ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುವೆಂಪು ಮತ್ತು ನನ್ನ ಬದಲಾದ ‘ಇಮೇಜು’

ಟೀನಾ

ಟೀನಾಜೋನ್

ಯುನಿವರ್ಸಿಟಿಯಲ್ಲಿದ್ದಾಗ ನಮ್ಮ ಬೈಠಕ್ಕುಗಳು, ಗಲಾಟೆ, ಗೆಳೆತನ, ಪ್ರೇಮ, ವಿರಸ, ಗಾಸಿಪ್ ಏನು ನಡೆಯಬೇಕೆಂದರು ಕ್ಯಾಂಪಸ್ಸಿನ ಕುವೆಂಪುರವರ ದೊಡ್ಡದಾದ ಮೂರ್ತಿಯ ಸುತ್ತಮುತ್ತಲೆ ನಡೆಯಬೇಕಿತ್ತು. ಕ್ಯಾಂಪಸ್ಸಿಗೆ ಹೊಸತಾಗಿ ಬಂದ ಜೂನಿಯರ್ ಬ್ಯಾಚಿನ ಹುಡುಗಿಯರನ್ನು ನೋಡಲು ಠಳಾಯಿಸುವ ಹುಡುಗರು, ಶೇಷಣ್ಣನ ಕ್ಯಾಂಟೀನಿನಲ್ಲಿ ಟೀ ಕುಡಿದುಕೊಂಡು ಮಶ್ಕಿರಿ ಮಾಡಿಕೊಂಡು ಕಾಲಕಳೆಯುವ ಗೆಳೆಯರ ಗುಂಪುಗಳು, ಮೈದಾನದಲ್ಲಿ ಆಡುವವರ ಕೇಕೆ, ಸುಮ್ಮನೆ ಕಲ್ಲುಬೆಂಚುಗಳ ಮೇಲೆ ಕೂತು ಹರಟೆ ಕೊಚ್ಚುವವರು, ಇಬ್ಬಿಬ್ಬರೆ ಅಲ್ಲಿಇಲ್ಲಿ ಓಡಾಡಿಕೊಂಡು ತಾವು ಪ್ರೇಮಿಗಳೆಂದು ಸಾರುವ ಜೋಡಿಗಳು..ಹಾಗೂ ಇದನ್ನೆಲ್ಲ ಮೌನವಾಗಿ ನಿಂತು ನೋಡುವ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪನವರು.

ನಾವು ಹೊಸತಾಗಿ ಕ್ಯಾಂಪಸ್ಸಿಗೆ ಬಂದಾಗ ಅಲ್ಲಿನ ಇತರ ಎಲ್ಲ ಕಟ್ಟಡ, ಜನರು ಹಾಗೂ ಮರಗಿಡಗಳ ಜತೆಗೇ ಕುವೆಂಪುರವರೂ ನಿಗೂಢವಾಗಿ ಕಂಡಿದ್ದರು. ಅವರಿರುವ ದೊಡ್ಡ ಕಲ್ಲುಕಟ್ಟೆ ಸೀನಿಯರುಗಳ ಸ್ವತ್ತಾಗಿದ್ದಿದ್ದೂ ಒಂದು ಬಲವಾದ ಕಾರಣ. ಸಂಜೆಗಳಲ್ಲಿ ಆರಾಮವಾಗಿ ಕುವೆಂಪುರವರ ಕಾಲಬುಡದಲ್ಲಿ ಕೂತುಕೊಂಡು ಅವರು ನಡೆಸುವ ಮಾತುಕತೆಗಳ ಬಗ್ಗೆ ನಮಗೆ ಎಲ್ಲಿಲ್ಲದ ಕುತೂಹಲ. ಆದರೆ ನಾವೇನಾದರೂ ಅಪ್ಪಿತಪ್ಪಿ ಆ ಕಟ್ಟೆಯ ಮೆಟ್ಟಿಲು ಹತ್ತಿದರೂ ಸೀನಿಯರುಗಳ ಕೆಂಗಣ್ಣಿಗೆ ಗುರಿಯಾಗುವ ಭಯ. ನಾವುಗಳು ಸ್ವಲ್ಪ ನಿರ್ಭಿಡೆಯಿಂದ ನಡೆದುಕೊಂಡರೆ ನಮ್ಮ ವಿಭಾಗಗಳಲ್ಲಿ ಹೊಸಬರಿಗೆ ನೀಡಲಾಗುವ ‘ವೆಲ್ಕಂ’ ಸಮಯದಲ್ಲಿ ತೊಂದರೆಯಾಗಬಹುದು ಎಂದು ಎಲ್ಲರು ಮಾತನಾಡಿಕೊಳ್ಳುತ್ತಿದ್ದರು. ಅದಕ್ಕೆ ತಕ್ಕಂತೆ ಹಿರಿಯ ವಿದ್ಯಾರ್ಥಿಗಳೂ ಕೂಡ (ಮೊದಲ ಕೆಲವು ದಿನಗಳವರೆಗೆ..)ನಾವು ಕಂಡರೂ ಕಾಣದಂತೆ ವರ್ತಿಸುತ್ತಿದ್ದರು.

ಹೀಗಿರುವಾಗ ಒಂದು ದಿನ ಹೀಗಾಯಿತು. ನಾನು ಕವಿತೆ ಬರೆಯುತ್ತೇನೆ ಎಂದು ನಮ್ಮ ವಿಭಾಗದ ಒಬ್ಬ ಸೀನಿಯರ್ ವಿದ್ಯಾರ್ಥಿಗೆ ತಿಳಿದುಬಂತು. ಅವ ಹೌದೆ ಎಂದು ಕೇಳಿದ. ನಾನು ಹೂಂ ಎಂದೆ. ಆತನೂ ಚೆನ್ನಾಗಿ ಬರೆಯುತ್ತಾನೆಂದು ಹೆಸರಿದ್ದುದರಿಂದ ನಾನು ನನ್ನ ಬರಹದ ಕೆಲವು ಸ್ಯಾಂಪಲ್ಲುಗಳನ್ನು ಆತನಿಗೆ ತೋರಿಸುವುದೆಂದು ತೀಮರ್ಮಾನವಾಯಿತು. ಸಂಜೆ ನನ್ನ ಒಂದೆರಡು ಕವನಗಳನ್ನು ಆತನಿಗೆ ಲೈಬ್ರರಿಯಲ್ಲಿ ಕೊಟ್ಟೆ. ಆತ ಅವನ್ನು ಓದಿ, ‘ನಾನು ನಿನ್ನ ಕವನಗಳ ಬಗ್ಗೆ ಒಂದೆರಡು ಮಾತು ಹೇಳಬೇಕಿದೆ.’ ಎಂದ. ಸರಿ ಎಂದು ಮಾತನಾಡುತ್ತ ಲೈಬ್ರರಿಯಿಂದ ಹೊರಗೆ ಬಂದು ಕುಳಿತೆವು. ಕವಿತೆಗಳ ನಡುವೆ ಸಮಯ ಕಳೆದದ್ದೆ ತಿಳಿಯಲಿಲ್ಲ. ಚರ್ಚೆ ಮುಗಿಯಿತು. ನಾವು ಅಲ್ಲಿಯತನಕ ಕೂತದ್ದು ಕುವೆಂಪು ಕಟ್ಟೆಯ ಮೇಲೆ ಎಂದು ಆಗ ನನಗೆ ಅರಿವಾಯಿತು. ಸುಮಾರುಜನ ಹಿರಿಯ ಹಾಗು ನನ್ನ ಬ್ಯಾಚಿನ ವಿದ್ಯಾರ್ಥಿಗಳು ನನ್ನನ್ನು ವಿಚಿತ್ರವಾಗಿ ನೋಡುತ್ತ ಇದ್ದರು. ನಾನು ಒಳೊಳಗೆ ಸಣ್ಣ ಆತಂಕವಿದ್ದರೂ ಏನೂ ಆಗಿಲ್ಲವೆಂಬಂತೆ ಆರಾಮವಾಗಿ ಹಾಸ್ಟೆಲ್ಲಿಗೆ ಹೋದೆ.

ರಾತ್ರಿ ಊಟದ ವೇಳೆ ಸುಮಾರು ಗೆಳತಿಯರು ಬಂದು ನನ್ನ ಧೈರ್ಯವನ್ನು ಅಭಿನಂದಿಸಿದರು. ಕೆಲವರು ನಾನು ಅಲ್ಲಿ ಕೂತದ್ದು, ಅದೂ ಒಬ್ಬ ಸೀನಿಯರ್ ಹುಡುಗನೊಡನೆ – ಸರಿಯಲ್ಲವೆಂದೂ, ನನ್ನ ಇಮೇಜಿಗೆ ತೊಂದರೆಯಾಗಬಹುದೆಂದೂ ಮಾತನಾಡಿದರು. ನನ್ನದೊಂದು ‘ಇಮೇಜು’ ಕೂಡ ಇತ್ತು ಹಾಗೂ ಅದು ಸಂಜೆಯ ನಂತರ ಬದಲಾಯಿತು ಎಂದು ನನಗೆ ತಿಳಿಯಿತು. ಕೆಲವು ಹಿರಿಯ ಹುಡುಗಿಯರು ನನ್ನ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದು ನನ್ನ ಕಿವಿಗೆ ಬಿತ್ತು.

ನಾನು ಮಾರನೆಯ ದಿನ ಸಂಜೆ ಒಂದು ಕೆಲಸ ಮಾಡಿದೆ. ನನ್ನ ಶಿವಮೊಗ್ಗೆಯಿಂದ ಬರುವ ಕೆಲವು ಸ್ನೇಹಿತೆಯರೊಡನೆ ಬೇಕೆಂದೆ ಕಟ್ಟೆಯ ಮೇಲೆ ಕುಳಿತು ಅವರ ಬಸ್ಸು ಬರುವ ತನಕ ಹರಟೆ ಹೊಡೆದೆ. ಅವರು ನನ್ನ ತರಲೆಯನ್ನೆಲ್ಲ ಖುಶಿಯಾಗಿ ಆನಂದಿಸಿ ಹೋದರು. ಮಾರನೆಯ ದಿನ ನನ್ನ ಕ್ಲಾಸಿನ ಸ್ನೇಹಿತೆಯರನ್ನು ಎಳೆದುಕೊಂಡು ಹೋದೆ. ಬಹಳ ಗಾಬರಿಯಾದರೂ ಅವರಿಗೂ ಒಂದು ಬಗೆಯ ಥ್ರಿಲ್ಲೆನಿಸಿತು. ಆಮೇಲೆ ನಾವು ಯಾರ ಪರಿವೆಯೂ ಇಲ್ಲದೆ ಕುವೆಂಪುರವರ ಬಳಿ ಕೂರಲಾರಂಭಿಸಿದೆವು. ಮೆಲ್ಲಮೆಲ್ಲನೆ ಇತರ ಗೆಳೆಯರೂ ಶಾಮೀಲಾದರು. ಆಮೇಲೆ ನಮ್ಮ ಮಾಸ್ಟರ್ಸ್ ಕೋರ್ಸು ಮುಗಿಯುವವರೆಗೂ ನಮ್ಮ ಸಂಜೆಗಳ ಕವಿತಾವಾಚನಗಳಲ್ಲಿ, ಚರ್ಚೆ, ಗುದ್ದಾಟ, ಹರಟೆ, ಸಂಭ್ರಮಗಳಲ್ಲಿ ಕುವೆಂಪುರವರ ದಿವ್ಯಮೌನ ಇದ್ದೇ ಇರುತ್ತಿತ್ತು. ಏನೆ ಇರಲಿ, ನಾನು ಅಂದು ಮೊದಲ ಬಾರಿಗೆ ಆ ಕಟ್ಟೆಯ ಮೇಲೆ ಪರಿವೆಯಿಲ್ಲದೆ ಅಚಾನಕ್ಕಾಗಿ ಕೂತದ್ದು, ಆ ಮೂಲಕ ಒಂದು ಸಣ್ಣ ನಿಯಮವನ್ನು ಮುರಿದದ್ದು ನನ್ನ ‘ಇಮೇಜ’ನ್ನು ಬದಲಾಯಿಸಿದ್ದಂತೂ ಸತ್ಯ.

‍ಲೇಖಕರು G

17 October, 2012

2 Comments

  1. sumathi

    ಇ೦ತಹಾ ಕುವೆ೦ಪು ಮೂರ್ತಿ ಅಲ್ಲಿದೆಯೆ೦ದು ಮತ್ತು ಇಷ್ಟೆಲ್ಲಾ ಶ್ರದ್ಧಾ ಭಕ್ತಿಯ ಭಾವನೆಗಳು ಅದರೊಡಗೂಡಿವೆಯ೦ದೂ ಈಗ ಗೊತ್ತಾಯಿತು:) ಈ ಸಣ್ಣ ವಿಹಾರಕ್ಕೆ ವ೦ದನೆಗಳು, ಟೀನಾ ಶಶಿಕಾ೦ತ್!

  2. ರಮೇಶ್ ಹಿರೇಜಂಬೂರು

    ಕಾಲೇಜು ದಿನಗಳೇ ಹಾಗೆ, ಅದು ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ ಆ ಸಣ್ಣ ಸಣ್ಣ ಸಂಗತಿಗಳಲ್ಲೇ ಏನೋ ಖುಷಿ, ಥ್ರಿಲ್ ಕೊಡುತ್ತವೆ… “ಆ ದಿನಗಳಲ್ಲಿ” ಅವು ನಿಜಕ್ಕೂ ಸೂಪರ್. ಅದರಲ್ಲೂ ವಿಶ್ವ ವಿದ್ಯಾಲಯಗಳ ಆವರಣದ ನೆನಪುಗಳು ಮಾತ್ರ ಅಜರಾಮರ… ಇದು ಪದವಿ ಅಥವಾ ಸ್ನಾತಕೋತ್ತರ ಪದವಿ ಮುಗಿಸಿದ ಎಲ್ಲರಿಗೂ ಆಗುವ ಅನುಭವ. ಅಂತ ಅನುಭವಗಳನ್ನು ಕೆದಕಿ ಹೃದಯದಲ್ಲೊಂದು ಸಣ್ಣ ನಗೆ ಹುಟ್ಟಿಸಿದ್ದಕ್ಕೆ ಟೀನಾ ಅವರಿಗೆ ಧನ್ಯವಾದ… 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading