ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಕುದ್ರು ನೆಸ್ಟ್’ ದ್ವೀಪದಲ್ಲಿ ರಮೇಶ್ ಅರವಿಂದ್ ಯಕ್ಷಾವತಾರದ ಚಿತ್ರಗಳು…

ಫೋಕಸ್ ರಾಘು

ಇತ್ತೀಚೆಗೆ ಉಡುಪಿಯ ಕಾರ್ಯಕ್ರಮ ಒಂದಕ್ಕೆ ಅತಿಥಿಯಾಗಿ ಆಗಮಿಸಿದ್ದ ಜಗ ಮೆಚ್ಚಿದ ನಟ, ಸಂವೇದನಾಶೀಲ ನಿರ್ದೇಶಕ, ಸೃಜನಶೀಲ ಬರಹಗಾರ, ಸ್ಫೂರ್ತಿ ತುಂಬುವ ಭಾಷಣಕಾರ, ಸಾಧಕ, ನಿರೂಪಕ, ಬಹುಮುಖ ಪ್ರತಿಭೆಯ ರಮೇಶ್ ಅರವಿಂದ್ ಉಡುಪಿಯ ಖ್ಯಾತ ಮನೋವೈದ್ಯ ಡಾ. ವಿರೂಪಾಕ್ಷ ದೇವರುಮನೆಯವರೊಂದಿಗೆ ನನ್ನ ‘ಕುದ್ರು ನೆಸ್ಟ್’ ಹೋಮ್ ಸ್ಟೇಗೆ ಭೇಟಿ ನೀಡಿದ್ದರು.

ಪರಿಸರ, ನದಿ, ಮನೆ, ಕ್ರಿಯಾಶೀಲ ವಿನ್ಯಾಸವನ್ನು ಕಂಡು ಮೆಚ್ಚುಗೆ ಸೂಚಿಸಿದ್ದ ಅವರು ನನ್ನ ಛಾಯಾಚಿತ್ರಗಳನ್ನು ಕಂಡು ಬೆರಗು ವ್ಯಕ್ತಪಡಿಸಿ ತನಗೂ ಫೋಟೋ ಶೂಟ್ ಮಾಡ್ತೀರಾ ಎಂದು ಕೇಳಿದಾಗ ಆದ ಆನಂದಕ್ಕೆ ಅಂತ್ಯವೇ ಇರಲಿಲ್ಲ.‌ “ನಾನೊಂದು ದಿನ ಬಂದು ಇಲ್ಲಿರುತ್ತೇನೆ. ಕಾನ್ಸೆಪ್ಟ್ ಎಲ್ಲವೂ ನಿಮ್ಮದೇ” ಎಂದು ಹೇಳಿದವರು ವಾರ ಕಳೆಯುವುದರಲ್ಲೇ ಬಂದದ್ದು ನಿಜಕ್ಕೂ ಅಚ್ಚರಿ.

ಬಹು ಬೇಡಿಕೆಯ, ಹೊಸತು ಮತ್ತು ಹಳೆಯ ಎರಡೂ ತಲೆಮಾರುಗಳನ್ನು ಪ್ರಭಾವಿಸುತ್ತಿರುವ ನಟ, ನಿರೂಪಕ, ಕರ್ನಾಟಕದ ಕಣ್ಮಣಿ ರಮೇಶ್ ಅರವಿಂದ್ ನನ್ನ ಕೆಲಸಗಳನ್ನು ಮೆಚ್ಚಿ, ಕೊಟ್ಟ ಮಾತಿನಂತೆಯೇ ಕುದ್ರು ನೆಸ್ಟ್ ಗೆ ಬಂದಿದ್ದು ಅಚ್ಚರಿಯಲ್ಲೇ ಅಚ್ಚರಿ.

ಕರಾವಳಿಯ ಶೈಲಿಯಲ್ಲೇ ಫೋಟೋ ಶೂಟ್ ಪ್ಲ್ಯಾನ್ ಮಾಡಿದ್ದೆ. ಫೋನಲ್ಲಿ ಎಲ್ಲವನ್ನೂ ತಿಳಿಸಿದ್ದೆ. ನೀವೇನು ಮಾಡಿಸ್ತೀರೋ ನಾನದಕ್ಕೆ ರೆಡಿ ಎಂದವರ ಉತ್ಸಾಹ ಇವತ್ತು ನೋಡಬೇಕು! ಅದೆಂತಹ ಎನರ್ಜಿ ಅವರೊಳಗಿದೆ. ಊಟ ಮಾಡಿದ್ದು ಮೂರು ಗಂಟೆಗೆ ಎಂಬುದು ಈಗ ನೆನಪಾಗುತ್ತಿದೆಯಷ್ಟೆ.

ರಮೇಶ್ ಅರವಿಂದ್ ಯಕ್ಷಗಾನದ ಬಣ್ಣ ಹಚ್ಚಿ, ಗೆಜ್ಜೆ ತೊಟ್ಟು, ಹೆಜ್ಜೆ ಹಾಕಿದ ಪರಿಯಂತೂ ರೋಮಾಂಚನ. “ಯಕ್ಷಗಾನದ ವೇಷ ತೊಟ್ಟ ನನ್ನಲ್ಲೀಗ ದಿವ್ಯತೆಯ ಭಾವ ಬೆಳೆದಿದೆ. ಎಂಟಡಿ, ನೂರೈವತ್ತು ಕೆ.ಜಿ ಬೆಳೆದವನಂತೆ ಅನಿಸುತ್ತಿದೆ. ನಾನಿವತ್ತು ಬಹಳವೇ ಶಕ್ತಿ ಶಾಲಿ, ಎದುರಿಗೇನಾದರೂ ರಾಕ್ಷಸರು ಬಂದರೆ ಹೊಡೆದುರುಳಿಸಿ ಬಿಡುತ್ತೇನೆ” ಎಂದಾಗ ನಮ್ಮಲ್ಲಂತೂ ವಿದ್ಯುತ್ ಸಂಚಾರ.

ರಮೇಶ್ ಅರವಿಂದ್ ಲವಲವಿಕೆ, ಶಿಸ್ತು, ಸಮಯಪ್ರಜ್ಞೆ, ಕಲಾರಾಧನೆ, ಕಮಿಟ್ಮೆಂಟಿಗೆ ಈ ವೀಡಿಯೋ ಸಾಕ್ಷಿ. ಯಕ್ಷಗಾನದ ವೇಷ ಭೂಷಣ ಹಾಗೂ ಹೆಜ್ಜೆ ಕಲಿಸಿದ ಶೈಲೇಶ್ ತೀರ್ಥಹಳ್ಳಿಯವರಿಗೆ ವಿಶೇಷ ಕೃತಜ್ಞತೆಗಳು.

‍ಲೇಖಕರು Admin

13 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading