ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಂ ವೀ ಕಾಲಂ : ‘ತೇಲಲರಿಯರು. ಮುಳಗಲೂ ಅರಿಯರು’

ಭಾಗ – ೨

(ಭಾಗ – ೧ ಓದಲು ಇಲ್ಲಿ ಕ್ಲಿಕ್ಕಿಸಿ)

ಕೆಳಗೇರಿಗೆ ಮಂಕಾಳವ್ವನ ಗುಡಿ ಕಾಲಿದ್ದವರಿಗೆ ಹತ್ತಿರವೆನ್ನುವುದು ಎಷ್ಟು ನಿಜವೋ, ಕಾಲಿಲ್ಲದವರಿಗೆ ದೂರವೆನ್ನುವುದು ಅಷ್ಟೇ ನಿಜ. ಮಹಾಸ್ವಾಭಿಮಾನಿಯಾದ ಚಂದ್ರ ಕೋಲಿನ ಆಸರೆಯಿಂದ ಬೆಳೆಗ್ಗೆ ಅಲ್ಲಿಂದ ಹೊರಟನೆಂದರೆ ತಲುಪುವುದು ಮಧ್ಯಾಹ್ನ. ಸುಶೀಲ ಹೊತ್ತಲ್ಲದ ಹೊತ್ತಲ್ಲಿ ಬಂದಿರುವುದರಿಂದಾಗಿಯೇ ಈ ಸಮಸ್ಯೆ. ಅಲ್ಲಿಯವರೆಗೆ! ರಕ್ತದೊತ್ತಡ ಇದ್ದಕ್ಕಿದ್ದಂತೆ ಕಡಿಮೆಯಾದ್ದರಿಂದಲೋ, ದಿಕ್ಕೇತೋಚದಂತಾದ ಪರಿಣಾಮದಿಂದಾಗಿಯೋ, ಕಳೆದೆರಡು ದಿವಸಗಳಿಂದ ತಾನು ವಿಚಿತ್ರ ಕಾಯಿಲೆಯಿಂದ ನರಳುತ್ತಿದ್ದುದರಿಂದಾಗಿಯೋ, ತನ್ನ ತೊಂಬಲದ ಚೀಲ ಬಣಗುಡುತ್ತಿದ್ದುದರಿಂದಾಗಿಯೋ, ಹಾಲಿ ಇರುವ ತಮ್ಮ ಮರ್ಯಾದೆಯಲ್ಲಿ ಎಷ್ಟು ಭಾಗ ನಗಣ್ಯಗೊಂಡಿತೆಂಬ ಲೆಕ್ಕಾಚಾರದಿಂದಾಗಿಯೋ, ಅಳಿಯ ತಮ್ಮ ಮಗಳನ್ನು ಪುನಃ ಸ್ವೀಕರಿಸುವನೋ ಇಲ್ಲವೋ! ಅಕಸ್ಮಾತ್ತೇನಾದರೂ ಸ್ವೀಕರಿಸದಿದ್ದಲ್ಲಿ ಈಕೆಗೆ ತಮ್ಮ ಮನೆಯೆಂಬೋ ಮನೆಯಲ್ಲಿ ಆಶ್ರಯ ನೀಡಿದರೇನು ಗತಿ ನೀಡದಿದ್ದರೇನು ಗತಿ ಎಂದು ಆಲೋಚಿಸುತ್ತಿದ್ದ ಪರಿಣಾಮದಿಂದಾಗಿಯೋ ಅದುವರೆಗೆ ಗಂಡನ ಕಡೆ ಕಂಗಾಲಾಗಿ ನೋಡುತ್ತಿದ್ದ ಗಂಗವ್ವ ಇದ್ದಕ್ಕಿದ್ದಂತೆ ಆವೇಶವನ್ನು ಆವಹಿಸಿಕೊಂಡವಳೆ ಸುಶೀಲಾಳ ನುಣುಪುಗೆನ್ನೆಗೆ ರಪ್ಪಂತ ಏಟು ಬಾರಿಸಿದಳು.
ಸಾಕಿಸಲಹಿದ ತಾನು ಅಷ್ಟು ಮಾಡದಿದ್ದಲ್ಲಿ ಜನ ಏನೆಂದುಕೊಳ್ಳುವರೆಂಬ ಸಮಯಪ್ರಜ್ಞೆಯಿಂದ ಸಾಂದರ್ಭಿಕವಾಗಿ ಯಾವೋನಿಂದೆ ಹೋಗಿದ್ದೆಲೇ ಚಿನಾಲಿ! ಕೇರೀಲಿ ಗಂಡನ ಜೊತೆ ಸರಿಯಾಗಿ ಬಾಳುವೆ ಮಾಡ್ಕೊಂಡಿರ್ತೀನಂತ ದೈವಸ್ತರ ಕಾಲಿಗೆ ಬಿದ್ದು ಕೇಳ್ಕೊಳ್ಳೆ ಮಿಂಡ್ರಗಾಳಿ ಎಂದು ಕೇಳಿದಳು, ಆದರೆ ಕೇಳಿದ್ದು ಹೊಡೆದದ್ದು ಸುಶೀಲಾಳ ಮೇಲೆ ಕಿಂಚಿತ್ ಪರಿಣಾಮ ಬೀರಲಿಲ್ಲ. ಪಾಪಪ್ರಜ್ಞೆಯಿಂದ ನರಳಲು ತಾನು ಮಾಡಿರುವ ತಪ್ಪಾದರೂ ಏನು! ಚಪ್ಪರದ ದುರ್ಬಲ ಗೂಟಕ್ಕಾತು, ಅದೂ ತನ್ನ ಹೊಳೆವ ದಂತಪಂಕ್ತಿಯ ನಡುವೆ ಸೀರೆ ಸರಗಿನ ಚುಂಗನ್ನು ಕಚ್ಚಿಹಿಡಿದು, ತನ್ನ ಬೊಗಸೆಗಣ್ಣುಗಳಿಂದ ಸಮ್ಮೋಹನಾಸ್ತ್ರವನ್ನು ಅಷ್ಟದಿಕ್ಕುಗಳಿಗೆ ಬೀರುತ್ತ.
ಆಕೆ ದಿವ್ಯನಿರ್ಲಕ್ಷ್ಯದಿಂದ ತುಸು ವಿಚಲಿತನಾದ ನಿಂಗಜ್ಜ ಅದ್ಯಾರ ಹಿಂದೆ ಓಡಿ ಹೋಗಿದ್ದೆ ಹೇಳವ್ವಾ ಸುಶೀಲಾ ಎಂದು ಕೇಳಿದ, ಅದಕ್ಕೆ ಪ್ರತಿಯಾಗಿ ತಾನು ನಸುನಕ್ಕಳು, ಅದೂ ಸೆರಗ ಮರೆಯಲ್ಲಿ. ಯಾರ ಹಿಂದೆ ಓಡಿಹೋಗುವುದೆಂದರೆ, ಅದೂ ತನ್ನಂಥವಳು! ತಾನು ಓಡಿಸಿಕೊಂಡು ಹೋಗುವವಳೇ ಹೊರತು ಹಿಂದೆ ಓಡುವವಳಂತೂ ಖಂಡಿತವಲ್ಲ. ಎಲ್ಲಿಯವರೆಗೆ ನೆಲ್ಕೋ ರೇಡಿಯೋದ ಸದ್ದಿನ ಮರೆಯಲ್ಲಿ ಕದ್ದುಮುಚ್ಚಿ ಹಾದರ ಮಾಡುವುದು! ಕರೆದೊಡನೆ ನಾಯಿಯಂತೆ ತನ್ನನ್ನು ಹಿಂಬಾಲಿಸಿದ ರಮೇಶನನ್ನು ಪುನಃ ನೆನಪಿಸಿಕೊಂಡಳು, ತನಗೆ ನೆಲ್ಕೋ ರೇಡಿಯೋ ಕೊಡಿಸಿದ ಪ್ರಹ್ಲಾದನನ್ನು ನೆನಪಿಸಿಕೊಂಡಳು, ರಮೇಶನೊಂದಿಗೆ ಅಲ್ಲೆಲ್ಲ ತಿರುಗಾಡಿದ ಎಂಜಿ, ಬ್ರಿಗೇಡು, ಅವೆನ್ಯು ಅಲ್ಲದೆ ತಾವು ಉಳಿದುಕೊಂಡಿದ್ದ ಲಾಡ್ಜು, ತಿಂದ ತರಾವರಿ ತಿಂಡಿ ಊಟ! ತಾನು ನಾಲ್ಕನೆ ಇಯತ್ತೆಯಲ್ಲಿ ಬಾಯಿಪಾಠ ಮಾಡಿದ ಪದ್ಯವನ್ನು ನೆನಪಿಸಿಕೊಂಡಳು, ಅಲ್ಲಿ ಬನಬನದಲ್ಲಿ ಕಾಡಗಿಡಗಿಡದಲ್ಲಿ ಬಣ್ಣಬಣ್ಣದ ಹೂವು ಸಾವಿರಾರು, ಬನದ ಹಣ್ಣಿನ ರುಚಿಯ ಬರಿ ನೆನೆದರೇನುಂಟು ಮರಳಿ ದೊರಯಲುಬಹುದೆ ತವರಿನವರು! ಮುಖವನ್ನು ಸಪ್ಪಗೆ ಮಾಡಿಕೊಂಡಳು, ನಿಡಿದಾಗಿ ನಿಟ್ಟುಸಿರುಬಿಟ್ಟಳು, ಪಶ್ಚಾತ್ತಾಪವೋ ಎಂಬಂತೆ.

ಇಂಥವಳ ತಂದೆಯಾದ ತಾನು ಸುಮ್ಮನಿದ್ದರೆ ಜನರೇನು ತಿಳಿದುಕೊಂಡಾರು! ನಾಗಪ್ಪ ದೊಡ್ಡಪ್ಪ, ಒಳ್ಳೆ ಮಾತಿಗೆ ಈ ಚಿನಾಲಿ ಬೆಲೆ ಕೊಟ್ಟಂಗ ಕಾಣೋದಿಲ್ಲ, ನಾಕೇಟುಗಳನ ಕೆನ್ನೆಗೆ ಬಿಗಿದು ಕೇಳು ಎಂದವನೆ ತನ್ನೆರಡೂ ಕೈಗಳನ್ನು ನೆಲಕ್ಕೂರಿ ಏದುಸಿರುಬಿಟ್ಟನು. ಕುಡಿದು ಬಂದು ತನ್ನೊಂದಿಗೆ ಜಗಳ ತೆಗೆಯುವ, ಹೊಡೆಯುವ ತನ್ನ ಸುಪುತ್ರ ಬಸ್ಯಾನನ್ನೂ, ಸತಾಯಸಿದಾದ ಬಳಿಕ ಬೇಕು ಬೇಕೊ ಬೇಡ ಬೇಡವೋ ಎಂಬಂತೆ ಒಂದು ತುತ್ತುಅನ್ನ ಹಾಕುವ ತನ್ನ ಸೊಸೆ ಕೊಟ್ರಿಯನ್ನೂ ನೆನಪಿಸಿಕೊಂಡು ನಿಂಗಜ್ಜ ನಿಟ್ಟುಸಿರುಬಿಟ್ಟನು. ಸುಡುಗಾಡ ಕರೆಯ ನಿರೀಕ್ಷೆಯಲ್ಲಿರುವ ತನಗೆ ಇನ್ನೊಬ್ಬರನ್ನು ಹೊಡೆಯುವ ಶಕ್ತಿಯಾಗಲೀ ಹಕ್ಕಾಗಲೀ ಇಲ್ಲವೇ ಇಲ್ಲ. ದೈನಂದಿನ ಕೆಟ್ಟ ವರ್ತಮಾನ! ನೀರುತುಂಬಿ ತನ್ನ ಕಣ್ಣುಗಳಲ್ಲಿ ಮಂಜುಗವಿಯಿತು. ತಲೆಸುತ್ತು ಬಂದು ಭೂಮಿ ಗರಗರ ತಿರುಗಿ ನಿಸ್ತೇಜಗೊಂಡಿತು, ಅಸಂಖ್ಯಾತ ರಂದ್ರಗಳನ್ನು ಮುಡಿದುಕೊಂಡಿರುವ ಎಲ್ಲರ ಮನೆಗಳ ದೋಸೆಗಳು ನೆನಪಾದವು, ಗಂಟಲಿಂದ ತುದಿ ನಾಲಗೆವರೆಗೆ ಪುಟಿದೆದ್ದ ಕಫವನ್ನು ಪುನಃ ನುಂಗಿ ಚೈತನ್ಯ ಆವಹಿಸಿಕೊಂಡು ಹೇಳಿದ, ಎತ್ತಾಡಿಸಿದ ಕೈಗಳಿಗೆ ಹೊಡೆಯೋ ಶಕ್ತಿ ಇಲ್ಲಪ್ಪ ಎಂದು ತನ್ನ ಸರೀಕ ನಾಗಪ್ಪನನ್ನುದ್ದೇಶಿಸಿ.
ಬಳಿಕ ಕತ್ತೊರಳಿಸಿ ನಿನ್ನೊಳ್ಳೇದಕ್ಕ ಕೇಳ್ತಿರೋದು ಸುಶೀಲಾ, ನೀನು ಎಷ್ಟು ಚಂದದೀಯೋ ನಿನ್ನ ಮನಸ್ಸೂ ಅಷ್ಟೇ ಚಂದೈತಿ ಕಣವ್ವಾ, ಇದು ನಿನ್ನ ಎತ್ತಾಡಿಸಿರೋ ನನ್ನ ಕೈಗಳ ದೃಡವಾದ ನಂಬಿಕೆ, ನಿನ್ನ ಬಾಳುವೆ ಹಾದಿಬೀದಿ ರಂಪಾಟಾಗೋದು ನಮಗ್ಯಾರಿಗೂ ಇಷ್ಟವಿಲ್ಲ, ಅದಕ್ಕೆ ಕೇಳ್ತಿದೀನಿ, ನೀನು ಯಾರ ಜೊತೆಗೆ ಹೋದಿ ಅಂತ ಕೇಳ್ತಿಲ್ಲ, ಹೆಂಗ ಮನೆಬಿಟ್ಟು ಹೋದಿ ಅಂತ ಮಾತ್ರ ಹೇಳವ್ವಾ ಎಂದು ಮಾತಿನ ಕೊರಳನ್ನು ಕರುಳಿನ ಹಾರದಿಂದ ಅಲಂಕರಿಸಿದ. ತಾನು ಅಂಥ ಮಾತುಗಳನ್ನು ನಿರೀಕ್ಷಿಸಿರಲಿಲ್ಲ, ಇದಕ್ಕಿಂತ ಶಿಕ್ಷೆ ಇನ್ನೇನು ಬೇಕು, ನಖಶಿಖಾಂತ ಕಂಪಿಸಿದಳು, ಈ ಕ್ಷಣ ನಿಲ್ಲಲು ಆಶ್ರಯ ನೀಡಿರುವ ಭೂಮಿ ಬಾಯಿ ತೆರೆದು ತನ್ನನ್ನು ನುಂಗಬಾರದೆ! ಇನ್ನೂ ಬದುಕಿರುವ ತಪ್ಪಿಗೆ ಏನೆಂದು ಹೇಳುವುದು! ಇದ್ದದ್ದು ಇದ್ದಂತೆ ಹೆಳುವುದೋ! ಎಂದಿನಂತೆ ಸುಳ್ಳು ಹೇಳುವುದೋ! ತುಸು ಹೊತ್ತು ಯೋಚಿಸಿ ಬಳಿಕ ಏನಂತ ಹೇಳಲಿ ಎಜ್ಜಾ, ದೇವರಂದರೆ ನೀವೆ, ದಿಂಡಿರೆಂದರೆ ನೀವೆ. ಆ ದಿವಸ ಹೊರಕಡೀಕಂತ ಸುಡುಗಾಡಿಗೆ ಹೋಗಿದ್ದೆ, ಯಾವುದೋ ಒಂದು ಗುದ್ದನ್ನು ಎಡವಿ ಬಿದ್ದೆ, ಪುನಃ ಎಚ್ಚರೊಗೊಂಡು ನೋಡಿದಾಗ ಬೆಂಗಳೂರಾಗಿದ್ದೆ, ಯಾರೋ ಪುಣ್ಯಾತ್ಮರು ನನ್ನನ್ನು ತಮ್ಮ ಮನೆಗೆ ಕರಕೊಂಡು ಹೋದರು, ಈಸು ದಿವಸ ಹೊಟ್ಟೇಲಿ ಹುಟ್ಟಿದ ಮಗಳಂಗ ನೋಡಿಕೊಂಡರು, ಏಸೋ ದಿವಸಗಳ ಬಳಿಕ ನೀವೆಲ್ಲ ನೆನಪಾದಿರಿ, ಅವರೇ ಬಸ್ಸು ಹತ್ತಿಸಿ ಕಳಿಸಿಕೊಟ್ಟರು, ನನ್ನೀ ಮಾತಿನಾಗ ಸುಳ್ಳು ತಾರಾತಿಗಡಿ ಇದ್ದರ ರೌರವ ನರಕ ಬರಲಿ ಎಜ್ಜಾ ಎಂದು ಸೆರಗಲ್ಲಿ ಮುಖ ಮರೆಮಾಚಿ ಬಿಕ್ಕಳಿಸಲಾರಂಭಿಸಿದಳು.

ಸೇರಿದ್ದ ಗುಂಪಿನಲ್ಲಿ ಗುಸುಗುಸು ಆರಂಭಗೊಂಡಿತು, ನರಕವಂತೆ ನರಕ! ಅದಿದ್ದರೆ ತಾನೆ! ಸುಶೀಲಾ ಇದೆ ಮೊದಲ ಸಲವಲ್ಲ ಮನೆಬಿಟ್ಟು ಓಡಿ ಹೋಗಿದ್ದು, ಇದು ಎರಡನೆ ಸಲವೋ! ಮೂರನೆ ಸಲವೋ! ತಿಂಗಳ ಪರ್ಯಂತರ ಎಲ್ಲೋ ಇದ್ದು ಪುನಃ ಮನೆಗೆ ಮರಳುವುದೆಂದರೆ! ಇದನ್ನು ಒಪ್ಪುವುದೋ ಒಪ್ಪದೆ ಇರುವುದೋ! ಪ್ರತಿಪ್ರಶ್ನೆ ಹಾಕಲೆಂದೋ, ಕೇಳುವ ಮೂಲಕ ತುರುಬು ಹಿಡಿದು ಎಳೆದಾಡಲೆಂದೋ ಕನಲಿದ ವೃದ್ದೆಯನ್ನು ಸಮೀಪಿಸಿ ನಿಂಗಜ್ಜ ಕೋಪದ ಕೈಗೆ ಬುದ್ದೀನ ಕೊಟ್ಟು ಮಗಳ ಸಂಸಾರಾನ ಹಾಳುಮಾಡಬ್ಯಾಡ, ಯೌವನ ನೀರ ಮೇಲಿನ ಗುಳ್ಳೆ ಇದ್ದಂಗೆ ಗಂಗವ್ವ, ಎರಡು ಮೂರು ಮಕ್ಕಳಾದರೆ ಅದು ತಂತಾನೆ ಹೊಂಟೋಗತೈತೆ, ಅಳಿಯನ ಮೇಲಿನ ಪ್ರೀತಿಗೆ ಮಗಳ ಜೀವನಾನ ಬಲಿ ಕೊಡಬ್ಯಾಡ ಎಂದು ಸಂತೈಸಿದ, ಗುಂಪಿನಿಂದ ಒಂದೆರಡು ಹೆಜ್ಜೆ ಮುಂದೆ ಬಂದ ರತ್ನಿ ಸುಡುಗಾಡಲ್ಲಿರುವ ತರಾವರಿ ದೆವ್ವಗಳನ್ನೊಂದೇ ಅಲ್ಲದೆ ದೇವರು ದಿಂಡಿರುಗಳನ್ನೂ, ಪೀಡೆ ಪಿಶಾಚಿಗಳನ್ನೂ ಪ್ರಸ್ತಾಪಿಸಿ ಹಿಂದೆ ಸರಿದಳು. ಆಕೆ ಏನನ್ನು ಹೇಳಬೇಕಿತ್ತೋ ಅದನ್ನೇ ಹೇಳಿದಳು. ಅಷ್ಟು ಸಾಕಲ್ಲವೆ ಪಂಚಾಯಿತಿಯನ್ನು ಬರಕಾಸ್ತು ಮಾಡಲು.
ನಿಟ್ಟುಸಿರುಬಿಟ್ಟು ಬಳಿಕ ನಿಂಗಜ್ಜ ಅಂತೂ ಒಳ್ಳೆಯವರ ಕೈಗೆ ಸಿಕ್ಕಿದ್ದು ನಿನ್ನ ಪುಣ್ಯ ಸುಶೀಲಾ, ನಿನ್ನನ್ನು ಸ್ವಂತ ಮಗಳಂಗ ನೋಡಿಕೊಂಡ ಅವರನ್ನು ಇಲ್ಲಿಂದಲೇ ನಮಸ್ಕರಿಸ್ತೀನವ್ವ, ಈ ಸತ್ಯಾನ ಹೇಳಲಿಕ್ಕೆ ಇಷ್ಟ್ಯಾಕ ತ್ರಾಸು ತಗೊಂಡೆ ಮಗಳೆ ಎಂದು ಹೇಳುತ್ತ ಆಕಾಶದ ಕಡೆ ತಲೆ ಎತ್ತಿ ಇಳುವಿದ. ತನ್ನ ಮಾತುಗಳಿಂದ ನಿಧಾನವಾಗಿ ಕುತೂಹಲವನ್ನು ಕಳೆದುಕೊಳ್ಳಲಾರಂಭಿಸಿದ್ದ ಗುಂಪಿನ ಕಡೆ ನೋಡುವಾಗ ಎಡಹುಬ್ಬಿನ ಮೇಲೆ ಬಲಅಂಗೈಯನ್ನು ಇರಿಸಿಕೊಳ್ಳುವುದನ್ನು ಮರೆಯಲಿಲ್ಲ, ಅವರಿವರ ಮೊಣಕಾಲುಗಳಲ್ಲಿನ ಬೆವರನ್ನು ಮೂಸುತ್ತಿದ್ದ ನಾಯಿಯನ್ನು ಲೆಕ್ಕಿಸದೆ ಕಟ್ಟೆಗೆ ಕೈಯೂರಿ ಮೆಲ್ಲಗೆ ಎದ್ದು ನಿಲ್ಲುತ್ತ ಶಿವಶಿವಾ ಎಂದ, ಅಲ್ಲಲ್ಲಿ ಹರಿದಿದ್ದ ವಲ್ಲಿಯ ಸಹಾಯದಿಂದ ಮುಖದ ಮೂಳೆಗಳ ಸಂದುಗಳಲ್ಲಿದ್ದ ಬೆವರೊರೆಸಿಕೊಳ್ಳುತ್ತ ನಿಧಾನವಾಗಿ ನಡೆದು ನಾಗಪ್ಪ ದಂಪತಿಗಳನ್ನು ತಲುಪಿದ. ಅವರ ಮುಖಗಳಲ್ಲಿ ಮುಖವಿರಿಸಿ ಉಸಿರ ವಿನಿಮಯ ನಡೆಸಿದ, ಕೇಳಿಸಿಕೊಂಡಿರಿ ತಾನೆ!

ಏನೆಲ್ಲ ಕೇಳಿ ಇಲ್ಲದ ರಾಮಾಯಣಾನ ಸೃಷ್ಠಿಸಿ ಆಕೆಯ ಬಾಳುವೇನ ಹಾಳು ಮಾಡೋದು ಬ್ಯಾಡ ಎಂದ, ಅದಕ್ಕಿದ್ದು ನಾಗಪ್ಪ ಈಕೇನ ಕೊಟ್ಟು ಬಂಗಾರದಂಥ ಚಂದ್ರನ ಬಾಳುವೇನ ಹಾಳು ಮಾಡಿದೆವಲ್ಲ, ಅವನು ದುಕ್ಕದಲ್ಲಿ ಕೈತೊಳಕೊಂಡರೆ ದೇವರು ನಮ್ಮನ್ನು ಕ್ಷಮಿಸೋದಿಲ್ಲ ಮಾವ ಎನ್ನುತ್ತ ವಲ್ಲಿಯ ಮರೆಯಲ್ಲಿ ಬಿಕ್ಕಳಿಸಿದ, ಅದಕ್ಕೆ ಈತನು ಆತನ ಹೆಗಲ ಮೇಲೆ ಕೈಯನ್ನಿರಿಸಿ ಈಗ ಯೋಚಿಸಿದರೇನು ಪ್ರಯೋಜನ! ಆಕೆ ತನಗೀ ಸಂಬಂಧ ಇಷ್ಟವಿಲ್ಲಾಂತ ಬಡಕೊಂಡಳು, ಅದನ್ನು ನೀವು ಕೇಳಿಸಿಕೊಳ್ಳಲಿಲ್ಲ ಎಂದ, ಗಂಗವ್ವ ಮಗಳು ಅಳಿಯ ಕಣ್ಣೆದುರಿಗಿದ್ರ ನಮಗೂ ಆಸರ ಅಂತಲ್ವ ಅವರಿಬ್ಬರನ್ನು ಗಂಟು ಹಾಕಿದ್ದು, ಅವಳು ನಮ್ಮನ್ನ ನೋಡಿಕೊಳ್ಳೋದು ಬ್ಯಾಡ, ಆದರೆ ತಾಳಿ ಕಟ್ಟಿದ ಗಂಡನ್ನಾದ್ರು ನೋಡ್ಕೊಳ್ಳೋದು ಬ್ಯಾಡವೇ! ಸತ್ತು ಸ್ವರ್ಗದಲ್ಲಿರೋ ನನ್ನಣ್ಣ ನನ್ನನ್ನು ಕ್ಷಮಿಸುವನೇನು! ಎನ್ನುತ್ತ ಮುಖವನ್ನು ಆಕಾಶಕ್ಕೆ ಎತ್ತಿ ಹಿಡಿದಳು, ತಂಗಿ ಚಂದ್ರನನ್ನು ನಿನಗೊಪ್ಪಿಸಿ ಪ್ರಾಣಬಿಡ್ತಿದ್ದೀನಿ, ಅವನಿಗೆ ತಾಯಿಯಾಗೋ ಜವಾಬ್ದಾರಿ ನಿನ್ನದವ್ವಾ ಎಂದು ಕೊನೆಮಾತು ಹೇಳಿ ಕೊನೆಯುಸಿರೆಳೆದ ಪಂಪಾಪತಿಯನ್ನು ನೆನಪಿಸಿಕೊಂಡಳೋ ಇಲ್ಲವೋ, ಕಂಠಕಟ್ಟಿದ ಪರಿಣಾಮವಾಗಿ ತನಗೊಂದೂ ತೋಚಲಿಲ್ಲ. ಸೆರಗಲ್ಲಿ ಮರೆಮಾಚಿ ಮುಖವನ್ನು ಕಣ್ಮರೆಮಾಡಿಕೊಂಡಳು. ಅನ್ನದ ಋಣ ತೀರಿಸಿಕೊಳ್ಳಲೆಂದು ಸಾಕುಹೆಣ್ಣು ನಾಯಿ ಎಲ್ಲಿಂದಲೋ ಬಂದು ಅವರೆದುರು ಮೈಚೆಲ್ಲಿತಲ್ಲದೆ ಮೋರೆಯನ್ನು ಸುಡುವ ಮಣ್ಣ ಮೇಲೆ ಚಾಚಿ ಮಲಗಿ ನಿಟ್ಟುಸಿರುಬಿಟ್ಟಿತು, ಅದರದ್ದೂ ಅದೇ ಕಥೆ ವ್ಯಥೆಯಾಗಿತ್ತು.

***

ಕೆಳಗೇರಿಯ ವಾಸ್ತುವೆಂದರೆ ಪೂರ್ವಕ್ಕೆ ಕನ್ನೀರವ್ವನ ಬಾವಿ, ಪಶ್ಚಿಮಕ್ಕೆ ಬಸವನಬಾವಿ ಪೂರ್ವಕಾಲದಿಂದ ಇರುವವು, ಅವೆರಡೂ ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಪ್ರಶಸ್ತವಾಗಿರುವವು. ಇನ್ನುಳಿದಂತೆ ಉತ್ತರಕ್ಕೆ ಮುನ್ಸಿಪಾಲಿಟಿಯ ಸಾರ್ವಜನಿಕ ಕಕ್ಕಸು ಇದ್ದರೆ ದಕ್ಷಿಣಕ್ಕೆ ಕೊಟ್ಟೂರಿನ ತ್ಯಾಜ್ಯವಸ್ತು ಸಂಗ್ರಹಾಲಯವಿರುವುದು. ಈ ಕಾರಣದಿಂದಾಗಿ ಕೆಳಗೇರಿಯು ತಂಗಾಳಿ ಸುಳಿಯಿತೆಂದರೆ ಹಿಂದಕ್ಕೂ ಮುಂದಕ್ಕೂ ಹೊಯ್ದಾಡುವುದು. ಇನ್ನು ಅಲ್ಲಿನ ಮನೆಗಳೆಂದರೆ ಕೇವಲ ಮನೆಗಳು. ಅಲ್ಲಿನ ಜನರೆಂದರೆ ಕೇವಲ ಜನರು. ಅಲ್ಲಿನ ನಿವಾಸಿಗಳೆಲ್ಲ ಊರಿಗೆ ಭಾರ ಆಗಿದ್ದವರೆ. ಊರಿನ ಸ್ವಯಂಘೋಷಿತ ನಾಗರಿಕರಿಂದ, ಸುಸಂಸ್ಕೃತರಿಂದ ತಿರಸೃತಗೊಂಡ ಮಾನವರೂಪಿ ತ್ಯಾಜ್ಯವಸ್ತುಗಳಿಂದ ಕೆಳಗೇರಿ ಕಿಕ್ಕಿರಿದಿರುವುದು, ಕಡ್ಡಿಪೊಟ್ಟಣ ಜೋಡಿಸಿಟ್ಟಂತೆ ಝೋಪಡಿಗಳಿಗಂತೂ ಅಲ್ಲಿ ಲೆಕ್ಕವಿಲ್ಲ. ಒಂದೊಂದು ಝೋಪಡಿಗಳಲ್ಲಂತೂ ಅಸಂಖ್ಯಾತರು. ಇನ್ನು ಉದರಂಭರಣಕ್ಕಾಗಿ ಅವರು ಕಳ್ಳತನ ಮಾಡದಿದ್ದರೂ ಕಳ್ಳರು, ಸೂಳೆಗಾರಿಕೆ ಮಾಡದಿದ್ದರೂ ಸೂಳೆಯರು. ಸಭ್ಯಸ್ಥರು ಏನೇ ಹೇಳಿದರೂ ಅಲ್ಲಿರುವವರೆಲ್ಲ ಮಾನಕ್ಕಂಜುತ್ತಿದ್ದಂಥವರು.
ಕೇಳಗೇರಿಯಲ್ಲಿ ಅಲ್ಪಸ್ವಲ್ಪ ಸ್ಥಿತಿವಂತ ಕುಟುಂಬವೆಂದರೆ ಮೂಲಿಮನಿ ಪೂಜಾರಿ ನಾಗಪ್ಪನದು. ಇತರರು ಒಂದು ಹೊತ್ತಿಗೆ ಪರದಾಡಿದರೆ ಇವರು ಪರದಾಡುವುದು ಎರಡನೆ ಹೊತ್ತಿನ ಊಟಕ್ಕೆ. ಮೂಲಿಮನಿ ನಾಗ ಎರಡನೆ ಸಲ ವಿಧರನಾಗದಿದ್ದಲ್ಲಿ ಪೂಜಾರಿ ನಾಗಪ್ಪನೆಂದೆನಿಸಿಕೊಳ್ಳುತ್ತಿರಲಿಲ್ಲ, ಆ ಉಪಾದಿ ಮತ್ತು ‘ಅಪ್ಪ’ ಎಂಬ ಗೌರವಸೂಚಕ ಪದ ಪ್ರಾಪ್ತವಾದದ್ದು ಗಾದಿಲಿಂಗಪ್ಪನಿಂದ. ಆತ ಕೊನೆಯುಸಿರು ಬಿಡುವ ಪೂರ್ವದಲ್ಲಿ ಅವಿವಾಹಿತೆಯೂ, ಗರ್ಭವತಿಯೂ ಆಗಿದ್ದ ತನ್ನ ಏಕಮಾತ್ರ ಸುಪುತ್ರಿ ಹಾಲವ್ವಳನ್ನು ಧಾರೆ ಎರೆದುಕೊಟ್ಟಿದ್ದ, ತಕರಾರೆತ್ತಿದ್ದಕ್ಕೆ ಪೂಜಾರಿಕಾ ವೃತ್ತಿಯನ್ನು ಅಳಿಯನ ಕೊರಳಿಗೆ ಕಟ್ಟಿ ನೆಮ್ಮದಿಯಿಂದ ಪ್ರಾಣಬಿಟ್ಟಿದ್ದ. ಕೊಟ್ಟೂರು ಪಟ್ಟಣದ ಹೃದಯಭಾಗದಲ್ಲಿರುವ ಗುಡಿಯನ್ನು ಅತಿಕ್ರಮಣ ಮಾಡಿದ ವೀರಣ್ಣ ಅಲ್ಲಿನ ಮೂಲದೇವತೆ ಮಾಂಕಾಳಿಯನ್ನು ಮೂಲೆಗುಂಪು ಮಾಡಿದನಂತೆ, ಆಕೆ ಪರಿಪರಿಯಿಂದ ಕೇಳಿಕೊಂಡಿದ್ದಕ್ಕೆ ಪ್ರಹರಿಗೋಡೆಗಂಟಿಕೊಂಡಂತಿರುವ ಶಮೀವೃಕ್ಷವನ್ನು ತೋರಿಸಿದನಂತೆ, ಅದಕ್ಕೆ ಆಕೆ ಕಾಶಿಪಟ್ಟಣದೊಳಗೆ ಕವಡೆಮ್ಮನ ದರುಶನ ಪಡೆದ ಬಳಿಕ ವಿಶ್ವನಾಥನ ದರುಶನವನ್ನು ಹೇಗೆ ತೆಗೆದುಕೊಳ್ಳುವರೋ ಹಾಗೆ ಪ್ರಪ್ರಥಮವಾಗಿ ನನ್ನ ದರುಶನ ಪಡೆದ ಭಕ್ತರು ನಿನ್ನ ದರುಶನ ಪಡೆಯತದ್ದಕ್ಕು ಎಂದು ಕರಾರು ವಿಧಿಸಿದಳಂತೆ, ಅದಕ್ಕೆ ವೀರಣ್ಣ ದೇವರು ಸಮ್ಮತಿಸಿದನಂತೆ!
ಮೈತುಂಬಾ ಮುಳ್ಳು ಧರಿಸಿರುವ ಬನ್ನಿಮರದ ಬುಡದಲ್ಲಿರುವ ಮಾಸ್ತಿಕಲ್ಲು ಮಾಂಕಾಳಿ ಎಂದು ಪರಿಗಣಿಸಲ್ಪಟ್ಟಿರುವುದು, ಅದೂ ನಾಗಪ್ಪನ ಮುಂದಾಲೋಚನೆ ಫಲವಾಗಿ. ಆದರೂ ಮಹಾನವಮಿಯ ಒಂಭತ್ತು ದಿವಸಗಳನ್ನು ಹೊರತುಪಡಿಸಿದರೆ ಅದಕ್ಕೆ ಡಿಮ್ಯಾಂಡಿಲ್ಲ. ವಲಸೆ ದೇವರಾದ ವೀರಣ್ಣಗೇ ಇಲ್ಲವೆಂದ ಮೇಲೆ ಅದಕ್ಕೆಲ್ಲಿಂದ ಬಂದೀತು! ಆದಾಯ ಕಡಿಮೆ ಇರುವ ಕಾರಣಕ್ಕೆ ಅದರ ಅರ್ಚಕ ಮಡಿಯುಡಿಯಿಂದ ಇರಲೆಲ್ಲಿ ಸಾಧ್ಯ! ಭಕ್ತಾದಿಗಳು ಆಗೀಗೊಮ್ಮೆ ದರುಶನ ಪಡೆವಾಗ್ಗೆ ನಾಲ್ಕೆಂಟಾಣೆ ಮರದ ಬುಡದಲ್ಲೆಸೆದರೆ ಹೆಚ್ಚು. ಅದರಿಂದಾಗಿ ಒಂದು ಹೊತ್ತಿನ ಕೂಳು ದೊರೆಯದಿದ್ದರೂ ಒಂದು ಕಟ್ಟುಬೀಡಿಯ ಖಚರ್ಿಗೆ ದೋಖಾ ಇಲ್ಲ. ಎರಡನೇ ಊಟಕ್ಕೆ ಅರ್ಚಕನ ಕುಟುಂಬದ ಸದಸ್ಯರು ಕೂಲಿನಾಲಿ ಮಾಡುವುದು ಅನಿವಾರ್ಯ.
ಮಾಂಕಾಳಿಯ ಉಸ್ತುವಾರಿಗಿಂತ ತನ್ನ ಹೊಸಹೆಂಡತಿ ಹಾಲವ್ವನನ್ನು ನಿಭಾಯಿಸುವುದು ಹೊಸಗಂಡ ನಾಗಪ್ಪಗೆ ಸವಾಲಾಗಿ ಪರಿಣಮಿಸಿತು. ಅದನ್ನು ಆತ ಕ್ರೀಡಾಮನೋಭಾವದಿಂದ ನಿಭಾಯಿಸಲಾರಂಭಿಸಿದ. ಹಿಂದೆ ಮುಂದೆ ಆಡಿಕೊಳ್ಳುತ್ತಿದ್ದ ನೆರೆಹೊರೆಯವರು ಸೈ ಅನ್ನುವಂತೆ. ವಿವಾಹವಾದ ಕೆಲವೇ ತಿಂಗಳಲ್ಲಿ ತನ್ನ ಪತ್ನಿ ಹೆತ್ತ ಕೂಸು ಹೆಣ್ಣಾಗಿತ್ತು, ಬೆಳದಿಂಗಳನ್ನು ಹೋಲುತಿತ್ತು, ಹಾಲಹಲ್ಲು ಧರಿಸಿದೊಡನೆ ಹೆತ್ತತಾಯಿಗೆ ವಿನೂತನ ವ್ಯಾಧಿಯನ್ನು ದಯಪಾಲಿಸಿತು, ಅಂಬೆಗಾಲಿಟ್ಟು ನಡೆದಾಡಿದೊಡನೆ ತನ್ನ ತಂದೆಗೆ ಕೆಮ್ಮುದಮ್ಮು ಎಂಬ ವ್ಯಾಧಿಯನ್ನು ಕರುಣಿಸಿತು. ಆದರೂ ದಿನಕ್ಕೊಂದು ಚಂದದಲ್ಲಿ ಬೆಳೆಯಲಾರಂಭಿಸಿತು. ಅದು ಅಕ್ಷರಾಭ್ಯಾಸ ಆರಂಭಿಸಿತೋ ಇಲ್ಲವೋ! ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದ ಲಾರಿಡ್ರೈವರ್ ರಾಮಣ್ಣ ತನ್ನ ಹೆಂಡತಿಯ ಪಂಚೇಂದ್ರಿಯಗಳ ಮೂಲಕ ನಾಗಪ್ಪಗೆ ಪ್ರತಿಹುಣ್ಣುಮೆಗೊಮ್ಮೆ ಪರಿಚಯವಾಗುತ್ತ ಹೋದ. ಆ ನಿರ್ಣಾಯಕ ಬೆಳದಿಂಗಳ ರಾತ್ರಿಯಂದು ಹಾಲವ್ವ ಲೋ ನಾಗ, ನನ್ನ ಹೆಣ್ತೀನ ನಾನು ಕರ್ಕೊಂಡೋಗ್ತೀನಿ, ನನ್ನ ಮಗಳ ಕಣ್ಣಲ್ಲಿ ನೀರು ತರಿಸಿದಿ ಎಂದರೆ ಹುಷಾರ್ ಎಂದು ಎಚ್ಚರಿಕೆಯನ್ನು ಪ್ರಕಟಿಸಿದಳು, ಅದೇ ಆವೇಶದಲ್ಲಿ ಕನ್ನೀರವ್ವನ ಬಾವಿಯಲ್ಲಿ ಆತ್ಮಾಹುತಿ ಮಾಡಿಕೊಂಡಳು.
ಬಾಲೆ ಸುಶೀಲಾ ಪಾದರಸದೋಪಾದಿಯಲ್ಲಿ ಹರಿದಾಡುತ್ತ ಕೇರಿಯನ್ನು ಪುಳಕಗೊಳಿಸುತ್ತಿದ್ದಳು, ಈ ಘಳಿಗೆ ಇವರ ತೆಕ್ಕೆಯಲ್ಲಿ, ಇನ್ನೊಂದು ಘಳಿಗೆ ಇನ್ನೊಬ್ಬರ ಕಂಕುಳಲ್ಲಿ. ಅತ್ತ ಶಮೀವೃಕ್ಷವನ್ನು ನೋಡಿಕೊಳ್ಳುವುದೋ! ಇತ್ತ ಮಗಳನ್ನು ನೋಡಿಕೊಳ್ಳುವುದೋ! ನಾಗಪ್ಪನ ದಿನಚರಿಯಲ್ಲಿ ಕಷ್ಟಕಾರ್ಪಣ್ಯ ಪಠ್ಯವಾಗಿ ಪರಿಣಮಿಸಿತು. ಮುಂದೊಂದು ದಿವಸ ಸರೀಕ ನಿಂಗಜ್ಜ ಪುನಃ ಮದುವೆಯಾಗುವಂತೆ ಪುಸಲಾಯಿಸಿದ, ಹತ್ತಿರದ ಕೋಡಿಹಳ್ಳಿಗೆ ಕರೆದೊಯ್ದು ಜಾಲಿಮರದಂಥ ಹೆಂಗಸನ್ನು ತೋರಿಸಿ ಈಕೆಯನ್ನು ಮಾಡಿಕೋ ಎಂದು ಸಲಹೆ ನೀಡಿದ. ನಾಯಿಯೂ ಹಸಿದಿತ್ತು, ಅನ್ನವೂ ಹಳಸಿತ್ತು. ಸರಿ ಎಲ್ಲೋ ಮದುವೆ ಶಾಸ್ತ್ರ ಮುಗಿಸಿ ಮನೆ ತುಂಬಿಸಿಕೊಂಡ. ತಜ್ಞೆಯಾಗಿದ್ದ ಆಕೆ ಕಾಲುಕೆದರಿ ಜಗಳ ತೆಗೆಯುವ ಅರವತ್ತೈದನೆ ಕಲೆಯನ್ನು ಪರಿಚಯಿಸಿ ಕೇರಿಯಿಂದ ಸೈ ಅನ್ನಿಸಿಕೊಂಡಳು, ಪಪ್ಪಿಗಳ ವಿನಿಮಯ ನಿರಾತಂಕವಾಗಿ ನಡೆಯುತ್ತಿದ್ದುದರಿಂದಾಗಿ ಸುಶೀಲಾಳ ಕಿರಿಕಿರಿ ಇರಲಿಲ್ಲ, ಆದರೆ…

(ಇನ್ನೂ ಇದೆ…)

‍ಲೇಖಕರು avadhi

23 May, 2013

1 Comment

  1. N.VENKATESH

    vare vaa ha mundi bhaga egale prakatisi please sir

Trackbacks/Pingbacks

  1. ಕುಂ ವೀ ಕಾಲಂ : ‘ತೇಲಲರಿಯರು. ಮುಳಗಲೂ ಅರಿಯರು’ « ಅವಧಿ / avadhi - [...] ಕುಂ ವೀ ಕಾಲಂ : ‘ತೇಲಲರಿಯರು. ಮುಳಗಲೂ ಅರಿಯರು’ May 30, 2013 by Avadhikannada (ಇಲ್ಲಿಯವರೆಗೆ) [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading