ಕುಂ ವೀ ಹೊಸ ಕಾದಂಬರಿ ಬರುತ್ತಿದೆ..

ಖ್ಯಾತ ಸಾಹಿತಿ ಕುಂ ವೀರಭದ್ರಪ್ಪನವರ ಹೊಸ ಕಾದಂಬರಿ ಪ್ರಕಟವಾಗುತ್ತಿದೆ.

ಪ್ರಕಟನೆಯ ಪೂರ್ವದಲ್ಲಿಯೇ ಈ ಕಾದಂಬರಿಯನ್ನು ಓದಿದ ಯುವ ಸಾಹಿತಿ ಮೆಹಬೂಬ್ ಮಠದ, ಕೊಪ್ಪಳ ಬರೆದಿರುವ ಮಾತು ಇಲ್ಲಿದೆ-

ಮಾಕನಡುಕು ಎಂಬ ವಿಸ್ಮಯ ಲೋಕದೊಳಗಿನ ಶಾಪಗ್ರಸ್ತರು…

ಮೆಹಬೂಬ್ ಮಠದ, ಕೊಪ್ಪಳ

—–

ಉಸಿರಾಡಲೂ ಜಾಗವಿರದಷ್ಟು ಜನರಿಂದ ತುಂಬಿ ತುಳುಕುತ್ತಿರುವ ಮತ್ತು ಯಾರ ಮಾತೂ ಕಿವಿಗಳಿಗೆ ಸರಿಯಾಗಿ ಕೇಳದಂತೆ ಗದ್ದಲದಿಂದ ಕೂಡಿರುವ ಬಸ್ಸಲ್ಲಿ “ಅಣ್ಣಾ ‘ಸ್ಟುವರ್ಟ್ ಪುರಂ’ ಗೆ ಒಂದು ಟಿಕೆಟ್ ಕೊಡಿ” ಅಂತ ಪ್ರಯಾಣಿಕನೊಬ್ಬ ಕಂಡಕ್ಟರ್ ನ ಕಿವಿಯ ಹತ್ತಿರ ಮುಖವಿರಿಸಿ ಮೆಲ್ಲಗೆ ಕೇಳಿದರೆ ಸಾಕು ಇಡೀ ಬಸ್ಸಿನಲ್ಲಿರುವ ಜನ ಕಾರ್ಕೂಟಕ ತುಳಿದಂತೆ ಬೆಚ್ಚಿಬೀಳುತ್ತಾರೆ. ಆ ಊರಿಗೆ ಇರುವ ಪಾತಕ ಇತಿಹಾಸ ಅಂಥಾದ್ದು. ಇತ್ತೀಚಿಗೆ ಆ ಊರಿನ ಜಗದೇಕವೀರ ಎಂದೇ ಹೆಸರಾಗಿದ್ದ ಕುಖ್ಯಾತ ಕಳ್ಳ ಟೈಗರ್ ನಾಗೇಶ್ವರರಾವ್ ನ ಕುರಿತು ಅವನದೇ ಹೆಸರಿನ ತೆಲಗು ಸಿನೆಮಾ ಬಿಡುಗಡೆ ಆದ ಮೇಲಂತೂ ಆ ಊರಿನ ಬಗ್ಗೆ ಎಲ್ಲರಲ್ಲೂ  ಕುತೂಹಲ  ಹೆಚ್ಚಾಗಿದೆ.

ಎಪ್ಪತ್ತರ ದಶಕದ ಆರಂಭದಲ್ಲಿ ಈ ಸ್ಟುವರ್ಟ್ ಪುರಂ, ವಾಗಿಲಿ, ಮಾಸೂರು, ಗೂಳ್ಯಂ, ರೆಂಟಚಿಂತಲ, ನಲ್ಲಮಲ ಅರಣ್ಯದ ಅಂಚಲ್ಲಿರುವ ಎರುಕಲ ಲಂಬಾಡಿ ತಾಂಡಗಳು, ಚೆನ್ನಂಪಲ್ಲಿ ಮತ್ತು ಅಮರಾಬಾದ್ ಹಳ್ಳಿಗಳಲ್ಲಿ ಮೇಷ್ಟ್ರಾಗಿ ಕೆಲಸ ಮಾಡುವಾಗ ತಮಗಾದ ವಿಚಿತ್ರ ಅನುಭವಗಳ ಹಿನ್ನೆಲೆಯಲ್ಲಿ, ಕನ್ನಡದಲ್ಲಿ ವಿಶಿಷ್ಟವಾಗಿ ಬರೆಯುತ್ತಿರುವ ಭಾರತೀಯ ಲೇಖಕ, ಒಂದಿಡೀ ತಲೆಮಾರನ್ನು ಇನ್ನಿಲ್ಲದಂತೆ ಗಾಢವಾಗಿ ಪ್ರಭಾವಿಸಿದ, ಪ್ರೇರೇಪಿಸಿದ ತಮ್ಮ ಕತೆ-ಕಾದಂಬರಿಗಳ ಮೂಲಕ ತಮ್ಮದೇ ಲೋಕವೊಂದನ್ನು ಸೃಷ್ಟಿಸಿಕೊಂಡಿರುವ, ಮೊದಲೆರೆಡು ವಾಕ್ಯಗಳನ್ನು ಓದಿದ ಕೂಡಲೇ ಗೊತ್ತಾಗುವ ‘ಕುಂವೀ ಶೈಲಿಯನ್ನು’ ಬರೆಹ ಲೋಕಕ್ಕೆ ಕೊಡುಗೆಯಾಗಿ ನೀಡಿರುವ, ಗ್ರಾಮೀಣ ಜಗತ್ತನ್ನು ಓದುಗರ ಮೆದುಳು ಹೃದಯಗಳಿಗೆ ಅಂಗೈ ಗೆರೆಗಳಂತೆ ಪರಿಚಯಿಸುವ, ನಿರಂತರವಾಗಿ  ಸಮೃದ್ಧಿಯುತವಾಗಿ ಬರೆಯುತ್ತಿರುವ ಕನ್ನಡದ ಹೆಮ್ಮೆ  ಕುಂವೀ ಅವರು ಈ ಮಾಕನಡು ಕಾದಂಬರಿಯನ್ನು ಬರೆದಿದ್ದಾರೆ.

ಸ್ವಾತಂತ್ರ್ಯೋತ್ತರ ಭಾರತದ ಸಂದರ್ಭದಲ್ಲಿ ನಾಗರಿಕ ಸಮಾಜದ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾದ, ಆಳುವ ಸರಕಾರಗಳ ಅವಕೃಪಗೆ ತುತ್ತಾದ, ಮೂಲಭೂತ ಸೌಕರ್ಯಗಳ ಪರಿಚಯವೇ ಇಲ್ಲದ, ಬುಡಕಟ್ಟು ಗಿರಿಜನರ ಪ್ರತ್ಯೇಕ ಲೋಕವಾಗಿ, ಎಲ್ಲ ಬಗೆಯ ಅಪರಾಧಗಳ ತವರೂರಾಗಿರುವಂಥ ಮಾಕನಡುಕು ಎನ್ನುವ ಊರಿನ ಚಿತ್ರಣವನ್ನು ಕುಂವೀ ತಮ್ಮ ವಿಶಿಷ್ಟ ಭಾಷಾ ಶೈಲಿಯ ಮೂಲಕ ಓದುಗರಿಗೆ ಕಟ್ಟಿಕೊಟ್ಟಿದಾರೆ. ಅಂಥ ಭೀಕರ ಹಿನ್ನೆಲೆಯ ಊರಿಗೆ ತನ್ನ ಪಾಡಿಗೆ ತಾನು ಬ್ರಾಹ್ಮಣ್ಯ ಮತ್ತು ಶಾಲಾ ಮಾಸ್ತರಿಕೆ ಮಾಡಿಕೊಂಡು ಹಾಯಾಗಿ ಬದುಕು ಸಾಗಿಸುತ್ತಿರುವ ಪದ್ಮನಾಭರಾವ್ ಎನ್ನುವ ಮೇಷ್ಟ್ರನ್ನು ವರ್ಗಾವಣೆ ಮಾಡಿದಾಗ ಅವನು ಹಾಗೂ ಅವನ ಕುಟುಂಬ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವಂತ ರಣ ಹಿಂಸೆಯನ್ನು ಅನುಭವಿಸುತ್ತಾರೆ. ಆಗ ಅವನ ಹೆಂಡತಿ ಅಲಮೇಲುವಿನ ಸಲಹೆಯಂತೆ ಕಾದಂಬರಿಯ ನಾಯಕ ಶೇಖರ್ ನನ್ನು ಭಾವನಾತ್ಮಕವಾಗಿ ಬ್ಲಾಕ್ಮೇಲ್ ಮಾಡಿ  ಅಲ್ಲಿಗೆ ಕಳಿಸುತ್ತಾರೆ. ಶೇಖರ್ ಒಬ್ಬ ಸಾಮಾನ್ಯ ಶಾಲಾ ಮೇಷ್ಟ್ರು ಮಾತ್ರವಲ್ಲ ಅವನೊಬ್ಬ ಹೆಸರಾಂತ ಕತೆಗಾರ, ತನ್ನ ಚುಂಬಕ ವ್ಯಕ್ತಿತ್ವದ ಕಾರಣದಿಂದಲೇ ಎಲ್ಲರನ್ನೂ ತನ್ನತ್ತ ಸೆಳೆಯಬಲ್ಲ ಮಾಂತ್ರಿಕ. ಎಂಥವರನ್ನಾದರೂ ತಡವಿಕೊಂಡು ಕಿತ್ತಾಡಬಲ್ಲ ಧೈರ್ಯವಂತ. ತನ್ನ ಸುತ್ತಮುತ್ತಲಿನ ಪರಿಸರವನ್ನು ತೀಕ್ಷ್ಣವಾಗಿ ಗಮನಿಸಿ. ಅಲ್ಲಿನ ಜನ ಜಾನುವಾರು ಕ್ರಿಮಿಕೀಟಗಳನ್ನು ಮಾತಾಡಿಸಿ ಕತೆ-ಕಾದಂಬರಿಗಳನ್ನ ಕಟ್ಟಬಲ್ಲ ಸೃಜನಶೀಲ ಲೇಖಕ. ಆ ಕಾರಣಕ್ಕಾಗಿಯೇ ಹೆಸರು ಮಾತ್ರದಿಂದ ಎಲ್ಲರನ್ನು ನಡುಗಿಸುವ ಶಾಪಗ್ರಸ್ತ  ಮಾಕನಡಕು ಗ್ರಾಮಕ್ಕೆ ಹೋಗಿ ಅಲ್ಲಿನ ಸರಕಾರಿ ಮಾಧ್ಯಮಿಕ ಶಾಲೆಯ ಉಸ್ತುವಾರಿಯನ್ನು ವೆಂಕಟ್ರಾಮುಡು ಎನ್ನುವ ಪ್ರಳಯಾಂತಕನ ಕಬಂಧ ಬಾಹುಗಳಿಂದ ಬಿಡಿಸಿಕೊಂಡು ತಾನು ವಹಿಸಿಕೊಳ್ಳಬೇಕೆಂದು ಹೊರಡುತ್ತಾನೆ.

ಮಾಕನಡುಕು ಸಹಿತ ಅದರ ಅಕ್ಕಪಕ್ಕದ ಹತ್ತಾರು ಹಳ್ಳಿಗಳಲ್ಲಿ ತನ್ನದೇ ಕುಖ್ಯಾತ ಸಾಮ್ರಾಜ್ಯವನ್ನು ಕಟ್ಟಿಕೊಂಡು ಅದನ್ನು ಆಳುತ್ತಿರುವ ವೆಂಕಟ್ರಾಮುಡು ಕೂಡ ಸಣ್ಣ ಅಸಾಮಿಯಲ್ಲ. ಅವನು ಅಪ್ರತಿಮ ಸಾಹಸಿ, ಅಸಾಧರಣ ಪ್ರತಿಭಾವಂತ, ಅರವತ್ನಾಲ್ಕು ವಿದ್ಯೆಗಳನ್ನು ಕರಗತ ಮಾಡಿಕೊಂಡ, ಗಾಂಜಾ, ಅಫೀಮು, ಹೆರಾಯಿನ್, ಸಾರಾಯಿ, ಕಾಡು ಪ್ರಾಣಿಗಳ ಅಂಗಾಂಗಳನ್ನು ಕಳ್ಳ ಸಾಗಾಣಿಕೆ ಮಾಡುವ, ಇಡೀ ಊರನ್ನೇ ಮೂಢನಂಬಿಕೆಯ ಚಕ್ರವ್ಯೂಹದೊಳಗೆ ಬಂಧಸಿಟ್ಟು ತನ್ನ ಬೆರಳ ತುದಿಯಲ್ಲಿ ಕುಣಿಸುತ್ತಿರುವ ನಿರ್ದಯಿ ಸೂತ್ರಧಾರ. ಪೆನ್ನು ಪೇಪರು ಬಳಪ ಪುಸ್ತಕಗಳನ್ನು ನೆಪ ಮಾತ್ರಕ್ಕೂ ಬಳಸದೇ ಶಿಕ್ಷಣ ವ್ಯವಸ್ಥೆಯನ್ನೇ ಮಾಯ ಮಾಡಿರುವ ಕಪ್ಪು ಲೋಕದ ಮೇಟಿ. ಇವರಿಬ್ಬರ ನಡುವಿನ ದ್ವಂದ್ವ ಯುದ್ದವನ್ನು ಕುಂವೀ ಅವರ ಅಪ್ಪಟ ಶೈಲಿಯಲ್ಲಿ ಓದುವಾಗ ಆಗುವ ರೋಮಾಂಚನ ಅನಿರ್ವಚನೀಯ.

ಕಂದಾರೆಮ್ಮ, ಪೋಚಾರಮ್ಮ, ಸುಂಕಲಮ್ಮ, ಕೇತಕಮ್ಮ ಮತ್ತು ದುರಗಮ್ಮ  ಎಂಬ ಬುಡಕಟ್ಟು ದೇವತೆಗಳ ಹಿನ್ನೆಲೆ, ಅವುಗಳ ಶಕ್ತಿ ಮತ್ತು ಅವುಗಳನ್ನು ಆರಾಧಿಸುವ ಬುಡಕಟ್ಟು ಗಿರಿಜನರ ಬದುಕಿನ ಸಂಕೀರ್ಣ ವ್ಯವಸ್ಥೆಯನ್ನು ಲೇಖಕರು ಅತಿ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. ಪರಿಸರ ವಿಜ್ಞಾನಿಯಂತಿರುವ ಎರುಕಲಯ್ಯ, ಬೆಟ್ಟದ ಕಳ್ಳ ಮೊಲಕಯ್ಯ, ಗಜದೊಂಗ ಪುಟ್ಲಾಸಯ್ಯ, ಟೈಗರ್ ಸುಂಕೇಸಯ್ಯ, ಸಾಕ್ಷಾತ್ ಹಿಡಿಂಬೆಯಂತಿರುವ ಭುಟುಂದಿ, ವನ ಸುಂದರಿಯರಾದ ಕಿಷ್ಕಿಂದಿ, ಕೆಂಭೂತಿ, ವೀರ ಯೋಧೆಯಂತೆ ಶಾಲೆ ಕಾಪಾಡುವ ಪ್ಯಾತಲಮ್ಮ, ಪೈಷಾಚಿಕ ಲೋಕದ ಏಜೆಂಟರಂತಿರುವ ಪೆಂಟಯ್ಯ ಮತ್ತು ಸಂಗಡಿಗರು, ನಕಲಿ ಜ್ಯೋತಿಷಿ ದಾಸರಿ ತಿಮ್ಮಯ್ಯ ಮುಂತಾದ ಎಲ್ಲಾ ಪಾತ್ರಗಳಿಗೂ ತಮ್ಮದೇಯಾದ ಮಹತ್ವದ ಹಿನ್ನೆಲೆ ಇದ್ದು ಯಾವ ಪಾತ್ರವೂ ತುರುಕಿದಂತೆ ಭಾಸವಾಗುವುದಿಲ್ಲ. MLA ರಾಜರತ್ನಂ, ದೇವದಾನಂ, ಫಾದರ್ ಫ್ರಾನ್ಸಿಸ್, ಚಂದ್ರಮೋಹನ್, ವೇಣು ಮಾಧವ್, ರಾಮಿರೆಡ್ಡಿ, ಚಂದ್ರ ಎನ್ನುವ ರೋಗಿಷ್ಟ ಬಸ್ಸು, ನಿಶುಂಬ ಮೂಲಿಮನಿ ಎನ್ನುವ ಪಾತ್ರಗಳು ಕಾದಂಬರಿಯ ವೇಗವನ್ನು ಹೆಚ್ಚಿಸಿವೆ.

ಸುಸಂಸ್ಕೃತ ನಾಗರಿಕ ಸಮಾಜ ಅರಣ್ಯದ ಅಂಚಿನಲ್ಲಿರುವ ಅಮಾಯಕ ಗಿರಿಜನರನ್ನು ಅಕ್ಷರವಂಚಿತರನ್ನಾಗಿ ಮಾಡಲು ಬಳಸುವ ಷಡ್ಯಂತ್ರಗಳು ಹೇಗಿರುತ್ತವೆ ಹಾಗೂ ಅವರನ್ನು ಮುಖ್ಯ ವಾಹಿನಿಯಿಂದ ಬಹು ದೂರ ಇಟ್ಟರೂ ಕೂಡ ಅವರು ಈ ನಾಗರಿಕರಿಗೆ ತೋರುವ ತಾಯಿ ಪ್ರೀತಿ ಎಷ್ಟು ಪವಿತ್ರವಾದದ್ದು ಎಂಬುದನ್ನು ಓದುವಾಗ ಹೃದಯ ಒದ್ದೆಯಾಗುತ್ತದೆ. ಎಪ್ಪತ್ತರ ದಶಕದಲ್ಲಿ ಅಕ್ಷರ ಕಲಿಸುವ ನೆಪದಲ್ಲಿ ಇಂಥ ಅರಣ್ಯದಂಚಿನ ಜನರನ್ನು ಸಣ್ಣ ಸುಳಿವೂ ನೀಡದಂತೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿದ ಕ್ರೈಸ್ತ ಮಿಷನರಿಗಳ ಹುನ್ನಾರವನ್ನು ಕಾದಂಬರಿಯ ಕೊನೆಯ ಅಧ್ಯಾಯಗಳು ತಣ್ಣಗೆ ಹಿಡಿದಿಡುತ್ತವೆ. ಅರಣ್ಯ ನ್ಯಾಯದ ಪರವಾಗಿರುವ  ವೆಂಕಟ್ರಾಮುಡು ಹಾಗೂ ಹೊಸ್ತಿಲದೀಪ ನ್ಯಾಯದ ಪರವಾಗಿರುವ ಶೇಖರ್ ಇವರಲ್ಲಿ ನಮ್ಮ  ಆಯ್ಕೆ ಯಾರಾಗಬೇಕೆಂಬುದನ್ನು ಲೇಖಕರು ಓದುಗರಿಗೇ ಬಿಟ್ಟಿದ್ದಾರೆ. ಹೆಸರಾಂತ ಮಾನವ ಶಾಸ್ತ್ರಜ್ಞ ವೆರಿಯರ್ ಎಲ್ವಿನ್ ಅವರ ಆತ್ಮ ಅಗತ್ಯವಿದ್ದಾಗಲೆಲ್ಲ ಕಾದಂಬರಿಯ ನಾಯಕನಿಗೆ ಸಹಾಯ ಮಾಡುವುದನ್ನು ಓದುವುದೇ ವಿಶಿಷ್ಟ ಅನುಭವ.

ಕುಖ್ಯಾತ ಕಳ್ಳರು-ದರೋಡೆಕಾರರು, ಸೌಮ್ಯ ಮುಖದ ಭೀಕರ ಕೊಲೆಗಡುಕರು, ಭೂಗತ ಲೋಕದ ಅಧಿಪತಿಗಳೇ ಪೊಲೀಸ್ ವ್ಯವಸ್ಥೆಯನ್ನು ಹೇಗೆ ನಿಯಂತ್ರಿಸುತ್ತಾರೆ? ಸರಕಾರದ ಆಯಕಟ್ಟಿನ ಜಾಗಗಳಲ್ಲಿ ಕುಳಿತುಕೊಂಡವರು ರಾಜ್ಯವನ್ನು ಹೇಗೆ ಲೂಟಿ ಮಾಡುತ್ತಾರೆ?, ಸಮಾಜವನ್ನು ಹೇಗೆ ಶತಮಾನಗಳ ಹಿಂದಿನ ಅಮಾನವೀಯ ಪದ್ದತಿಗಳಿಗೆ ಮರಳುವಂತೆ ಮಾಡುತ್ತಾರೆ? ಎಂಬುದನ್ನು ಮತ್ತು ಆ ಆಯಕಟ್ಟಿನ ಜಾಗವನ್ನೇ ತಮ್ಮ ಬೆರಳ ತುದಿಯಲ್ಲಿ ಕುಣಿಸಬಲ್ಲ ಶಕ್ತಿ ಕೇಂದ್ರಗಳು ಯಾವುವು? ಆ ಮಹಾನ್ ಸಮಾಜ ಸುಧಾರಕರು ಯಾರು? ಅವರ ಸೇವೆ ಮಾಡಲು ಸರಕಾರಿ ಸಿಬ್ಬಂದಿಗಳನ್ನು ಎಷ್ಟು ಕ್ರೂರವಾಗಿ ಬಳಸಿಕೊಳ್ಳಲಾಗುತ್ತದೆ? ಹಾಗಾದರೆ ಈ ವಿಷ ವರ್ತುಲದ ವ್ಯವಸ್ಥಾಪಕರಿಂದ ತಪ್ಪಿಸಿಕೊಳ್ಳುವುದು ಹೇಗೆ? ಆ ಮೂಲಕ ಈ ನೆಲದ ಸಾಮಾಜಿಕ ಸಾಂಸ್ಕೃತಿಕ ಆರೋಗ್ಯವನ್ನು ಕಾಪಾಡವುದು ಹೇಗೆ? ಎನ್ನುವ ಪ್ರಶ್ನೆಗಳಿಗೆ ಕುಂವೀ ಅವರು ಸಶಕ್ತ ಉತ್ತರಗಳನ್ನು ನೀಡುತ್ತಾರೆ.

ಜೀವನಾನುಭವದ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿರುವ ಈ ಕಾದಂಬರಿ ತನ್ನ  ರೋಚಕ, ವಿನೋದಾತ್ಮಕ ನಿರೂಪಣೆಯಿಂದ ತಣ್ಣಗಿನ ಕ್ರೌರ್ಯವನ್ನು ಲೊಕದೆದುರು ಬಿಚ್ಚಿಡುತ್ತದೆ. ಓದುಗ ತನ್ನ ಮುಖದಲ್ಲಿ ನಗುವಿನ ಆಭರಣವನ್ನು ಧರಿಸಿಕೊಂಡೇ ಓದುವಂತೆ ಮಾಡುವಲ್ಲಿ ಕಾದಂಬರಿ ಯಶಸ್ವಿಯಾಗಿದೆ. ಕುಂವೀ ಲೋಕದೋಳಗಿನ ಅಪ್ಪಟ ಮನೋರಂಜನೆಯ ಪ್ರಯಾಣವನ್ನು ಆನಂದಿಸುತ್ತ ಬಹು ಶಿಸ್ತೀಯ ಹಾಗೂ ಬಹು ಆಯಾಮದ ಅಧ್ಯಯನದ ಅನುಭವವನ್ನು ಈ ಕೃತಿಯ ಮೂಲಕ ಪಡೆಯಬಹುದು.

‍ಲೇಖಕರು avadhi

November 29, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: