
ಕೆ ಪಿ ನಟರಾಜ
ಪ್ರತಿವರ್ಷ ದಂತೆ ಈ ವರ್ಷವೂ SSLC ಪರೀಕ್ಷಾ ಫಲಿತಾಂಶ ಬಂದಿದೆ. ಪತ್ರಿಕೆಗಳು ಮತ್ತದೇ ಚರ್ವಿತ ಚರ್ವಣ ಭಾಷೆಯ , “ಈ ವರ್ಷ ವಿದ್ಯಾರ್ಥಿನಿಯರ ಮೇಲುಗೈ”, “ನಗರವನ್ನು ಹಿಂದಿಕ್ಕಿದ ಗ್ರಾಮಾಂತರ ವಿದ್ಯಾರ್ಥಿಗಳು “,” 622 ಅಂಕ ತೆಗೆದ ಹಳ್ಳಿ ಹೈದ” ಮುಂತಾದ ಶೀರ್ಷಿಕೆಗಳೊಂದಿಗೆ ಮತ್ತು ಇಂದಿನ ಹಾಗೂ ಹಿಂದಿನ ವರ್ಷ ಗಳ ಶೇಕಡಾವಾರು ಹೋಲಿಕೆ, ವಿಶ್ಲೇಷಣೆ, ಫೇಲ್ ಅದವರ ಆತ್ಮಹತ್ಯೆ ಯ ಸುದ್ದಿ….. ಇಂತಹ ವರದಿಗಳೊಂದಿಗೆ ತುಂಬಿರುತ್ತವೆ. ಮಾಧ್ಯಮ, ಓದುಗವರ್ಗ, ಪ್ರಭುತ್ವ.. ಎಲ್ಲರೂ ಈ ಚರ್ವಿತ ಚರ್ವಣ ದ ಸಮಾನ ಪಾಲುದಾರರೇ.
ನನ್ನ ಕಳವಳ ಯಾವುದೆಂದರೆ, ಮಾಧ್ಯಮಗಳಿಗೇಕೆ SSLC ಯ ಫಲಿತಾಂಶ ಪ್ರಕಟಗೊಳ್ಳುವ ನಿರ್ಣಾಯಕ ಸನ್ನಿವೇಶದಲ್ಲಿ ನಮ್ಮ ಕಣ್ಮುಂದೆ ಇರುವ ತಾರತಮ್ಯಪೂರ್ಣ ವಾಸ್ತವವನ್ನು ಮುಕ್ತವಾಗಿ ವಿಮರ್ಶಾತ್ಮಕವಾಗಿ ನೋಡಲಾಗುತ್ತಿಲ್ಲ.
ಕೆಳಕಂಡಂತಹ ಪ್ರಶ್ನೆಗಳನ್ನೇಕೆ ಪತ್ರಿಕಾ ಮಾಧ್ಯಮ ಕೇಳುತ್ತಿಲ್ಲ?
1. ಪರೀಕ್ಷೆ ಬರೆದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳೆಷ್ಟು ಮತ್ತು ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳೆಷ್ಟು.?
2.ಈ ಎರಡೂ ಮಾಧ್ಯಮಗಳಿಂದ ಪಾಸಾದ ತಲಾವಾರು ಸಂಖ್ಯೆ ಎಷ್ಟು?
3 .ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ವಿಭಾಗದಿಂದ ಹೊರಬಂದ rank ವಿಜೇತರ ಪ್ರತ್ಯೇಕ ಪಟ್ಟಿಯನ್ನು ಯಾಕೆ ಪ್ರಕಟಿಸುತ್ತಿಲ್ಲ
4.ಮಾಧ್ಯಮವಾರು ವಿದ್ಯಾರ್ಥಿಗಳ ಸಂಖ್ಯೆ ಯ ಅನುಪಾತ ಎಷ್ಟು?
5 . ಈ ಎರಡೂ ಮಾಧ್ಯಮಗಳಿಂದ ಉತ್ತೀರ್ಣರಾಗಿ ಹೊರಬಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಆ ವಿದ್ಯಾರ್ಥಿಗಳ ಸಂಖ್ಯೆಯ ಆಧಾರದ ಮೇಲೆ ಕಲಿಕಾ ಮಾಧ್ಯಮದ ವ್ಯವಸ್ಥೆ ಮಾಡಲಾಗಿದೆಯೆ?
ಅಂದರೆ Kg ಯಿಂದ PGವರೆಗೆ ಇಂಗ್ಲಿಷ್ ಕಲಿಕಾ ಮಾಧ್ಯಮವಿದ್ದಂತೆ, ಕನ್ನಡ ಶಿಕ್ಷಣ ಮಾಧ್ಯಮದ ಕಲಿಕಾ ವ್ಯವಸ್ಥೆಯನ್ನು ಕಲ್ಪಿ ಸಲಾಗಿದೆಯೆ?
ಇಂಥ ಅಗತ್ಯ ಪ್ರಶ್ನೆಗಳನ್ನು ನಾವ್ಯಾರೂ ಕೇಳಿಕೊಂಡೇ ಇಲ್ಲ.. ಆದರೆ ನಾನು rti ಕಾಯ್ದೆ ಅಡಿ ಶಿಕ್ಷಣ ಇಲಾಖೆಗೆ ಪತ್ರ ಬರೆದು ತರಿಸಿಕೊಂಡ ಅಂಕಿಸಂಖ್ಯೆ ನನಗೆ ಆಘಾತ ಉಂಟುಮಾಡಿದೆ.
ಈ ವರ್ಷ SSLC ಪರೀಕ್ಷೆ ಬರೆದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 5 ಲಕ್ಷ ಇದ್ದರೆ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳ ಸಂಖ್ಯೆ 2.5 ಲಕ್ಷ. ಈ ಎರಡೂ ಕಡೆ ಪಾಸಾದ ವಿದ್ಯಾರ್ಥಿಗಳ ಕುರಿತ ಮಾಹಿತಿ ಯನ್ನು ಇಲಾಖೆ ಅಥವಾ ಸರ್ಕಾರ ಪ್ರಕಟಿಸುತ್ತಿಲ್ಲ..
ಈ ಪ್ರತ್ಯೇಕ ಪ್ರತ್ಯೇಕ ಅಂಕಿಸಂಖ್ಯೆಗಳು ವ್ಯವಸ್ಥೆಯ ಅನ್ಯಾಯವನ್ನು ಅನಾವರಣ ಮಾಡುವುದರಿಂದ, ಪ್ರಭುತ್ವ ದ ಎದುರು ಉನ್ನತ ಶಿಕ್ಷಣ ವನ್ನು ಕನ್ನಡ ಮಾಧ್ಯಮ ದಲ್ಲಿ ಒದಗಿಸುವ ಜವಾಬ್ದಾರಿ ಯನ್ನು ಮುಂದೊಡ್ಡಬಹುದಾದ ಆತಂಕದಿಂದ, ಸರ್ಕಾರ ಕಳೆದ. ಹಲವು ದಶಕಗಳಿಂದಲೂ ಈ ಮರೆಮಾಚುವ ಆಟವನ್ನು ಆಡುತ್ತ ಬಂದಿದೆ. ಈ ವಿದ್ರೋಹವನ್ನು ಪ್ರಶ್ನಿಸಬೇಕಾದ ಪತ್ರಿಕಾ ಮಾಧ್ಯಮವೂ ಯಥಾಸ್ಥಿತಿವಾದದ ಸಮರ್ಥಕವಾಗಿ ಬಿಟ್ಟಿದೆ.
ಇಂಗ್ಲಿಷ್ ಮಾಧ್ಯಮ ದ ಭ್ರಮಾಧೀನ ವರ್ಗವೂ ತನ್ನ ಮೇಲರಿಮೆಯ ಠೇಂಕಾರ ದಿಂದ ಕನ್ನಡ ವನ್ನು ನಿತ್ಯವೂ ಕೀಳ್ಗಳೆಯುತ್ತ ವ್ಯಾಪಕ ನೈತಿಕ ಹಾನಿಯೆಸಗುತ್ತಿದೆ, ಕನ್ನಡಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿದೆ.





0 Comments