ಕುದಿ ಎಸರು: ಇನ್ನಷ್ಟು..

ಅನುಪಮಾ ಪ್ರಸಾದ್

ಸರ್, ಓದುಗರಿಗೆ ಅನಗತ್ಯ ಹಸಿ ವಿವರಗಳೆಂದು ಯಾವುದನ್ನು ಗ್ರಹಿಸಲಾಯಿತೊ ಆ ಭಾಗವನ್ನು ಮತ್ತೊಮ್ಮೆ ಓದಿದಾಗಲೂ ನನ್ನ ಓದಿಗೂ ಅದು ಹಾಗೆ ಕಾಣಿಸಲಿಲ್ಲ.

ಈ ಹಿಂದೆ ಈ ಅನಿಸಿಕೆಯನ್ನ ಹಂಚಿಕೊಂಡಿರುವುದರಿಂದ ಪುನರುಕ್ತಿ ಅನಿಸಬಹುದು. ಕೆಲವೊಮ್ಮೆ ಪುನರುಕ್ತಿಯೂ ಬೇಕಲ್ಲವೆ?.

ಕೃತಿಯ ಒಂದು ಭಾಗವಾಗಿ ಬರುವ ದಾಂಪತ್ಯದ ಖಾಸಗೀತನದ ಸಂಗತಿಗಳನ್ನು ಓದುವಾಗ, ಅಂತಹ ಅತಿರೇಕದ ವಿಕೃತಿಗಳನ್ನ, ಅದರಲ್ಲೂ ರಾತ್ರಿಯ ಏಕಾಂತದಲ್ಲಿ, ಹೊರಗೆ ಮನೆ ಮಂದಿ ಮಲಗಿರುವಾಗ, ಪತ್ನಿಯ ಗರ್ಭಕ್ಕೇ ಕೈ ಹಾಕಿ ಗರ್ಭವನ್ನೇಳಿಸುತ್ತಿದ್ದಂತ ಕ್ರೌರ್ಯವನ್ನ ಅಸಹನೀಯ ಮೌನದಿಂದ ಆಕೆ ಹಾಗೆ ಸಹಿಸಬೇಕಿತ್ತೆ ಅನ್ನುವ ಪ್ರಶ್ನೆ ಓದುಗನಲ್ಲಿ ಏಳುವಂತೆ ಲೇಖಕಿಯಲ್ಲು ಮುಂದಿನ ದಿನಗಳಲ್ಲಿ ಏಳುತ್ತದೆ.

ಅದನ್ನ ಅವರು ಹೇಳಿಕೊಳ್ಳುತ್ತಾರೆ ಮಾತ್ರವಲ್ಲ ತಮಗೆ ಅಥವಾ ತನ್ನ ಗಂಡನಿಗೆ ಆ ಸಮಯದಲ್ಲಿ ಮನೋವೈದ್ಯರ ಸಹಾಯ ಬೇಕಾಗಿತ್ತು. ಆ ತಿಳುವಳಿಕೆಯ ಕೊರತೆಯೇ ದಾಂಪತ್ಯದ ಎಲ್ಲ ಅನಾಹುತಕ್ಕು ಕಾರಣವಾಯ್ತೇನೊ ಅನ್ನುವುದನ್ನ ಅವರು ಮುಂದೆ ಯೋಚಿಸುತ್ತಾರೆ. ಪ್ರಸ್ಥಾಪಿಸಿದ್ದಾರೆ.

ಆದರೆ, ಬಾಲ್ಯದಲ್ಲಿ ತಾಯಿಯನ್ನ ಕಳೆದುಕೊಳ್ಳುವುದು; ತಂದೆಯ ವಿಲಾಸದ ಬದುಕಿನಿಂದಾಗಿ ಕುಟುಂಬದಲ್ಲಿ ತಂದೆಗಿದ್ದ ಅಗೌರವ ಆಕೆಯ ಅನಾಥ ಪ್ರಜ್ಞೆಯನ್ನು ಗಾಢವಾಗಿಸುತ್ತದೆ. ಈ ಅನಾಥಭಾವವೇ ಅಷ್ಟರ ಮಟ್ಟಿಗೆ ಆಕೆಯ ಬಾಯಿಯನ್ನು ಕಟ್ಟಿಹಾಕಿಬಿಡುತ್ತದೆ ಅನ್ನುವುದು ಓದುವಾಗ ಅರ್ಥವಾಗಿಬಿಡುತ್ತದೆ. ಇಲ್ಲಿ ಮೇಲೆ ಹೇಳಿದ ಖಾಸಗೀ ವಿಚಾರಗಳನ್ನೋದುವಾಗ, “ತಿಳುವಳಿಕೆಯ ಕೊರತೆ, ಅತಿಯಾದ ಗ್ರಹಿಕೆ-ಕಲ್ಪನೆಗಳಿಂದ ಹಿಂಸಾತ್ಮಕವಾಗಿ ದಾರುಣವಾಗಬಹುದಾದ ದಾಂಪತ್ಯದ ಖಾಸಗಿ ಕ್ಷಣಗಳನ್ನ ಕಾಪಾಡಲು ಲೈಂಗಿಕ ವಿಜ್ಞಾನದ ಪಾಠ ನಮ್ಮಂತಹ ಸಮಾಜದಲ್ಲಿ ಯಾವ ರೀತಿಯಾಗಿ ಅಳವಡಿಸಿಕೊಳ್ಳಬೇಕು ಅನ್ನುವುದರ ಕುರಿತು ಯೋಚಿಸುವಂತೆ ಮಾಡುತ್ತದೆ.” ಇವತ್ತಿಗೂ ನಮ್ಮ ಸಮಾಜದಲ್ಲಿ ತಾಯಿ-ಮಗಳು, ಅಕ್ಕ-ತಂಗಿ, ತಂದೆ-ಮಗ, ಅಣ್ಣ-ತಮ್ಮ ಅಥವಾ ಆಪ್ತ ಬಳಗದಲ್ಲು ಲೈಂಗಿಕತೆಯ ಬಗ್ಗೆ ಸಹಜವಾಗಿ ಸಮಾಲೋಚಿಸುವ ವಾತಾವರಣ ಇಲ್ಲ.

ಕೃತಿಯಲ್ಲಿ ಲೇಖಕಿ ಸ್ವ ಸಮರ್ಥನೆ ಇಲ್ಲದೆ ಬಾಲ್ಯದ ತನ್ನ ಚಾಡಿಕೋರತನವನ್ನ ನಿವೇದಿಸಿಕೊಳ್ಳುತ್ತಾರೆ. ಅಲ್ಲೂ ಯಾಕೆ ಹಾಗೆ ಮಾಡುತ್ತಿದ್ದೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸುತ್ತಾರೆ.

ಸಾಮಾಜಿಕ ಬದುಕಿಗೆ ತೆರೆದುಕೊಂಡ ಮೇಲೆ ಕೆಲವೊಮ್ಮೆ ಸುದ್ದಿ ಪ್ರಕಟಿಸುವ ಆತುರದಿಂದ ಆದ ಎಡವಟ್ಟುಗಳ ಬಗ್ಗೆ, ಪತ್ರಕರ್ತೆಯಾಗಿ ತಾನು ತೋರುತ್ತಿದ್ದ ಟೊಳ್ಳು ಹಮ್ಮಿನ ಬಗ್ಗೆ ಗೇಲಿಯಾಗಿ ಹೇಳಿಕೊಳ್ಳುತ್ತಾರೆ. ಇಲ್ಲೂ ಆಕೆ ತನ್ನ ಬರವಣಿಗೆಯ ಸಾಮಾರ್ಥ್ಯಕ್ಕೆ ಸಂಬಂಧಪಟ್ಟಂತೆ ನೇರವಾಗಿಯೇ ರಾಮಾಚಾರ್ಯರ ಕುಹಕ ಮಾತಿನ ಅಗ್ನಿ ಪರೀಕ್ಷೆಗೊಳಗಾಗಿ ಸ್ಥಳದಲ್ಲೇ ಲೇಖನ ಬರೆದು ತೋರಿಸುವ ಸಂದರ್ಭ ಬರುತ್ತದೆ.

ನಿಜಕ್ಕು ‘ಕುದಿ ಎಸರು’ ಎಲ್ಲರನ್ನೂ ಕುದಿಸುತ್ತದೆ. ಕೃತಿ ಮಾತ್ರ ಸಮಪಾಕದಲ್ಲಿ ನಿಲ್ಲುತ್ತದೆ.

ಮುಂದಿನ ಭಾಗವೂ ಹೀಗೇ ವಸ್ತುನಿಷ್ಟವಾಗಿ ಮೂಡಿಬರಲಿ. ಮಹಿಳಾ ಅಧ್ಯಯನದ ದೃಷ್ಠಿಯಿಂದಲೂ, ಈ ಪುಸ್ತಕ ಹಾಗು ಮೇಲೆ ತಾವು ಪ್ರಸ್ಥಾಪಿಸಿದ ಕೃತಿಗಳನ್ನ ಓದಿದಾಗ ಇಂತಹ ಮಹಿಳಾ ಆತ್ಮಕಥಾನಕಗಳ ಅಧ್ಯಯನದಿಂದ ಶೈಕ್ಷಣಿಕವಾಗಿ ಮಹಿಳಾ ಅಧ್ಯಯನದಲ್ಲಿ ಅಳವಡಿಸಿಕೊಳ್ಳಬೇಕಾದ ಸಂಗತಿಗಳ ಬಗ್ಗೆ ಇನ್ನಷ್ಟು ಒಳ ನೋಟಗಳು ಸಿಗುತ್ತವೆ.

ಇನ್ನು ಹಸಿ ವಿವರಗಳು ಅಥವಾ ರೋಚಕ ಎಂಬ ಮಾತು ಬೇರೆ ರೀತಿಯಲ್ಲಿ `ಅನುದಿನದ ಅಂತರಗಂಗೆ’ಯ ಕುರಿತೂ ಕೆಲವೆಡೆ ಕೇಳಿ ಬಂದಿತ್ತು. ಇಂದಿಗೂ ಮಹಿಳೆಗೆ ಮನುಷ್ಯ ಸಹಜವಾದ ಅಂತರಂಗದ ಒಳತೋಟಿಗಳನ್ನೂ, ಹೆಣ್ಣು-ಗಂಡಿನ ಸಂಬಂಧದ ಕುರಿತು ಅಭಿವ್ಯಕ್ತಿಸುವಾಗ ಮನಸ್ಸಿನ ಪ್ರಾಮಾಣಿಕ ಅಭಿಪ್ರಾಯಗಳನ್ನು ನಿರ್ಭಿಡೆಯಿಂದ ಅಥವಾ ಅತ್ಯಂತ ಸಹಜವಾಗಿ ಅಭಿವ್ಯಕ್ತಿಸಲು ಸಾಧ್ಯವಾಗುವಂತಹ ಪರಿಸರ ಅದರಲ್ಲೂ ಈ ನೆಲದ ಮಟ್ಟಿಗೆ ಸಂಪೂರ್ಣವಾಗಿ ಒದಗಿಸಿಕೊಳ್ಳಲು ಸಾಧ್ಯವಾಗಿಲ್ಲವೆನ್ನುವುದನ್ನು ಹೇಳುವುದು ಅನಿವಾರ್ಯವೇ ಆಗಿದೆ.

ಕಥನವಿರಲಿ, ಆತ್ಮ ಕತನವಿರಲಿ, ಹೆಣ್ಣು ನೇರವಾಗಿಯೋ, ಸ್ವಗತದಲ್ಲಿಯೊ ತನ್ನ ಒಳತೋಟಿಗಳ ಬಗ್ಗೆ, ತನ್ನ ಜೀವ ಕಾಮದ ನೋವು-ನಲಿವು, ಕೊರತೆ, ಅಗತ್ಯತೆ, ನಿರೀಕ್ಷೆಗಳ ಬಗ್ಗೆ ಮಾತಾಡ್ತಾಳೋ ಆಗ ಅವಳ ಅಭಿವ್ಯಕ್ತಿಯನ್ನ ಹತ್ತಿಕ್ಕುವ ಎಲ್ಗ ಹುನ್ನಾರಗಳು ನಡೆಯುತ್ತವೆ. ಅದು ಬಹು ಸಂಖ್ಯಾತ ಗುಂಪುಗಳ ವರ್ತನೆಯ ಮೂಲಕ, ಅಸಹನೀಯ ಟೀಕಾಸ್ತ್ರಗಳ ಮೂಲಕ, ಉದ್ದೇಶ ಪೂರ್ವಕವಾಗಿ ನಿರ್ಲಕ್ಷಿಸುವುದು ಹಾಗು ಅದನ್ನು ಕೃತಿಕಾರಳ ಗಮನಕ್ಕೆ ಬರುವಂತೆ ನೋಡಿಕೊಳ್ಳುವುದು,-ಹೀಗೆ ದಾರಿಗಳು ಹಲವಾರು.

ಅದಕ್ಕಾಗಿಯೇ ಆಕೆಗೆ ರಾಧೆ, ರುಕ್ಮಿಣಿ, ಮೀರಾ, ಅಹಲ್ಯೆ ಅಥವಾ ಇನ್ನೊಂದು ವ್ಯಕ್ತಿತ್ವದ ಮುಸುಕಿಲ್ಲದ ಹೊಸ ಭಾಷೆ ಕಷ್ಟವಾಗಿದೆ. ಆದರೆ, ಈ ಸವಾಲುಗಳನ್ನ ನಿವಾರಿಸಿಕೊಂಡು ಅಂತಹ ಹೊಸ ಭಾಷೆಯನ್ನ ಪ್ರತಿಭಾ ನಂದಕುಮಾರ್ ಅವರ `ಅನುದಿನದ ಅಂತರಗಂಗೆ ಕಟ್ಟಿಕೊಟ್ಟಿದೆ’.

‍ಲೇಖಕರು avadhi

May 8, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: