ಕುಪ್ಪಳ್ಳಿಯಲ್ಲಿ ‘ರಾಮಾಯಣ ದರ್ಶನಂ’

ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿಯ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳಿ ಮತ್ತು ಅವಿರತ ಪ್ರತಿಷ್ಠಾನ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಸೆ ೨೨-೨೩ ರಂದು ಕುಪ್ಪಳಿಯ ಹೇಮಾಂಗಣದಲ್ಲಿ “ಶ್ರೀ ರಾಮಾಯಣದ ದರ್ಶನಂ” ಕಾವ್ಯದ ವಾಚನ – ವ್ಯಾಖ್ಯಾನ – ಉಪನ್ಯಾಸ ಗಳು ನಡೆದವು. ರಾಜ್ಯದ ವಿವಿಧ ಸ್ಥಳಗಳಿಂದ ಬಂದಿದ್ದ ೭೦ ಕ್ಕೂ ಹೆಚ್ಚು ಶಿಬಿರಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.

ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯವನ್ನು  ಹತ್ತು ಹಲವು ದಿಕ್ಕುಗಳಿಂದ, ಕಲಿಯುವ, ತಿಳಿಯುವ, ಆನಂದಿಸುವ ಬಗೆಯನ್ನು ಸಂಗೀತದ, ಗಮಕದ, ನೃತ್ಯ ಪ್ರಾತ್ಯಕ್ಷಿಕೆಯ, ವ್ಯಾಖ್ಯಾನದ, ಉಪನ್ಯಾಸದ, ವಿಶಿಷ್ಟ ಓದಿನ ಹಲವು ದಾರಿಗಳ ಪ್ರತಿಭಾವಂತರ ಮೂಲಕ ಶೋಧಿಸಲಾಯಿತು. ಹಿರಿಯ ಗಮಕಿಗಳಾದ ಶ್ರೀಮತಿ ಗಂಗಮ್ಮ ಕೇಶವಮೂರ್ತಿ, ಶ್ರೀ ಚಂದ್ರಶೇಖರ ಕೆದಿಲಾಯ, ಶ್ರೀ ಗಣಪತಿ ಪದ್ಯಾಣ ಹಿರಿಯ ಸಾಹಿತಿ, ಚಿಂತಕರಾದ ಶ್ರೀ ಲಕ್ಷ್ಮೀಶ ತೋಳ್ಪಾಡಿ, ಡಾ. ಎಚ್ ಎಸ್ ವೆಂಕಟೇಶ ಮೂರ್ತಿ, ಡಾ. ಎಚ್ ಎಸ್ ರಾಘವೇಂದ್ರ ರಾವ್, ಡಾ. ಕೆ ವೈ,ನಾರಾಯಣ ಸ್ವಾಮಿ, ಡಾ ವಿನಯಾ ಒಕ್ಕುಂದ,  ನೃತ್ಯ ಕಲಾವಿದೆ ಮತ್ತು ಮನೋವೈದ್ಯೆ ಡಾ. ಕೆ ಎಸ್ ಪವಿತ್ರ ಹಾಗೂ ರಂಗಕರ್ಮಿ ಎಂ. ಗಣೇಶ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಶ್ರೀ ತೋಳ್ಪಾಡಿಯವರು ಶ್ರೀ ವಾಲ್ಮೀಕಿ ಮತ್ತು ಶ್ರೀ ಕುವೆಂಪು “ಕಾಡಿನ ಕವಿಗಳು” ಎಂದು ಬಣ್ಣಿಸಿ ಇಬ್ಬರು ಶ್ರೇಷ್ಠ ಕವಿಗಳ ಕಾವ್ಯದ ಪ್ರೇರಣೆ, ಸೋಪ ಜ್ಞತೆ ಮತ್ತು ಸೃಷ್ಟಿಶೀಲತೆ ಕುರಿತು ತಮ್ಮ ಉಪನ್ಯಾಸದಲ್ಲಿ ಮಾತನಾಡಿದರು.

ಡಾ. ಎಚ್ಚೆಸ್ವಿ ರಾಮಾಯಣದ ಪುನರ್ಭವ ಎಂಬ ಗೋಷ್ಠಿಯಲ್ಲಿ ಮಾತನಾಡುತ್ತ “ಕುವೆಂಪು ಹುಟ್ಟಿ, ಆಡಿ, ಬೆಳೆದು ಓಡಾಡಿ ಮೇರು ಕವಿಯಾಗುವಲ್ಲಿ ಪ್ರಜ್ಞೆ ಮೂಡಿಸಿದ ಅವರ ಹುಟ್ಟೂರಿಗೆ ಬಂದು ಅವರ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಿನ ಗೌರವ, ಪ್ರಶಸ್ತಿ ಇಲ್ಲ” ಎಂದರು

ಡಾ. ಕೆ ವೈ ನಾರಾಯಣ ಸ್ವಾಮಿ ಮಾತನಾಡುತ್ತ ಕಳೆದ ಐವತ್ತು ವರ್ಷಗಳಲ್ಲಿ ಶ್ರೀ ರಾಮಾಯಣ ದರ್ಶನಂ ಕಾವ್ಯಕ್ಕೆ ಪ್ರಶಸ್ತಿ, ಗೌರವದ ನ್ಯಾಯ ಸಿಕ್ಕಿದ್ದರೂ ಸಾಂಸ್ಕೃತಿಕವಾಗಿ ನ್ಯಾಯ ದೊರೆತಿಲ್ಲ ಎಂಬುದನ್ನು ಒಪ್ಪಿಕೊಳ್ಳದಿದ್ದರೆ ಈಗಲೂ ನಾವು ಪ್ರಾಯಶ್ಚಿತ್ತಕ್ಕೆ  ಸಿದ್ಧರಾಗಿಲ್ಲವೆಂದಾಗುತ್ತದೆ. . ಇಂದು “ನುಡಿ ಮೊಳೆಯದ ಶಿಶುವಿನಂದದ ಮನಸ್ಸಿನಲ್ಲಿ” ಈ ಕಾವ್ಯವನ್ನು ಪೂರ್ವಾಗ್ರಹಗಳಿಂದ ಮುಕ್ತಿ ಪಡೆದು ಓದನ್ನು ಆರಂಭಿಸುವ ಪ್ರಯತ್ನಗಳಾಗಬೇಕಿದೆ  ಎಂದರು.

ಶ್ರೀಮತಿ ಡಾ. ವಿನಯಾ ಒಕ್ಕುಂದ ಈ ಶಿಬಿರದ ಸಲುವಾಗಿ ಮಾಡಿದ ಈ ಹೊಸ ಓದು ಹಳೆಯ ಓದಿನ ಅಹಂಕಾರಗಳನ್ನು ನಿವಾರಿಸಿದೆ. ಕುವೆಂಪು ಅವರು ಶ್ರೀ ರಾಮಾಯಾಣ ದರ್ಶನಂ ನಲ್ಲಿ ಪ್ರಪಂಚವನ್ನು ಸಲಹುವ, ತನ್ನ ಸುತ್ತಲಿರುವ ಲೋಕ ಎಲ್ಲ ಅಸಮತೋಲನಗಳನ್ನೂ ಹೊಂದಿರುವಾಗಲೂ ಅದನ್ನು “ಧರಿಸುವ ಧೀ ಶಕ್ತಿಯಾದ”  ಹೆಣ್ಣಿನ “ತಾಯ್ತನ”ವನ್ನು ಸೀತೆ, ತಾರೆ, ಮಂಡೋದರಿ, ತ್ರಿಜಟೆ ಮುಂತಾದ ಎಲ್ಲ ಪಾತ್ರಗಳ ಮೂಲಕ ಹೆಣ್ಣಿನ ಶಕ್ತಿಯ ಕೇಂದ್ರವಾಗಿ ಶೋಧಿಸುತ್ತಾರೆ. ಸ್ತ್ರೀ ಮೀಮಾಂಸೆ ಮತ್ತು ಸ್ತ್ರೀ ವಾದಗಳು ಐದು ದಶಕಗಳ ಹಾದಿಯ ನಂತರ ತಲುಪಿರುವ ಹಾದಿಯ ಈ ಬಿಂದುವಿನಲ್ಲಿ ಕುವೆಂಪು ಆಗಲೇ ಐವತ್ತು ವರ್ಷಗಳ ಹಿಂದೆಯೇ ಇದ್ದಾರೆ – ಹೆಣ್ತನದ ಪ್ರತಿರೋಧದ ಸಶಕ್ತ ಮಾದರಿಗಳೊಂದಿಗೆ ಎಂದರು.

ಡಾ. ಎಚ್ ಎಸ್ ರಾಘವೇಂದ್ರ ರಾವ್  ಅವರು ಶ್ರೀ ರಾಮಾಯಣ ದರ್ಶನಂ ನಮ್ಮ ಕಾಲದಲ್ಲಿ ಬಹಳ ಪ್ರಸಿದ್ಧವಾದ ಆದರೆ ಈ ಕಳೆದ ಕೆಲ ದಶಕದ ಸಾಂಸ್ಕೃತಿಕ ರಾಜಕಾರಣದ ಕಾರಣಗಳಿಂದಾಗಿ ಓದುಗರನ್ನು ತಲುಪುವ ಅವಕಾಶಗಳನ್ನು ಪಡೆದುಕೊಳ್ಳದ ಮಹಾ ಕಾವ್ಯ..  ಕುವೆಂಪು ಅವರ ಧರ್ಮ, ಅಧ್ಯಾತ್ಮ ಮತ್ತು ವ್ಯಕ್ತಿ ವಿಕಾಸಗಳನ್ನು  ಗ್ರಹಿಸದೆ ಅವರ ಸಾಮಾಜಿಕ ತಿಳುವಳಿಕೆಗಳನ್ನು ಮಾತ್ರ ಬಳಸಿಕೊಳ್ಳುವ ಓದು ಅಪೂರ್ಣವೇ ಸರಿ ಎಂದು ಅಭಿಪ್ರಾಯಪಟ್ಟರು.

ಶಿಬಿರದಲ್ಲಿ ಕಾವ್ಯದ ಆಯ್ದ ಭಾಗಗಳನ್ನು ನಾಡಿನ ಖ್ಯಾತ ಗಮಕಿಗಳಾದ ಶ್ರೀಮತಿ ಗಂಗಮ್ಮ ಕೇಶವಮೂರ್ತಿ, ಶ್ರೀ ಚಂದ್ರಶೇಖರ ಕೆದಿಲಾಯ ಶ್ರೀ ಗಣಪತಿ ಪದ್ಯಾಣ ಹಾಗೂ ರಂಗಕರ್ಮಿ ಗಣೇಶ್ ಅವರು ಸುಶ್ರಾವ್ಯವಾಗಿ ವಾಚಿಸಿ ಕಾವ್ಯದ ರಸಾಸ್ವಾದನೆಯ ಮತ್ತೊಂದು ಆಯಾಮವನ್ನು ಪರಿಚಯಿಸಿದರು.

ಶಿವಮೊಗ್ಗೆಯ ಖ್ಯಾತ ಮನೋವೈದ್ಯೆ ಮತ್ತು ನೃತ್ಯ ಕಲಾವಿದೆ ಡಾ. ಪವಿತ್ರ ಅವರು ಶ್ರೀ ರಾಮಾಯಣ ದರ್ಶನಂ ಕಾವ್ಯವನ್ನು ನೃತ್ಯಾನುಸಂಧಾನಕ್ಕೆ ಅಳವಡಿಸಿಕೊಳ್ಳುವ ಸಾಧ್ಯತೆ ಮತ್ತು ಸವಾಲು ಕುರಿತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

‍ಲೇಖಕರು avadhi

September 26, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: