ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಕುದಿ ಎಸರು' ಎರಡು ನೋಟ

ಅನುಪಮಾ ಪ್ರಸಾದ್

ಡಾ. ವಿಜಯಾ ಅವರ ಜೀವನ ವೃತ್ತಾಂತ `ಕುದಿ ಎಸರು’ ಓದಿ ಮುಗಿಸಿ ಆರೇಳು ದಿನಗಳಾದರೂ ಒಳಗೆಲ್ಲ ಅದೇ ಚೀರಾಡುತ್ತಿದೆ.
ಜೀವನ ವೃತ್ತಾಂತವನ್ನು ಹೀಗೆ ದಾಖಲಿಸುವುದು ಕಠಿಣಾತಿಕಠಿಣ. . ಆದರೆ, ಬರೆದರೆ ಹೀಗೇ ಇರಬೇಕು ಅನಿಸುವಂತೆ ಹೆಜ್ಜೆ ಹೆಜ್ಜೆಗೂ ಸ್ವ ವಿಮರ್ಶೆ.
ವಿಜಯಮ್ಮ ಈ ಕಥಾನಕದೊಳಗಿಂದ ಹೊರನಿಂತು ಸಾಕ್ಷಿ ಪ್ರಜ್ಞೆಯಾಗಿ ದೃಶ್ಯಾತ್ಮಕವಾಗಿ ದಾಖಲಿಸುತ್ತ ಹೋಗಿದ್ದಾರೆ. ಹಾಗಾಗಿ ಹೆಣ್ತನದ ಘನತೆಯನ್ನೇ ದಿಕ್ಕರಿಸಿದ ವ್ಯಕ್ತಿಯ ವರ್ತನೆ ಬಗ್ಗೆಯೂ ದ್ವೇಷವಿಲ್ಲದ ಅನುಕಂಪ ಸಾಧ್ಯವಾಗಿದೆ. ಈ ಮಾತು ಇಲ್ಲಿ ಬರುವ ಎಲ್ಲಾ ವ್ಯಕ್ತಿಗಳಿಗೂ ಅನ್ವಯವಾಗುತ್ತದೆ.
“ಇಲ್ಲಿ ಆತ್ಮಸಾಕ್ಷಿ ಪ್ರಾಮಾಣಿಕವಾಗಿ ತೆರೆದುಕೊಂಡಿದೆ” ಎಂದು ವಿಜಯಮ್ಮ ತಮ್ಮ ಮೊದಲ ಮಾತಲ್ಲಿ ಹೇಳುತ್ತಾರೆ. ಪುಟ ಪುಟವೂ ಆ ಮಾತಿಗೆ ಸಹಿ ಹಾಕುವಂತಿದೆ.

ರಾಜಾರಾಂ ತಲ್ಲೂರು

ನನಗಿಂತ ಒಂದು ತಲೆಮಾರು ಹಿರಿಯ ಪತ್ರಕರ್ತರೊಬ್ಬರ ಆಟೊಬಯಾಗ್ರಫಿ ಎಂಬ ಕುತೂಹಲ ಇತ್ತು ಓದು ಆರಂಭಿಸುವಾಗ. ಇದು ಮೊದಲ ಕಂತು. ಡಾ| ವಿಜಯಾ ಹುಟ್ಟಿದಲ್ಲಿಂದ ತನ್ನ ತಂದೆಯ ಸಾವು – ವ್ರತ್ತಿ ಜೀವನದ ಆರಂಭದ ತನಕದ ವಿವರಗಳನ್ನು ಈ ಕಂತಿನಲ್ಲಿ ಕಟ್ಟಿಕೊಟ್ಟಿದ್ದಾರೆ.
ಓದಿ ಮುಗಿಸಿದಾಗ ನಿರಾಶೆ ಆಯಿತು. ಯಾಕೆಂದರೆ:
೧. ಆ ದಿನಗಳಲ್ಲಿ ಒಬ್ಬರು ಮನೋರೋಗ ತಜ್ನರೋ, ಸ್ತ್ರೀರೋಗ ತಜ್ನರೋ ಭೇಟಿ ಆಗಿದ್ದರೆ ಬಹಳ ಸರಳವಾಗಿ ಗುಣವಾಗಲು ಅವಕಾಶಗಳಿದ್ದ ಖಾಸಗಿ ಬದುಕಿನ ಹಸಿ ಹಸಿ ವಿವರಗಳು ಈ ಮೊದಲ ಕಂತಿನ ಉದ್ದಕ್ಕೂ ದೊರೆಯುತ್ತವೆ.
ಆ ದಿನಗಳು ಹಾಗಿದ್ದವು ಸರಿ. ಆದರೆ, ಈವತ್ತಿಗೂ ಈ ಘಟನೆಗಳ ಬಗ್ಗೆ ಅದೇ ದ್ರಷ್ಟಿಕೋನ ಮುಂದುವರಿಯುವುದು… ನನಗೆ ಅರ್ಥವಾಗಲಿಲ್ಲ.
ಒಬ್ಬ ವೈದ್ಯಕೀಯ ವಿಜ್ನಾನ ಬರಹಗಾರನಾಗಿ ನಾನು ಕಂಡುಕೊಂಡಂತೆ, ನೂರಕ್ಕೆ ತೊಂಭತ್ತು ಕುಟುಂಬಗಳಲ್ಲಿ ಈವತ್ತಿಗೂ ಈ ರೀತಿಯ ತೊಂದರೆಗಳು ಇನ್ನೂ ಇವೆ. ಕೆಲವು ಚಿಕಿತ್ಸೆಯೊಂದಿಗೆ ಸುಧಾರಿಸಿದರೆ, ಇನ್ನು ಕೆಲವು ಈ ಬಗ್ಗೆ ಅರಿವಿಲ್ಲದೆ ಮುರಿದು ಹೋಗುತ್ತವೆ. 30-40 ವರ್ಷಗಳ ಹಿಂದೆ ಪುರುಷ ಪ್ರಧಾನ ಮೇಲುಜಾತಿಗಳಲ್ಲಿ ಈ ತೊಂದರೆಗಳ ತೀವ್ರತೆ ಇನ್ನೂ ಹೆಚ್ಚಿತ್ತು ಎಂಬುದನ್ನೂ ಒಪ್ಪುತ್ತೇನೆ.
ಈ ಹಸಿ ಹಸಿ ವಿವರಗಳನ್ನು ತೆರೆದ ಮನಸ್ಸಿನಿಂದ ವಿವರಿಸದೆ, ಒಂದಷ್ಟು ಪೂರ್ವನಿರ್ಧರಿತ ತೀರ್ಮಾನದ ಕಡೆಗೆ ವಾದಗಳ ಸಹಿತ ಕೊಂಡೊಯ್ಯುವುದು, ಅದಕ್ಕಾಗಿ ಓದುಗನಿಗೆ ಅಗತ್ಯವಿರದ ರೋಚಕ ವಿವರಗಳನ್ನು ಕೊಡುವುದು ಈ ಪುಸ್ತಕಕ್ಕೆ ಮಿತಿ.

೨. ಗಮನಿಸಬೇಕಾದ ಇನ್ನೊಂದು ಸಂಗತಿ ಎಂದರೆ, ಈ ಖಾಸಗಿ ವಿವರಗಳಿಗೆ ಕೊಡಲಾದ ಆದ್ಯತೆ, ಲೇಖಕರ ವ್ರತ್ತಿ ಬದುಕಿನ ಬಗ್ಗೆ ಬರುವ ಪುಟಗಳಲ್ಲಿ ಇಲ್ಲ. ತನ್ನಿಂದಾಗಿ ಹಲವಾರು ಮಂದಿ ಲೇಖಕರು ಬೆಳಕಿಗೆ ಬಂದರು ಎಂಬ ಮಾತು ಪುಸ್ತಕದಲ್ಲಿ ಮೂರುನಾಲ್ಕು ಬಾರಿ ಪುನರುಕ್ತಗೊಳ್ಳುತ್ತದೆ. ಡೆಸ್ಕ್ ನಲ್ಲಿ ಕೆಲಸ ಮಾಡಿದ ಪತ್ರಕರ್ತರಿಗೆ ಇದೇನೂ ಹೊಸ ಸಂಗತಿ ಅಲ್ಲ. ಅದು ಪತ್ರಕರ್ತರ ಕರ್ತವ್ಯದ ಭಾಗ. ಆದರೆ, ಹೀಗೆ ಕೆಲವರು ಬೆಳಕಿಗೆ ಬರುವಾಗ ಇನ್ನೂ ದೊಡ್ಡ ಸಂಖ್ಯೆಯಲ್ಲಿ ಹಲವರು (ಕೆಲವೊಮ್ಮೆ ಸಕಾರಣವಿಲ್ಲದೆ) ಕಸದ ಬುಟ್ಟಿ ಸೇರಿರುತ್ತಾರೆ ಎಂಬುದನ್ನೂ ಪತ್ರಕರ್ತ ಮರೆಯುವಂತಿಲ್ಲ. ಲೇಖಕರ ಖಾಸಗಿ ಬದುಕಿಗಿಂತ ಅವರ ಪತ್ರಕರ್ತ ಬದುಕಿನ ಬಗ್ಗೆ ನನಗಿದ್ದ ಕುತೂಹಲ ಈ ಪುಸ್ತಕ ಓದಿದ ಬಳಿಕ ನನಗಾದ ನಿರಾಶೆಗೆ ಕಾರಣ ಇದ್ದಿರಬಹುದು.
೩. ಹಿನ್ನುಡಿಯಲ್ಲಿ ಲಕ್ಷ್ಮೀಪತಿ ಕೋಲಾರ ಅವರು ಸರಿಯಾಗಿಯೇ ಗುರುತಿಸಿರುವಂತೆ “ಆಘಾತದ ಸಂಗತಿಯೇನೆಂದರೆ, ಬಹುಶಃ ಸಂಪ್ರದಾಯಗಳ ಮಿತಿಗೊಳಪಟ್ಟ ಅವರ ಸೀಮಿತ ಪ್ರಪಂಚದಲ್ಲಿ ಈ ಸಮಾಜದ ಬ್ರಾಹ್ಮಣೇತರ ಸಕಲೆಂಟು ಜಾತಿಗಳ ಬಹುದೊಡ್ಡ ವೈವಿಧ್ಯಮಯ ಸಮಾಜವೇ ಗೈರುಹಾಜರಾಗಿರುವುದು!” ಎದ್ದು ಕಾಣುತ್ತದೆ. ತೀರಾ ಅಪರೂಪಕ್ಕೆ ಅವರು ಕಾಣಿಸಿಕೊಂಡದ್ದೂ ಮೇಲುಜಾತಿಗಳವರ ಹಾಸಿಗೆಯಲ್ಲೇ…
೪. ಒಬ್ಬ ಮಹಿಳೆ, ಪುರುಷ ಪ್ರಧಾನ ಸಮಾಜದಲ್ಲಿ ತನ್ನ ಬದುಕನ್ನು ತಾನು ಕಟ್ಟಿಕೊಂಡದ್ದು ತನ್ನ ದಾರಿ ತಾನೇ ತೆರೆದುಕೊಂಡದ್ದು ವಿಜಯಮ್ಮನವರ ಸಾಧನೆ. ಆ ಬಗೆಗಿನ ವಿವರಗಳು ಹೆಚ್ಚಿದ್ದಿದ್ದರೆ, ಪುಸ್ತಕ ಇನ್ನಷ್ಟು ಸ್ಪೂರ್ತಿಯುತವಾಗುತ್ತಿತ್ತು ಎಂಬುದು ನನ್ನ ಅನಿಸಿಕೆ. ಒಬ್ಬ ಪತ್ರಕರ್ತನಾಗಿ, ಅದೂ ಅವರು ದುಡಿದ ಪತ್ರಿಕಾ ಬಳಗದ ಅವರ ನಂತರದ ತಲೆಮಾರಿನ ಭಾಗವಾಗಿ ಒಂದಷ್ಟು ಸಮಯ ನಾನೂ ದುಡಿದಿರುವ ಹಿನ್ನೆಲೆಯಲ್ಲಿ ನನಗೆ ವಿಜಯಮ್ಮ ಅವರ ಆಟೊಬಯಾಗ್ರಫಿಯ ಮುಂದಿನ ಕಂತಿನ ಬಗ್ಗೆ ಕುತೂಹಲ ಇದೆ.
ಡಿಸ್ಕ್ಲೇಮರ್: ಇದು ನಿನ್ನೆ ರಾತ್ರಿ ಓದಿ ಮುಗಿಸಿದ ತಕ್ಷಣ ನನ್ನ ತಲೆಗೆ ಹೊಳೆದ ವಿಚಾರಗಳು. ಪುಸ್ತಕದ ವಿಮರ್ಶೆ ಖಂಡಿತಾ ಅಲ್ಲ.

‍ಲೇಖಕರು admin

25 April, 2017

1 Comment

  1. prathibha nandakumar

    ಲಕ್ಷ್ಮೀಪತಿ ಕೋಲಾರ ಅವರ ವಿದ್ವತ್ತು ಮತ್ತು ಸೃಜನಶೀಲತೆಯ ಬಗ್ಗೆ ನನಗೆ ಮೆಚ್ಚುಗೆ ಇದೆ. ಅದನ್ನು ಮೊದಲು ಹೇಳಿಬಿಡುತ್ತೇನೆ. ಆದರೆ ಒಂದೊಂದು ಸಲ ಅವರು ಎಲ್ಲವೂ ಪೊಲಿಟಿಕಲಿ ಕರೆಕ್ಟ್ ಆಗಿ ಇರಬೇಕು ಎಂದು ಅಪೇಕ್ಷಿಸುವುದರ ಬಗ್ಗೆ ನನಗೆ ಗೊಂದಲವಿದೆ. ವಿಜಯಮ್ಮ ಅವರ ಕುದಿಿ ಎಸರು ಕೃತಿಯ ಬೆನ್ನುಡಿಯಲ್ಲಿ ಅವರು ಹೇಳಿದ ಒಂದು ಮಾತು ನನ್ನನ್ನು ಬಹಳ ಕಾಡಿದೆ. “ಆಘಾತದ ಸಂಗತಿಯೇನೆಂದರೆ, ಬಹುಶಃ ಸಂಪ್ರದಾಯಗಳ ಮಿತಿಗೊಳಪಟ್ಟ ಅವರ ಸೀಮಿತ ಪ್ರಪಂಚದಲ್ಲಿ ಈ ಸಮಾಜದ ಬ್ರಾಹ್ಮಣೇತರ ಸಕಲೆಂಟು ಜಾತಿಗಳ ಬಹುದೊಡ್ಡ ವೈವಿಧ್ಯಮಯ ಸಮಾಜವೇ ಗೈರುಹಾಜರಾಗಿರುವುದು!” ಮುಂದುವರಿದು ಅವರು ಹೀಗೆ ವಿವರಿಸುತ್ತಾರೆ “ಹಾಗೆ ನೋಡಿದರೆ ತಳಸ್ತರದ ಮಹಿಳೆಯರು ತಮ್ಮ ಹಸಿವು ದಾರಿದ್ರ್ಯಗಳ ನಡುವೆಯೂ ಕೊಂಚ ಸ್ವತಂತ್ರರು ಮತ್ತು ಸುಖಿಗಳು.”
    ಅವಧಿಯಲ್ಲಿ ಪ್ರತಿಕ್ರಿಯಿಸುತ್ತಾ ರಾಜಾರಾಮ್ ತಲ್ಲೂರು ಅವರು ಲಕ್ಷ್ಮೀಪತಿಯವರ ಮಾತನ್ನು ಉಲ್ಲೇಖಿಸಿ ಅದಕ್ಕೆ ಇನ್ನೊಂದು ಮಾತು ಸೇರಿಸಿದ್ದಾರೆ “ತೀರಾ ಅಪರೂಪಕ್ಕೆ ಅವರು ಕಾಣಿಸಿಕೊಂಡದ್ದೂ ಮೇಲುಜಾತಿಗಳವರ ಹಾಸಿಗೆಯಲ್ಲೇ…”.
    ಎರಡೂ ಅಭಿಪ್ರಾಯಗಳು ಅವರವರ ವೈಚಾರಿಕ ಮಿತಿಗಳನ್ನು ಕುರಿತು ಹೇಳುತ್ತವೆ ಎಂದು ನನಗನ್ನಿಸುತ್ತದೆ. ಎಲ್ಲರ ಬದುಕಿನಲ್ಲೂ ಸಮಾಜದ ಸಕಲೆಂಟು ಜಾತಿಗಳ ಬಹುದೊಡ್ಡ ವೈವಿಧ್ಯಮಯ ಸಮಾಜವು ಇದ್ದೇ ಇರುತ್ತದೆ (ಅಂದರೆ ಅದರಿಂದ ಗಾಢ ಪರಿಣಾಮ ಬೀರಿರುತ್ತದೆ) ಎನ್ನುವ ಪೂರ್ವ ನಿಶ್ಚಿತ ತೀರ್ಮಾನದಿಂದ ಹೊರಟು ಒಂದು ಆತ್ಮಕಥೆಯನ್ನು ಅವಲೋಕಿಸುವುದು ಎಷ್ಟು ಸರಿ? ಜೊತೆಗೆ ಅವರು ನಿರ್ಧರಿಸಿರುವ ತಳಸ್ತರದ ಹೆಂಗಸರ “ಕೊಂಚ ಸ್ವಾತಂತ್ರ್ಯ ಮತ್ತು ಸುಖ” ಯಾವುದು? ಅದರ ಪರಿಕಲ್ಪನೆ ಏನು ಎಂದು ಕೇಳಬೇಕೆನಿಸುತ್ತದೆ. ಒಂದು ಮಹಿಳೆಯ ಬದುಕನ್ನು ಹೀಗೆ ಜಡ್ಜ್ಮೆಂಟ್ ಮಾಡುವುದನ್ನು ಸಮಾಜ ಇನ್ನೂ ಬಿಟ್ಟಿಲ್ಲ. ಆತ್ಮಕಥನಗಳಲ್ಲೂ ಮಹಿಳೆ ಮೀಸಲಾತಿಯ ಅಂಶಗಳನ್ನು ತಂದು ಸಕಲೆಂಟು ಜಾತಿಗಳ ಹಾಜರಾತಿ ಇದ್ದಿದ್ದರೆ ಬದುಕು ಬೇರೆಯ ತರಹ ಇರುತ್ತಿತ್ತು ಎನ್ನುವ ಧ್ವನಿಯನ್ನು ವ್ಯಕ್ತಪಡಿಸುವುದೇ ಎಷ್ಟು ಸರಿ? ಇನ್ನು ರಾಜಾರಾಮ್ ಅವರು ಏನನ್ನು ಹೇಳಲು ಯತ್ನಿಸಿದರು ಎಂದು ಗೊತ್ತಾಗುತ್ತಿಲ್ಲ. ಆದರೆ ಅಲ್ಲಿ ಸಕಾರಾತ್ಮಕ ಕ್ಕಿಂತ ನಕಾರಾತ್ಮಕ ಧ್ವನಿಯೇ ಹೆಚ್ಚು ಕೇಳಿಸುತ್ತಿದೆ. ಬದುಕಿಗೆ ಸಿಲಬಸ್ ಇಲ್ಲ ಸಾರ್.
    ಈ ಬಗ್ಗೆ ಇನ್ನಷ್ಟು ವಿಚಾರಗಳನ್ನು ನಂತರ ಲೇಖನವಾಗಿ ಬರೆಯುತ್ತೇನೆ.
    ಪ್ರತಿಭಾ ನಂದಕುಮಾರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading