ಕುಂ ವೀ ಗೆ ತಿರುಮಲೇಶ್ ಉತ್ತರ- ಇದು ಜಗಳಗಂಟಿಗಳ ಕಾಲ

k v tirumalesh

ಕೆ.ವಿ.ತಿರುಮಲೇಶ್

ಪ್ರಿಯ ಕುಂವೀ,
ನೀವು `ನಿರುಪದ್ರವಿ’ ಲೇಖಕರು ದೇವದಾಸಿಯರಂತೆ ಎಂಬುದಾಗಿ ಹೇಳಿದ ಮಾತು ನನ್ನನ್ನೂ ಆಘಾತಗೊಳಿಸಿತ್ತು: ಕತ್ತಿಯ ಎರಡೂ ಅಲಗುಗಳಿಂದ ನೀವು ಹೊಡೆದಿದ್ದಿರಿ–`ನಿರುಪದ್ರವಿ’ ಲೇಖಕರಿಗೂ, ಬಡ ದೇವದಾಸಿಯರಿಗೂ! ಮಾಡಿದವನ ಪಾಪ ಹೇಳಿದವನ ಬಾಯಲ್ಲಿ ಅಂತ ಸುಮ್ಮನಿದ್ದೆ. ಯಾಕೆಂದರೆ ಇದು ಜಗಳಗಂಟಿಗಳ ಕಾಲ.

ಅಲ್ಲದೆ ನೀವು ನನ್ನಂಥವರನ್ನೇ ಬಯ್ದಿದ್ದೀರಿ ಅನಿಸಿತು. ನಿಮಗೀಗ ನಿಮ್ಮ ಬೀಸುಮಾತಿನ ತಪ್ಪು ಅರಿವಾಗಿ ಕ್ಷಮೆ ಕೇಳಿದ್ದೀರಿ. ಇದು ದೊಡ್ಡ ಗುಣ. ಯಾಕೆಂದರೆ ತಪ್ಪು ಎಲ್ಲರೂ ಮಾಡುತ್ತಾರೆ, ಆದರೆ ತಪ್ಪಾಯಿತು, ಕ್ಷಮಿಸಿ ಎನ್ನುವವರು ಕಡಿಮೆ. ಕ್ಷಮಿಸುವವರು ಇನ್ನೂ ಕಡಿಮೆ! ನೀವು ವಿನಮ್ರರಾಗುವ ಮೂಲಕ ದೊಡ್ಡತನ ಮೆರೆದಿದ್ದೀರಿ! ವಿನಮ್ರನಾಗದೆ ಯಾರೂ ದೊಡ್ಡವರಾಗುವುದು ಸಾಧ್ಯವಿಲ್ಲ. (ದೊಡ್ಡತನ ಎಂಬ ಪದ ಬೇಡವಾದರೆ, ಬದಲಾಯಿಸುವ ಗುಣ ಎಂದಿಟ್ಟುಕೊಳ್ಳಿ.)
academy logoದೇವದಾಸಿಯರ ಸ್ಥಿತಿಗೆ ಏನೇನೋ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿರುವುದು ನಮಗೆಲ್ಲರಿಗೂ ಗೊತ್ತು. ಇನ್ನು ಈ `ನಿರುಪದ್ರವಿ’ ಲೇಖಕರ ಬಗ್ಗೆ: ಎಲ್ಲರಿಗೂ ಸಮಾನ ಅವಕಾಶಗಳು ಸಿಗುವುದಿಲ್ಲ—ಯಾವ ಯಾವುದೋ ಕಾರಣಕ್ಕೆ. ನಾನೂ ಸೇರಿದಂತೆ ಹಲವರು ತಮ್ಮಷ್ಟಕ್ಕೇ ಏನೇನೋ ಬರೆದುಕೊಂಡು ಇರುತ್ತಾರೆ. ಅವರೂ ನಮ್ಮ ಸೋದರ ಸೋದರಿಯರೇ. `ಪಲವುಂ ಪಳ್ಳ ಸಮುದ್ರವೈ’ ಎಂದು ನೀವು ಕೇಳಿಲ್ಲವೇ? ಎಲ್ಲರನ್ನೂ ಗೌರವಿಸೋಣ. ನೀವು `ಉಪದ್ರವಿ’ ಲೇಖಕರಾದ್ದರಿಂದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನಿಮಗೆ ಸಿಕ್ಕಿತು ಎಂಬ ಭಾವನೆ ನಿಮ್ಮ ಮನಸ್ಸಿನಲ್ಲಿ ಇದೆಯೆಂದು ತೋರುತ್ತದೆ; ಅದೇ ರೀತಿ ಪ್ರಶಸ್ತಿರಹಿತರು ನಿರುಪದ್ರವಿಗಳು ಎಂದು ನೀವು ಭಾವಿಸಿರಲೂ ಬಹುದು.

ಒಂದೆಡೆ ನೀವು `ಉಪದ್ರವಿ’ ಲೇಖಕರು—ಅಕಾಡೆಮಿ ಪ್ರಶಸ್ತಿ ಸಿಕ್ಕಿದವರೆಲ್ಲ ಉಪದ್ರವಿ ಲೇಖಕರಾದರೆ ಅಂಥವರ ಸಂಖ್ಯೆ ಬಹಳಷ್ಟು ಇದೆ! ಇನ್ನೊಂದೆಡೆ ಉಪದ್ರವಿ ಲೇಖಕರಾದ್ದಕ್ಕೇ ನಿಮ್ಮನ್ನು ಸಾಹಿತ್ಯ ಅಕಾಡೆಮಿ ಗೌರವಿಸಿದೆ ಎಂದೂ ಅರ್ಥವಾಗುತ್ತದೆ. ಆದರೆ ಅಕಾಡೆಮಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡುತ್ತಿಲ್ಲ, ಬದಲು ಹತ್ತಿಕ್ಕುತ್ತಿದೆ ಎನ್ನುತ್ತೀರಿ. ಮೊದಲನೆಯದಾಗಿ, ನಿಮ್ಮನ್ನು ಎಕಾಡೆಮಿ ಗೌರವಿಸಿದ್ದು ಯಾಕೆ? ಇದೊಂದು ವಿರೋಧಾಭಾಸವೇ ಸರಿ.

d1ಈ ನಿರುಪದ್ರವಿ ಸಾಹಿತಿಗಳಿಗೆ ಯಾವ ರಾಷ್ಟ್ರೀಯ ಗೌರವವೂ ಸಿಗುವುದಿಲ್ಲ. ಅವರಿಗೆ ನಿಮ್ಮಂಥವರನ್ನು ಕಂಡರೆ ಸ್ವಲ್ಪ ಅಸೂಯೆಯೂ ಇರಬಹುದು—ಇದ್ದರೆ ಅದು ಸ್ವಾಭಾವಿಕವೇ. ಅಲ್ಲದೆ, ನಿಮಗೆ ಪ್ರಶಸ್ತಿ ಬಂದಾಗ ನಿಮಗೆ ಸರಿದೊರೆಯಾದ ಬೇರೆ ಸಾಹಿತಿಗಳು ಯಾರೂ ಇರಲಿಲ್ಲ ಎಂದು ಹೇಳುವುದಕ್ಕೆ ಸಾಧ್ಯವೇ? ಆಯ್ಕೆಯಲ್ಲಿ ಒಬ್ಬರು ಗೆಲ್ಲುತ್ತಾರೆ, ಬೇರೆಯವರು ಸೋಲುತ್ತಾರೆ; ಸೋತವರನ್ನು ಕೆಟ್ಟ ಹೆಸರು ಹಾಕಿ ಹಂಗಿಸುವುದು ಸಂಸ್ಕೃತಿಯಲ್ಲ. ಆದರೆ ಅಂಥದೊಂದು ಸಂಸ್ಕೃತಿ ಇಂದು ಇದೆ! (ಉಪದ್ರವಿ ಸಾಹಿತಿಗಳಲ್ಲಿ ಹಲವರೀಗ ಕೇವಲ ಉಪದ್ರವಿಗಳಾಗಿ ಉಳಿದಿದ್ದಾರೆ ಎನ್ನುವುದೂ ಸತ್ಯ.)

ಎಲ್ಲಾ ಕಡೆ ಕಾಣಿಸುವ ಇನ್ನೊಂದು ರೀತಿಯ ಸ್ವಾತಂತ್ರ್ಯಹರಣ ಬಹುಶಃ ನಿಮಗೆ ಗೋಚರಿಸದು: ಅದು ಐಡಿಯಲಾಜಿಕಲ್ ಒತ್ತಡ. ಇಂಥಿಂಥಾ ರೀತಿಯ ಐಡಿಯಾಲಜಿಗೆ ಬದ್ಧರಾಗಿ ಬರೆದರೇ ಸ್ವೀಕೃತರಾಗುವುದು ಎಂಬ ಭಯದ ವಾತಾವರಣ. ಇದನ್ನು ಎದುರಿಸುವುದು ಹೇಗೆ? ಯಾಕೆಂದರೆ ಇದು ಸಾಂಸ್ಥಿಕವಲ್ಲ; ಇದಕ್ಕೆ ವಿಳಾಸವಿಲ್ಲ, ಫೋನ್ ನಂಬರವಿಲ್ಲ. ಆದರೂ ಇದೆ! ಆದರೂ ನಾವಿದನ್ನೆಲ್ಲ ಎದುರಿಸುತ್ತ ಬಂದಿದ್ದೇವೆ: ಯಾಕೆಂದರೆ ಲೇಖಕರಿಗೆ ಗೊತ್ತಿದೆ, ಅಭಿವ್ಯಕ್ತಿ ಸ್ವಾತಂತ್ರ್ಯವೆನ್ನುವುದು ಯಾರೋ ಇನ್ನೊಬ್ಬರು ಕೊಟ್ಟು ಬರುವುದಲ್ಲ. ಅದು ಅವರವರು ಅಸರ್ಟ್ ಮಾಡುವುದು. ಯಾವ ಪ್ರಶಸ್ತಿಗೂ ಭಾಜನರಾಗದ, ಅದರ ಗೊಡವೆಗೇ ಹೋಗದ `ನಿರುಪದ್ರವಿ’ ಲೇಖಕರಲ್ಲಿ ಇಂಥ ಧೈರ್ಯವಂತರನ್ನು ನೀವು ಕಾಣಬಹುದು. ಬೊಬ್ಬೆ ಹಾಕಿದವನೇ ಪೊಲಿಟಿಕಲ್ ಅಲ್ಲ; ಮಾತನ್ನು ಸರಿಯಾಗಿ, ಸತ್ಯವಾಗಿ ಉಪಯೋಗಿಸುವ ಎಲ್ಲರೂ ಪೊಲಿಟಿಕಲ್.

writer cartoonಕುಂವೀ, ನಾನು ಓದಿದ ನಿಮ್ಮ ಕೆಲವು ಕತೆಕಾದಂಬರಿಗಳಲ್ಲಿ ಕಂಡುಬರುವ ಸಹನೆ, ತನ್ಮಯತೆ, ಸರ್ವವೀಕ್ಷಣತೆ, ಉದಾರತೆ ನಿಮ್ಮ ಸಾರ್ವಜನಿಕ ಮಾತುಗಳಲ್ಲಿ ಕಂಡುಬರುವುದಿಲ್ಲ. ನಮಗೆ ಒಳ್ಳೆಯ ವಿಚಾರಗಳು ಬೇಕೇ ವಿನಾ ಜರೆತ, ನಿಂದನೆ, ಅವಹೇಳನ, ಜಗಳಗಳಲ್ಲ. ಇನ್ನು ಜಗಳ ಬಿಡಿಸಲು ಬಂದವನೇ ಜಗಳಗಂಟಿಯಾದರೆ ಹೇಗೆ?! ಲೇಖಕರು ಮಾತನ್ನು `ಮುತ್ತಿನ ಹಾರ’ದಂತೆ ಬಳಸಬೇಕೇ ವಿನಾ ಖಡ್ಗದಂತೆಯೋ ಸೀಸದ ಗುಂಡಿನಂತೆಯೋ ಅಲ್ಲ. ಅಂಥ ರೂಪಕಗಳೇ ತಪ್ಪು ಸಂದೇಶವನ್ನು ನೀಡುತ್ತವೆ. ಯಾಕೆಂದರೆ ಮಾತನ್ನು ಕಡಿಯಲು, ಕೊಲ್ಲಲು ಬಳಸಿದರೆ, ಕಲ್ಬುರ್ಗಿ ಹಂತಕರಿಗೂ ಈ ಕಟುಕ ಲೇಖಕರಿಗೂ ಏನು ವ್ಯತ್ಯಾಸ?

ಅನಂತಮೂರ್ತಿಯವರು, ಮೋದಿಯವರು ಪ್ರಧಾನಿಯಾದರೆ ತಾವು ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿದಾಗ ನಾನು ಅನಂತಮೂರ್ತಿಯವರಿಗೊಂದು ಪತ್ರ ಬರೆದಿದ್ದೆ: ರೆಟರಿಕ್ನ ಮಟ್ಟ ಎತ್ತರಿಸಬೇಡಿ ಎಂಬುದಾಗಿ, ಯಾಕೆಂದರೆ ಎದುರಾಳಿ ಮತ್ತೆ ಅದಕ್ಕಿಂತಲೂ ದೊಡ್ಡದಾಗಿ ಇನ್ನೊಂದು ರೂಪಕ ಬಳಸುತ್ತಾನೆ. ಇದು ಕೊನೆಗೊಳ್ಳುವುದೆಲ್ಲಿ? ಇದು ಜಗಳವಲ್ಲವೇ? ನೀವು ಯಾರನ್ನಾದರೂ ಬದಲಿಸಬೇಕೆಂದಿದ್ದರೆ ಅವರ ಜತೆ ಮಾತಾಡಬೇಕು—ಮಾತನ್ನೇ ಕಳಕೊಂಡರೆ ಹೇಗೆ? ಲೇಖಕರು ಲೋಕದ ಅಮಾನಿತ ಸಂಸದರೆಂದು ಶೆಲ್ಲಿ ಕರೆದುದುರಲ್ಲಿ ಸತ್ಯವಿದೆ: ಸಂಸದರು ಎಲ್ಲರ ಹಿತವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸಂವಾದ ನಡೆಸುವವರು ಮತ್ತು ಕಾನೂನು ತರುವವರು. ಇಲ್ಲಿ `ಎಲ್ಲರ ಹಿತ’ ಎನ್ನುವುದು ಅತಿ ಮುಖ್ಯ. ಅಭಿವ್ಯಕ್ತಿ ಸ್ವಾತಂತ್ರ್ಯವೂ ಹಾಗೇ: ಅದು ಎಲ್ಲರದೂ—ನಮ್ಮ ಎದುರಾಳಿಗಳದೂ ಕೂಡ.

ವ್ಯಂಗ್ಯ ಚಿತ್ರಗಳ ಕೃಪೆ:

ಪಿ ಮಹಮದ್ ಹಾಗೂ ಆರ್ ಪ್ರಸಾದ್

‍ಲೇಖಕರು admin

October 24, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: