ಬನ್ನಪ್ಪ ಕುಂಬಾರ (ಸೇಡಂನಲ್ಲಿರುವ ಸರ್ಕಾರಿ ಪದವಿ ಕಾಲೇಜಿನ ಮುಖ್ಯಗ್ರಂಥಪಾಲಕರು) ನಿನ್ನೆ ಬೆಳೆಗ್ಗೆ ದೂರವಾಣಿ ಮೂಲಕ ಕರುಳಿಗೆ ಬರೆ ಎಳೆಯದಿದ್ದಲ್ಲಿ ನಾನೀ ವಿಷಯ ಪ್ರಸ್ತಾಪಿಸುತ್ತಿರಲಿಲ್ಲ, ಗ್ರಾಮೀಣ ನೆಲೆಯ ಉದಯೋನ್ಮುಖ ಲೇಖಕರೆನ್ನುವ ಮುಠ್ಠಾಳರ ಕುರಿತಂತೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಎರಡು ವರ್ಷಗಳ ಹಿಂದೆ ನೌಕರಿಯ ಮೂಗುದಾಣದಿಂದ ಮುಕ್ತಿ ಪಡೆದಿರುವ ನಾನು ಸುಮ್ಮನಿದ್ದರೂ ನನ್ನ ನಾಲಗೆ ಮತ್ತು ಕಾಲುಗಳು ತೆಪ್ಪಗಿರುವ ಜಾಯಮಾನದವಲ್ಲ. ಅದರಲ್ಲೂ ಉತ್ತರ ಕರ್ನಾಟಕದ, ಅದರಲ್ಲೂ ಗ್ರಾಮೀಣ ನೆಲೆಯ ಬರಹಗಾರರೆಂದರೆ ತುಸು ಕಕ್ಕುಲಾತಿ ನನಗೆ. ಆಧುನಿಕ ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಕೈಯಾಡಿಸುತ್ತಿರುವ, ತಕ್ಕ ಮಟ್ಟಿಗೆ ಗಣನೀಯ ಕೊಡುಗೆ ನೀಡುತ್ತಿರುವ ಈ ಭಾಗದ ಯುವ ಬರಹಗಾರರ ಪೈಕಿ ಹಲವರು ತಳ ಸಮುದಾಯದಿಂದ ಬಂದವರು, ಉಪವಾಸ, ವನವಾಸ, ತರಲೆ ತಾಪತ್ರಯಗಳ ನಿಕಟ ಪರಿಚಯ ಉಳ್ಳವರು, ತಮ್ಮ ಮೈಯೊಳಗೆ ಅರಪಾವು ಮಾವುಸ, ಚಟಾಕು ರಕ್ತವಿರದಿದ್ದರೂ ಪ್ರೀತಿ, ಪ್ರೇಮ ಕುರಿತಂತೆ ತಲೆ ಕೆಡಿಸಿಕೊಂಡವರು. ತಮ್ಮ ಒನ್ ವೇ ಪ್ರೇಮಾಲಾಪನೆಯನ್ನು ಕವಿತೆಗಳನ್ನಾಗಿಸಿ ವೃಥಾ ಬೀಗುತ್ತಿರುವವರು. ತಮ್ಮನ್ನು ನಿರಾಸೆಗೊಳಿಸಿದವರನ್ನು ಕೆಂಡದಂಥ ಕವಿತೆಗಳಿಂದ ಚಚ್ಚುವಂಥವರು. ಈ ನಾಳಿನ ಕನಸುಗಳು ನೊಂದುಕೊಳ್ಳುವವೆಂಬ ಆತಂಕದಿಂದ ನಾನು ಅಂಥವರ ಪರಿಧಿಯೊಳಗಿರುವುದು ಮಾಮೂಲು.
ಅವರು ಕರೆದಲ್ಲೆಲ್ಲಾ ಹೋಗುವುದು, ಅವರ ಹಸಿಹಸಿ ಕೃತಿಗಳನ್ನು ಬಿಡುಗಡೆ ಮಾಡುವುದು, ನಾಲ್ಕು ಮೆಚ್ಚುಗೆ ಮಾತುಗಳನ್ನಾಡುವುದು, ಅವರೊಂದಿಗೆ ತಾಸುಗಟ್ಟಲೆ ಹರಟುವುದು ನನ್ನ ಜಾಯಮಾನ. ಅವರನ್ನು ನಿರಾಸೆಗೊಳಿಸುವುದಂತೂ ನನ್ನಿಂದ ಸಾಧ್ಯವೇ ಇಲ್ಲ. ಅವರಲ್ಲಿ ಜೀವನೋತ್ಸಾಹ ತುಂಬುವುದು ಸಾಹಿತ್ಯದ ಒಂದು ಭಾಗವೆಂದು ನನ್ನ ಭಾವನೆ. ಆದರೆ ಇವರಲ್ಲಿ ಕೆಲ ಮುಠ್ಠಾಳರಿಗೆ ಬರವಿಲ್ಲ, ನನ್ನ ಮನಸ್ಸನ್ನು ಘಾಸಿಗೊಳಿಸಿದ ಇಬ್ಬರು ಉದಯೋನ್ಮುಖ ಬರಹಗಾರರನ್ನು ಇಲ್ಲಿ ಪರಿಚಯಿಸುತ್ತಿರುವೆ.
ಗುಲ್ಬರ್ಗದಾಚೆ ಇರುವ ಇರುವ ಸೇಡಂಗೆ ಕೆಲ ತಿಂಗಳುಗಳ ಹಿಂದೆ ಹೋದಾಗ ಬನ್ನಪ್ಪ ಮಹೇಶ ಕಾಳಗಿ ಎಂಬ ದಲಿತ ವಿದ್ಯಾರ್ಥಿಯನ್ನು ಪರಿಚಯಿಸಿದರು. ಜಾಲಿಗಿಡದಂತಿದ್ದ ಆ ದಲಿತ ಯುವಕ ಪ್ರತಿಭಾವಂತ ಎನ್ನುವುದರಲ್ಲಿ ಎರಡು ಮಾತಿಲ್ಲ. ಹತ್ತನೆ ತರಗತಿಯಲ್ಲಿದ್ದಾಗಲೇ ಚೊಚ್ಚಲು ಕವನ ಸಂಕಲನವನ್ನು ಪ್ರಕಟಿಸಿದ್ದ ಅವನು ಎರಡನೆ ಕವನ ಸಂಕಲನ ಪ್ರಕಟಿಸಲು ಸಿದ್ದತೆ ನಡೆಸಿದ್ದ. ಅದರ ಪ್ರಕಟಣೆಯ ಜವಾಬ್ದಾರಿ ಹೊತ್ತುಕೊಂಡಿದ್ದ ಬನ್ನಪ್ಪನವರ ಸಲಹೆಯಂತೆ ನಾಲ್ಕು ಪ್ರೋತ್ಸಾಹದ ಮಾತುಗಳನ್ನು ಬರೆದು ಕೊಟ್ಟೆ, ಬಿಡುಗಡೆ ಕಾರ್ಯಕ್ರಮಕ್ಕೆ ಬರಬೇಕೆಂದು ಆಪೇಕ್ಷಿಸಿದ, ಒಪ್ಪಿಗೆ ಸೂಚಿಸಿದೆ. ಇದೇ ಮಾರ್ಚ್ ಹದಿಮೂರರಂದು ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದೆ, ಕರ್ನಾಟಕ ಲೋಕಸೇವಾ ಆಯೋಗ ಸದಸ್ಯರಾದ ಬಿ. ಎಸ್. ಕೃಷ್ಣಪ್ರಸಾದ್, ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಪುಟ್ಟಯ್ಯ, ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯ ವಿಜ್ಞಾನ ಸಂಸ್ಥೆಯ ಮುಖ್ಯಸ್ಥರಾದ ಡಾ.ಸಂಗಮರಂಥ ಗಣ್ಯರೊಂದೇ ಅಲ್ಲದೆ ಸ್ಥಳೀಯ ಪ್ರಮುಖರನೇಕರು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುಮಾರು ಐದಾರು ತಾಸುಗಳ ಕಾಲ ನಡೆದ ಸಮಾರಂಭದಲ್ಲಿ ತರುಣ ಕವಿ ಮಹೇಶ ಕಾಳಗಿಯ (ಅದೇ ಕಾಲೇಜಿನ ಬಿಏ ಪ್ರಥಮ ತರಗತಿಯ ವಿದ್ಯಾರ್ಥಿ) ಎರಡನೇ ಕವನ ಸಂಕಲನ ಬಿಡುಗಡೆಯಾಯಿತು, ಸ್ಥಳೀಯ ಲೇಖಕರೂ, ಅಮ್ಮಾ ಪ್ರತಿಷ್ಠಾನದ ಸಂಘಟಕರೂ ಆದ ಮಹಿಪಾಲ ರೆಡ್ಡಿ ಮುನ್ನೂರು ತಮ್ಮ ವಿದ್ಯಾರ್ಥಿ ಮಿತ್ರ ಮಹೇಶನ ಸೃಜನಶೀಲ ಪ್ರತಿಭೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದೆ ಇರಲಿಲ್ಲ. ಕಾರ್ಯಕ್ರಮದ ಬಳಿಕ ಮಹೇಶನನ್ನು ನಾನೂ, ನನ್ನನ್ನು ಮಹೇಶನೂ ಪರಸ್ಪರ ಹಚ್ಚಿಕೊಂಡೆವು. ಮಾರನೆ ದಿವಸ ಮದ್ಯಾಹ್ನದ ಊಟಕ್ಕೆಂದು ದಲಿತರೋಣಿಯಲ್ಲಿದ್ದ ಕವಿಯ ಪುಟ್ಟ ಮನೆಗೆ ಹೋದೆ. ಆತನ ತಂದೆ ಅರ್ಜುನಪ್ಪ ಬಿರ್ಲಾ ಸಿಮೆಂಟ್ ಕಾರ್ಖಾನೆಯಲ್ಲಿ ದಿನಗೂಲಿ, ಮನೆ ತುಂಬಾ ಮಕ್ಕಳು, ಮೊಮ್ಮಕ್ಕಳು. ಗಿಜಿಗಿಜಿ ಸಂಸಾರ.
ಊಟದ ಬಳಿಕ ಮಹೇಶನನ್ನು ಪಕ್ಕದಲ್ಲಿ ಕೂಡ್ರಿಸಿಕೊಂಡು ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳಬೇಕೆಂದು ಪಾಠ ಮಾಡಿದೆ. ಅವನ ಶಿಫಾರಸ್ಸಿನಂತೆ ಅವನ ಗೆಳೆಯರ ನೋಟು ಪುಸ್ತಕಗಳಲ್ಲಿದ್ದ ಅಸಂಖ್ಯಾತ ಕವಿತೆಗಳನ್ನು ಓದಿ ಮುನ್ನುಡಿ, ಬೆನ್ನುಡಿ ಬರೆದುಕೊಟ್ಟೆ. ರೇಲ್ವೇಸ್ಟೇಷನ್ನಿನ ಮೂಲೆಯಲ್ಲಿ ನನ್ನ ಘನ ಅಧ್ಯಕ್ಷತೆಯಲ್ಲಿ ನಡೆದ ಕವಿಸಮ್ಮೇಳನದಲ್ಲಿ ಅವರೆಲ್ಲ ತಮ್ಮ ತಮ್ಮ ಕವಿತೆಗಳನ್ನು ವಾಚಿಸಿದರು. ಅವರೆಲ್ಲರ ಕವಿತೆಗಳನ್ನು ಆಸ್ವಾದಿಸಿದ ಬಳಿಕ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕೆಂದು ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದೆ. ಹನ್ನೊಂದೂವರೆ ಸುಮಾರಿಗೆ ಆಗಮಸಿದ ನಾಂದೇಡ ಎಕ್ಸ್ಪ್ರೆಸ್ಸಿನಲ್ಲಿ ತರುಣ ಕವಿಗಳಿಂದ ಬೀಳ್ಕೊಂಡು ಬೀದರ್ ಕಡೆ ಪ್ರಯಾಣ ಬೆಳೆಸಿದೆ.
ತೀರಾ ಮೊನ್ನೆ ಮೊನ್ನೆಯವರೆಗೆ ಕವಿಮಿತ್ರ ಮಹೇಶ ನನ್ನನ್ನು ದೂರವಾಣಿ ಮೂಲಕ ಸಂಪರ್ಕಿಸುತ್ತಲೇ ಇದ್ದ. ವಾರದಲ್ಲಿ ಕೊಟ್ಟೂರಿಗೆ ಬರಲಿದ್ದ. ಅವನ ಆಗಮನದ ನಿರೀಕ್ಷೆಯಲ್ಲಿದ್ದೆ. ಆದರೆ ನಿನ್ನೆ ಬೆಳೆಗ್ಗೆ ಬನ್ನಪ್ಪ ಹೇಳಿದ್ದು ಕೇಳಿ ಪಾತಾಳಕ್ಕೆ ಕುಸಿದು ಕೂತೆ, ಪ್ರೇಮ ಪ್ರಕರಣದಿಂದಾಗಿ ತರುಣ ಕವಿ ಮಿತ್ರ ಮಹೇಶ ಕಾಳಗಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಇನ್ನೊಬ್ಬ ಮುಠ್ಠಾಳನದ್ದು ಇನ್ನೊಂದು ದುರಂತ, ಮುಖ ಪರಿಚಯವಿರದಿದ್ದ ಅವನು ಹೊತ್ತಲ್ಲದ ಹೊತ್ತಿನಲ್ಲಿ ಪೋನ್ ಮಾಡಿ ಜೀವ ತಿನ್ನುತ್ತಿದ್ದ. ವಾರಕ್ಕೆರಡು ಮೂರು ಸರತಿಯಾದರೂ ಪೋನಿನಲ್ಲಿ ಕವಿತಾವಾಚನ ಮಾಡುತ್ತಿದ್ದ, ಸಾಹಿತ್ಯ, ಸಾಹಿತಿಗಳ ಕುರಿತಂತೆ ಚರ್ಚಿಸುತ್ತಿದ್ದ. ಒಂದು ರಾತ್ರಿ ಹನ್ನೆರಡ ಸುಮಾರಿಗೆ ಫೋನ್ ಮಾಡಿ ರವಿ ಬೆಳಗೆರೆ, ಭೈರಪ್ಪನವರ ಮೊಬೈಲ್ ನಂಬರ್ ಕೊಡಿ ಎಂದು ಕೇಳಿದ. ಯಾಕೆ ಎಂದೆ, ಅವರಿಗೆ ಬುದ್ದಿ ಹೇಳುವುದಿದೆ ಎಂದ, ಕುಡಿದಿರುವೆಯಾ ಎಂದೆ ಅನುಮಾನ ಬಂದು. ಅದಕ್ಕವನು ಸಾರ್ ನಾನು ನಿಮ್ಮಂತೆ ಸಣ್ಣಸಾಲೆ ಮೇಸ್ಟ್ರು ಎಂದು ಹೇಳಿದ, ಏನೇನೋ ಬಡಬಡಿಸಿ ಸಾರ್ ನಾನೂ ನಿಮ್ಮೆಲ್ಲರಂತೆ ಪ್ರಸಿದ್ದನಾಗಬೇಕಾದರೆ ತಕ್ಷಣ ಏನು ಮಾಡಬೇಕು ಎಂದ, ನೀನು ಏನೂ ಮಾಡದಿದ್ದರೆ ಒಳ್ಳೆಯದೆಂದು ಹೇಳಿದೆ. ಹೀಗೆ ಪ್ರತಿ ಸಾರಿ ತಲೆ ತಿನ್ನುತ್ತಲೇ ಇದ್ದ.
ಬೆಳಗಾವಿಯಲ್ಲಿದ್ದ ನನಗೆ ಅವನಿಂದ ಕರೆ ಬಂದಾಗ ರಾತ್ರಿ ಹನ್ನೊಂದಾಗಿತ್ತು. ಅವನು ವಿಲಕ್ಷಣ ರೀತಿಯಲ್ಲಿ ನಕ್ಕು ಸಾರ್ ನಾಡಿದ್ದು ಎಲ್ಲಾ ಟೀವಿ, ಪೇಪರ್ಗಳಲ್ಲಿ ನನ್ನ ಸುದ್ದಿ ಫೋಟೋ ಸಹಿತ ಬರ್ತದೆ ನೋಡಿ ಎಂದ. ಯಾವುದಾದರೊಂದು ಕವಿ ಸಮ್ಮೇಳನದಲ್ಲಿ ಭಾಗವಹಿಸುತ್ತಿರಬಹುದೆಂದು ಕುತೂಹಲ ತಳೆದೆ, ನಾಡಿನ ಎಲ್ಲ ಪೇಪರ್, ಟೀವಿಗಳು ಅವನ ಕುಕೃತ್ಯವನ್ನು ದಿನವಿಡೀ ಪ್ರಸಾರ ಮಾಡಿದವು, ಶಾಲಾಮಾಸ್ತರನಾಗಿದ್ದ ಅವರು ಒಂದನೆ ತರಗತಿಯ ಮೂರು ಬಾಲಕರನ್ನು ಬಾವಿಗೆಸೆದು ಸುದ್ದಿ ಮಾಡಿದ್ದ.
ನನ್ನ ಅನುಭವ ವ್ಯಾಪ್ತಿಯಲ್ಲಿರುವ ಈ ಕಹಿ ಘಟನೆಗಳು ಕುರಿತಂತೆ ನೀವೂ ಯೋಚಿಸಿ, ಅಲ್ಲದೆ ಅ.ಶ್ರೀಧರರಂಥ ಮನೋವಿಜ್ಞಾನಿಗಳೂ ಯೋಚಿಸಬೇಕಿರುವುದು.








ಸರ್ ಎರಡೂ ಘಟನೆಗಳು ಮನಕಲಕುವಂತವು. ಎರಡನೆಯ ಘಟನೆಯನ್ನು ಟೀವಿಯಲ್ಲಿ ನೋಡಿದ್ದೆ ಕೂಡ. ಬಹುಶಃ ಎಲ್ಲ ಕವಿಗಳ ಪ್ರಾರಂಭದಲ್ಲಿ ಕ್ರಾಂತಿ ಮತ್ತು ಪ್ರೀತಿ ಇದ್ದೇ ಇರುತ್ತದೆಯೋ ಏನೋ? ನಾನು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬೆಳದಿಂಗಳ ಕವಿಗೋಷ್ಠಿಯೊಂದರಲ್ಲಿ ಕವಿತೆ ಓದಿ ಬಹುತೇಕ ಯುವಕರು ಬಡತನ, ಹಸಿವು, ಅಸಹಾಯಕತೆ, ಕ್ರಾಂತಿ ಮೊದಲಾದವುಗಳ ಬಗ್ಗೆ ಒಂದು ಕವಿತೆ ಓದಿದರೆ, ಎರಡನೆಯದೇ ಪ್ರೇಮಕವಿತೆಯಾಗಿರುತ್ತಿತ್ತು! ಈ ಪ್ರೇಮದ್ದೋ ಕಾಮದ್ದೋ ಕವಿತೆ ಬರೆದುಕೊಂಡು ಸುಮ್ಮನಿದ್ದರೆ ಸಾಕಾಗಿದ್ದ ಯುವ ಕವಿ ಮಹೇಶ ಕಾಳಗಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು ವಿಷಾದನೀಯ.
ಇದು ಒಂದು ರೀತಿಯಲ್ಲಿ ಮೀಡಿಯಾ ಪ್ರೇರಿತ ಅನ್ನಿಸುತ್ತದೆ. ಏನೂ ಮಾಡದ ವ್ಯಕ್ತಿಯನ್ನ ನಮ್ಮ ಟೀವಿ ಚಾನಲ್ಲುಗಳು ಹೀರೋಗಳಂತೆ, ಉನ್ನತ ಸ್ಥಾನದ ವ್ಯಕ್ತಿಗಳಂತೆ, ಜನಪ್ರಿಯ ವ್ಯಕ್ತಿಗಳಂತೆ ಪ್ರತಿಬಿಂಬಿಸುತ್ತಾರೆ. ವಿಧಾನ ಸೌಧದ ಮುಂದೆ ಒಂದಿಷ್ಟು ಕುಂಕುಮ, ಬೊಂಬೆ, ಮೊಟ್ಟೆ ಸಿಕ್ಕರೂ ಸುದ್ದಿಯೇ. ಆದರೆ, ಉತ್ತರ ಕರ್ನಾಟಕದ ಮಂದಿ ಬದುಕಿದ್ದಾರೆ, ಜೀವಂತವಿದ್ದಾರೆ ಅನ್ನೋ ಖಬರೂ ಕೂಡಾ ಇಲ್ಲದ ಮೀಡೀಯಾ ಮಂದಿ ಬೆಂಗಳೂರು ಕೇಂದ್ರಿತ ಸಂಸ್ಕೃತಿಯನ್ನ ನಾಡಿನ ಎಲ್ಲ ಜನ ಮೇಲೆ ಹೇರಲಿಕ್ಕೆ ಹೊರಡುತ್ತಾರೆ.
ಒಂದು ಕಥೆಯಲ್ಲಿ ಓದಿದ ನೆನಪು. ಒಬ್ಬ ವ್ಯಕ್ತಿ ಬದುಕಿರುವಂತೆಯೇ ಅವನ ಸಂಬಧಿಯೊಬ್ಬ ಈತ ಸತ್ತ ಅಂತಾ ಹೇಳಿ ಡೆತ್ ಸರ್ಟಿಫಿಕೇಟು ತರುತ್ತಾನೆ. ಅದರಿಂದ ಆ ಸಂಬಂಧಿ ಉಪಯೋಗ ಪಡೆಯುತ್ತಾನೆ. ಇದ್ದೂ ಸತ್ತಂತಾದವ ಎಲ್ಲ ಕಛೇರಿಗಳಿಗೆ ಅಲೆದಾಡಿದರೂ ಈತ ಬೇರೆ ಯಾರೋ ಅಂತಲೇ ಹೇಳುತ್ತಾರೆ. ಕೊನೆಗೆ ಈತ ಯಾರಿಗೋ ಸುಮ್ ಸುಮ್ನೆ ಹೊಡೆದು ಬಡಿದು ಮಾಡಿ ಜೈಲು ಸೇರುತ್ತಾನೆ. ಸೇರುವಾಗ ಈತನ ಹೆಸರು ಬರೆದುಕೊಂಡಾಗ, ಕೇಸು ಬುಕ್ಕಾದಾಗ ಜಗತ್ತಿಗೆ ಈತ ಬದುಕಿದ್ದಾನೆ ಅನ್ನೋದು ತಿಳಿಯುತ್ತದೆ.
ಮೀಡಿಯಾಗಳ ಪರಿಸ್ಥಿತಿಗಳೂ ಹಾಗೆಯೇ ಇದೆ. ಒಳ್ಳೇದನ್ನ ಮಾಡಿ ಕರೀರಿ ಬರ್ತಾರೇನೋ ನೋಡಿ. ಆದ್ರೆ, ಕೆಟ್ಟದ್ದೇನಾದ್ರೂ ಆದ್ರೆ, ಕ್ರೈಮು ನೆಡೆದರೆ, ಅನೈತಿಕತೆ ಅಂಶಗಳಿದ್ದರೆ, ಎದ್ನೋ ಬಿದ್ನೋ ಅನ್ನೋಹಂಗ್ ಬರ್ತಾರೆ. ಅಂದರೆ, ಸಾಮಾನ್ಯ ಜನಜೀವನಕ್ಕೆ, ಒಳ್ಳೆಯತನಕ್ಕೆ ಬೆಲೆಯೇ ಇಲ್ಲವೇ? ಇದ್ದರೂ ಮೀಡಿಯಾಗಳಲ್ಲಿ ಪ್ರೊಜೆಕ್ಟ್ ಆಗುವುದೇ ಇಲ್ಲವೇ?
ಇವೆಲ್ಲವೂ ಸಾಮಾನ್ಯ ಜನ “ಅಸಾಮಾನ್ಯ”ರಂತೆ ವರ್ತಿಸಿ ತಾವೂ ಬದುಕಿದ್ದೇವೆ ಎಂದು ತೋರಿಸುವ ಅಸ್ತಿತ್ವ ಪ್ರದರ್ಶನವಾಗುತ್ತದೆ ಅಷ್ಟೇ.
ಗಣೇಶ್.ಕೆ.
ಹುಬ್ಬಳ್ಳಿ.
very sad.
Dearest Kum.Vee. sir, I am shocked.
avaribbara saavigagi dukhisuvudu,
idannu ishtu manogna baravanige mulaka present madiddakaagi nimmanu mecchikolluvudu- eradu ottige nadedu summane kulitukolluvantagide.
sudha chidanandagowda.
ಕುಂ.ವೀ., ಅವರ ಬರಹದಲ್ಲಿನ ಇಬ್ಬರು ಯುವಕರ ದುರಂತ ಓದಿದವರ ಎದೆ ನಡುಗಿಸುತ್ತದೆ .
ಸಿ ಪಿ ನಾಗರಾಜ