಡುವಲ್ಲಿ ಯಶಸ್ವಿಯಾಗಿದೆ. ನಾಟಕದ ಸೂತ್ರದಾರಿಯೋ, ಇಲ್ಲವೇ ನಾಟಕಕಾರನೋ ನಾಟಕದಲ್ಲಿನ ಒಂದು ಪಾತ್ರವಾಗಿರುವುದು ಇತ್ತೀಚಿನ ನಾಟಕಕಾರರು ಬಳಸುತ್ತಿರುವ ಬಹುಮುಖ್ಯ ತಂತ್ರ. ಇದರ ಲಾಭ ನಷ್ಟಗಳನ್ನು ಸ್ವತಃ ನಾಟಕಕಾರರು ಮಾತ್ರ ಬಲ್ಲರು.
ಇಂತಹ ಸದಭಿರುಚಿಯ ನಾಟಕ ರಚಿಸಿದ ಡಾ|| ಸಾಸ್ವೆಹಳ್ಳಿ ಸತೀಶ್ ರಿಂದ ಇನ್ನಷ್ಟು ಹೊಸ ಹೊಸ ರಂಗಕೃತಿಗಳನ್ನು , ರಂಗ ಪ್ರಯೋಗಗಳನ್ನು ನಿರೀಕ್ಷಿಸುವುದು ಎಲ್ಲ ರಂಗಾಸಕ್ತರ ಹಕ್ಕು ಮತ್ತು ಅದು ‘ ಸತೀಶ್’ ಅವರ ಕರ್ತವ್ಯವೂ ಹೌದು. ಇನ್ನೂ ಹತ್ತಾರು ನಾಟಕಗಳು ಇವರಿಂದ ಮೂಡಿ ಬರಲಿ ಮತ್ತು ಆ ಮೂಲಕ ರಂಗಭೂಮಿ ಶ್ರೀಮಂತವಾಗಲಿ ಮತ್ತು ಹೊಸ ನಾಟಕಗಳ ಕೊರತೆ ತಕ್ಕಮಟ್ಟಿಗೆ ನೀಗಲಿ ಎಂದು ಆಶಿಸುತ್ತೇನೆ.





ಪ್ರಪ್ರಥಮವಾಗಿ ನಿಮ್ಮ ಈ ಲೇಖನದ ಶೀರ್ಷಿಕೆಯೇ ತಪ್ಪು!!
ಮೂಲ ಕಥೆ ‘ಕಿತ್ತೂರ ನಿರಂಜನಿ’ ಕಥೆಯನ್ನು ಬರೆದವರು Dr. K. N. ಗಣೇಶಯ್ಯ ಅವರು. ನೀವು ಬರೆದಿರುವಂತೆ K. ಗಣೇಶಯ್ಯ ಅಲ್ಲ.
ಮೂಲ ಕಥೆಗಾರರ ಹೆಸರನ್ನೇ ಇಷ್ಟು ತಪ್ಪಾಗಿ ಬರೆದ ನೀವು ಮೂಲ ಕಥೆಯನ್ನು/ಪುಸ್ತಕವನ್ನು ನೋಡಿಲ್ಲವೆಂಬುದನ್ನು ಓದುಗರು ಸುಲಭವಾಗಿ ಊಹಿಸಬಹುದು. ಅಲ್ಲವೇ?