ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಂ ವೀ ಕಾಲಂ : ರತ್ನಳೆಂಬೋ ಬಾಲಕಿಯೂ…

‘ಪತ್ತೆ’

ರತ್ನ ಎರಡನೆ ತರಗತಿಯ ವಿದ್ಯಾರ್ಥಿನಿ. ಆಕೆ ತನ್ನ ಸಹಪಾಠಿಗಳಂತಿರಲಿಲ್ಲ, ಓದುಬರಹವಂತೂ ಅಷ್ಟಕಷ್ಟೆ, ಹಾಕಿಕೊಟ್ಟ ಹೋಂವರ್ಕ್ ಮಾಡಿಕೊಂಡು ಬರುತ್ತಿರಲಿಲ್ಲ, ಪಾಠ ಒಪ್ಪಿಸುತ್ತಿರಲಿಲ್ಲ, ಆಟಗಳಲ್ಲೂ ಭಾಗವಹಿಸುತ್ತಿರಲಿಲ್ಲ, ಆದರೂ ಆಕೆಯನ್ನು ಶಾಲೆಯ ಪ್ರತಿ ಶಿಕ್ಷಕ ಪ್ರೀತಿಸುತ್ತಿದ್ದ, ಕ್ಷಮಿಸುತ್ತಿದ್ದ, ದಂಡನೆಯಂತೂ ದೂರದ ಮಾತು. ಆಕೆಯ ಎದುರು ಕೋಪ ಕರಗಿ ನೀರಾಗಿ ಹರಿಯುತ್ತಿತ್ತು.
ಕಿರಾಣಿ ಅಂಗಡಿಯ ತಿಮ್ಮಯ್ಯಶೆಟ್ಟಿ ದಂಪತಿಗಳ, ಅದೂ ದಾಂಪತ್ಯದ ಹನ್ನೆರಡು ವರ್ಷಗಳ ಬಳಿಕ ಜನಿಸಿದ್ದುದು ಒಂದು ಕಾರಣವಾದರೆ, ಆಕೆ ಸದಾ ಮಂಕಾಗಿರುತ್ತಿದ್ದುದು ಇನ್ನೊಂದು ಕಾರಣ. ಆಕೆಯ ಅಭಿಜಾತ ಮಂಕನ್ನು ನಿವಾರಿಸಲು ಎಲ್ಲರೂ ಶಕ್ತಿಮೀರಿ ಶ್ರಮಿಸುತ್ತಿದ್ದರು. ಆದರೂ ಯಾವ ಪ್ರಯೋಜನವಿರಲಿಲ್ಲ. ಪುಟ್ಟಗೊಂಬೆಯಂಥ ರತ್ನ ಯಾಂತ್ರಿಕವಾಗಿ ದಿನಂಪ್ರತಿ ಶಾಲೆಗೆ ಬರುತ್ತಿದ್ದಳು ಹೋಗುತ್ತಿದ್ದಳು. ಶಾಲೆಗೂ ಅದೇ ಬೇಕಿತ್ತು.
ಒಂದು ದಿವಸ ಆಕೆಯ ಗೈರು ಹಾಜರಿಯಿಂದ ತರಗತಿ ಕಳಾಹೀನವೆನಿಸಿತು. ಮನೆಯಲ್ಲಿರಬಹುದೆಂದು ಶಿಕ್ಷಕರೂ ಶಾಲೆಯಲ್ಲಿರಬಹುದೆಂದು ಆಕೆಯ ಪೋಷಕರೂ ಅನ್ಯಥಾ ಭಾವಿಸಿದರು. ಎರಡೂ ಕಡೆಯಲ್ಲಿಲ್ಲವೆಂಬ ಸಂಗತಿ ಮನವರಿಕೆಯಾದದ್ದು ಆಕೆಯ ತಂದೆ ತಿಮ್ಮಯ್ಯ ಬಂದು ಸಾರ್ ನಮ್ಮ ಮಗಳನ್ನೇನು ಮಾಡಿದಿರಿ ಎಂದು ಪ್ರಶ್ನಿಸಿದ, ಅದರಿಂದ ಶಾಲೆ ನಖಶಿಖಾಂತ ಕಂಪನಕ್ಕೊಳಗಾಯಿತು. ಶಿಕ್ಷಕರು ಖೇದ ವ್ಯಕ್ತಪಡಿಸಿದರು, ಆಕೆಯ ಸಹಪಾಠಿಗಳನ್ನು ವಿಚಾರಿಸಿದರು. ಪೋಷಕರೊಂದಿಗೆ ಸೇರಿ ಶಿಕ್ಷಕರು, ವಿದ್ಯಾರ್ಥಿಗಳು ಗೂಳ್ಯಂನ ಅಷ್ಟದಿಕ್ಕುಗಳನ್ನು ಶೋಧಿಸಿದರು, ಆದರೂ ಪ್ರಯೋಜನವಾಗಲಿಲ್ಲ.
ಸಂಬಂಧಿಕರ ಮನೆಗಳಿರುವ ಯಾಲಪಿ ಕಗ್ಗಲ್ಲು ಬಿಳಯಾಳು ಸುಳುವಾಯಿ ಮತ್ತಿತರ ಕಡೆಯಲ್ಲೆಲ್ಲಾ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ. ಅಪರೂಪಕ್ಕೆ ಹುಟ್ಟಿರುವ ಮಗಳು ರತ್ನ, ಕೈಕಟ್ಟಿ ಸುಮ್ಮನಿರಲಾದೀತೇನು! ತಿಮ್ಮಯ್ಯ ಅಂಗಡಿಗೆ ಬೀಗ ಹಾಕಿದ, ತನ್ನ ಹಿಂದೆ ಹಲವರನ್ನು ಕಟ್ಟಿಕೊಂಡು ದೂರದ ಹೊಸಪೇಟೆ, ಹತ್ತಿರದ ಬಳ್ಳಾರಿ, ದೂರವೂ ಇರದ ಹತ್ತಿರವೂ ಇರದ ಶಿರಗುಪ್ಪಗಳಂಥ ನಗರಗಳ ಗಲ್ಲಿಗಲ್ಲಿಗಳನ್ನು ಶೋಧಿಸಿ ಬಸವಳಿದ, ಜ್ಯೋತಿಷಿಗಳನ್ನು ಕೇಳಿ ನೋಡಿದ, ಹತ್ತಾರು ದೇವರು ದಿಂಡಿರುಗಳಿಗೆ ಹರಕೆ ಹೊತ್ತ. ಆದರೂ ಪ್ರಯೋಜನವಾಗಲಿಲ್ಲ. ಊಟ ನಿದ್ರೆ ತ್ಯಜಿಸಿ ತಿಮ್ಮಯ್ಯ ದಂಪತಿಗಳು ಬಸವಳಿದರಲ್ಲದೆ ಅಡಿಯಿಂದ ಮುಡಿಯವರೆಗೆ ಬಾಡಿ ಹೋದರು, ಅಷ್ಟಿದ್ದವರು ಇಷ್ಟಾದರೆಂದರೆ ಊರವರು ನೆರೆಹೊರೆಯವರು ಸುಮ್ಮನಿರುವುದು ಸಾಧ್ಯವೆ!
ತಂಡಗಳೋಪಾದಿಯಲ್ಲಿ ಬರುವುದು ಅವರನ್ನು ಸಂತೈಸುವುದು ಧೈರ್ಯ ಹೇಳುವುದು, ಒಂದು ದಿನ ಸಾಯುವವರಿಗೆ ಹೇಳಬಹುದು, ಆದರೆ ದಿನಂಪ್ರತಿ ಸಾಯುವವರಿಗೆ ದುಃಖಿಸುವುದಾದೀತೆ! ಅದೂ ಕ್ರಮೇಣ ಸ್ಥಗಿತಗೊಂಡಿತು. ತಿಮ್ಮಯ್ಯ ದಂಪತಿಗಳು ಕಾಲ ಕಳೆದಂತೆ ಒಂಟಿಯಾದರು, ಆದರೂ ಹುಡುಕಾಟವನ್ನು ದೈನಂದಿನ ಕಾಯಕವನ್ನಾಗಿಸಿಕೊಂಡರು, ದೇವರ ಮೇಲೆ ಭಾರ ಹಾಕಿದರು, ಪ್ರಯತ್ನ ಮುಂದುವರೆಸಿದರು. ದಿನಗಳು ಒಂದರ ಹಿಂದೊಂದರಂತೆ ಉರುಳಿದವು, ತಿಂಗಳುಗಳು ಸಹ. ಆದರೂ ರತ್ನಳ ಸುಳಿವು ಗೋಚರಿಸಲಿಲ್ಲ.
ಮುಂದೇನು ಮಾಡುವುದು! ನರೆಹೊರೆಯವರೊಡನೆ, ಬಂಧುಬಳಗದ ಸದಸ್ಯರೊಡನೆ ಸಮಾಲೋಚಿಸಿದರು. ಎಲ್ಲರೂ ಒಕ್ಕೊರಲಿನಿಂದ ತೀರ್ಮಾನಕ್ಕೆ ಬಂದರು ಅದೆಂದರೆ ಪೋಲಿಸರಿಗೆ ಕಂಪಲೈಂಟ್ ಕೊಡುವುದು, ಹಾಗೆಯೇ ದಿನಪತ್ರಿಕೆಗಳಲ್ಲಿ ಮಗು ಕಳೆದಿದೆ ಎಂದು ಜಾಹಿರಾತು ನೀಡುವುದು! ಹ್ಹಾಂ! ಅಂದ ಹಾಗೆ ಒಂದಿಬ್ಬರು ಪೋಲಿಸರು ವಾರಕ್ಕೊಮ್ಮೆಯೋ ಎರಡು ಸಲವೋ ಗೂಳ್ಯಂಗೆ ಆಗಮಿಸುತ್ತಿದ್ದರು, ತಮ್ಮ ವಿಚಿತ್ರ ಖಾಕಿ ವೇಷಭೂಷಣಗಳಿಂದಲೂ, ಹಾವಭಾವದಿಂದಲೂ ಜನರನ್ನು ರಂಜಿಸುತ್ತಿದ್ದರು, ಹಾಗೆಯೇ ಭಯ ಹುಟ್ಟಿಸುತ್ತಿದ್ದರು. ಅವರಿವರ ಮನೆಗಳಲ್ಲಿ ಸುಗ್ರಾಸ ಭೋಜನ ಸವಿಯುತ್ತಿದ್ದರು, ಸಣ್ಣಪುಟ್ಟ ಕ್ರಿಮಿನಲ್ಲುಗಳಿಂದ ಭಕ್ಷೀಸು ಪಡೆಯುತ್ತಿದ್ದರು, ತಮ್ಮ ನೋಟುಬುಕ್ಕುಗಳಲ್ಲಿ ಕಾನೂನು ಸಮಸ್ಯೆಗಳಿಲ್ಲವೆಂದು ಷರಾ ಬರೆದು ಸ್ವಸ್ಥಾನವನ್ನು ಸೇರಿಕೊಳ್ಳುತ್ತಿದ್ದರು. ಅಂಥ ಪೋಲಿಸರೂ ತಿಮ್ಮಯ್ಯಶೆಟ್ಟಿಯ ದುಃಖದಲ್ಲಿ ಭಾಗಿಯಾದರೆನ್ನುವುದೇ ಸಂತೋಷದ ವಿಷಯ. ತಮ್ಮ ಮಗಳನ್ನು ಹುಡುಕಿ ಕೊಟ್ಟಿರೆಂದರೆ ಎಂದು ಗದ್ಗಿತನಾಗಿ ಅವರತ್ತ ಐವತ್ತರ ನೋಟಿದ್ದ ಬಲಗೈಯನ್ನು ಚಾಚಿದ, ಚಿಲ್ಲರೆ ಕಾಸಿಗೆ ಹಪಹಪಿಸುವರೆಂಬ ದೋಷಾರೋಪಿತರಾಗಿದ್ದ ಅವರು ಅದನ್ನು ಮುಟ್ಟಲು ಒಪ್ಪಲಿಲ್ಲ, ನಿಮ್ಮ ಮಗಳು ಬೇರೆಯಲ್ಲ ನಮ್ಮ ಮಗಳು ಬೇರೆಯಲ್ಲವೆಂದು ವಾತ್ಸಲ್ಯಪೂರಿತರಾಗಿ ಹೇಳಿದರು.
ಮಾರನೆ ದಿವಸ ತಮ್ಮ ಖರ್ಚಿನಲ್ಲಿ ಶೆಟ್ಟಿಯನ್ನು ಆಲೂರಿಗೆ ಕರೆದೊಯ್ದರು, ಎಸೈಸಾಹೇಬರಿಗೆ ಪರಿಚಯಿಸಿದರು, ಕಾಣೆಯಾಗಿರುವ ಬಾಲಕಿಯ ಭಾವಚಿತ್ರವನ್ನು ತೋರಿಸಿದರು, ಅದಾದರೋ ಈಗಿನದ್ದಾಗಿರದೆ ಯಾವುದೋ ಕಾಲದ್ದಾಗಿತ್ತು, ಅಂದರೆ ನಾಲ್ಕೈದನೇ ಹುಟ್ಟುಹಬ್ಬದಲ್ಲಿ ತೆಗೆಸಿದ್ದು. ಪರಿಸ್ಥಿತಿ ವಿವರಿಸಿದರು, ಶೆಟ್ಟಿಯೂ ಹೇಳುತ್ತಾ ಹೇಳುತ್ತ ಕಣ್ಣಲ್ಲಿ ನೀರು ತಂದುಕೊಂಡನು, ಮುಂದಕ್ಕೆ ಹೇಳಲಾರದೆ ಬಿಕ್ಕಳಿಸಿದನು. ಎಸೈ ತಮ್ಮ ಒಂದು ಕೈಯನ್ನು ಟೇಬಲ್ಲಿಗೂರಿ ಇನ್ನೊಂದು ಕೈಯನ್ನು ಗದ್ದಕ್ಕಾನಿಸಿ ಪರಿಪರಿಯಾಗಿ ಯೋಚಿಸಿದ. ರತ್ನ ಮುಗ್ದೆ, ಏಳೆಂಟು ವಯೋಮಾನದ ಬಾಲಕಿ, ಕಾಣೆಯಾಗಿರುವುದಕ್ಕೆ ಕಾರಣಗಳೇನಿರಬಹುದು?

ಹೆತ್ತವರ ಹಿಂಸೆ ತಾಳಲಾರದೇನಾದರೂ! ಇರಲಾರದು, ಈ ಪ್ರಮಾಣದಲ್ಲಿ ದುಃಖಿಸುತ್ತಿರುವ ಪ್ರೌಢವಯಸ್ಸಿನ ದಂಪತಿಗಳಿರುವುದು ಕೇವಲ ಏಕಮಾತ್ರ ಸಂತಾನ. ಶಾಲಾ ಶಿಕ್ಷಕರಿಂದೇನಾದರೂ! ಸರಿ, ಕಡುಶ್ಯಾಮಲ ವರ್ಣದ ಇಲಾಖಾ ವಾಹನದಲ್ಲಿ ಗೂಳ್ಯಂ ಪ್ರವೇಶಿಸಿ ಶಾಲಾ ಶಿಕ್ಷಕರನ್ನೂ ಬೋಧಕೇತರ ಸಿಬ್ಬಂದಿಯನ್ನೂ ಪ್ರತ್ಯೇಕವಾಗಿ ಭೆಟ್ಟಿಯಾಗಿ ಪ್ರಶ್ನೆಗಳ ಸುರಿಮಳೆ ಕರೆದರು, ಅಯ್ಯೋ ಖಾವಂದರೇ ಆಕೆ ನಮ್ಮೆಲ್ಲರಿಗೂ ಹೊಟ್ಟೆಯಲ್ಲಿ ಹುಟ್ಟಿದ ಮಗಳಿಗಿಂತ ಹೆಚ್ಚಾಗಿದ್ದಳು ಸ್ವಾಮಿ ಎನ್ನುವುದು ಪ್ರತಿಯೊಬ್ಬರ ಅಭಿಪ್ರಾಯವಾಗಿತ್ತು. ಇನ್ನು ಆಕೆ ಸಹಪಾಠಿಗಳೋ! ಏಳೆಂಟು ವರ್ಷದ ಮುಗ್ದ ಮುಗ್ದೆಯರು, ಅಮಾಯಕ ಎಳೆಯ ಜೀವಗಳು. ನೆರೆಹೊರೆಯವರ ಗ್ರಾಮಸ್ಥರ ಬಂಧುಬಳಗದವರ ಇನ್ನಿತರರ ಆಭಿಪ್ರಾಯಗಳನ್ನು ಕ್ರೋಢೀಕರಿಸಿಕೊಂಡ ಎಸೈ ಸಾಹೇಬರು ಆಲೂರಿಗೆ ಮರಳಿದರು, ಇಲಾಖೆ ಮುಖೇನ ಪತ್ರಿಕೆಗಳಿಗೆ ಜಾಹಿರಾತು ನೀಡಿದರು, ಪತ್ತೆ ಹಚ್ಚಿದವರಿಗೆ ಸುಳಿವು ನೀಡಿದವರಿಗೆ ಸೂಕ್ತಬಹುಮಾನ ಎಂದು ಪ್ರಕಟಿಸುವುದನ್ನು ಜಾಣರಾದ ತಾವು ಮರೆಯಲಿಲ್ಲ.
ಬಹುಪಾಲು ವೃತ್ತಪತ್ರಿಕೆಗಳಲ್ಲಿ ಜಾಹಿರಾತು ಪ್ರಕಟಗೊಂಡಿತು, ಚುನಾವಣೆ, ಫ್ಯಾಕ್ಷನಿಷ್ಟು ತಗಾದೆಗಳು, ಅಗತ್ಯಕ್ಕಿಂತ ಹೆಚ್ಚಾಗಿ ಅಲ್ಲಲ್ಲಿ ಘಟಿಸಿದ ಕೊಲೆಸುಲಿಗೆಗಳು, ಅತ್ಯಾಚಾರ ಅನಾಚಾರ ಸಂಗತಿಗಳು ವಾಚಕರ ಗಮನ ಸೆಳೆದಷ್ಟು ಸದರಿ ಜಾಹಿರಾತು ಜನರ ಗಮನ ಸೆಳೆಯಲಿಲ್ಲ, ಅದರ ಕಡೆ ಅವರ್ಯಾರೂ ಕಣ್ಣೆತ್ತಿ ನೋಡಲಿಲ್ಲ. ಇಲಾಖಾವತಿಯಿಂದ ತಲಾಷ್ ಮುಂದುವರಿದೇ ಇತ್ತು. ಶೆಟ್ಟಿ ದಂಪತಿಗಳು ತಮ್ಮ ಮಗಳ ಸುಳಿವು ಇವತ್ತು ದೊರಕೀತು, ನಾಳೆ ದೊರಕೀತೆಂದು ಚಾತಕಪಕ್ಷಿಯಂತೆ ಕಾಯುತ್ತಲೇ ಇದ್ದರು. ವ್ಯಾಕುಲಚಿತ್ತೀಯ ತಂದೆಯಾದ ತಿಮ್ಮಯ್ಯನು ಎರಡು ದಿವಸಕ್ಕೊಮ್ಮೆ ಆಲೂರಿಗೆ ಹೋಗುವುದು ಎಸೈಯವರನ್ನು ಭೆಟ್ಟಿ ಮಾಡುವುದು, ತಮ್ಮ ಮಗಳ ಸುಳಿವು ಸಿಕ್ಕಿತೇನು ಖಾವಂದರೆ ಎಂದು ಅಂಜಲೀಬದ್ದನಾಗಿ ದುಃಖಾಶ್ರುಮಿಶ್ರಿತ ಧ್ವನಿಯಲ್ಲಿ ಕೇಳುವುದು, ಆಕೆ ಸಿಕ್ಕಿದೊಡನೆ ಮನೆಗೆ ಮುಟ್ಟಿಸುತ್ತೇವವಯ್ಯಾ ಇಲ್ಲಿಗೆ ಬರುವ ತ್ರಾಸು ತೆಗೆದುಕೊಳ್ಳಬೇಡ ಎಂದು ಅವರು ಸಂತ್ರಸ್ತನಿಗೆ ಸಮಾಧಾನ ಹೇಳುವುದು, ಶೆಟ್ಟಿಯು ತನ್ನ ಕ್ಷುದ್ಭಾದೆ ತಣಿಸಲೆಂದು ಠಾಣೆಯ ಸಮಕ್ಷಮದಲ್ಲಿದ್ದ ಆರ್ಯವೈಶ್ಯಾ ಭೋಜನಾಯಲದಲ್ಲಿ ಸಂಗಡಿಗರ ಒತ್ತಾಯಕ್ಕೆ ಮಣಿದು ನಾಲ್ಕು ತುತ್ತು ಉಣ್ಣುವಲ್ಲಿ ಎರಡು ತುತ್ತು ಉಂಡು ಕೈ ತೊಳೆದುಕೊಳ್ಳುವುದು, ಈ ಪ್ರಕ್ರಿಯೆ ತಿಂಗಳುಗಳ ಕಾಲ ನಡೆದು ವರ್ಷ ಪೂರೈಸಿತು.
ಅದೇ ಠಾಣೆ, ಅದೇ ಎಸೈ, ಅದೇ ಆರ್ಯವೈಶ್ಯಭೋಜನಾಲಯ! ಆದರೆ ಮುಂದೊಂದು ದಿವಸ ಏನಾಯಿತೆಂದರೆ ಶೆಟ್ಟಿಯ ನಿಕಟವರ್ತಿಯೂ, ಭೂತದಯಾ ಸಂಪನ್ನನೂ ಆದಂಥ ಮೂಲಿಮನಿ ವಿರುಪಾಕ್ಷಪ್ಪ ಯಾವುದೋ ಒಂದು ಖಟ್ಲೆಗೆ ಸಂಬಂಧಿಸಿದಂತೆ ಕೋರ್ಟಿನಲ್ಲಿ ಸಾಕ್ಷ್ಯ ನುಡಿಯಲೆಂದು ಆಲೂರಿಗೆ ಹೋಗಿದ್ದನು. ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದದ್ದಾಯಿತು, ಹೇಗೋ ಬಂದಿರುವೆನಲ್ಲ ಎಂದು ಠಾಣೆಗೆ ಹೋಗಿ ಎಸೈ ಕಂಡು ರತ್ನಳ ಸುಳಿವು ದೊರಕಿತೇನು ಸ್ವಾಮಿ ಎಂದು ಕೇಳಿದ್ದಾಯಿತು. ತನ್ನ ಸಾಕ್ಷ್ಯದ ಫಲಾನುಭವಿಗಳೊಂದಿಗೆ ಊಟ ಮಾಡುವ ಸಲುವಾಗಿ ಅಲ್ಲಿಯೇ ಎದುರಿಗಿದ್ದ ಅದೇ ಆರ್ಯವೈಶ್ಯಾಭೋಜನಾಲಯವನ್ನು ಪ್ರವೇಶಿಸಿದನು, ಒನ್ಫೇಸ್ ಕರೆಂಟಿದ್ದುದರಿಂದಲೂ, ಮಿತವ್ಯಯಕ್ಕೆ ಹೆಸರಾಗಿದ್ದ ಅದರ ಮಾಲಕ ಐವತ್ತು ಕ್ಯಾಂಡಲ್ಲಿಗೆ ಬದಲಾಗಿ ಐದೇಐದು ಕ್ಯಾಂಡಲ್ಲಿನ ಬಲ್ಪನ್ನು ಓಲ್ಡರಿಗೆ ಜೋಡಿಸಿದ್ದರಿಂದಲೂ, ವಾತಾಯಾನ ಅವ್ಯವಸ್ಥೆಯಿಂದಾಗಿ ಅಡುಗೆ ಮನೆಯ ಹೊಗೆ ಅಲ್ಲೆಲ್ಲ ದಟ್ಟವಾಗಿ ಕವಿದಿದ್ದರಿಂದಲೂ ಒಬ್ಬರ ಮುಖ ಇನ್ನೊಬ್ಬರಿಗೆ ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ. ಧ್ವನಿಯ ಮೂಲಕ ಅವರಿವರನ್ನು ಇಂಥವರೆ ಎಂದು ಗುರುತಿಸುವ ಅನಿವಾರ್ಯತೆ ದಟೈಸಿತ್ತು.
ಆಂಧ್ರಭೋಜನವೆಂದರೆ ಸಾಮಾನ್ಯ ಸಂಗತಿಯೇನು! ಚಟ್ಲಿಯಿಂದ ಆರಂಭಗೊಂಡು ಮುದ್ದ ಪಪ್ಪು, ಸಾಂಬಾರ್, ರಸಂ ಮಜ್ಜಿಗ ಪುಳಿಸು, ಗಟ್ಟಿ ಮೊಸರಿನಿಂದ ಮುಕ್ತಾಯವಾಗುವುದೆಂದರೆ ನೀವೇ ಯೋಚಿಸಿ! ಬೇಯುವ ಸೆಕೆಯಲ್ಲಿ ಸ್ವಯಂಬೆವರುಮಿಶ್ರಿತ ಫುಲ್ ಮೀಲ್ಸ್ ಮುಗಿಸುವ ಹೊತ್ತಿಗೆ ಎಂಥ ಬಲಾಢ್ಯ ಗಿರಾಕಿ ಚಿತ್ತಾಗದೆ ಇರಲಾರನು. ಗೂಳ್ಯಂ ಗ್ರಾಮದ ಬಹುತೇಕ ಕುಟುಂಬಗಳಿಗೆಲ್ಲಿಂದ ಬರಬೇಕು ಸುಗ್ರಾಸ ಭೋಜನ! ಅನ್ನ ಚಟ್ನಿ ಸಿಕ್ಕರೆ ಅದೇ ಹಬ್ಬ, ಅದರಲ್ಲೂ ವಿರಪಾಕ್ಷಪ್ಪ ಒಂದು ಕಾಲದಲ್ಲಿ ಸಾಹುಕಾರನಾಗಿದ್ದ, ಹಸಿದು ಬಂದವರನ್ನು ಬರಿಹೊಟ್ಟೆಯಲ್ಲಿ ಎಂದೂ ಕಳಿಸಿದವನಲ್ಲ, ಆದರೆ ಏನು ಮಾಡುವುದು! ಯಾರೋ ಮಾಡಿದ ತಪ್ಪಿಗೆ ತಾನು ಶಿಕ್ಷೆ ಅನುಭವಿಸಿ ಬರಿಗೈಯಾದ. ಆದರೂ ತೋರಿಕೆಗೆ ಜಮೀನ್ದಾರಿಕೆ ಗತ್ತನ್ನು ತೋರಿಕೆಗೆ ಉಳಿಸಿಕೊಂಡು ಬಂದಿರುವನು, ತನ್ನ ಮನೆಯಲ್ಲೋ ಒಂದಕ್ಕಿದ್ದರೆ ಇನ್ನೊಂದಕ್ಕಿಲ್ಲವೆನ್ನುವಂಥ ಪರಿಸ್ಥಿತಿ. ಅಲ್ಲಿ ತನ್ನ ಕುಟುಂಬ ಸದಸ್ಯರು ಏನು ಉಂಡರೋ ಏನುಬಿಟ್ಟರೋ ಎಂದು ನೆನೆಯುತ್ತ, ಕಣ್ಣುಗಳನ್ನು ಒದ್ದೆಮಾಡಿಕೊಳ್ಳುತ್ತಲೇ ಮೊಸರೆಂಬ ಕೊನೆ ಹಂತ ತಲುಪಿದ.
ಮೊಸರಿನ ಗುಂಡಾಲೊಂದಿಗೆ ಬಂದ ಹುಡುಗಿಯ ಮುಖವನ್ನು ಕಣ್ಣರಳಿಸಿ ನೋಡಿದ. ಎಲ್ಲೋ ನೋಡಿರುವಂಥ ಚಿರಪರಿಚಿತ ಮುಖ! ಒಂದು ಸೌಟು ನೀಡುವಲ್ಲಿ ಎರಡು ಸೌಟು ಸುರಿದು ಅಡುಗೆ ಮನೆಯನ್ನು ಸೇರಿಕೊಂಡ ಆಕೆಯನ್ನು ಪುನಃ ನೋಡಬೇಕೆನ್ನಿಸಿತು, ತನ್ನಂಥ ಗಂಡಸು ಬರೀ ಹೆಂಗಸರಿರುವ ಅಡುಗೆ ಮನೆಯನ್ನು ಪ್ರವೇಶಿಸುವುದು ಆಗದ ಮಾತು. ನೆಪಕ್ಕೆ ಮಜ್ಜಿಗೆಯನ್ನಾಪೇಕ್ಷಿಸಿದ, ಆದರೆ ನೀಡಿದ್ದು ಬೇರೆ ವ್ಯಕ್ತಿ, ನಿರಾಸೆಯಾಯಿತು, ಇರಲಿಕ್ಕಿಲ್ಲವೆಂದುಕೊಳ್ಳುತ್ತಲೂ ಅದೇ ಗುಂಗಿನಲ್ಲೂ..
ರಾತ್ರಿ ಹನ್ನೊಂದಾದರೂ ನಿದ್ರೆ ಬರಲಿಲ್ಲ. ಚಳಿಗಾಲವಾದ್ದರಿಂದ ದುಪ್ಪಟಿ ಹೊದ್ದೇ ರಥಬೀದಿಯನ್ನು ಪ್ರವೇಶಿಸಿ ಮನೆಯ ಮುಂದೆ ನಿಂತ. ಬಾಗಿಲು ಮುಚ್ಚಿತ್ತು, ಎಚ್ಚರದಿಂದಿರುವರೋ ನಿದ್ದೆ ಹೋಗಿರುವರೋ! ಅನುಮಾನ. ಆದರೂ ವಾಪಸ್ಸು ಹೊರಡಲು ಮನಸ್ಸು ನಿರಾಕರಿಸಿತು. ಧೈರ್ಯವಹಿಸಿ ಬಾಗಿಲು ಬಡಿದ. ಯಾರದು ಎನ್ನುತ್ತಲೆ ಬಾಗಿಲು ತೆರೆದ ವ್ಯಕ್ತಿ ತಿಮ್ಮಯ್ಯನಾಗಿದ್ದ, ಒಳಗೆ ಬರಮಾಡಿಕೊಂಡ. ಕ್ಲುಪ್ತ ಮಾತುಕತೆಯ ಬಳಿಕ ಇದ್ದರೂ ಇರಬಹುದೆಂದು ವಿಷಯ ತಿಳಿಸಿದ, ದಂಪತಿಗಳೀರ್ವರೂ ಕೇಳಿಸಿಕೊಂಡರು, ಪರಸ್ಪರ ಮುಖ ನೋಡಿಕೊಂಡರು, ನಂಬುವುದೋ ನಂಬದೆ ಇರುವುದೋ! ಏಕೆಂದರೆ ತನಗೇನು ಆರ್ಯವೈಶ್ಯಭೋಜನಾಲಯ ಹೊಸದಲ್ಲ, ತಾನು ಅಲ್ಲಿಗೆ ಹಲವು ಸಲ ಹೋಗಿ ಬಂದಿರುವುದು ಉಂಟು, ಅದರ ಮಾಲಿಕ ತನ್ನ ಕುಲಬಾಂಧವ, ಏನೆಂದು ಪ್ರತಿಕ್ರಿಯಿಸುವುದು, ಹೊಳೆಯಲಿಲ್ಲ. ಆದರೂ ದುಃಖ ಇಮ್ಮಡಿಸಿತು. ವಿರುಪಾಕ್ಷಪ್ಪ ಅಪ್ಪಿತಪ್ಪಿ ಕುವ್ವಾಡ ಮಾಡುವ ಮನುಷ್ಯನಲ್ಲ, ಬೆಳಗಾದೊಡನೆ ಆಲೂರಿಗೆ ಹೋಗಿ ಖುದ್ದ ನೋಡುವುದರಲ್ಲಿ ತಪ್ಪೇನಿದೆ!
ಇನ್ನೂ ಸರಿಯಾಗಿ ಬೆಳಕು ಹರಿದಿರಲಿಲ್ಲ, ಒಬ್ಬರು ಹೋಗುವುದಕ್ಕಿಂತ ನಾಲ್ಕಾರು ಮಂದಿಯನ್ನು ಕಟ್ಟಿಕೊಂಡು ಹೋಗುವುದು ವಾಸಿ. ಅಂಗಲಾಚಿದೊಡನೆ ವಿರುಪಾಕ್ಷಪ್ಪನೊಂದೇ ಅಲ್ಲದೆ ಪಂಪ, ಜಡೆಪ್ಪ, ಸಿದ್ದಪ್ಪ ಸ್ವಖರ್ಚಿನಿಂದ ಹೊರಡಲು ಸಜ್ಜಾದರು. ಬಸ್ಸಿಗಿಂತ ಮೊದಲು ಆದೋನಿ ಕಡೆ ಹೊರಟಿದ್ದ ಲಾರಿ ಏರಿದರು. ಸುಳ್ಳು ಹೇಳುತ್ತಿರಬಹುದೆ ಎಂದು ತಂದೆಯಾದ ತಿಮ್ಮಯ್ಯನು ವಿರುಪಾಕ್ಷಪ್ಪನ ಕಡೆಗೂ, ಅಕಸ್ಮಾತ್ ತಾನು ನೋಡಿರುವ ಹುಡುಗಿ ರತ್ನ ಆಗಿರದಿದ್ದಲ್ಲಿ ಮುಖವನ್ನು ಹೇಗೆ ತೋರಿಸುವುದು ಎಂದು ವಿರುಪಾಕ್ಷಪ್ಪ ಶೆಟ್ಟಿಯ ಕಡೆಗೂ ನೋಡುತ್ತಿದ್ದರು. ಆದರೆ ತಾವಿಬ್ಬರೂ ಬಾಯಿ ಕಳೆದುಕೊಂಡಿದ್ದರು. ಉಳಿದ ಮುವ್ವರೂ ಆತಂಕ ಬೇಗುದಿಯನ್ನು ನಿವಾರಿಸಿಕೊಳ್ಳಲೆಂದು ಪರಸ್ಪರ ಬೀಡಿ ವಿನಿಮಯ ಕಾರ್ಯ ನಡೆಸಿದ್ದರು. ತನ್ನ ಪಾಡಿಗೆ ಕ್ರೌರ್ಯ ಗೊಣಗುವುದರಲ್ಲಿ ನಿಸ್ಸೀಮನಿದ್ದ ಪಂಪನಂತೂ ಹಲ್ಲು ಮಸೆಯುತ್ತಿದ್ದುದು ಲಾರಿ ಡ್ರೈವರನಿಗಷ್ಟೆ ಕೇಳಿಸುತಲಿದ್ದಿತು.
ಆಲೂರು ತಲುಪಲು ವಿಳಂಬವಾಗಲಿಲ್ಲ, ಇಳಿಯುವ ಕಡೆ ಇಳಿದರು, ನಡೆಯುವ ಕಡೆ ನಡೆಯಲಾರಂಭಿಸಿದರು. ನಡೆಯುತ್ತ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದೆಂದು ತಮ್ಮ ಪಾಡಿಗೆ ತಾವು ಚರ್ಚಿಸಿಕೊಂಡರು, ಯಾವ ಕಾರಣಕ್ಕೂ ತಮ್ಮ ಪೈಕಿ ಯಾರೊಬ್ಬರೂ ಕೋಪದ ಕೈಗೆ ಬುದ್ದಿ ಕೊಡಬಾರದೆಂದು ನಿರ್ಧರಿಸಿದರು. ಆರ್ಯವೈಶ್ಯಭೋಜನಾಲಯ ಅದೇತಾನೆ ಪೂರ್ವಸಿದ್ದತೆ ಆರಂಭಿಸಿತ್ತು, ಅದೇ ಸಮಯಕ್ಕೆ ಸರಿಯಾಗಿ ಮಾಲಕ ಶೀನಪ್ಪ ತರಕಾರಿ ಮತ್ತಿತರ ಸಾಮಾನುಗಳಿಂದ ಒಟ್ಟರಿಸಿದ್ದ ರಿಕ್ಷಾದಲ್ಲಿ ಇಳಿದ, ಅದು ಊಟದ ಹೊತ್ತಲ್ಲ ಬೇರೆ. ಆದರೆ ಇವರೆಲ್ಲ ಯಾಕೆ ಬಂದಿರಬಹುದೆಂದು ತನ್ನಷ್ಟಕ್ಕೆ ತಾನು ಯೋಚಿಸಿದ. ಪ್ರಶ್ನಾರ್ಥಕ ನೋಟಬೀರಿದ, ಬರ್ರೆಣ್ಣಾ ಬರ್ರಿ ಎಂದು ಔಪಚಾರಿಕವಾಗಿ ಸ್ವಾಗತಿಸಿದ. ನೀವು ಯಾಕೆ ಬಂದಿರುವಿರಿ ಎಂದು ಕೇಳಲಿಕ್ಕಾಗುವುದೆ! ಆತನೊಂದಿಗೆ ಅವರೆಲ್ಲ ಒಳಗೆ ಹೋದರು. ಬೆಂಚೊಂದರ ಮೇಲೆ ಒಬ್ಬರ ಪಕ್ಕ ಒಬ್ಬರಂತೆ ಸಾಲಾಗಿ ಕುಳಿತರು.
ಅಂತರಂಗದ ತಳಮಳವನ್ನು ನಿಯಂತ್ರಿಸಲಾಗದೆ ತಿಮ್ಮಯ್ಯ ರತ್ನ ಎಲ್ಲಿರುವಿ ತಾಯಿ? ಬಾರಮ್ಮ ನಿನ್ನ ತಂದೆಯಾದ ನಾನು ಬಂದಿರುವೆ ಎಂದು ಕೂಗಿದ. ಶೀನಪ್ಪಶೆಟ್ಟಿ ಯಾವ ರತ್ನ! ಎಂದು ಆಶ್ಚರ್ಯ ವ್ಯಕ್ತಪಡಿಸಿದ. ವಿರುಪಾಕ್ಷಪ್ಪ ನಿನ್ನೆ ಕಣ್ಣಾರೆ ನಾನೇ ನೋಡಿರುವೆ, ಹಾದಿಬೀದಿ ರಂಪಾಟವಾಗೋದು ಬೇಡ, ಇವರ ಮಗಳನ್ನ ಕರೀರಿ ಶೆಟ್ಟಿ ಎಂದ ಜಬರದಸ್ತಿನಿಂದ. ಪಂಪ ಸೇರಿದಂತೆ ಉಳಿದವರು ಅದಕ್ಕೆ ದನಿಗೂಡಿಸಿದರು, ಶೀನಪ್ಪಗೆ ವಿಚಿತ್ರವೆನ್ನಿಸಿತು. ನಿಮ್ಮ ಮಗಳು ನಮ್ಮ ಮನೆಯಲ್ಯಾಕೆ ಇರ್ತಾಳೆ! ಬೇಕಾದ್ರೆ ನೋಡಿಕೊಳ್ಳಿರಿ ಎಂದ ಸಮಾಧಾನದಿಂದ. ಅವರು ಮಾಡುತ್ತಿರುವುದು ಗುರುತರ ಆಪಾದನೆ. ಇನ್ನು ಮೌನವಹಿಸುವುದು ತರವಲ್ಲ.
ಹೋಟಲ್ಲಿನ ಕುಟುಂಬ ಸದಸ್ಯರು ಒಳಗಿನಿಂದಲೂ, ಆಳುಗಳು ಹೊರಗಿನಿಂದಲೂ ಬಂದು ಸಾಲಾಗಿ ನಿಂತರು. ಬೆಳಕಿನ ಅಭಾವ ನೀಗಿಸಲೆಂದು ಶೀನಪ್ಪನೇ ಅರೆತೆರೆದಿದ್ದ ಮುಂಬಾಗಿಲನ್ನು ಪೂರ್ತಿ ತೆರೆದ, ನೋಡಿಕೊಳ್ಳಿರಿ ಇವರ ಪೈಕಿ ನಿಮ್ಮ ಮಗಳು ಯಾರೆಂದು? ಎಂದೂ ಹೇಳಿದ. ಅದಕ್ಕೂ ಮೊದಲೆ ಎದ್ದು ನಿಂತ ತಿಮ್ಮಯ್ಯ ಸ್ಥಿತಪ್ರಜ್ಞಾ ಸ್ಥಿತಿಯಲ್ಲಿ ನಿಂತಿದ್ದ ಓರ್ವ ಬಾಲಕಿಯನ್ನು ಸಮೀಪಿಸಿ ಆಕೆಯ ಭುಜಗಳ ಮೇಲೆ ತನ್ನೆರಡೂ ಕೈಗಳನ್ನಿರಿಸಿದ, ಅಪಾದಮಸ್ತಕ ದಿಟ್ಟಿಸಿದ, ಮುಖದಲ್ಲಿ ಮುಖವಿರಿಸಿ ರತ್ನಾ ಎನ್ನುತ್ತ ಕಣ್ಣುಗಳಲ್ಲಿ ನೀರು ತುಂಬಿಕೊಂಡ. ಆದರೆ ಆ ಮಗು ನಿಶ್ಚಲ ಸ್ಥಿತಿಯಲ್ಲಿ ನಿಂತಿತ್ತು, ನಖಶಿಖಾಂತ ಕಂಪನಕ್ಕೊಳಗಾಯಿತು, ಒಂದು ಕ್ಷಣ ಬೆಚ್ಚಿ ಕೊಸರಿತು, ಅಯ್ಯಾ ಎಂದು ಕೂಗುತ್ತ ಓಡಿತು, ಶೀನಪ್ಪಶೆಟ್ಟಿ ಬೆನ್ನ ಹಿಂದೆ ಮರೆಮಾಚಿಕೊಂಡಿತು.
ವಿರುಪಾಕ್ಷಪ್ಪ ಮತ್ತಿತರರೆಲ್ಲರು ಆಶ್ಚರ್ಯಕ್ಕೊಳಗಾದರು, ಒಂದು ವರ್ಷದಲ್ಲಿ ದೈಹಿಕವಾಗಿ ಬೆಳೆದಿರುವಳೆನ್ನುವುದು ಹೊರತುಪಡಿಸಿದರೆ ನಿಸ್ಸಂದೇಹವಾಗಿ ಆಕೆಯೇ ರತ್ನ! ಆದರೆ ಆಕೆ ತಿಮ್ಮಯ್ಯನನ್ನು ತಂದೆ ಎಂದು ಗುರುತಿಸುತ್ತಿಲ್ಲವಲ್ಲ! ಆದರೇನಾಯಿತು! ತಂದೆ ತಂದೆಯೆ, ಮಗಳು ಮಗಳೆ! ಶೀನಪ್ಪ ತಕರಾರು ತೆಗೆಯಲಿಲ್ಲ, ಆಕೆ ತನ್ನ ಮಗಳೆಂದು ಹಕ್ಕು ಚಲಾಯಿಸಲಿಲ್ಲ, ಬಂದರೆ ಕರೆದುಕೊಂಡು ಹೋಗಿರಿ ಎಂದು ಮಾತ್ರ ಹೇಳಿದ, ನಿಮಗೇನಾದ್ರು ಬುದ್ದಿ ಇದೆಯೇ ಎಂದು ತಕರಾರೆತ್ತಿದ್ದು ಪ್ರೌಢವಯಸ್ಕಳು, ಅಷ್ಟೇ ಅಲ್ಲದೆ ಆಕೆಯ ಕೈಹಿಡಿದು ಒಳಗೆ ಕರೆದೊಯ್ದಳು. ರಂಪಾಟ ಬಾಗಿಲು ದಾಟಿ ಬೀದಿಗೆ ಹರಿಯಿತು, ಅಲ್ಲಲ್ಲಿ ಇದ್ದವರು ಒಳಗೆ ಬಂದ ಪರಿಣಾಮವಾಗಿ ಗಲಾಟೆ ತಾರಕಕ್ಕೇರಿತು.
ಎಸೈಗೆ ಯಾರಾದರು ತಿಳಿಸಿದರೋ! ಅಥವಾ ತನ್ನ ಆರನೆ ಇಂದ್ರಿಯಕ್ಕೆ ಹೊಳೆಯಿತೋ! ಬುಲೆಟ್ಟೇರಿ ಬಂದಿಳಿದೇಬಿಟ್ಟನು. ಬೆಂಕಿ ಎಂದೇ ಸಾರ್ವಜನಿಕರಿಂದ ಅನಾಯಾಚಿತವಾಗಿ ಬಿರುದು ಪಡೆದಿರುವುದೆಂದರೆ ಸಾಮಾನ್ಯ ಸಂಗತಿಯೆ! ಆದರೂ ಶೀನಪ್ಪ ಹೆದರಲಿಲ್ಲ, ಅದಲ್ಲದೆ ಅವಿವಾಹಿತನೂ ತರುಣನೂ ಆದಂಥ ಎಸೈಗೆ ದಿನಂಪ್ರತಿ ಉಪಾಹಾರ ಮತ್ತು ಭೋಜನ ಪಾರ್ಸಲ್ಲಾಗುತ್ತಿರುವುದು ಅದೇ ಆರ್ಯವೈಶ್ಯಭೋಜನಾಲಯದಿಂದ, ಅದೂ ಗರಿಗರಿ ಹಪ್ಪಳ ಸಂಡಿಗೆ ಮತ್ತು ಅಪ್ಪಟ ತುಪ್ಪ ಸಹಿತ. ಪರಿಸ್ಥಿತಿ ಅರ್ಥಮಾಡಿಕೊಂಡ ಅಧಿಕಾರಿಯು ತನ್ನನ್ನು ಅಪಾದಮಸ್ತಕ ದಿಟ್ಟಿಸಿದ್ದಕ್ಕೆ ಮಾಲಕ ಆತಂಕಗೊಳ್ಳಲಿಲ್ಲ, ಕೇಳಿದ್ದಕ್ಕೆ ತಡವರಿಸದೆ ಉತ್ತರಗಳನ್ನು ನೀಡಿದ, ಅದೂ ತಿರುಪತಿ ತಿಮ್ಮಪ್ಪನ ಬಹುವರ್ಣೀಯ ಚಿತ್ರದ ಮೇಲೆ ಕೈಯಿಟ್ಟು ಪ್ರಮಾಣ ಮಾಡಿ, ಈ ಮಗು ಸ್ವಂತದ್ದು ಎಂದು ಹೇಳಿ ನಾನ್ಯಾವ ನರಕಕ್ಕೆ ಹೋಗಲಿ ಎಂಬ ಪಲ್ಲವಿಯೊಂದಿಗೆ. ಆತ ನೀಡಿದ ಸುದೀರ್ಘ ಹೇಳಿಕೆಯ ಸಾರಂಶವೆಂದರೆ..
ದುರಾದೃಷ್ಟವಶಾತ್ ಶೀನಪ್ಪ ದಂಪತಿಗಳು ಸಂತಾನ ವಂಚಿತರು, ಒಂದೇ ಒಂದು ಮಗು ಕರುಣಿಸೆಂದು ಹಲವು ದೇವರಲ್ಲಿ ಮೊರೆ ಹೊಕ್ಕರು, ಆದರೆ ದೇವರು ತಮ್ಮ ಪಾಲಿಗೆ ಕಣ್ಣು ತೆರೆಯಲಿಲ್ಲ, ಆದರೇನಾಯಿತು, ತನ್ನ ಗಂಡನೇ ಗಂಡುಮಗುವೆಂದೂ ಹೆಂಡತಿಯೂ, ತನ್ನ ಹೆಂಡತಿಯೇ ಹೆಣ್ಣುಮಗುವೆಂದು ಗಂಡನೂ ಭಾವಿಸಿ ಚಿಂತಿಸದೆ ಅನ್ಯೋನ್ಯವಾಗಿದ್ದರು. ಮಕ್ಕಳ ಮೇಲಿನ ಪ್ರೀತಿಯನ್ನು ಅಭಿವ್ಯಕ್ತಿಸಲು ನಾನಾದಾರಿಗಳನ್ನು ಕಂಡುಕೊಂಡಿದ್ದರು, ಅವುಗಳ ಪೈಕಿ ಕೆಲವೆಂದರೆ ಪ್ರತಿವರ್ಷ ಶಾಲಾಮಕ್ಕಳ ಪೈಕಿ ಕೆಲವಕ್ಕೆ ಪಠ್ಯಪುಸ್ತಕಗಳನ್ನು ಉಚಿತವಾಗಿ ನೀಡುವುದು. ಹತ್ತಿರದ ಊರುಗಳಿಂದ ಶಾಲೆಯನ್ನು ಕಲಿಯಲೆಂದು ಬರುವ ಬಡಮಕ್ಕಳ ಪೈಕಿ ಕೆಲವಕ್ಕೆ ಊಟ ಹಾಕುವುದು, ಫೀಜು ಕಟ್ಟುವುದು. ಹೀಗಿರುತ್ತಿರಲಾಗಿ ಒಂದು ದಿವಸ ಶೀನಪ್ಪ ಕೆಲಸ ಮುಗಿಸಿಕೊಂಡು ಹೊಳಗುಂದಿಯಿಂದ ಹೊರಟು ಆಲೂರು ಬಸ್ಸುನಿಲ್ದಾಣದಲ್ಲಿಳಿದನಂತೆ, ಒಂಟಿಯಾಗಿ ಕುಳಿತು ಅಳುತ್ತಿದ್ದ ಈಕೆ ತನ್ನ ಗಮನ ಸೆಳೆದಳಂತೆ, ಹೆಸರು ಖೂನಗುರುತು ವಿಚಾರಿಸಿದನಂತೆ, ಆದರೆ ಈಕೆ ಹೇಳಲಿಲ್ಲವಂತೆ. ಅನಾಥೆ ಇರಬಹುದೆಂದು ಭಾವಿಸಿ ಮನೆಗೆ ಕರೆತಂದು ಇಟ್ಟುಕೊಂಡನಂತೆ. ಇದು ಆತನ ಹೇಳಿಕೆಯ ಪೂರ್ವಾಪರ.
ವೆಂಕಟೇಶ್ವರ ದೇವರ ಮೇಲೆ ಪ್ರಮಾಣ ಮಾಡಿದ್ದರಿಂದ ಸುಳ್ಳು ಎಂದು ಯಾರೂ ತೀರ್ಮಾನಕ್ಕೆ ಬರಲಾಗದು ತಾನೆ! ಆದರೆ ರತ್ನ ಎಂಬ ಬಾಲಕಿ ತನ್ನ ಹೆತ್ತವರನ್ನು ಗುರುತಿಸುತ್ತಿಲ್ಲ, ಅವರೊಂದಿಗೆ ಹೊರಡಲು ಸಮ್ಮತಿಸುತ್ತಿಲ್ಲದಿರುವುದೇ ವಿಚಿತ್ರ! ಒಂದೇ ಥರಾ ಕೋಟಿಗೊಬ್ಬರು ಸದರಿ ಪ್ರಪಂಚದಲ್ಲಿರುವರೆಂಬುದು ಪ್ರತೀತಿ, ಅದರಂತೇನಾದರೂ! ಸಂದೇಹಕ್ಕೆಣೆಮಾಡಿಕೊಟ್ಟಿತು ಸಮಸ್ಯೆ.
ಸಮಸ್ಸಾತ್ಮಕ ಸುದ್ದಿಯು ಹರಡಿದ ಪರಿಣಾಮವಾಗಿ ಗೂಳ್ಯಂಗ್ರಾಮದಿಂದ ತಿಮ್ಮಯ್ಯಶೆಟ್ಟಿಯ ಪತ್ನಿ ಸೇರಿದಂತೆ ಹಲವರು ಆಲೂರಿಗೆ ಬಂದಿಳಿದರು. ಅಪಾರ ದುಃಖದ ನಡುವೆಯೂ ತಾಯಿ ರತ್ನಳ ದೇಹದ ಮೇಲೆ ಇಂಥಿಂಥ ಕಡೆ ಇಂಥಿಂಥ ಗುರುತುಗಳಿರುವುದಾಗಿ ಹೇಳಿದಳು, ನೋಡಿದ್ದಾಯಿತು, ಅವೆಲ್ಲ ಗುರುತಿಸಿ ಖಾತರಿ ಮಾಡಿದ್ದಾಯಿತು, ಆದರೂ! ರತ್ನ ರತ್ನಳೇ ಆಗಿದ್ದ ಪಕ್ಷದಲ್ಲಿ ತನ್ನನ್ನು ಹೆತ್ತತಾಯಿಯನ್ನಾದರೂ! ಹ್ಹೂಹ್ಹುಂ! ತನ್ನ ಶಾಲಾಶಿಕ್ಷಕರನ್ನಾಗಲೀ, ತನ್ನ ಸಹಪಾಠಿಗಳನ್ನಾಗಲೀ ಗುರುತಿಸುತ್ತಿಲ್ಲ, ಮುಖ್ಯವಾಗಿ ಆಕೆ ತನ್ನ ತಾಯಿಯನ್ನು ತಾಯಿಯೇ ಅಲ್ಲವೆಂದು, ತನ್ನ ತಂದೆಯನ್ನು ತನ್ನ ತಂದೆಯೇ ಅಲ್ಲವೆಂದು ಬಿಲ್ಕುಲ್ ಹೇಳುತ್ತಿರುವಳೆಂದರೆ! ಫಜೀತಿಗಿಟ್ಟುಕೊಂಡಿತು ಎಸೈ ಸೇರಿದಂತೆ ಹಲವು ಗಣ್ಯರಿಗೆ. ಶೀನಪ್ಪ ದಂಪತಿಗಳದ್ದೇನು ತಪ್ಪಿಲ್ಲ, ತಿಮ್ಮಯ್ಯಶೆಟ್ಟಿ ದಂಪತಿಗಳದ್ದೇನು ತಪ್ಪಿಲ್ಲ, ಅವರು ಬಂದರೆ ಕರೆದೊಯ್ಯುವಂತೆ ಹೇಳುತ್ತಿರುವರು, ಇವರು ಕರೆದೊಯ್ಯಲು ಸಿದ್ದರಿರುವರು, ಸಮಸ್ಯೆ ನಿಗೂಢವೆನ್ನಿಸಿತು, ಬಿಗಡಾಯಿಸಿತು. ಹಾಗಿದ್ದರೆ ಪರಪಾಟಿರುವುದು ಎಲ್ಲಿ!

‍ಲೇಖಕರು avadhi

6 June, 2013

3 Comments

  1. N.VENKATESH

    rathna rathana rathna

  2. manjunath c

    ನಮಸ್ತೆ ಸರ್,
    ರತ್ನಳನ್ನು ಕಣ್ಣ ಮುಂದೆ ಬರಹದಲ್ಲೇ ಚಿತ್ರಿಸುತ್ತಾ ಹೋದಿರಿ, ಮತ್ತು ಆ ಪ್ರದೇಶಗಳಲ್ಲಿನ ಮನಸ್ಸುಗಳನ್ನ ನೀವು ಅರಿತಿರುವ ಪರಿಯೇ ಬೆರಗು ಮೂಡಿಸುವಂಥದ್ದು… ರತ್ನಾಳಿಗೆ ಪೋಷಕರ ಗುರುತು ಸಿಗದೇ ಹೋದದ್ದು ಮಾತ್ರ ಬೇಜಾರಾಯ್ತು.

  3. N.Narayanaswamy

    kumvee kathegalendare
    age
    summane oduttiddare
    kathe mattu
    rochakathe eradu alu jeninanthe
    ennu elabekandare
    maduveyada hosatarallina
    neguda satyadanthe

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading