-ಮಲ್ಲಿಕಾರ್ಜುನ ಮಹಾಮನೆ
ಚಿತ್ರ ಕೃಪೆ : ಕಾಳಿದಾಸ್ ಸತ್ತಾರ್ಧಿಕಾರ
ಜನಕಾವ್ಯ
1
ಕುಕ್ಕರಿನ ಸೀಟಿ
ಒಮ್ಮೊಮ್ಮೆ ಅಪ್ಯಾಯಮಾನ
ಎನಿಸುತ್ತದೆ
ಕಾರಣ
ಕುಟುಂಬದ ಕಡೆಗೆ
ಅದು ನನ್ನ
ಸದಾ ಧ್ಯಾನಿಸುವಂತೆ
ಮಾಡುತ್ತದೆ
ಮತ್ತೊಮ್ಮೆ
ಆ ಕೂಗು ನನ್ನದೇ
ದನಿಯೇನೋ ಅನಿಸಿ
ನನಗೆ ಹತ್ತಿರವಾಗುತ್ತದೆ
ಮಗದೊಮ್ಮೆ
ನನ್ನ ಒಳದನಿಯ
ಕೂಗು
ಕುಕ್ಕರಿನ ಅಬ್ಬರದ
ನಡುವೆ
ಮನೆಯವರಾರಿಗೂ
ಕೇಳಿಸುವುದೇ ಇಲ್ಲವೇನೋ
ಅಥವಾ
ಇವರೆಲ್ಲರಿಗೂ ಅದು
ಅಪ್ಯಾಯಮಾನ ಆಗಿರುತ್ತದೇನೋ
ಅನಿಸಿ
ನನಗೆ
ಕೋಪ ಮತ್ತು ಬೇಸರವನ್ನು
ತರಿಸುತ್ತದೆ
ತಲೆತಲಾಂತರದಿಂದ
ಕುದಿಯುವುದಷ್ಟೇ
ನನಗೆ ಗೊತ್ತಿರುವುದು
ಕುಕ್ಕರಿನಂತೆ
ಕೂಗಲೂ
ಆಗದವಳು ನಾನು

2
ಗೋಡೆಗಳಿಗೆ
ಅಲ್ಲಲ್ಲಿ ಬಾಗಿಲುಗಳು ಇವೆ
ಕಿಟಕಿಗಳೂ ಇವೆ
ಇಲ್ಲಿಯ ಬಾಗಿಲುಗಳಿಗೆ
ಸರಳುಗಳು ಇಲ್ಲ
ಅಷ್ಟೇ..
ಆದರೆ.. ಸರಳುಗಳಿಲ್ಲದ
ಬಾಗಿಲುಗಳಿಂದ
ಹೊರ ಹೋಗಲಾಗದು
ಅಷ್ಟೇ..
ಹೊರ ಹೋಗದಂತೆ
ಕಾವಲೂ ಇಲ್ಲ
ಯಾವ ಪೊಲೀಸರ
ತಡೆಯೂ ಇಲ್ಲ
ನಿತ್ಯದ ಜವಾಬ್ದಾರಿಗಳು
ಕರ್ತವ್ಯಗಳು
ಬಿಡಲಾರದ ಕೆಲಸಗಳು
ಹೊರಲಾಗದ ಹೊರೆಗಳ
ನಡುವೆ
ನನ್ನ ಕನಸುಗಳು
ಕಮರಿ ಹೋಗಿವೆ
ಅಷ್ಟೇ..
ನನ್ನದು
ಬಂಧನವಿಲ್ಲದ ಬಂಧನ
ಹೆಣ್ಣೆಂದರೆ
ಇಷ್ಟೇನಾ..






0 Comments