ಕುವೆಂಪು ಅವರ 'ಮಲೆಗಳಲ್ಲಿ ಮದುಮಗಳು' ಕಾದಂಬರಿ ಓದಿದ್ದರೆ..

ಆಕೃತಿ ಗುರುಪ್ರಸಾದ್ 
ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿ ಓದಿದ್ದರೆ: ಒಕ್ಕಲಿಗ ಸಮುದಾಯದ ಸಣ್ಣತನಗಳನ್ನು, ನೀಚ ನಡತೆಗಳನ್ನು, ದೌರ್ಜನ್ಯಗಳನ್ನು ಅಷ್ಟು ಸಶಕ್ತವಾಗಿ ಮನಗಾಣಿಸುವ ಮತ್ತೊಂದು ಕಾದಂಬರಿ ಇರಲಾರದು ಅನ್ನಿಸದೆ ಇರದು. ಸಾಮಾನ್ಯವಾಗಿ ಶೈಕ್ಷಣಿಕ ಮತ್ತು ಬೌದ್ಧಿಕ ಕ್ಷೇತ್ರಗಳಲ್ಲಿ ಅಂದಿನ ದಿನಕ್ಕೆ ಯಜಮಾನಿಕೆ ಸಾಧಿಸಿದ್ದ ಬ್ರಾಹ್ಮಣ ಸಮುದಾಯದಿಂದ ಸ್ವತಹ ಅವಮಾನ ಎದುರಿಸಿದ, ಹಲವು ಸಮಯಗಳಲ್ಲಿ ಹಿನ್ನಡೆ ಅನುಭವಿಸಿದ ಕುವೆಂಪು ಸ್ವಸಮುದಾಯದ ಕಟುವಿಮರ್ಶೆಗೆ ಯಾಕೆ ಒಡ್ಡಿಕೊಂಡರು ಎಂದು ಪ್ರಶ್ನಿಸಿಕೊಂಡರೆ, ಇವತ್ತು ಸಮಾಜದಲ್ಲಿ ಒಡಕು ಉಂಟುಮಾಡಲು ಶ್ರಮಿಸುತ್ತಿರುವ ಕೆಲವು ಜಾತೀವಾದಿ ಮನಸ್ಸುಗಳು ಕುವೆಂಪು ಅವರನ್ನು ಬ್ರಾಹ್ಮಣ ವಿರೋಧಿ ಅಂತ ಚಿತ್ರಿಸುತ್ತಿರುವುದರ ಹುನ್ನಾರ ತಿಳಿಯದೆ ಇರದು.
ಹಿಂದೆ ಅ ನ ಕೃಷ್ಣರಾಯರು ‘ಕನ್ನಡ ಕುಲರಸಿಕರು’ ಎಂಬ ಪುಸ್ತಕದಲಲ್ಲಿ ಕನ್ನಡ ಬೌದ್ಧಿಕ ಲೋಕದ ಹಲವರ ಪರಿಚಯಾತ್ಮಕ ವ್ಯಕ್ತಿಚಿತ್ರಗಳನ್ನು ಕಟ್ಟಿಕೊಟ್ಟಿದ್ದಾರೆ. ಅಲ್ಲಿ ಕುವೆಂಪು ಬಗ್ಗೆ ಬರೆಯುತ್ತ, ಕುವೆಂಪು ‘ಶೂದ್ರ ತಪಸ್ವಿ’ ಬರೆದ ನಂತರ ಅವರನ್ನು ಬ್ರಾಹ್ಮಣದ್ವೇಷಿ ಎಂಬ ಚಿತ್ರಣ ಕಟ್ಟಿಕೊಡಲಾಯಿತು. ಹಾಗೆ ನೋಡುತ್ತಾ ಹೋದರೆ, ಅವರ ಕಾನೂರು ಸುಬ್ಬಮ್ಮ ಹೆಗ್ಗಡತಿ ಓದಿದರೆ ಅವರನ್ನು ಒಕ್ಕಲಿಗ ವಿರೋಧಿ ಎಂದು ತಿಳಿಯಬೇಕಾದೀತು ಎಂದು, ಇಂತಹ ಕ್ಷುಲ್ಲಕ ಆರೋಪಗಳು ವಿಶ್ವಸಾಹಿತಿಗೆ ಸಲ್ಲದವು ಎಂಬ ರೀತಿಯಲ್ಲಿ ಬರೆಯುತ್ತಾರೆ. (ನೆನಪಿನಿಂದ ಬರೆದಿದ್ದೇನೆ)

ಹಿಂದೆ ಕುವೆಂಪು ಅವರ ಎಲ್ಲ ಪುಸ್ತಕಗಳನ್ನು ಪ್ರಕಟ ಮಾಡುತ್ತಿದ್ದುದು ‘ಕಾವ್ಯಾಲಯ’ದ ಕೂಡಲಿ ಚಿದಂಬರಂ ಅವರು. ನೆನ್ನೆ ಮೊನ್ನೆ ಸಾಹಿತ್ಯ ಲೋಕಕ್ಕೆ ಕಣ್ಣು ತೆರೆದುಕೊಂಡ ಜಾತೀಯ ಮನಸ್ಸುಗಳು ಕುವೆಂಪು ಅವರನ್ನು ಓದುವುದಕ್ಕೆ ಮುಂಚೆ ಕೂಡಲಿ ಚಿದಂಬರಂ ಅಂತವರು, ಅನಕೃ ಅಂತವರು (ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು) ಕುವೆಂಪು ಪುರೋಹಿತಶಾಹಿಗಳ ವಿರುದ್ಧ ಬರೆದ ಪದ್ಯಗಳನ್ನು, ಲೇಖನಗಳನ್ನು ಮತ್ತು ಕಾದಂಬರಿಗಳು ಓದಿದವರೇ. ಅಲ್ಲದೆ ಕುವೆಂಪು ಅವರ ಗುರುಗಳು ಅವರನ್ನು ಪ್ರೋತ್ಸಾಹಿಸಿದವರೇ. ಆದುದರಿಂದ ಕುವೆಂಪು ಅವರು ಸೃಷ್ಟಿಸಿದ ಈ ಪುರೋಹಿತಶಾಹಿ ವಿರೋಧಿ ಸಾಹಿತ್ಯದ ನೆಲೆ ಎಲ್ಲಿನದು ಎಂಬುದು ಅವರಿಗೆ ಚೆನ್ನಾಗಿಯೇ ತಿಳಿದಿತ್ತು. ಅವರಿಗೂ ತಮ್ಮ ಸಮುದಾಯದ ಸ್ವವಿಮರ್ಶೆಗೆ, ಕುವೆಂಪು ಅವರ ಬರಹಗಳು ಸಹಕಾರಿಯಾಗಿರಬೇಕು. ಶೂದ್ರತಪಸ್ವಿ ನಾಟಕದ ತರುವಾಯ ಮಾಸ್ತಿ ಮತ್ತು ಕುವೆಂಪು ನಡುವೆ ಆದ ಘರ್ಷಣೆ ಕೂಡ, ಒಟ್ಟಾರೆಯಾಗಿ ವಿವೇಕಕ್ಕೆ ತೆರೆದುಕೊಳ್ಳಲು ಮನಸ್ಸಿದ್ದ ಬ್ರಾಹ್ಮಣ ಸಮುದಾಯಕ್ಕೆ ಪುರಾಣಗಳನ್ನು ಒಡೆದು ಮರುಕಟ್ಟುವ ಅವಶ್ಯಕತೆ ಬಗ್ಗೆ ತಿಳುವಳಿಕೆ ಉಂಟಾಗಿ, ಮನವರಿಕೆಯಾಗಿ ಬಗೆಹರಿದಿರಬೇಕು ಎಂಬುದು ನನ್ನ ಅಚಲ ನಂಬಿಕೆ.
ಒಕ್ಕಲಿಗ ಸಮುದಾಯಕ್ಕೆ ಕುವೆಂಪು ಅವರು ಕೇವಲ ಜಾತಿಯ ಐಕಾನ್ ಆಗದೆ, ತಾವೇ ಅವಮಾನಗಳನ್ನು ಎದುರಿಸಿದ್ದರೂ ತಮ್ಮ ಸಮುದಾಯದ ದೌರ್ಜನ್ಯದ ಬಗ್ಗೆ ವಿಮರ್ಶೆ ಮಾಡಿಕೊಂಡ ಮಹಾನ್ ಮಾನವತಾವದಿಯಾಗಿ ಪ್ರಮುಖವಾಗಬೇಕು. ಬ್ರಾಹ್ಮಣ ಸಮುದಾಯಕ್ಕೆ, ದಾರಿ ಕಾಣದೆ ಪುರಾಣದ ಸಂಕೋಲೆಯಲ್ಲಿ ಬಂಧಿತರಾಗಿ ನರಳುವಾಗ ತಿಳುವಳಿಕೆಯ- ಬಿಡುಗಡೆಯ ದಾರಿಯಾಗಿ ಕುವೆಂಪು ಅವರ ಎಚ್ಚರ ಪ್ರಮುಖವಾಗಬೇಕು.
ಆದುದರಿಂದ ತುಚ್ಚ ಮನಸ್ಸಿನ ಕೆಲವು ರೋಗಿಷ್ಟ ಜನರು ಯುವಜನರನ್ನು ದಾರಿತಪ್ಪಿಸುವ ಕೆಲಸ ಮಾಡುವಾಗ, ಯುವಜನತೆ ಎಚ್ಚೆತ್ತುಗೊಳ್ಳಬೇಕು. ನಮ್ಮ ತಿಳುವಳಿಕೆಯ ಸೋರ್ಸ್ ಗಳು ಆರೋಗ್ಯಕರವಾದವು ಎಂದು ದೃಢಪಡಿಸಿಕೊಂಡು, ಕನ್ನಡ ನಾಡನ್ನು ಕಟ್ಟಲು ಶ್ರಮಿಸಿರುವ ಜಾಗೃತ ಪ್ರಜ್ಞೆಗಳ ಬಗ್ಗೆ ಹೆಚ್ಚೆಚ್ಚು ತಿಳಿದುಕೊಂಡು, ವಿಶ್ವಮಾನವರಾಗಬೇಕು.
(ಬಹಳಷ್ಟು ಪ್ರಾಥಮಿಕ ಮಾಹಿತಿಗಳೇ ಆದರೂ, ನಾಗರಿಕ ಸಮಾಜ ಸತ್ತ ಸ್ಥಿತಿಯಲ್ಲಿ ಇರುವಾಗ ಇವುಗಳನ್ನು ಮತ್ತೆ ಮತ್ತೆ ಪುನರುಚ್ಚರಿಸುವುದು ಮುಖ್ಯ ಅನಿಸುತ್ತಿದೆ)

‍ಲೇಖಕರು avadhi

December 7, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: