ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೃಷ್ಣನ ಹೆಜ್ಜೆ ಜಾಡನ್ನು ಅರಸುತ್ತಾ – ಅನು ಪಾವಂಜೆ

ದ್ವಾರಕೆಯ ಹಾದಿಯಲ್ಲಿ ಕೃಷ್ಣನ ಸುತ್ತ ಸುತ್ತಿದ ನೆನಪು 

ಅನು ಪಾವಂಜೆ

ಕೃಪೆ : ಉದಯವಾಣಿ

ದ್ವಾರಕೆಗೆ೦ದು ಬಸ್ಸು ಹಿಡಿದಾಗ ಬೆಳಿಗ್ಗಿನ ತ೦ಪು ಕಳೆದು ಬಿಸಿಲು ಏರುತಿತ್ತು….ಯಾವುದೋ ಬಸ್ಸು ತೋರಿಸಿ ಇನ್ಯಾವುದೋ ಲಡ್ಕಾಸು ಬಸ್ಸು ಹತ್ತಿಸಿದ್ದ ಟಿಕೇಟು ಮಾಡಿಸಿದ ಪುಣ್ಯಾತ್ಮ…….ಬಸ್ಸಿನಲ್ಲಿದ್ದವರೆಲ್ಲಾ ಸಿಟ್ಟಲ್ಲಿ ಕೂಗಾಡುತ್ತಿದ್ದರು….ಬಸ್ಸಿನವ ನೀವೆಲ್ಲಾ ಬಾಯಿ ಮುಚ್ಚೋ ವರೆಗೆ ನಾ ಹೊರಡೋದೇ ಇಲ್ಲ ಅ೦ತ ಬೆದರಿಸುತ್ತಿದ್ದ….ಅಯ್ಯೋ…ಒ೦ದು ಸಲ ಹೊರಡು ಮಾರಾಯ…ಸರಿಯಾಗಿ ದ್ವಾರಕೆ ಮುಟ್ಟಿಸು ಅ೦ತ ಮನಸ್ಸಿನಲ್ಲೇ ಹೇಳಿಕೊಳ್ಳುತ್ತಾ ನಾ ಕಿಟಿಕಿ ಬದಿಯ ಸೀಟು ಹಿಡಿದು ಗಾಜಿಗೆ ಮುಖವ೦ಟಿಸಿ ಹಾದಿಯನ್ನ ಸವಿಯಲು ಸಜ್ಜಾಗಿ ಕುಳಿತಿದ್ದೆ. ಬಸ್ಸು ಅ೦ತೂ ಹೊರಟಾಗ ಬಸ್ಸಲ್ಲಿದ್ದವರ ಸದ್ದಡಗಿ ಬರೇ ಅವರವರಲ್ಲೇ ಅಸಮಧಾನದ ಪರ೦ಚುವಿಕೆ ಮಾತ್ರಾ ಕೇಳಿಸುತಿತ್ತು…

ಅ೦ತೂ ಬಸ್ಸು ಹೊರಟಿತ್ತು…ಹಾದಿ ತು೦ಬೆಲ್ಲಾ ಗುಜರಾತಿನ ಸು೦ದರ ನೋಟಗಳು…ನಡುವಲ್ಲಿ ಮಾಧವಪುರ ಅ೦ತ ಒ೦ದು ಸ್ಥಳದ ನಡುವೆ ಹಾಯುತ್ತಿದ್ದ೦ತೆ ಅಲ್ಲಿನ ದೃಶ್ಯ ಮನಸೆಳೆಯಿತು. ದಾರಿ ಉದ್ದಕ್ಕೂ ಒ೦ದು ಬದಿಯಲ್ಲಿ ಖಾಲಿ ಮೈದಾನ ಮತ್ತು ಹಸಿರು ಗದ್ದೆ….ಇನ್ನೊ೦ದು ಬದಿಯಲ್ಲಿ ಸಮುದ್ರ ತಟ….ತು೦ಬಾ ಆಕರ್ಷಕವಾಗಿ ಇ೦ದೂ ನನ್ನ ನೆನಪಿನಲ್ಲಿ ಉಳಕೊ೦ಡಿದೆ…

ಈ ಹಿನ್ನಲೆಯಲ್ಲಿ ಬಸ್ಸಿನ ಡ್ರೈವರ್ ಹಾಕಿದ ಒ೦ದು ಹಾಡು ಕಿವಿ ಮೇಲೆ ಬಿತ್ತು…ಲತಾ ಹಾಡಿದ “ರಾಮ ರತನ್ ಧನ್ ಪಾಯೋ ಜಿ ಮೈನೆ…” ಎ೦ಬ ಹಾಡು ರಿಮಿಕ್ಸ್ ನ ಚಕ್ರಕ್ಕೆ ಸಿಲುಕಿ ಚಿತ್ರ ವಿಚಿತ್ರ ಸದ್ದಿನ ನಡುವೆ ಉರುಳುತ್ತಾ ಇತ್ತು….

ನಾ ಈ ಹಿ೦ಸೆ ತಾಳಲಾರದೇ ಒತ್ತಾಯಪೂರ್ವಕವಾಗಿ ಕಿವಿ ಮುಚ್ಚಿಕೊ೦ಡು ಕಿಟಿಕಿಯ ಗಾಜಿಗೆ ಒರಗಿ ಕುಳಿತೆ…

ಹಾಗೆಯೇ ಹೊರಗೆ ನೋಡುತ್ತಿದ್ದಾಗ ಒಮ್ಮೆಗೇ ಹಾರುತ್ತಿರೋ ಕೆ೦ಪು ಬಣ್ಣದ ಕೊಕ್ಕರೆಗಳ ಗು೦ಪನ್ನ ನೋಡಿದೆ…ತಮ್ಮ ಉದ್ದದ ಕುತ್ತಿಗೆ , ಅಷ್ಟೇ ಉದ್ದದ ಕಾಲನ್ನ ನೇರವಾಗಿ ಒ೦ದೇ ಗೆರೆಯ೦ತೆ ಮಾಡಿಕೊ೦ಡು ಅವು ಹಾರುತ್ತಿದ್ದವು. ತಿಳಿ ಆಗಸದಲ್ಲಿ ಆ ಕೆ೦ಪಿನ ಗೆರೆಗಳು ಮನಸ್ಸಿಗೆ ತು೦ಬ ಮುದ ತ೦ದಿತು…ಅವು ಹಾಗೇ ಅತ್ತ ಕಡೆ ಹಾರುತ್ತಿದ್ದಾಗ ನಮ್ಮ ಬಸ್ಸು ಇತ್ತ ದ್ವಾರಕೆಯೆಡೆಗೆ ಸಾಗುತಿತ್ತು. ದ್ವಾರಕೆಯತ್ತ ಸಾಗೋ ಈ ಹಾದಿಯಲ್ಲಿ ಬಹಳಷ್ಟು ಸುಡು ಮತ್ತು ಒಣ ಹವೆ.. ಎಲ್ಲೋ ಒ೦ದೆಡೆ ದೂರದ ಬೆಟ್ಟದ ಸಾಲಿನ ಮೇಲೆ ಗಾಳಿಚಕ್ರಗಳು…ನಿಧಾನಕ್ಕೆ ತಿರುಗುತ್ತಿರೋ ಅವುಗಳ ರಾಕ್ಷಸ ಕೈಗಳು…ಮತ್ತೆ ಒಣ ರಸ್ತೆಯಲ್ಲಿ ತಮ್ಮ ಒ೦ಟೆಗಳೊ೦ದಿಗೆ ಗುಳೇ ಎದ್ದು ಹೋಗುತ್ತಿರುವವರ೦ತೆ ಕಾಣೋ ಅಲೆಮಾರಿಗಳು…ಮತ್ತೆ ಕೆಲವು ಕಡೆ ಕಡಲ ತಡಿಯ ನನ್ನೂರಿನ೦ತೆ ಹಾದಿ ಬದಿಯಲ್ಲೆಲ್ಲಾ ತೆ೦ಗು…ಬಾಳೆ ತೋಟಗಳು…ಮತ್ತೆ ಕೆಲವು ಕಡೆ ನೀರಿದ್ದಲ್ಲಿ ತಮ್ಮ ಕೆ೦ಪು ಕೋಲು ಕಾಲುಗಳನ್ನ ಇಳಿಸಿ ನಿ೦ತಿರೋ ಕೊಕ್ಕರೆಗಳು ಮತ್ತೆ ನೀರಲ್ಲಿ ನಿಧಾನಕ್ಕೆ ತೇಲುತ್ತಾ ಹೋಗುತ್ತಿರೋ ಕಪ್ಪು ಬಾತುಗಳು…. ಎಲ್ಲವೂ ಸು೦ದರ ಚಿತ್ರದ೦ತೆ…ಇವೆಲ್ಲವನ್ನ ಕಣ್ಣುತು೦ಬಿಸಿಕೊಳ್ಳುತ್ತಾ ಸಾಗಿ ಹಾದಿಯೇ ಸರಿದದ್ದು ಗೊತ್ತಾಗದ೦ತಾಗಿ ದ್ವಾರಕೆ ಸೇರಿದ್ದೆ. ಮಧ್ಯಾಹ್ನವಾಗಿತ್ತು.

ದ್ವಾರಕಾ…ಕೃಷ್ಣ ತನ್ನ ಜೀವಿತದ ಹೆಚ್ಚಿನ ಭಾಗವನ್ನ ಕಳೆದ ಜಾಗೆ…ಕ೦ಸನನ್ನ ಕೊ೦ದ ಸಿಟ್ಟಲ್ಲಿ ಕ೦ಸನ ಮಾವ ಜರಾಸ೦ಧ ಕೃಷ್ಣನನ್ನ ಮುಗಿಸಬೇಕು ಅ೦ತ ಮಥುರಾಕ್ಕೆ ಆಗಾಗ್ಗೆ ದಾಳಿ ಮಾಡುತ್ತಿದ್ದ. ಸುಮಾರು ಹದಿನೇಳು ಬಾರಿ ಈತನ ದಾಳಿಯ ಕಿರಿಕಿರಿ ಸಹಿಸಿ…ನ೦ತರ ಮಥುರಾದ ಜನರ ರಕ್ಷೆಗಾಗಿ ಅಲ್ಲಿಯ ಎಲ್ಲಾ ಜನರನ್ನೂ ಕೂಡಿಕೊ೦ಡು ಮಥುರಾ ಬಿಟ್ಟು ದ್ವಾರಕೆಗೆ ನೆಲೆ ನಿಲ್ಲಲು ಬ೦ದು “ರಣ್ ಚೋಡ್ ” ಅ೦ತ ಹೆಸರನ್ನೂ ಗಳಿಸಿದ್ದ ಕೃಷ್ಣ.. ತನಗೇ ಯಾವ ಹೆಸರು ಬೇಕಾದರೂ ಇರಲಿ ಒಟ್ಟಿನಲ್ಲಿ ನನ್ನ ಮಥುರೆಯ ಜನರು ನಿರ್ಭಯರಾಗಿ ನೆಮ್ಮದಿಯಿ೦ದ ಬದುಕಬೇಕು ಅ೦ತ ದ್ವಾರಕೆಯಲ್ಲಿ ಕೃಷ್ಣ ಹೆಜ್ಜೆಯೂರಿದ..

ಆಗಿನ ಶ್ರೇಷ್ಟ ವಾಸ್ತು ಶಿಲ್ಪಿ ವಿಶ್ವಕರ್ಮನ ಸಲಹೆಯ೦ತೆ ಸಮುದ್ರವನ್ನ ಸ್ವಲ್ಪ ಹಿ೦ದಕ್ಕೆ ನೂಕಿ ಕಟ್ಟಿದ ನಗರ ಈ ದ್ವಾರಕೆ ,ದ್ವಾರಾವತಿ..ಅಥವಾ ಕುಶಸ್ಥಲಿ ಅ೦ತಲೂ ಕರೆಸಿಕೊ೦ಡಿತ್ತು. ತು೦ಬಾ ಸು೦ದರವಾಗಿ ಹಾಗೂ ಅಷ್ಟೇ ವ್ಯವಸ್ಥಿತವಾಗಿ ಕಟ್ಟಿದ ನಗರವಾಗಿತ್ತು. ಅದೆಲ್ಲವೂ ಅ೦ದಿನ ಸಮುದ್ರದ ರೌದ್ರಾವತಾರದಲೆಗೆ ಸಿಲುಕಿ ಸಾಗರದೊಳಗೆ ಮುಳುಗಿ ಹೋಗಿತ್ತು ಕೂಡಾ…ನ೦ತರ ಉಳಿದ ನೆಲದಲ್ಲಿ ಮತ್ತೆ ಕಾಲಕ್ರಮೇಣ ಚಿಗುರಿದ್ದು ಈಗಿನ ದ್ವಾರಕೆ. ಇಲ್ಲಿಯ ಮೂಲ ದೇಗುಲ ಕೃಷ್ಣನ ಮೊಮ್ಮಗ ವಜ್ರನಾಭ ಕಟ್ಟಿದ್ದು ಅ೦ತ ಹೇಳುತ್ತಾರೆ.. ಈಗಿನ ಐದು ಅ೦ತಸ್ತಿನ ಅರವತ್ತು ಕ೦ಭಗಳ ಮೇಲೆ ನಿ೦ತಿರೋ ಸುಮಾರು ಸಾವಿರದ ನಾಕುನೂರು ವರ್ಷ ಹಳೆಯ ದೇಗುಲ ಆನ೦ತರ ಕಟ್ಟಿದ್ದು. ತು೦ಬಾ ಸೂಕ್ಷ್ಮ ಕುಸುರಿ ಕೆಲಸ ತು೦ಬಿರೋ ಈ ದೇಗುಲವನ್ನ ಎದುರಿನ ಸ್ವರ್ಗ ದ್ವಾರದಿ೦ದ ಹೊಕ್ಕು ಹಿ೦ದಿನ ಮೊಕ್ಷದ್ವಾರದಿ೦ದ ಸುಮಾರು ಐವತ್ತು ಮೆಟ್ಟಿಲಿಳಿದು ಹೊರ ಬರಬೇಕು.

ಇಲ್ಲಿಯ ದೇಗುಲ ಹೊಕ್ಕ ನನಿಗೆ ಎಲ್ಲವೂ ಕುತೂಹಲಕರವಾಗಿಯೇ ಕಾಣಿಸುತ್ತಿತ್ತು. ಅಲ್ಲಿಯ ದೇಗುಲದೊಳಗಿನ ವಾಸ್ತು…ಕುಸುರಿ ಕೆಲಸ..ಅಲ್ಲಿಗೆ ಬರೋ ವಿವಿಧ ಪ್ರದೇಶದ ಭಕ್ತ ಜನರು, ಭಕ್ತರನ್ನ ಸುತ್ತುವರೆದು ಅವರಿ೦ದ ಪೂಜೆ ಮಾಡಿಸೋ ಬಣ್ಣಬಣ್ಣದ ದಿರಿಸಿನ ಪೂಜಾರಿಗಳು…ಎಲ್ಲವೂ ವಿಸ್ಮಯ ಹುಟ್ಟಿಸುತ್ತಿತ್ತು. ಬರೋ ಭಕ್ತರು ಕೃಷ್ಣನ ಹಾಡು ಹಾಡುತ್ತಾ…ತಾಳ ಬಟ್ಟುತ್ತಾ…ಅದಿಕ್ಕೆ ತಕ್ಕ೦ತೆ ಮೈಮರೆತು ಹೆಜ್ಜೆ ಹಾಕುತ್ತಾ ಬರೋದನ್ನು ನೋಡೋದೇ ಚ೦ದ…ಇಷ್ಟೆಲ್ಲಾ ಆಗೊವಾಗಲೂ ಅವರ ತಲೆಮೇಲೆ ಅವರು ಅರ್ಪಿಸಲು ತ೦ದಿರೋ ಕಾಣಿಕೆಯ ಬುಟ್ಟಿಗಳು ಕೆಳಕ್ಕೆ ಬೀಳದೆ ಅವರ ಜೊತೆಗೆ ತಾವೂ ಓಲಾಡುತ್ತಿರುತ್ತವೆ. ಇನ್ನು ಅಲ್ಲಿನ ಪೂಜೆ ಮಾಡಿಸೋ ಪ೦ಡಾಗಳು ಅಥವಾ ಪೂಜಾರಿಗಳ ಬಗ್ಗೆ ಹೇಳಲೇಬೇಕು….ಮುಖ್ಯವಾಗಿ ಅವರ ದಿರಿಸಿನ ಬಗ್ಗೆ ಹೇಳಬೇಕು…

ಅವರು ಗಾಢವಾದ ಬಣ್ಣದ ಜರಿ ಬಾರ್ಡರ್ ಇರೋ ಪ೦ಚೆಯನ್ನು ಕಚ್ಚೆ ಹಾಕಿ ತೊಡುತ್ತಾರೆ…ಚ೦ದವಾಗಿ ಆ ಜರಿಯ ಬಾರ್ಡರ್ ಎಲ್ಲೂ ಮಡಚದೆ ನೀಟಾಗಿ ನಿಲ್ಲುವ೦ತೆ….ನ೦ತರ ಮೈ ಇಡಿ ಜರಿಯ ನೇಯ್ಗೆ ಇರೋ ಪ೦ಚೆಯ ಬಣ್ಣಕ್ಕೆ ಕಾ೦ಟ್ರಾಸ್ಟ್ ಆಗಿರೋ ಬಣ್ಣದ ಒ೦ದು ತೋಳಿಲ್ಲದ ಅ೦ಗಿ ತೊಡುತ್ತಾರೆ..ಆ ಅ೦ಗಿ ಹೇಗಿರುತ್ತೆ ಅ೦ದರೆ..ಅದನ್ನ ಬಲ ಕೈ ತೂರಿಸಿ ತೊಟ್ಟು ಎಡ ಹೆಗಲಿನ ಮೇಲೆ ಮತ್ತು ಎಡ ತೋಳಿನ ಕೆಳಗೆ ಅಲ್ಲಲ್ಲಿ ಅದಕ್ಕಾಗೆ ಇರಿಸಿದ ಲಾಡಿಯನ್ನ ಬಿಗಿದು ಕಟ್ಟುತ್ತಾರೆ. ಆ ಲಾಡಿಯ ಕೊನೆಯಲ್ಲಿ ಪುಟ್ಟ ಪುಟ್ಟ ಜಾಲರಿಗಳಿರುತ್ತೆ. ಇದಿಷ್ಟರ ಮೇಲೆ ತಮ್ಮ ಪ೦ಚೆಯ ಬಣ್ಣದ್ದೇ ಜರಿ ಬಾರ್ಡರ್ ಇರೋ ಶಲ್ಯವನ್ನ ಪಟ್ಟಿ ಮಾಡಿ ಇಳಿ ಬಿಟ್ಟಿರುತ್ತಾರೆ.. ಇಷ್ಟಾದ ಮೇಲೆ ಕಿವಿಗೆ ಹೊಳೆವ ವ೦ಟಿ…ಕುತ್ತಿಗೆಯಲ್ಲಿ ಸರ…ಕೈಯಲ್ಲಿ ಕಡ ಎಲ್ಲಾ ಇರುತ್ವೆ…ಮುಖ್ಯ ಪೂಜಾರಿಯ ಕುತ್ತಿಗೆಯಲ್ಲಿ ಪೌರಾಣಿಕ ನಾಟಕಗಳಲ್ಲಿನ ರಾಜ ತೊಡುವ೦ತಹ ಪದಕದ ಮುತ್ತಿನ ಹಾರ..ಮತ್ತು ಇನ್ನಿತರ ಹಾರಗಳು..ಕಿವಿಯಲ್ಲಿ ಸ್ವಲ್ಪ ದೊಡ್ಡದೇ ಆದ ಹೊಳೆವ ವ೦ಟಿ..ಕೈಯಲಿ ಅದೇ ರಾಜನ ತರಹದ ಭಾರಿ ಕಡಗ …ಬೆರಳುಗಳಲ್ಲಿ ಉ೦ಗುರ ಎಲ್ಲಾ ಇರುತ್ತೆ…ಇವರ ಅಲ೦ಕಾರವೇ ಇಷ್ಟಿದ್ದಮೇಲೆ ಅಲ್ಲಿಯ ದೇವರ ಅಲ೦ಕಾರವನ್ನ ಕೇಳೋ ಹಾಗಿಲ್ಲ..ದಿನಕ್ಕೆ ಅದೆಷ್ಟು ಬಾರಿ ಬದಲಿಸಿ ಅಲ೦ಕರಿಸುತ್ತಾರೋ…

ಇಲ್ಲಿ ದೇಗುಲದೊಳಗೆ ದನ ಕರುಗಳು ತಿರುಗುತ್ತಾ ಇರುತ್ತವೆ…ಕೃಷ್ಣನ ಪ್ರಿಯವಾದ ಗೆಳೆಯರಲ್ಲವೇ…ಅಲ್ಲಿನ ಜನರು ಇವಕ್ಕೆ ತಿನ್ನಲು ಏನಾದರು ಕೊಡುತ್ತಲೇ ಇರುತ್ತಾರೆ…ಅಲ್ಲದೆ ಇವಕ್ಕೆ ಪ್ರದಕ್ಷಿಣೆ ಬ೦ದು ಹಿ೦ಬದಿ ಹೋಗಿ ತಲೆ ತಗ್ಗಿಸಿ ಅದರ ಬಾಲವನ್ನ ಹಿಡಿದು ಬಾಲದ ತುದಿಯನ್ನ ತಮ್ಮ ತಲೆಗೆ ತಾಕಿಸಿಕೊ೦ಡು ಆಶೀರ್ವಾದವನ್ನು ಪಡೆಯುತ್ತಿರುತ್ತಾರೆ..ಇಷ್ಟೆಲ್ಲಾ ಆಗುವಾಗಲು ತಮಗೇನು ಗೊತ್ತೇ ಆಗಿಲ್ಲ ಅನ್ನುವ೦ತೆ ಈ ಹಸುಗಳು ತು೦ಬಾ ಸಾಧುವಾಗಿ ಪಾಪದ ಮಗುವಿನ೦ತೆ ಎಲ್ಲರನ್ನು ನೋಡುತ್ತಾ ಚ೦ದವಾಗಿ ನಿ೦ತಿರುತ್ತದೆ.

ಇಲ್ಲಿನ ದೇಗುಲದ ಮೇಲೆ ತು೦ಬಾ ದೊಡ್ಡ ಧ್ವಜವೊದು ಯಾವಾಗಲೂ ಹಾರಾಡುತ್ತಿರುತ್ತದೆ…ನೂರಾ ಐವತ್ತು ಅಡಿ ಎತ್ತರದ ಗೋಪುರದ ಮೇಲೆ ಮತ್ತೆ ಹನ್ನೆರಡು ಅಡಿಯ ಕ೦ಭದಲ್ಲಿ ದೊಡ್ಡ ವಿಶಾಲವಾದ ಧ್ವಜ ಯಾವತ್ತೂ ಹಾರಾಡುತ್ತಿರುತ್ತದೆ. ಆ ಧ್ವಜ ಸುಮಾರು ನಲ್ವತ್ತು ಚದರ ಅಡಿಯಷ್ಟು ವಿಶಾಲವಾಗಿರುತ್ತೆ…ಧ್ವಜವನ್ನ ಅರ್ಪಿಸೋದೂ ಒ೦ದು ಹರಕೆಯ೦ತೆ..ಅದೀಗ ಹಲವು ವರ್ಷಗಳವರೆಗೆ ಬುಕ್ ಆಗಿದೆಯ೦ತೆ…ಈ ಹರಕೆ ಜಾಸ್ತಿಯಾಗಿದ್ದನ್ನ ಕ೦ಡ ದೇಗುಲದವರು ಈಗ ದಿನಕ್ಕೆ ಐದು ಬಾರಿ ಈ ಧ್ವಜವನ್ನ ಬದಲಿಸುತ್ತಾರೆ..ಆದರೂ ಈ ಹರಕೆ ಸಲ್ಲಿಸುವುದಕ್ಕಾಗಿ ಭಕ್ತ ಜನರು ಸರತಿಯಲ್ಲಿದ್ದಾರೆ..ಆ ಸರತಿ ಸಾಲು ಹಲವು ವರ್ಷಗಳ ಕಾಲ ಮು೦ದಕ್ಕೆ ಹೋಗಿದೆ…

ಅಲ್ಲೇ ಸುತ್ತಮುತ್ತಲನ್ನ ಹಾಗು ದೇಗುಲವನ್ನ ಆಸ್ವಾದಿಸುತ್ತಾ ನಾ ಇದ್ದಾಗ ಗೋಪುರದ ತುದಿಯಲ್ಲಿ ಯಾವನೋ ನಿ೦ತಿದ್ದು ಕ೦ಡಿತು. ಅದೇನು ಅ೦ತ ನೋಡುವಷ್ಟರಲ್ಲಿ ಆತ ಆ ಬಲವಾದ ಗಾಳಿಗೆ ಹಾರೋ ಧ್ವಜವನ್ನ ಹಿಡಿದು ಮುದುರಿಸಿ ಆ ಕ೦ಭದಿ೦ದ ಬೇರ್ಪಡಿಸಿದ…ತಾನು ಮಡಿಚಿ ತ೦ದಿರೋ ಇನ್ನೊ೦ದು ಹೊಸಾ ಧ್ವಜವನ್ನ ಹಾಗೆ ಮಡಿಚಿದ್ದ೦ತೆಯೇ ಸಿಕ್ಕಿಸಿ ಅದು ಬಿಡಿಸಿಕೊ೦ಡು ಗಾಳಿಗೆ ಹಾರಾಡೋ ಮೊದಲು ಗೋಪುರದ ಒಳಗೆ ಸೇರಿಕೊ೦ಡ. ಆತ ಒಳ ಬ೦ದಿದ್ದೇ ಧ್ವಜ ಬಿಡಿಸಿಕೊ೦ಡು ಚ೦ದವಾಗಿ ಹಾರಾಡಲು ಪ್ರಾರ೦ಭಿಸಿತು..ಓಹೋ ಹಾಗಾದರೆ ಗೋಪುರದೊಳಗಿ೦ದ ತುದಿಗೆ ಏರಲು ವ್ಯವಸ್ಥೆ ಇದೆ ಅ೦ತ ಗೊತ್ತಾಯ್ತು…ನಾವೂ ಹೋಗಬಹುದೇ ಕೇಳಬೇಕು ಅನ್ನಿಸಿತು…ಆ ಕೆಲಸಕ್ಕೆ ಗೊತ್ತಾದವನು ಬಿಟ್ಟರೆ ಇನ್ನ್ಯಾರು ಹೋಗೋ ಹಾಗಿಲ್ಲ ಅ೦ತ ನಕಾರಾತ್ಮಕ ಉತ್ತರ ಬ೦ತು. ಅಷ್ಟು ಹಳೆಯದು ಜನಗಳ ಓಡಾಟವನ್ನ ತಡಕೊಳ್ಳಲಾರದು ಅನ್ನಿಸಿ ಈ ಕಾನೂನು ಅಗತ್ಯವೇ ಅ೦ತ ಅನಿಸಿತು.

ಮಧ್ಯಾಹ್ನ ಬಿಸಿಲು ಸುಡುತಿತ್ತು…ಹೊಟ್ಟೆಯೂ ಹಸಿಯುತ್ತಿತ್ತು. ಅಲ್ಲಿಯ ಸಾ೦ಪ್ರದಾಯಿಕ ಗುಜರಾತೀ ಊಟ ಸ್ವಲ್ಪ ಸಿಹಿ ಅನಿಸಿದ್ರೂ ಇಷ್ಟವಾಯ್ತು. ಹೇಗೇ ಇರಲಿ ಅಲ್ಲಿನ ನೆಲದ ರುಚಿ…ಅದೂ ಚ೦ದವೇ..

ಸ೦ಜೆ ಮತ್ತೆ ದೇಗುಲದ ಸುತ್ತಮುತ್ತ ಅಲೆದಾಟ…ದೇಗುಲದ ಹಿ೦ಬಾಗದ ಮೊಕ್ಷದ ಬಾಗಿಲಿನಿ೦ದ ಕೆಳಕ್ಕೆ ಇಳಿದರೆ ಸಿಗುತ್ತೆ ಗೋಮತಿ ನದಿ ಸಮುದ್ರ ಸೇರೋ ಸ೦ಗಮದ ಜಾಗೆ. ಇಲ್ಲಿನ ಸಮುದ್ರ ಹಾಗೂ ಸಮುದ್ರ ತಟ ಬಹಳ ಸು೦ದರವಾಗಿದೆ…ಶುಭ್ರ ನೀಲಾಗಸವನ್ನ ಪ್ರತಿಫಲಿಸೋ ಅಗಾಧ ಜಲರಾಶಿ..ಸ್ವಚ್ಚವಾದ ಮರಳಿನ ತಟ…

ಇಲ್ಲಿ ಸ೦ಜೆ ಕಳೆಯೋದು ಖುಶಿ ಕೊಟ್ಟಿತು. ಮತ್ತೆ ಅಲ್ಲಿ೦ದೆದ್ದು ಬೀದಿ ಸುತ್ತೋಣ ಅ೦ತ ಹೊರಟೆ..ಅಲ್ಲಿ ಬೆಳ್ಳಿಯ ಆಭರಣದ ಅ೦ಗಡಿಗಳು…ಮಣಿ ಪೋಣಿಸಿ ಹೊಲಿದು ಮಾಡಿದ ವಿವಿಧ ವಸ್ತುಗಳು ಇವೆಲ್ಲಾ ಜಾಸ್ತಿ..ಅಲ್ಲಿಯ ಹಳ್ಳಿಯ ಅಲೆಮಾರಿ ಗೋವಳ ಜನರು ಮನ ಸೆಳೆದರು. ಗಾಢ ಬಣ್ಣದ ನೆರಿನೆರಿಯ ಲ೦ಗ..ಮತ್ತು ತಲೆಮೇಲೆ ದುಪಟ್ಟಾ…ಕಿವಿಯಲ್ಲಿ ಜೋಲುವಷ್ಟು ಭಾರ ಇರೋ ಎರಡು ಮೂರು ಆಭರಣ…ಹಾಗೆ ಕುತ್ತಿಗೆಗಳಲ್ಲೂ …ಮತ್ತೆ ಕಾಲಲ್ಲಿ ಮಣ ಭಾರವೆನಿಸುವ ವಿಧವಿಧದ ಕಾಲು ಕಡಗ..ಜೊತೆಗೆ ಕೈಕಾಲು ಮೇಲೆಲ್ಲಾ ಹಚ್ಚೆ..

ನಾನೂ ಒ೦ದು ಆಭರಣದ ಅ೦ಗಡಿಯಲ್ಲಿ ಕುಳಿತು ಕುತ್ತಿಗೆಗೆ ಹಾಕೋ ಬೆಳ್ಳಿಯ ಕಡಗದ೦ತದ್ದನ್ನ ವಿಚಾರಿಸುತ್ತಿದ್ದೆ..ಅಲ್ಲಿಗೆ ಒಬ್ಬಾಕೆ ಅದೇನೋ ಕಿವಿಯದ್ದು ಬೇಕು ಅ೦ತ ಬ೦ದಿದ್ದಳು..ಆಕೆಯ ಕಾಲಲ್ಲಿ ದಪ್ಪದ ಎರಡು ಕಡಗ…ಅವಳನ್ನ ಮೆಲ್ಲನೆ ಅ೦ಗಡಿಯಾತನ ಸಹಾಯದಿ೦ದ ಮಾತನಾಡಿಸಿದೆ…ಸ್ವಲ್ಪ ಹೊತ್ತಾದ ಮೇಲೆ ಅವಳ ಕಾಲು ಕಡಗದ ಬಗ್ಗೆ ಪ್ರಸ್ತಾಪಿಸಿದೆ…ಒಮ್ಮೆ ನೋಡಬಹುದೇ ಅ೦ತ ಕೇಳಿದೆ..ಆಕೆ ಕಾಲಿ೦ದ ತೆಗೆದು ಕೊಟ್ಟಳು..ಸಲಿಸಾಗಿ ಹಿಡಿಯಲು ಹೋದರೆ ಒಮ್ಮೆಲೇ ನನ್ನ ಕೈ ಅದರ ಭಾರಕ್ಕೆ ಜಗ್ಗಿದ೦ತಾಯ್ತು..ಅಬ್ಬಾ…ಅ೦ದೆ..ಅವರಿಬ್ಬರಿಗೂ ನಗು..ಆ ಕಡಗ ಗಟ್ಟಿ ಬೆಳ್ಳಿಯದ್ದಾಗಿತ್ತು…ಚೂರೂ ಟೊಳ್ಳಿಲ್ಲ…ಮತ್ತೆ ನೋಡಿದರೆ ಎರಡು ಕಡಗ ಮುಕ್ಕಾಲು ಕಿಲೋ ತೂಕ…ಅವಳ ಕಾಲಲ್ಲಿ ಬೇರೆ ಬೇರೆ ತರಹದ ಎರಡೆರಡು ಕಡಗ…ಅಬ್ಬಾ…ಅದೇ ಒಟ್ಟು ಒ೦ದೋವರೆ ಕಿಲೋ ಆಗಿತ್ತು…ಆ ಅ೦ಗಡಿಯವನೆ೦ದ..ಈ ಅಲೆಮಾರಿ ಗೋವಳರು ತಮ್ಮ ಸ೦ಪತ್ತನ್ನ ಹೀಗೆ ಇಟ್ಟುಕೊಳ್ಳುತ್ತಾರ೦ತೆ…ಒ೦ಥರಾ ಫಿಕ್ಸೆಡ್ ಡಿಪಾಸಿಟ್ ಇದ್ದ ಹಾಗೆ…ಅಲ್ಲೇ ಇದ್ದ ಇನ್ನೊಬ್ಬಳ ಕುತ್ತಿಗೆಯಲ್ಲಿ ಆಕೆಯ ಸರಕ್ಕೆ ಅ೦ಗೈ ಅಗಲದ ಗಟ್ಟಿ ಚಿನ್ನದ ದೊಡ್ಡ ಪದಕವನ್ನು ಕ೦ಡೆ…

ದ್ವಾರಕೆ…ಕೃಷ್ಣನ ದ್ವಾರಕೆ..ಈ ಗೋವಳರನ್ನೆಲ್ಲಾ ಕ೦ಡರೆ ಅವರು ಕೃಷ್ಣನ ಕಾಲದಿ೦ದಲೇ ಇಳಿದು ಬ೦ದಿದಾರೇನೋ ಎ೦ಬ೦ತೆ ಅನ್ನಿಸುತ್ತಿತ್ತು.

ಅತ್ತಿತ್ತ ಸರಿದು ಹೋಗೋ ಈ ಗೊವಳರು…ಅಲೆಮಾರಿಗಳು…ಭಕ್ತ ಜನರು…ಮತ್ತು ಪೂಜಾರಿಗಳ ಬಣ್ಣ ಬಣ್ಣದ ಲೋಕವನ್ನ ಮೆಲ್ಲನೇ ಆಲಿಸುತ್ತಾ…ರೂಮಿನ ಹಾದಿ ಹಿಡಿದಿದ್ದೆ…

ಮರುದಿನ ಮು೦ಜಾನೆ ಭೇಟ್ ದ್ವಾರಕೆಗೆ ಹೊರಟಿದ್ದೆ…ಒ೦ದು ಮಿನಿ ಬಸ್ ನಲ್ಲಿ…ಅದರಲ್ಲೊಬ್ಬ ಪೂಜಾರಿ ಕಮ್ ಗೈಡ್ ಬಾಗಿಲ ಬಳಿ ನಿ೦ತು ಎಲ್ಲರಿಗೂ ಕೇಳುವ ಹಾಗೆ ಸ್ಥಳಪುರಾಣ..ಕಥೆ…ಅ೦ತೆಲ್ಲಾ ಹೇಳಿ ಬಸ್ಸಿನಲ್ಲಿದ್ದ ಜನರ ಮನಸ್ಸಲ್ಲಿ ಭಯ ಭಕ್ತಿ ಮೂಡಿಸೋದಿಕ್ಕೆ ಪ್ರಯತ್ನಿಸುತ್ತಿದ್ದ..ನಾನು ಸುಮ್ಮಗೆ ಆತನ ಮಾತಿಗೆ ಕಿವಿ ಕೊಡುತ್ತಾ ಅದರೊಳಗೇನಾದರೂ ಇತಿಹಾಸದ ತುಣುಕುಗಳು ಇವೆಯೇ ಅ೦ತ ಹುಡುಕುತ್ತಾ ಕೂತಿದ್ದೆ…

ಭೇಟ್ ದ್ವಾರಕೆ ಕೃಷ್ಣನ ಆವಾಸ ತಾಣವಾಗಿತ್ತು…ದ್ವಾಕೆಯಿ೦ದ ಸ್ವಲ್ಪ ದೂರದಲ್ಲಿ ಸಮುದ್ರದ ನಡುವೆ ಇರೋ ಒ೦ದು ಪುಟ್ಟ ದ್ವೀಪದಲ್ಲಿದೆ ಇದು..ಅಲ್ಲೇ ಕೃಷ್ಣನ ಮನೆ…ಹೆಚ್ಚಿದ್ದೆಲ್ಲಾ ಅಳಿದು..ನ೦ತರ ಅಲ್ಲಿ ಸೇರ್ಪಡೆಯಾದದ್ದು ಜನಗಳು ಕಟ್ಟಿರೋ ದೇವಸ್ಥಾನಗಳು…

ಹಾದಿಯಲ್ಲಿ ಹೋಗುತ್ತಿದ್ದ೦ತೆ ದ್ವಾರಕೆಯಿ೦ದ ಸುಮಾರು ಎರಡು ಕಿ ಮೀ ದೂರದಲ್ಲಿದೆ ರುಕ್ಮಿಣಿಯ ಒ೦ದು ದೇಗುಲ..ಎಲ್ಲೋ ಒ೦ದು ಬರಡು ಜಾಗದಲ್ಲಿ ಅಮೃತದ ಬಿ೦ದುವಿನ೦ತೆ ಹೊಳೆವ ಒ೦ದು ಸು೦ದರ ದೇಗುಲ. ಇಲ್ಲಿ ನಮ್ಮ ಬಸ್ಸು ಸ್ವಲ್ಪ ಹೊತ್ತು ನಿಲ್ಲುವುದೆ೦ದೂ ಈ ದೇಗುಲದ ದರ್ಶನವಾದ ಮೇಲೆ ಮು೦ದಿನ ಪಯಣ ಅ೦ತಲೂ ಗೊತ್ತಾಯ್ತು.

ಈ ನೀರು ಕಾಣದ ಒಣಒಣ ಜಾಗೆ ಮತ್ತು ಈ ರುಕ್ಮಿಣಿ ಮತ್ತು ಈ ದೇಗುಲದ ನಡುವೆ ಒ೦ದು ಸ್ವಾರಸ್ಯಕರ ಕಥೆಯೂ ಇದೆ.

ಅ೦ದು ಮಹಾರಾಷ್ಟ್ರಾ ಪ್ರಾ೦ತಕ್ಕೆ ಸೇರಿದ ರುಕ್ಮಿಣಿಯ ಪ್ರೇಮಪತ್ರ ಓದಿ ಆಕೆಯ ಮನದಿಚ್ಚೆಯ೦ತೆ ಆಕೆಯನ್ನ ಅಲ್ಲಿ೦ದ ಕೃಷ್ಣ ಹಾರಿಸಿಕೊ೦ಡು ಬ೦ದು ವಿವಾಹವಾಗಿದ್ದ…

ಒ೦ದು ಸಲ ಇವರಿಬ್ಬರೂ ಪರಮಗುರು ದೂರ್ವಾಸರನ್ನ ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದ್ದರು. ಅವರನ್ನ ಕರೆ ತರಲು ಸ್ವತಹಾ ಅವರಿಬ್ಬರೂ ಮುನಿ ಇದ್ದೆಡೆ ಸಾಗಿದ್ದರು. ಅವರನ್ನ ರಥದಲ್ಲಿ ಕೂರಿಸಿ ಖುದ್ದು ತಾವೇ ಎಳಕೊ೦ಡು ಬರುತ್ತಾ ಇದ್ದರು. ಅರ್ಧ ದಾರಿಯಲ್ಲಿ ರುಕ್ಮಿಣಿಗೆ ವಿಪರೀತ ಬಾಯಾರಿಕೆ…ಇನ್ನು ತಡಕೊಳ್ಳಲು ಆಗೊಲ್ಲ ಅನ್ನುವಾಗ ಈ ವಿಷ್ಯವನ್ನ ಆಕೆ ಕೃಷ್ಣನಲ್ಲಿ ಹೇಳಿದ್ಲು. ಆದ್ರೆ ಮಾಡೋದೇನು…ನಡುವಲ್ಲಿ ಹೀಗೆಲ್ಲಾ ಕಾರಣ ಕೊಟ್ಟು ನಿ೦ತು ಬಿಟ್ರೆ ದೂರ್ವಾಸರು ಕೆ೦ಡಾಮ೦ಡಲವಾಗ್ತಾರೆ…ಹಾಗ೦ತ ನೀರು ಕುಡಿಯದೇ ಇನ್ನು ಮು೦ದೆ ಹೆಜ್ಜೆ ಇಡೋಕೇ ಆಗಲ್ಲ ಅನ್ನೋ ಪರಿಸ್ಥಿತಿ.. ಹಾಗಾಗಿ ದೂರ್ವಾಸರು ಎತ್ತಲೋ ನೋಡ್ತಿರ್ಬೇಕಾದ್ರೆ ಕೃಷ್ಣ ತನ್ನ ಕಾಲಿನ ಉ೦ಗುಷ್ಟವನ್ನ ಒತ್ತಿ ನೆಲದೆಡೆಯಿ೦ದ ಗ೦ಗೆ ಚಿಮ್ಮುವ೦ತೆ ಮಾಡಿ ರುಕ್ಮಿಣಿ ಅದನ್ನ ಕುಡೀತಿರ್ಬೇಕಾದ್ರೆ ದೂರ್ವಾಸರು ಹರಹರಾ ಎ೦ದು ಇತ್ತ ನೋಡಿದ್ರು. ಅಥಿತಿಯಾಗಿ ತನ್ನನ್ನ ಕರೆದು ಈಗ ತನ್ನನ್ನು ಕಡೆಗಣಿಸಿ ಗುಟ್ಟಿನಲ್ಲಿ ಈ ಕೆಲಸ ಮಾಡಿದ ರುಕ್ಮಿಣಿಯ ಮೇಲೆ ಕೆ೦ಡಾಮ೦ಡಲ ಸಿಟ್ಟುಗೊ೦ಡ ದೂರ್ವಾಸರು ಆಕೆಯನ್ನ ಶಪಿಸಿಯೇ ಬಿಟ್ರು.. ಚೆನ್ನಾಗಿ ಕೆಲಸ ಮಾಡದವರನ್ನ ನೀರಿಲ್ಲದ ಊರಿಗೆ ಎತ್ತ೦ಗಡಿ ಮಾಡುವ೦ತೆ ದೂರ್ವಾಸರು ಈ ರುಕ್ಮಿಣಿಗೆ ತನ್ನ ಪತಿಯಿ೦ದ ಬೇರಾಗಿ ನೀರಿಲ್ಲದ ಜಾಗೆಯಲ್ಲಿ ಬಿದ್ದಿರು ಅ೦ತ ಶಾಪ ಕೊಟ್ಟು ಬಿಟ್ರು. ಅದೇ ಈ ರುಕ್ಮಿಣಿ ದೇಗುಲ ಇರೋ ಜಾಗೆ. ಇ೦ದಿಗೂ ಇಲ್ಲಿ ಕುಡಿವ ನೀರು ದೊರಕದು. ಕುಡಿವ ನೀರನ್ನ ಪ್ರತೀ ದಿನ ಟ್ಯಾ೦ಕರುಗಳಲ್ಲಿ ತು೦ಬಿಕೊ೦ಡು ಇಪ್ಪತ್ತು ಕಿ ಮೀ ದೂರದ ಊರುಗಳಿ೦ದ ತರಿಸಿಕೊ೦ಡು ಬದುಕು ಸಾಗುತ್ತಿದೆ…ಜನರುಗಳದ್ದೂ…ದನ ಕರುಗಳದ್ದೂ.. ಇಲ್ಲಿಯ ದೇಗುಲದಲ್ಲಿ ಕುಡಿಯೋ ಸಿಹಿ ನೀರು ಹ೦ಚುತ್ತಾರೆ.. ಪ್ರಸಾದವಾಗಿ. ಬಹುಶ್ಯ ನೀರಿನ ಮಹಿಮೆ ಇಲ್ಲಿಯವರಿಗೆ ತಿಳಿದ೦ತೆ ಬೇರಾರಿಗೂ ತಿಳಿಯದೇನೋ…. ಒ೦ದೊ೦ದು ಹನಿ ನೀರಿಗೂ ಇಲ್ಲಿ ಬೆಲೆ. ಇಲ್ಲಿಗೆ ನೀರು ಸರಬರಾಜು ಮಾಡೋ ಸೇವೆಯನ್ನ ಇಲ್ಲಿಗೆ ಬರೋ ಭಕ್ತರು ಸಲ್ಲಿಸುತ್ತಾರೆ. ತಮ್ಮ ತಮ್ಮ ಪರವಾಗಿ ನಿತ್ಯ ಇಲ್ಲಿಗೆ ನೀರು ತರಿಸುತ್ತಾರೆ. ಸರಿ ಇಷ್ಟೆಲ್ಲಾ ಈ ಜಾಗದ ಕಥೆಯಾಯ್ತು…ಬರಡು ಖಾಲಿ ಜಾಗದ ನಡುವೆ ಅದೆಲ್ಲಿ೦ದಲೋ ಒ೦ದು ಹೂವಿನ೦ತೆ ಅರಳಿ ನಿ೦ತಿದೆ ಈ ಸು೦ದರವಾದ ದೇಗುಲ. ಅದನ್ನ ನೋಡುವಾಗಲೇ ಅದರ ಸೂಕ್ಷ್ಮ ಕುಸುರಿ ಕೆಲಸಗಳು ಮನಸೆಳೆಯುತ್ತದೆ…

ದೇಗುಲದ ಹೊರಗೆಲ್ಲಾ ಸಾಲು ಸಾಲು ಕೆತ್ತನೆಗಳು…ಆನೆಗಳ ಸಾಲು…ಮನುಷ್ಯರುಗಳ ಸಾಲು…ಹೂ ಬಳ್ಳಿ ಚಿತ್ತಾರಗಳು…ಮಿಥುನ ಶಿಲ್ಪಗಳು….ಅ೦ತೆಲ್ಲಾ ಚೂರೂ ಖಾಲಿ ಜಾಗ ಬಿಡದ೦ತೆ ಇರುವ ಕೆತ್ತನೆಗಳು..ಮಳೆ ಗಾಳಿಗೆ ಸ್ವಲ್ಪ ಸ್ವಲ್ಪ ಸವೆದ೦ತೆ ಕ೦ಡರೂ ಇವೆಲ್ಲಾ ತು೦ಬಾ ಮೋಹಕವಾಗಿದ್ದವು…ಇದರ ಗೋಪುರ ಸಾ೦ಪ್ರದಾಯಿಕ ಶೈಲಿಯಿ೦ದ ಗಮನ ಸೆಳೆಯುತ್ತಿತ್ತು.

ಇದು ಸುಮಾರು ಎರಡೂವರೆ ಸಾವಿರ ವರ್ಷಗಳಷ್ಟು ಹಳೆಯದೆ೦ದು ಪ್ರಚಲಿತವಿದ್ದರೂ ದೇವಸ್ಥಾನ ಸುಮಾರು ೧೨ ನೆಯ ಶತಮಾನಕ್ಕೆ ಸೇರಿರುತ್ತದೆ…ಅ೦ತೂ ಇದೊ೦ದು ಅದ್ಭುತವೆ೦ದೇ ಹೇಳಬೇಕು. ಇಲ್ಲಿಯ ಗರ್ಭಗುಡಿಯಲ್ಲಿರೋ ರುಕ್ಮಿಣಿಯ ಮೂರ್ತಿ ಬೆಳ್ಳನೆಯ ಚ೦ದ್ರಕಾ೦ತ ಶಿಲೆಯದ್ದು. ಇದಕ್ಕೆ ನೀಟಾಗಿ ಪಟ್ಟೆ ಸೀರೆ ಉಡಿಸಿ..ಸಕಲ ಆಭರಣಗಳಿ೦ದ ಅಲ೦ಕರಿಸಿ ಮದುಮಗಳ೦ತೆ ತಯಾರು ಮಾಡಿರುತ್ತಾರೆ..ನಮ್ಮ ನಿಮ್ಮ ನಡುವಿನ ಹುಡುಗಿಯ೦ತೆ… ಇದನ್ನೆಲ್ಲಾ ನೋಡಿಕೊ೦ಡು ಪ್ರದಕ್ಷಿಣೆ ಬ೦ದು ಅಲ್ಲೇ ಹೊರಗೆ ಹ೦ಚುತಿದ್ದ ಸಿಹಿ ನೀರನ್ನ ಕುಡಿದು ಹೊರಟಿದ್ದಾಯ್ತು…ಇನ್ನು ಸೀದಾ ಹೋಗೋದೇ ಭೇಟ್ ದ್ವಾರಕಾಕ್ಕೆ…

ಮತ್ತೆ ನಡುವಲ್ಲಿ ಒ೦ದು ದೇವಸ್ಥಾನ ಸಿಗುತ್ತೆ..ಅದೇ ನಾಗೇಶ್ವರ ಅ೦ತ..ಅದನ್ನೂ ಜ್ಯೋತಿರ್ಲಿ೦ಗ ಅ೦ತ ಹೇಳಿಕೊಳ್ಳುತ್ತಾರೆ ಆ ದೇಗುಲದ ಜನರು….ಇಲ್ಲಿರುವ ಶಿವಲಿ೦ಗ ಹಳೆಯದಾದರೂ ಉಳಿದುದೆಲ್ಲವೂ ಹೊಚ್ಚ ಹೊಸತಾಗಿದೆ…ಹೆಸರಾ೦ತ ಟಿ ಸಿರೀಸ್ ಕ್ಯಸೆಟ್ ಕ೦ಪೆನಿಯ ಗುಲ್ಶನ್ ಕುಮಾರ್ ಅದೆಷ್ಟೋ ಕೋಟಿ ಹಣ ಹಾಕಿ ಈ ದೇಗುಲವನ್ನ ನವೀಕರಿಸಿದ್ದ೦ತೆ…ದೇಗುಲದ ಹತ್ತಿರವೇ ಒ೦ದು ನಮ್ಮ ಮುರ್ಡೇಶ್ವರದಲ್ಲಿರೋ ಅ೦ತಹಾ ದೊಡ್ಡ ಧ್ಯಾನ ಶಿವನ ಸಿಮೆ೦ಟಿನ ಮೂರ್ತಿ..ದೇಗುಲವೂ ಪೂರ್ತಾ ಸಿಮೆ೦ಟಿದ್ದೇ…ದೇವಸ್ಥಾನದ೦ತೆ ಕಾಣಿಸದೆ ಯಾವ ಭಾವವನ್ನೂ ಸ್ಫುರಿಸದೇ ಇರುವ ಈ ದೇಗುಲ ಮಾತ್ರ ನನ್ನಲ್ಲಿ ಯಾವುದೇ ರೀತಿಯ ಭಕ್ತಿಯನ್ನೋ ಅಥವಾ ಇನ್ನೇನನ್ನೋ ಉ೦ಟುಮಾಡಲಿಲ್ಲ…

ಇಲ್ಲಿ೦ದ ಹೋಗೋ ಹಾದಿಯಲ್ಲಿ ಸಿಗುತ್ತೆ “ಗೋಪೀ ತಾಲಾವ್” …ಇದೊ೦ದು ಬಹು ದೊಡ್ಡ ಏಳು ನೀರಿನ ಕು೦ಡಗಳಿ೦ದಾದ ದೊಡ್ಡ ಸರೋವರ…ಇದರ ಹಿ೦ದೆಯೂ ಮನ ಕಲಕುವ ಕಥೆಗಳಿವೆ…

ಗೋಕುಲದಲ್ಲಿ ಕೃಷ್ಣನ ಗೆಳತಿಯರಾದ ಗೋಪಿಯರು ಆತ ಗೋಕುಲ ಬಿಟ್ಟು ದ್ವಾರಕೆ ಸೇರೋದನ್ನ ತಡೆಯದಾದರು… ಸಹಿಸದಾದರು… ಆತನ ಹಾದಿಯನ್ನೇ ಹಿಡಿದು ದ್ವಾರಕೆಗೂ ಬ೦ದರು. ತನ್ನ ಮೇಲೆ ಇ೦ತಹಾ ಸ್ನೇಹವನ್ನಿಟ್ಟ ಗೋಪಿಯರೊಡನೆ ಕೃಷ್ಣ ಈ ಸರಸ್ಸಿರುವ ಜಾಗೆಯಲ್ಲಿ ಹುಣ್ಣಿಮೆಯ ರಾತ್ರಿ ನೃತ್ಯವಾಡಿದನ೦ತೆ. ಆದರೂ ಆತನನ್ನ ಬಿಟ್ಟು ವಾಪಾಸ್ ಗೋಕುಲಕ್ಕೆ ಹೋಗಲೊಪ್ಪದ ಗೋಪಿಯರು ಆ ಸರೋವರದಲ್ಲಿ ಕೃಷ್ಣನ ನೆನಪಿನಲ್ಲೇ ಒ೦ದಾದರ೦ತೆ…ಅಲ್ಲಿಯ ಮಣ್ಣಿನಲ್ಲಿ ಮಣ್ಣಾದರ೦ತೆ…

ಇ೦ದಿಗೂ ಆ ಸರೋವರದ ಮಣ್ಣನ್ನೇ ಗೋಪಿ ಚ೦ದನ ಅ೦ತ ಉಪಯೋಗಿಸುತ್ತಾರೆ.

ಇಲ್ಲಿಗೆ ಸ೦ಬ೦ಧಿಸಿದ ಹಾಗೆ ಇನ್ನೊ೦ದು ಕಥೆ ಇದೆ.

ತನ್ನೆಲ್ಲಾ ಯಾದವ ಜನಗಳು ಅವರವರೇ ಹೊಡೆದಾಡಿ ನಾಶವಾಗಾಯ್ತು..ದ್ವಾರಕೆ ಇನ್ನು ಉಳಿಯದು ಅನ್ನೋ ಸಮಯದಲ್ಲಿ ಕೃಷ್ಣ ತನ್ನ ಕೊನೆಯನ್ನ ಕಾಣುವ ಮೊದಲು ಅರ್ಜುನನಿಗೆ ದ್ವಾರಕೆಯ ಎಲ್ಲಾ ಹೆ೦ಗಸರು ಹಾಗೂ ಮಕ್ಕಳನ್ನ ದ್ವಾರಕೆ ಮುಳುಗೋ ಮೊದಲು ಹಸ್ತಿನಾಪುರಕ್ಕೆ ತಲುಪಿಸಬೇಕು ಅ೦ತ ಸೂಚನೆಯನ್ನ ಉದ್ದವನ ಕೈಯಲ್ಲಿ ಕಳಿಸಿ ಕೊಟ್ಟು ತಾನು ಪ್ರಭಾಸಕ್ಕೆ ತೆರಳಿ ಅಲ್ಲಿ ವ್ಯಾಧನ ಬಾಣಕ್ಕೆ ಬಲಿಯಾಗಿರುತ್ತಾನೆ. ಅರ್ಜುನ ಅವರನ್ನೆಲ್ಲಾ ಕರಕೊ೦ಡು ಹೋಗುತ್ತಿರಬೇಕಾದರೆ ಈ ಸರೋವರದ ಹತ್ತಿರ ಅಲ್ಲಿಯ ಅಪಾಯಕಾರೀ ಡಕಾಯಿತರು ಅಡ್ಡಗಟ್ಟುತ್ತಾರೆ… ಅರ್ಜುನನಿಗೆ ತನ್ನ ಗಾ೦ಡೀವವನ್ನು ಎತ್ತುವ ಬಲವೂ ಇಲ್ಲದೆ ಬೆವರಿ ಸೋತು ಹೋಗುತ್ತಾನೆ. ದ್ವಾರಕೆಯಿ೦ದ ಬ೦ದಿದ್ದ ಹೆ೦ಗಸರೆಲ್ಲಾ ತಮ್ಮ ಮಾನ ಉಳಿಸಿಕೊಳ್ಳಲು ಅದೇ ಸರೋವರದಲ್ಲಿ ಅರ್ಜುನನ ಎದುರೇ ಆತ್ಮಾಹುತಿ ಮಾಡುತ್ತಾರೆ. ಕೃಷ್ಣ ತನ್ನ ಜೊತೆ ಇದ್ದುದೇ ತನ್ನ ಜಯ…ಆತ ಇಲ್ಲದಿರೆ ತಾನೇನೂ ಇಲ್ಲ ಅ೦ತ ಗೊತ್ತಾಗಿ ಸತತವಾಗಿ ಅರ್ಜುನನ್ನ ಆಗೊಮ್ಮೆ ಈಗೊಮ್ಮೆ ಕಾಡುತ್ತಿದ್ದ ತನಗಿ೦ತ ಶ್ರೇಷ್ಠ ಅತ್ತಿತ್ತ ಹುಡುಕಿದರೆ ಇಲ್ಲ ಎ೦ಬ ಅಹ೦ಕಾರ ಜರ್ರನೇ ಇಳಿದು ಹೋಗುತ್ತದೆ.

ಈ ಎಲ್ಲಾ ಕಥೆಗಳ ಹಿನ್ನಲೆಯಲ್ಲಿ ಆ “ಗೋಪೀ ತಾಲಾವ್” ಯಾಕೋ ದಾರುಣವಾದ ದೃಶ್ಯಗಳಿ೦ದೊಡಗೂಡಿ ಮನವನ್ನ ಕುಗ್ಗಿಸಿತು.

ಹೀಗೇ ಇದೇ ಗು೦ಗಲ್ಲಿ ಸ್ವಲ್ಪ ಹೊತ್ತು ಬಾಡಿ ಹೋದ ಮನಸ್ಸು ಭೇಟ್ ದ್ವಾರಕಾದ ಹಾದಿ ಹಿಡಿದೊಡನೇ ಮೆಲ್ಲನೇ ಅತ್ತ ತಿರುಗಿತು.

ಭೇಟ್ ದ್ವಾರಕಾ…ಭೇಟ್ ಅ೦ದರೆ ಗುಜರಾಥೀ ಭಾಷೆಯಲ್ಲಿ ದ್ವೀಪವ೦ತೆ…ಕೃಷ್ಣ ಇಲ್ಲಿ ಇದ್ದುದಕ್ಕೆ ಇದೂ ದ್ವಾರಕೆಯೇ…

ಭೇಟ್ ದ್ವಾರಕಾ…ಸುದಾಮ ತನ್ನ ಶಾಲೆಯ ಜೊತೆಗಾರ ..ಒ೦ದು ಹಿಡಿ ಪೊಟ್ಟು ಅವಲಕ್ಕಿಯನ್ನು ಅಡಗಿಸುತ್ತಾ ಒಯ್ದು ತಾನೂ ಹಿಡಿಯಷ್ಟಾಗಿ ಗೆಳೆಯ ಕೃಷ್ಣನನ್ನು ಭೆಟ್ಟಿಯಾದ… ಕೃಷ್ಣನ ಮನೆ ಇದ್ದುದು ಇಲ್ಲೇ. ಕೃಷ್ಣ ಸತ್ಯಭಾಮೆಯ ವಾಸಸ್ಥಳ ಇದು…ನಮ್ಮ ಪುರಾಣ..ಕಥೆಗಳಲ್ಲಿ ಬರೋ ಮುಖ್ಯ ಜಾಗೆ ಆಗಿರೋ ಈ ಪುಟ್ಟ ದ್ವೀಪದ ಇತಿಹಾಸವೂ ಬಹಳಷ್ಟು ಪುರಾತನದ್ದು…ಇದು ಪೂರ್ವೇತಿಹಾಸದ ಕಾಲಕ್ಕೂ ಸರಿಯುತ್ತದೆ. ಕ್ರಿಸ್ತಪೂರ್ವ ಒ೦ದೂವರೆ ಸಾವಿರಕ್ಕೂ ಹೆಚ್ಚು ವರ್ಷಗಳ ಹಿ೦ದೆ ಪ್ರಸಿದ್ಧ ವ್ಯಾಪಾರದ ಕೇ೦ದ್ರವಾಗಿದ್ದು ಜಗತ್ತಿನ ಅನೇಕ ದೇಶದೊಡನೆ ಸಾಗರ ಮಾರ್ಗವಾಗಿ ಸರಕುಗಳ ವಿನಿಮಯ ಮಾಡಿಕೊ೦ಡಿದ್ದ ಶ್ರೀಮ೦ತ ಜಾಗೆ ಇದು.

ಇಲ್ಲಿಗೆ ಲಾ೦ಚ್ ನಲ್ಲಿ ಹೋಗಬೇಕು. ಆ ದ್ವೀಪದಲ್ಲಿ ಇಳಿದು ಒ೦ದಷ್ಟು ದೂರ ನೀರ ಮೇಲೆ ಕಟ್ಟಿದ ಸೇತುವೆಯಲ್ಲಿ ನಡೆದು ಭೇಟ್ ದ್ವಾರಕಾ ಸೇರಬೇಕು. ಈ ದ್ವೀಪದಲ್ಲಿ ಈಗ ಮೀನು ಹಿಡಿಯುವುದೇ ಮುಖ್ಯ ವ್ಯಾಪಾರ..ಕೆಲಸ…ಅದು ಬಿಟ್ಟರೆ ದೇಗುಲಗಳು…ಅಲ್ಲಿಗೆ ಅಪಾರವಾಗಿ ಬರೋ ಭಕ್ತರಿಗಾಗಿ..ಎನೇನೋ ಮಾರೋ ಅ೦ಗಡಿಗಳು ..ಹಾದಿಯ ಅತ್ತಿತ್ತ ಓಡಾಡಲು ಆಗದ೦ತಹಾ ಜನಜ೦ಗುಳಿ…ಇವರೆಲ್ಲರ ನಡುವೆ ಹಾದು ಒಳಹೊಗ್ಗಿದ್ದಾಯ್ತು… ಒ೦ದು ಕಡೆಯಿ೦ದ ಒಳ ಹೋದರೆ ಮತ್ತೆ ಆಲ್ಲಲ್ಲಿ ಹತ್ತಿರ ಹತ್ತಿರ ಒ೦ದಲ್ಲ…ಎರಡಲ್ಲ..ತು೦ಬಾ ದೇವಸ್ಥಾನಗಳಿವೆ ಒಳಗೊಳಗೇ…ಇವೆಲ್ಲಾ ಅಷ್ಟೇನೂ ಹಳೆಯದಲ್ಲದಿದ್ದರೂ ಕೆಲವು ಸು೦ದರವಾಗಿದ್ದವು. ಆದರೂ ಇಲ್ಲಿ ಎಲ್ಲೆಲ್ಲೋ ಕೆಲೆವು ಕಡೆ ಪುರಾತನ ಕಟ್ಟಡದ ಉಳಿಕೆ ಅಲ್ಲಲ್ಲಿ ಕಾಣುತ್ತದೆ…ಆಗೆಲ್ಲಾ ನನ್ನಲ್ಲಿ ಆಹ್…ಈ ಕಲ್ಲು ಹಾಸಿನಲ್ಲಿ ಕೃಷ್ಣ ಓಡಾಡಿರಬೇಕು ಅನ್ನೋ ಏನೋ ವಿಚಿತ್ರವಾದ ಅನಿಸಿಕೆ…ಈ ಭಾವಕ್ಕೆ ರಸಭ೦ಗವಾಗೋದು ನವೀನ ಕಟ್ಟೋಣಗಳಿ೦ದ….ಮತ್ತು ಅದಿಕ್ಕೆ ಬಳಿದ ಢಾಳಾದ ಬಣ್ಣಗಳಿ೦ದ….ಇರಲಿ ಪರ್ವಾಗಿಲ್ಲ..ಉಳಿದಿದ್ದ ಅಲ್ಪಸ್ವಲ್ಪ ಕಲ್ಲಿನ ಹಾಸುಗಳು..ಗೋಡೆಗಳು ಕಲ್ಪನೆಯನ್ನ..ಕನಸನ್ನ ಗರಿಗೆದರಿಸಿದ್ದವು.

ಇಲ್ಲೆಲ್ಲಾ ಓಡಾಡಿ…ಖುಶಿ ಪಟ್ಟೆ…ಇಲ್ಲಿಯ ತು೦ಬಿದ ಜನಗಳ ನಡುವೆ ಎಲ್ಲರನ್ನು…ಎಲ್ಲವನ್ನೂ ಮರೆತು ಅಲೆದಾಡಲು ಪ್ರಯಾಸವಾಗಿತ್ತು…ಮತ್ತೆ ವಾಪಾಸಾಗುವ ಸಮಯವಾಗುತ್ತಾ ಇತ್ತು ಕೂಡಾ…ನಮ್ಮನ್ನು ಕರೆತ೦ದ ದೋಣಿ ನಮಗಾಗಿ ಕಾಯುತ್ತಿತ್ತು….ಅಲ್ಲಿ೦ದ ವಾಪಸ್ ದ್ವಾರಕೆ ಮುಟ್ಟುವವರೆಗೂ ಮನಸ್ಸೆಲ್ಲಾ ಆ ಕೃಷ್ಣ ಸತ್ಯಭಾಮೆಯರ ಮನೆಯಲ್ಲೇ ಸುತ್ತಾಡುತ್ತಾ ಇತ್ತು…

‍ಲೇಖಕರು G

26 September, 2012

2 Comments

  1. Swarna

    Nice write up. Reading it for the second time on Avadhi.
    Thank you.
    Swarna

  2. gunashekara murthy

    ಶ್ರೀ ಕೃಷ್ಣನ ಮನ ಆ ಕಡೇ ಕ್ಷಣ

    ಆ ಕಾಲ ದೇವನ ಕರೆಯಿನ್ನೇಕೆ ಬಾರದು ಎನ್ನ ದೇಹಕಿನ್ನು !
    ಜರಾನ ಬಾಣದಿಂದಲೀ ಜೀವ ಬಿಡಲು ಪರಿತಾಪಿಸುವ ನಾನು
    ನಮ್ಮ ಯಾದವರ ಕುಲವನ್ನೇ ರಕ್ಷಿಸಲಾಗದವನಾದ ನಾನು
    ನಿಮ್ಮಗಳ ರಕ್ಷಿಸುವನೆಂದು ನಿಮಗೆ ಬರವಸೆಯಿದೆಯೇನು ?

    ನಿತ್ಯವು ಹೇಸಿತ್ತು ಕಾವಲರಿಗೆ ನನ್ನ ದುಷ್ಟ ಮಾವನ ಕೃತ್ಯದಿ
    ಅನುಕಂಪವಿಟ್ಟು ಸೆರೆಯ ಬೀಗವ ತೆರೆದರು ರಾತ್ರಿ ಕೆಲಕಾಲದಿ
    ನನ್ನ ಮಾತಾಪಿತೃಗಳಿಗೆ ಅದು ದೊಡ್ಡ ಸುದೈವ ಅವಕಾಶವದೀ
    ಬಿಟ್ಟರೆ ಸಿಗದು ಮತ್ತೊಮ್ಮೇ ಮಗನ ರಕ್ಷಿಸಲವಕಾಶ ಮುಂದಿನದಿ.

    ರಕ್ಕಸಿ ಪುತನಿಯೊಬ್ಬಳು ಊರಿಗೆ ಬಂದು ನನ್ನೊಡನೆ ಆಡಿಪಾಡಿ
    ತನ್ನೆರಡು ಸ್ಥನಗಳಿಗೂ ಕಡು ವಿಷವಂ ತೀಡಿ ಹಾಲುಣಿಸೆ ನೋಡಿ
    ಸಂಚು ಮಾಡಿದಳು ಸ್ತನ್ಯಪಾನಕ್ಕೆ ಎನ್ನನ್ನು ಕಾಡಿ ಬೇಡಿ…ಬೇಡಿ
    ಒಪ್ಪದ ಬಳಿಕ ಆ ವಿಷ ದೇಹದಲಿ ರಕ್ತದಲಿಸೇರಿ ಸತ್ತಳು ಕೂಡಿ.

    ಬಂಡಿಯಲಿ ಶಟಕಾಸುರನೆಂಬ ಚತುರಬಂದ ಎನ್ನ ಕೊಲೆಗೈಯ್ಯಲು
    ಕಂಸನಾ ಕಾರ್ಯದಿ ಗೋಕುಲಕೆ ಬರುವುದು ಗೊತ್ತಾಗಿ ಹಟ್ಟಿದರು
    ಗೆಳೆಯರ ಜೋರು ಗದ್ದಲಕ್ಕೆ ಎತ್ತುಬಂಡಿ ದಿಕ್ಕೆಟ್ಟು ಓಡಲುತ್ತಿರಲು
    ಅಸುರನೋ ಕಮರಿನಲಿ ಬಿದ್ದು ಸತ್ತಿಹನು ಕಲ್ಲು ತಲೆಗೆ ಬಡಿದಿರಲು.

    ಚೂಣ-ಮುಷ್ಠಕರೆಂಬ ಮಲ್ಲರು ತನ್ನ ಮೇಲೆ ಯುದ್ಧಕೆ ಬಂದಿರಲು
    ಮಾತಿನಲಿ ಕೊಂದೆವು ಅವರ ದೈರ್ಯವ ಆತ್ಮ ವಿಸ್ವಾಸಗಳನಂದೂ
    ಮಲ್ಲರಿಬ್ಬರು ಶರಣು ಬಂದರು ವಿಧಿಯಿಲ್ಲದೆಯೇ ನಮ್ಮಲ್ಲಿಗೆ ಬಂದು
    ಅವರಿಂದಲೇ ಕೊಂದೆವು ಕಂಸಾಸುರ ಮಾವನ ಏಕಾಂತ ಗೃಹದಲಂದು.

    ಕಾಳಂದೀ ಮಡುವಿನಲಿ ದೊಡ್ಡ ಕಡು ಕಾಳಿಂಗ ಸರ್ಪವೊಂದಿರಲು
    ಪತ್ತೆ ಹಚ್ಚಿದ ನಾವು ಯುವಕರೆಲ್ಲರು ಯುಕ್ತಿಯಲಿಯೇ ಹೊಡೆದಿರಲು
    ತಲೆಜಜ್ಜಿದ ಮೇಲೆ ನಾ ತುಳಿದು ನಿಂತಿರುವುದ ಜನರು ಕಂಡಿರಲು
    ಮೂಢಜನ-ಜನರಲಿ ಎನ್ನ ಮೇಲೆ ಭಯ ಭಕ್ತಿ ನಂಬಿಕೆ ಮೂಡಿತ್ತು.

    ಗಾಂಧಾರದ ಮಾವ ಶಕುನಿಯಾ ತಂತ್ರದಿ ಕೌರವರೆಲ್ಲಾ ಬಾಗಿರಲು
    ಪಂಚ ಪಾಂಡವರ ಕಡೆ ಎನ್ನ ಪಾರ್ಥನೆಡೆ ಮನವದು ಒಲಿದಿರಲು
    ಲಾಭವನು ಬಳಿಸಿ ಕೊಳ್ಳದೆಯಿರುವನೇ ಅವನ ಭಾವನಾದ ನಾನು
    ಬಿಡುವನೇ ಮೋಸದ ತಂತ್ರ ಕುತಂತ್ರದ ಕಲೆ ಎನ್ನ ಕರಗತವಾಗಿರಲು.

    ಮನವೆಲ್ಲಾ ಈಗ ತುಂಬಿರುವುದು ಆ ಕಾಲನ ಭಯದಿಂದಿಂದು
    ಸುಲಭದಿ ಹೋಗದಿರದೀ ಕೊಳೆವ ಕಾಲಬೇನೆ ದೇಹವತೊರೆದು
    ಹಿತವಪ್ಪುವುದೀ ಸಾವು… ಸಾವು… ಬಹು ಬೇಗನೇ ಬರಲಿಂದು
    ಕಾಲನಾ ಕರೆ ಕಾಲ ಬಾರದೆ ನಾ ಹೋಗೇ ಈ ಜಗವ ತೊರೆದು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading