ಕೆನೆತ್ ಅಂಡರ್ಸನ್ ಬೇಟೆಯ ಜಾಡಿನಲ್ಲಿ
– ಮಲ್ಲಿಕಾರ್ಜುನ ಹೊಸಪಾಳ್ಯ
ಕಥೆಯ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಕೆನೆತ್ ವಿವರಿಸುವಂತೆ ದಿಗಂತದಲ್ಲಿ ಬಿಳಿಗಿರಿರಂಗನ ಬೆಟ್ಟದ ಸಾಲುಗಳು ಗೋಡೆ ಕಟ್ಟಿದಂತೆಯೇ ಹಬ್ಬಿದ್ದವು, ಕೆಳಗಿನ ಕಣಿವೆಯ ದಟ್ಟ ಕಾಡಿನ ಮೇಲ್ಭಾಗ ಗುಡ್ಡಕ್ಕೆ ಕಂಬಳಿ ಹೊದ್ದಿಸಿದ ಹಾಗೆಯೇ ಕಾಣುತ್ತಿತ್ತು. ಆದರೆ ನವಿಲು- ಕಾಡುಕೋಳಿಗಳ ಕೇಕೆಗಳು ಎಷ್ಟು ಆಲಿಸಿದರೂ ಕೇಳಿಸಲಿಲ್ಲ. ಇನ್ನೂ ದುರಂತವೆಂದರೆ ಕಾಡಿನಲ್ಲೆಲ್ಲಾ ದೀಪ ಮಿನುಗಿಸುತ್ತಾ ಹಾರಾಡುತ್ತಿದ್ದ, ಮರಗಿಡಗಳೂ, ಪೊದೆಪೊದೆಗಳೂ ಮಿಂಚಿನಲ್ಲಿ ಎರಕ ಹುಯ್ದಹಾಗೆ ಕಾಣುತ್ತಿದ್ದ, ಇಡೀ ಕಾಡೇ ದೇದೀಪ್ಯಮಾನವಾಗುವಂತೆ ಬೆಳಗುತ್ತಿದ್ದ ಕೋಟ್ಯಂತರ ಮಿಣುಕುಹುಳುಗಳು ಮಾತ್ರ ಕಣ್ಣಿಗೆ ಬೀಳಲಿಲ್ಲ. ಶಾಸ್ತ್ರಕ್ಕೆ ಒಂದಾದರೂ ಕಾಣುತ್ತವೇನೋ ಎಂದು ಕಣ್ಣು ಕಿರಿದುಗೊಳಿಸಿ ನೋಡಿದರೂ… ಊಹುಂ… ಕೆನೆತ್ ಕಂಡ ಕಾಡಿನ ಆ ಸ್ಮರಣೀಯ ಅನುಭವದಿಂದ ನಾವು ಸಂಪೂರ್ಣ ವಂಚಿತರಾಗಿದ್ದೆವು.
ಕೇವಲ ಏಳೆಂಟು ದಶಕಗಳಲ್ಲಿ ಮಿಂಚುಹುಳುಗಳು ಇಷ್ಟು ಪ್ರಮಾಣದಲ್ಲಿ ಕಣ್ಮರೆಯಾಗಲು ಕಾರಣವೇನಿರಬಹುದು. ಇಲ್ಲಿ ಅಂತಲ್ಲ, ನಮ್ಮ ಊರಿನಲ್ಲೂ ಇದೇ ಪರಿಸ್ಥಿತಿ. ನಮ್ಮ ಹೊಲದ ಗೋಕಟ್ಟೆಯಲ್ಲಿ ಸಂಜೆಯಾಗುತಿದ್ದಂತೆ ಅಸಂಖ್ಯ ಮಿಂಚುಹುಳುಗಳ ಜಾತ್ರೆ. ಮೇಲಕ್ಕೂ ಕೆಳಕ್ಕೂ ಹಾರಾಡುತಾ ಎಷ್ಟೋ ಸಲ ನಮ್ಮ ಮೇಲೂ ಕೂರುತ್ತಿದ್ದವು. ನಾವು ಕುಯ್ದು ತರುತ್ತಿದ್ದ ರೇಷ್ಮೆ ಸೊಪ್ಪು, ಕಾಡಿನ ಸೊಪ್ಪು, ಜೋಳದ ಕಡ್ಡಿಯ ಜೊತೆಗೂ ಇರುತ್ತಿದ್ದವು. ನಮ್ಮ ಗುಡುಸಲಿನ ಒಳಗೂ ಬರುತ್ತ್ತಿದ್ದವು. ಅವನ್ನು ಹಿಡಿದು ದೇಹದ ಯಾವ ಭಾಗದಲ್ಲಿ ಬೆಳಕು ಬರುತ್ತದೆ ಎಂದು ಪರೀಕ್ಷಿಸುತ್ತಿದ್ದೆವು. ಮೂವತ್ತು ವರ್ಷದ ಹಿಂದಿನ ಮಾತು ಇದು.
ಈಗ ಆ ಗೋಕಟ್ಟೆಯೂ ಇದೆ, ನಮ್ಮ ಹೊಲದ ಪರಿಸರವೂ ತಕ್ಕಮಟ್ಟಿಗೆ ಹಾಗೇ ಇದೆ. ಆದರೆ ಮಿಂಚುಹುಳುಗಳು ಮಾತ್ರ ಇಲ್ಲ.
ಬೈಲೂರು ಅರಣ್ಯ ವಸತಿಗೃಹದ ಬಳಿ ಫéಾರೆಸ್ಟ್ ಚೆಕ್ಪೋಸ್ಟ್ ಇದೆ. ನಾವಲ್ಲಿ ಹೋದಾಗ ಮಸಿಯಂತಾ ಕತ್ತಲಲ್ಲಿ ಒಂದು ಆಕೃತಿ ಕುಳಿತಿತ್ತು. ಪಕ್ಕದಲ್ಲೊಂದು ತೀರಾ ಮಂದ ಬೆಳಕು ಹಾಗೂ ಅದಕ್ಕಿಂತ ಹೆಚ್ಚು ಕಪ್ಪು ಹೊಗೆ ಸೂಸುತ್ತಿದ್ದ ಬುಡ್ಡಿ ದೀಪ. ನಾವು ಬಂದ ಉದ್ದೇಶ ತಿಳಿಸಿದೆವು. ಏನರ್ಥವಾಯಿತೋ ಗೊತ್ತಿಲ್ಲ; ‘ಅಂಥಾದ್ದೇನೂ ನಮ್ ಗಮನಕ್ಕೆ ಬಂದಿಲ್ಲ’ ಎಂಬ ಉತ್ತರ ಸಿಕ್ಕಿತು. ವಸತಿಗೃಹದ ಒಳಭಾಗ ನೋಡಬೇಕೆಂದೆವು. ‘ಕತ್ಲಲ್ಲೇನ್ ನೋಡ್ತೀರಿ? ಬೆಳಿಗ್ಗೆ ಬನ್ನಿ’ ಎಂದಿತು. ಮಾತು-ಕತೆ ಅಲ್ಲಿಗೆ ಖತಂ. ನಾವೇ ಅವರ ಜಾಗದಲ್ಲಿದ್ದರೂ ಅದನ್ನೇ ಮಾಡುತ್ತಿದ್ದೆವೇನೋ? ಗವ್ವೆನ್ನುವ ಕತ್ತಲಲ್ಲಿ ಬಂದು ನರಭಕ್ಷಕ ಹುಲಿಯ ಮಾತೆತ್ತಿದರೆ ಹೇಗೆ? ಕೆನೆತ್ ಅಥವಾ ತೇಜಸ್ವಿಯವರ ಪುಸ್ತಕ ಓದಿದ್ದರೆ ಆಗ ನಮ್ಮ ಪ್ರಶ್ನೆಗಳು ಅರ್ಥವಾಗುತ್ತಿದ್ದವೇನೋ?
ಇಲ್ಲಿಂದ ತುಸು ದೂರ ಹೋದರೆ ತಮಿಳುನಾಡು ಗಡಿ ಆರಂಭ. ಕೆನೆತ್ ಇಲ್ಲಿಗೆ ಬಂದಾಗ ಈ ಭಾಗವೆಲ್ಲಾ ಕೊಯಮತ್ತೂರು ಜಿಲ್ಲೆಗೆ ಸೇರಿತ್ತು. ನರಭಕ್ಷಕನ ಬೇಟೆಗಾಗಿ ಬರಬೇಕೆಂದು ಕೊಯಮತ್ತೂರು ವಿಭಾಗದ ಅರಣ್ಯಾಧಿಕಾರಿ ಕೆನೆತ್ಗೆ ಪತ್ರ ಬರೆಯುತ್ತಾರೆ.
ಒಡೆಯರಪಾಳ್ಯದ ಉತ್ತರಕ್ಕಿರುವ ‘ಮೈರಾಡಾ’ ಸ್ವಯಂಸೇವಾ ಸಂಸ್ಥೆಯ ಕೇಂದ್ರದಲ್ಲಿ ಅಂದು ರಾತ್ರಿ ವಾಸ್ತವ್ಯ. ಕೇಪಿಗೆ ಪರಿಚಯದ ರಾಮು ಮಾಡಿದ್ದ ರುಚಿಕರ ಚಿಕನ್ ಅಡುಗೆ ಸವಿಯುತ್ತಾ ಬಯಲು ಸಿಟ್ಟಿಂಗ್ ಶುರುವಾಯಿತು. ಬೇಟೆಯ ಸಂಜೆಗಳನ್ನು ರಂಗೇರಿಸಲು ನಂದೀಶ್ ‘ಆಂಟಿಕುಟಿ’ ತಂದಿದ್ದರು. ಮಡದಿ ಸೀಮಾ ಅವರ ಮನವೊಲಿಸಲು ಕೇಪಿ ವೈನ್ ಕೊಟ್ಟು ಸಿಟ್ಟಿಂಗ್ಗೆ ‘ಆಂಟಿಸಿಪೇಟರಿ ಬೇಲ್’ ಪಡೆದುಕೊಂಡಿದ್ದರು. ಮೊದಲ ಗುಕ್ಕು ಗಂಟಲಲ್ಲಿ ಇಳಿಯುತ್ತಿದ್ದಂತೆ ‘ರಾಂಪುರದ ಒಕ್ಕಣ್ಣ’ ಕೈಗೆ ಬಂತು. ನನ್ನದೇ ರೀಡಿಂಗ್. ಪ್ರತಿ ಪ್ಯಾರಾ ಓದುತ್ತಿದ್ದಂತೆ ‘ದೋಸ್ತಾ ಇಗಾ, ಒಂದ್ ಸಿಪ್ ಮಾಡು, ಸಾವ್ಕಾಶ’ ಎಂದು ಪ್ಯಾಟಿ ಅನಗತ್ಯ ಉಪಚಾರ ಮಾಡುತ್ತಿದ್ದ. ಭಾವಪೂರ್ಣ ಅಭಿನಯದೊಂದಿಗೆ ಒಂದೊಂದೇ ಪ್ಯಾರಾ ಓದುತ್ತ, ಅಂದಿನ ಕಾಲಮಾನವನ್ನೇ ಸ್ವಾನುಭವಕ್ಕೆ ತಂದುಕೊಳ್ಳುತ್ತ ನಾಳೆ ನೋಡಬೇಕಾದ ಮುಖ್ಯ ಸ್ಥಳಗಳನ್ನು ಎರಡೆರಡು ಸಲ ಓದಿ ಅಂಡರ್ಲೈನ್ ಮಾಡಿದೆವು.
ಹನ್ನೊಂದರ ಹೊತ್ತಿಗೆ ಎಲ್ಲರೂ ಮಲಗಿದರು, ನನ್ನ ಜೊತೆಯಿದ್ದ ಪ್ಯಾಟಿಯೂ ಮಲಗಿದ, ಆದರೆ ನನಗೆ ನಿದ್ದೆ ಬರಲೊಲ್ಲದು. ಕೆನೆತ್ನನ್ನು ಹುಡುಕುತ್ತ ಯಾವ್ಯಾವ ಮೂಲೆಯಿಂದಲೋ ಈ ಕಗ್ಗಾಡಿಗೆ ಬಂದಿದ್ದಾದರೂ ಏಕೆ? ಹೇಗೆ? ಎಂಬ ಗೊಂದಲಕ್ಕೆ ನನ್ನಲ್ಲಿ ಇನ್ನೂ ಸ್ಪಷ್ಟ ಪರಿಹಾರ ಸಿಕ್ಕಿರಲಿಲ್ಲ.
(ಇನ್ನೂ ಇದೆ…)








I went through the story, it was really interesting and I appreciate the experience behind the story.
Thank you,