ಜೋಗಿ
ಚಿಕ್ಕಪ್ಪ
Could a greater miracle take place
than for us to look through each other’s eyes
for an instant?
-Henry David Thoreau
ಸಂಜೆ ಬಿಸಿಲಿಗೆ ಯಾಕೆ ಅಷ್ಟುದ್ದ ನೆರಳು?
ಉಪ್ಪಿನಂಗಡಿಯ ಬಸ್ ಸ್ಟಾಂಡಿನಿಂದ ಬೈಪಾಸಿನಲ್ಲಿ ಹೊರಟು ಗಾಂಧಿ ಪಾರ್ಕು ದಾಟಿ ಸುಮಾರು ಒಂದು ಫರ್ಲಾಂಗು ಹೋಗುತ್ತಿದ್ದಂತೆ ಎಡಬದಿಗೆ ಸರ್ಕಾರಿ ಜೂನಿಯರ್ ಕಾಲೇಜೂ, ಬಲಬದಿಗೆ ಅರಣ್ಯ ಇಲಾಖೆಯ ಕಚೇರಿಯೂ ಕಾಣಿಸುತ್ತದೆ. ಅರಣ್ಯ ಇಲಾಖೆಯ ಸಿಬ್ಬಂದಿ ಅಲ್ಲೊಂದು ಗೇಟು ನೆಟ್ಟು, ಶಿರಾಡಿ ಘಾಟಿ ಇಳಿದು ಬರುವ ಲಾರಿಗಳನ್ನು ನಿಲ್ಲಿಸಿ ಪರ್ಮಿಟ್ಟು ಲೈಸನ್ಸು ಇತ್ಯಾದಿಗಳನ್ನು ಪರಿಶೀಲಿಸುತ್ತಿರುತ್ತಾರೆ. ಒಂದು ಕಾಲಕ್ಕೆ ಮರಗಳನ್ನು ಸಾಗಿಸುವ ಲಾರಿಗಳೇ ಜಾಸ್ತಿ ಇದ್ದುದರಿಂದ ಫಾರೆಸ್ಟು ಗೇಟಿನ ಪಕ್ಕ ಹತ್ತೋ ಹನ್ನೆರಡೋ ಲಾರಿಗಳು ಇಷ್ಟಿಷ್ಟುದ್ದದ ಮರದ ದಿಮ್ಮಿಗಳನ್ನು ಹೊತ್ತುಕೊಂಡು ನಿಂತಿರುತ್ತಿದ್ದವು. ಆ ಲಾರಿ ಡ್ರೈವರುಗಳಿಗೆ ಊಟ, ಕಾಫಿ, ಮಸಾಲೆ ಸೋಡಾ, ಬೀಡಿ ಸಿಗರೇಟು ಮಾರುವುದಕ್ಕೆಂದೇ ಅಲ್ಲಿ ನಾಲ್ಕಾರು ಅಂಗಡಿಗಳು ರಾತ್ರಿಹಗಲೂ ತೆರೆದಿರುತ್ತಿದ್ದವು. ಅದರಲ್ಲಿ ಕಲ್ತಪ್ಪ ಎಂಬ ರುಚಿಯಾದ ತಿಂಡಿಯನ್ನು ಮಾರುವ ಅಮ್ಮದಾಕನ ಹೊಟೆಲ್ಲು ಲಾರಿಡ್ರೈವರುಗಳ ಪಾಲಿಗೆ ಅಚ್ಚುಮೆಚ್ಚು. ಅದರ ಪಕ್ಕದಲ್ಲೇ ದೂಜ ಪೊರ್ಬುಗಳ ಸೋಡಾ ಶರಬತ್ತು ಅಂಗಡಿಯಿತ್ತು.
ಫಾರೆಸ್ಟು ಅಧಿಕಾರಿಗಳ ಪೀಕಲಾಟದಿಂದಾಗಿ ಲಾರಿಗಳು ಅಲ್ಲಿ ಒಂದೆರಡು ಗಂಟೆಗಳ ಕಾಲ ನಿಂತಿರಬೇಕಾಗುತ್ತಿತ್ತು. ಕೆಲಸವಿಲ್ಲದ ಒಂದಷ್ಟು ಹುಡುಗರು ನಿಂತಿರುವ ಲಾರಿ ಹತ್ತಿ ಕಾಡಿನಿಂದ ಕಡಿದು ತಂದ ಅಗಾಧವಾದ ಮರದ ದಿಮ್ಮಿಗಳ ಮೇಲಿನ ತೊಗಟೆ ಹರಿಯುವ ಕೆಲಸದಲ್ಲಿ ತೊಡಗುತ್ತಿದ್ದರು. ಆ ತೊಗಟೆಗಳನ್ನು ಒಲೆ ಉರಿಸಲು ಪೇಟೆ ಮಂದಿ ಬಳಸುತ್ತಿದ್ದರು. ಸ್ಕೂಲಿಗೆ ಬರುತ್ತಿದ್ದ ಮಕ್ಕಳು ಕೂಡ ಸ್ಕೂಲು ಬಿಟ್ಟ ತಕ್ಷಣ ಹಳೇ ಚಡ್ಡಿ ಹಾಕಿಕೊಂಡು ಬಂದು, ಕೈಲೊಂದು ಚೂಪಾದ ಕಬ್ಬಿಣದ ಸಲಾಕೆ ಹಿಡಕೊಂಡು ಲಾರಿಗಳಿಗಾಗಿ ಕಾಯುತ್ತಿದ್ದರು. ಹಾಗೆ ನಿಂತಿರುತ್ತಿದ್ದ ಮಕ್ಕಳು ಸರದಿ ಪ್ರಕಾರ ಒಂದೊಂದು ಲಾರಿ ಒಬ್ಬರಿಗೆ ಅಂತ ನಿಗದಿ ಮಾಡಿಕೊಂಡು ತೊಗಟೆ ಸುಲಿದು ಗೋಣಿಚೀಲಗಳಿಗೆ ತುಂಬಿ ಮನೆಗೆ ಒಯ್ಯುತ್ತಿದ್ದರು. ಇದು ಕ್ರಮೇಣ ಲಾಭದಾಯಕ ಉದ್ಯಮವೂ ಆಗಿ ತೊ*ಗಟೆಯನ್ನು ಹೋಟೆಲುಗಳಿಗೆ ಮಾರುವುದಕ್ಕೂ ಶುರುಮಾಡಿದರು. ಯಾವಾಗ ಅದರಿಂದ ದುಡ್ಡು ಬರುತ್ತದೆ ಅಂತ ಗೊತ್ತಾಯಿತೋ, ಅಂದಿನಿಂದ ದಿಮ್ಮಿಗಳ ಚೆಕ್ಕೆ ಕೆತ್ತುವವರ ನಡುವೆ ಹೊಡೆದಾಟವೂ ಆರಂಭವಾಯಿತು. ದಿನಕ್ಕಿಷ್ಟು ಅಂತ ಚೆಕ್ಕೆ ಕೆತ್ತುವವರು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೂ ಕಮಾಯಿ ಕೊಡಬೇಕಾದ ಅನಿವಾರ್ಯ ಒದಗಿತು.
ಲಾರಿಗಳು ತುಂಬಿಕೊಂಡು ಬರುತ್ತಿದ್ದ ಮರದ ತೊಗಟೆ ಹರಿಯುವುದು ಅಷ್ಟೇನೂ ಸುಲಭದ ಕೆಲಸ ಆಗಿರಲಿಲ್ಲ. ಒಂದೊಂದು ಲಾರಿಯಲ್ಲ್ಲೂ ಏನಿಲ್ಲವೆಂದರೂ ಹತ್ತು ಹನ್ನೆರಡು ಬೃಹದಾಕಾರದ ಮರದ ದಿಮ್ಮಿಗಳು ಲಾರಿಯಿಂದ ನಾಲ್ಕೈದು ಅಡಿ ಹೊರಗೆ ಚಾಚಿಕೊಂಡಿರುತ್ತಿದ್ದವು. ಹೊರಗೆ ಚಾಚಿರುವ ಭಾಗದ ತೊಗಟೆಯನ್ನಷ್ಟೇ ತೆಗೆಯಲು ಹುಡುಗರಿಗೆ ಅನುಮತಿ ಇತ್ತು. ಕೆಲವರು ಅತಿಯಾಸೆಯಿಂದ ಡ್ರೈವರುಗಳ ಕಣ್ಣು ತಪ್ಪಿಸಿ, ಇಡೀ ದಿಮ್ಮಿಯ ತೊಗಟೆಯನ್ನೇ ಕಿತ್ತು ತೆಗೆಯುತ್ತಿದ್ದರು. ಹಾಗೆ ಮಾಡಿದರೆ ದಿಮ್ಮಿಗಳನ್ನು ಬಿಗಿಯಾಗಿ ಕಟ್ಟಿದ್ದ ದಾರ ಸಡಿಲವಾಗುತ್ತಿತ್ತು. ಒಮ್ಮೆ ಒಂದು ಲಾರಿ ಆಕ್ಸೆಲ್ ಕಟ್ಟಾಗಿ ಮೂರು ದಿನ ನಿಂತಾಗ, ಹುಡುಗರು ದಾಳಿ ಮಾಡಿ, ಎಲ್ಲಾ ದಿಮ್ಮಿಗಳ ತೊಗಟೆಗಳನ್ನೂ ಪೂರ್ತಿ ಕಿತ್ತುಬಿಟ್ಟಿದ್ದರು. ಆ ಲಾರಿ ರಿಪೇರಿಯಾಗಿ ಹೊರಟು, ಕುಮಾರಧಾರ ಸೇತುವೆ ದಾಟುವ ಹೊತ್ತಿಗೆ ದಿಮ್ಮಿಗಳ ಹಗ್ಗ ಸಡಿಲಾಗಿ ಒಂದೆರಡು ದಿಮ್ಮಿಗಳು ರಸ್ತೆಗೆ ಬಿದ್ದು ಜೋಲಿ ತಪ್ಪಿದ ಲಾರಿ ಸೇತುವೆಯ ಕಂಬಕ್ಕೆ ಡಿಕ್ಕಿ ಹೊಡೆದು ರಾದ್ಧಾಂತವಾಗಿತ್ತು. ಅದಾಗಿ ಒಂದೆರಡು ತಿಂಗಳ ಕಾಲ ದಿಮ್ಮಿಗಳ ತೊಗಟೆ ತೆಗೆಯುವುದಕ್ಕೆ ಪೋಲೀಸರು ನಿಷೇಧಿಸಿ, ಅಂಥ ಕೆಲಸ ಮಾಡುವವರನ್ನು ಅಟ್ಟಿಸಿಕೊಂಡು ಹೋಗಿ ಜಪ್ಪುತ್ತಿದ್ದರು. ನಂತರ ಎಲ್ಲವೂ ಮೊದಲಿನಂತೆಯೇ ಶುರುವಾಗುತ್ತಿತ್ತು.
ಆತ ಉಪ್ಪಿನಂಗಡಿಗೆ ಬಂದಿಳಿದದ್ದು ಅಂಥದ್ದೇ ಒಂದು ಲಾರಿಯಲ್ಲಿ. ಹಾಗೆ ಊರಿಂದೂರಿಗೆ ಬರುವವರು, ಕೆಲವು ಕಾಲ ಯಾವುದೋ ಊರಲ್ಲಿದ್ದು ಹೋಗುವವರನ್ನು ಪ್ರತಿ ಊರೂ ನೋಡುತ್ತಿದ್ದುದರಿಂದ ಆತ ಬಂದಾಗ ಯಾರಿಗೂ ಅಂಥ ಆಶ್ಚರ್ಯವಾಗಲೀ ಗಾಬರಿಯಾಗಲೀ ಆಗಲಿಲ್ಲ. ಕೊಲೆ ಮಾಡಿ ಓಡಿಬಂದವರು, ಕೊಲೆ ಆಗುತ್ತೇವೆಂದು ಪರಾರಿ ಆದವರು, ಕಳ್ಳತನ ಮಾಡಿ ಕೇಸಿಂದ ತಪ್ಪಿಸಿಕೊಳ್ಳಲು ಊರುಬಿಟ್ಟವರು ಲಾರಿ ಹತ್ತಿ ಯಾವುದಾದರೂ ಊರಿಗೆ ಬಂದಿಳಿಯುತ್ತಿದ್ದರು. ಗಂಡಸರು ಬಸ್ಸುಗಳಿಗಿಂತ ಲಾರಿಗಳಲ್ಲೇ ಹೆಚ್ಚು ಪ್ರಯಾಣ ಮಾಡುತ್ತಿದ್ದರು. ಲಾರಿ ಡ್ರೈವರುಗಳು ಎರಡೋ ಐದೋ ರುಪಾಯಿ ತಗೊಂಡು ಎಲ್ಲಿಂದ ಎಲ್ಲಿಗೆ ಬೇಕಾದರೂ ಕರೆದೊಯ್ಯುತ್ತಿದ್ದರು. ದಾರಿಯುದ್ಧಕ್ಕೂ ಚಿತ್ರವಿಚಿತ್ರವಾದ ಸಾಹಸಕತೆಗಳನ್ನು ಹೇಳುತ್ತಿದ್ದರು. ಘಾಟಿ ರಸ್ತೆ ತಿಂಗಳಿಗೆರಡು ಬಾರಿ ಕುಸಿಯುತ್ತಿದ್ದ ದಿನಗಳಲ್ಲಿ, ಬೆಂಗಳೂರಿನಿಂದ ಮಂಗಳೂರಿಗೆ ಲಾರಿಯಲ್ಲಿ ಬರುವುದೇ ಒಂದು ಸಾಹಸ ಯಾತ್ರೆಯಾಗಿತ್ತು.
ಅದರಲ್ಲೂ ಚಾರ್ಮಾಡಿ ಘಾಟಿ ಇಳಿದು ಬರುವವರನ್ನು ವೀರರೆಂಬಂತೆ ಜನ ನೋಡುತ್ತಿದ್ದರು. ಸಂಪಾಜೆ ಘಾಟಿಯೂ ಕಡಿಮೆ ಅಪಾಯಕಾರಿಯೇನೂ ಆಗಿರಲಿಲ್ಲ. ಹುಲಿ, ಚಿರತೆ, ಕತ್ತೆ ಕಿರುಬ, ಆನೆಗಳ ಹಿಂಡು, ಒಂಟಿ ಸಲಗ, ಕಾಳಿಂಗ ಸರ್ಪ ಮುಂತಾದವು ಆಗಾಗ ಎದುರಾಗುತ್ತಿದ್ದವು. ಮರದ ದಿಮ್ಮಿಗಳನ್ನು ಸಾಗಿಸುವುದಕ್ಕೆ ಬಳಸುತ್ತಿದ್ದ ಲಾರಿಗಳು ಆಕ್ಸೆಲ್ ಕಟ್ಟಾಗಿಯೋ ಮೇಲೇರುವ ಲಾರಿಗೆ ದಾರಿ ಮಾಡಿಕೊಡಲು ರಸ್ತೆಯ ಪಕ್ಕಕ್ಕಿಳಿದು ಹೂತುಕೊಂಡೋ ಟಯರು ಸಿಡಿದು ಹೋಗಿಯೋ ದಿನಗಟ್ಟಲೆ ಘಾಟಿ ರಸ್ತೆಯ ನಿರ್ಜನ ಏಕಾಂತದಲ್ಲಿ ನಿಂತುಬಿಡುತ್ತಿದ್ದವು. ಅಂಥ ಹೊತ್ತಲ್ಲಿ ಇಬ್ಬರಿಗಿಂತ ಮೂವರು ಮೇಲು ಅನ್ನುವ ಕಾರಣಕ್ಕೆ ಲಾರಿ ಡ್ರೈವರುಗಳು ಕೈ ಅಡ್ಡ ಮಾಡಿದವರನ್ನು ಹತ್ತಿಸಿಕೊಳ್ಳಲು ಹಿಂದು ಮುಂದು ನೋಡುತ್ತಿರಲಿಲ್ಲ.
ಘಾಟಿ ರಸ್ತೆಯಲ್ಲಿ ರಾತ್ರಿಗಳನ್ನು ಕಳೆಯುವುದು ಎಷ್ಟು ಭಯಾನಕ ಎನ್ನುವುದು ಲಾರಿ ಡ್ರೈವರುಗಳಿಗೆ ಮಾತ್ರ ಗೊತ್ತಿತ್ತು. ಅವರು ಲಾರಿಯ ಮುಂದೆ ಬೆಂಕಿ ಉರಿಸಿ ಕಾಡು ಪ್ರಾಣಿಗಳು ಸಮೀಪ ಸುಳಿಯದಂತೆ ಕಾಯುತ್ತಿದ್ದರು. ಅದನ್ನು ಲೆಕ್ಕಿಸದೇ ಆನೆಗಳು ಎಷ್ಟೋ ಸಾರಿ ಲಾರಿಗಳನ್ನು ಮರದ ದಿಮ್ಮಿಗಳ ಸಮೇತ ಉರುಳಿಸಿ ಹೋಗುತ್ತಿದ್ದವು. ಇವನ್ನೆಲ್ಲ ಹೇಗೋ ಸಹಿಸಿಕೊಂಡಿದ್ದ ಲಾರಿ ಡ್ರೈವರುಗಳನ್ನು ಕಾಡುತ್ತಿದ್ದದ್ದು ದೆವ್ವದ ಕಾಟ. ಘಾಟಿ ರಸ್ತೆಯ ತಿರುವುಗಳಲ್ಲಿ ಮಗುಚಿ ಬಿದ್ದ ಲಾರಿಗಳ ಅಡಿಗೆ ಸಿಕ್ಕು ದುರ್ಮರಣ ಹೊಂದಿದ ಡ್ರೈವರುಗಳೆಲ್ಲ ದೆವ್ವಗಳಾಗಿ ಅಲ್ಲೇ ತಿರುಗುತ್ತಿದ್ದಾರೆ ಅನ್ನುವ ವದಂತಿಗಳಿದ್ದವು.
ಅಂಥ ಕತೆಗಳನ್ನೆಲ್ಲ ಉಪ್ಪಿನಂಗಡಿಯ ಫಾರೆಸ್ಟು ಗೇಟಿನಲ್ಲಿ ಲಾರಿ ನಿಲ್ಲಿಸಿ, ಟೀ ಕುಡಿಯುತ್ತಾ ಡ್ರೈವರುಗಳು ಹೇಳುತ್ತಿದ್ದರು. ಅವುಗಳಲ್ಲಿ ಅತ್ಯಂತ ಜನಪ್ರಿಯವಾದ ಕತೆಯೆಂದರೆ ಸೋಮಣ್ಣ ಎಂಬ ಹಾಸನದ ಡ್ರೈವರು ಚಾರ್ಮಾಡಿ ಘಾಟಿಯ ಹದಿಮೂರನೇ ಹೇರ್ ಪಿನ್ ತಿರುವಿನಲ್ಲಿ ದೆವ್ವವಾದದ್ದು. ಸೋಮಣ್ಣನ ದೆವ್ವ ರಸ್ತೆ ರಿಪೇರಿಯವನ ವೇಷ ಹಾಕಿಕೊಂಡು ಹದಿಮೂರನೇ ತಿರುವಿನಲ್ಲಿ ಕಾಯುತ್ತಿತ್ತು. ನಡುರಾತ್ರಿ ಒಂಟಿಯಾಗಿ ಬರುವ ಲಾರಿಯನ್ನು ನಿಲ್ಲಿಸಿ, ಮುಂದೆ ರಸ್ತೆ ಕೆಟ್ಟು ಹೋಗಿದೆ ಎಂದು ಲಾರಿಯನ್ನು ರಿವರ್ಸ್ ತೆಗೆದುಕೊಂಡು ಹೋಗಿ ಎಡಬದಿಯಲ್ಲಿರುವ ತಾತ್ಕಾಲಿಕ ರಸ್ತೆಯಲ್ಲಿ ಹೋಗಬೇಕೆಂದೂ ಸೂಚಿಸುತ್ತಿತ್ತು. ಡ್ರೈವರುಗಳು ಅದನ್ನು ನಂಬಿ, ಯಮಸಾಹಸದಿಂದ ಲಾರಿಯನ್ನು ರಿವರ್ಸು ತೆಗೆಯುತ್ತಿದ್ದರು.
ಕೊಂಚ ದೂರ ಹೋದ ನಂತರ ಎಡಕ್ಕೊಂದು ರಸ್ತೆ ಕಾಣಿಸುತ್ತಿತ್ತು. ಆ ರಸ್ತೆಯಲ್ಲಿ ಲಾರಿಯನ್ನು ಓಡಿಸಿಕೊಂಡು ಹೋಗುತ್ತಿದ್ದರು. ಸುಮಾರು ದೂರ ಹೋದ ನಂತರ ರಸ್ತೆ ಇದ್ದಕ್ಕಿದ್ದಂತೆ ಕೊನೆಯಾಗುತ್ತಿತ್ತು. ಲಾರಿ ಡ್ರೈವರುಗಳು ಗಾಬರಿಯಾಗಿ ವಾಪಸ್ಸು ಬರಲು ನೋಡಿದರೆ ಹಿಂದಕ್ಕೆ ಬರಲೂ ರಸ್ತೆಯಿರುತ್ತಿರಲಿಲ್ಲ. ಬಂದ ರಸ್ತೆಯೂ ಮಾಯವಾಗಿ ಕಾಡಿನ ಮಧ್ಯೆ ಏರು ತಗ್ಗುಗಳ ನಡುವೆ ಅಲ್ಲಾಡಿಸುವುದಕ್ಕೂ ಸಾಧ್ಯವಿಲ್ಲದಂತೆ ಲಾರಿ ಸ್ಥಾಪನೆಯಾಗಿರುತ್ತಿತ್ತು. ಇದು ದೆವ್ವದ ಕೆಲಸ ಎಂದು ಖಾತ್ರಿಯಾಗಿ ಲಾರಿ ಡ್ರೈವರುಗಳು ಸತ್ತೆನೋ ಕೆಟ್ಟೆನೋ ಎಂದು ಅಲ್ಲಿಂದ ಓಡಿ ಬಂದು ಯಾವುದಾದರೊಂದು ಲಾರಿ ಹತ್ತಿ ಕೊಟ್ಟಿಗೆಹಾರವನ್ನೋ ಉಜಿರೆಯನ್ನೋ ಸೇರುತ್ತಿದ್ದರು.
ಇದು ದೆವ್ವದ ಕಾಟವೇನೂ ಆಗಿರಲಿಲ್ಲ. ಕುಡಿದ ಮತ್ತಿನಲ್ಲಿ ಡ್ರೈವರುಗಳು ನಿದ್ದೆಗೆ ಶರಣಾಗಿ, ಲಾರಿಯನ್ನು ಕ್ಲೀನರುಗಳ ಕೈಗೆ ಕೊಟ್ಟು ತಾವು ಗೊರಕೆ ಹೊಡೆಯುತ್ತಿದ್ದರು. ಘಾಟಿರಸ್ತೆಯಲ್ಲಿ ಲಾರಿ ಓಡಿಸಿ ಅನುಭವವಿಲ್ಲದ ಕ್ಲೀನರುಗಳು ಲಾರಿಯನ್ನು ಹಿಗ್ಗಾಮುಗ್ಗಾ ಓಡಿಸಿ, ರಸ್ತೆ ಯಾವುದು, ನೆಲ ಯಾವುದು ಗೊತ್ತಾಗದೇ ಹೀಗಾಗುತ್ತಿತ್ತು. ಆ ಕಾಲದ ಲಾರಿಗಳ ಹೆಡ್ ಲೈಟುಗಳೂ ಅಷ್ಟೇನೂ ಪ್ರಕಾಶಮಾನವಾಗಿ ಇರುತ್ತಿರಲಿಲ್ಲ. ಹೀಗಾಗಿ ಬೆಳದಿಂಗಳ ರಾತ್ರಿಯಲ್ಲಂತೂ ರಸ್ತೆ ಯಾವುದು, ನೆಲ ಯಾವುದು ಅನ್ನುವುದು ಗೊತ್ತೇ ಆಗುತ್ತಿರಲಿಲ್ಲ.
ಇದರ ಹಿಂದೆ ಇನ್ನೊಂದು ಹುನ್ನಾರವೂ ಇತ್ತು. ಅಕ್ಕಿ ಬೇಳೆ ಸಾಗಿಸುವ ಲಾರಿಗಳನ್ನು ಹೀಗೆ ದಾರಿತಪ್ಪಿಸಿ, ಡ್ರೈವರು ಓಡಿ ಹೋದ ನಂತರ ಕಳ್ಳರು ಲಾರಿಗಳಲ್ಲಿದ್ದ ಸಾಮಾನುಗಳನ್ನೆಲ್ಲ ದೋಚುತ್ತಿದ್ದರು. ಕುಡಿದ ಮತ್ತಿನಲ್ಲಿ ಡ್ರೈವರುಗಳಿಗೆ ಅದು ಕಳ್ಳರ ಹುನ್ನಾರ ಎಂದು ಗೊತ್ತೇ ಆಗುತ್ತಿರಲಿಲ್ಲ. ದೆವ್ವದ ಭೀತಿ ಅವರನ್ನು ಅಲ್ಲಿಂದ ಪರಾರಿ ಆಗುವಂತೆ ಮಾಡುತ್ತಿತ್ತು.
ಇಂಥ ಕತೆಗಳನ್ನೆಲ್ಲ ಡ್ರೈವರುಗಳು ಹೇಳುತ್ತಾ ಕೂತಿದ್ದರೆ, ನಮ್ಮೂರ ಮಂದಿ ಅದನ್ನು ಅತೀವ ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದರು. ಹಳೇ ಕಾಲದಲ್ಲಿ ಸಮುದ್ರಯಾನ ಮಾಡಿ, ಸಮುದ್ರಕಳ್ಳರ ಕೈಯಿಂದ ತಪ್ಪಿಸಿಕೊಂಡು ಬಂದ ನಾವಿಕರ ಕತೆಗಳಂತೆ ವಾರಕ್ಕೊಂದು ಹೊಸ ಕತೆಯಾದರೂ ನಮ್ಮೂರಲ್ಲಿ ಚಾಲ್ತಿಯಲ್ಲಿರುತ್ತಿತ್ತು.
ಅಂಥ ಕತೆಗಳ ಒಂದು ಪಾತ್ರವಾಗಿಯೇ ಆತ ನಮ್ಮೂರಿಗೆ ಕಾಲಿಟ್ಟ. ಫಾರೆಸ್ಟು ಗೇಟಿನ ಹತ್ತಿರ ಒಂದು ಕೈ ಚೀಲ ಹಿಡಕೊಂಡು, ಮಳೆಗೆ ಒದ್ದೆಮುದ್ದೆಯಾಗಿ ದೂಜ ಪೊರ್ಬುಗಳ ಅಂಗಡಿಗೆ ಬಂದು, ಜೋಬಿನಿಂದ ಒದ್ದೆಯಾದ ಬೀಡಿ ತೆಗೆದು, ಅದನ್ನು ಒಲೆತಿಟ್ಟೆಯ ಮೇಲಿಟ್ಟು ಗೊಗ್ಗರು ದನಿಯಲ್ಲಿ ಒಂದು ಚಾ ಕೊಡಿ ಅಂತ ಒಲೆಯ ಪಕ್ಕದಲ್ಲೇ ಆಸೀನನಾದ ಆತನಿಗೆ ತಾನು ಉಪ್ಪಿನಂಗಡಿಯಲ್ಲೇ ಉಳಿಯುತ್ತೇನೆ ಅನ್ನುವುದು ಆ ಕ್ಷಣ ಗೊತ್ತಿರಲಿಲ್ಲ ಎಂದು ಕಾಣುತ್ತದೆ.
ದೂಜ ಪೊರ್ಬುಗಳ ಅಂಗಡಿ ರಾತ್ರಿ ಹಗಲೂ ತೆರೆದಿರುತ್ತಿತ್ತು. ಹಗಲು ದೂಜ ಪೊರ್ಬುಗಳ ಹೆಂಡತಿ ರೀಟಕ್ಕ ಸೋಡಾ ಸರಬತ್ತು ಮಾಡಿಕೊಡುತ್ತಿದ್ದರು. ರಾತ್ರಿ ಹೊತ್ತು ದೂಜ ಪೊರ್ಬುಗಳೇ ಕೂತಿರುತ್ತಿದ್ದರು. ಹಗಲೆಲ್ಲ ಪೊರ್ಬುಗಳು ತಮ್ಮ ಹಳೇ ಸೈಕಲ್ಲಿನಲ್ಲಿ ಹಂದಿ ಕಟ್ಟಿಕೊಂಡು ಬಂದು, ಅದನ್ನು ಮನೆಯಲ್ಲಿ ಕೊಯ್ದು ಬುಟ್ಟಿಯಲ್ಲಿ ಒಯ್ದು ಮನೆಮನೆಗೆ ಕೊಟ್ಟು ಬರುವ ಕೆಲಸ ಮಾಡುತ್ತಿದ್ದರು.
ಅಂಗಡಿಯಲ್ಲಿ ಬೀಡಿ ಒಣಗಿಸಲೆಂದು ಬಂದ ಕೂತ ಆತ ಟೀ ಕುಡಿದು ಎದ್ದು ಹೋಗುತ್ತಾನೆ ಅಂತ ಪೊರ್ಬುಗಳು ಅಂದುಕೊಂಡಿದ್ದರು. ಆತ ಬಂದ ಲಾರಿ ಹೊರಟು ಹೋದರೂ, ಆತ ಮಾತ್ರ ಕೂತಲ್ಲಿಂದ ಏಳಲಿಲ್ಲ. ಪೊರ್ಬುಗಳು ಓಯ್, ನೀವು ಬಂದ ಲಾರಿ ಹೊರಟಿದೆ ಅಂತ ದೊಡ್ಡ ದನಿಯಲ್ಲಿ ಕೂಗಿ ಹೇಳಿದರು. ಆತ ಅದು ಕೇಳಿಸಲೇ ಇಲ್ಲ ಎಂಬಂತೆ ಉರಿಯುವ ಬೆಂಕಿಯನ್ನೇ ದಿಟ್ಟಿಸಿ ನೋಡುತ್ತಾ ಕೂತಿದ್ದ. ದೂಜ ಪೊರ್ಬುಗಳು ಅವನ ಹತ್ತಿರ ಬಂದು ಆತನ ಭುಜ ಹಿಡಿದು ಅಲ್ಲಾಡಿಸಿದರು. ಆತ ಯಾವುದೋ ಜಗತ್ತಿನಿಂದ ಆಚೆ ಬಂದವನಂತೆ ಕಣ್ಣೆತ್ತಿ ನೋಡಿದ. ಪೊರ್ಬುಗಳು ಬೆರಳು ಮಾಡಿ ಲಾರಿ ತೋರಿಸಿದರು.
ಆತ ಲಾರಿ ಹತ್ತುವ ಯಾವ ಆಸಕ್ತಿಯನ್ನೂ ತೋರದೇ, `ಈ ಊರಲ್ಲಿ ಎರಡು ಹೊಳೆ ಇರಬೇಕಲ್ಲ. ಒಂದು ದಾರೀಲಿ ಕಂಡ್ತು. ಇನ್ನೊಂದೆಲ್ಲಿದೆ ‘ ಅಂತ ನಿಗೂಢವಾಗಿ ಕೇಳಿದ.
ಪೊರ್ಬುಗಳು ಇದೆಂಥ ಪ್ರಶ್ನೆ ಅಂತ ಗಾಬರಿ ಬಿದ್ದು ಆತನ ಮುಖವನ್ನೇ ನೋಡಿದರು. ಬಹುಶಃ ಎರಡು ಹೊಳೆಗಳು ಸೇರುವ ಜಾಗಕ್ಕೆ ಪಿಂಡ ಪ್ರಧಾನ ಮಾಡುವುದಕ್ಕೆ ಬಂದವನಿರಬೇಕು. ಅಪ್ಪನನ್ನೋ ಅಮ್ಮನನ್ನೋ ಕಳಕೊಂಡ ಅಬ್ಬೇಪಾರಿ ಇರಬೇಕು ಅಂದುಕೊಂಡು ದೂಜ ಪೊರ್ಬುಗಳು ಸುಮ್ಮನಾದರು.
ಆವತ್ತು ರಾತ್ರಿ ಆತ ಫಾರೆಸ್ಟು ಗೇಟಿನ ಪಕ್ಕದಲ್ಲೇ ಇರುವ ಚೆಕ್ ಪೋಸ್ಟಿನಲ್ಲಿ ಕುಳಿತೇ ಕಾಲ ಕಳೆದ. ಅಲ್ಲಿ ಲಾರಿಗಳನ್ನು ನಿಲ್ಲಿಸಿ, ಅದರ ದಾಖಲೆಗಳನ್ನು ಪರಿಶೀಲಿಸುವುದನ್ನು ನೋಡುತ್ತಾ ಕೂತಿದ್ದ. ಹಾಗೆ ಇಡೀ ರಾತ್ರಿ ಕೂತ ಆತ ರಾತ್ರಿ ಹತ್ತು ಗಂಟೆಯಿಂದ ಬೆಳಗ್ಗೆ ಐದು ಗಂಟೆಯ ಒಳಗೆ ನೂರು ನೂರೈವತ್ತು ಲಾರಿಗಳು ಮರದ ದಿಮ್ಮಿಗಳನ್ನು ಸಾಗಿಸುತ್ತವೆಂದೂ ಒಂದೊಂದು ಲಾರಿ ಡ್ರೈವರುಗಳೂ ಚೆಕ್ ಪೋಸ್ಟಿನ ಅಧಿಕಾರಿಗಳಿಗೆ ಹತ್ತು ರುಪಾಯಿ ಕೊಡುತ್ತಾರೆಂದೂ ಆ ಲಾರಿ ಡ್ರೈವರುಗಳಿಗೆ ಎಲ್ಲರಿಗಿರುವಂಥ ಬದುಕು ಇರುವುದಿಲ್ಲವೆಂಬುದನ್ನು ನೋಡುತ್ತಾ ಕೂತಿದ್ದ. ಚೆಕ್ ಪೋಸ್ಟಿನ ಹುಡುಗರು ಮುಂಜಾನೆ ನಾಲ್ಕು ಗಂಟೆಗೆ ನಿದ್ದೆ ತಾಳಲಾರದೆ, ಗೇಟು ತೆರೆದೇ ಇಟ್ಟು ನಿದ್ದೆ ಹೋದರು. ಆತ ಮಾತ್ರ ಆ ರಾತ್ರಿ ನಿದ್ದೆ ಮಾಡಲಿಲ್ಲ.
ಕುರುಡು ದೀಪದ ಕೆಳಗೆ ನೆರಳಿಗೇನು ಕೆಲಸ?
ರಾಧಾಕೃಷ್ಣ ಬೆಳಗ್ಗೆ ಅಷ್ಟು ಹೊತ್ತಿಗಾಗಲೇ ಸ್ಕೂಟರ್ ಹತ್ತಿಕೊಂಡು ಪುತ್ತೂರಿಗೆ ಹೋಗಿ ಪೇಪರ್ ತಂದಿದ್ದ. ಅದರಲ್ಲಿ ಸೀತಾರಾಮ ಯರ್ಮುಂಜನ ಸಂದರ್ಶನ ಬಂದಿತ್ತು. ಅದನ್ನು ನೋಡುತ್ತಿದ್ದಂತೆ ರಾಧಾಕೃಷ್ಣ ಗಾಬರಿ ಬಿದ್ದ. ಸಂದರ್ಶನ- ರಾಧಾಕೃಷ್ಣ ಕಾಮತ್ ಎಂದು ಅವನ ಹೆಸರನ್ನೇ ಪ್ರಕಟಿಸಿದ್ದರು. ಉಪ್ಪಿನಂಗಡಿ ಡೇಟ್‌ಲೈನ್ ಇದ್ದ ಸಂದರ್ಶನ ಅದು. ಸಂಪಾದಕರಿಗೆ ಫೋನ್ ಮಾಡಿ ಕೃತಜ್ಞತೆ ಹೇಳಬೇಕೋ, ತನ್ನನ್ನು ತಮಾಷೆ ಮಾಡಲು ತನ್ನ ಹೆಸರು ಹಾಕಿದ್ದಾರಾ ಅಥವಾ ಉಪ್ಪಿನಂಗಡಿಯಿಂದ ಬಂದ ಸಂದರ್ಶನ ಆಗಿದ್ದರಿಂದ ಯಾರಾದರೂ ಉಪಸಂಪಾದಕರು ತನ್ನ ಹೆಸರು ಹಾಕಿರಬಹುದಾ ಅಂತ ತಕ್ಷಣ ರಾಧಾಕೃಷ್ಣನಿಗೆ ಹೊಳೆಯಲಿಲ್ಲ.
ರಾಧಾಕೃಷ್ಣ ಅಷ್ಟು ಬೇಗ ಹೋಗಿ ಪೇಪರ್ ತಂದಿದ್ದರ ಉದ್ದೇಶ, ಅದನ್ನು ಸೀತಾರಾಮನಿಗೆ ತೋರಿಸುವುದಷ್ಟೇ ಆಗಿತ್ತು. ಬೆಳಗ್ಗೆಯೇ ಹೋಗಿ ಪೇಪರ್ ಕೊಟ್ಟು ಸಂಪಾದಕರ ಹತ್ತಿರ ತನ್ನ ಬಗ್ಗೆ ಎರಡು ಒಳ್ಳೆಯ ಮಾತುಗಳನ್ನು ಹೇಳುವಂತೆ ಕೇಳಿಕೊಳ್ಳಬೇಕು ಅಂತ ಅವನು ರಾತ್ರಿಯೇ ನಿರ್ಧಾರ ಮಾಡಿದ್ದ. ಅದೇ ಉದ್ದೇಶದಿಂದ ಪೇಪರ್ ತಂದು ನೋಡಿದರೆ ತನ್ನ ಹೆಸರೇ ಇದೆ. ಸೀತಾರಾಮನಿಗೆ ಬಿಟ್ಟರೆ ಮತ್ಯಾರಿಗೂ ಆ ಸಂದರ್ಶನ ಮಾಡಿದ್ದು ತಾನಲ್ಲ ಅಂತ ಗೊತ್ತಾಗುವುದಕ್ಕೆ ಸಾಧ್ಯವಿಲ್ಲ. ರಾಧಾಕೃಷ್ಣನಿಗೆ ಖುಷಿಯಾಯಿತು.
ಆ ಖುಷಿ ತುಂಬ ಹೊತ್ತು ಉಳಿಯಲಿಲ್ಲ. ಸಂದರ್ಶನ ಓದುತ್ತಾ ಹೋದಂತೆ ಅವನಿಗೆ ಗಾಬರಿ ಆಗತೊಡಗಿತು. ಬೆಳಗಿನ ತಣ್ಣಗೆ ಗಾಳಿಯಲ್ಲೂ ಬೆವರುತ್ತಾ ರಾಧಾಕೃಷ್ಣ ಒಂದೊಂದು ಅಕ್ಷರವನ್ನೂ ಮೂರು ಮೂರು ಸಲ ಓದತೊಡಗಿದ. ಪ್ರಶ್ನೋತ್ತರ ರೂಪದಲ್ಲಿದ್ದ ಸಂದರ್ಶನದಲ್ಲಿ ಸೀತಾರಾಮ ತುಂಬ ಕಟುವಾಗಿ ಮಾತಾಡಿದ್ದ. ಪ್ರಶ್ನೆಗಳೂ ಅಷ್ಟೇ ಕಟುವಾಗಿದ್ದವು.
ಸೀತಾರಾಮ ಇಡೀ ದಕ್ಷಿಣ ಕನ್ನಡದ ಸಾಂಸ್ಕೃತಿಕ ಪರಿಸರವನ್ನು ಆಡಳಿತ ಪಕ್ಷ ಹಾಳುಗೆಡವುತ್ತಿದೆ ಅಂತೆಲ್ಲ ಮಾತಾಡಿದ್ದ. ಒಂದು ಕಾಲದಲ್ಲಿ ಸಹನೆಗೆ ಹೆಸರಾಗಿದ್ದ ನಾಡು ಇವತ್ತು ಅಸಹನೆಯ ಗೂಡಾಗಿದೆ. ಅಂಧಶ್ರದ್ಧೆ, ಕೋಮುವಾದಿ ನಿಲುವು ಮತ್ತು ಮತಾಂಧತೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿರುವುದು ಈ ಪ್ರದೇಶದಲ್ಲೇ. ಅಕ್ಷರಸ್ಥರು ಹೆಚ್ಚುತ್ತಿರುವ ಸೀಮೆಯಲ್ಲೇ ಅನಾಗರಿಕತೆ ಹೆಚ್ಚುತ್ತಿರುವುದಕ್ಕೆ ಕಾರಣ ರಾಜಕೀಯ ಕುಮ್ಮಕ್ಕು, ಜಿಲ್ಲೆಯನ್ನು ಭದ್ರಕೋಟೆ ಮಾಡಿಕೊಳ್ಳುವ ಹುನ್ನಾರ ಇದು. ಅಲ್ಪಸಂಖ್ಯಾತರ ಮತಗಳನ್ನು ಧಿಕ್ಕರಿಸುವ ಮೂಲಕ, ಪರ್ಯಾಯ ಶಕ್ತಿಯೊಂದನ್ನು ಹುಟ್ಟುಹಾಕುವ ಪ್ರಯತ್ನ ಇಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಜಿಲ್ಲೆಯ ವ್ಯಾಪಾರಿಗಳಿಗಾಗಲೀ, ಶಿಕ್ಷಣ ಸಂಸ್ಥೆಯ ಮಾಲೀಕರಿಗಾಗಲೀ ಇಂಥದ್ದರಲ್ಲಿ ಆಸಕ್ತಿಯಿಲ್ಲ. ಆದರೆ ರಾಜಕೀಯ ಪಕ್ಷಗಳಿವೆ ಇದು ಬೇಕಾಗಿದೆ. ಈಗ ಆಳುತ್ತಿರುವ ಪಕ್ಷಕ್ಕೆ ಜಿಲ್ಲೆ ಪ್ರಯೋಗಶಾಲೆ ಆಗಿಬಿಟ್ಟಿದೆ. ಇಲ್ಲಿ ಮುಗ್ಧ ಸಹಜ ಪ್ರೇಮವನ್ನು ಹೊಸಕಿ ಹಾಕಲಾಗುತ್ತಿದೆ. ಒಂದು ಗಂಡು ಮತ್ತು ಒಂದು ಹೆಣ್ಣು ಜೊತೆಯಾಗಿ ಓಡಾಡುವುದಕ್ಕೆ ಸಾಧ್ಯವಿಲ್ಲದ ವಾತಾವರಣ ನಿರ್ಮಾಣವಾಗಿದೆ. ಅಂಧಶ್ರದ್ಧೆ, ಬಡತನ ಮತ್ತು ಜಾತೀಯತೆಗಿಂತ ಅಪಾಯಕಾರಿಯಾದ ವಿಚಾರಧಾರೆಯನ್ನು ಬಿತ್ತಲಾಗುತ್ತಿದೆ. ಮೂಡನಂಬಿಕೆಯನ್ನು ವಿಜ್ಞಾನ, ಬಡತನವನ್ನು ಅಭಿವೃದ್ಧಿ ರಾಜಕಾರಣ, ಜಾತೀಯತೆಯನ್ನು ಸಾಕ್ಷರತೆ ಒಂದಲ್ಲ ಒಂದು ದಿನ ಹೊಡೆದಟ್ಟಬಹುದು. ಆದರೆ ಮತಾಂಧತೆಯನ್ನು ಹೊಡೆದಟ್ಟುವ ಉಪಾಯಗಳು ನಮಗಿನ್ನೂ ಗೊತ್ತಿಲ್ಲದ ಹೊತ್ತಲ್ಲಿ, ಇಲ್ಲಿ ಅದನ್ನೇ ಬಿತ್ತಿ ಬೆಳೆಯಲಾಗುತ್ತಿದೆ ಎಂದು ಸೀತಾರಾಮ ಮಾತಾಡಿದ್ದ.
ರಾಧಾಕೃಷ್ಣನಿಗೆ ಅದರಿಂದಾಗಬಹುದಾದ ಪರಿಣಾಮದ ಅರಿವಾಗದೇ ಇರಲಿಲ್ಲ. ಆ ಸಂದರ್ಶನವನ್ನು ತನ್ನ ಹೆಸರಲ್ಲಿ ಪ್ರಕಟಿಸಿದ ಕುಚೋದ್ಯವೂ ವೇದ್ಯವಾಯಿತು. ಇಡೀ ದಕ್ಷಿಣ ಕನ್ನಡವನ್ನೇ ಆ ಸಂದರ್ಶನ ಅಲ್ಲಾಡಿಸಿಬಿಡುತ್ತದೆ. ನಾಳೆ ಹೊತ್ತಿಗೆ ಸೀತಾರಾಮ ಯರ್ಮುಂಜ ಉಪ್ಪಿನಂಗಡಿಯಲ್ಲಿ ಇರುವುದಿಲ್ಲ. ತಾನಿಲ್ಲಿಯೇ ಇರಬೇಕಾದವನು, ಇಡೀ ಊರಿನ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಅಲ್ಲಿಗೆ ತನ್ನ ಸಾರ್ವಜನಿಕ ಜೀವನ ಮುಗಿದಂತೆ. ಇದರ ವಿರುದ್ಧ ಪ್ರತಿಭಟನೆಗಳು ನಡೆದರೂ ನಡೆಯಬಹುದು.
ರಾಧಾಕೃಷ್ಣನನ್ನು ಎಲ್ಲಕ್ಕಿಂತ ಹೆಚ್ಚು ಕಂಗಾಲು ಮಾಡಿದ್ದು ಅಲ್ಲಿ ಸೀತಾರಾಮ ಪ್ರಸ್ತಾಪ ಮಾಡಿರುವ ಹೆಸರುಗಳು. ಅವರೆಲ್ಲರೂ ಅಪಾಯಕಾರಿಗಳೆಂದು ಆತನಿಗೆ ಗೊತ್ತಿತ್ತು. ಅವರೊಂದು ಮಾತು ಹೇಳಿದರೆ, ಅವರ ಹುಡುಗರು ದಂಡೆತ್ತಿ ಬರುತ್ತಾರೆ. ಅವರ ಮುಂದೆ ನಿಲ್ಲುವ ಶಕ್ತಿ ತನಗಷ್ಟೇ ಅಲ್ಲ, ಯಾರಿಗೂ ಇಲ್ಲ. ಇಂಥ ಮಾತುಗಳನ್ನು ಆಡಿದ ಮಂಗಳೂರಿನ ಪತ್ರಿಕಾ ಕಛೇರಿಯನ್ನೇ ಅವರು ಧ್ವಂಸ ಮಾಡಿ ಬೆಂಕಿ ಹಚ್ಚಿದ್ದನ್ನು ರಾಧಾಕೃಷ್ಣ ಕಣ್ಣಾರೆ ನೋಡಿದ್ದ.
ಈ ಸಂದರ್ಶನ ತಾನು ಮಾಡಿದ್ದಲ್ಲ ಅಂತ ಹೇಳುವಂತೆಯೂ ಇಲ್ಲ. ತಾನು ಸಂದರ್ಶನಕ್ಕೆ ಹೊರಟಿದ್ದನ್ನು ಮಲ್ಯ ನೋಡಿದ್ದಾನೆ. ಸಂಪಾದಕರಿಂದ ಬೈಸಿಕೊಂಡು ಹೋಗಿದ್ದನ್ನು ಈಗಾಗಲೇ ಅವನು ನಾಲ್ಕೈದು ಮಂದಿಗಾದರೂ ಹೇಳಿರುತ್ತಾನೆ. ತಾನು ಆಸ್ಪತ್ರೆಯಲ್ಲಿ ಸೀತಾರಾಮನ ಜೊತೆಗಿದ್ದದ್ದನ್ನು ಡಾಕ್ಟರ್ ನೋಡಿದ್ದಾರೆ.
ಅರ್ಧಗಂಟೆಯ ಹಿಂದೆ ಕೆಲಸ ಉಳಿಸಿಕೊಳ್ಳುವುದು ಹೇಗೆ ಅಂತ ಚಿಂತಿಸುತ್ತಿದ್ದ ರಾಧಾಕೃಷ್ಣ, ಈಗ ಕೆಲಸ ಕಳೆದುಕೊಳ್ಳುವುದು ಹೇಗೆ ಎಂದು ಯೋಚಿಸತೊಡಗಿದ. ಇನ್ನು ಸ್ವಲ್ಪ ಹೊತ್ತಿಗೆಲ್ಲ ಪತ್ರಿಕೆ ಎಲ್ಲರ ಕೈಗೂ ಸಿಗುತ್ತದೆ. ಗದ್ದಲ ಶುರುವಾಗುತ್ತದೆ. ಇದರಿಂದ ಪಾರಾಗುವುದು ಹೇಗೆ? ಸೀತಾರಾಮನನ್ನೇ ಕೇಳಬೇಕು ಅಂದುಕೊಂಡು ರಾಧಾಕೃಷ್ಣ ಆಸ್ಪತ್ರೆಯತ್ತ ಧಾವಿಸಿದ. ಒಂದು ಬಸ್ಸು ಹೊಳೆಗೆ ಬಿದ್ದದ್ದರ ಪರಿಣಾಮ ಇಷ್ಟು ಭೀಕರವಾಗಿರುತ್ತದೆ ಅನ್ನುವ ಕಲ್ಪನೆಯೂ ತನಗಿರಲಿಲ್ಲವಲ್ಲ? ಪತ್ರಿಕೆಯಲ್ಲಿ ಹೆಸರು ಬರಬೇಕು ಅಂತ ಎಷ್ಟು ದಿನದಿಂದ ಅಂದುಕೊಂಡಿದ್ದೆ. ಈಗ ಬರಬಾರದ ಕಡೆಯಲ್ಲಿ ತನ್ನ ಹೆಸರು ಬಂದಿದೆ. ಅಲ್ಲಿಗೆ ಪತ್ರಿಕೋದ್ಯಮ ಮುಗಿಯಿತು. ಅಷ್ಟೇ ಅಲ್ಲ, ಬದುಕೂ ಮುಗಿದಂತೆಯೇ.
ರಾಧಾಕೃಷ್ಣ ಅಷ್ಟೆಲ್ಲ ಹೆದರುವುದಕ್ಕೆ ಕಾರಣಗಳಿದ್ದವು. ಹಿಂದಿನ ವರ್ಷ ಉಪ್ಪಿನಂಗಡಿ ಜೂನಿಯರ್ ಕಾಲೇಜಿನ ವಾರ್ಷಿಕೋತ್ಸವದಲ್ಲಿ ರಕ್ತದೋಕುಳಿ ಹರಿದಿತ್ತು. ರಂಗದ ಮೇಲೆ ತುಳು ನಾಟಕ ನಡೆಯುತ್ತಿದ್ದರೆ ಐದಾರು ಜೀಪುಗಳಲ್ಲಿ ಧಾವಿಸಿ ಬಂದವರು ಕಂಡಕಂಡವರನ್ನೆಲ್ಲ ಕೊಚ್ಚಿ ಹಾಕಿದ್ದರು. ನಡುರಾತ್ರಿಯ ಹೊತ್ತಿಗೆ ಕಾಲೇಜಿನ ಕಾಂಪೋಂಡಿನೊಳಗೆ ನುಗ್ಗಿ ಒಂದಷ್ಟು ಮಂದಿಯ ಕೈ ಕಾಲು ಕತ್ತರಿಸಿದ್ದರು. ಎಷ್ಟೋ ಮಂದಿ ಕಾಲೇಜಿನ ಹಿಂಬದಿಯಲ್ಲಿರುವ ಸ್ಮಶಾನಕ್ಕೆ ಹೋಗಿ ಅವಿತಿಟ್ಟುಕೊಂಡರೆ, ಮತ್ತೊಂದಷ್ಟು ಮಂದಿ ಹೊಳೆಗೆ ಹಾರಿ ಈಜಿಕೊಂಡು ಆಚೆ ದಡ ಸೇರಿ ಪಾರಾಗಿದ್ದರು. ಇಂಗ್ಲಿಷ್ ಲೆಕ್ಚರರ್ ಸುಧೀಂದ್ರನನ್ನು ಜೀಪಿನಲ್ಲಿ ಕರೆದೊಯ್ದು, ಬಟ್ಟೆಬಿಚ್ಚಿ, ಹಿಗ್ಗಾಮಗ್ಗ ಥಳಿಸಿ ರಸ್ತೆಗೆ ಎಸೆದು ಹೋಗಿದ್ದರು.
ಅದಕ್ಕೆ ಸುಧೀಂದ್ರನೂ ಸ್ವಲ್ಪ ಮಟ್ಟಿಗೆ ಕಾರಣನಾಗಿದ್ದ. ಶಿವಮೊಗ್ಗೆಯಿಂದ ಬಂದಿದ್ದ ಸುಧೀಂದ್ರ ಗುತ್ತಿ, ಲೋಹಿಯಾವಾದಿಯೂ ಸಮಾನತೆಯನ್ನು ಬೋಧಿಸುವವನೂ ಆಗಿದ್ದ. ಅವನ ತರಗತಿಗಳನ್ನು ವಿದ್ಯಾರ್ಥಿಗಳು ತಪ್ಪಿಸಿಕೊಳ್ಳುತ್ತಿರಲಿಲ್ಲ. ಅಪ್ರತಿಮ ಭಾಷಣಕಾರನೂ ಆಗಿದ್ದ ಸುಧೀಂದ್ರ, ತರಗತಿಯಲ್ಲಿ ಪಾಠದ ಜೊತೆ ವಿಚಾರವಾದವನ್ನೂ ಬೋಧಿಸುತ್ತಿದ್ದ. ಅವನ ಅಭಿಮಾನಿಗಳ ಪುಟ್ಟ ಗುಂಪೂ ಕಾಲೇಜಿನಲ್ಲಿತ್ತು. ಅವರೆಲ್ಲರ ಜೊತೆ ಗೆಳೆಯನಂತೆ ವರ್ತಿಸುತ್ತಿದ್ದ ಸುಧೀಂದ್ರನ ಮೇಲೆ ಇತರ ಅಧ್ಯಾಪಕರಿಗೆ ಅತೀವ ಅಸಹನೆಯಿತ್ತು. ಸುಧೀಂದ್ರನ ಪಾಠದ ರುಚಿ ಹತ್ತಿದ ವಿದ್ಯಾರ್ಥಿಗಳು ಬೇರೆ ಅಧ್ಯಾಪಕರ ಪಾಠ ಕೇಳಲು ಹಿಂಜರಿಯುತ್ತಿದ್ದರು.
ಉಪ್ಪಿನಂಗಡಿಯ ಆಸುಪಾಸಲ್ಲಿ ಬೇರೆ ಜೂನಿಯರ್ ಕಾಲೇಜು ಇರಲಿಲ್ಲವಾದ್ದರಿಂದ ಹತ್ತು ಹನ್ನೆರಡು ಮೈಲಿ ದೂರದ ವಿದ್ಯಾರ್ಥಿಗಳು ಅಲ್ಲಿಗೆ ಬರಬೇಕಾಗಿತ್ತು. ಬಹುತೇಕ ಹಳ್ಳಿಗಳಲ್ಲಿ ಹಿರಿಯ ಪ್ರಾಥಮಿಕ ಶಾಲೆ ಮಾತ್ರ ಇದ್ದದ್ದರಿಂದ ಸುತ್ತಲಿನ ಹಳ್ಳಿಯ ಐನೂರೋ ಆರುನೂರೋ ಮಕ್ಕಳು ಉಪ್ಪಿನಂಗಡಿಯ ಹೈಸ್ಕೂಲು ಮತ್ತು ಜೂನಿಯರ್ ಕಾಲೇಜಿಗೆ ಬರುತ್ತಿದ್ದರು. ಹಾಗೆ ಕಾಲೇಜಿಗೆ ಬಂದ ಮಕ್ಕಳು ಅದೇ ಮೊದಲ ಬಾರಿಗೆ ಪುಟ್ಟ ಪಟ್ಟಣವೊಂದಕ್ಕೆ ತೆರೆದುಕೊಳ್ಳುತ್ತಿದ್ದುದರಿಂದ ಅವರನ್ನು ರೂಪಿಸುವ ಕೆಲಸವನ್ನು ಮೇಷ್ಟರುಗಳೇ ಮಾಡಬೇಕಾಗಿತ್ತು.
ಸುಧೀಂದ್ರ ಅಂಥ ಕೆಲಸ ಮಾಡುತ್ತಿದ್ದ. ಅವರಲ್ಲಿ ವಿಚಾರವಾದ, ಸಮಾನತೆ, ಅವಮಾನದ ವಿರುದ್ಧ ಸಿಡಿದು ನಿಲ್ಲುವ ಗುಣ, ಜಾತೀ ವ್ಯವಸ್ಥೆಯ ವಿರುದ್ಧ ಹೋರಾಡುವ ಮನೋಭಾವ ಬೆಳೆಸುತ್ತಿದ್ದ. ವಿದ್ಯಾರ್ಥಿಗಳನ್ನು ನಾಸ್ತಿಕರನ್ನಾಗಿ ಮಾಡುತ್ತಿದ್ದಾನೆ ಅನ್ನುವ ದೂರೂ ಅವನ ಮೇಲಿತ್ತು. ಆಕರ್ಷಕವಾಗಿ ಮಾತಾಡಿ ಎಲ್ಲರ ಪ್ರೀತಿ ಗಳಿಸಿದ್ದರಿಂದ ಅನೇಕ ಅಧ್ಯಾಪಕರಿಗೆ ಅವನ ಮೇಲೆ ಸಿಟ್ಟಿತ್ತು.
ಈ ಮಧ್ಯೆ ಹೊಸ ಶೈಕ್ಷಣಿಕ ವರ್ಷ ಶುರುವಾಗುತ್ತಿದ್ದಂತೆ ಹೊಸ ವಿದ್ಯಾರ್ಥಿಗಳು ಪಿಯೂಸಿಗೆ ಬಂದು ಸೇರಿಕೊಂಡರು. ಈ ಸಾರಿ ಸೇರಿಕೊಂಡ ಹತ್ತೋ ಹನ್ನೆರಡೋ ವಿದ್ಯಾರ್ಥಿಗಳು ಪುತ್ತೂರಿನವರು. ಪುತ್ತೂರಿನಿಂದ ಬರುವ ವಿದ್ಯಾರ್ಥಿಗಳಿಗೆ ಉಪ್ಪಿನಂಗಡಿ ಜೂನಿಯರ್ ಕಾಲೇಜಿನಲ್ಲಿ ಸೀಟು ಕೊಡಬಾರದು ಅನ್ನುವ ಅಲಿಖಿತ ನಿಯಮ ಇತ್ತು. ಯಾಕೆಂದರೆ ಪುತ್ತೂರಿನಲ್ಲಿ ಮೂರು ಜೂನಿಯರ್ ಕಾಲೇಜುಗಳಿದ್ದವು. ಆದರೆ ಸರ್ಕಾರಿ ಜೂನಿಯರ್ ಕಾಲೇಜು ಆಗಿದ್ದರಿಂದ ಪ್ರವೇಶವನ್ನು ಅಧಿಕೃತವಾಗಿ ನಿರಾಕರಿಸುವ ಹಾಗಿರಲಿಲ್ಲ.
ಹಾಗೆ ಪುತ್ತೂರಿನಿಂದ ಬಂದವರು ವಿದ್ಯಾರ್ಥಿಗಳಷ್ಟೇ ಆಗಿರಲಿಲ್ಲ. ಮೊದಲ ಪಿಯುಸಿ ಸೇರಿಕೊಂಡವರು ಇಪ್ಪತ್ತು ಇಪ್ಪತ್ತೊಂದು ವರ್ಷದವರಂತೆ ಕಾಣಿಸುತ್ತಿದ್ದರು. ಕಾವಿ ಪಂಚೆ ಉಟ್ಟುಕೊಂಡು ಹಣೆಗೊಂದು ಕುಂಕುಮದ ಬೊಟ್ಟಿಟ್ಟುಕೊಂಡು ಕುರುಚಲು ಗಡ್ಡ ಬಿಟ್ಟುಕೊಂಡು ಕಾಲೇಜಿಗೆ ಬರುತ್ತಿದ್ದರು. ಅವರನ್ನು ಮೊದಲು ತರಾಟೆಗೆ ತೆಗೆದುಕೊಂಡವನು ಸುಧೀಂದ್ರ ಗುತ್ತಿ. ಇದು ರಾಮಮಂದಿರ ಅಲ್ಲ, ಕಾಲೇಜು. ಇಲ್ಲಿಗೆ ಜಾತಿಸೂಚಕವಾದ ಸಂಕೇತಗಳನ್ನು ಧರಿಸಿಕೊಂಡು ಬರತಕ್ಕದ್ದಲ್ಲ. ನಾಳೆಯಿಂದ ಕುಂಕುಮ ಇಟ್ಟುಕೊಂಡು ಬರಕೂಡದು. ಬಿಳಿ ಪಂಚೆ ಉಟ್ಟುಕೊಂಡು ಬರಬೇಕು ಅಂತ ಸುಧೀಂದ್ರ ಕಟ್ಟುನಿಟ್ಟಾಗಿ ಹೇಳಿದ್ದ. ವಿದ್ಯಾರ್ಥಿಗಳು ಅವನ ಮಾತು ತಮಗಲ್ಲ ಎಂಬಂತೆ ಮತ್ತೆ ಅದೇ ಕುಂಕುಮ, ಕಾವಿಪಂಚೆಯೊಂದಿಗೆ ಹಾಜರಾಗಿದ್ದರು. ಸುಧೀಂದ್ರ ಅವರನ್ನು ಹೊರಗೆ ಹೋಗುವಂತೆ ಹೇಳಿ, ಅವರು ಹೊರಗೆ ಹೋಗದೆ, ಮಾತಿಗೆ ಮಾತು ಬೆಳೆದು ಸುಧೀಂದ್ರ ಒಬ್ಬನ ಕಪಾಳಕ್ಕೆ ಬಿಗಿದಿದ್ದ. ಅವರು ಹೊರಗೆ ಹೋಗುವ ತನಕ ಕ್ಲಾಸು ತೆಗೆದುಕೊಳ್ಳುವುದಿಲ್ಲ ಎಂದು ಹೊರನಡೆದಿದ್ದ.
ಆ ವಿಚಾರವಾಗಿ ದೊಡ್ಡ ಗಲಾಟೆಯೇ ನಡೆದುಹೋಯಿತು. ಸುಧೀಂದ್ರನನ್ನು ಓಲೈಸಲು ಪ್ರಿನ್ಸಿಪಾಲರು ಪ್ರಯತ್ನಿಸಿದ್ದು ವಿಫಲವಾಯಿತು. ಸುಧೀಂದ್ರ ಆ ಕುರಿತು ಪತ್ರಿಕೆಗಳಿಗೆ ಲೇಖನ ಬರೆದು, ಇಡೀ ರಾಜ್ಯದ ಗಮನ ಅತ್ತ ಸೆಳೆಯುವಂತೆ ಮಾಡಿದ. ಕೊನೆಗೆ ವಿಶ್ವವಿದ್ಯಾಲಯವೇ ಕುಂಕುಮ ಇಟ್ಟುಕೊಂಡು ತರಗತಿಗೆ ಬರುವಂತಿಲ್ಲ ಎಂದು ಎಲ್ಲಾ ಶಾಲೆಗಳಿಗೂ ನೋಟೀಸು ಕಳಿಸಿತು.
ಅಲ್ಲಿಂದ ಸುಧೀಂದ್ರನ ಮೇಲೆ ಹಲ್ಲೆಗಳು ಶುರುವಾದವು. ಸುಧೀಂದ್ರ ಯಾವುದಾದರೂ ಸಮಾರಂಭದಲ್ಲಿ ಭಾಷಣ ಮಾಡಲು ಎದ್ದು ನಿಂತರೆ, ಒಂದಷ್ಟು ಹುಡುಗರು ಗಲಾಟೆ ಮಾಡುತ್ತಿದ್ದರು. ಸುಧೀಂದ್ರನ ರೂಮಿನ ಮೇಲೆ ಕಲ್ಲುಗಳು ಬೀಳಲು ಶುರುವಾದವು. ಸುಧೀಂದ್ರ ಮನೆಯ ಹೊರಗೆ ನಿಲ್ಲಿಸಿದ ಸ್ಕೂಟರಿನ ಸೀಟು ಕಿತ್ತು, ಟೈರು ಪಂಕ್ಚರ್ ಮಾಡಿ, ಬ್ರೇಕ್ ಕೇಬಲ್ ಕತ್ತರಿಸಿ ಹಾಕುತ್ತಿದ್ದರು. ಅವನ ಮನೆಗೆ ಹಾಲು ತಂದು ಹಾಕುತ್ತಿದ್ದವನನ್ನು ಬೆದರಿಸಿ, ಹಾಲು ಹಾಕದಂತೆ ಎಚ್ಚರಿಸಿದರು. ಸುಧೀಂದ್ರ ಅದ್ಯಾವುದಕ್ಕೂ ಬಗ್ಗದೇ, ಊರು ಬಿಟ್ಟು ಹೋಗುವ ಯೋಚನೆಯನ್ನೂ ಮಾಡದೇ ಇದ್ದ. ಅಂಥ ಪ್ರತಿರೋಧದೊಂದಿಗೆ ತನಗಂತೂ ಬದುಕುವುದು ಸಾಧ್ಯವೇ ಇಲ್ಲ ಅನ್ನುವುದು ರಾಧಾಕೃಷ್ಣನಿಗೆ ಗೊತ್ತಿತ್ತು. ಏನಾದರೂ ಮಾಡಿ ಇದರಿಂದ ಪಾರಾಗಬೇಕು ಅಂದುಕೊಂಡು ಆತ ಸೀತಾರಾಮ ಯರ್ಮುಂಜನನ್ನು ನೋಡಲು ಆಸ್ಪತ್ರೆಗೆ ಹೊರಟ. ಅವನ ಬಾಯಿಂದಲೇ ಈ ಸಂದರ್ಶನ ತನ್ನದಲ್ಲ ಅಂತ ಹೇಳಿಸಬೇಕು, ಕನಿಷ್ಟ ತನ್ನ ಊರಿನ ಮಂದಿಗಾದರೂ ಸತ್ಯ ಗೊತ್ತಾಗಬೇಕು. ಊರಲ್ಲೇ ತಾನು ಹೊರಗಿನವನಾಗಬಾರದು ಅಂತ ರಾಧಾಕೃಷ್ಣ ನಿರ್ಧಾರ ಮಾಡಿಬಿಟ್ಟಿದ್ದ.






“ರಾಧಾಕೃಷ್ಣನನ್ನು ಎಲ್ಲಕ್ಕಿಂತ ಹೆಚ್ಚು ಕಂಗಾಲು ಮಾಡಿದ್ದು ಅಲ್ಲಿ ಸೀತಾರಾಮ ಪ್ರಸ್ತಾಪ ಮಾಡಿರುವ ಹೆಸರುಗಳು. ಅವರೆಲ್ಲರೂ ಅಪಾಯಕಾರಿಗಳೆಂದು ಆತನಿಗೆ ಗೊತ್ತಿತ್ತು. ಅವರೊಂದು ಮಾತು ಹೇಳಿದರೆ, ಅವರ ಹುಡುಗರು ದಂಡೆತ್ತಿ ಬರುತ್ತಾರೆ. ಅವರ ಮುಂದೆ ನಿಲ್ಲುವ ಶಕ್ತಿ ತನಗಷ್ಟೇ ಅಲ್ಲ, ಯಾರಿಗೂ ಇಲ್ಲ. ”
🙂
Girish,
Very gripping plot and a very fine narration.. Waiting for the book.
ಕಾದಂಬರಿಕಾರರಿಗೆ ಹಲವಾರು ವಿಚಾರಗಳನ್ನು ಹೇಳುವ ತವಕ ಇದ್ದಂತೆ ಕಂಡುಬಂತು.ಪೂಚಂತೆಯಂತೆ ಬರೆಯುವ ಬರಹಗಾರರೆ ಇಲ್ಲವಾಗಿದ್ದಾರೆ. ಅವರು ಲೋಹಿಯಾವಾದವನ್ನೇ ತಮ್ಮ ಕಾದಂಬರಿ, ಕಥೆಗಳಲ್ಲಿ ಬರೆದದ್ದು. ಆದರೂ ಜೋಗಿಯವರ ಈ ಕಾದಂಬರಿ ದೊಡ್ಡ ಪ್ರಯತ್ನ ಎಂದು ಹೇಳಬಹುದಾಗಿದೆ. ಕಾದು ನೋಡಬೇಕಾಗಿದೆ.ಉದಯಕುಮಾರ ಹಬ್ಬು, ಕಿನ್ನಿಗೋಳಿ
atyanta tiluvalike iruv nawu endu tilididda ondu pradesha agi hoda vyathe channagi neeroopanegodide.