ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಂ ವೀ ಕಾಲಂ : ಹನಸಿಯ ಮಂಗಗಳು

ಇತ್ತೀಚಿನ ದಿವಸಗಳಲ್ಲಿ ಜನಸಾಮಾನ್ಯರು ವ್ಯಾಪಕವಾಗಿ ಬಳಸುತ್ತಿರುವ ಗಾದೆ ಮಾತುಗಳಲ್ಲಿ ಹನಸಿಯ ಮಂಗಗಳು ಎಂಬ ಎರಡು ಶಬ್ದಗಳ ಬಳಕೆ ಹೆಚ್ಚಿರುವುದನ್ನು ನಾವು ಗಮನಿಸಬಹುದು. ಆರಂಭದ ಶಬ್ದ ಗ್ರಾಮ ವಾಚಕವೂ, ಇನ್ನೊಂದು ಶಬ್ದ ಸರ್ವನಾಮವಾಚಕವೂ ಎಂಬುದು ಎಂಥ ದಡ್ಡರಿಗೂ ತಿಳಿಯುವುದು. ಈ ಎರಡು ಶಬ್ದಗಳಿಗೆ ಉತ್ತರಾರ್ಧದಲ್ಲಿರುವ ಕ್ರಿಯಾಪದವನ್ನು ಬದಿಗಿರಿಸಿ ಆ ಎರಡೂ ಪದಗಳ ನಡುವೆ ಇರುವ ಅವಿನಾಭಾವ ಸಂಬಂಧದ ಪೂರ್ವಾಪರವನ್ನು ವಿವೇಚಿಸೋಣ. ಮೊದಲ ಶಬ್ದ ಹನಸಿಯು ಕರ್ನಾಟಕದ ಬಳ್ಳಾರಿ ಜಿಲ್ಲೆಯ ದಕ್ಷಿಣಾತ್ಯದಲ್ಲಿರುವ ಚಿಕ್ಕದೂ, ದೊಡ್ಡದೂ ಅಲ್ಲದ ಒಂದು ಪುಟ್ಟ ಪಟ್ಟಣ. ಅಲ್ಲಿನವರಿಗೆ ನಾವಿಂಥ ದೇಶದವರು, ಇತರೇ ದೇಶಗಳಲ್ಲಿರುವಂತೆ ನಮ್ಮ ದೇಶದಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆವಿರುವುದೆಂಬ ವಿಷಯ ತಿಳಿದಿರಲಿಲ್ಲ, ಪ್ರತಿ ಚುನಾವಣೇಲಿ ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಎಂಬ ತತ್ವದ ಮೇಲೆ ಓಟು ಹಾಕುತ್ತಿದ್ದುದನ್ನು ಹೊರತಪಡಿಸಿದರೆ ಇನ್ನೊಂದು ಉಸಾಬರಿಗೆ ಹೋಗುತ್ತಿರಲಿಲ್ಲ, ಪ್ರಜಾಪ್ರತಿನಿಧಿಗಳ ಪೈಕಿ ಯಾರೊಬ್ಬರೂ ಆ ಊರಿನ ಬಗೆಗಾಗಲೀ, ಅಲ್ಲಿನ ಪ್ರಜೆಗಳ ಬಗೆಗಾಗಲೀ ಗಮನ ಹರಿಸುತ್ತಿರಲಿಲ್ಲ, ಯಾರಾದರು ಕೇಳಿದರೆ ಅವರೇನು ಪುಗಸಟ್ಟೆ ಓಟು ಗುದ್ದಿದ್ದಾರ, ನಾವೇನು ಅವರಿಗೆ ಕುಡಿಸಿಲ್ವಾ, ತಿನಿಸಿಲ್ವಾ ಎಂದು ಪ್ರತಿಕ್ರಿಯಿಸುವುದು ಮಾಮೂಲಾಗಿತ್ತು.
ಈ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಆರಂಭದ ನಾಲ್ಕು ಪಂಚವಾರ್ಷಿಕ ಯೋಜನೆಗಳವಧಿಯ ಯಾವ ಪ್ರಯೋಜನವೂ ಹನಸಿಗೆ ಲಭಿಸಿರಲಿಲ್ಲ. ಈ ಕಾರಣಗಳಿಂದಾಗಿ ರಸ್ತೆಗಳ ಬದಲಿಗೆ ಆ ಊರಿಗೆ ಕಾಲು ಜಾಡುಗಳಿದ್ದವು, ಆ ಊರಿನ ದಾಹವನ್ನು ಎರಡು ಮೈಲಿ ದೂರದಲ್ಲಿ ಕಳೇಬರದೋಪಾದಿಯಲ್ಲಿದ್ದ ಹಳ್ಳ ತೀರಿಸಲು ಶಕ್ತಿ ಮೀರಿ ಶ್ರಮಿಸುತ್ತಿತ್ತು, ಮುಟ್ಟಿ ಸಾಯಬೇಕೆಂದರೂ ಕರೆಂಟಿನ ವಾಸನೆ ಇರಲಿಲ್ಲ, ಬೆಳಕಿಗಾಗಿ ಹಗಲೊತ್ತಿನಲ್ಲಿ ಸೂರ್ಯನನ್ನು ಆಶ್ರಯಿಸುತ್ತಿದ್ದ ಅವರು ರಾತ್ರಿ ಚಿಮಣಿ, ಹರಳೆಣ್ಣೆ ತೈಲಗಳ ಸಹಾಯದಿಂದ ಹಿಡಿ ಬೆಳಕೊಳಗೆ ರಾತ್ರಿಗಳನ್ನು ಕಳೆಯುತ್ತಿದ್ದರು. ಕನಿಷ್ಟ ಸೌಲಭ್ಯಗಳಿದ್ದರೆ ತಾನೆ ಯಾರಾದರು ಹೆಣ್ಣು, ಗಂಡುಗಳ ವಿನಿಮಯ ನಡೆಸಲು ಸಾಧ್ಯ!
ಅಂದ ಮಾತ್ರಕ್ಕೆ ಅಲ್ಲಿ ಮದುವೆಗಳಂಥ ಸಮಾರಂಭಗಳು ನಡೆಯದೆ ಇರುತ್ತಿರಲಿಲ್ಲ, ಓಣಿಗಳ ನಡುವೆ ಹೆಣ್ಣು ಗಂಡುಗಳನ್ನು ಕೊಡುವುದು, ಪಡೆಯುವುದು ಸಾಂಗೋಪಾಂಗವಾಗಿ ನಡೆಯುತ್ತಿತ್ತು. ವರ್ಷಕ್ಕೊಂದು ಸಲವಾದರೂ ಪ್ಲೇಗಮ್ಮ, ದಡಾದಮ್ಮ, ಕಾಲರದಮ್ಮರಂಥ ಅಮ್ಮಂದಿರು ತಮ್ಮ ಮಕ್ಕಳಾದ ಅವರಿಗೆ ಭೇದಿ ಉಣ್ಣಿಸುತ್ತಿದ್ದುದುಂಟು, ವಾಂತಿ ಕುಡಿಸುತ್ತಿದ್ದುದುಂಟು. ಕಾರಣ ಅಲ್ಲಿ ಕಣ್ಣಳತೆಯಲ್ಲಾಗಲೀ, ಕೂಗಳತೆಯಲ್ಲಾಗಲೀ, ಕಾಲಳತೆಯಲ್ಲಾಗಲೀ ಆಸ್ಪತ್ರೆಗಳ ಸುಳಿವಿರಲಿಲ್ಲ, ಇದರಿಂದಾಗಿ ಗ್ರಾಮದ ಹಲವರು ರೋಗರುಜಿಣಗಳಿಂದ ನರಳೀ ನರಳಿ ಸಾವನ್ನು ಮಹಾಪ್ರಸಾದವೆಂದು ಭಾವಿಸುವುದು ಮಾಮೂಲಾಗಿತ್ತು.
ತಮ್ಮನ್ನು ಆಗಾಗ್ಗೆ ಪೀಡಿಸುತ್ತಿದ್ದ ಹಸಿವು, ದಾಹ, ರೋಗರುಜಿಣ, ಅಕಾಲಿಕ ವೃದ್ಯಾಪ್ಯಗಳಂಥ ಸಂಕಟಗಳನ್ನೇ ಹಾಡುಗಳನ್ನಾಗಿ ಪರಿವರ್ತಿಸಿ ತಮ್ಮ ಗ್ರಾಮದ ಹೃದಯ ಭಾಗದಲ್ಲಿ ವೆಂಕಟರಮಣನ ಸಾನ್ನಿಧ್ಯದಲ್ಲೋ, ಊರ ಹೊರಗಡೆ ಇದ್ದ ವೀರಾಂಜನೇಯ ದೇವಳದಲ್ಲೋ ಹಾಡಿಕೊಂಡು ಸಾಂತ್ವನ ಅನುಭವಿಸುತ್ತಿದ್ದರು. ಆದ್ದರಿಂದ ಆ ಊರು ಆರಕ್ಕೇರದೆ, ಮೂರಕ್ಕಿಳಿಯದೆ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿದ್ದ ಹನಸಿಯು ಸ್ವಾಭಿಮಾನದ ಪ್ರತೀಕವಾಗಿತ್ತು. ಅಲ್ಲಿನ ಜನ ‘ಊಮಾಹೇ’ಗೆ ಸಂಬಂಧಿಸಿದ ಅನಿವಾರ್ಯ ಕ್ರಿಯೆಗಳು ಮಾತ್ರ ತಮ್ಮ ಜೀವನದ ಪರಮಪದವೆಂದು ಭಾವಿಸಿ ತಮ್ಮ ಪಾಡಿಗೆ ನಿರಮ್ಮಳವಾಗಿದ್ದರು. ಜನನ ಮರಣಗಳ ನಡುವೆ ತಮಗೆಂದೇ ಇದ್ದ ದುರ್ಗಮ ಹಾದಿಯನ್ನು ನಿರ್ವಿಕಾರ ಚಿತ್ತದಿಂದ ಕ್ರಮಿಸುತ್ತಿದ್ದ ಅವರ್ಯಾರೂ ನಾಳೆ ಕುರಿತಂತೆ ಚಿಂತಿಸುತ್ತಿರಲಿಲ್ಲ!
ಇದೆಲ್ಲ ಹದಿನೈದು ವರ್ಷಗಳ ಹಿಂದಿನ ಮಾತು.

ಸಂಭವನೀಯ ತಾಲ್ಲೂಕು ಕೇಂದ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹನಸಿಯನ್ನು ತಲುಪಲು ಇರುವ ರಸ್ತೆಗಳ ಮೇಲೆ ತುಪ್ಪ ಚೆಲ್ಲಿ ಬಳಿದುಕೊಳ್ಳಬಹುದು, ಎರಡು ಮಹಡಿಯ ಪುರಸಭಾ ಕಛೇರಿಯಲ್ಲಿ ನೂರಾರು ಜನ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ, ನೂರೈವತ್ತು ಹಾಸಿಗೆಯ ಸಾರ್ವಜನಿಕ ಆರೋಗ್ಯಕೇಂದ್ರ ಹಗಲಿರುಳು ರೋಗಿಗಳ ಶುಶ್ರೂಷೆಗಾಗಿ ತುದಿಗಾಲ ಮೇಲೆ ನಿಂತಿದೆ, ಪಟ್ಟಣದ ಆರೂ ಕಡೆ ಇರುವ ಸರ್ಕಾರಿ ಶಾಲೆಗಳೊಂದೇ ಅಲ್ಲದೆ ಸೆಂಟ್ಜಾನ್ ಹೆಸರಿನಲ್ಲಿ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆ ಸಹ ಮಾದರಿ ಶಾಲೆ ತೆರೆಯಲು ನಗರದ ಹೊರವಲಯದಲ್ಲಿ ಹತ್ತೆಕರೆ ನಿವೇಶನವನ್ನು ಕಳೆದ ವರ್ಷ ಖರೀದಿಸಿದೆ. ಕೆಲವು ತಿಂಗಳುಗಳ ಹಿಂದೆ ಪೂರ್ಣಗೊಂಡಿರುವ ಮಿನಿ ವಿಧಾನಸೌಧದ ನೊಸಲ ಮೇಲೆ ಸರ್ಕಾರಿ ಕೆಲಸ ದೇವರ ಕೆಲಸ ಎಂಬ ಮೂರು ಶಬ್ದಗಳ ಪುಟ್ಟ ವಾಕ್ಯವನ್ನು ದೃಷ್ಟಿ ದೋಷವುಳ್ಳವರು ಹತ್ತಿರದಿಂದಲೂ, ಯುವಕರು ಹತ್ತಿರದಿಂದಲೂ ನೋಡಬಹುದಾಗಿದೆ.
ಇವೊಂದೇ ಅಲ್ಲದೆ ನಾಗರಿಕ ಸಮಾಜದ ಅಗತ್ಯಗಳನ್ನು ಪೂರೈಸುವ ಬಾರ್ ಅಂಡ್ ರೆಸ್ಟುರೆಂಟುಗಳು, ರಿಕ್ರಿಯೇಷನ್ ಕ್ಲಬ್ಬುಗಳು, ಕ್ರಿಡಾ ಮೈದಾನಗಳು, ಕ್ರಿಕೆಟ್, ಟೆನಿಸ್, ಕಬಡ್ಡಿಗಳಂಥ ಹೊರಾಂಗಣ, ಒಳಾಂಗಣ ಕ್ರೀಡೆಗಳಿಗೆ ಸಂಬಂಧಿಸಿದ ಸಂಘಗಳು ಸಹ ಇವೆ, ಪಟ್ಟಣದ ಹೊರಗಿನ ಮಾಳಮ್ಮನ ಬಯಲನ್ನು ಹೆಲಿಪ್ಯಾಡನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ, ಒಂದೇ ಮಾತಿನಲ್ಲಿ ಹೇಳುವುದಾದರೆ ಬೆಂಗಳೂರಲ್ಲಿ ಏನೇನಿವೆಯೋ ಆ ಎಲ್ಲಾ ಸವಲತ್ತುಗಳು ಇರುವ ಕಾರಣದಿಂದಾಗಿ ಹನಸಿ ಬಳ್ಳಾರಿ ಜಿಲ್ಲೆಯ ಮುಖ್ಯ ಪಟ್ಟಣಗಳಲ್ಲಿ ಒಂದೆನಿಸಿದೆ.
ಆದರೂ ಮಂಗಗಳು ಎಂಬ ಸರ್ವನಾಮವಾಚಕವು ಹನಸಿ ಎಂಬ ಗ್ರಾಮವಾಚಕದಿಂದ ಬೇರ್ಪಟ್ಟಿಲ್ಲವೆಂಬುದು ಖೇದಕರ ಸಂಗತಿ! ರಾಜ್ಯದಲ್ಲಿ ಹನಸಿ ಹೆಸರಿನ ಮೂರು ಊರುಗಳಿರುವುದರಿಂದಾಗಿ ಕಂದಾಯ ಇಲಾಖೆ ತಮ್ಮ ಆಡಳಿತಾನುಕೂಲಕ್ಕೆ ತಕ್ಕಂತೆ ಮಗ್ಗುಲು ಕೆರೆ ಇರುವ ಕಾರಣಕ್ಕೆ ಕೆರೆ, ಮೊಸರಿಗೆ ಫೇಮೋಸೆಂಬ ಕಾರಣಕ್ಕೆ ಮೊಸರು ಎಂದೆರಡು ಹನಸಿಗಳಿಗೆ ಅವುಗಳಿಗೆ ಪೂರ್ವಪದವಾಗಿ ಸೇರಿಸಿರುವರಷ್ಟೆ, ಆ ಎರಡು ಪೂರ್ವಪದಗಳೇನೋ ಗೌರವಾನ್ವಿತ, ಆದರೆ ತಮ್ಮ ಹನಸಿಗೆ ಅದರ ಉತ್ತರಾರ್ಧದಲ್ಲಿ ಮಂಗಗಳು ಎಂಬ ಅವಮಾನಕರ ಪದವಿರುವುದು ಅವಲಕ್ಷಣವಲ್ಲದೆ ಇನ್ನೇನು! ಹನಸಿಯ ಮಂಗಗಳೋ, ಮಂಗಗಳ ಹನಸಿ ಎಂದು ಕರೆಯುವುದು ತಮ್ಮೂರಿಗಾಗುತ್ತಿರುವ ಅಪಮಾನವಲ್ಲವೆ! ಪರಸ್ಥಳಿಗರು ನಿಮ್ಮದು ಯಾವ ಹನಸಿ ಎಂದು ಕೇಳುವಾಗೆಲ್ಲ ತಮ್ಮದು ಮಂಗಗಳ ಹನಸಿ ಎಂದು ಹೇಳುವುದು ಕೀಳರಿಮೆಗೆ ದಾರಿ ಮಾಡಿಕೊಟ್ಟಂತಾಗುವುದಿಲ್ಲವೆ!
ಈ ಒಂದು ಕಪ್ಪುಚುಕ್ಕಿಯ ಕಳಂಕ ಉತ್ತರೋತ್ತರವಾಗಿ ಮುಂದುವರೆದರೇನು ಗತಿ! ಇದನ್ನು ಮನಗಂಡೇ ಎಲ್ಲಾ ಅಭಿವೃದ್ಧಿಗಳಿಗಿಂತ ಮುಖ್ಯವಾಗಿ ಮಂಗಗಳು ಎಂಬ ಪದದ ವಿರುದ್ಧ ಹೋರಾಡುವ ಸಲುವಾಗಿಯೇ ಸ್ಥಳೀಯವಾಗಿ ಒಂದು ಹೋರಾಟ ವೇದಿಕೆ ಹುಟ್ಟಿಕೊಂಡಿರುವುದು, ಅದರ ಸದಸ್ಯರು ತಿಂಗಳಿಗೊಂದೆರಡು ಸಲವಾದರೂ ಮಂಗಗಳು ಎಂಬ ಪದವನ್ನು ಅಧಿಕೃತವಾಗಿ ಉತಾರ ಮಾಡುವುದರ ಮೂಲಕ ತಮ್ಮೂರಿನ ಮಾನ ಮರ್ಯಾದೆಯನ್ನು ಕಾಪಾಡಬೇಕೆಂದೂ, ತಿಂಗಳೊಳಗೆ ಮಾಡದಿದ್ದಲ್ಲಿ ತಮ್ಮ ಸಂಘ ಉಗ್ರಹೋರಾಟ ಹಮ್ಮಿಕೊಳ್ಳುವುದೆಂದೂ ಅಧಿಕಾರಿಗಳಿಗೆ, ಜನಪ್ರತಿನಿಧಿಗಳನ್ನು ಎಚ್ಚರಿಸುತ್ತಲೇ ಇರುವರು. ಹನಸಿಗೂ, ಮಂಗಳಿಗೂ ನಡುವೆ ಇರುವ ಅವಿನಾಭಾವ ಸಂಬಂಧ ಕುರಿತಂತೆ ಮುಂದೆ ಚರ್ಚಿಸಿದರಾಯಿತು.
ಆದರೂ ಮಂಗಗಳ ಹನಸಿಯಲ್ಲಿ ಈ ಎಲ್ಲ ಅಭಿವೃದ್ಧಿಯಾಗಿರುವುದು ಕೇವಲ ಹತ್ತುಹದಿನೈದು ವರ್ಷಗಳಲ್ಲಿ ಎಂದರೆ ಎಂಥವರಿಗೂ ಆಶ್ಚರ್ಯವಾಗಬಹುದು. ಗುಣಸಾಗರದಲ್ಲಿ ಇತ್ತೀಚೆಗಷ್ಟೆ ಸ್ಥಾಪನೆಗೊಂಡಿರುವ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯವು ಹನಸಿಯ ಸರ್ವಾಂಗೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಎರಡು ಪಿಹೆಚ್ಡಿ ಮಹಾಪ್ರಬಂಧಗಳನ್ನೂ, ಐದು ಎಂಫಿಲ್ ಪ್ರಬಂಧಗಳನ್ನೂ ಪ್ರಕಟಿಸಿರುವುದಲ್ಲದೆ ಅದಕ್ಕೆ ಸಂಬಂಧಿಸಿದ ಭಾಷೆ, ಅಲ್ಲಿನ ಗಾದೆಮಾತುಗಳು, ಒಡಪುಗಳು, ಅಲ್ಲಿನ ವಿಶಿಷ್ಟ ಜೀವನ ಶೈಲಿ, ನಾಗರಿಕತೆಯ ನೇಪಥ್ಯಕ್ಕೆ ಸರಿಯುತ್ತಿರುವ ಸಂಪ್ರದಾಯಗಳು, ಅಲ್ಲಿನ ಜೀವವೈವಿಧ್ಯತೆ, ಅಲ್ಲಿನ ಹುಟ್ಟು ಸಾವಿಗೆ ಸಂಬಂಧಿಸಿದ ನಂಬಿಕೆಗಳು, ಅಲ್ಲಿನ ಐತಿಹ್ಯಗಳು, ಇವೇ ಮೊದಲಾದ ವಿಷಯಗಳು ಕುರಿತಂತೆ ಅಧ್ಯಯನ ನಡೆಸುತ್ತಿದೆ. ನೂರಾರು ವರ್ಷಗಳಿಂದ ಕುಗ್ರಾಮ, ದಟ್ಟ ದರಿದ್ರ ಗ್ರಾಮ, ಸುಡುಗಾಡಿಗೆ ಹೇಳಿ ಮಾಡಿಸಿದಂತಿರುವ ಗ್ರಾಮವೆಂದು ಕುಖ್ಯಾತವಾಗಿದ್ದ ಮಂಗಗಳ ಹನಸಿ ಕೇವಲ ಕೆಲವೇ ವರ್ಷಗಳಲ್ಲಿ ಇಷ್ಟೆಲ್ಲಾ ಅಭಿವೃದ್ಧಿ ಸಾಧಿಸಿರುವುದು ಆಶ್ಚರ್ಯಕರ ಸಂಗತಿಯಲ್ಲವೆ!
ಅದಕ್ಕಿರುವ ಕಾರಣಗಳನ್ನು ಒಬ್ಬೊಬ್ಬರು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆಗೊಳಪಡಿಸಿರುವರು, ತಮ್ಮ ಮೂಗಿನ ನೇರಕ್ಕಲ್ಲ, ವಸ್ತುನಿಷ್ಠವಾಗಿ. ಅವರೆಲ್ಲಾ ಕಾರಣಗಳೊಡಳಗೆ ಎಲ್ಲರೂ ಒಪ್ಪಬಹುದಾದಂಥ ಸಾಮಾನ್ಯ ಸೂತ್ರ ಹಾಸುಹೊಕ್ಕಾಗಿದೆ, ಅದು ಕೆಲವು ಕಡೆ ವೈವಿಧ್ಯತೆಯಿಂದಲೂ, ಕೆಲವು ಕಡೆ ಅಭಾಸಗಳಿಂದಲೂ ಕೂಡಿದೆ, ಅದು ಸಾಮಾನ್ಯವೆ! ಯುಜಿಸಿ ನೆರವಿನಿಂದ ವಿಶ್ವವಿದ್ಯಾಲಯದ ಆಂಜನೇಯ ಸಭಾಂಗಣದಲ್ಲಿ ಷಣ್ಮಾಸಿಕವಾಗಿ ನಡೆಯುವ ವಿಚಾರ ಸಂಕಿರಣಗಳಲ್ಲಿ ಮಂಡಿಸಲ್ಪಡುವ ಸಂಶೋಧನಾ ಪ್ರಬಂಧಗಳಲ್ಲಿ ಮಂಗಗಳ ಹನಸಿಯ ಪ್ರಸ್ತಾಪ ಬೆನ್ನೆಲುಬಿನೋಪಾದಿಯಲ್ಲಿದ್ದೇ ಇರುತ್ತದೆ. ಎಲ್ಲಾ ಸ್ನಾತಕರು ಯುಜಿಸಿಯಿಂದ ಲಕ್ಷಾಂತರ ಅನುದಾನಪಡೆದು ಅನೇಕ ವರ್ಷಗಳ ಕಾಲ ಹನಸಿಯಲ್ಲಿದ್ದು ಅದರ ಪೂವರ್ಾಪರ ಜಾಲಾಡಿರುವರು. ಅವರಲ್ಲಿ ಮುಖ್ಯವಾದವರೆಂದರೆ ಪ್ರೊ.ಮಂಠಾಳ್ ಮತ್ತು ಡಾ. ಮಾರುತಿರಾವ್ ಸಿದ್ದೋಟಿಯವರು.
ಭೌತವಿಜ್ಞಾನಿಗಳೂ, ಸ್ವತಃ ಜ್ಯೋತಿಷಿಯೂ ಆಗಿರುವ ಪ್ರೊ.ಮಂಠಾಳರ ಸಂಶೋಧನಾ ಪ್ರಬಂಧದಲ್ಲಿ ವ್ಯಕ್ತವಾಗಿರುವ ಅಂಶಗಳು ಆಸಕ್ತಿಕರವಾಗಿವೆಯಲ್ಲದೆ ಡಾ.ಅಲಿಪಿರಿಯರಂಥ ಎಡಪಂಥೀಯ ಚಿಂತಕರನ್ನು ಹುಬ್ಬೇರಿಸುವಂತೆ ಮಾಡಿವೆ. ಅದಕ್ಕಿರುವ ಕಾರಣಗಳನ್ನು ಒಂದೊಂದಾಗಿ ಹೇಳುವುದಾದರೆ! ಕೆಲವು ಪ್ರಾಗೈತಿಹಾಸಿಕ ದಾಖಲೆಗಳ ಪ್ರಕಾರ ಹನಸಿಯ ಇತಿಹಾಸ ಕ್ರಿಸ್ತಪೂರ್ವ ಹಿಂದಕ್ಕೆ ಹೋಗುವುದಂತೆ! ಹನಸಿಯ ನಾಗರಿಕತೆಗೂ, ಹರಪ್ಪ ಮೆಹೆಂಜೊದಾರ ನಾಗರಿಕತೆಗೂ ಸಾಮ್ಯವಿರುವುದಂತೆ! ದ್ರಾವಿಡರನ್ನು ಮಣಿಸುತ್ತ ಬಂದ ಆರ್ಯರು ನೆಲೆಸಿದ್ದು ಇಲ್ಲಿಯಂತೆ! ಗ್ರಹ, ನಿಹಾರಿಕೆಗಳ ಚಲನವಲನದ ಮೇಲೆ ಅಧ್ಯಯನ ನೆಡಿಸಿ ಅವರು ಬರೆದಿರಬಹುದಾದ ತಾಳೆಗರಿಯೋಲೆ ಗ್ರಂಥಗಳು ಕ್ರಿಸ್ತಶಕ ಎರಡನೇ ಶತಮಾನದ ಆದಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ನಾಶವಾದವಂತೆ! ಹೀಗೆ ಸುಮಾರು ಹಲವು ತಾಸುಗಳ ಕಾಲ ವಾದ ಮಂಡಿಸಿ ಕೇಳುಗರನ್ನು ನಿಬ್ಬರಗಾಗಿಸುವ ಮಂಠಾಳೆಯವರ ತಮ್ಮ ಈ ಸಂಶೋಧನೆಗೆ ಕಾಶಿ ವಿಶ್ವವಿದ್ಯಾಲಯವು ಪ್ರಶಸಿಪಲಕ ನೀಡಿರುವುದಲ್ಲದೆ ಅವರಿಗೆ ಸಂಶೋಧನಾ ರತ್ನಾಕರ ಎಂಬ ಬಿರುದನ್ನೂ ನೀಡಿರುವುದಂತೆ!
ಹನಸಿ ಅಧ್ಯಯನ ಸಿಂಡ್ರೋಮ್ನಿಂದ ಬಳಲುತ್ತಿರುವ ಮಂಠಾಳೆಯವರು ತಮ್ಮ ಲೆದರ್ ಬ್ಯಾಗಿನಲ್ಲಿ ಗೇಣುದ್ದಗಲದ ತಾಮ್ರ ಶಾಸನವನ್ನಿಟ್ಟುಕೊಂಡು ತಮ್ಮ ಪ್ರಬಲ ಪ್ರತಿಸ್ಪರ್ಧಿ ಅಲಿಪಿರಿಯವರೊಂದಿಗೆ ಚರ್ಚಿಸಲು ತುದಿಗಾಲ ಮೇಲೆ ನಿಂತು ಕಾಯುತ್ತಲೇ ಇರುವರು. ಆ ಶಾನಸದಲ್ಲಿ ಅಕ್ಷರಗಳು ಮೂಡಿದಾಗ ಬಂದು ಚರ್ಚಿಸುವೆ ಎಂಬುದು ಅಲಿಪಿರಿಯವರ ವಾದ. ವಾದೋಪವಾದ ಏನೇ ಇರಲಿ, ಸಾಕ್ಷ್ಯಾಧಾರಗಳಿರಲಿ, ಇಲ್ಲದಿರಲಿ, ಮಂಠಾಳೆಯವರನ್ನು ಕೆಲವರು ಸ್ಪಿಲ್ಬಗರ್ನ ಹ್ಯಾರಿಸನ್ ಫೋಡರ್ಗೆ ಹೋಲಿಸುವರು, ಅವರ ಸಂಶೋಧನೆ ಏನಾದರು ಹಾಲಿವುಡ್ ನಿರ್ಮಾಕರ ಕಣ್ಣಿಗೇನಾದರೂ ಬಿದ್ದರೆ ಥ್ರಿಲ್ಲರ್ ಸಿನೆಮಾ ಮಾಡುವರೆಂದು ಖುದ್ದ ಅವರೆದುರಿಗೆ ಹೇಳಿಕೊಂಡಿರುವುದುಂಟು, ಅದೇನು ಮೆಚ್ಚುಗೆಯೋ, ವ್ಯಂಗ್ಯವೋ! ಅಣಕವೋ! ಆದರೆ ಮಂಠಾಳರು ಮಾತ್ರ ಅಂಥ ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸಿ ತಮ್ಮ ಸಂಶೋಧನಾ ಮಹಾಪ್ರಬಂಧವನ್ನು ಇಂಗ್ಲೀಷ್ ಲೇಖಕರಾದ ಡಾ.ತಿರುಬುಡೆಯವರಿಂದ ಅನುವಾದ ಮಾಡಿಸುತ್ತಿರುವರು. ಇನ್ನೆರಡನೆಯದಾಗಿ ಡಾ. ಸಿದ್ದೋಟಿಯವರ ಸಂಶೋಧನೆಯನ್ನು ಪರಿಶೀಲಿಸುವುದಾದರೆ!
ಅವರಿವರಂತೆ ಡಾ.ಸಿದ್ದೋಟಿಯವರು ತಮ್ಮ ಸಂಶೋಧನೆಗೆ ಹಣಕಾಸು ನೆರವು ಪಡೆಯುವ ಸಲುವಾಗಿ ಯುಜಿಸಿಗೆ ಮನವಿ ಸಲ್ಲಿಸಿದರಾದರೂ ತಂತ್ರಿಕ ಕಾರಣಗಳಿಂದಾಗಿ ಸಕಾಲಕ್ಕೆ ನೆರವು ದೊರಕಲಿಲ್ಲ. ಅವರಿಗೆ ಜನ್ಮದಾರಾಭ್ಯ ಹನಸಿ ಒಂದು ಕ್ರಿಮಿಯೋಪಾದಿಯಲ್ಲಿ ಅವರ ತಲೆಯನ್ನು ಕೊರೆಯುತ್ತಲೇ ಇತ್ತು. ಬಿಡುವು ದೊರಕಿದಾಗಲೆಲ್ಲ ಅವರು ಹನಸಿಗೆ ಹೋಗುವುದು, ಬರುವುದನ್ನು ಮಾಡುತ್ತಿದ್ದರು. ಅಲ್ಲಿಗೆ ಹೋದಾಗಲೆಲ್ಲ ಅಲ್ಲಿನ ಪ್ರಸಿದ್ಧ ಶ್ರೀವೀರಾಂಜನೇಯ ಬೋರ್ಡಿಂಗ್ ಅಂಡ್ ಲಾಡ್ಜಿಂಗ್ ಎಂಬ ಹೆಸರಿನ ಹೋಟಲ್ನಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಅದರ ಮಾಲಕರಾದ ಶ್ರೀಯುತ ಚಿರಂಜೀವಿಸಿಂಗರವರೂ (ಅವರ ಮೂಲ ಹೆಸರು ಮುದುಕಪ್ಪ ಎಂಬ ಅನಾಕರ್ಷಕ ಹೆಸರು, ತಮ್ಮ ಊರು, ತಮ್ಮೂರಿನ ವಾಣಿಜ್ಯ ಚಟವಟಿಕೆಗಳು ಮಂದ್ರಸ್ಥಾಯಿಯಿಂದ ತಾರಕ್ಕೇರಿದಂತೆ ಮೊದಲು ಚಿರಂಜೀವಿ ಎಂದೂ ಅದಾದ ಐದು ವರ್ಷಗಳ ಬಳಿಕ ಸಿಂಗ್ ಎಂದೂ ತಮ್ಮ ಲೀಗಲ್ ಅಡ್ವೈಜರ್ ಮೂಲಿಮನಿ ಸಿದ್ದರಾಜುರವರ ಸಲಹೆ ಮೇರೆಗೋ, ಸ್ಥಳೀಯ ಜ್ಯೋತಿಷಿ ಹನುಮಂತರಾಯವರ ಸಲಹೆ ಮೇರೆಗೋ ಬದಲಾಯಿಸಿಕೊಂಡು ಅದೇ ಹೆಸರಿನಲ್ಲಿ ಪ್ರಸಿದ್ದರಾಗಿದ್ದರು) ಹವ್ಯಾಸಿ ಸಂಶೋಧಕರೆ!
ತಮ್ಮ ಬಿಡುವಿನ ವೇಳೆಯನ್ನು ಹಳೆಯ ವಿಗ್ರಹಗಳನ್ನು ನೋಡುವ, ಶಿಲಾಶಾಸನಗಳನ್ನು ಓದುವ ಸಲುವಾಗಿ ಮೀಸಲಿರಿಸಿದ್ದರು. ತಮ್ಮ ಚಾರಣ ಸದೃಶ ಓಡಾಟದ ಸಂದರ್ಭದಲ್ಲಿ ಅನಾಥವೆಂದು ಕಂಡುಬಂದ ಶಿಲೆಗಳ ತುಂಡುತುಕುಡಿಗಳನ್ನು ತಂದು ತಮ್ಮ ಮನೆಯಲ್ಲಿರಿಸಿಕೊಂಡು ಅವರಿವರಿಗೆ ತೋರಿಸುತ್ತ ವಿಲಕ್ಷಣ ರೀತಿಯಲ್ಲಿ ಆನಂದಿಸುತ್ತಿದ್ದರು. ಈ ಕಾರಣಕ್ಕಾಗಿಯೇ ಅವರೂ ಮತ್ತು ಅವರ ಹೋಟಲ್ಲೂ ಸಿದ್ದೋಟಿಯವರಿಗೆ ಹಿಡಿಸಿದ್ದು. ಕಾಲದ ಮಹಿಮೆ ಹೀಗೆಯೇ ಎಂದು ಹೇಳಲಿಕ್ಕಾಗದು ಎಂಬುದಕ್ಕೆ ತದನಂತರ ನಡೆದ ಘಟನೆಗಳೇ ಸಾಕ್ಷಿ! ಅವರಿಗೆ ಇವರು ಹಿಡಿಸಿದರೋ, ಇವರಿಗೆ ಅವರು ಹಿಡಿಸಿದರೋ! ಮುಂದೊಂದು ದಿವಸ ಶುಭ ಮುಹೂರ್ತದಲ್ಲಿ ಸಿದ್ದೋಟಿಯವರು ಸಿಂಗ್ರವರ ಪಂಚಮ ಸುಪುತ್ರಿ ಅಂಜನಾದೇವಿಯನ್ನು ಪಂಚಭೂತಗಳ ಸಮಕ್ಷಮದಲ್ಲಿ ವಿವಾಹವಾದರು. ಸಿಂಗ್ ಅವರಿಗೆ ಬರೀ ಹೆಣ್ಣು ಸಂತಾನ. ಅಳಿಯರೆಂದರೂ ಇವರೆ, ಮಗ ಅಂದರೂ ಇವರೆ! ವಿವಾಹವಾದ ಬಳಿಕ ಸಿದ್ದೋಟಿಯವರ ಸಂಶೋಧನೆಗೆ ಹೊಸ ತಿರುವು ದೊರಕಿತು.
ಒಂದು ಕಾಲದಲ್ಲಿ, ಅಂದರೆ ಎರಡು ಮೂರು ದಶಕಗಳ ಹಿಂದೆ!
ಹನಸಿಯ ಹೃದಯ ಭಾಗದಲ್ಲಿ ವೆಂಕಟೇಶ್ವರ ದೇವಸ್ಥಾನ ಹೊರತು ಪಡಿಸಿದರೆ ಗ್ರಾಮದ ಗಡಿಗಂಟಿಕೊಂಡಂತೆ ಐದಾರು ಮಾರುತಿಗೆ ಸಂಬಂಧಿಸಿದ ಗುಡಿಗಳಿದ್ದವು, ಪ್ರಸನ್ನಾಂಜನೇಯ, ಭಕ್ತಾಂಜನೇಯ, ವರದಾಂಜನೇಯ ಇತ್ಯಾದಿ. ಆದರೆ ಗ್ರಾಮದ ನೈರುತ್ಯ ದಿಕ್ಕಿನಲ್ಲಿದ್ದ ವೀರಾಂಜನೇಯ ಮಾತ್ರ ತನ್ನ ಪವಾಡಗಳಿಂದಾಗಿ ಸದರಿ ಗ್ರಾಮದಲ್ಲೊಂದೇ ಅಲ್ಲದೆ ಸುತ್ತಮುತ್ತಲ ಊರುಗಳಾದ ಗುಂಡುಮುಳುಗು, ಬಡೇಲಡಕು, ಸಿರಬಿ, ಹ್ಯಾಳ್ಯಾಗಳಲ್ಲೂ ತನ್ನ ವಸಾಹತು ಸ್ಥಾಪಿಸಿದ್ದ. ಪ್ರತಿ ಶನಿವಾರ ಅವರಿವರ ದೇಹಗಳಲ್ಲಿ ಕಾಣಿಸಿಕೊಂಡು ಕಾರಣಿಕ ನುಡಿಯುತ್ತಿದ್ದ, ಹರಕೆ ಹೊತ್ತವರ ಸಮಸ್ಯೆಗಳಿಗೆ ಸಕಾರಾತ್ಮಕ ರೀತಿಯಲ್ಲಿ ಸ್ಪಂದಿಸುತ್ತಿದ್ದ. ಆದ್ದರಿಂದಾಗಿ ಆತನ ಗುಡಿ ಇತರೇ ಆಂಜನೇಯಂದಿರ ಗುಡಿಗಳಿಗಿಂತ ಸುಭದ್ರ ಸ್ಥಿತಿಯಲ್ಲಿತ್ತು. ಅದರ ಅರ್ಚಕರಾದ ಶ್ರೀಯುತ ವೆಂಕೋಬರಾಯರು ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ ತಕ್ಕಮಟ್ಟಿಗಿದ್ದು ದಕ್ಷಿಣೆ ರೂಪದ ಆದಾಯವನ್ನು ಬಡಬಗ್ಗರಿಗೆ ಬಡ್ಡಿಚಕ್ರಬಡ್ಡಿ ರೂಪದಲ್ಲಿ ಧನ ಸಹಾಯ ಮಾಡುತ್ತಿದ್ದರು.
ಆದರೆ ಉಳಿದಾಂಜನೇಯಗಳ ಅರ್ಚಕರ ಪರಿಸ್ಥಿತಿ ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ ಚೆನ್ನಾಗಿರಲಿಲ್ಲ, ತಮ್ಮನ್ನು, ತಮ್ಮ ಆಂಜನೇಯಂದಿರನ್ನೂ ಭಕ್ತಾದಿಗಳು ಮೂಸಿದರೆ ತಾನೆ ತಾವು ಚೆನ್ನಾಗಿರಲು ಸಾಧ್ಯ! ಅಂದ ಮಾತ್ರಕ್ಕೆ ಭಕ್ತರು ತಮ್ಮ ದೇವಾಲಯಗಳಿಗೆ ಬರುತ್ತಿರಲಿಲ್ಲವೆಂದರ್ಥವಲ್ಲ, ಕಾಟಾಚಾರಕ್ಕೆ ಬರುತ್ತಿದ್ದರು, ಬಂದವರು ಬೇಕು ಬೇಕು ಬೇಡ ಬೇಡವೋ ಎಂಬಂತೆ ಪೂಜೆ ಸಲ್ಲಿಸಿ ಚಿಲ್ಲರೆಯನ್ನು ದಕ್ಷಿಣೆ ರೂಪದಲ್ಲಿ ಮಂಗಳಾರತಿ ತಟ್ಟೆಗೆ ಬಿಸ್ಯಾಕಿ ಹೋಗುತ್ತಿದ್ದರೇ ಹೊರತು, ಅರ್ಚಕರೇ ನೀವು ಸತ್ತಿರುವಿರಾ, ಬದುಕಿರುವಿರಾ ಎಂದು ಕ್ಷೇಮಲಾಭ ವಿಚಾರಿಸುವ ಕನಿಷ್ಟಮಟ್ಟದ ಸೌಜನ್ಯವನ್ನೂ ತೋರಿಸುತ್ತಿರಲಿಲ್ಲ. ಅಂದ ಮೇಲೆ ಪರಸ್ಪರ ಕುರುಬುವುದು ಸಹಜ ತಾನೆ! ಆ ದೇವರ ವಿರುದ್ದ ಈ ದೇವರು, ಈ ದೇವರ ವಿರುದ್ದ ಆ ದೇವರು ಹಲ್ಲುಮಸೆಯುವುದೂ ಸಹ ಸಹಜ ತಾನೆ! ಈ ಎಲ್ಲಾ ಧಾಮರ್ಿಕ, ಅಲೌಕಿಕ ಕಚ್ಚಾಟಗಳ ಫಲವಾಗಿಯೋ ಅಥವಾ ಇನ್ಯಾವುದೋ ಕಾರಣಗಳಿಂದಾಗಿಯೋ ಹನಸಿ ತನ್ನ ಮೇಲ್ಮೈಲಕ್ಷಣಗಳನ್ನು ಬದಲಾಯಿಸಿಕೊಳ್ಳುತ್ತ ಹೋಯಿತು ಅಂದರಷ್ಟೇ ಸಾಲದು!

ಹೀಗೆ ಸಾಗುವುದು ಸಿದ್ದೋಟಿಯವರ ಸಂಶೋಧನೆಯ ಆರಂಭದ ಪೀಠಿಕಾಪ್ರಕರಣವು. ಅಂತಿಮವಾಗಿ ತಾನು ಐತಿಹಾಸಿಕವೆನ್ನಬಹುದಾದ ಯಾವ ನಿರ್ಣಯಕ್ಕೆ ಬಂದರೆಂದರೆ ಹನಸಿಯ ಸರ್ವಾಂಗೀಣ ಅಭಿವೃದ್ಧಿಗೆ ಅಲ್ಲಿ ಅಸಂಖ್ಯಾತವಾಗಿರುವ ಮಂಗಗಳೇ ಕಾರಣ! ಇದಕ್ಕೆ ಪೂರಕವಾದ ಅಂಶಗಳು ಕೃತಿಯ ಐದುನೂರಕ್ಕೂ ಹೆಚ್ಚುಪುಟಗಳಲ್ಲಿ ಹರಡಿರುವವು. ಸಿದ್ದೋಟಿಯವರು ಡಾಕ್ಟರೇಟ್ ಪಡೆಯಲಿಕ್ಕೆಂದೇ ‘ಹನಸಿ: ಒಂದು ಸಮಗ್ರ ಅಧ್ಯಯನ’ ಎಂಬ ಮಹಾಪ್ರಬಂಧವನ್ನು ರಚಿಸಿದ್ದು, ಅದನ್ನು ಗುಣಸಾಗರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಗಡಾದ ಅವರು ಇತರೇ ವಿಶ್ವವಿದ್ಯಾಲಯಗಳ ಇತಿಹಾಸ ವಿಭಾಗದ ಪರಿಣತರಿಗೆ ಕಳಿಸಿದರು. ಅದನ್ನು ಪರಿಶೀಲಿಸಿದ ಕೆಲವರ ಹುಬ್ಬುಗಳು ಶಾಶ್ವತವೆಂಬಂತೆ ಮೇಲೆರದೆ ಇರಲಿಲ್ಲ. ಸಿದ್ದೋಟಿಯವರನ್ನು ತಾವಿರುವಲ್ಲಿಗೆ ಬರಮಾಡಿಕೊಂಡು ನಿಮಗೆ ಒಂಚೂರಾದರು ಬುದ್ದಿ ಇದೆ ಏನ್ರಿ? ಅಭಿವೃದ್ಧಿ ಪಥದಲ್ಲಿ ಒಂದೇ ಸಮನೆ ಸಾಗುತ್ತಿರುವ ಹನಸಿಯ ಸವರ್ಾಂಗೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಅಲ್ಲಿನ ಮಂಗಗಳು ಎಂದು ಪ್ರಬಂಧದುದ್ದಕ್ಕೂ ಪ್ರತಿಪಾದಿಸಿರುವಿರಲ್ಲ! ಬುದ್ದಿ ಇದೆ ಏನು ನಿಮಗೆ ಎಂದು ಒಬ್ಬರು ಕೇಳಿದರೆ, ಇನ್ನೊಬ್ಬರು ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳು ತ್ರಿಕರಣಪೂರ್ವಕವಾಗಿ ಶ್ರಮಿಸದಿದ್ದಲ್ಲಿ ಹನಸಿ ಅಭಿವೃದ್ದಿಯಾಗುತ್ತಿತ್ತೇನು! ಸಂಶೋಧನೆಯಲ್ಲಿ ಅವರ ಪ್ರಸ್ತಾಪ ಇಲ್ಲವಲ್ಲ ಎಂದು ತರಾಟೆ ತೆಗೆದುಕೊಂಡರು. ಅವರು ಕೇಳಿದ ಪ್ರಶ್ನೆಗಳಿಂದಾಗಿ ಮೊದಲೇ ಹೈರಾಣಾಗಿದ್ದ ಸಿದ್ದೋಟಿಯವರು ಮತ್ತಷ್ಟು ಹೈರಾಣಾಗದೆ ಇರಲಿಲ್ಲ. ಆದರೂ ಎದೆಗುಂದದೆ..
ಸಾರ್, ಐದು ವರ್ಷಗಳ ಪರಿಶ್ರಮದಿಂದ ಮಾಡಿರುವ ಸಂಶೋಧನೆ ಇದು. ಹನಸಿ ಅಭಿವೃದ್ದಿ ನೇಪಥ್ಯದಲ್ಲಿರುವುದು ಮಂಗಗಳೇ ಹೊರತು ಯಾವ ರಾಜಕಾರಣಿಗಳಲ್ಲ, ಅಲ್ಲಿನ ಅನೇಕ ಶತಾಯುಷಿಗಳನ್ನು ಸಂದರ್ಶಿಸಿ ಮಾಹಿತಿ ಸಂಗ್ರಹಿಸಿರುವೆ ಎಂದು ಎದೆಗುಂದದೆ ಉತ್ತರಿಸಿದ ಸಿದ್ದೋಟಿ.
ಹಾಗಿದ್ರೆ ಅಲ್ಲಿನ ಮಂಗಗಳನ್ನು ಸಂದರ್ಶಿಸಿರಬಹುದಲ್ಲವೆ ಎಂದೊಬ್ಬ ಪರಿಣತ ನಗೆ ಚಟಾಕಿ ಸಿಡಿಸಿದ. ಅದಕ್ಕೆ ಎಲ್ಲರೂ ನಗಾಡಿದರು.
ಹೌದು ಸಾರ್, ಅಲ್ಲಿನ ಮಂಗಗಳ ಚಲನವಲನ, ಅವುಗಳ ನಡೆನುಡಿ ಕುರಿತಂತೆಯೂ ಅಧ್ಯಯನ ಮಾಡಿರುವೆನು. ಅದೊಂದು ಇಂಟರೆಸ್ಟಿಂಗ್ ಅನುಭವ, ರಾಜಕಾರಣಿಗಳಿಗಿಂತ ಅಲ್ಲಿನ ಮಂಗಗಳು ಹೆಚ್ಚು ಪಾರದರ್ಶಕ, ಹೆಚ್ಚು ಮಾನವೀಯ ಎಂದು ಗಂಬೀರವಾಗಿಯೇ ಹೇಳಿದ.
ಹಾಗಿದ್ರೆ ಅವುಗಳನ್ನೂ ಸಂಶೋಧನೆ ಸಮರ್ಥನೆಗೆ ಪೂರಕವಾಗಿ ಸಾಕ್ಷ್ಯ ಹೇಳಲು ಕರಕೊಂಡು ಬರಬಹುದಿತ್ತಲ್ಲವೆ!
ಕರಕೊಂಡು ಬರುವುದೇನು ದೊಡ್ಡ ವಿಷಯವಲ್ಲ ಸಾರ್, ಆದರೆ ಅವುಗಳ ಭಾಷೆ ನಮ್ಮಂಥ ಮಾನವರಿಗೆ ಅರ್ಥವಾಗಬೇಕಲ್ಲ! ಅದೇ ಸಮಸ್ಯೆ
ಓಹೋ ಹಾಗೋ ಸಮಾಚಾರ
ಒಳ್ಳೆ ತಮಾಷೆಯಾಗಿ ಕಣಯ್ಯಾ ನಿನ್ನ ವಾದ
ನೀನು ಸಂಶೋಧಾನಾಕೃತಿಯೊಳಗಡೆ ರೋಮಾಂಚಕಾರಿ ಕಾದಂಬರೀನ ಬರೆದಿರುವಂತಿದೆ
ನಿನ್ನ ಶ್ರಮವನ್ನು ನಾವು ಅಲ್ಲಗಳೆಯುತ್ತಿಲ್ಲಪ್ಪಾ, ಆದರೆ ನೀನು ಸಂಶೋಧನೆಯುದ್ದಕ್ಕೂ ಮಂಗಗಳನ್ನು ಸಮರ್ಥಿಸುವುದು ಮಾತ್ರ ಪ್ರಶ್ನಾರ್ಹ. ಅವುಗಳಿಗೂ ನಿನಗೂ ಏನು ಲಿಂಕೂಂತ ಎಂದು ತಲಾ ಒಬ್ಬೊಬ್ಬರು ಮಾತಾಡಿದರು.
ಸಾರ್ ಮನುಷ್ಯರಿಗಿಂತ, ಮುಖ್ಯವಾಗಿ ರಾಜಕಾರಣಿಗಿಂತ ಮಂಗಗಳು ತುಂಬಾನೆ ಬ್ರೀಲಿಯಂಟ್ಸು ಸಾರ್, ಮಂಗಗಳಿಂದ ನಮ್ಮಂಥ ರಾಜಕಾರಣಿಗಳು ಕಲಿಯೋದು ಸಾಕಷ್ಟಿರುವುದೆಂದು ಖುದ್ದ ಮುಖ್ಯಮಂತ್ರಿಗಳೇ ಸಾರ್ವಜನಿಕ ಸಮಾರಂಭದಲ್ಲಿ ಅಪ್ಪಣೆ ಕೊಡಿಸಿದ್ದಾರೆ. ಇದರ ವಿಡಿಯೋ, ಆಡಿಯೋ ದಾಖಲೆ ನನ್ನ ಬಳಿ ಇದೆ, ಸಂಶೋಧನೆ ಅನುಬಂಧದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳೊಂದಿಗೆ ನಾನು ಸುದೀರ್ಘವಾಗಿ ನಡೆಸಿದ ಸಂಭಾಷಣೆಯ ಪೂರ್ಣಪಾಠವಿದೆ, ಅದನ್ನು ತಾವು ದಯವಿಟ್ಟು ಗಮನಿಸಿ ಸಾರ್ ಎಂದು ಸಿದ್ದೋಟಿಯವರು ವಿಚಲಿತರಾಗದೆ ಸಮಾಧಾನ ನೀಡಿದರು.
ತುಸು ಹೊತ್ತ ಮೌನ ಆವರಿಸಿತು. ಪರಸ್ಪರ ಮುಖ ನೋಡಿಕೊಂಡರು, ಬಳಿಕ ತಮ್ಮ ಆರನೆ ಇಂದ್ರಿಯದ ಮೂಲಕ ಸಂಶೋಧಕನನ್ನು ಅಪಾದಮಸ್ತಕ ದಿಟ್ಟಿಸಿದರು. ಅವರ ಪೈಕಿ ಪ್ರೊ.ರಾಮತೀರ್ಥ ಮೇಗರವಳ್ಳಿಯವರು ನಾವೆಲ್ರು ಖುದ್ದ ಹನಿಸಿಗೆ ಹೋಗಿ ಅಲ್ಲಿನ ಅಭಿವೃದ್ದಿಕಾರ್ಯಗಳಲ್ಲಿ ಮನುಷ್ಯರ ಪಾತ್ರ ಎಷ್ಟಿರುವುದು, ಮಂಗಗಳ ಪಾತ್ರ ಎಷ್ಟಿರುವುದು ಎಂದು ಖುದ್ದ ಪರೀಶಿಲಿಸಿ ವಾಪಸ್ಸಾದ ಬಳಿಕ ಒಂದು ನಿರ್ಣಯಕ್ಕೆ ಬರುತ್ತೇವೆ, ಅಂದ ಮಾತ್ರಕ್ಕೆ ನಾವು ಮಂಗಗಳ ವಿರೋಧಿಗಳೇನಲ್ಲ. ಡಾರ್ವಿನ್ನನ ಥಿಯರ್ರಿ ಆಫ್ ರೆವೆಲ್ಯೂಷನ್ನ ನಾವೂ ಓದ್ಕೊಂಡಿದ್ದೀವಿ ಎಂದು ವೈವಾಕ್ಕೆ ಮಂಗಳ ಹಾಡಿದರು.
ಆ ಊರಿಗೆ ಹೋದರೆಲ್ಲಿ ಅಲ್ಲಿನ ಮಂಗಗಳ ಹಲ್ಲೆಗೆ ತುತ್ತಾಗಿ ತಮ್ಮ ಗಂಡಂದಿರೆಲ್ಲಿ ವಿರೂಪಗೊಳ್ಳುವರೋ ಎಂದು ತಮ್ಮ ತಮ್ಮ ಹೆಂಡಂದಿರು ತಡೆದ ಪರಿಣಾಮವಾಗಿ ಅವರ್ಯಾರೂ ಹನಸಿಗೆ ಹೋಗಲಿಲ್ಲ. ಮುಖ್ಯಮಂತ್ರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಈ ಸಂಶೋಧನೆಯನ್ನು ಪೀಹೆಚ್ಡೀಗೆ ಶಿಪಾರಸ್ಸು ಮಾಡುವುದರಿಂದ ತಮ್ಮ ವರ್ಚಸ್ಸಿಗೇನಾದರೂ ದಕ್ಕೆಯಾಗಬಹುದೇ ಎಂದು ವಿಚಾರಿಸಿ, ಎಂಥೆಂಥ ವಿರೋಧಿ ದುರೀಣರಿಂದ ಕುಂದದಿರುವ ತಮ್ಮ ವರ್ಚಸ್ಸು ಜುಜುಬಿ ಸಂಶೋಧನೆಯಿಂದ ಕುಂದುವುದಿಲ್ಲವೆಂದು ಅವರು ಹೇಳಿದ ಬಳಿಕವೇ ಸಿದ್ದೋಟಿ ಅವರ ಸಂಶೋಧನಾ ಪ್ರಬಂಧವನ್ನು ಡಾಕ್ಟರೇಟ್ಗೆ ಪರಿಗಣಿಸಿದರು.

‍ಲೇಖಕರು G

27 June, 2013

4 Comments

  1. Naveen

    Adella sari How Hanasi developed in last 15 years? Who took interest? Is it because of politicians or because of govt officers?

  2. N.Narayanaswamy

    hanasiyanthe ella urugalu eve sir egina sandarbadalli manusyarenu kotigale electionge ninthu kasu kottaru otu akuvavariddare udaharanege kolar jille

  3. Anil Talikoti

    ನಮ್ಮೆದೂರಿಗೆ ಕೂತು ಒಂದು ಒಳ್ಳೆ ಕಥೆ ಹೇಳುತ್ತಾ, ಏನೋ ಅರ್ಜಂಟಲ್ಲಿ ಎದ್ದು ಹೋಗುತ್ತಾ ,ಇಲ್ಲೀವರೆಗೆ ಹೇಳಿದ್ದು ಮೊದಲು ಅರ್ಥ ಮಾಡ್ಕೊಲ್ಲ್ರೊ ಮಂಗನಂತವರಾ ಎಂದತಿದೆ ಕುಂ.ವೀ ಯವರು. ಬರಹದ ಧಾಟಿ ಧಡಕ್ಕಂತ ದಾಟದೇ ಅಲ್ಲೇ ಕೂತು ಕೇಳುತ್ತ ಇರಬೇಕೆನಿಸುತ್ತದೆ. ಹನಸಿ ಮಂಗಗಳಿಗೆ ಜೈ ಹೊ.
    -ಅನಿಲ ತಾಳಿಕೋಟಿ

  4. kum.veerabhadrappa

    ಕಥಾಭಿಮಾನಿಗಳೇ, ಕಳೆದೆರಡು ತಿಂಗಳ ಹಿಂದೆ ಮೋಟಾರ್ ಬ್ಯೆಕ್ ಅಪಘಾತ ಸಂಭವಿಸಿತು, ಅದೂ ಸ್ವಯಂಕ್ರುತ ಸೊಕ್ಕಿನಿಂದಾಗಿ. ಅದರಿಂದಾಗಿ ನಾನು ಎಡಪಂಥೀಯನಾಗಿರುವೆ, ವಿಶ್ರಾಂತ ಕುಲಪತಿಯಾದ ನಾನು ಹಳೆ ಕಡತಗಳಲ್ಲಿನ ಲಾಳುಲಟ್ಟುಗಳನ್ನು ಕಳಿಸಿ ನಿಮ್ಮ ತಲೆಯನ್ನು ತಿಂದಿರುವುದಕ್ಕೆ ಕ್ಷಮೆ ಇರಲಿ.
    ಕುಂವೀ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading