ಹೆಬ್ಬೆರಳು, ಬೆರಳ್ಗೆ ಕೊರಳ್, ಏಕಲವ್ಯ ಮತ್ತು ಶೂದ್ರ ತಪಸ್ವಿ ನಾಟಕಗಳು ಸಾಂಪ್ರದಾಯಿಕ ಶಿಕ್ಷಣಕ್ಕೆ ತೋರಿದ ಪ್ರತಿಕ್ರಿಯೆ
ಶಿವಕುಮಾರ ಕಾರೇಪುರ
ಪರಂಪರೆ ಮತ್ತು ವರ್ತಮಾನದ ಸಂಘರ್ಷ ನಿರಂತರವಾದುದು. ಭೂತಕಾಲವನ್ನು ನಿರಾಕರಿಸಿ ಬದುಕುವುದಕ್ಕೆ ಸಾಧ್ಯವಿಲ್ಲ. ಅಂತೆಯೇ ಅದನ್ನು ಮರುಪ್ರಶ್ನಿಸದೆ ಒಪ್ಪಿಕೊಳ್ಳುವುದು ಅಸಾಧ್ಯ. ಒಂದು ಕಾಲಕ್ಕೆ ‘ಮೌಲ್ಯ’ ಎನಿಸಿಕೊಂಡಿದ್ದ ಹಲವು ಸಂಗತಿಗಳು ಕಾಲ ಮುನ್ನಡೆದಂತೆ ಮನುಷ್ಯತ್ವದ ವಿರೋಧಿಯಂತೆನಿಸಿವೆ. ಇಂತಹ ಸಂದರ್ಭಗಳು ಎದುರಾದಗಲೆಲ್ಲ ಪರಂಪರೆಯನ್ನು ಪರೀಕ್ಷೆಗೆ ಒಳಪಡಿಸಿರುವ ಕೆಲಸ ನಡೆದುಕೊಂಡು ಬಂದಿದೆ. ಪರಂಪರೆಯಲ್ಲಿರುವ ಮನುಷ್ಯಪರ ಚಿಂತನೆಗಳನ್ನು ಪುನಃರೂಪಿಸಿ, ಜನ ವಿರೋಧಿ ನೀತಿಗಳನ್ನು ತಿರಸ್ಕರಿಸುವ ಕಾರ್ಯ ನಿರಂತರವಾಗಿ ನಡೆದಿದೆ.
ಪುರಾಣ ಕಥೆಗಳ ಆಶಯ ಮತ್ತು ಮೌಲ್ಯಗಳು ಕಾಲ ಬದಲಾದಂತೆಲ್ಲ ಹಲವು ಪ್ರಶ್ನೆಗಳಿಗೆ ಮುಖಾಮುಖಿಯಾಗಿವೆ. ಈ ರೀತಿಯ ಘರ್ಷಣೆ ಸಮುದಾಯದ ಜೀವಂತಿಕೆಯ ಪ್ರತೀಕ. ಕನ್ನಡ ಸಾಹಿತ್ಯ ಈ ಬಗೆಯ ಪ್ರಶ್ನೆಗಳಿಗೆ ಉತ್ತರಿಸಿರುವ ಹಲವು ಉದಾಹರಣೆಗಳನ್ನು ಗಮನಿಸಬಹುದು. ವರ್ತಮಾನದ ಹಲವು ಸಂದಿಗ್ಧಗಳಿಗೆ ಭೂತಕಾಲದ ಚಿಂತನೆಗಳ ಮೂಲಕವೆ ಉತ್ತರ ನೀಡುವ ಪ್ರಯತ್ನಗಳನ್ನು ಗುರುತಿಸಬಹುದು. ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳಲ್ಲಿನ ಕಥನಗಳ ಆಶಯಗಳನ್ನು ಪ್ರಸ್ತುತಕ್ಕೆ ಸಮೀಕರಿಸುವ ಪ್ರಯತ್ನಗಳು ನಡೆದಿವೆ. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯಗಳಿಗೆ ತಕ್ಕಂತೆ ಪುರಾತನ ಮೌಲ್ಯಗಳನ್ನು ಪುನರ್ಮೌಲ್ಯೀಕರಿಸುವ ಹಾಗೂ ಸಮಕಾಲೀನ ಪ್ರತಿಕ್ರಿಯೆಗಳನ್ನು ದಾಖಲಿಸುವ ಕೆಲಸಗಳು ನಡೆದಿವೆ. ಹೀಗೆ ಮಾಡುವಾಗ ನಮ್ಮ ಪರಂಪರೆಯಲ್ಲಿನ ತಪ್ಪುಗಳನ್ನು ಸರಿಪಡಿಸಲಾಗಿದೆ. ಈ ರೀತಿಯ ಚಿಂತನೆ ಆರೋಗ್ಯಕರ ಸಮಾಜ ಹಾಗೂ ಅಲ್ಲಿ ರೂಪುಗೊಳ್ಳುವ ಸಾಹಿತ್ಯಕ್ಕೆ ಅಗತ್ಯವಾದುದು. ಆಧುನಿಕ ಕನ್ನಡ ಸಾಹಿತ್ಯ ಈ ದೆಸೆಯಲ್ಲಿ ಪ್ರಯೋಗಶೀಲವಾದುದು.
ಜೀವಪರವಾದ ಚಿಂತನೆಯು ಎಷ್ಟೇ ಪುರಾತನವಾಗಿದ್ದರೂ, ನವೀನವಾಗಿದ್ದರೂ ಸ್ವೀಕರಿಸಲೇಬೇಕಾದುದು ಧರ್ಮ. ಅಂತೆಯೇ ಜೀವ ವಿರೋಧಿಯಾದ ಯಾವ ಸಂಗತಿಯಾದರೂ ಅದು ಈಗಾಗಲೇ ಎಷ್ಟೇ ಮನ್ನಣೆ ಗಳಿಸಿದ್ದರೂ ಅದನ್ನು ತಿದ್ದುವುದು ಸಮಾಜದ ಮತ್ತು ಸಾಹಿತ್ಯದ ಜವಾಬ್ದಾರಿ. ಅಂತೆಯೇ ಪ್ರಗತಿಮುಖಿಗಳಾದ ಕನ್ನಡದ ಹಲವು ಸಾಹಿತಿಗಳು ಎಲ್ಲ ಕಾಲದ ಪ್ರಭುತ್ವ ಮತ್ತು ಪುರೋಹಿತಶಾಹಿ ಮನೋಧರ್ಮಗಳ ಅಮಾನವೀಯ ತತ್ವಗಳಿಗೆ ಸಮಾನತೆ ಹಾಗೂ ಮಾನವತೆಯ ಆಶಯಗಳ ಮೂಲಕ ಉತ್ತರ ನೀಡುವುದನ್ನು ತಮ್ಮ ಸಾಹಿತ್ಯ ಕೃತಿಗಳ ಆಶಯವನ್ನಾಗಿಸಿಕೊಂಡಿದ್ದಾರೆ.
ಜಾತಿ ಮತ್ತು ವರ್ಗ ವ್ಯವಸ್ಥೆಗಳಲ್ಲಿ ಸಿಲುಕಿರುವ ಭಾರತದ ಸಮಾಜದ ಬಿಡುಗಡೆಗೆ ಇರುವ ಏಕೈಕ ಮಾರ್ಗವೆಂದರೆ ಶಿಕ್ಷಣ. ಆದರೆ ಇಂದು ‘ಶಿಕ್ಷಣ’ವನ್ನು ಪಡೆಯುವ ಹಕ್ಕು ಸಂಘರ್ಷಮಯವಾಗಿದೆ. ಅದು ವರ್ಗ, ವರ್ಣ, ಉಳ್ಳವರು, ಇಲ್ಲದವರು, ಬಲಿಷ್ಠರು, ದುರ್ಬಲರು – ಈ ಬಗೆಯ ತಾರತಮ್ಯಗಳಿಂದ ಜಟಿಲಗೊಂಡಿದೆ. ಇದು ಇವತ್ತಿನ ಪ್ರಶ್ನೆಯಲ್ಲ. ಪುರಾತನ ಕಾಲದಿಂದಲೂ ಈ ಸಮಸ್ಯೆ ಕಾಡುತ್ತಿದೆ. ಭಾರತೀಯ ಸಮಾಜದ ಹಲವು ಸುಧಾರಕರು ಇದನ್ನು ಪರಿಹರಿಸುವ ದಿಕ್ಕಿನಲ್ಲಿ ತೊಡಗಿದಂತೆ ಕನ್ನಡ ಸಾಹಿತ್ಯದಲ್ಲೂ ಈ ತೆರನಾದ ಸಂಗತಿ ಚಚರ್ಿತಗೊಂಡಿದೆ.
ಮಹಾಭಾರತದ ‘ಏಕಲವ್ಯ’ನ ಕತೆ ಜನಜನಿತವಾದುದು. ಈ ಕತೆಯಲ್ಲಿ ಎದುರಾಗುವ ಪ್ರಶ್ನೆ ಇವತ್ತಿಗೂ ಮುಖ್ಯ. ಹೊಸಗನ್ನಡ ಸಾಹಿತ್ಯದಲ್ಲಿ ಈ ಕತೆಯನ್ನು ಆಕರವನ್ನಾಗಿಸಿಕೊಂಡು ಹಲವು ನಾಟಕಕಾರರು ತಮ್ಮ ತಮ್ಮ ಕಾಲಧರ್ಮದ ಬಿಕ್ಕಟ್ಟುಗಳಿಗೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಗೋವಿಂದ ಪೈ ಅವರ ‘ಹೆಬ್ಬೆರಳು’, ಕುವೆಂಪು ಅವರ ‘ಬೆರಳ್ಗೆ ಕೊರಳ್’, ಸಿದ್ಧಲಿಂಗಯ್ಯ ಅವರ ‘ಏಕಲವ್ಯ’ ನಾಟಕಗಳಲ್ಲಿ ಚರ್ಚೆಯಾಗಿರುವ ಶಿಕ್ಷಣ ಚಿಂತನೆಗಳನ್ನು ಪರಾಮರ್ಶಿಸುವ ಪ್ರಯತ್ನವನ್ನು ಇದು.

ಮಹಾಭಾರತದ ‘ಏಕಲವ್ಯ’ನ ಕತೆಯನ್ನು ಈ ಮೂರು ನಾಟಕಗಳು ಆಕರವನ್ನಾಗಿಸಿಕೊಂಡಿದ್ದರೂ, ಇವುಗಳ ನಿರೂಪಣಾ ವಿಧಾನ, ಕಥನದ ಆಶಯ, ಪ್ರತಿಪಾದಿಸುವ ಮೌಲ್ಯಗಳ ಹಿನ್ನೆಲೆಯಲ್ಲಿ ಭಿನ್ನತೆಯನ್ನು ಹೊಂದಿವೆ. ಈ ವಿಚಾರಗಳು ನಾಟಕಕಾರರ ಮನೋಧರ್ಮ ಮತ್ತು ಕಾಲಧರ್ಮಗಳನ್ನು ಅವಲಂಭಿಸಿವೆ. ಈ ಹಿನ್ನೆಲೆಯಲ್ಲಿ ಈ ಮೂರು ನಾಟಕಗಳಲ್ಲಿನ ಶಿಕ್ಷಣ ಕುರಿತ ಚಿಂತನೆಗಳನ್ನು ಕ್ರೂಢೀಕರಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
ದ್ರೋಣಾಚಾರ್ಯರು ಏಕಲವ್ಯನಿಗೆ ಶಿಕ್ಷಣ ನೀಡಲು ನಿರಾಕರಿಸಲು ನೀಡುವ ಕಾರಣಗಳೇನು? ಆ ಸಂದರ್ಭದಲ್ಲಿ ದ್ರೋಣಾಚಾರ್ಯ ಹಾಗೂ ಅಜರ್ುನನ ಮನಃಸ್ಥಿತಿ ಹೇಗಿತ್ತು? ಏಕಲವ್ಯ ಬಿಲ್ವಿದ್ಯೆಯನ್ನು ಕಲಿತ ಬಗೆ, ಯಾವ ಮಾನದಂಡವನ್ನಾಧರಿಸಿ ದ್ರೋಣಚಾರ್ಯರು ಏಕಲವ್ಯನಲ್ಲಿ ಗುರುದಕ್ಷಿಣೆ ಕೇಳುತ್ತಾರೆ? ಹಾಗು ಅದರ ಪರಿಣಾಮಗಳೇನು? – ಈ ಸಂಗತಿಗಳು ಈ ನಾಟಕಗಳಲ್ಲಿ ವ್ಯಕ್ತಗೊಂಡಿರುವ ಬಗೆಯನ್ನು ಇಲ್ಲಿ ಅವಲೋಕಿಸಲಾಗಿದೆ.
ಪ್ರಭುತ್ವ ಮತ್ತು ಪುರೋಹಿತಶಾಹಿ ಮನೋಧರ್ಮಗಳು ಶಿಕ್ಷಣ ವ್ಯವಸ್ಥೆಯನ್ನು ಅನಾದಿ ಕಾಲದಿಂದಲೂ ನಿಯಂತ್ರಿಸುತ್ತಿವೆ. ಈ ನಾಟಕದಲ್ಲಿನ ದ್ರೋಣ, ಅಜರ್ುನನ ಪಾತ್ರಗಳ ಹಿಂದಿರುವ ಮನಃಸ್ಥಿತಿ ಇವತ್ತಿಗೂ ಬದಲಾಗದ ಸನ್ನಿವೇಶವಿದೆ. ಈ ಹಿನ್ನೆಲೆಯಲ್ಲಿ ಏಕಲವ್ಯನ ಕಥೆ ಆಧುನಿಕ ಎನಿಸಿಕೊಳ್ಳುತ್ತದೆ. ಮೂಲ ಕಥೆಯಲ್ಲಿ ವ್ಯಾಧನೆಂಬ ಕಾರಣದಿಂದಲೂ, ಉಳಿದ ಶಿಷ್ಯರಿಗೆ ಗಮನ ಕೊಡಬೇಕೆಂಬ ಉದ್ದೇಶದಿಂದಲೂ ದ್ರೋಣ ಏಕಲವ್ಯನನ್ನು ಶಿಷ್ಯನಾಗಿ ಸ್ವೀಕರಿಸಲಿಲ್ಲ.
ಕುವೆಂಪು ಅವರ ಬೆರಳ್ಗೆ ಕೊರಳ್ ನಾಟಕದಲ್ಲಿನ ದ್ರೋಣ, ಏಕಲವ್ಯ ಶೂದ್ರನೆಂದು ತಿಳಿದರೂ ತಿರಸ್ಕರಿಸದೆ ಅವನಿಗೆ ವಿದ್ಯೆ ಕಲಿಸಲು ಮುಂದಾಗುತ್ತಾನೆ. ಆದರೆ ಅರಸು ಮಕ್ಕಳ ಅಸೂಯೆ ಅಡ್ಡಬರುತ್ತದೆ. ಶೂದ್ರನೊಡನೆ ನಾವು ವಿದ್ಯೆ ಕಲಿಯುವುದಿಲ್ಲ ಎನ್ನುತ್ತಾರೆ ಅವರು. ಶೂದ್ರನಾದರೇನು, ಸಮರ್ಥನಾದ ಈತ ಕಲಿತ ಮೇಲೆ ನಿಮ್ಮ ಸೇವೆಗೆ ಸಲ್ಲುತ್ತಾನೆ ಎಂದು ಹೇಳುವ ದ್ರೋಣಾಚಾರ್ಯರ ಮಾತುಗಳಿಗೂ ಬೆಲೆ ಇಲ್ಲದಂತಾಗಿ ಏಕಲವ್ಯನನ್ನು ಹೊರಗಟ್ಟಿದಾಗ ಗುರು ಮರುಗುತ್ತಾನೆ.
ಏಕಲವ್ಯ, ಅಳಲದಿರ್
ಆಸೆಗೆಡದಿರ್. ನೀನೆಮ್ಮ ಮನೆಯೊಳಾಳಾಗಿರು
ಈ ಗರುಡಿಗೆನ್ನ ಸೇವೆಗೈತರುತೆ
ದೂರದಿಂ ಕಂಡು ಕಲಿ, ಕಲ್ವನಿತಂ
ಮತ್ತುಳಿದುದಂ ಮನೆಯೊಳ್ಗೆಯೆ ಕಲಿಯುವನಿತಂ
ಕಲಿಪೆನಶ್ವತ್ಥಾಮನೊಡನೆ – ಎಂದು ಸಮಾಧಾನ ಮಾಡುತ್ತಾನೆ.

ಗೋವಿಂದ ಪೈ ಅವರ ನಾಟಕದಲ್ಲಿ
ಬಿಲ್ವಿದ್ಯೆಯನ್ನು ಕಲಿಸಬೇಕಂತೆ. ಏನು ಉದ್ಧಟೆ. ಕಾಡಿನ ಹುಡುಗನಿಗೆ ವಿದ್ಯೆ ನಿಷಿದ್ಧ.
ಕ್ಷತ್ರಿಯರೊಡನೆ ಶಿಕ್ಷಣವೇ? ಕುರುವೃದ್ಧನಾದ ಭೀಷ್ಮನು ನನಗೇನನ್ನುವನು? ಆದ್ದರಿಂದ ನಾನು ಕಲಿಸಲಾರೆ. ಎನ್ನುವ ತೀಮರ್ಾನ ದ್ರೋಣನದು.
ಕುರು ಕುವರರು ಒಪ್ಪಿದರೆ ಕಲಿಸಲು ಅಡ್ಡಿ ಇಲ್ಲವೆ? ಎಂಬ ಪ್ರಶ್ನೆ ಎದುರಾದಾಗ, ವಿಚಾರಿಸುತ್ತೇನೆ ಎನ್ನುತ್ತಾನೆ. ಆ ಸಂದರ್ಭದಲ್ಲಿ ಧರ್ಮರಾಯ ಏಕಲವ್ಯನಿಗೆ ವಿದ್ಯೆ ಕಲಿಸಬಹುದು ಎಂದರೆ, ಕರ್ಣನು ಇದು ತಪ್ಪು ಎನ್ನುತ್ತಾನೆ. ದುರ್ಯೋಧನ ಕಲಿಸಬಾರದು ಎಂದರೆ ಅಜರ್ುನ ತಲೆಬಾಗಿ ನೆಲಗೀರುತ್ತ ನಿರುತ್ತರನಾಗಿ ತನ್ನ ವಿರೋಧವನ್ನು ವ್ಯಕ್ತಪಡಿಸುತ್ತಾನೆ.
ಏಕಲವ್ಯನ ಶ್ರದ್ಧೆ, ಕೋರಿಕೆಗೆ ಮನಸೋತ ದ್ರೋಣನು ಕೊನೆಗೆ ಬೇರೆಲ್ಲಿಯಾದರು ಕಲಿ ಎಂದು ಹೇಳುತ್ತಾನೆ. ಅಲ್ಲದೆ ನಿನ್ನ ಆಸೆ ಪೂರೈಸಲಿ, ದೇವನ ದಯೆಯಿರಲಿ. ಬಿಲ್ವಿದ್ಯೆಯಲ್ಲಿ ಜಾಣನಾಗು, ನಿನಗೆ ಯಶಸ್ಸು ಸಿಗಲಿ ಎಂದು ಆಶೀರ್ವದಿಸುತ್ತಾನೆ.
ಸಿದ್ಧಲಿಂಗಯ್ಯ ಅವರ ‘ಏಕಲವ್ಯ’ ನಾಟಕದಲ್ಲಿ ದ್ರೋಣಾಚಾರ್ಯರು ಕೀಳು ಜಾತಿಯವರಿಗೆ ವಿದ್ಯೆ ಕಲಿಸಲು ಶಾಸ್ತ್ರ ಅಡ್ಡವಿದೆ. ಅಲ್ಲದೆ ಏಕಲವ್ಯನ ಕನಸು ನನಸಾದರೆ ಲೋಕದ ದುರಂತಕ್ಕೆ ನಾಂದಿಯಾಗುತ್ತದೆ. ಆದ್ದರಿಂದ ಆತನನ್ನು ಶಿಷ್ಯನಾಗಿ ಸ್ವೀಕರಿಸಲು ನನಗೆ ಸಾಧ್ಯವಿಲ್ಲ ಎನ್ನುತ್ತಾರೆ.
ಹೀಗೆ ಜಾತಿಯ ಕಾರಣದಿಂದಾಗಿ ಏಕಲವ್ಯನನ್ನು ಕಲಿಸುವ ಕ್ರಿಯೆಯಿಂದ ಹೊರಗಿಡಲಾಗುತ್ತದೆ. ಕುವೆಂಪು ಅವರ ದ್ರೋಣಾಚಾರ್ಯರು ಈ ವಣರ್ಾಶ್ರಮವನ್ನು ಮೀರುವ ಪ್ರಯತ್ನ ಮಾಡಿದಂತೆ ಗೋಚರಿಸಿದರೂ ಅದರಲ್ಲಿ ಸಫಲವಾಗಿಲ್ಲ. ಒಂದೆಡೆ ಧರ್ಮ, ಶಾಸ್ತ್ರ, ಜಾತಿಯ ಕಾರಣಗಳು ಈ ರೀತಿಯ ಕ್ರಿಯೆಗಳಿಗೆ ಕಾರಣ ಎನಿಸುತ್ತವೆ. ಅದರ ಮರೆಯಲ್ಲಿಯೇ ಸಾಮ್ರಾಜ್ಯಶಾಹಿತ್ವ ಎಲ್ಲವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನ ನಡೆಸುತ್ತಿರುವುದು ಗೋಚರಿಸುತ್ತದೆ. ಅಜರ್ುನ ಪ್ರಭುತ್ವದ ಸಂಕೇತ. ದ್ರೋಣಾಚಾರ್ಯರು ಪ್ರಭುತ್ವದ ಋಣಭಾರದಲ್ಲಿ ಸಿಲುಕಿರುವ ಪುರೋಹಿತಶಾಹಿಯಂತೆ ಕಾಣಿಸುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ಈ ಬಗೆಯ ಸಾಮ್ರಾಜ್ಯಶಾಹಿ ಧೋರಣೆಯನ್ನು ಕಾಣಬಹುದಾಗಿದೆ.
ಈ ಕಾರಣಗಳಿಂದ ತಿರಸ್ಕೃತನಾದ ಏಕಲವ್ಯ, ತನ್ನ ಶ್ರದ್ಧೆ, ಗುರುಭಕ್ತಿ ಹಾಗೂ ಸತತ ಅಭ್ಯಾಸದಿಂದ ಬಿಲ್ವಿದ್ಯೆ ಕಲಿತು ಶಬ್ದವೇಧಿ ವಿದ್ಯೆಯಲ್ಲಿ ಪರಿಣತಿ ಹೊಂದುತ್ತಾನೆ. ಕಲಿತದ್ದೆಲ್ಲವು ಗುರುವಿನ ಆಶೀರ್ವಾದದಿಂದ ಎಂದುಕೊಳ್ಳುತ್ತಾನೆ.
ಈ ಗುರುಪ್ರತಿಮೆಯನೆ ದ್ರೋಣಂಗೆತ್ತು
ಮುಂಬರಿಸಿದೆನ್ ಬಿಲ್ಬಿಜ್ಜೆಯಭ್ಯಾಸಮಂ
ಅಬ್ಬೆ, ಸೋಜಿಗವನೇನೆಂಬೆ !
ಎಳ್ಚರ ಪೋಳ್ತು ನನಗರಿಯದಭ್ಯಾಸಮಂ
ಕನಸಿನೊಳ್ ಬಂದು ಬೋಧಿಸಿದನಾ ದಿವ್ಯಗುರು !
ಎಂತೆಂತಪ್ಪ ಬಿಜ್ಜೆಗಳೂ ಕೈಸಾದರ್ುವೆನಗೆ !
ಶಬ್ದವೇಧಿಯುಮದರೊಳೊಂದು!
ಹೀಗೆ ಗುರು ದ್ರೋಣಾಚಾರ್ಯರೆ ಕನಸಿನಲ್ಲಿ ಬಂದು ಕಲಿಸಿದ್ದು ಎಂದುಕೊಳ್ಳುತ್ತಾನೆ. ಗೋವಿಂದ ಪೈಯವರ ಹೆಬ್ಬೆರಳು ನಾಟಕದಲ್ಲಿ-
ದ್ರೋಣನ ಸಮಕ್ಷದಭ್ಯಾಸದಿಂ ಮೃಣ್ಮೂತರ್ಿ
ಯಿಂದ ಮಿಗೆ ಕಲಿತಿಹಂ ! ಸಂಧಾವಾದಾನ
ಮೇಣ್ ವಿಮೋಕ್ಷ ಕ್ರಮದಿಂ ನುರಿತಿಹಂ ! ಬಿಲುವಿದ್ಯೆ
ಯೊಳವೆಲ್ಲವರಿತಿಹಂ !
ದ್ರೋಣಾಚಾರ್ಯನ ಮಣ್ಣಿನ ಮೂರ್ತಿಯ ಸ್ಫೂರ್ತಿಯಿಂದಲೇ ಬಿಲ್ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದಾನೆ.
ಸಿದ್ಧಲಿಂಗಯ್ಯನವರ ಏಕಲವ್ಯ ನಾಟಕದಲ್ಲಿ ಏಕಲವ್ಯ ಗುರು ದ್ರೋಣನಿಗೆ ವಿದ್ಯಾವಿಹೀನನಾಗಿದ್ದ ನನ್ನನ್ನು ಅಂದು ತಾವು ಸ್ವೀಕರಿಸಲಿಲ್ಲ. ತಮ್ಮ ಕೃಪೆಯಿಂದ ಇಂದು ವಿದ್ಯಾಸಂಪನ್ನನಾಗಿದ್ದೇನೆ ಎಂದು ಹೇಳುತ್ತಾನೆ. ಹೀಗೆ ಏಕಲವ್ಯ ಗುರು ಹಾಗೂ ಕಲಿಸುವ ವ್ಯವಸ್ಥೆಯಿಂದ ತಿರಸ್ಕೃತನಾದರೂ ಕಲಿಯುವ ಬಯಕೆ ಹೊತ್ತ ಶ್ರದ್ಧೆ ಮತ್ತು ಸತತ ಅಭ್ಯಾಸದಿಂದ ಗುರುವನ್ನೆ ಮೀರಿಸುವಂತೆ ಬಿಲ್ವಿದ್ಯಯಲ್ಲಿ ಪರಿಣತನಾಗುತ್ತಾನೆ. ಈ ನಾಟಕಗಳಲ್ಲಿನ ಮತ್ತೊಂದು ಬಹು ಮುಖ್ಯ ಸಂಗತಿಯೆಂದರೆ ದ್ರೋಣಾಚಾರ್ಯ ಕೌರವರು ಮತ್ತು ಪಾಂಡವರಿಗೆ ಯುದ್ಧಕ್ಕಾಗಿ ವಿದ್ಯೆ ಕಲಿಸುತ್ತಾನೆ. ಆದರೆ ಏಕಲವ್ಯನ ಕಲಿಕೆಯ ಹಿಂದಿನ ಉದ್ದೇಶ ಜೀವಪರವಾದುದು. ತನ್ನ ಕಾಡನ್ನು ರಕ್ಷಿಸಿಕೊಳ್ಳಲು ತಾನು ಬಿಲ್ವಿದ್ಯೆಯನ್ನು ಕಲಿಯಬೇಕೆಂದು ಬಯಸುತ್ತಾನೆ.
ಶೂದ್ರನೊಬ್ಬ ತನಗಿಂತಲೂ ಮಿಗಿಲಾಗಿ ವಿದ್ಯೆ ಕಲಿತಿರುವುದನ್ನು ಕಂಡು ಕರುಬುವ ಅಜರ್ುನನಿಗಾಗಿ, ತಾನು ಈ ಹಿಂದೆ ಅಜರ್ುನನಿಗೆ ನೀಡಿದ ವಚನಕ್ಕಾಗಿ ದ್ರೋಣಾಚಾರ್ಯ ಏಕಲವ್ಯನಿಂದ ‘ಹೆಬ್ಬೆರಳ’ನ್ನು ಗುರುದಕ್ಷಿಣೆಯಾಗಿ ಕೋರುತ್ತಾನೆ. ಗುರುಭಕ್ತಿಗಾಗಿ ಏಕಲವ್ಯ ತನ್ನ ಹೆಬ್ಬೆರಳನ್ನು ಕಡಿದುಕೊಡುತ್ತಾನೆ. ಇದು ಬಲಿಷ್ಠ ವ್ಯವಸ್ಥೆಯೊಂದು ಸಂಚು ರೂಪಿಸಿ ದುರ್ಬಲವರ್ಗವನ್ನು ಸಂಪೂರ್ಣವಾಗಿ ನಾಶಮಾಡಿಬಿಡುವುದರ ಸಂಕೇತ. ಏಕಲವ್ಯನ ಕಲಿಕೆಯಲ್ಲಿನ ತನ್ನ ಪಾತ್ರದ ಬಗೆಗೂ ಚಿಂತಿಸದ ದ್ರೋಣಾಚಾರ್ಯನಿಗೆ ಗುರುದಕ್ಷಿಣೆ ಕೇಳುವ ಹಕ್ಕು ಇಲ್ಲ. ಆದರೂ ಪ್ರಭುತ್ವದ ದಬ್ಬಾಳಿಕೆಗೆ ಪೋಷಕವಾಗುತ್ತಾನೆ. ಅಜರ್ುನನ ಮನಃಸ್ಥಿತಿಯೂ ಮಾನವತೆಗೆ ವಿರುದ್ಧವಾದುದು.
ಕುವೆಂಪು ಅವರ ನಾಟಕದಲ್ಲಿ ಏಕಲವ್ಯನ ಬೆರಳನ್ನು ಪಡೆದುದಕ್ಕೆ ಪ್ರತಿಯಾಗಿ ದ್ರೋಣರ ಕೊರಳಿಗೆ ಸಂಚಕಾರ ಒದಗುವ ಶಾಪವಿದ್ದರೆ, ಗೋವಿಂದ ಪೈ ಅವರ ಹೆಬ್ಬೆರಳು ನಾಟಕದಲ್ಲಿ ಕುರುವಂಶವೆ ನಾಶವಾಗುವ ಮುನ್ಸೂಚನೆ ಇದೆ. ಸಿದ್ಧಲಿಂಗಯ್ಯ ಅವರ ನಾಟಕದಲ್ಲಿ ದ್ರೋಣರಿಗೆ ‘ಅವನು ಗುರುವಲ್ಲ, ಕೊಲೆಗಡುಕ’ ಎಂಬ ಅಪವಾದ ನಿಲ್ಲುತ್ತದೆ. ಕುವೆಂಪು ಅವರು ರಾಮಾಯಣದ ಶಂಬೂಕನ ಕತೆಯನ್ನು ಆಧರಿಸಿ ರಚಿಸಿರುವ ‘ಶೂದ್ರತಪಸಿ’್ವ ನಾಟಕದಲ್ಲಿ ತಪಸ್ಸು ಮಾಡುವ ಅಂದರೆ ವಿದ್ಯೆಯನ್ನು ಕಲಿಯುವ ಹಕ್ಕಿನ ಬಗ್ಗೆ ಚಚರ್ಿಸುತ್ತಾರೆ. ಶೂದ್ರನೊಬ್ಬ ತಪಸ್ಸು ಮಾಡುವುದು ವಣರ್ಾಶ್ರಮ ಧರ್ಮದ ಉಲ್ಲಂಘನೆಯಾದಂತೆ ಎನ್ನುವ ವೈದಿಕ ಧರ್ಮದ ನಂಬಿಕೆಯನ್ನು ಈ ನಾಟಕ ಪ್ರಶ್ನಿಸುತ್ತದೆ.
ಅಲ್ತಲ್ತು, ರಾಮಚಂದ್ರ
ಶೂದ್ರನ್ ತಪಂಗೆಯ್ವೊಂದು ಅಧರ್ಮಕ್ಕೆ
ವರ್ಣಾಶ್ರಮ ಧರ್ಮದುಲ್ಲಂಘನೆಯ ಪಾಪಕ್ಕೆ
ನಿನ್ನ ಬಾಲಪ್ರಜೆಯೊರ್ವನ್ ಬಲಿಯಾದನ್
– ಎನ್ನುವ ಬ್ರಾಹ್ಮಣನ ಮಾತುಗಳೇ ಅಧರ್ಮೀಯ ಮತ್ತು ವಣರ್ಾಶ್ರಮದಲ್ಲಿನ ಅಮಾನವೀಯತೆಗೆ ಕನ್ನಡಿ. ಕುವೆಂಪು ಅವರ ನಾಟಕದ ರಾಮ ಬ್ರಾಹ್ಮಣನಿಗೆ ಆತನ ತಪ್ಪು ತಿಳವಳಿಕೆಯ ಬಗೆಗೆ ಅರಿವು ಮೂಡಿಸುತ್ತಾನೆ. ಆ ಮೂಲಕ ವೈದಿಕ ಧರ್ಮದಲ್ಲಿನ ಮೌಢ್ಯಗಳಿಗೆ ಉತ್ತರ ನೀಡಲಾಗಿದೆ.
ಏಕಲವ್ಯ ಮತ್ತು ಶಂಭೂಕ – ಇವರ ದುರಂತ ಕಥನಗಳು ಸಾಂಪ್ರದಾಯಿಕ ಶಿಕ್ಷಣದ ಅಮಾನವೀಯ ಧೋರಣೆಗಳನ್ನು ಪ್ರಕಟಿಸುಂಥವು. ಶಿಕ್ಷಣವನ್ನು ಪಡೆದಿದ್ದರಿಂದ ಸಾಮ್ರಾಜ್ಯಶಾಹಿ ಕ್ರೌರ್ಯಕ್ಕೆ ಸಿಕ್ಕಿ ತಮ್ಮ ಅಸ್ಥಿತ್ವವನ್ನ ಕಳಕೊಂಡ ಅಸಂಖ್ಯ ಕೆಳಸ್ತರದವರನ್ನು ಈ ಪಾತ್ರಗಳು ಪ್ರತಿನಿಧಿಸುತ್ತವೆ
ಪುರಾಣಗಳಲ್ಲಿ ಏಕಲವ್ಯ, ಶಂಬೂಕರ ಕತೆಗಳನ್ನು ರೂಪಿಸಿರುವ ಮನೋಧರ್ಮದ ಬಗೆಗೆ ಚಿಂತಿಸಿರುವ ಕುವೆಂಪು, ಗೋವಿಂದ ಪೈ, ಸಿದ್ಧಲಿಂಗಯ್ಯ ಅವರು ತಮ್ಮ ಕಾಲದ ಚಿಂತನೆಗಳೊಂದಿಗೆ ಮರುಸಂಧಾನವನ್ನು ಏರ್ಪಡಿಸಿದ್ದಾರೆ. ಸಿದ್ಧಲಿಂಗಯ್ಯ ಅವರ ನಾಟಕದಲ್ಲಿ ಏಕಲವ್ಯ ಬಲಗೈಯ ಬೆರಳನ್ನು ಕಳೆದುಕೊಂಡರೂ ಎಡಗೈಯ ಹೆಬ್ಬೆರಳಿನಿಂದ ಬಿಲ್ವಿದ್ಯೆ ಮುಂದುವರೆಸುವುದು ತನ್ನ ವಿರುದ್ಧ ನಿಂತ ವ್ಯವಸ್ಥೆಗೆ ತೋರಿದ ಪ್ರತಿಭಟನೆಯಾಗಿದೆ. ಹೀಗಾಗಿ ಏಕಲವ್ಯ, ಶಂಬೂಕರ ಕತೆಗಳು ಪುರಾಣದವು ಎನಿಸದೆ ಇವತ್ತಿಗೂ ನಮ್ಮ ನಡುವಿನ ಕತೆಗಳು ಎನಿಸುತ್ತವೆ.






0 Comments