ನಂಜು
ವಿರೋಧಪಕ್ಷದ ಮುಖಂಡ ಸುಗ್ಲಪ್ಪ ಸವಾಲೆಸೆಯದಿದ್ದಲ್ಲಿ, ಗ್ರಾಮವಾಸ್ತವ್ಯ ಹೂಡುವುದರಿಂದ ತಮ್ಮ ಪಕ್ಷದ ಸಾಮಾಜಿಕ ವರ್ಚಸ್ಸು ವೃದ್ದಿಸುವುದಲ್ಲದೆ ಮುಂಬರುವ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಬಹುಮತ ಲಬಿಸುವುದು ಖಚಿತ ಎಂದು ತಮ್ಮನ್ನು ಹೈಕಮ್ಯಾಂಡು ಪುಸಲಾಯಿಸಿ ಬೀಳ್ಕೊಡದಿದ್ದಲ್ಲಿ ತಾವು ಕುಪ್ರಸಿದ್ದ ಚಪ್ಪರದಳ್ಳಿಯಲ್ಲಿ ವಾಸ್ತವ್ಯ ಹೂಡುತ್ತಿರಲಿಲ್ಲ, ಅದೂ ಅತಿಚಿಕ್ಕ ರೈತನ ಮಣ್ಣಿನಮನೆಯಲ್ಲಿ! ಅದೂ ಸಮಾಜದ ಕಟ್ಟಕಡೆಯ ಮನುಷ್ಯನ ಮನೆಯಲ್ಲಿ!
ಗಂಟಲಿಗಿಳಿಯದಿದ್ದರೂ ಗಟ್ಟಿಮನಸ್ಸು ಮಾಡಿ ರಾಗಿಮುದ್ದೆಯನ್ನು ಚಟ್ನಿಯಲ್ಲಿ ಅದ್ದಿಕೊಂಡು ತಿಂದರು, ಅಂಬಳಿ ಕುಡಿದರು. ತಾವು ವಾಂತಿ ಮಾಡಿಕೊಂಡರೆಲ್ಲಿ ಪತ್ರಕರ್ತರು ಚಿತ್ರೀಕರಿಸಿಕೊಳ್ಳುವರೋ ಎಂದು ಹೆದರಿ ಅದರ ಕ್ರಿಯೆಯನ್ನು ದೃಢಮನಸ್ಸಿನಿಂದ ನಿಯಂತ್ರಿಸಿಕೊಂಡರು. ಕೃತಕ ದಂತಪಂಕ್ತಿಯನ್ನು ಚಿನ್ನದ ಡಬ್ಬಿಯಲ್ಲಿ ಕಳಚಿಡುತ್ತ ಸುಗ್ಲಪ್ಪನನ್ನು ಮನಸ್ಸಿನಲ್ಲಿ ವಾಚಾಮಗೋಚರವಾಗಿ ಶಪಿಸಿದರು, ಮೃತ್ಯುಂಜಯಾಷ್ಠಕವನ್ನು ಜಪಿಸಿದರು, ಹೊಲಸಾಗಿದ್ದ ಕೌದಿ ಮೇಲೆ ತಮ್ಮ ದೇಹವನ್ನು ಒರಗಿಸಿದರು, ಅಲ್ಲಲ್ಲಿ ಹರಿದಿದ್ದ, ಹಲವು ಕಡೆ ತೇಪೆ ಹಚ್ಚಿದ್ದ ದುಪ್ಪಟಿಯನ್ನು ಹೊದ್ದುಕೊಳ್ಳಲಾಗಲಿಲ್ಲ, ಹೊದ್ದುಕೊಳ್ಳದೆ ಇರಲಿಕ್ಕೂ ಆಗಲಿಲ್ಲ.
ಎಲ್ಲೋ ನಾಯಿಗಳು ಬೊಗಳುತ್ತಿರುವ ಸದ್ದು, ಅಭಿಜಾತವಾಗಿ ಚತುಷ್ಪಾದಿಗಳಿಗೂ ತಮಗೂ ಎಣ್ಣೆಸೀಗೆಕಾಯಿ ಸಂಬಂಧ. ದೂರದಲ್ಲೆಲ್ಲೋ ನರಿಗಳು ಊಳಿಡುತ್ತಿರುವ ಶಬ್ದ, ಗಂಜಲು ವಾಸನೆ, ಸೊಳ್ಳೆಗಳ ನಿರ್ವಿರಾಮ ಕಡಿತ, ನಿಜ ಹೇಳುವುದಾದರೆ ಒಂದೇ ಒಂದು ಸೊಳ್ಳೆಯಿಂದ ರಾಜ್ಯದ ರಾಜಕೀಯರಂಗವನ್ನು ಪ್ರವೇಶಿಸಿದಂದಿನಿಂದ ಕಡಿಸಿಕೊಂಡವರಲ್ಲ ತಮ್ಮ ಗ್ರಾಮ ವಾಸ್ತವ್ಯವನ್ನು ಪತ್ರಕರ್ತರು ಸರಿಯಾಗಿ ತಮ್ಮತಮ್ಮ ಪತ್ರಿಕೆಗಳಿಗೆ ವರದಿ ಮಾಡುವರೋ ಇಲ್ಲವೋ ಎಂಬ ಆತಂಕ, ಸ್ವಯಂಸೇವಕ ಸಂಘದ ನಿಷ್ಠಾವಂತ ಕಾರ್ಯಕರ್ತರಾಗಿರುವ ತಾವು ಸಧೃಡವಾಗಿರುವುದೇನೋ ನಿಜ, ಆದರೆ ಸಾಕಷ್ಟು ವಯಸ್ಸಾಗಿರುವುದು ಬೇರೆ..
ಪಂಚತಾರಾ ಸದೃಶ ಭೋಜನ ಹೊರತುಪಡಿಸಿ ಇನ್ನೊಂದು ದಿನಿಸನ್ನು ಭುಂಜಿಸಿದವರಲ್ಲವೇ ಅಲ್ಲ. ತಾವು ಅಮಶಂಕೆ ಮಲೇರಿಯಾ ವ್ಯಾಧಿಗಳಿಗೆ ತುತ್ತಾದರೆ ರಾಜ್ಯದ ಗತಿ ಏನು! ಮುಖ್ಯವಾಗಿ ತಮ್ಮ ಕುಟುಂಬದ ಸದಸ್ಯರ ಗತಿ ಏನು! ತಾವು ಉತ್ತರೋತ್ತರ ಚಿಕಿತ್ಸೆ ಪಡೆಯುವ ಸಲುವಾಗಿ ಯಾವ ದೇಶದ ಯಾವ ಆಸ್ಪತ್ರೆಯಲ್ಲಿ ದಾಖಲಾಗುವುದು! ಅಕಸ್ಮಾತ್ತಾಗೇನಾದರೂ ತಾವು ಹಲವು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದಲ್ಲಿ ಭಿನ್ನಮತೀಯರ ಮುಖಂಡ ನಾಗಪ್ಪ ದೇಸಾಯಿ ಸರ್ಕಾರದ ಚುಕ್ಕಾಣಿ ಹಿಡಿದು ತಮ್ಮನ್ನು ಮೂಲೆಗುಂಪು ಮಾಡಿದರೆ ತಮ್ಮ ರಾಜಕೀಯ ಭವಿಷ್ಯವೇನಾಗಬಹುದು!
ಇಂಥ ಹಲವು ಚಿಂತೆಗಳಿಂದಾಗಿ, ತಮಗೆ ದಿವ್ಯಾಶ್ರಯ ಕಲ್ಪಿಸಿದ್ದ ರೈತಾಪಿ ಕುಟುಂಬದ ಸರ್ವಸದಸ್ಯರ ಪೈಕಿ ಹಲವರ ಕನವರಿಕೆಗಳಿಂದಾಗಿ, ಮುಲುಕು ನರಳಾಟಗಳಿಂದಾಗಿ, ದನದ ಕೊಟ್ಟಿಗೆಗಳ ಜಾನುವಾರು ಮಾಡುತ್ತಿದ್ದ ಸದ್ದಿನಿಂದಾಗಿ, ಚಿನ್ನದ ಡಬ್ಬಿಯಲ್ಲಿರುವ ಪ್ಲಾಟಿನಂ ದಂತಪಕ್ತಿಯನ್ನು ಆಶ್ರಯದಾತ ದಂಪತಿಗಳು ಅಪಹರಿಸಿದಲ್ಲಿ, ತಮ್ಮ ಬೊಚ್ಚುಬಾಯಿ ನಾಡಿನಾದ್ಯಂತ ಸುದ್ದಿಯಾದಲ್ಲಿ ಎಂಬ ಆತಂಕದಿಂದಾಗಿ, ಮೇಲಿಂದ ಮೇಲೆ ಕಾಣಿಸಿಕೊಂಡ ದುಸ್ವಪ್ನಗಳಿಂದಾಗಿ ತಾವು ಇಡೀ ರಾತ್ರಿ ರೆಪ್ಪೆರೆಪ್ಪೆ ಅಂಟಿಸಿ ನಿದ್ದೆ ಮಾಡುವುದಾಗಲಿಲ್ಲ.
ಕ್ರೂರವಿಧಿ ಸೂರ್ಯ ಉದಿಸದಂತೆ ನೋಡಿಕೊಳ್ಳುವುದೋ ಎಂದು ತಾವು ಹೆದರಿದ್ದರು. ಮಲಗಿದ್ದರೆ ತಾನೆ ಎಚ್ಚರಗೊಳ್ಳುವುದು! ಕಣ್ಣುಮುಚ್ಚಿದ್ದರೂ ಶ್ರೀಯುತರ ಪಂಚೇಂದ್ರಿಯಗಳು ಜಾಗೃತಗೊಂಡಿದ್ದವು. ಅಂತೂ ತಮ್ಮ ಪುಣ್ಯವೋ ಎಂಬಂತೆ ಬೆಳಗಾಗುವ ಸಲ್ಲಕ್ಷಣಗಳನ್ನು ತಮ್ಮ ಕರ್ಣೇಂದ್ರಿಯ ಕೇಳಿಸಿಕೊಳ್ಳುತ್ತಿರುವುದು, ಎಲ್ಲೋ ಯಾರೋ ಬಹಿರ್ದೆಸೆಗೆ ಸಂಬಂಧಿಸಿದಂತೆ ತಿಣುಕುತ್ತಿರುವರು, ಅಂಗಳದ ಮೂಲೆಯಲ್ಲೆಲ್ಲೋ ಯಾರ್ಯಾರೋ ವಿಲಕ್ಷಣ ರೀತಿಯಲ್ಲಿ ತಮ್ಮತಮ್ಮ ಗಂಟಲೊಳಗಿನ ಕಫ ಕಕ್ಕುತ್ತಿರುವರು, ಕಿಟಾರನೆ ಕಿರುಚಿದ ಕೂಸನ್ನು ಸಂತೈಸುತ್ತಿರುವ ಸದ್ದು, ದನಗಳಿಗೆ ಮೇವು ಹಾಕುತ್ತಿರುವ ಸದ್ದು, ಅಡುಗೆ ಮನೆಯಲ್ಲಿ ಪಟಪಟ ರೊಟ್ಟಿ ದಟ್ಟಿಸಲಾರಂಭಿಸಿದ ಸದ್ದು, ಖಗಚರಗಳು ಹಾರಾಡುತ್ತಿರುವ ಸದ್ದು!

ಎಲ್ಲೋ ಯಾರೋ ಯಾರನ್ನೋ ಶರಣ್ರೀ ಚೌಡಪ್ಪ, ನಿಮ್ಮನ್ಯಾಗ ಮುಕ್ಯಮಂತ್ರಿ ಮಲಗ್ಯಾರಂತಲ್ಲ! ಅವರಿನ್ನೂ ಮಲಗ್ಯಾರೋ ಎಚ್ಚರಾಗ್ಯಾರೋ! ಎಂದು ಕೇಳುತ್ತಿರುವರು. ಅದಕ್ಕೆ ಆಶ್ರಯದಾತನು ಹೌದೌದಪ್ಪ, ಇನ್ನೂ ಮಲಗೈತೆ ಪಾಪ ಎಂದು ಉತ್ತರಿಸುತ್ತಿರುವನು, ಅದೂ ತಮ್ಮಂಥ ರಾಜ್ಯದ ಪ್ರಥಮಪ್ರಜೆಯನ್ನು ನಿರ್ಲಿಂಗವಾಚಕದಲ್ಲಿ ಸಂಬೋಧಿಸುತ್ತಿರುವುದೆಂದರೇನು! ತಾವು ಇಲ್ಲಿಂದ ಮರಳಿದ ಬಳಿಕ ಇವನಿಗೆ ಮರೆಯಲಾರದ ಪಾಠ ಕಲಿಸಬೇಕು! ಅಷ್ಟರಲ್ಲಿ ತಮ್ಮ ಸೊಂಟದ ಕೆಳಗೆ ಅಪಾನವಾಯುದೇವನು ಕೆರಳತೊಡಗಿರುವನು ಬೇರೆ, ಗುದದ ಸೆರೆಯಿಂದ ಆ ಪುಣ್ಯಾತ್ಮನನ್ನು ಹೊರಗೆ ತಳ್ಳಿದರೆಲ್ಲಿ ಕರ್ಕಶ ಸದ್ದಾಗುವುದೋ!
ಯೋಗಶಕ್ತಿಯಿಂದ ಹಾಗೆ ನಿಯಂತ್ರಿಸಿಕೊಂಡರು, ಆದರೆ ಕುಟುಂಬದ ಕಿರಿಯ ಸದಸ್ಯರ ಪೈಕಿ ಹಲವರು ಅಪಾಯನವಾಯುವನ್ನು ನಿಸ್ಸಂಕೋಚವಾಗಿ ಬಿಡುತ್ತ ಸದ್ದು ಮಾಡುತ್ತಿರುವವು. ಹನ್ನೊಂದರಲ್ಲಿ ಇನ್ನೊಂದು ಸದ್ದು, ಕುಂಡಲಿನೀಶಕ್ತಿಯನ್ನು ಗುದಧ್ವಾರದಲ್ಲಿ ಕೇಂದ್ರೀಕರಿಸಿ ಎಷ್ಟು ಸಾಧ್ಯವೋ ಅಷ್ಟು ಮೆಲ್ಲಗೆ ಬಿಡಲಾರಂಭಿಸಿದರು, ತಮ್ಮದು ಮೊದಲೆ ಮೂಲತಃ ನಗಾರಿ ಸದೃಶ ಸದ್ದು, ಆದರೆ ಶಹನಾಯಿ ನುಡಿಸಿದಂತೆ ಐದು ನಿಮಿಷಗಳ ಕಾಲ ಬಿಟ್ಟು ಹಗುರಾದರು. ಅದನ್ನು ಕೇಳಿಸಿಕೊಂಡ ದೂರಸಂವೇದಿ ಉಪಗ್ರಹಗಳಂಥ ಮಕ್ಕಳು ಓಹೋ ಕೇಳ್ತೇನೆಭೇ ಎವ್ವಾ ಮುಚ್ಯಮಂಚ್ರಿ ಹೂಸು ಬಿಡಲಿಕ್ಕತ್ಯಾರ ಎಂದು ಡಂಗುರ ಸಾರಿದವು, ಅದಕ್ಕೆ ಆ ತಾಯಿಯು ಮುಕುಳಿದ್ದೋರೆಲ್ಲ ಹೂಸು ಬಿಡ್ತಾರೆ, ಸುಮಕಿರ್ರೆಲೋ, ಕೇಳಿಸಿಕೊಂಡರ ಅವ್ರು ಮನಸ್ಸಿಗೆ ನೋವು ಮಾಡಿಕೊಂಡಾರು ಎಂದು ಪ್ರತಿಕ್ರಿಯಿಸಿದಳು. ಅದನ್ನು ಆಲಿಸಿದ ಶ್ರೀಯುತರು ಪರವಾಯಿಲ್ಲ ಗ್ರಾಮೀಣ ಮಹಿಳೆಯಿರಿಗೆ ಕಾಮನ್ಸೆನ್ಸಿದೆ, ತಾವು ರಾಜಧಾನಿ ತಲುಪಿದೊಡನೆ ಆ ತಾಯಿಗೆ ಭಾಗ್ಯಲಕ್ಷ್ಮಿ ಯೋಜನೆಯನ್ನು ಮಂಜೂರು ಮಾಡಬೇಕೆಂದು ನಿರ್ಧರಿಸಿದರು.
ದುಪ್ಪಟಿಯನ್ನು ಮೆಲ್ಲಗೆ ಸರಿಸಿ ಪಿಳಿಪಿಳಿ ಕಣ್ಣುಬಿಟ್ಟು ನೋಡಿದರು. ತಮ್ಮ ಪುಣ್ಯವೋ ಎಂಬಂತೆ ಬೆಳಗಾಗಿರುವುದು. ಏಳುವುದೋ! ಯಾರ್ಯಾದರೂ ತಮ್ಮನ್ನು ಎಚ್ಚರಿಸುವತನಕ ಕಾಯುವುದೋ! ದುಪ್ಪಟಿಯ ಮರೆಯಲ್ಲಿ ಅಡಗಿಸಿಟ್ಟಿದ್ದ ಚಿನ್ನದ ಡಬ್ಬಿಯಿಂದ ಪ್ಲಾಟಿನಂ ದಂತಪಕ್ತಿಯನ್ನು ತೆಗೆದು ಧರಿಸಿದರು. ಅದೇ ಸಮಯಕ್ಕೆ ಸರಿಯಾಗಿ ಆಶ್ರಯದಾತ ಚೌಡಪ್ಪ ಸಾಹೇಬರ ಎದ್ದೇಳ್ರಿ ಎನ್ನುತ್ತ ತಮ್ಮ ಕಾಲುಗಳನ್ನು ಕೈಯಲ್ಲಿದ್ದ ಕೋಲಿನಿಂದ ತಿವಿದ. ಗಾಢನಿದ್ರೆಯಲ್ಲಿದ್ದವರಂತೆ ಎಚ್ಚರಗೊಂಡ ಸನ್ಮಾನ್ಯರು ತಮ್ಮೆರಡೂ ಅಂಗೈಗಳನ್ನು ನೋಡಿಕೊಳ್ಳುತ್ತ ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತಿ ಎಂದು ನುಡಿದಾದ ಬಳಿಕ ತಮ್ಮ ಉಸಿರಳತೆಯಲ್ಲಿ ನಿಂತಿದ್ದ ಆಶ್ರಯದಾತನ ಕಡೆ ನೋಟ ಹರಿಸಿದರು.
ಹೊಲೇರಾದ ನಾವು ನಿಮ್ಮಂಥ ದೊಡ್ಡಮನುಸ್ಸರ್ನ ಕೈಲಿಂದ ಮುಟ್ಟಬಾರದೂಂತ ಕೋಲಿನಿಂದ ತಿವಿದೆ ದೇವ್ರು, ತಪ್ಪು ತಿಳೀಬ್ಯಾಡಿ ನನ್ನಪ್ಪ ಎಂದು ಚೌಡಪ್ಪ ಹೇಳಿದೊಡನೆ ಶ್ರೀಯುತರ ಮುಖ ಕಪ್ಪಿಟ್ಟಿತು, ಲಿಂಗಾಯತ ಕೋಮಿನ ತನ್ನ ತಂದೆಯೂ, ಹೊಲೆಯ ಕೋಮಿನ ತನ್ನ ತಾಯಿಯೂ ನೆನಪಾದದ್ದೇ ಅದಕ್ಕೆ ಕಾರಣ. ಸಾರ್ವಜನಿಕವಾಗಿ ವೀರಶೈವನೆಂದು ಹೇಳಿಕೊಳ್ಳುವ ತಾವು ತಾಯಿಗೆ ಸಂಬಂಧಿಸಿದ ಪರಿಶಿಷ್ಠ ಜಾತಿಗೆ ಸಂಬಂಧಿಸಿದ ಜಾತಿಪ್ರಮಾಣ ಪತ್ರದ ಆಧಾರದ ಮೇಲೆಯೇ ಟಿಕೆಟ್ಟನ್ನೂ ಇತರೇ ಸರ್ಕಾರಿ ಸವಲತ್ತುಗಳನ್ನೂ ಗಿಟ್ಟಿಸಿಕೊಂಡಿರುವುದು, ಮುಖ್ಯಮಂತ್ರಿಯಾಗಿರುವುದು. ವಿರೋಧಪಕ್ಷದವರು ತಮ್ಮ ಜಾತಿಯನ್ನು ಕೋರ್ಟಿನಲ್ಲಿ ಪ್ರಶ್ನಿಸಿದ್ದೂ ಉಂಟು, ಅದು ಅಲ್ಲಿಯೇ ಬಿದ್ದು ಹೋಗಿರುವುದೂ ಉಂಟು.
ಮೆಲ್ಲಗೆ ಕಣ್ಣರಳಿಸಿ ಸುತ್ತಮುತ್ತ ನೋಡುತ್ತಾರೆ, ಮನೆಯ ಕಿಟಿಕಿ ಬಾಗಿಲುಗಳೊಂದೇ ಅಲ್ಲದೆ ಬಿರುಕುಗಳ ಮೂಲಕ ಇಣುಕಿ ತಮ್ಮ ದರ್ಶನ ಪಡೆಯುತ್ತಿರುವ ನೂರಾರು ಕಣ್ಣುಗಳು. ಅದೆಲ್ಲವನ್ನೂ ವಾರ್ತಾಇಲಾಖೆಯ ತಮ್ಮ ಬಾತ್ಮೀದಾರರು ಹ್ಯಾಂಡಿಕೆಮೆರಾಗಳಿಂದ ಚಿತ್ರೀಕರಿಸುತ್ತಿರುವರೋ ಇಲ್ಲವೋ! ಮೊಬೈಲೆತ್ತಿಕೊಂಡು ನೀವೆಲ್ಲ ಕತ್ತೆ ಕಾಯ್ತಿದ್ದೀರೇನ್ರೋ ಎಂದು ತಮ್ಮ ಆಪ್ತಕಾರ್ಯದರ್ಶಿಯನ್ನು ಗದರಿಸುತ್ತಲೇ ಹಾಸಿಗೆಯಿಂದ ಮೇಲೆದ್ದರು. ಎದ್ದೊಡನೆ ವಿಸರ್ಜನೆಗೆ ಸಿದ್ದಗೊಂಡಿದ್ದ ತಮ್ಮ ಗುದಧ್ವಾರ ಚಡಪಡಿಸಲಾರಂಭಿಸಿತು. ಹೈಟೆಕ್ ಲೆಟರೆನ್ ಕಾಲ್ ಸೆಂಟರುಗಳಲ್ಲಿಯೇ ಆಯಾದಿವಸದ ವೃತ್ತಪತ್ರಿಕೆಗಳನ್ನು ಅಮೂಲಾಗ್ರವಾಗಿ ಓದುತ್ತಿದ್ದುದು, ಅಲ್ಲಿಂದಲೇ ಮೊಬೈಲು ಸಹಾಯದಿಂದ ಮನಸ್ಸಿನಲ್ಲಿ ರೂಪಗೊಳ್ಳುತ್ತಿದ್ದ ಷಡ್ಯಂತ್ರಗಳನ್ನು ವಿಲೇವಾರಿ ಮಾಡುತ್ತಿದ್ದುದು, ಆದರೆ ಈ ಚಪ್ಪರದಳ್ಳಿಯೆಂಬ ಕುಗ್ರಾಮದಲ್ಲಿ ಆ ಎಲ್ಲ ಹೈಟೆಕ್ ವಿಸರ್ಜನಾ ಸವಲತ್ತುಗಳೆಲ್ಲಿಂದ ಬಂದಾವು!
ಮುಖ ಸಿಂಡರಿಸಿಕೊಂಡರು. ಅಷ್ಟರಲ್ಲಿ ಬಾಗಿಲ ಬಳಿ ತಮ್ಮ ಅಂಗರಕ್ಷಕರು ತಮ್ಮತಮ್ಮ ಕೈಗಳಲ್ಲಿ ಬಿಸಿನೀರಿನಿಂದ ತುಂಬಿದ್ದ ಎರಡುಮೂರು ಬಕೆಟ್ಟುಗಳನ್ನು ಹಿಡಿದುಕೊಂಡು ಸಂಸಿದ್ದರಾಗಿ ನಿಂತಿರುವುದು ಗೋಚರಿಸಿತು, ಅವರೊಂದೇ ಅಲ್ಲದೆ ಅಗೋ ಅಲ್ಲಲ್ಲಿ ನೂರಾರು ಫಲಾನುಭವಿಗಳು, ದರ್ಶನಾಕಾಂಕ್ಷಿಗಳು, ಮಾರುವೇಷದಲ್ಲಿರುವ ದಲಿತ ಸಂಘರ್ಷ ಸಮಿತಿಯ ಕೆಲ ಸದಸ್ಯರು, ರಾಜ್ಯದ ರಾಷ್ಟ್ರದ ಅಂತರ್ರಾಷ್ಟ್ರೀಯ ಬಾತ್ಮೀದಾರರು. ಆ ಎಲ್ಲಾ ತಲೆನೋವುಗಳ ನಡುವೆ ದಾರಿ ಮಾಡಿಕೊಂಡು ಹೋಗುವುದೆಂದರೆ ತಮಾಷೆಯೆ! ಅದೂ ಅಲ್ಲದೆ ತಮ್ಮ ಬಹಿರ್ದೆಸೆ ಕ್ರಿಯೆಯನ್ನು ಚಿತ್ರೀಕರಿಸಲು ಸನ್ನದ್ದರಾಗಿ ನಿಂತಿದ್ದ ಹಲವು ವಾಹಿನಿಗಳ ವರದಿಗಾರರನ್ನು ತಡೆಯುವುದೆಂದರೆ! ಅಷ್ಟರಲ್ಲಿ ತಮ್ಮ ಆಪ್ತಕಾರ್ಯದರ್ಶಿ ಆ ಎಲ್ಲ ತಲೆನೋವುಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದ. ಆದರೂ ಜೆಡ್ ಶ್ರೇಣಿಯ ಗನ್ಮ್ಯಾನುಗಳು, ಕಮ್ಯಾಂಡೋಗಳು ಕೈಸಂಜ್ಞೆ ಬಾಯಿ ಸಂಜ್ಞೆಗಳನ್ನು ದಿಕ್ಕರಿಸಿ ತಮ್ಮನ್ನು ಹಿಂಬಾಲಿಸಿದರು.
ಮುಖ್ಯಮಂತ್ರಿಗಳು ನಡೆದೂ ನಡೆದೂ ಪ್ರಶಸ್ಥ ಸ್ಥಳವನ್ನು ಹುಡುಕಿ ದೊರಕಿಸಿಕೊಂಡರು. ಕ್ಯಾಕ್ಟಸ್ ಗಿಡಗಳ ಮರೆಯಲ್ಲಿ ಅರೆನಗ್ನರಾಗಿ ಕುಳಿತರು. ಗನ್ಮನ್ನುಗಳ ಪಹರೆಯ ಕಿರಿಕಿರಿಯಿಂದಾಗಿ ತೃಪ್ತಿದಾಯಕವಾಗಿ ವಿಸರ್ಜಿಸುವುದು ಸಾಧ್ಯವಾಗಲಿಲ್ಲ. ಬ್ಯೂರೋಕ್ರಾಟ್ಸುಗಳಿಗೆ ಕಾಮನ್ಸೆನ್ಸಿಲ್ಲದಿದ್ದರೆ ಸರ್ಕಾರ ಉದ್ದಾರಾಗೋದಿಲ್ಲ, ಜವಾನನಿಂದ ಹಿಡಿದು ಪ್ರಿನ್ಸಿಪಲ್ ಸೆಕ್ರೆಟರಿವರೆಗೆ ಮಿನಿಮಮ್ ಕಾಮನ್ಸೆನ್ಸ್ ಕಲಿಸುವ ಏರ್ಪಾಡು ಮಾಡಬೇಕೆಂದು ನಿಶ್ಚಯಿಸಿ ಎದ್ದು ಅಲ್ಲಿಂದ ಮರಳಿದರು.
ಚೌಡಪ್ಪ ದಂಪತಿಗಳ ಮುತುವರ್ಜಿಯಿಂದಾಗಿ ನೆರಕಿಯ ಮರೆಯಲ್ಲಿ ಸ್ನಾನ ಸಂಧ್ಯಾವಂದನೆ ಪೂರೈಸಿದ್ದಾಯಿತು, ನೂರಾರು ಬಾತ್ಮೀದಾರರ ಸಾಕ್ಷಿತ್ವದಲ್ಲಿ ತಾವು ರಾಗಿರೊಟ್ಟಿ ಕಾಯಿಚಟ್ನಿ, ನೆಂಜಿಕೆಗೆ ಈರುಳ್ಳಿ ಹಸಿಮೆಣಸಿನಕಾಯಿಯೇ ಮೊದಲಾದ ತಿಂಡಿತೀರ್ಥ ಪೂರೈಸಿದ್ದಾಯಿತು. ಬಳಿಕ ಕಂದಾರೆಮ್ಮ ದೇವತೆಯ ಗುಡಿಯಲ್ಲಿ ನಡೆದ ಗ್ರಾಮೀಣ ಸಭೆಯನ್ನುದ್ದೇಶಿಸಿ ಮುಂದಿನ ದಿವಸಗಳಲ್ಲಿ ತಾವು ಸದರಿ ಹಳ್ಳಿಯ ಪ್ರತಿಯೊಂದು ಮನೆಯಲ್ಲಿ ವಾಸ್ತವ್ಯ ಮಾಡುವುದಾಗಿ ಭಾಷಣ ಮಾಡಿದ್ದಾಯಿತು. ಈ ಪ್ರಕಾರವಾಗಿ ಎಲ್ಲ ಮುಗಿಸಿ ಇನ್ನೇನು ಹೊರಡಲೆಂದು ತಮ್ಮ ಬೆಂಜ್ ಕಾರನ್ನು ಸಮೀಪಿಸಿದರು. ಆದರೆ ಅಷ್ಟರಲ್ಲಿ ತನ್ನ ಬಾಲ ತುಳಿದ ಮುಖ್ಯಮಂತ್ರಿಗಳ ಬಲಗಾಲ ಮೀನಖಂಡವನ್ನು ಚತುಷ್ಪಾದಿಯೊಂದು ಕಚ್ಚಿಬಿಡಬೇಕೆ! ಅಯ್ಯೋ ಎಂದು ಶ್ರೀಯುತರು ಕಿರುಚಿದಾಗಲೇ ಎಲ್ಲರೂ ತಿರುಗಿ ನೋಡಿದ್ದು! ಅದು ಬಾಯಿ ಚಪ್ಪರಿಸುತ್ತಲೂ, ತಿಕದಲ್ಲಿ ಬಾಲವನ್ನು ಅಡಗಿಸಿಟ್ಟುಕೊಳ್ಳುತ್ತಲೂ ಓಡಿ ಮಾಯವಾಯಿತು.
ತಮ್ಮೆಲ್ಲರ ಶ್ರವಣೇಂದ್ರಿಯಗಳನ್ನು ಬರಸಿಡಿಲೋಪಾದಿಯಲ್ಲಿ ಘಾಸಿಗೊಳಿಸಿದೊಡನೆ ಎಲ್ಲರೂ ತಿರುಗಿ ನೋಡಿದ್ದಾಗಲೀ, ಧಾವಿಸಿದ್ದಾಗಲೀ ತಡವಾಗಲಿಲ್ಲ. ಶ್ರೀಯುತರು ಅಮ್ಮಾ ಎಂದು ನರಳುತ್ತಲೇ ತಮ್ಮ ಬಲಗಾಲನ್ನು ಗಟ್ಟಿಯಾಗಿ ಹಿಡಿದುಕೊಂಡು ದುಃಖಾಶ್ರಿತರಾಗಿ ಕಣ್ಣುಮುಚ್ಚಿದ್ದರು. ಅವರು ಧರಿಸಿದ್ದ ಗುಜರಾತ್ ಕೈಮಗ್ಗ ನಿರ್ಮಿತ ಖಾದಿಪ್ಯಾಂಟು ರಕ್ತದಿಂದ ತೊಯ್ಯುತ್ತಲೇ ಇರುವುದು. ಹಿಂಬಾಲಕಪಡೆಯಲ್ಲಿ ಶಾಶ್ವತಸ್ಥಾನ ಗಳಿಸಿದ್ದ ಜ್ಯೋತಿಷಿಗಳು ಕಚ್ಚಿದ ವೇಳೆ ಶುಭವೋ ಅಶುಭವೋ ಎಂದು ಪರಿಶೀಲಿಸಲೆಂದು ಪಂಚಾಂಗಗಳನ್ನು ಅನಾವರಣಗೊಳಿಸಿದರು, ವೈದ್ಯರೊಬ್ಬರು ಪ್ರಥಮಚಿಕಿತ್ಸೆಯನ್ನು ಆರಂಭಿಸಿ ಪೂರೈಸಿದರು.
ಆ ಸಮ್ಮೋಹಕ ವಾತಾವರಣದಲ್ಲಿ ಯಾರೊಬ್ಬರೂ ಆ ಪ್ರಾಣಿ ಇಂಥದ್ದೇ ಎಂದು ಗುರುತಿಸುವುದಾಗಿರಲಿಲ್ಲ. ಅದು ನರಿ ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು ತೋಳವೆಂದು ಹೇಳಿದರು. ಮಗುದೊಬ್ಬರು ವ್ಯಾಘ್ರವೇ ಮಾರುವೇಷದಲ್ಲಿ ಬಂದು ಕಚ್ಚಿರಬಹುದೆಂದು ಊಹಿಸಿದರು. ಇನ್ನೊಬ್ಬರು ಕಾಳೋರಗವೇ ಚತುಷ್ಪಾದಿ ರೂಪದಲ್ಲಿ ಕಚ್ಚಿರಬಹುದೆಂದು ಹೇಳಿ ಭಯಹುಟ್ಟಿಸಿದರು. ಕುಖ್ಯಾತ ಎಡವಟ್ಟುಗಳು ತಮ್ಮ ಶಿಬಿರದಲ್ಲಿರುವರಲ್ಲ ಎಂದು ವ್ಯಾಕುಲಚಿತ್ತರಾಗಿದ್ದ ಶ್ರೀಯುತರಿಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಲು ವ್ಯವಧಾನವಿರಲಿಲ್ಲ, ಆದರೆ ಅರೆಪ್ರಜ್ಞೆಗೆ ಕೊರತೆ ಇರಲಿಲ್ಲ. ಆದರೂ ಕಚ್ಚಿದ್ದನ್ನು ವಾರ್ತಾಇಲಾಖೆಯವರು ಚಿತ್ರೀಕರಿಸಿಕೊಂಡರೋ ಇಲ್ಲವೋ ಎಂದು ಆತಂಕಕ್ಕೊಳಗಾದರು.
ಆದರೆ ಸ್ಥಳೀಯ ಶಾಸಕ ಭೀಮ್ಯಾನಾಯಕ್ ಸಂಭವಿಸಿದ ಹೃದಯ ವಿದ್ರಾವಕಘಟನೆಯನ್ನೇ ಮುಂಬರುವ ಚುನಾವಣೆಯಲ್ಲಿ ಬಂಡವಾಳವನ್ನಾಗಿ ಪರಿವರ್ತಿಸಿಕೊಳ್ಳಬೇಕೆಂದು ನಿರ್ಧರಿಸಿದ, ಅಷ್ಟೊತ್ತಿಗಾಗಲೇ ಪ್ರಜ್ಞಾಶೂನ್ಯರಾದವರಂತೆ ಅಭಿನಯಿಸುತ್ತಿದ್ದ ಪ್ರಥಮಪ್ರಜೆಯನ್ನು ಅಂಬ್ಯುಲೆನ್ಸಲ್ಲಿ ಹಾಕಿದ್ದಾಗಲೀ, ಅದು ಓಡಲಾರಂಭಿಸಿದ್ದಾಗಲೀ, ಆ ತುರ್ತುವಾಹನವನ್ನು ಇನ್ನಿತರೇ ಸರ್ಕಾರಿ ವಾಹನಗಳು ಹಿಂಬಾಲಿಸಿದ್ದಾಗಲೀ ತಡವಾಗಲಿಲ್ಲ. ನೋಡು ನೋಡುವಷ್ಟರಲ್ಲಿ ಚಪ್ಪರದಳ್ಳಿಯಲ್ಲಿ ಸ್ಮಶಾನಮೌನ ಆವರಿಸಿತು.
***
ತಜ್ಞವೈದ್ಯರಿಂದ ಸೂಕ್ತಚಿಕಿತ್ಸೆ ಕೊಡಿಸಲೆಂದು ಮುಖ್ಯಮಂತ್ರಿಗಳನ್ನು ನಗರದ ಪ್ರಸಿದ್ಧ ನಂಜುಂಡೇಶ್ವರ ನರ್ಸಿಂಗ್ ಹೋಂಗೆ ಸೇರಿಸಲಾಯಿತು. ರಾಜ್ಯದ ಹಿತಾಸಕ್ತಿ ಕಾಪಾಡಲೆಂದೋ, ವಿರೋಧಪಕ್ಷದವರ ಬಾಯಿಗೆ ಹೆದರಿಯೋ ಸದರಿ ಸುದ್ದಿಯನ್ನು ಗೋಪ್ಯವಾಗಿಡಬೇಕೆಂದು ಸಂಪುಟ ತೀರ್ಮಾನಿಸಿತು. ಆದರೆ ಮಾಧ್ಯಮದವರ ಕಿಲಾಡಿತನದಿಂದಾಗಿ ಆ ಸುದ್ದಿ ಮರುದಿವಸವೇ ಸಚಿತ್ರವಾಗಿ ದೈನಿಕಗಳೆಲ್ಲ ರಾರಾಜಿಸಿತು. ಭಿನ್ನಮತೀಯರೊಂದೇ ಅಲ್ಲದೆ ವಿರೋಧಪಕ್ಷದ ದುರೀಣರೆಲ್ಲ ನರ್ಸಿಂಗ್ ಹೋಮ್ ಮುಂದೆ ಸಾಲುಗಟ್ಟಿದರು. ವೈದ್ಯರು ಮುಖ್ಯಮಂತ್ರಿಗಳಿಗೆ ಕಚ್ಚಿರುವುದು ನಾಯಿಯೇ ಹೊರತು ಬೇರಾವ ಪ್ರಾಣಿಯಲ್ಲವೆಂದು ಪ್ರಮಾಣೀಕರಿಸಿದ್ದೇ ಪರಪಾಟಾಯಿತು, ಅಲ್ಲದೆ ಯ್ಯಾಂಟಿರೇಬಿಯಸ್ ಚುಚ್ಚುಮದ್ದು ನಗರದಲ್ಲೊಂದೇ ಅಲ್ಲದೆ ರಾಜ್ಯದ ಯಾವ ಆಸ್ಪತ್ರೆಗಳಲ್ಲಾಗಲೀ, ಖಾಸಗಿ ದವಾಖಾನೆಗಳಲ್ಲಾಗಲೀ, ಔಷಧ ಅಂಗಡಿಗಳಲ್ಲಾಗಲೀ ಇರಲಿಲ್ಲ. ಅದನ್ನು ಅಮೇರಿಕಾದಿಂದ ಆಮದು ಮಾಡಿಕೊಳ್ಳಲು ಕನಿಷ್ಟಪಕ್ಷ ತಿಂಗಳು ಹಿಡಿಯುವುದು, ಅಷ್ಟರೊಳಗೆ ಮುಖ್ಯಮಂತ್ರಿಗಳ ದೇಹದಾದ್ಯಂತ ನಂಜು ಪ್ರವಹಿಸಿ ಹುಚ್ಚರಂತೆ ವರ್ತಿಸಲಾರಂಭಿಸಿದರೆ ಸರ್ಕಾರದ ಗತಿ ಏನು!
ಯಕಃಶ್ಚಿತ್ ನಾಯಿಯ ಹಲ್ಲೆಗೆ ತುತ್ತಾಗಿರುವರೆಂದರೆ ಮುಖ್ಯಮಂತ್ರಿಗಳು ಎಷ್ಟು ದುರ್ಬಲರಿದ್ದಾರು! ಅವರಿಂದ ರಾಜ್ಯದಾಡಳಿತ ಸುಸೂತ್ರವಾಗಿ ನಡೆಯಲಾದೀತೆ! ಹುಚ್ಚು ಹಿಡಿದು ಆಡಳಿತಪಕ್ಷಕ್ಕೆ ಕೆಟ್ಟಹೆಸರು ಬರುವ ಮೊದಲೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುವಂತೆ ಅವರನ್ನು ಒತ್ತಾಯಿಸಿದರೆ ಹೇಗೆ! ಇದೆಲ್ಲಕ್ಕಿಂತ ಮುಖ್ಯವಾಗಿ ರಾಜ್ಯದಾದ್ಯಂತ ಇರುವ ಬೀದಿನಾಯಿಗಳನ್ನು ಸಂಹರಿಸಿದಲ್ಲಿ ಸರ್ಕಾರಕ್ಕೆ ಕೆಟ್ಟಹೆಸರು ಬರುವುದೋ ಇಲ್ಲವೋ! ಭೂತದಯೆಯನ್ನು ಪ್ರಣಾಳಿಕೆಯಲ್ಲಿ ಸೇರಿಸಿರುವ ಆಡಳಿತಪಕ್ಷಕ್ಕೆ ಮುಂಬರುವ ಚುನಾವಣೆಯಲ್ಲಿ ಬಹುಮತ ಲಭಿಸುವುದೋ ಇಲ್ಲವೋ! ಎಂಬಿತ್ಯಾದಿ ಚರ್ಚೆ ಆಡಳಿತ ಪಕ್ಷದ ಮುಖ್ಯಕಛೇರಿಯಲ್ಲೂ..
ಇಂಥ ಶುಷ್ಕ ಚರ್ಚೆಗಳಿಂದ ಬೇಸತ್ತ ನರ್ಸಿಂಗ್ ಹೋಮ್ನ ಮುಖ್ಯವೈದ್ಯರು ಎಲ್ಲಾ ರಾಜಕೀಯ ಪಕ್ಷದ ದುರೀಣರನ್ನುದ್ದೇಶಿಸಿ ರೀ ಬುದ್ದಿ ಇರುವುದೇನ್ರಿ ನಿಮಗೆ! ಛೀಫ್ಮಿನಿಸ್ಟರ್ಗೆ ಕಚ್ಚಿರೋದು ನಾಯಿಯೇ ಹೊರತು ಕಾಳಿಂಗಸರ್ಪವಲ್ಲ. ಕಚ್ಚಿರುವ ನಾಯಿ ಆರೋಗ್ಯದಿಂದಿರುವುದೋ, ಅನಾರೋಗ್ಯಪೀಡಿತವಾಗಿರುವುದೋ! ಇದನ್ನು ಪತ್ತೆ ಮಾಡೋದು ಸರ್ಕಾರದ ಜವಾಬ್ದಾರಿ. ಕೂಡಲೆ ಆ ನಾಯಿಯನ್ನು ಪತ್ತೆ ಹಚ್ಚಿ ಹಿಡ್ಕೊಂಡು ಬನ್ನಿ ಮೊದಲು ಎಂದು ಬೇಸರದಿಂದ ಹೇಳಿದರು.
ಅದನ್ನು ಕೇಳಿಸಿಕೊಂಡ ಗೃಹಖಾತೆ ಸಚಿವ ಮೆಣಸಿನಕಾಯಿ ತಮ್ಮ ಜೀವಿತಾವಧಿಯಲ್ಲಿ ಒಂದಕ್ಕಿಂತ ಹೆಚ್ಚುಸಲ ಬೀದಿನಾಯಿಗಳಿಂದ ಕಚ್ಚಿಸಿಕೊಂಡಿದ್ದಂಥವರೆ! ಅದಲ್ಲದೆ ತಾವು ಮುಖ್ಯಮಂತ್ರಿಗಳ ಕಟ್ಟಾಬೆಂಬಲಿಗರು ಮತ್ತು ಫಲಾನುಭವಿಗಳೆ! ರಾಜ್ಯದ ಸಮಸ್ತ ನಾಯಿಗಳ ಮೇಲೆ ಸೇಡು ತೀರಿಸಿಕೊಳ್ಳಲು, ಋಣಮುಕ್ತರಾಗಲು ಇದೇ ಸುವರ್ಣಾವಕಾಶವೆಂದು ಭಾವಿಸಿದರು. ಒಂದುಕಡೆ ಯಾವುದೇ ಚತುಷ್ಪಾದಿಯ ಮನಸ್ಸಿಗೆ ನೋವಾಗದ ರೀತಿಯಲ್ಲಿ ಕೊಲ್ಲುವ ವಿಧಾನವನ್ನು ಸಂಶೋಧಿಸಬೇಕೆಂದು ವಿಜ್ಞಾನಿಗಳಲ್ಲಿ ಮನವಿ ಮಾಡಿಕೊಂಡರು, ಇನ್ನೊಂದು ಕಡೆ ಪೋಲಿಸ್ ವರಿಷ್ಠಾಧಿಕಾರಿಗಳ ಸಭೆಯನ್ನುದ್ದೇಶಿಸಿ ಚಪ್ಪರದಳ್ಳಿಯಲ್ಲಿರಬಹುದಾದ ಆಕ್ರಮಣಶೀಲ ನಾಯಿಯನ್ನೂ, ಅದರ ಮಾಲಕನನ್ನೂ ಬಂಧಿಸಿ ಕರೆತರುವಂತೆ ಆಜ್ಞಾಪಿಸಿದರು.
ಆರಕ್ಷಕ ಇಲಾಖೆಯ ಬಹುತೇಕ ಅಧಿಕಾರಿಗಳಿಗೆ ಬೇಕಾಗಿದ್ದು ಅದೆ! ಕಾರಣ ಅವರವರ ಮನೆಗಳಲ್ಲಿನ ಲ್ಯಾಬ್ರಡಾರ್, ಆಲ್ಸೇಷಿಯನ್, ಶೆಪರ್ಡ್ ಗಳಂಥ ಹಾಳುಮೂಳು ಜಾತಿ ನಾಯಿಗಳನ್ನು ಆಯಾ ಬಡಾವಣೆಗಳಲ್ಲಿನ ಬೀದಿನಾಯಿಗಳು ತಮ್ಮ ಲೈಂಗಿಕ ತೃಷೆ ತೀರಿಸಿಕೊಳ್ಳಲು ದುರ್ಬಳಕೆ ಮಾಡಿಕೊಳ್ಳುತ್ತಿರುವವು. ರೇಜಿಗೆ ಹುಟ್ಟಿಸುತ್ತಿರುವವಲ್ಲದೆ ತಮ್ಮ ವಿಐಪಿತನದ ಬೆನ್ನಮೇಲೆ ಬರೆ ಎಳೆದಿದ್ದವು. ಸೈಟ್ ಅಂಡ್ ಶೂಟ್ ಆರ್ಡರ್ ಜಾರಿಯಾಗಬೇಕಾದರೆ ಆಯಾ ನಗರಗಳ ಆಡಳಿತಾಧಿಕಾರಿಗಳು ಸರ್ವಸಮ್ಮತವಾಗಿ ಒಪ್ಪುವುದು ಮುಖ್ಯ. ಆದರೆ ತಮ್ಮ ಕರ್ಮಕ್ಕೆ ಅಂಥ ಉನ್ನತಸ್ಥಾನದಲ್ಲಿರುವರೆಲ್ಲ ಜೈನಧರ್ಮೀಯರು.
ಕಾರಣ ಕೆಲವು ವರ್ಷಗಳ ಹಿಂದೆ ರಾಜ್ಯಪಾಲರಾಗಿದ್ದ ಸುಶೀಲಕುಮಾರ್ ಜೈನ್ ಆಯಕಟ್ಟಿನ ಸ್ಥಾನಗಳಲ್ಲಿ ತಮ್ಮವರನ್ನು ತಂದು ಕೂರಿಸಿದ್ದರು. ತಾವು ವರ್ಗವಾಗುವ ಪೂರ್ವದಲ್ಲಿ ದ್ವಿಪಾದಿಗಳಿಗಿಂತ ಮುಖ್ಯವಾಗಿ ತ್ರಿಪದಿ, ಚತುಷ್ಪಾದಿ, ಅಷ್ಟಪದಿ, ಬಹುಪದಿಗಳಂಥ ಜೀವಿಗಳ ಸಂರಕ್ಷಣೆ ಮತ್ತು ಅವುಗಳ ಸರ್ವತೋಮುಖ ಅಭಿವೃದ್ದಿ ಕಡೆ ಗಮನ ಕೊಡಿ ಎಂದು ಸಲಹೆ ನೀಡಿದ್ದರು. ಅಂಥವರು ಸಹಿ ಮಾಡಲು ಸಾಧ್ಯವೆ! ಕಡತಗಳನ್ನು ವಾಪಸ್ಸು ಕಳಿಸಿದರು.
ಇನ್ನೊಂದು ಕಡೆ ಎಸ್ಪಿ ದರ್ಜೆಯ ಪೋಲಿಸ್ ಅಧಿಕಾರಿಗಳ ತಂಡ ಚಪ್ಪರದಳ್ಳಿಯಲ್ಲಿ ಬೀಡುಬಿಟ್ಟಿತು. ಅದು ಮೊದಲೆ ಪಶುಪಾಲಕರ ತವರೂರು. ಪ್ರತಿಯೊಂದು ಮನೆಯಲ್ಲಿ ದನಕರುಗಳಿರುವಂತೆಯೇ ಅಷ್ಟೇ ಸಂಖ್ಯೆಯ ನಾಯಿಬೆಕ್ಕುಗಳೂ ಇದ್ದವು. ದ್ವಿಪಾದಿ ಚತುಷ್ಪಾದಿಗಳ ನಡುವೆ ಸಾಮರಸ್ಯವಿತ್ತು. ಯಾವಾಗ ಪೋಲಿಸರು ನಾಯಿಗಳನ್ನು ಹುಡುಕಲಾರಂಭಿಸಿದರೋ ಆ ನಿರುಪದ್ರವಿಗಳಲ್ಲಿ ನಡುಕ ಹುಟ್ಟಿತು. ಪ್ರತಿಯೊಬ್ಬರನ್ನು ತಮ್ಮ ಬಿಡಾರದ ಬಳಿಗೆ ಎಳೆತರುವುದು ಮುಖ್ಯಮಂತ್ರಿಗಳನ್ನು ಕಚ್ಚಿರುವ ನಾಯಿ ಯಾರದೆಂದು ಪ್ರಶ್ನಿಸುವುದು, ಸಾವಿರಾರು ನಾಯಿಗಳ ಪೈಕಿ ಯಾವ ನಾಯಿ ಕಚ್ಚಿರುವುದೆಂದು ಹೇಳುವುದು! ತಡವರಿಸಲಾರಂಭಿಸಿದವರನ್ನು ಲಾಠಿಗಳಿಂದ ಚಚ್ಚುವುದು! ಜನ ರೋಸಿ ಹೋಯಿತು.
ಪೋಲಿಸರು ಅಲ್ಲಿಗೆ ಸುಮ್ಮನಿದ್ದರೆ ತಾನೆ! ನಾಯಿಗಳನ್ನು ಕೊಲ್ಲುವಂತೆಯೂ ಇಲ್ಲ, ಕೊಲ್ಲದೆ ಬಿಡುವಂತೆಯೂ ಇಲ್ಲ, ಅವರ ಸಂಕಟ ಅವರಿಗೆ! ಇವರ ಸಂಕಟ ಇವರಿಗೆ! ಗ್ರಾಮದ ಸಮಸ್ತ ಶುನಕಗಳನ್ನು ಹಿಡಿದು ಬಯಲ ಸೆರೆಮನೆಯಲ್ಲಿ ಬಂಧಿಸಿಡುವಲ್ಲಿ ಯಶಸ್ವಿಯಾಗಿದ್ದರು. ಬಂಧಿತ ಶುನಕಗಳು ಹೋ ಎಂದು ಅಳಲನ್ನು ತೋಡಿಕೊಳ್ಳಲಾರಂಭಿಸಿದ್ದವು. ಅವುಗಳ ಆಕ್ರಂದನ ಅಲೆಅಲೆಯಾಗಿ ಅಷ್ಟದಿಕ್ಕುಗಳ ತುಂಬೆಲ್ಲ ಪರಸಿತು, ಪ್ರತಿಧ್ವನಿಸಿತು. ಅದನ್ನು ಕರುಳ ಮೂಲಕ ಕೇಳಿಸಿಕೊಂಡ ಸಂದರ್ಭದಲ್ಲಿ ಚೌಡಪ್ಪ ದಂಪತಿಗಳು ಎಲ್ಲಿದ್ದರೆಂದರೆ!
ಚಪ್ಪರದಳ್ಳಿಯಲ್ಲಿ ಅದರಲ್ಲೂ ತನ್ನಂಥ ಹೊಲೆಯನ ಮನೆಯಲ್ಲಿ ಸನ್ಮಾನ್ಯಮುಖ್ಯಮಂತ್ರಿಗಳು ವಾಸ್ತವ್ಯಹೂಡುವರೆಂಬ ಸುದ್ದಿ ವಾರದಿಂದಲೂ ಚಾಲ್ತಿಯಲ್ಲಿತ್ತು ತಾನೆ! ಎಲ್ಲರೂ ಬಂದು ಚೌಡಪ್ಪ ಪೂರ್ವಜನ್ಮದಲ್ಲಿ ಏನು ಪುಣ್ಯ ಮಾಡಿದ್ದಿಯೋ ಏನೋ! ಅವರೇನಾದ್ರೂ ಬಂದು ನಿನ್ನ ಮನೆಯಲ್ಲಿದ್ದು ಹೋದರೆ ನಮಗೆಲ್ಲ ಬಾಡೂಟ ಹಾಕಿಸಬೇಕು ಎಂದು ಕರಾರು ವಿಧಿಸಿದ್ದರು, ಅದಲ್ಲದೆ ತನ್ನ ಹೆಂಡತಿ ಸುಂಕಲಿಯೂ ಬೇಟೆ ಬಲಿ ಕೊಡುವುದಾಗಿ ತಮ್ಮ ಕುಲದೇವತೆ ಬಿಕ್ಕಿಮರಡಿ ದುರುಗಮ್ಮಗೆ ಹರಕೆ ಹೊತ್ತಿದ್ದಳು, ಅದನ್ನು ಈಡೇರಿಸಲೆಂದು ಆ ಕುಟುಂಬದ ಯಾವತ್ತೂ ಸದಸ್ಯರು, ದೇವಿಗೆ ಮುಡುಪಿರಿಸಿದ್ದ ಟಗರನ್ನೆಳೆದುಕೊಂಡು ಚಪ್ಪರದಳ್ಳಿಗೆ ಕೂಗಳತೆ ದೂರದಲ್ಲಿದ್ದ ಬಿಕ್ಕಿಮರಡಿಗೆ ಹೋಗಿದ್ದರು. ಅಲ್ಲಿ ಅದನ್ನು ಶಾಸ್ತ್ರೋಕ್ತ ರೀತಿಯಲ್ಲಿ ಬಲಿ ಅರ್ಪಿಸಿದ್ದಾಯಿತು, ಅಲ್ಲಿಯೇ ಭಟ್ಟಿ ಇಳಿಸಿದ್ದ ಸರಾಯಿಯನ್ನು ಕಂಠಮಟ ಸೇವಿಸಿದ್ದಾಯಿತು. ಅಮಲಲ್ಲಿ ಪ್ರಶ್ನೋತ್ತರಗಳ ಯಥೇಚ್ಚ ವಿನಿಮಯ ಬೇರೆ.
ರಾಜ್ಯದ ಪ್ರಥಮ ಪ್ರಜೆಯನ್ನು ಹಿಗ್ಗಾಮುಗ್ಗ ಕಚ್ಚಿ ಹಿಂಸಿಸಿದ ತಮ್ಮ ಮನೆಯ ಸೊಳ್ಳೆಗಳನ್ನು ಅವರೆಲ್ಲ ಅಭಿನಂದಿಸಿದರು, ಏನೆಲ್ಲ ಕಲ್ಪಿಸಿಕೊಂಡು ಆನಂದಿಸಿದರು, ಇನ್ನೊಂದು ಮಹತ್ವದ ಸಂಗತಿ ಎಂದರೆ ಮುಖ್ಯಮಂತ್ರಿಗಳ ಕಾಲನ್ನು ಕಚ್ಚಿದ್ದ ಅರ್ಜುನ ನಾಮಾಂಕಿತ ನಾಯಿ ತಮ್ಮೊಂದಿಗೆ ಬಂದಿತ್ತಲ್ಲವೆ! ಅದಕ್ಕಂತೂ ರಾಜಾತಿಥ್ಯ್ಯ, ಅದು ಕೂಡ ಟಗರಿನ ಕಾಲು ತೊಡೆಗಳನ್ನು ಪುಷ್ಕಳವಾಗಿ ಭುಂಜಿಸಿತಲ್ಲದೆ ಭಟ್ಟಿಸರಾಯಿಯನ್ನೂ ಕಂಠಮಟ ಸೇವಿಸಿತು, ಆದರೆ ಅವರೆಲ್ಲರಂತೆ ಅದು ವಾಲಾಡುವ ಬದಲು ಮುಗಿಲಿಗೆ ಮುಖಮಾಡಿ ಬೊವ್ವೋ ಎಂದು ಅರಚಲಾರಂಭಿಸಿತು. ಅದರ ಕೆರಳುವಿಕೆಯಿಂದ ಪ್ರಸನ್ನಚಿತ್ತರಾಗಿದ್ದ ಅವರೆಲ್ಲ ಶಬ್ಬಾಷ್ ಎಂದು ಮೆಚ್ಚುಗೆ ಸೂಚಿಸಿದರು.
ಅದೇ ಸಂದರ್ಭದಲ್ಲಿಯೇ ಚಪ್ಪರದಳ್ಳಿ ನೆಲೆ ಕಂಡುಕೊಂಡಿದ್ದ ದಿಕ್ಕಿನಿಂದ ನಾಯಿಗಳ ಸಾಮೂಹಿಕ ನಿನಾದ ಕೇಳಿಬರಲಾರಂಭಿಸಿದ್ದು. ತಮ್ಮೂರಿಗೂ ತಮ್ಮ ನಾಯಿಗಳಿಗೂ ದುರುಳರ್ಯಾರೋ ತೊಂದರೆ ಕೊಡುತ್ತಿರುವರೆಂದೇ ಭಾವಿಸಿದರು. ಸೇವಿಸಿದ್ದ ಬಾಡು ಬುರ್ರ ತಮ್ಮೊಳಗೆ ನೂರಾರು ಅಶ್ವಶಕ್ತಿಯನ್ನು ತುಂಬಿತ್ತು ಬೇರೆ. ಅಲ್ಲಿಂದ ವಾಯುವೇಗದಲ್ಲಿ ಹೊರಟವರೆ!
ಗ್ರಾಮದ ಮೇರೆಯಲ್ಲಿ ಕರುಗಲ್ಲನ್ನು ಸಮೀಪಿಸಿದೊಡನೆ ಅರ್ಜುನ ಬೊವ್ವೋ ಎಂದು ಬೊಗಳುವುದರ ಮೂಲಕ ಬಂಧಿತ ತನ್ನ ಕುಲಬಾಂಧವರಲ್ಲಿ ಆತ್ಮವಿಶ್ವಾಸ ತುಂಬಿತು, ಚೌಡಪ್ಪ ದಂಪತಿಗಳು ಸೇರಿದಂತೆ ಉಳಿದವರೆಲ್ಲ ಲೇ ಬೀಮ್ಯಾ, ರಾಮ್ಯಾ, ಲಸುಮ್ಯಾ ಚೀತವ್ವಾ ಎಂದು ಕೂಗುತ್ತ ಗ್ರಾಮವನ್ನು ಪ್ರವೇಶಿಸಲಾರಂಭಿಸಿದರು. ಅದನ್ನು ಕೇಳಿ ಉಳಿದೆಲ್ಲ ಶುನಕಗಳು ಸಿಂಹಘರ್ಜನೆಯನ್ನು ಹೋಲುವ ಹರ್ಷೋದ್ಗಾರ ಮಾಡಿದವು. ಚೌಡಪ್ಪನ ನೇತೃತ್ವದ ಪದಾತಿದಳ ಊರಮ್ಮನ ಗುಡಿ ಸಂದಿ ದಾಟಿ ಕಾಣಿಸಿಕೊಂಡಿತೋ ಇಲ್ಲವೋ! ಗ್ರಾಮ ಹೊಸಚೈತನ್ಯದಿಂದ ಘಮಾಡಿಸಲಾರಂಭಿಸಿತು. ಪೋಲಿಸರ ಅವಕೃಪೆಯಿಂದಾಗಿ ತಾವೆಲ್ಲಿ ಮರಣದಂಡನೆಗೊಳಗಾಗುವೆವೋ ಎಂದು ಹೆದರಿದ್ದ ಗಾಯಾಳುಗಳು ಓಡೋಡಿ ಬಂದು ಚೌಡಾ ನಮ್ಮನ್ನ ಕಾಪಾಡಿ ಪುಣ್ಯಕಟ್ಕೊಳ್ಳಪ್ಪಾ, ಮುಚ್ಯಮಂತಿರಿಗೆ ಹೇಳು ತಂದೆ ಎಂದು ತಮ್ಮ ಅಳನ್ನು ತೋಡಿಕೊಂಡರು, ಅಲ್ಲದೆ ಗಾಯಗಳಿಂದಲೇ ತುಂಬಿದ್ದ ತಮ್ಮ ದೇಹಗಳನ್ನು ಅವನೆದುರು ಪ್ರದರ್ಶನಕ್ಕಿಟ್ಟರು.
ಅದನ್ನು ನೋಡಿದೊಡನೆ ತನ್ನ ಪಿತ್ತ ನೆತ್ತಿಗೇರಿತು, ದೇಹದಾದ್ಯಂತ ಪ್ರವಹಿಸುತ್ತಿದ್ದ ಅಮಲು ನೂರ್ಮಡಿಗೊಂಡಿತು. ಮುಖ್ಯಮಂತ್ರಿಗೆ ಊಟ ಹಾಕಿರುವ ತಾನು ಅಸಾಮಾನ್ಯನೆಂದು ಅಪಾರ್ಥ ಮಾಡಿಕೊಂಡ, ಯಾವ ಸೂಳ್ಯಾಮಗ ನಿಮ್ಮ ಮೈಯನ್ನು ಮುಟ್ಟಿದ್ದು ಎಂದು ಘರ್ಜಿಸಿದ, ಅದರಿಂದ ಸ್ಪೂರ್ತಿ ಪಡೆದ ಅರ್ಜುನ ಬೊವೋ ಎಂದು ರಣಕೇಕೆ ಹಾಕುತ್ತ ಕುಣಿದು ಕುಪ್ಪಳಿಸಿತು, ತನ್ನ ಸಂತ್ರಸ್ಥ ಕುಲಬಾಂಧವರಿರುವಲ್ಲಿಗೆ ಹೋಗಿ ಅವುಗಳ ಮರ್ಮಾಂಗಗಳನ್ನು ಮೂಸುವುದರ ಮೂಲಕ ಖೇದವ್ಯಕ್ತಪಡಿಸಿತು.
ಅಷ್ಟರಲ್ಲಿ ಕನಿಷ್ಠಬಿಲ್ಲೆಗಳೇ ಅವರನ್ನು ಸಮೀಪಿಸಿದರೋ, ಅವರೇ ಪ್ಯಾದೆಗಳನ್ನು ಸಮೀಪಿಸಿದರೊ! ಅವರಿಗೆ ಇವರು ಇವರಂತೆ ಕಾಣಲಿಲ್ಲ, ಇವರಿಗೆ ಅವರು ಅವರಂತೆ ಗೋಚರಿಸಲಿಲ್ಲ. ಅರ್ಜುನ ನಾಮಾಂಕಿತ ಶುನಕವಂತೂ ಶಾರ್ಧೂಲವೇ ಮಾರುವೇಷದಲ್ಲಿರುವೋ ಎಂಬಂತೆ ಕನಿಷ್ಠಬಿಲ್ಲೆಗಳಲ್ಲಿ ಭಯ ಹುಟ್ಟಿಸಿತು. ಸಮೀಪಿಸಿದರು, ದೃಷ್ಟಿ ಮಿಲಾಯಿಸಿದೊಡನೆ ಪರಸ್ಪರ ಯಾರ್ಯಾರನ್ನೋ ನೆನಪಿಸಿಕೊಂಡರು, ಮೊದಲೇ ಎಸ್ಪಿ ಸಾಹೇಬ ಎನ್ಕೌಂಟರ್ ಸ್ಪೆಷಲಿಸ್ಟ್ ಎಂದೇ ಇಲಾಖೆಯಲ್ಲಿ ಕುಖ್ಯಾತನಾಗಿದ್ದ, ತನ್ನಿಂದ ಹತಗೊಂಡವರು, ತಪ್ಪಿಸಿಕೊಂಡಿರುವ ಗಾಯಾಳುಗಳು, ಭೂಗತವಾಗಿದ್ದುಕೊಂಡೇ ಸರ್ಕಾರದ ಕಣ್ಣಿಗೆ ಮಣ್ಣೆರಚುತ್ತಿರುವವರು!
ಅವರ ಪೈಕಿ ಯಾರಾದರೂ ಈ ಛದ್ಮವೇಷದಲ್ಲಿ ತನ್ನೆದುರು ನಿಂತಿರಬಹುದೆ ಎಂದು ಎಸ್ಪಿ ಸಂದೇಹ ತಾಳಿದರು. ಚೌಡಪ್ಪನ ಮನಸ್ಥಿತಿಯೂ ಅದಕ್ಕಿಂತ ಭಿನ್ನವಿರಲಿಲ್ಲ, ಹಿಂದ್ಯಾವತ್ತೋ ಎಲ್ಲೆಲ್ಲೋ ಸಂಭವಿಸಿದ ಗೋಲಿಬಾರುಗಳಲ್ಲಿ ಹತರಾದ ತನ್ನ ಕರುಳ ಸಂಬಂಧಿಗಳನ್ನು ಒಬ್ಬೊಬ್ಬರನ್ನಾಗಿ ನೆನಪಿಸಿಕೊಳ್ಳಲಾರಂಭಿಸಿದ. ಆತನ ಅರ್ಜುನ ಎಂಬ ಹೆಸರಿನ ಶುನಕವೂ ವಿನಾಕಾರಣ ಹುತಾತ್ಮಗೊಂಡ ತನ್ನ ಕುಲಬಾಂಧವರನ್ನು ನೆನಪು ಮಾಡಿಕೊಂಡು ಬೊಗಳುತ್ತ ತನ್ನ ಸಹವರ್ತಿ ಶುನಕಗಳನ್ನು ಹುರಿದುಂಬಿಸಲಾರಂಭಿಸಿತು.
ತಮ್ಮ ಚೌಡಪ್ಪ ದೊಡ್ಡಾಪೀಸರನಂತೆ ಎದೆಸೆಟೆಸಿ ನಿಂತಿರುವುದನ್ನು ಕಂಡ ಗ್ರಾಮದ ಸಮಸ್ತರು ಅವನ ಬೆನ್ನ ಹಿಂದೆ ಸೈನಿಕರೋಪಾದಿಯಲ್ಲಿ ಜಮಾಯಿಸಿದರು. ನಲ್ಲಮಲ ಸಹ್ಯಾದ್ರಿ ವಿಂದ್ಯಾಚಲಗಳೇ ಮೊದಲಾದ ದಟ್ಟಾರಣ್ಯಗಳಲ್ಲಿ, ವಂಗ ಕಳಿಂಗವೇ ಮೊದಲಾದ ಕುರುಚಲು ಕಾಡುಗಳಲ್ಲಿ, ಸುಡುಗಾಡು ಸ್ಮಶಾನಗಳಲ್ಲಿ ಅತಂತ್ರಸ್ಥಿತಿಯಲ್ಲಿದ್ದ ಹುತಾತ್ಮರ ಆತ್ಮಗಳೆಲ್ಲ, ಬೀಳದ ಮಳೆಯಿಂದಾಗಿ, ತಮ್ಮ ಬೆವರನ್ನುಂಡೂ ಬೆಳೆಯದ ತುಂಡುಭೂಮಿಗಳಿಂದಾಗಿ, ಸಾಲದ ಕುಂಟುನೆಪವೊಡ್ಡಿ ತಮ್ಮತಮ್ಮ ಮನೆಗಳಲ್ಲಿನ ಸಿಲವಾರ ಚರಕಲಿ ಮಣ್ಣಿನ ಚಡಿಕೆಕುಡಿಕೆಗಳನ್ನು ಹರಾಜು ಹಾಕಿದ ಬ್ಯಾಂಕುಗಳ ಉಪಟಳಕ್ಕೆ ರೋಸಿ ಆತ್ಮಹತ್ಯೆ ಮಾಡಿಕೊಂಡ ಸಹಸ್ರಾರು ಅಮಾಯಕ ಅನ್ನದಾತರ ಪ್ರೇತಾತ್ಮಗಳು ವಲಸೆಬಂದು ತಮ್ಮೆಲ್ಲರ ಶರೀರಗಳಲ್ಲಿ ಪ್ರವಹಿಸಲಾರಂಭಿಸಿದೊಡನೆ ಅವರೆಲ್ಲರ ಕಣ್ಣುಗಳು ಹರಿತಚೂರಿಗಳನ್ನು ಹೋಲಲಾರಂಭಿಸಿದವು.
ಗೋಮುಖವ್ಯಾಘ್ರಗಳಂಥ ರಾಜಕೀಯಪಕ್ಷಗಳ ನಕಲಿ ಪ್ರಣಾಳಿಕೆಗಳು, ಗ್ರಾಮವಾಸ್ತವ್ಯಗಳ ನೆಪದಲ್ಲಿ ತಮ್ಮ ಬೇಳೆಬೇಯಿಸಿಕೊಳ್ಳುವ ಮುಖ್ಯಮಂತ್ರಿಗಳು ಸಾಲುಸಾಲಾಗಿ ನೆನಪಾಗಿ ಅವರೆಲ್ಲರ ಶರೀರಗಳು ಬುರುಬುರನೆ ಊದಿ ನಾಲ್ಕುದಿಕ್ಕುಗಳಾದ್ಯಂತ ವ್ಯಾಪಿಸತೊಡಗಿದವು! ನೋಡುನೋಡುವಷ್ಟರಲ್ಲಿ ಆರಿಂಚಿದ್ದವರು ಆರಡಿಯಾದರು, ಆರಡಿ ಇದ್ದವರು ಆರುನೂರು ಅಡಿ ಎತ್ತರಕ್ಕೆ ಬೆಳೆದು ನಭೋಮಂಡಲವನ್ನು ವ್ಯಾಪಿಸಿದರು. ಕೂಸುಗಳೆಲ್ಲ ತಮ್ಮತಮ್ಮ ತಾಯಂದಿರ ಕಂಕುಳ ಸೆರೆಯಿಂದ ಮುಕ್ತಗೊಂಡು ಓಡೋಡಿ ಬಂದು ಸಶಸ್ತ್ರಪಡೆಯಂತೆ ಹೊಳೆಯತೊಡಗಿದವು, ಅದೇ ತಾನೆ ಅಕ್ಷರಾಭ್ಯಾಸಕ್ಕೆ ಅಣಿಯಾಗುತ್ತಿದ್ದ ಭ್ರೂಣಗಳು ಸಾವಿರಾರು ಗರ್ಭಗಳಿಂದ ಹೊರಬಂದು ನಿಷೇಧಿತ ಕೃತಿಗಳಂತೆ ಖುರಪುಟಗಳನ್ನು ತೆರೆಯಲಾರಂಭಿಸಿದವು.
ಒಬ್ಬೊಬ್ಬರ ಮೈಯಲ್ಲಿ ಸಹಸ್ರ ಸಹಸ್ರ ಅಕ್ಷೊಹಿಣಿ ಮಂದಿ! ಅವರ ಅಂಗಾಂಗಗಳೆಲ್ಲ ಒಂದೊಂದು ಆಯುಧಗಳೆ! ಅವರ ಕಣ್ಣುಗಳಲ್ಲಿನ ಜ್ವಾಲಾಮುಖಿಗಳು ಇನ್ನೇನು ಸ್ಪೋಟಗೊಂಡು ತಮ್ಮನ್ನೆಲ್ಲ ಸುಟ್ಟುಬೂದಿ ಮಾಡಿದರೇನು ಗತಿ! ದೇಹಗಳನ್ನು ಆವರಿಸಿದ್ದ ಖಾಕಿದಿರಿಸುಗಳುದುರಿ ಸರ್ಕಾರಿ ಗುಲಾಮರೆಲ್ಲ, ಮಾನವರೂಪಿ ಅಸ್ತ್ರಗಳೆಲ್ಲ ಬೆತ್ತಲಾದರು. ಲಾಠಿಗಳು ಬಂದೂಕುಗಳು ಅವರೆಲ್ಲರ ಕೈಗಳನ್ನು ವಂಚಿಸಿ ರೈತರ ಶ್ವಾಸೋಚ್ವಾಸದ ಚಂಡಮಾರುತಕ್ಕೆ ತತ್ತರಿಸಿ ಪಲಾಯನ ಮಾಡಲಾರಂಭಿಸಿದವು. ನಿಲ್ಲಲಿಕ್ಕಿಲ್ಲ ನೆಲ! ಖೈದಿಗಳಂತೆ ಕುಳಿತುಕೊಳ್ಳಲಿಕ್ಕಿಲ್ಲ ನೆಲ! ಪಲಾಯನ ಮಾಡಲಿಕ್ಕಿಲ್ಲ ಹಾದಿಗಳು! ಕ್ಷಮೆ ಕೇಳಲಿಕ್ಕಿಲ್ಲ ಬಾಯಲ್ಲಿ ಮಾತುಗಳು! ಜೋಡಿಸಲಿಕ್ಕಿಲ್ಲ ನಿತ್ರಾಣಗೊಂಡಿರುವ ಕೈಗಳು! ಉಸಿರಾಡಲಿಕ್ಕಿಲ್ಲ ಗಾಳಿ! ದಾಹ ತೀರಿಸಿಕೊಳ್ಳಲಿಕ್ಕಿಲ್ಲ ತಮ್ಮ ದೇಹಗಳಲ್ಲಿ ಬೆವರು! ಅಸಹಾಯಕ ಸ್ಥಿತಿ ಮಡುಗಟ್ಟಿದ ಪರಿಣಾಮವಾಗಿ!
ಸಾವಿರಾರು ರಾಜಕಾರಣಿಗಳ ವಿಷಪೂರಿತ ಹಲ್ಲುಗಳಿಂದ ಹಲ್ಲೆಗೊಳಗಾಗುತ್ತಲೇ ಇರುವ ದೇಶಗಳು ರಾಜ್ಯಗಳು ಜಿಲ್ಲೆ ತಾಲ್ಲೂಕು ಹೋಬಳಿ ಹಳ್ಳಿಗಳು! ಆ ರಾಜಕಾರಣಿಯ ನಂಜಿನ ಮುಂದೆ ಒಂದು ಯಕಃಶ್ಚಿತ್ ಶುನಕದ ನಂಜು ಯಾವ ಲೆಕ್ಕ! ಉಂಡಮನೆಯ ಜಂತಿ ಎಣೆಸುವ ಮುಖ್ಯಮಂತ್ರಿಗಳು ಸಹಸ್ರಾಕ್ಷರ ಕಣ್ಣ ವಪೆಗಳಲ್ಲಿ ಸಾಲುಗಟ್ಟಿದರು. ಚೌಡಪ್ಪನ ನರನಾಡಿಯಲ್ಲಿ ರಣಕೇಕೆ ಹಾಕುತ್ತಿದ್ದ ಭಟ್ಟಿಸೆರೆ ಅಮೃತವಾಹಿನಿಯಂತೆ ಎಲ್ಲರ ದೇಹಗಳಲ್ಲಿ ಸಾಂಕ್ರಾಮಿಕಗೊಳ್ಳಲಾರಂಭಿಸಿತು. ಮೇರುಪರ್ವತಗಳನ್ನು ಮುಷ್ಠಿಯಲ್ಲಿ ಹಿಡಿಯುವ ಉತ್ಸಾಹ, ಆಕಾಶದಲ್ಲಿನ ನಕ್ಷತ್ರಗಳನ್ನು ಎಣೆಸುವ ಜಾಣ್ಮೆ, ತಮ್ಮತಮ್ಮ ಸಣಕಲು ಕೈಗಳನ್ನೇ ಮಾರಕಾಸ್ತ್ರಗಳನ್ನಾಗಿ ಪರಿವರ್ತಿಸುವ ಪರಾಕ್ರಮಗಳಿಂದಾಗಿ ಅವರೆಲ್ಲ ಸೈನ್ಯದೋಪಾದಿಯಲ್ಲಿ ತಮ್ಮತ್ತ ಮುನ್ನುಗ್ಗಲಾರಂಭಿಸಿದ್ದು ಒಂದು ಕಡೆಯಾದರೆ ಇನ್ನೊಂದು ಕಡೆ ಬಂಧಮುಕ್ತಗೊಂಡಿದ್ದ ನೂರಾರು ಶುನಕಗಳು ಸಿಂಹಶಾರ್ಧೂಲಗಳಂತೆ ತಮ್ಮೆಲ್ಲರ ಮೇಲೆ ಎರಗಲು ಸನ್ನದ್ದಗೊಂಡಿರುವವು.
ಕಂಗಾಲಸ್ಥಿತಿಯಲ್ಲೂ ಎಸ್ಪಿ ಸಾಹೇಬ ತನ್ನ ಕನಿಷ್ಠಬಿಲ್ಲೆಗಳ ಕಡೆ ಆರ್ತತೆಯಿಂದ ನೋಡಿದ, ಆದರೆ ಅವರೆಲ್ಲ ಕಾಲಿಗೆ ಬುದ್ದಿ ಹೇಳಲು ಸಿದ್ದರಾಗಿರುವವರಂತೆ ಕಂಡುಬಂದರು. ಇನ್ನು ದುಡುಕಿದಲ್ಲಿ ತನ್ನ ಗತಿ ಏನಾಗಬೇಡ! ನಮ್ಮನ್ನು ನಮ್ಮ ಪಾಡಿಗೆ ಬಿಡಿರಯ್ಯಾ, ನಿಮ್ಮನ್ನಾಗಲೀ ನಿಮ್ಮ ನಾಯಿಗಳನ್ನಾಗಲೀ ಆರೆಸ್ಟ್ ಮಾಡೋದಿಲ್ಲ ಎಂದು ಕರಜೋಡಿಸಿ ಕೇಳಿಕೊಂಡ, ಅದಕ್ಕೆ ಅವರೆಲ್ಲ ಅದೆಂಗ ನಮ್ಮನ್ನು ಬಿಟ್ಟೋಗ್ತೀಯಾ, ನಿನ್ಜೊತೆ ಬರ್ತೀವಿ, ಮರ್ಯಾದೆಯಿಂದ ನಮ್ಮನ್ನೆಲ್ಲ ಕರ್ಕೊಂಡು ಹೋಗಲಿಲ್ಲಾಂದ್ರೆ! ಎಂದು ದವಡೆಗಳನ್ನು ಮಸೆದರು, ಅದು ಎಲ್ಲಿಯವರೆಗೆ ಕೇಳಿಸಿತೆಂದರೆ! ಬರಸಿಡಿಲಿನಂತೆರಗಿದ ಆ ಸದ್ದನ್ನು ಕೇಳಿಸಿಕೊಂಡ ಮುಖ್ಯಮಂತ್ರಿಗಳು ಬೆಚ್ಚಿಬಿದ್ದರಲ್ಲದೆ ಅಮ್ಮಾ ಎಂದು ನರಳಿದರು.




ಪ್ರಸ್ತುತ ರಾಜಕೀಯದ ವಾಸ್ತು ಮತ್ತು ವಸ್ತು ಸ್ಥಿತಿಯ ಚಿತ್ರಣವಾಗಿದೆ. ವಾಸ್ತವಕ್ಕೆ ಯಾವತ್ತು ಹತ್ತಿರವಿರುವ ಕುಂ. ವಿ. ಸರ್ ಗೆ ನನ್ನ ಅಭಿನಂದನೆಗಳು.
ಕಥೆ ತುಂಬಾ ಚೆನ್ನಾಗಿದೆ ಜೊತೆಗೆ ಮುಖ್ಯಮಂತ್ರಿಯ ಆರ್ತನಾದ ಉಹಿಸಿದಾಗಲಂತೂ ಮನಸ್ಸಿಗೆ ಉಲ್ಲಾಸವೆನಿಸಿತು. ಧನ್ಯವಾದಗಳು..
GENIUS BOSS
ಬೊಚ್ಚು ಬಾಯಿಯ ಮುಮಂ ಗೆ ಕಚ್ಚಿದ ಹುಚ್ಚು ನಾಯಿ
ಪ್ರಥಮ ಪ್ರಜೆಯ ಪ್ರಾತಃಕಾಲದ ದುರ್ನಾತ ಸವೆದ ಜನ
ರೊಚ್ಚಿನಿಂದ ಕೊಚ್ಚಿ ಕೊಯ್ಯಲುದ್ಯುಕ್ತರಾದ ಮಹಾಜನತೆ
ಬೊವ್ವೋ ಬೊವ್ವೋ ಎಂದರಚುವ ಗೂಡಕೇಶಿಗಳು
ತುಂಬಿಟ್ಟ ಮದ್ದಿಗೆ ಸಿಕ್ಕಿಸಿದ ಬತ್ತಿಗೆ ಹೊತ್ತಿಸದ ಬೆಂಕಿ
ಟುಸ್ಸs ಟುಸ್ಸs ಎಂದಿತೋ, ಢಮ್ ಢಮಾರ ಸಿಡಿದಿತೋ
ಶುನಕ ಸಿಂಹಗಳಾದವೊ, ಶಾರ್ಧೂಲ ಧೂಳು ಮುಕ್ಕಿದವೋ?
ಬೆಚ್ಚಿಬಿದ್ದ ಮುಮಂ ಕಳಚಿಟ್ಟ ಬಟ್ಟೆ ತೊಟ್ಟ ಮತ್ತೊಬ್ಬ ಸಿಎಂ
ಅರ್ಜುನ ಗೆಲ್ಲಲಾರ,ಸೋಲೊಪ್ಪಲಾರ ಸಧ್ಯಕ್ಕಂತೂ.
-ಅನೀಲ ತಾಳಿಕೋಟಿ