ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಂ ವೀ ಕಾದಂಬರಿ ಝಲಕ್: ನೀನು ಸರ್ವಾಂತರ್ಯಾಮಿ!

5

ನಿನ್ನೆಯಿಂದ ಮುಂದುವರಿದದ್ದು… 

kum vi olacharandi poster1ಶ್ರೀ ದರ್ಭಶಯನ್ ಗುಲಾಲ್ ಅನಾಹತಪಕ್ಷದ ಬೆನ್ನೆಲುಬು, ಪ್ರಾಣವಾಯು. ಶ್ರೀಯುತರು ದೇಶ ವಿದೇಶಗಳ ಭಾಷೆಗಳನ್ನು ಬಲ್ಲವರು. ಕೌಟಿಲ್ಯ ಅರಿಸ್ಟಾಟಲ್ ಪ್ಲೇಟೋ ಥೋರೋ ರೋಸೋ ವಿರಚಿತ ಕೃತಿಗಳನ್ನು ಅರಗಿಸಿಕೊಂಡಿರುವವರು. ದೇಶವಿದೇಶಗಳ ರಾಜಕೀಯ ವಿದ್ಯಮಾನಗಳನ್ನು ಕುಳಿತಲ್ಲಿ ಗಮನಿಸುವಂಥ ತ್ರಿಕಾಲಜ್ಞಾನಿಗಳು. ಧ್ಯಾನ ಪ್ರಾಣಾಯಾಮ ಯೋಗಾಸನಗಳಲ್ಲಿ ನಿಷ್ಣಾತರು, ಅಲ್ಲದೆ ಮಿತಾಹಾರಿಗಳು ಮಿತಭಾಷಿಗಳು ಸಹ. ಸೂಜಿಯ ಮೊನೆಯನ್ನು ಚುಂಬಿಸುವಂತೆ ಮಾತಾಡುವ ಕಾರಣಕ್ಕೆ ಪಕ್ಷದ ಕಾರ್ಯಕರ್ತರು ಅವರ ಕಣ್ಸನ್ನೆಯನ್ನೇ ಸುಗ್ರೀವಾಜ್ಞೆ ಎಂದು ಭಾವಿಸುವರು. ಶ್ರೀಯುತ ಗುಲಾಲ್ ಅವರಿಗೂ ಕಾರ್ಪೊರೇಟ್ ಕಂಪನಿಗಳಿಗೂ ಅವಿನಾಭಾವ ಸಂಬಂಧ. ಪಕ್ಷಕ್ಕೆ ಕೋಟ್ಯಾನುಕೋಟಿ ದೇಣಿಗೆ ಹರಿದುಬರುವುದು ವಿದೇಶಿಕಂಪನಿಗಳಿಂದ. ಅಭಿವೃದ್ದಿಶೀಲರಾಷ್ಟ್ರಗಳನ್ನು ನಿಯಂತ್ರಿಸುವ ರೀತಿಯಲ್ಲಿಯೇ ಕಾರ್ಪೊರೇಟ್ ಸಂಸ್ಥೆಗಳು ಈ ದೇಶದ ಮೇಲೂ ಹತೋಟಿ ಇರಿಸಿಕೊಂಡಿರುವೆ. ರಾಷ್ಟ್ರದ ಎಲ್ಲಾ ರಾಜಕೀಯ ಪಕ್ಷಗಳು ಕಂಪನಿಗಳ ಫಲಾನುಭವಿಗಳು. ಆದರೆ ಅನಾಹತಪಕ್ಷ ಕಂಪನಿಗಳಿಂದ ಪಡೆದ ಮೊತ್ತದ ಅಲ್ಪಾಂಶವನ್ನು ದೇಶದ ಬ್ಯಾಂಕುಗಳಲ್ಲಿಯೂ, ಅಧಿಕಾಂಶವನ್ನು ವಿದೇಶಿ ಬ್ಯಾಂಕುಗಳಲ್ಲಿಯೂ ಠೇವಣಿ ಇರಿಸಿರುವುದು. ಗುಲಾಲ್ ಮಹೋದಯ್ ತಮ್ಮ ಎಂಭತ್ತನೇ ಇಳಿವಯಸ್ಸಿನಲ್ಲೂ ಖಾಸಗಿಯಾಗಿ ಲೇವಾದೇವಿ ನಡೆಸುತ್ತಿರುವರು. ಮಠಮಾನ್ಯಗಳು ಧಾರ್ಮಿಕ ಸಂಸ್ಥೆಗಳು ಹಿರಿಕಿರಿಯ ರಾಜಕಾರಣಿಗಳು ಉದ್ಯಮಿಗಳು ಶ್ರೀಯುತರ ಗಣ್ಯಮಾನ್ಯಗ್ರಾಹಕರು. ಹಿರಿಯರು ಹಣಕಾಸು ಮತ್ತಿತರ ಸಾಂದರ್ಭಿಕ ಸಲಹೆ ಸೂಚನೆಗಳಿಂದ ಇತರೇ ಪಕ್ಷಗಳ ಮುಖಂಡರುಗಳನ್ನು ತಮ್ಮ ನಿಯಂತ್ರಣದಲ್ಲಿರಿಸಿಕೊಂಡಿರುವುದುಂಟು. ರಾಜಕೀಯ ವಿಶ್ಲೇಷಕರ ಅಭಿಪ್ರಾಯ ಹೀಗಿರುವುದು! ಅದೇನೆಂದರೆ

ನನಗೆ ವೃದ್ಯಾಪ್ಯ ಆವರಿಸಿರುವುದರಿಂದ ಬೇಟೆಯಾಡುವ ತ್ರಾಣ ಉಡುಗಿರುವುದು ಪ್ರಾಣಿಗಳೆ. ಆದ್ದರಿಂದ ದಯವಿಟ್ಟು ನಾನಿರುವಲ್ಲಿಗೆ ಸೌಜನ್ಯಪೂರ್ವಕವಾಗಿ ಆಗಮಿಸಿ ಕ್ಷುದ್ಬಾಧೆ ತಣಿಸಿ ಎಂದು ಮನವಿ ಸಲ್ಲಿಸಿದರೆ ಅದಕ್ಕೆ ಯಾವುದೇ ಸಸ್ಯಾಹಾರಿ ಪ್ರಾಣಿಗಳು ಮರುಳಾಗುವುದಿಲ್ಲ. ಆದರೆ ಶ್ರೀದರ್ಭಶಯನ್ ಗುಲಾಲ್ ಮಹಾನುಭಾವರು ವೃದ್ದ ಸಿಂಹಕ್ಕಿಂತ ಶಕ್ತಿಶಾಲಿ. ಎಲ್ಲಾ ಅತಿಗಣ್ಯ ವ್ಯಕ್ತಿಗಳು ಅವರಿರುವಲ್ಲಿಗೆ ಆಗಮಿಸಿ ಬಲಿಬೀಳುವರು

ಹೌದು! ಈ ಮಾತು ಅಕ್ಷರಶಃ ಸತ್ಯ. ಶ್ರೀಯುತರು ಸ್ಥಾವರಲಿಂಗದಂತೆ ಅಚಲರಾಗಿರುತ್ತಿದ್ದರು. ಅವರು ಚೇಕಿತಾನ ನಿವಾಸ ಮತ್ತು ಅನಾಹತಪಕ್ಷದ ಕೇಂದ್ರಕಛೇರಿ ತರುಣಾತಪ್ನಲ್ಲಿ ಮಾತ್ರ ಗೋಚರಕ್ಕೆ ಲಭ್ಯವಾಗುತ್ತಿದ್ದರು. ಅದೂ ನಿರ್ಧಿಷ್ಟ ವೇಳೆಯಲ್ಲಿ. ಜಪಮಾಲೆಯನ್ನು ಕೈಯಲ್ಲಿ ಧರಿಸಿ, ಯಾವುದೋ ಮಂತ್ರಪಠಿಸುತ್ತ, ಸಹಚರರೊಂದಿಗೆ ಸಾಂಕೇತಿಕಭಾಷೆಯಲ್ಲಿ ಸಂವಾದಿಸುತ್ತ, ಹೆಜ್ಜೆಹೆಜ್ಜೆಗೊಮ್ಮೊಮ್ಮೆ ತಮ್ಮ ಬೆಳ್ಳಿಗಡ್ಡ ನೇವರಿಸಿಕೊಳ್ಳುತ್ತ, ತಮ್ಮ ಭ್ರೂಮದ್ಯದಲ್ಲಿನ ತಿಲಕದ ಕಡೆ ದೃಷ್ಟಿ ಕೇಂದ್ರೀಕರಿಸಿಕೊಳ್ಳಲು ಪ್ರಯತ್ನಿಸುತ್ತ. ಇಂಥ ನಡೆನುಡಿಯಿಂದಾಗಿ ಶ್ರೀಯುತರು ವಿಶಿಷ್ಟ ಗಾಂಭೀರ್ಯತೆಗೆ ಪಾತ್ರರಾಗಿದ್ದರು. ವಿವಿಧಕೋನಗಳಲ್ಲಿ ವೀಕ್ಷಿಸಿದವರಿಗೆ ಕೆಲವೊಮ್ಮೆ ಶ್ರೀಯುತರು ಪೌರಾಣಿಕ ಪಾತ್ರಗಳ ಪ್ರತಿನಿಧಿಯಂತೆ ಗೋಚರಿಸಿದರೆ ಕೆಲವೊಮ್ಮೆ ಮಾಂಸಾಹಾರಿ ಚತುಷ್ಪಾದಿಗಳನ್ನು ಪ್ರತಿನಿಧಿಸುತ್ತಿದ್ದರು.

ಪ್ರಸಿದ್ದ ಸಮಾಜಶಾಸ್ತ್ರಜ್ಞ ಪ್ರೊ ಗೋಕರ್ಣ ಪಚಾರಿ ಅಜನ್ಮ ಬ್ಯಹ್ಮಚಾರಿಗಳ ನಿಕಟವರ್ತಿಯಾಗಿದ್ದರು. ಅವರ ಜನ್ಮವೃತ್ತಾಂತವನ್ನು ಕೂಲಂಕಷ ಬಲ್ಲವರು. ಅವರು ಐದುವರ್ಷಗಳ ಕಾಲ ಶ್ರಮವಹಿಸಿ ‘ಮಹಾಪುರುಷ್ ಶ್ರೀ ದರ್ಭಶಯನ್ ಗುಲಾಲ್ ಮಹೋದಯ್ ಕಿ ಜೀವನ್ ಕಹಾನಿ’ ಎಂಬ ಬೃಹದ್ ಗ್ರಂಥ ರಚಿಸಿರುವರು. ಅದರಲ್ಲಿ ಅತ್ಯಮೂಲ್ಯ ಮಾಹಿತಿ ಇರುವುದು. ಗುಲಾಲ್ ಸ್ವಾತಂತ್ರ್ಯ ಸೇನಾನಿ ಎನ್ನವುದು ಎಷ್ಟು ನಿಜವೋ, ದೀರ್ಘಾವಧಿ ಸೆರೆವಾಸ ಅನುಭವಿಸಿದ್ದರೆನ್ನುವುದು ಅಷ್ಟೇ ನಿಜ. ಸನ್ಮಾನ್ಯರು ಉತ್ತರಾತ್ಯದ ಮೇಘಾಡಂಬರ್ ನಗರದ ಗಂಡಭೇರುಂಡ ಕಾರಾಗೃಹದಲ್ಲಿ ಏಕಕಾಲಕ್ಕೆ ಖಟ್ಟರ್ ಅಪರಾಧಿಗಳೊಂದಿಗೂ ಸ್ವಾತಂತ್ರ್ಯಹೋರಾಟಗಾರರೊಂದಿಗೂ ಹಲವು ವರ್ಷಗಳ ಕಾಲ ಒಡನಾಡಿದ್ದರು. ವಿಭಿನ್ನ ವ್ಯಕ್ತಿತ್ವಗಳಲ್ಲಿ ದ್ವಿಮುಖವಾಗಿ ಸಂಚರಿಸಿ ಅತ್ತ ಅವರಿಂದ ಅದನ್ನೂ, ಇತ್ತ ಇವರಿಂದ ಇದನ್ನೂ ಕಲಿತು ಪ್ರಾಪಂಚಿಕಜ್ಞಾನವನ್ನು ನೂರ್ಮಡಿಗೊಳಿಸಿಕೊಂಡಿದ್ದರು. ಆದ್ದರಿಂದ ಶ್ರೀಯುತರು ಅಲೌಕಿಕತೆ ಹಾಗೂ ಲೌಕಿಕತೆಯ ನಡುವಿನ ಅಗೋಚರ ಸೇತುವೆ. ಗುಣ ಅವಗುಣಗಳ ನೆರವಿನಿಂದ ಅನಾಹತಪಕ್ಷವನ್ನು ಕಟ್ಟಿ ಬೆಳೆಸಿದವರು. ಜೀವಾವಧಿ ಶಿಕ್ಷೆಗೊಳಗಾಗಿದ್ದ ಖೈದಿಗಳನ್ನು ಸೆರೆಯಿಂದ ಮುಕ್ತಗೊಳಿಸಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನಾಗಿಸಿದವರು. ಕಟಕಟೆಯಲ್ಲಿದ್ದವರನ್ನು ರಾಜಕಾರಣಿಗಳನ್ನಾಗಿಸಿದವರು. ಬಲ್ಲ ಮೂಲಗಳ ಪ್ರಕಾರ ಅವರ ನೋಟವೆಂದರೆ ಕ್ಷಿಪಣಿ, ಅವರ ಮಾತೆಂದರೆ ಪಾಂಚಜನ್ಯ, ಅವರ ನಿಟ್ಟುಸಿರೆಂದರೆ ಚಂಡಮಾರುತ, ಅವರ ನುಡಿ ಎಂದರೆ ಸುಗ್ರೀವಾಜ್ಞೆ! ಆದರೂ ಅವರ ಪ್ರಶಾಂತ ಮುಖವನ್ನು ನೋಡಿದವರು ತಕ್ಷಣ ಮಾನಸಸರೋವರವನ್ನು ನೆನಪಿಸಿಕೊಳ್ಳುವರು. ಅವರ ಗಂಭೀರ ವ್ಯಕ್ತಿತ್ವವನ್ನು ತಮ್ಮ ಮನಸ್ಸಿನಲ್ಲಿ ಛಾಪಿಸಿಕೊಳ್ಳದೆ ಇರಲಾರರು. ಹಾಗೆ ಅವರು ಇರದಿದ್ದಲ್ಲಿ ಅನಾಹತ ಹಲವಾರು ಅನಾಹುತಗಳನ್ನು ಎದುರಿಸಬೇಕಿತ್ತು, ಎಂದೋ ನಾಮಾವಶೇಷವಾಗುತ್ತಿತ್ತು. ಅದರಿಂದಾಗಿಯೇ ಅನಾಹತಪಕ್ಷದ ರಾಜಕಾರಣಿಗಳು ಅವರೆದುರು ಅಳೆದು ತೂಗಿ ಮಾತಾಡುತ್ತಾರೆ. ಪರಮವಿಧೇಯತೆಯಿಂದ ನಡೆದುಕೊಳ್ಳುತ್ತಾರೆ. ಅವರ ಚಿಕ್ಕಮಾತನ್ನು ಸುಗ್ರೀವಾಜ್ಞೆಯೆಂದು ಭಾವಿಸಿ ಪರಿಪಾಲಿಸುತ್ತಾರೆ, ತಮ್ಮ ಪ್ರಾಣವನ್ನು ಒತ್ತೆ ಇರಿಸಿ!

ಅಶ್ವತ್ಥವೃಕ್ಷ ಸದೃಶ ಶ್ರೀಯುತರು ಕಳೆದ ವಾರದಿಂದ ಮೇಲ್ದವಡೆ ದಂತಪಂಕ್ತಿ ಶಿಥಿಲತೆಯಿಂದ ನರಳುತ್ತಿದ್ದರು. ಪ್ರಸಿದ್ಧ ದಂತವೈದ್ಯ ಡಾತಕ್ಷಕ್ಉಲ್ಕ್ ಅವರ ಮೇಲ್ದವಡೆ ಹಾಗೂ ಕೆಳದವಡೆಯಲ್ಲಿನ ಸಂಪೂರ್ಣ ಹಲ್ಲುಗಳನ್ನು ನಿಶ್ಶೇಷಗೊಳಿಸಿದ್ದರು. ಅವುಗಳನ್ನು ಕುರುಕ್ಷೇತ್ರದಲ್ಲಿನ ಸುವಿಖ್ಯಾತ ವಸ್ತುಸಂಗ್ರಹಾಲಯಕ್ಕೆ ಕೊಡುಗೆ ರೂಪದಲ್ಲಿ ನೀಡಿದ್ದರು. ಒಂದು ವಾರ ಅಜ್ಞಾತವಾಸದಲ್ಲಿದ್ದ ಶ್ರೀಯುತರನ್ನು ತಮ್ಮ ಆಸ್ಪತ್ರೆಗೆ ಬರಮಾಡಿಕೊಂಡು ಚಿನ್ನದ ಕೃತಕ ದಂತಪಂಕ್ತಿಯನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದ್ದರು. ಅವುಗಳ ಅಸಹಕಾರದಿಂದಾಗಿ ಶ್ರೀಯುತರು ನುಡಿಯುವಾಗ ತಡವರಿಸುತ್ತಿದ್ದರು. ಹೀಗಾಗಿ ಶಬ್ದಗಳು ಸ್ಥಾನಪಲ್ಲಟಗೊಳ್ಳುತ್ತಿದ್ದವು. ಮಾತುಗಳು ಅರ್ಥಕಳೆದುಕೊಳ್ಳುತ್ತಿದ್ದವು. ಮಾತುಗಳ ಅಸಹಕಾರದಿಂದ ಸನ್ಮಾನ್ಯರು ಕೆಲವು ದಿವಸಗಳ ಕಾಲ ಮೂಲೆಗುಂಪಾಗಿರಬಹುದೆಂದು ತರುಣಾತಪ್ಪಕ್ಷದ ಸ್ಥಳೀಯ ಕಾರ್ಯಕರ್ತರು ಭಾವಿಸಿದರು. ಸೂತಕದ ಮರೆಯಲ್ಲಿ ಸಂಭ್ರಮಿಸಿದರು. ಆದರೆ ಅದು ಮರುದಿವಸವೇ ಸುಳ್ಳಾಯಿತು. ಅದಕ್ಕೆ ಕಾರಣಗಳು ಇಲ್ಲದಿರಲಿಲ್ಲ..

ಮಹಿಷ್ಮತಿರಾಜ್ಯದ ನೂತನ ಮುಖ್ಯಮಂತ್ರಿ ಶ್ರೀ ಕ್ಷೇತ್ರಪಾಲ ಉಕ್ಕಡ್ ಅವರಿಂದ ಪಕ್ಷದ ಕಛೇರಿಗೆ ಸಂದೇಶ ಬಂದಿತು. ಅದರಲ್ಲಿ ಆ ಕಿರಿಯರು ಈ ಹಿರಿಯರನ್ನು ತೀರ್ಥರೂಪ ಸಮಾನರು ಪರಮಪೂಜ್ಯರು ಎಂಬ ವಿಶೇಷಣಗಳಿಂದ ಸಂಬೋಧಿಸಿದ್ದರು. ಪಾದಗಳಿಗೆರಗಿ ಆಶೀರ್ವಾದ! ಈ ವಿಶೇಷ ಕ್ರಿಯಾಪದವನ್ನೂ ಒಕ್ಕಣಿಸಿದ್ದರು. ಅದನ್ನು ತಿಳಿದು ಶ್ರೀ ಗುಲಾಲ್ ಅತೀವ ಸಂತೋಷದಿಂದ ಸಂಭ್ರಮಿಸಿದರು. ತಾವು ಆಡಲಿರುವ ಮಾತುಗಳಿಗೆ ಸಂಬಂಧಿಸಿದ ಮಹಾಪ್ರಾಣ ಅಲ್ಪಪ್ರಾಣ ಅನುನಾಸಿಕ ವ್ಯಂಜನಗಳನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿದರು. ಕಾರಣ ಶ್ರೀಯುತರು ತಮ್ಮ ಪಂಚೇಂದ್ರಿಯಗಳನ್ನು ಕೆಲವು ದಿವಸಗಳ ಹಿಂದೆ ದೂರಗಾಮಿ ಕ್ಷಿಪಣಿಗಳನ್ನಾಗಿ ಪರಿವರ್ತಿಸಿ ಮಹಿಷ್ಮತಿರಾಜ್ಯಕ್ಕೆ ಕಳಿಸಿದ್ದರು. ಅಲ್ಲಿನ ರಾಜಕೀಯ ವಿದ್ಯಮಾನಗಳನ್ನು ಸಂಗ್ರಹಿಸಿ ವಿಶ್ಲೇಷಿಸಿಕೊಳ್ಳುತ್ತಿದ್ದರು. ಅಲ್ಲದೆ ಗುಪ್ತಚರ ವಿಭಾಗ ನೀಡುತ್ತಿದ್ದ ಮಾಹಿತಿಯೊಂದಿಗೆ ಹೋಲಿಸಿಕೊಳ್ಳುತ್ತಿದ್ದರು. ‘ನಿನ್ನ ಋಣಾನುಬಂಧಪಕ್ಷ ನಿಶ್ಶೇಷವಾಗುವ ಕಾಲ ದೂರವಿಲ್ಲವೋ ಅರಣ್ಯಕ್ ಬರಾಟಿ’ ಎಂದು ಮನಸ್ಸಿನಲ್ಲಿ ಉದ್ಗರಿಸಿಕೊಳ್ಳುತ್ತಿದ್ದರು. ಎಲವೋ ಅಪರ ಔರಂಗಜೇಬನೇ ನಿನಗೆ ಅಪರ ಚಾಣಾಕ್ಯ ಎಂದು ಬಿರುದು ದಯಪಾಲಿಸಲು ಅನಾಹತಪಕ್ಷ ಸನ್ನದ್ದವಾಗಿರುವುದು ಎಂದು ತಮಗೆ ತಾವು ಅಂದುಕೊಂಡರು.

ತಮ್ಮ ಅತಿಗಣ್ಯ ರೋಗಿಯ ಅತೀವ ಸಂಭ್ರಮ ಗಮನಿಸಿದ ಡಾ ತಕ್ಷಕ್ಉಲ್ಕ್ ತಾವು ಇನ್ನೂ ಕೆಲವು ದಿವಸಗಳ ಕಾಲ ಮೌನದಿಂದಿರುವುದು ಕ್ಷೇಮ ಪೂಜ್ಯರೆ. ಇದನ್ನು ಉಲ್ಲಂಘಿಸಿದಲ್ಲಿ ತಮ್ಮ ಬಾಯಿಯೊಳಗಿನ ಧ್ವನಿ ಉತ್ಪಾದನಾ ಹಾಗೂ ವಿತರಣಾ ವ್ಯವಸ್ಥೆ ಕುಂಟಿತಗೊಳ್ಳುವುದು ಎಂದು ಸಲಹೆ ನೀಡಿದರು. ಅದಕ್ಕೆ ಪ್ರತಿಯಾಗಿ ಅವರು ಮುಗುಳ್ನಗುವ ಸನ್ನಾಹದಲ್ಲಿದ್ದಾಗ ಪಕ್ಷದ ಇನ್ನೋರ್ವ ವರಿಷ್ಠ ಐಲವಲ್ ರಂಪ ಬರುತ್ತಿರುವ ವ್ಯಕ್ತಿ ಗಣ್ಯರೇ ಹೊರತು ಅತಿಗಣ್ಯರಲ್ಲ ಸ್ವಾಮೀಜಿ. ಅವರನ್ನು ಸ್ವಾಗತಿಸುವ ಹೊಣೆ ನಮ್ಮದು. ನಮ್ಮೆಲ್ಲರ ತೀರ್ಥರೂಪ ಸಮಾನರಾದ ತಮಗೆ ವಿಶ್ರಾಂತಿಯ ಅಗತ್ಯವಿದೆ ಎಂದರು ಅಂಜಿಕೆಯಿಂದ. ಬಳಿಕ ಗುಲಾಲ್ ಪೂರ್ಣಪ್ರಮಾಣದ ನಗೆ ಬೀರಿದರು. ಮತ್ತೋರ್ವ ವರಿಷ್ಠ ಅಂಶುಮಾಲ ಮತ್ಕುಣ್ ಹೊಂಚಿರುವ ಉಗ್ರಗಾಮಿಗಳು ಯಾವ ವೇಷದಲ್ಲಿರುವರೋ? ಆದ್ದರಿಂದ ತಾವು ಚಿಕ್ಕಚಿಕ್ಕ ವಿಷಯಗಳಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಇರುವುದು ಸೂಕ್ತ ಎಂದು ಸಂದೇಹಿಸಿದರು. ಅದಕ್ಕೆ ಉತ್ತರವಾಗಿ ಶ್ರೀಯುತರು ತಮ್ಮ ಗಡ್ಡವನ್ನು ಅರ್ಥಪೂರ್ಣವಾಗಿ ನೇವರಿಸಿದರು.

ಆ ದಿವಸ ದೂರ್ವಾಸತನವನ್ನು ಕಳಚಿ ವಶಿಷ್ಠತನವನ್ನು ಆವಹಿಸಿಕೊಂಡರು. ತರುಣಾತಪ್ ಭವನದ ಮುಖ್ಯದ್ವಾರವನ್ನು ದಾಟಿ ಒಂದು ಕ್ಷಣ ನಿಂತು ನೋಟ ಹರಿಸಿದರು. ಎಡಬಲದಲ್ಲೊಂದೇ ಅಲ್ಲದೆ ಉದ್ದಕ್ಕೂ ತಮ್ಮ ದರ್ಶನಾಕಾಂಕ್ಷಿಗಳು ನೆರೆದಿದ್ದರು. ಅವರ ಮುಖಗಳಲ್ಲಿ ಭಯಮಿಶ್ರಿತ ಭಾವನೆಗಳು ದಟ್ಟವಾಗಿದ್ದವು. ಅವರಲ್ಲಿ ರಾಜಕಾರಣಿಗಳಿಗಿಂತ ಅಧಿಕ ಸಂಖ್ಯೆಯಲ್ಲಿ ನ್ಯಾಯವಾದಿಗಳು, ಮಾಜಿ ನ್ಯಾಯಮೂರ್ತಿಗಳು, ಜಾಮೀನಿನಿಂದ ಹೊರಬಂದಿದ್ದ ಅಪರಾಧಿಗಳು, ಪರಿತ್ಯಕ್ತ ವಿಧವೆಯರು, ಸಂತ್ರಸ್ತ ಮಹಿಳೆಯರು ಇದ್ದರು. ನೋಟ ಮಾತ್ರದಿಂದ ಅವರವರ ಗುರುತರ ಸಮಸ್ಯೆಗಳನ್ನು ಗ್ರಹಿಸಿದರು. ತುಟಿ ಚಲನೆಯಿಂದ ಆಯಾ ಸಮಸ್ಯೆಗಳಿಗೆ ನಡೆಯುತ್ತ ಪರಿಹಾರ ಸೂಚಿಸಿದರು. ಕಾಲಿಗೆರಗಿದವರನ್ನು ಮನಸ್ಸಿನಲ್ಲಿಯೇ ಆಶೀರ್ವದಿಸಿದರು. ವಿಚ್ಚೇದಿತ ತರುಣಿಯರು ತಮ್ಮ ಕಂಕುಳಲ್ಲಿದ್ದ ಕೂಸುಗಳನ್ನು ಶ್ರೀಯುತರ ಪಾದಗಳ ಸಮಕ್ಷಮ ಹಾಕಿ ಅಡ್ಡಿಪಡಿಸಿದರು. ಆಯಾ ಆತಂಕಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಸಶಸ್ತ್ರಸಜ್ಜಿತ ಕಮ್ಯಾಂಡೋಗಳು. ತರುಣಾತಪ್ನ ಸಂಭ್ರಮ ಅವರನ್ನು ನಿಧನಿಧಾನವಾಗಿ ಹಿಂಬಾಲಿಸಿ ಕ್ರಮೇಣ ಕಳೆಗುಂದಿತು.

ನಾಲ್ಕು ಎಸ್ಕಾರ್ಟ್ ವಾಹನಗಳ ನಡುವೆ ಇದ್ದ ಬೊಯೋಕೊ ವಾಹನ ತಮ್ಮ ನಿರೀಕ್ಷೆಯಲ್ಲಿತ್ತು.

***

ಕಪಿತ್ಥನಗರದ ಅಭಿಸಾರ್ ಅಂತರ್ರಾಷ್ಟ್ರೀಯ ನಿಲ್ದಾಣದಿಂದ ಹೊರಟ ವಿಶೇಷ ವಿಮಾನ ಕುರುಕ್ಷೇತ್ರದ ಬನಾವಟ್ ನಿಲ್ದಾಣ ತಲುಪಲು ಕೇವಲ ಎರಡೂವರೆ ತಾಸು ತೆಗೆದುಕೊಂಡಿತು. ಅದರಿಂದ ಇಳಿಯಲಾರಂಭಿಸಿದ ಒಂಭತ್ತನೆಯ ವ್ಯಕ್ತಿ ಶ್ರೀ ಕ್ಷೇತ್ರಪಾಲ ಉಕ್ಕಡ್ ಆಗಿದ್ದರು ನಿಸ್ಸಂದೇಹವಾಗಿ. ಕಣ್ಣಿಗೆ ಕಡುಗಪ್ಪು ವರ್ಣದ ತಂಪು ಕನ್ನಡಕವನ್ನು ಧರಿಸಿದ್ದರು, ಕುರುಚಲು ಗಡ್ಡ ಅವರ ಮುಖದ ಶೋಭೆ ಹೆಚ್ಚಿಸಿತ್ತು. ಲಾಂಛನಪ್ರಾಯವಾಗಿ ಬಲಹೆಗಲ ಮೇಲೆ ಖಾದಿ ಉತ್ತರೀಯವನ್ನು ಹೊಟ್ಟೆ ಭಾಗದವರೆಗೆ ಇಳಿಬಿಟ್ಟಿದ್ದರು. ಇನ್ನುಳಿದ ವೇಷಭೂಷಣವಂತೂ ಸರೆಸರಿ. ತಮ್ಮ ಎಡಗೈಯಿಂದ ತಲೆಗೂದಲನ್ನು ಒಪ್ಪ ಓರಣಗೊಳಿಸುವುದನ್ನು ಪೂರೈಸಿದ್ದು ವಿಮಾನದಿಂದ ಎರಡೂವರೆ ಅಡಿ ದೂರ ನಡೆದ ನಂತರ. ಸ್ವಲ್ಪ ಮುಂದಕ್ಕೆ ಆಗಮಿಸಿ ಹಿಂತಿರುಗಿ ನೋಡುವುದರ ಮೂಲಕ ತಮ್ಮನ್ನು ಸುರಕ್ಷಿತವಾಗಿ ಗುರಿ ತಲುಪಿಸಿದ ವಿಮಾನಕ್ಕೆ ಕೃತಜ್ಞತೆಗಳನ್ನು ಅರ್ಪಿಸಿದರು. ಅವರು ತಮ್ಮ ಮುಖವನ್ನು ನೇರಗೊಳಿಸುವುದಕ್ಕೂ ಶ್ರೀಯುತ ದರ್ಭಶಯನ್ ಗುಲಾಲ್ ನಿಧನಿಧಾನವಾಗಿ ಅತಿಥಿಯನ್ನು ಸಮೀಪಿಸುವುದಕ್ಕೂ ಸರಿ ಹೋಯಿತು. ತಮ್ಮ ಕೈಯಲ್ಲಿದ್ದ ಪುಷ್ಪಗುಚ್ಛವನ್ನು ಶ್ರೀಯುತರಿಗೆ ಹಸ್ತಾಂತರಿಸಿದರು. ಹಸ್ತಲಾಘವ ಮಾಡಿದರು. ಕ್ಷೇಮಲಾಭ ವಿಚಾರಿಸಿದರು. ನಿಮ್ಮ ಸಂಗಡ ಕುಟುಂಬ ಸದಸ್ಯರೆಲ್ಲಿ ಎಂದು ನೋಟದ ಮೂಲಕ ಪ್ರಶ್ನಿಸಿದರು. ಇವರು ಇಂಥಿಂಥವರೆಂದು ಅತಿಥಿಗಳಿಗೆ ಪರಿಚಯಿಸಿದರು. ಆ ಕ್ಷಣ ಮರೆತದ್ದನ್ನು ನೆನಪಿಸಿಕೊಂಡ ಉಕ್ಕಡ್ ಅವರ ಪಾದಗಳಿಗೆ ಎರಗಿದರು. ಅವರು ಇವರನ್ನು ಹಿಡಿದೆತ್ತಿ ಪುನಃ ಆಲಂಗಿಸಿಕೊಂಡರು. ನಂತರ ಬೊಯೋಕೊ ವಾಹನದಲ್ಲಿ ತಾವಿಬ್ಬರೂ..

ಅತಿಥಿಗೃಹದಲ್ಲಿ ಶ್ರೀಯುತ ಉಕ್ಕಡ್ ಅಪಾದಮಸ್ತಕ ಮೈಲಿಗೆ ತೊಡೆದು ಮಡಿಯುಡಿಯನ್ನು ಆರೋಪಿಸಿಕೊಂಡರು. ಸೌಂದರ್ಯತಜ್ಞ ಪ್ರೊ ತಾರಕಾಕ್ಷ ಮೊಕ್ತೇಸರ್ ನಿರ್ದೇಶನದಲ್ಲಿ ಉಡುಪು ಧರಿಸಿದರು. ಪ್ರಸಾದನಗಳನ್ನು ಲೇಪಿಸಿಕೊಂಡರು. ನಿಲುಗನ್ನಡಿಯಲ್ಲಿ ತಮ್ಮ ಪ್ರತಿಬಿಂಬ ನೋಡಿಕೊಳ್ಳುತ್ತ ನಮುಚಿಯನ್ನು ಜ್ಞಾಪಿಸಿಕೊಂಡರು, ಪುಳಕಿತರಾದರು. ಹೊರಡುವ ಮುನ್ನ ಆಕೆ ಕರೆ ಮಾಡಿದ್ದಳು. ತನ್ನನ್ನೂ ಜೊತೆಯಲ್ಲಿ ಕರೆದೊಯ್ಯಿರಿ ಎಂದು ಚುಂಬಿಸಿ ಹಠ ಹಿಡಿದಿದ್ದಳು. ಆದರೆ ದಕ್ಷಾರಿ ಸಲಹೆ ಪುರಸ್ಕರಿಸಿ ಆಕೆಯನ್ನು ದೂರವಿರಿಸಿದ್ದರು. ಆದರೂ ಆಕೆ ತಮ್ಮ ಹೃದಯವನ್ನು ಒಲಂಪಿಕ್ ಕ್ರೀಡಾಂಗಣವನ್ನಾಗಿ ಪರಿವರ್ತಿಸಿಕೊಂಡು ವಿವಿಧ ಬಗೆಯ ಆಟಗಳನ್ನು ಪ್ರದರ್ಶಿಸುತ್ತಿರುವಳು. ಆಕ್ಟೋಪಸ್ನಂತೆ ಆವರಿಸುತ್ತಿರುವಳು. ಇರಲಿ ಆಕೆ ಅಲ್ಲಿ!

ಪ್ರಸ್ತುತ ರಾಜಕಾರಣದಲ್ಲಿ ರಮ್ಯಭಾವನೆಗಳನ್ನು ನಿಯಂತ್ರಿಸಿಕೊಳ್ಳುವುದು ಒಳ್ಳೆಯದು. ಚಾಣಾಕ್ಷ ಮಾಧ್ಯಮಗಳ ತಾಪತ್ರಯ ಅಷ್ಟಿಷ್ಟಲ್ಲ. ನೋಡಿಕೊಂಡರು ಪುನಃ ತಮ್ಮನ್ನು ತಾವು. ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮ ದೇಹಾಕೃತಿ ಹೇಳಿ ಮಾಡಿಸಿದಂತಿರುವುದು. ಉತ್ತರಾತ್ಯ ಮಂದಹಾಸವನ್ನು ಆವಹಿಸಿಕೊಂಡರು. ವಿಧೇಯತೆ ರಾಜಗಾಂಭೀರ್ಯ! ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು? ಆ ಎರಡು ಸಂವೇದನೆಗಳ ಪೈಪೋಟಿ ಅಸದಳವೆನ್ನಿಸಿತು. ಗೊಂದಲ ಅನುಭವಿಸಿದರು. ಮನಶ್ಶಾಸ್ತ್ರಜ್ಞ ಡಾ ಮತಂಗ್ ಸಲಹೆಯಂತೆ ತಮ್ಮ ಪತ್ನಿಯನ್ನು ನೆನಪಿಸಿಕೊಳ್ಳುತ್ತ ವಿಷಣ್ಣವದನರಾದರು. ನಮುಚಿಯ ನೆನಪಿನಿಂದ ನಿಧನಿಧಾನವಾಗಿ ಮಂದಹಾಸವನ್ನು ನಿವಾರಿಸಿಕೊಂಡರು. ವಿಷಾದ ಗಾಂಭೀರ್ಯ ಪತ್ನಿತ್ವಕ್ಕೆ ಸಂಬಂಧಿಸಿದವುಗಳಾದ್ದರಿಂದ. ಬಳಿಕ ತಮ್ಮನ್ನು ಕಾರ್ಯದರ್ಶಿ ಓಘವಂತ್ ಸಿವಂಗಿ..

ತರುಣಾತಪ್ ಭವನ!

ಚಕ್ರವರ್ತಿ ನಾದಿರ್ ಷಾ ತನ್ನ ಮಾನಸಿಕ ಕ್ಷೋಭೆಗೆ ಪರಿಹಾರ ಕಂಡುಕೊಳ್ಳಲೆಂದು ನಿರ್ಮಿಸಿಕೊಂಡಿದ್ದನು. ಅವನ ಮರಣಾನಂತರ ತನ್ನ ಹಕೀಮರು ಇದರಲ್ಲಿ ವಾಸಿಸುತ್ತಿದ್ದರು. ಬ್ರಿಟೀಷ್ ಸಾಮ್ರಾಜ್ಞಿ ಇದೇ ಭವನದಲ್ಲಿ ದಣಿವು ನಿವಾರಿಸಿಕೊಂಡಿದ್ದಳು. ಸ್ವಾತಂತ್ರ್ಯಪ್ರಾಪ್ತವಾದ ಬಳಿಕ ಅಗೋಚರ ಸರಸ್ವತಿನದಿಯಲ್ಲಿ ತಮ್ಮತಮ್ಮ ಪತ್ನಿಯರ ಅಸ್ಥಿ ವಿಸರ್ಜಿಸಿದ ದಣಿವನ್ನು ನಿವಾರಿಸಿಕೊಳ್ಳಲು ದೇಶಭಕ್ತರು ಇದೇ ಭವನವನ್ನು ಆಶ್ರಯಿಸುತ್ತಿದ್ದರು. ಆ ನಂತರ ಮಾಲಕತ್ವಕ್ಕೆ ಸಂಬಂಧಿಸಿದ ಖಟ್ಲೆಯು ಸರ್ವೋಚ್ಛ ನ್ಯಾಯಾಲಯದಲ್ಲಿರುವುದು. ಆ ಖಟ್ಲೆಯ ಪರವಿರೋಧಿಗಳು ಯಾರೆನ್ನುವುದು ನಿರ್ಧರಿತವಾಗಿಲ್ಲ. ಪ್ರಾಯಶಃ ಅವರೆಲ್ಲ ಅಕಾಲಿಕ ಮರಣಕ್ಕೆ ತುತ್ತಾಗಿರಲೂಬಹುದು, ಯಾರನ್ನು ಯಾರೋ ಎಂದು ಅನ್ಯಥಾ ಭಾವಿಸಿ ಖಟ್ಲೆ ಮುಂದುವರೆದಿರಲೂಬಹುದು. ಅದು ಏನೇ ಇರಲಿ. ಕಾರ್ಪೊರೇಟ್ ಸಂಸ್ಥೆಗಳ ನೆರವಿನಿಂದ ಶ್ರೀ ದರ್ಭಶಯನ್ ಗುಲಾಲ್ ಈ ಭವನದ ಖಾತೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿರುವರು. ಬಹುಮಹಡಿಗಳ ವಿವಿಧಸ್ತರಗಳಲ್ಲಿ ನಿಂತು ವೀಕ್ಷಿಸಿದವರಿಗೆ ಅಗೋ ಅಲ್ಲಿ ಚಕ್ರವ್ಯೂಹ. ಅಗೋ ಅಲ್ಲಿ ಭಗವದ್ಗೀತೆ ಬೋಧಿಸಿದ ಕೃಷ್ಣಪರಮಾತ್ಮನ ಹೆಜ್ಜೆ ಗುರುತುಗಳು. ಇಗೋ ಇಲ್ಲಿ ಅಕ್ಷೊಹಿಣಿ ಸೈನ್ಯದ ಲಕ್ಷಾಂತರ ಕಳೇಬರಗಳು! ಕೈಚಾಚಿ ತೋರಿಸುವವರಿಗಾಗಲೀ, ನಿರರ್ಗಳವಾಗಿ ಹೇಳುವವರಿಗಾಗಲೀ ಕೊರತೆಯಿಲ್ಲದ ಕುರುಕ್ಷೇತ್ರವಿದು. ಮರಳುವ ಪೂರ್ವದಲ್ಲಿ ಒಂದೆರಡು ಕೇಜಿಯಷ್ಟು ಇಲ್ಲಿನ ಮೃತ್ತಿಕೆಯನ್ನು ಒಯ್ದು ಕಪಿತ್ಥನಗರದಲ್ಲಿ ಪ್ರತಿಷ್ಠಾಪಿಸಿ ದೇಶದ ಪ್ರಾಚೀನತೆಯ ಮಹಾಪೋಷಕರನ್ನು ಪರವಶಗೊಳಿಸಿದರೆ ಹೇಗೆ? ಯೋಚಿಸುತ್ತ ಶ್ರೀಯುತ ಉಕ್ಕಡ್!

ಎಡಬಲದ ಭಿತ್ತಿಗಳಿಗಂಟಿದ್ದ ಪೌರಾಣಿಕ ಮಾರಕಾಯುಧಗಳನ್ನು ಕಣ್ದಣಿಯೆ ನೋಡುತ್ತ ಪ್ರಶ್ನೆ ಸಂದೇಹಗಳನ್ನು ಆವಹಿಸಿಕೊಳ್ಳುತ್ತ ಶ್ರೀಯುತರು ವೇದಿಕೆ ಕಡೆ ಹೆಜ್ಜೆ ಇರಿಸುತ್ತ ಸಾಗಿದರು. ಹೆಜ್ಜೆಹೆಜ್ಜೆಗೆ ತಾವು ವಿವಿಧ ಪೌರಾಣಿಕ ಪಾತ್ರಗಳನ್ನು ಅನುಭವಿಸುತ್ತ ಸಾಗಿದರು. ಆ ಕಡೆಯಿಂದ ಬಂದವರಿಗೆ ತಮ್ಮ ಎಡಗೈಯನ್ನೂ, ಈ ಕಡೆಯಿಂದ ಬಂದವರಿಗೆ ತಮ್ಮ ಬಲಗೈಯನ್ನೂ ಹಸ್ತಾಂತರಿಸಿದರು. ಕರಜೋಡಿಸಿ ಅಭಿನಂದನೆಗಳನ್ನು ಸೌಜನ್ಯಪೂರ್ವಕವಾಗಿ ಸ್ವೀಕರಿಸಿದರು. ಹೂಗುಚ್ಚಗಳನ್ನು ತಮ್ಮೆರಡೂ ಕೈಗಳಿಂದ ಸ್ವೀಕರಿಸುತ್ತ, ಆಪ್ತಸಹಾಯಕರಿಗೆ ಅವುಗಳನ್ನು ವರ್ಗಾಯಿಸುತ್ತ ವೇದಿಕೆಯನ್ನು ಸಮೀಪಿಸಿದರು. ಕಡಿದಾದ ಮೆಟ್ಟಿಲುಗಳನ್ನು ಒಂದೊಂದಾಗಿ ಕ್ರಮಿಸಿದರು. ಕೊನೆ ಮೆಟ್ಟಿಲು ಏರುವ ಸಂದರ್ಭದಲ್ಲಿ ಮುಗ್ಗರಿಸಲಿದ್ದವರು ಚೇತರಿಸಿಕೊಂಡರು ಸ್ವಸಾಮರ್ಥ್ಯದಿಂದ ಜಾಣ್ಮೆಯಿಂದ. ಶ್ರೀರಾಮಚಂದ್ರ ಶಿವಧನಸ್ಸು ಮುರಿದದ್ದು, ಅರ್ಜುನ ಮತ್ಯಯಂತ್ರವನ್ನು ಭೇದಿಸಿದ್ದು ಇದೇ ಜಾಗದಲ್ಲಿ ಎಂದು ಯಾರೋ ಹೇಳಿದ್ದು ಅಸ್ಪಷ್ಟವಾಗಿ ಕೇಳಿಸಿಕೊಳ್ಳುತ್ತ ಶ್ರೀಯುತರು ವೇದಿಕೆ ಪ್ರವೇಶಿಸಿದೊಡನೆ ಅಪಾರ ಕರತಾಡನ ವ್ಯಕ್ತವಾಯಿತು. ಅದಕ್ಕೆ ಪ್ರತಿಯಾಗಿ ಉಕ್ಕಡ್ ಕರಜೋಡಿಸಿದರು. ಸೊಂಟದ ಭಾಗ ಮಾತ್ರ ಹೊರಳಿಸುತ್ತ ಅಭಿನಂದಿಸಿದ ಉತ್ತರಾತ್ಯ ಸೈಂಧವ ಸದೃಶ ಅಜಾನುಬಾಹುಗಳನ್ನು ಕಣ್ಣಾರೆ ನೋಡಿದರು, ಪುಳಕಿತರಾದರು, ವಿನೀತರಾದರು. ಅವರ ಕಣ್ಣುಗಳು ಅಭಿವ್ಯಕ್ತಿಸಿದ ಆನಂದಭಾಷ್ಪವನ್ನು ಮಾಧ್ಯಮಗಳು ಸೆರೆಹಿಡಿದವು. ಮಯೂರ ಸಿಂಹಾಸನವನ್ನು ಹೋಲುತ್ತಿದ್ದ ಆಸನದ ಮೇಲೆ ಇನ್ನೇನು ಆಸೀನರಾದರು ಎನ್ನವಷ್ಟರಲ್ಲಿ ಸಿವಂಗಿ ಧಾವಿಸಿ ಬಂದರಲ್ಲದೆ ಸಾರ್ ಈ ಸಮಾರಂಭವನ್ನು ಮಾಧ್ಯಮಗಳು ನೇರಪ್ರಸಾರ ಮಾಡುತ್ತಿವೆ, ಇಲ್ಲಿನ ಕ್ರಿಯಾಕಲಾಪವನ್ನು ನಮ್ಮ ರಾಜ್ಯದ ಏಳೂವರೆ ಕೋಟಿ ಪ್ರಜೆಗಳು ನೋಡುವರು ಎನ್ನುವುದನ್ನು ದಯವಿಟ್ಟು ಮರೆಯದಿರಿ ಎಂದು ಕಿವಿಮಾತು ಹೇಳಿದರು. ಅದಕ್ಕೆ ಮಹಿಷ್ಮತಿರಾಜ್ಯದ ಪ್ರಥಮಪ್ರಜೆ ‘ಹಾಗೋ ಸಮಾಚಾರ’ ಎಂದು ಮೆಲ್ಲಗೆ ಉದ್ಗರಿಸುವುದನ್ನು ಮರೆಯಲಿಲ್ಲ.

ಸ್ವಾಗತೋಪನ್ಯಾಸವನ್ನು ನೀಡಿದವರು ಯಾರೆಂದರೆ ಅವರೆ! ಆ ಬಳಿಕ ಪಕ್ಷದ ಸವೋಚ್ಛ ಮುಖಂಡರಾದ ಶ್ರೀ ದರ್ಭಶಯನ್ ಅಭಿನಂದನಾ ಭಾಷಣ ಮಾಡುವ ಪೂರ್ವದಲ್ಲಿ ಶ್ರೀಯುತರನ್ನು ಅಪ್ಪಿಕೊಂಡರು. ಅಲ್ಲದೆ ಅವರ ರೋಮಭರಿತ ಬಲಗೆನ್ನೆ ಮೇಲೆ ಚುಂಬನವನ್ನು ಬಿತ್ತಿದರು. ಬಳಿಕ ತಮ್ಮೆರಡೂ ಕೈಗಳಿಂದ ಅವರ ಭುಜಗಳನ್ನು ಹಿಡಿದು ಅಭಿಮಾನಪೂರ್ವಕವಾಗಿ ನೋಡಿದರು. ಸಭೆಯನ್ನು ಉದ್ದೇಶಿಸಿ ಸುಮಾರು ನಲವತ್ತೇಳು ನಿಮಿಷಗಳ ಕಾಲ ಮಾತಾಡಿದರು. ಉಕ್ಕಡ್ ಅವರ ಪ್ರಾಣಿಪ್ರೇಮವನ್ನು ಶ್ಲಾಘಿಸಿದರು. ಪ್ರಾಣಿ ಕ್ರಿಮಿಕೀಟಗಳಲ್ಲಿ ದಲಿತ ಶೂದ್ರರನ್ನೂ, ದಲಿತ ಶೂದ್ರರಲ್ಲಿ ಪ್ರಾಣಿಕ್ರಿಮಿಕೀಟಗಳನ್ನೂ ಗುರುತಿಸಿ ಆರಾಧಿಸುವುದರಲ್ಲಿ ಮುಖ್ಯಮಂತ್ರಿಗಳು ಯಶಸ್ವಿಯಾಗಿರುವರೆಂದು ಹೇಳುವುದನ್ನು ಹಿರಿಯರು ಮರೆಯಲಿಲ್ಲ.

ಇನ್ನೋರ್ವ ವರಿಷ್ಠ ಐಲವಲ್ ಮಾತಾಡುವ ಸಂದರ್ಭದಲ್ಲಿ ಗುಲಾಲ್ ಉಕ್ಕಡ್ ಕಿವಿ ಬಳಿ ತಮ್ಮ ಬಾಯಿ ಒಯ್ದು ಮಹಿಷ್ಮತಿರಾಜ್ಯದಲ್ಲಿ ತಿಗಣಿಗಳಿರುವವೆ ಎಂದು ಕೇಳಿದರು. ಇನ್ನೋರ್ವ ವರಿಷ್ಠ ಅಂಶುಮಾಲ್ ಮುತ್ಕುಣ್ ಮಾತಾಡುವ ಸಂದರ್ಭದಲ್ಲಿ ಹಿರಿಯರು ನಮ್ಮ ಪಕ್ಷವನ್ನು ಚುನಾಯಿಸಿರುವ ಪ್ರಬುದ್ಧ ಮತದಾರರು ಸದಾ ಜಾಗೃತರಿರಲು ತಿಗಣಿಗಳ ಉತ್ಪಾದನಾ ವಿತರಣಾ ವ್ಯವಸ್ಥೆ ಕಡೆ ಗಮನ ಹರಿಸುವಂತೆ ಸಲಹೆ ನೀಡಿದರು. ಮುಖ್ಯವಾಗಿ ನಮ್ಮ ಪಕ್ಷದ ಅಸಂಖ್ಯಾತ ಕಾರ್ಯಕರ್ತರು ಧರಿಸುವ ಉಡುಪುಗಳನ್ನು ತಿಗಣಿಗಳ ಸಾಕಾಣಿಕೆಗೆ ಬಳಸುವುದು ಸೂಕ್ತ ಎಂದೂ ಹೇಳಿದರು. ಇನ್ನೋರ್ವ ವರಿಷ್ಠ ಮಾತಾಡುವ ಸಂದರ್ಭದಲ್ಲಿ ಮಹಿಷ್ಮತಿರಾಜ್ಯದಲ್ಲಿನ ಗಣಿಗಾರಿಕೆ ಟೆಂಡರ್ ಕರೆಯುವ ಮುನ್ನ ನಮ್ಮೊಂದಿಗೆ ಸಮಾಲೋಚಿಸುವುದನ್ನು ಮರೆದಿರಿ ಎಂದು ಹೇಳುತ್ತ ಅವರ ಕೈಗಳನ್ನು ಅಪ್ಯಾಯತೆಯಿಂದ ಅದುಮಿದರು. ಅಲ್ಲದೆ ತಮ್ಮ ಬಲಗೈಯ ತೋರುಬೆರಳಲ್ಲಿದ್ದ ಪಚ್ಚೆಹರಳಿದ್ದ ಪ್ಲಾಟಿನಂ ಉಂಗುರವನ್ನು ತೆಗೆದು ಶ್ರೀಯುತ ಉಕ್ಕಡ್ ಅವರ ಎಡಗೈಯ ಮಧ್ಯದ ಬೆರಳಿಗೆ ತೊಡಿಸಿದರು. ನಂತರ ಅವರು ಇವರಿಗೆ ಇದು ರಾಜಾ ರಾಣಾಪ್ರತಾಪಸಿಂಗ್ರ ಸ್ವತ್ತು, ಅಂದ ಮೇಲೆ ಇದರ ಮಾರುಕಟ್ಟೆ ಮೌಲ್ಯ ಎಷ್ಟಿರಬಹುದು! ನೀವೇ ಊಹಿಸಿ ಎಂದು ಹೇಳಿದರು. ಇಂಥ ಸಲಹೆಗಳಿಂದ ಉಕ್ಕಡ್ ಅವರ ಆತಂಕವನ್ನು ನಿವಾರಿಸಿದರು. ಅಂತಿಮವಾಗಿ ಉಕ್ಕಡ್ಜೀ ಅಭಿನಂದನೆಗೆ ಪ್ರತಿಸ್ಪಂದಿಸುತ್ತ..

ಮಹಿಷ್ಮತಿರಾಜ್ಯದ ಮತದಾರರನ್ನು ಆಡಳಿತಾತ್ಮಕ ಭಾಷೆಯಲ್ಲಿ ಸ್ಮರಿಸಿದರು. ತಮ್ಮ ಪಕ್ಷಕ್ಕೆ ಬೇಷರತ್ ಬೆಂಬಲ ನೀಡಿರುವ ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳನ್ನು ಉದಾರವಾಗಿ ಸ್ಮರಿಸಿದರು. ಅಲಾಯುಧರ ಅನಾರೋಗ್ಯ ಕುರಿತು ನೋವು ವ್ಯಕ್ತಪಡಿಸಿದರು. ತಾವು ಕಪಿತ್ಥನಗರಕ್ಕೆ ಮರಳಿದೊಡನೆ ಸಚಿವ ಸಂಪುಟವನ್ನು ವಿಸ್ತರಿಸುವುದಾಗಿ ಹೇಳಿದರು. ಮತ್ತಿತರ ಜನಪರ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಘೋಷಿಸುವುದನ್ನು ಶ್ರೀಯುತರು ಮರೆಯಲಿಲ್ಲ. ಇಥಿಯೋಪಿಯಾದಲ್ಲಿನ ಬಡತನವನ್ನು, ಅಮೇರಿಕಾದಲ್ಲಿನ ಸಿರಿತನವನ್ನು, ಚೀನಾ ಜಪಾನು ದೇಶಗಳಲ್ಲಿ ತಾಂತ್ರಿಕ ಸಾಧನೆಯನ್ನು ಅಧ್ಯಯನ ಮಾಡುವ ಸಲುವಾಗಿ ನೂರಕ್ಕೂ ಹೆಚ್ಚು ಶಾಸಕರನ್ನು ಆಯಾ ದೇಶಗಳಿಗೆ ಕಳಿಸುವುದಾಗಿ ಪ್ರಕಟಿಸಿದರು.

ಮುಖ್ಯಮಂತ್ರಿಗಳ ಉಪನ್ಯಾಸವನ್ನು ಅನಾಹತಪಕ್ಷದ ವರಿಷ್ಠರು ತುಂಬಾ ಮೆಚ್ಚಿಕೊಂಡರು. ಒಬ್ಬೊಬ್ಬರಾಗಿ ಕೈಕುಲುಕಿ ಅಭಿನಂದಿಸಿದರು. ಸಮಶೀತೋಷ್ಣ ವಲಯದ ಕೇಂದ್ರಸ್ಥಾನದಲ್ಲಿರುವ ಕಪಿತ್ಥನಗರದಲ್ಲಿರಬಹುದಾದ ಕೆಲವು ಕೆರೆಗಳನ್ನು ಡಿನೋಟಿಫೈ ಮಾಡಿ ನಿವೇಶನಗಳನ್ನಾಗಿ ಪರಿವರ್ತಿಸಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಮೀಸಲಿರಿಸುವಂತೆ ಕಾನೂನು ರೀತ್ಯ ವಿತರಿಸುವಂತೆ ಸೂಚಿಸಿದರು. ಸೂಚನೆಯನ್ನು ಗಂಭೀರವಾಗಿ ಪರಿಶೀಲಿಸುವುದಾಗಿ ಉಕ್ಕಡ್ ವಾಗ್ದಾನ ಮಾಡಿದರು.

ಡುಡುಂಭ!

ಇದು ದೇಶದ ಕೆಲವೇ ಕೆಲವು ಸೆವೆನ್ ಸ್ಟಾರ್ ಹೋಟಲ್ಗಳಲ್ಲಿ ಒಂದು. ಇದರ ಮಾಲಕ ಕಡದುಕ್ಷ್ ಸಯ್ಗೆ. ಸದ್ಯಕ್ಕೆ ಕ್ಯೂಬಾದ ಹವಾನದಲ್ಲಿ ನೆಲೆಸಿರುವನು. ಈ ಸ್ವಯಂಘೋಷಿತ ಮಾಕ್ಸರ್್ವಾದಿಯು ತನ್ನ ಬಿಡುವಿನ ವೇಳೆಯನ್ನು ಚೆ ಗುವೆರಾ ಫ್ಯೂಡಲ್ ಕ್ಯಾಸ್ಟ್ರೋ ಕುರಿತು ಅಧ್ಯಯನ ನಡೆಸಲು ಮೀಸಲಿರಿಸಿರುವನು. ಈ ಅಪರ ಕುಬೇರ ಕುರುಕ್ಷೇತ್ರದಲ್ಲಿನ ವಿದ್ಯಮಾನಗಳನ್ನು ನೇರವಿವರಣೆ ಮೂಲಕ ಪಡೆಯುತ್ತಿದ್ದನು. ಕಪಿತ್ಥನಗರದಲ್ಲಿ ಡುಡುಂಭದ ಮುಂದುವರಿದ ಭಾಗವನ್ನು ಅವಿಷ್ಕರಿಸುವ ಯೋಜನೆಯನ್ನು ಈ ಮೊದಲೆ ಸಿದ್ದಪಡಿಸಿಕೊಂಡಿದ್ದನು. ಹಿಂದಿನ ಮುಖ್ಯಮಂತ್ರಿ ಜಗದುದರ ನಿಷ್ಪತ್ತಿಯವರನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದ. ಆದರೆ ರಾಜ್ಯಪಾಲ ಸನ್ಮಾನ್ಯ ಗುಣಾಧಮ ಕಾಲ್ಗೋದ್ರ ದುರಾಸೆ ತನ್ನ ಯೋಜನೆಯನ್ನು ಸ್ಥಗಿತಗೊಳಿಸಿತು. ಶೇಕಡಾ ನಲವತ್ತೈದರಷ್ಟು ಷೇರ್ಸ್ ತಮ್ಮ ಮಗಳ ಹೆಸರಿಗೆ ಮಾಡಿಸಿಕೊಟ್ಟರೆ ಮಾತ್ರ! ಈ ಷರತ್ತು ತಮ್ಮ ಇಂಟರ್ನಾಷನಲ್ ಇಟೈವಾಪುಟಿವಾ ಕಾರ್ಪೊರೇಷನ್ನ ಇತರೆ ಪಾಲುದಾರರಿಗೆ ಹಿಡಿಸಲಿಲ್ಲ. ಕಳೆದ ಮಧ್ಯಂತರ ಚುನಾವಣೆಯಲ್ಲಿ ಅನಾಹತಪಕ್ಷದ ಅತಿ ಹೆಚ್ಚು ಶಾಸಕರ ಗೆಲುವಿನ ನೇಪಥ್ಯದಲ್ಲಿ ಸಯ್ಗೆಯ ಪಾತ್ರ ನಿಚ್ಚಳವಾಗಿರುವುದು. ಆತನ ಸಲಹೆಯಂತೆ ಪಕ್ಷದ ಸವರ್ೋಚ್ಛ ವರಿಷ್ಠರಾದ ಶ್ರೀ ದರ್ಭಶಯನ್ ಗುಲಾಲ್ ಡುಡುಂಭದಲ್ಲಿ ಸತ್ಕಾರಕೂಟವನ್ನು ಏರ್ಪಡಿಸಿದರು. ಅದಕ್ಕೆ ಕೆಲವೇ ಕೆಲವು ಅತಿಗಣ್ಯವ್ಯಕ್ತಿಗಳನ್ನು ಮಾತ್ರ ಆಮಂತ್ರಿಸಿದರು. ರಾಷ್ಟ್ರಪತಿಗಳನ್ನು ಆಮಂತ್ರಿಸಿದರು, ಆದರೆ ಸನ್ಮಾನ್ಯ ಅಕುತೋಭಯ್ ಕೊನರ್ ಬದಲಿಗೆ ಅವರ ಆಪ್ತಕಾರ್ಯದಶರ್ಿ ಮಲಯಧ್ವಜ್ ಭಾಗವಹಿಸಿದರು. ಋಣಾನುಬಂಧ್ ಪಕ್ಷದ ವರಿಷ್ಠ ಶ್ರೀ ಅರಣ್ಯಕ್ ಬರಾಟಿ ಅವರನ್ನೂ ಆಹ್ವಾನಿಸಿದರು. ಆದರೆ ಶ್ರೀಯುತರು ಅದೇ ಅವಧಿಯಲ್ಲಿ ಥಯ್ರಾಯ್ಡ್ ಗ್ರಂಥಿ ಊತದ ಬೇನೆಯಿಂದ ನರಳುತ್ತಿದ್ದರು. ಆಸ್ಪತ್ರೆಯಲ್ಲಿಂದ ಶುಭಸಂದೇಶ ಕಳಿಸಿದರು.

ಡುಡುಂಭ ಹೋಟಲ್ನ ಹೆಸರನ್ನು ಶ್ರೀಯುತ ಉಕ್ಕಡ್ ಕೇಳಿದ್ದರು. ದೂರದಿಂದ ನೋಡಿದ್ದರು. ಅಂಥ ಹೋಟಲ್ ನಿಮರ್ಾಣದ ಕನಸನ್ನೂ ಕಂಡಿದ್ದರು. ಆದರೆ ಅತಿಥಿ ವೇಷದಲ್ಲಿ ಗ್ರಾಹಕನ ರೂಪದಲ್ಲಿ ಅದರೊಳಗೆ ಪ್ರವೇಶಿಸಿರಲಿಲ್ಲ. ಹೋಟಲ್ ನೂರಾರು ಎಕರೆ ವಿಸ್ತೀರ್ಣ ಆವರಿಸಿತ್ತು. ಡಾಲರುಗಳನ್ನು ಒಂದರ ಮೇಲಿನ್ನೊಂದನ್ನಿರಿಸಿ ನಿರ್ಮಿಸಿದಂತಿತ್ತು. ಇಥಿಯೋಪಿಯಾದ ಎಲುಬುಗಳ ಪುಡಿಯನ್ನು ಬೆಳ್ಳಗೆ ಲೇಪಿಸಿದಂತಿತ್ತು. ಅದೂ ಮೂರುಕಡೆ ಸರಸ್ವತಿ ನದಿ ನೀರಿರದಿದ್ದರೂ ಜುಳುಜುಳು ಹರಿಯುತ್ತಿತ್ತು. ಸಹಜಬೆಳವಣಿಗೆಯಿಂದ ಕುಂಟಿತಗೊಂಡಿದ್ದ ತರಾವರಿ ವಿಶಿಷ್ಟ ತರುಲತೆಗಳು ಹೋಟಲ್ ಪರಿಸರದ ಅಂದ ಹೆಚ್ಚಿಸಿದ್ದವು. ಪೋರ್ಟಿಕೋದಲ್ಲಿ ನೂರಕ್ಕೂ ಹೆಚ್ಚು ವಿದೇಶಿ ಕಾರುಗಳಿದ್ದವು. ಅದಕ್ಕೆ ಏಳು ಮಹಡಿಗಳಿದ್ದವು. ಆಮದಾಗಿದ್ದ ಡೆನ್ಮಾರ್ಕ್ ಹುಲ್ಲು ಅಲ್ಲಿ ಹಸಿರುಕ್ರಾಂತಿ ಮಾಡಿತ್ತು. ರಾಷ್ಟ್ರೀಯ ಅಂತರ್ರಾಷ್ಟ್ರೀಯ ಒಲಂಪಿಕ್ ಕ್ರೀಡಾಕೂಟಗಳಲ್ಲಿ ಬಾಕ್ಸಿಂಗ್ ದೇಹದಾಡ್ರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದವರು, ಕುಸ್ತಿಪಟುಗಳು, ವ್ಹೇಟ್ ಲಿಫ್ಟರುಗಳು, ಹಾಲಿವುಡ್ನ ಪೋಷಕ ಕಲಾವಿದರು ಹೋಟಲ್ನ ನೌಕರರಾಗಿದ್ದರು. ಇನ್ನು ವಿಶ್ವಸುಂದರಿಯರಿಗೆ ಸರಿಸಮಾನರಾದ ಯುವತಿಯರು ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅವರೆಲ್ಲ ತಮ್ಮತಮ್ಮ ಸ್ತನ ಜಘನಗಳು ಎದ್ದು ಕಾಣುವಂತೆ ಪಾರದರ್ಶಕ ಉಡುಪು ಧರಿಸಿದ್ದರು. ಅವರೆಲ್ಲ ವಿವಿಧ ದೇಶಗಳ ರಾಜಮಹಾರಾಜರ ಸಂತತಿಯನ್ನು ನೆನಪಿಸುವಂತಿದ್ದರು. ಅಲ್ಲಿ ಸುಳಿದಾಡುತ್ತಿದ್ದ ವಿದೇಶಿ ಗ್ರಾಹಕರು ಭೂಮಿಗೂ ತಮಗೂ ಸಂಬಂಧವಿಲ್ಲವೆನ್ನುವಂತೆ ಗೋಚರಿಸುತ್ತಿದ್ದರು. ಪರಿಮಳಯುಕ್ತ ಮಂದಾನಿಲ, ಅದಕ್ಕೆ ಕಳಸವಿರಿಸಿದಂತೆ ಮಿಡಿಯುತ್ತಿರುವ ತಂತಿವಾದ್ಯ. ಕಣರ್ಾನಂದಕರ ಉದ್ಗಾರಗಳು, ಮಂದಸ್ಮಿತ ಮುಖಾರವಿಂದಗಳು! ಇನ್ನೂ ಏನೇನೋ!

ಶ್ರೀಯುತ ಕ್ಷೇತ್ರಪಾಲ್ ಉಕ್ಕಡ್ ತಮ್ಮ ಮುಖದಲ್ಲಿ ಬೆರಗು ವಿಸ್ಮಯ ಅಭಿವ್ಯಕ್ತಗೊಳ್ಳದಂತೆ ಎಚ್ಚರ ವಹಿಸಿದರು. ತಮ್ಮಲ್ಲಿ ಗಾಂಭೀರ್ಯ ಹೆಚ್ಚಿಸಿದ್ದು ತಮ್ಮ ಶ್ರೀಮತಿ ಭದ್ರವತಿ! ತಮ್ಮ ನಡೆನುಡಿಗಳನ್ನು ನಾಜೂಕುಗೊಳಿಸಿದ್ದು ಕು ನಮುಚಿ! ತಮ್ಮಲ್ಲಿ ಆಂತಕ ಹೆಚ್ಚಿಸಿದ್ದು ತರುಣಾತಪ್ ಭವನದ ನಿಗೂಢ ಸಂಚು! ಮಾತನಾಡಿಸಿದವರೊಡನೆ ಮಾತನಾಡುತ್ತ, ಮಾತನಾಡದವರ ಕಡೆ ಕೈ ಬೀಸುತ್ತ, ವಾತಾನುಕೂಲಿತ ವ್ಯವಸ್ಥೆ ಇದ್ದರೂ ಬೆವರುತ್ತ, ಮಂದಸ್ಮಿತರಾಗುತ್ತ ಅತಿಥೇಯರ ಹಿಂದೆ ಹಿಂದೆ ಹೆಜ್ಜೆ ಹಾಕಲಾರಂಭಿಸಿದರು. ಮಹಿಷ್ಮತಿರಾಜ್ಯದ ಮಾಧ್ಯಮ ಪ್ರತಿನಿಧಿಗಳು ಪರ್ತಕರ್ತರು ಅಲ್ಲೂ ಇದ್ದರು. ತಮ್ಮ ರಾಜ್ಯದ ಮುಖ್ಯಮಂತ್ರಿಗಳು ಎನ್ನುವ ಕಾರಣಕ್ಕೆ ಅತಿಉತ್ಸಾಹದಿಂದ ಅವರನ್ನು ಸುತ್ತುವರಿದಿದ್ದರು. ಅವರಲ್ಲಿ ಒಬ್ಬ ಮಿ ಛೀಫ್ ಮಿನಿಸ್ಟರ್ ಈ ಹೋಟಲ್ ನೋಡಿ ನಿಮಗೇನನ್ನಿಸಿತು ಎಂದು ಕೇಳಿದ. ಅದಕ್ಕೆ ಇವರು ನೋಡಿ ಇವ್ರೆ ಒಟ್ನಲ್ಲಿದು ನಮ್ಮ ರಾಜ್ಯದ ಹಳ್ಳಿಗಳ ಗುಡ್ಲುಗಳಿಗಿಂತ ಚೆನ್ನಾಗಿದೆ, ನಮ್ಮ ರಾಜ್ಯಗಳಲ್ಲಿನ ಪಶುಪಾಲಕ ಸಂಘಗಳ ಪದಾಧಿಕಾರಿಗಳನ್ನ, ರೈತಸಂಘದ ಮುಖಂಡರನ್ನ, ಅದಲ್ದೆ ಹಳ್ಳೀಲಿರೋ ಶತಾಯುಷಿಗಳನ್ನ ಸರ್ಕಾರೀ ಖರ್ಚಿನಲ್ಲಿ ಇಲ್ಲಿಗೆ ಕಳಿಸಬೇಕೆಂಬುದು ನನ್ನ ಇಚ್ಚೆ, ಮುಂದೇನಾಗುತ್ತೋ ನೋಡೋಣ ಎಂದು ಪ್ರತಿಕ್ರಿಯಿಸಿದರು. ಮಾಧ್ಯಮದವರು ಇನ್ನೇನು ಕೇಳಲಿದ್ದರೋ, ಇವರು ಇನ್ನೇನು ಹೇಳಲಿದ್ದರೋ! ಬಂದೂಕಧಾರಿಗಳು ಸುಮ್ಮನಿದ್ದರೆ ತಾನೆ!

ಔತಣಕೂಟ ಹೀಗಿದ್ದೀತೆಂದು ಉಕ್ಕಡ್ ಊಹಿಸಿರಲಿಲ್ಲ. ಅಲ್ಲಿ ಯಾರೋ ನತರ್ಿಸುತ್ತಿದ್ದಳು, ಇನ್ನೆಲ್ಲಿ ಯಾರೋ ವಾದ್ಯಗಳನ್ನು ನುಡಿಸುತ್ತಿದ್ದರು. ಅಲ್ಲಿಂದ ಇಲ್ಲಿವರೆಗೆ, ಇಲ್ಲಿಂದ ಅಲ್ಲಿವರೆಗೆ ಇದ್ದ ಪೀಠೋಪಕರಣಗಳೋ! ಅವುಗಳ ಮೇಲೆ ಜೋಡಿಸಿರಿಸಿದ್ದ ಮದ್ಯಶೀಶೆಗಳೋ! ಗ್ಲಾಸುಗಳೋ! ಶೀಶೆಗಳನ್ನು ಎತ್ತಿ ಗ್ಲಾಸುಗಳಿಗೆ ಸುರಿಯುತ್ತಿದ್ದ ತರುಣಿಯ ವೈಯಾರವೋ! ಮಾಧ್ಯಮದವರ ಕೆಮೆರಾಗಳ ಕಣ್ಣಿಗೆ ಬೀಳದಂತೆ ಮುಂಜಾಗ್ರತೆ ವಹಿಸಲಾಗಿತ್ತು. ಆ ಮಬ್ಬು ಮತ್ತೇರಿಸುವ ಬೆಳಕಿನಲ್ಲಿ ಪರಿಚಿತರೆಲ್ಲ ಅಪರಿಚಿತರಾಗಿದ್ದರು, ಅಪರಿಚಿತರೆಲ್ಲ ಚಿರಪರಿಚಿತರಾಗಿದ್ದರು. ಅನ್ಯಥಾ ಭಾವಿಸಿ ಯಾರು ಯಾರನ್ನೋ ಮಾತನಾಡಿಸುತ್ತಿದ್ದರು. ನಿಧನಿಧಾನವಾಗಿ ತಮ್ಮತಮ್ಮಲ್ಲಿಯೇ ನಿಯಂತ್ರಣ ಕಳೆದುಕೊಳ್ಳುತ್ತಿದ್ದರು, ತಮ್ಮ ಪತ್ನಿ ಪ್ರೇಯಸಿರೆಂದು ಅಪಾರ್ಥ ಮಾಡಿಕೊಂಡು ಯಾರು ಯಾರನ್ನು ಅಪ್ಪಿ ಚುಂಬಿಸುತ್ತಿದ್ದರು. ಹೊಗಳಿಕೆ ತೆಗಳಿಕೆಗಳಿಗೆ ಕೊರತೆ ಇರಲಿಲ್ಲ.

ಎಲ್ಲೋ ಕಡದುಕ್ಷ್ ಸಯ್ಗೆ ಜಿಂದಾಬಾದ್ ಎಂದು ಕೂಗಿದ್ದು ಕೇಳಿಸಿತು. ಇನ್ನೆಲ್ಲೋ ಪಿತಾಮಹ ದರ್ಭಶಯನ್ ಗುಲಾಲ್ಜೀ ನಿಮಗೆ ನಮ್ಮ ಆಯುಷ್ಯ ಧಾರೆ ಎರೆಯುವೆವು ಎಂದು ಯಾರೋ ಹೇಳಿದ್ದು ಕೇಳಿಸಿತು. ತುದಿಯಲ್ಲಿ ಯಾರೋ ಎದ್ದು ನಿಂತು ಪ್ರಜಾಪ್ರಭುತ್ವಕ್ಕೆ ಸಂಕಟಗಳನ್ನು ಸೃಷ್ಠಿಸುವುದು ಎಷ್ಟು ಮುಖ್ಯವೋ, ಅವುಗಳನ್ನು ನಿವಾರಿಸುವುದು ಸಹ ಅಷ್ಟೇ ಮುಖ್ಯ, ಅವೆರಡನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿರುವ ಕ್ಷೇತ್ರಪಾಲ್ ಉಕ್ಕಡ್ ಮಹೋದಯ್ ಜಿಂದಾಬಾದ್ ಎಂದು ಗಟ್ಟಿಧ್ವನಿಯಲ್ಲಿ ಹೇಳಿದರು. ಅದಕ್ಕೆ ಏನೋ ಹೇಳಲಿದ್ದ ಉಕ್ಕಡ್ ಉನ್ಮತ್ತರಾಗಿರುವುದನ್ನು ಗಮನಿಸಿದ ಸಿವಂಗಿ ಧಾವಿಸಿ ಅವರ ಕಿವಿಯಲ್ಲಿ ತಮ್ಮ ಬಾಯಿ ಇರಿಸಿದರು, ಸಾರ್ ಇವರಲ್ಲಿ ಬಹುತೇಕ ಗಣ್ಯರು ನಿಮ್ಮ ಹಿತಶತ್ರುಗಳಿರುವಂತಿದೆ, ದಯವಿಟ್ಟು ಅಲಾಯುಧರ ಅಸ್ವಸ್ತತೆಯನ್ನು ಪ್ರಸ್ತಾಪಿಸಬೇಡಿ, ಹೇಳುವುದಿದ್ದರೆ ಅನುಕಂಪ ಮಿಶ್ರಿತ ಮಾತುಗಳನ್ನು ಮಾತ್ರ ನುಡಿಯಿರಿ ಎಂದು ಪಿಸುಗುಟ್ಟಿದರು. ಅವರ ಮಾತುಗಳಿಂದ ಉಕ್ಕಡ್ ವಾಸ್ತವಕ್ಕೆ ಮರಳಿದರು.

ಅಷ್ಟರಲ್ಲಿ ಆ ತುದಿಯಲ್ಲಿ ಗೋಚರಿಸಿದ ವ್ಯಕ್ತಿ ದರ್ಭಶಯನ್ ಗುಲಾಲ್ ಆಗಿದ್ದರು. ಬೆನ್ನ ಹಿಂದೆ ಎರಡೂ ಕೈಗಳನ್ನು ಬಿಗಿದು ತುಸು ಮುಂದಕ್ಕೆ ಬಾಗಿ ಗಂಭೀರವಾಗಿ ಹೆಜ್ಜೆ ಇಡುತ್ತ ತಮ್ಮನ್ನು ಸಮೀಪಿಸಿದರು. ಅಭಿಮಾನದಿಂದ ನೋಡಿದರು. ಎರಡೂ ಪಕ್ಕ ಮದ್ಯ ಶೀಶೆ ಸಂಗಡ ನಿಂತಿದ್ದ ತರುಣಿಯರ ಕಡೆ ಸಜ್ಞೆ ಮಾಡಿದರು, ಆಕೆ ಗ್ಲಾಸಿಗೆ ಸುರಿವಾಗ ಪರಿಮಳ ಹರಡಿದಳು. ಅದು ಮದ್ಯಕ್ಕಿಂತ ಪ್ರಭಾವಶಾಲಿಯಾಗಿತ್ತು. ಹೆಗಲ ಮೇಲೆ ಕೈಯಿರಿಸಿದ ಶ್ರೀಯುತರು ಮಗೂ, ಸಯ್ಗೆ ಇಷ್ಟಪಟ್ಟಿರುವುದು ನಿನ್ನ ಅದೃಷ್ಟ, ಇಷ್ಟರಲ್ಲಿ ಅವರು ನಿನ್ನನ್ನು ಕಪಿತ್ಥನಗರದಲ್ಲಿ ಭೆಟ್ಟಿಯಾಗುವರು, ಇಲ್ಲವೆ ನಿನ್ನನ್ನು ಕ್ಯೂಬಾಕ್ಕೆ ಆಮಂತ್ರಿಸುವರು. ಅವರ ಇಷ್ಟಾರ್ಥ ಪೂರೈಸಿದರೆ ನಿನಗೂ ನಿನ್ನ ಸಕರ್ಾರಕ್ಕೂ, ನಮ್ಮ ಪಕ್ಷಕ್ಕೂ ಶುಭವಾಗುವುದು. ಈಗ ಮೈಮರೆಯುವ ಕಾಲ ಪಕ್ವವಾಗಿದೆ, ಸತ್ಯ ಅಸತ್ಯಗಳ ನಡುವಿನ ರೇಖೆ ಅಳಿಸಲಿದೆ, ಯಾವುದು ವಾಸ್ತವ, ಯಾವುದು ಅವಾಸ್ತವ ಎಂದು ಮನವರಿಕೆಯಾಗುವ ಕಾಲ ಸಮೀಪಿಸಿದೆ ಎಂದು ಹೇಳಿದರು. ಇಲ್ಲಿ ನಿನಗೇನು ಕೆಲಸ ಎಂಬಂತೆ ಸಿವಂಗಿ ಕಡೆ ನೋಡಿದರು. ಬಳಿಕ ಅವರೆ ಸಚಿವಸ್ಥಾನದ ಆಕಾಂಕ್ಷಿಗಳಿಗೆ ಸದ್ಯಕ್ಕೆ ಆಸ್ಪತ್ರೆಯಲ್ಲಿ ಪುನರ್ವಸತಿ ಕಲ್ಪಿಸು, ಅವರ ರಾಜಕೀಯ ಭವಿಷ್ಯವನ್ನು ಪಕ್ಷದ ವರಿಷ್ಠರು ಮುಂದೆ ನಿರ್ಧರಿಸುವರು. ಪ್ರಜಾಪ್ರಭುತ್ವ ಅಂಧರ ಸಮಕ್ಷಮವಿರುವ ಆನೆ ಇದ್ದಂತೆ ಹಾವು ಬದುಕಿರಬೇಕು ಕೋಲು ಮುರಿಯದಂತಿರಬೇಕು. ಇದು ಸಮರ್ಥ ಆಡಳಿತಗಾರನ ಲಕ್ಷಣ. ನಮ್ಮ ಪಕ್ಷಕ್ಕೆ ನಿಚ್ಚಳ ಬಹುಮತ ಲಭಿಸಿದ್ದಲ್ಲಿ ಈ ಸಲಹೆ ನೀಡುತ್ತಿರಲಿಲ್ಲ, ಹ್ಹಾಂ ಅಂದ ಹಾಗೆ ಮುಖ್ಯಮಂತ್ರಿಸ್ಥಾನ ಸುಭದ್ರವಾಗಿರಬೇಕಾದರೆ ಪ್ರತಿ ಅಧಿವೇಶನದಲ್ಲು ವಿರೋಧಪಕ್ಷಗಳು ಸಭಾತ್ಯಾಗ ಮಾಡುವುದು ಅತ್ಯವಶ್ಯ ಎಂದು ಅಮೂಲ್ಯ ಸಲಹೆ ದಯಪಾಲಿಸಿ ಮುಂದಕ್ಕೆ ತೆರಳಿದರು.

ಆರಾತ್ರಿ ಶ್ರೀ ಕ್ಷೇತ್ರಪಾಲ್ ಉಕ್ಕಡ್ ಅವರು ಪರಿಮಳಯುಕ್ತ ಲಲನೆಯರ ಸಂಗಡ ಇದ್ದರು ಎಂದರೆ ಇದ್ದರು, ಇರಲಿಲ್ಲವೆಂದರೆ ಇರಲಿಲ್ಲ, ಪಾಪ!

***

ವಿಮಾನ ಭೂಮಿಯಿಂದ ಹದಿನಾಲ್ಕು ಸಾವಿರ ಅಡಿ ಮೇಲೇರಿತು. ಕುತೂಹಲದಿಂದಾಗಿ ಕಿಟಿಕಿ ಮೂಲಕ ಇಣುಕಿದರು. ಮಹಾನಗರ ಗಾತ್ರದ ಕುರುಕ್ಷೇತ್ರ ಗ್ರಾಮಪಂಚಾಯತ್ ಗಾತ್ರಕ್ಕೆ ಹ್ರಸ್ವಗೊಂಡಿರುವಂತೆ ಗೋಚರಿಸಿತು. ಪ್ರಯಾಣವೆಂಬ ಮಾಯಾದರ್ಪಣದ ಮಹಿಮೆ ಎಂದು ಭಾವಿಸಿದರು. ಬಳಿಕ ಭಾವನೆಗಳನ್ನು ವೈಯಕ್ತಿಕ ಮಟ್ಟಕ್ಕಿಳಿಸಿದರು. ಶ್ರೀಕ್ಷೇತ್ರಪಾಲ್ ಉಕ್ಕಡ್ ಮುಖದ ಗಡ್ಡ ಒಂದೂ ಕಾಲಿಂಚು ಬೆಳೆದಿತ್ತು. ಬಲಗೆನ್ನೆ ಕೆಳಗೆ ಅಂದರೆ ಗದ್ದದ ಬಲಪಾಶ್ರ್ವದಲ್ಲಿ, ಅಂದರೆ ಕೆಳದುಟಿಗೆ ಅಂಟಿಕೊಂಡಂತೆ ಚಿಕ್ಕ ಗಾತ್ರದ ಗುಳ್ಳೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಕಾಣಿಸಿಕೊಂಡಿತ್ತು. ತಮ್ಮ ಮುಖದತ್ತ ತುಸು ಬಾಗಿ ಪರೀಕ್ಷಿಸುವ ಮುನ್ನ ಡಾ ಕಾಪಾಲಿಕ್ ಉಸಿರನ್ನು ನಿಯಂತ್ರಿಸಿಕೊಂಡರು. ಹೌದೋ ಅಲ್ಲವೋ ಎನ್ನುವಂತೆ ಸ್ಪಶರ್ಿಸಿ ಪರೀಕ್ಷಿಸಿದರು. ಕುರುಕ್ಷೇತ್ರ ಪರಿಸರದಲ್ಲಿ ದಿಡೀರನೆ ಹೆಚ್ಚಿದ ಉಷ್ಣತಾಮಾನದಿಂದಾಗಿ ಗುಳ್ಳೆ ಕಾಣಿಸಿಕೊಂಡಿರುವುದೆಂದು ಸಂದೇಹಿಸಿದರು. ಮಾತ್ರೆ ಅಗತ್ಯವಿಲ್ಲವೆಂದೂ ಅರಾವಳಿ ಪರ್ವತಶ್ರೇಣಿ ದಾಟಿದೊಡನೆ ಅದು ತನ್ನಷ್ಟಕ್ಕೆ ತಾನೆ ನಿರ್ಗಮಿಸುವುದಾಗಿ ಅಭಿಪ್ರಾಯಪಟ್ಟರು. ತಮ್ಮ ಮುಖದ ಪ್ರತಿಬಿಂಬ ನೋಡಿಕೊಳ್ಳುವ ಆಸೆಯಾಯಿತು. ಆದರೆ ವಿಮಾನದಲ್ಲಿ ದರ್ಪಣದ ಸವಲತ್ತು ಇರಲಿಲ್ಲ. ಎದುರಿದ್ದ ಆಸನದ ಹಿಂಬದಿ ಪಾರದರ್ಶಕವಾಗಿತ್ತು. ಪ್ರತಿಬಿಂಬ ಅಸ್ಪಷ್ಟವೆನಿಸಿತು. ಆದರೆ ಅದು ನಿರೀಕ್ಷಿಸಿದಷ್ಟು ದುರ್ಬಲವಾಗಿರಲಿಲ್ಲ. ನೋಡಿಕೊಳ್ಳುವ ಮುನ್ನ ತುಸು ಬಾಗಿದರು.

ತಮ್ಮ ಜೀವನದಲ್ಲಿ ಈ ಪ್ರಮಾಣದ ಗಡ್ಡ ಬೆಳೆದಿರುವುದು ಇದೇ ಮೊದಲು. ಅದು ಗೌರವಾನ್ವಿತ ಅಲಾಯುಧರು ಆಸ್ಪತ್ರೆಯಲ್ಲಿರುವುದರಿಂದ, ಅವರು ಶೀಘ್ರಗುಣಮುಖರಾಗುವವರೆಗೆ! ಇಂಥ ಸಾಂದರ್ಭಿಕ ಶಪಥದಿಂದ. ತಾವು ಎಂಥ ಚಾಣಾಕ್ಷರೆನ್ನುವುದಕ್ಕೆ ಇದೂ ಒಂದು ನಿದರ್ಶನ. ಅಕಸ್ಮಾತ್ ಗೌರವಾನ್ವಿತರು ಅಲ್ಲೇ ಶಾಶ್ವತವಾಗಿದ್ದರೆ ತಮ್ಮ ಮುಖವನ್ನು ನಮುಚಿಗೆ ಹೇಗೆ ತೋರಿಸುವುದು! ಸುಮಾರು ಎರಡೂವರೆ ವರ್ಷಗಳ ಅವಧಿಯಲ್ಲಿ ಆರೋಗ್ಯವಂತನ ಮುಖದ ಗಡ್ಡ ಎಷ್ಟುದ್ದ ಬೆಳೆದೀತು!

ಮೂತ್ರಾಲಯದ ದಿಕ್ಕಿನತ್ತ ಹೊರಟಿದ್ದ ಪ್ರೊ ತಾರಾಕ್ಷ ಮೊಖ್ತೇಸರ್ ಸನಿಹಕ್ಕೆ ಬಂದರು, ಸೌಜನ್ಯಯುತವಾಗಿ ನಮಸ್ಕರಿಸಿದರು. ಉಕ್ಕಡ್ ಮನಸ್ಸಿನಲ್ಲಿ ಅದೇ ತಾನೆ ಮೊಳೆತ್ತಿದ್ದ ಸಂದೇಹ ಪ್ರಸ್ತಾಪಿಸಿದರು. ಏನೆಂದು ಹೇಳುವುದು? ಮೊಖ್ತೇಸರ್ ಸಂದಿಗ್ದತೆ ಅನುಭವಿಸಿದರು. ಗಡ್ಡ ಒಂದು ಹಂತ ತಲುಪಿದ ಬಳಿಕ ಅಲ್ಲಿಗೆ ಸ್ಥಗಿತಗೊಳ್ಳುವುದೆಂದು ಹೇಳಿದರು. ತಾವು ಮಾಜಿಯಾಗಿದ್ದಲ್ಲಿ ಅವಲ್ಲಿ ನಿಸ್ಸಂಕೋಚ ಗುಣ ಇರುತ್ತಿತ್ತು. ಒಂದೂವರೆ ಅಡಿ ಉದ್ದ ಎಂದು ಹೇಳಲು ಹಿಂಜರಿಯುತ್ತಿರಲಿಲ್ಲ. ಗಡ್ಡ ನಮ್ಮ ಮುಖದ ಶೋಭೆ ಹೆಚ್ಚಿಸಿದೆಯೋ! ಇದು ಸಹ ಇನ್ನೊಂದು ಆತಂಕಕಾರಿ ಪ್ರಶ್ನೆ. ಅದಕ್ಕೆ ಇವರು ರಾಜಕಾರಣಿಗೆ ಮುತ್ಸದ್ದಿಯ ವರ್ಚಸ್ಸು ನೀಡುವುದು ಗಡ್ಡ ಸಾರ್ ಎಂದರು ಅಷ್ಟೇ ಅಚಾನಕ್ಕಾಗಿ. ಒಳ್ಳೆ ಕಿಲಾಡಿ ಮನುಷ್ಯನಿರುವಂತಿದೆ ಈ ಮೊಖ್ತೆಸರ್ ಮಹಾಶಯ ಎಂದುಕೊಂಡರು ಉಕ್ಕಡ್.

ಇನ್ನೇನು ಹೊರಡಲಿದ್ದ ಅವರನ್ನುದ್ದೇಶಿಸಿ ಓಘವಂತ್ ಸಿವಂಗಿ ನಮ್ಮ ಹಾಗೆ ಇದೇ ಎಕಾನಮಿ ಕ್ಲಾಸಿನಲ್ಲಿರುವಂತಿದೆ. ಪ್ರಾಯಶಃ ಶ್ರೀಯುತರು ಕೊನೆ ಸೀಟಿನಲ್ಲಿರಬಹುದು, ಮೇಲಿಂದ ಭೂಮಿ ನೋಡುವುದರಲ್ಲಿ ಮೈಮರೆತಿರಲೂಬಹುದು. ಅವರನ್ನಿಲ್ಲಿಗೆ ಕಳಿಸುವ ಶ್ರಮ ತೆಗೆದುಕೊಳ್ಳಿ ದಯವಿಟ್ಟು ಎಂದರು. ವ್ಯಂಗ್ಯ ಅತೃಪ್ತಮನಸ್ಸಿನ ಲಕ್ಷಣವೆಂದು ಅರ್ಥ ಮಾಡಿಕೊಂಡ ಡಾಕ್ಟರ್ ಆಯ್ತು ಸಾರ್ ಎಂದು ಹಿಮ್ಮುಖವಾಗಿ ಚಲಿಸಿದರು. ವೃತ್ತಿನಿರತ ರಾಜಕಾರಣಿಗಳಿರುವಲ್ಲಿ ಸೌಂದರ್ಯವಿರುವುದಿಲ್ಲವೆಂದುಕೊಳ್ಳುತ್ತ, ಹಿಂದಲೆ ತುರಿಸಿಕೊಳ್ಳುತ್ತ, ಚಿತ್ತಚಾಂಚಲ್ಯಕ್ಕೆ ಹೆಸರಾದ ಈ ಉಕ್ಕಡ್ ತಮ್ಮನ್ನು ಮಾತೃಇಲಾಖೆಗೆ ಕಳಿಸಿದಲ್ಲಿ ಏನು ಗತಿ ಎಂದು ಭವಿಷ್ಯ ಸಂದೇಹಿಸುತ್ತ ನಿಧನಿಧಾನವಾಗಿ ಚಲಿಸಿ ವಿಮಾನದ ಕಟ್ಟಕೊನೆಯ ಆಸನಕ್ಕೆ ಹತ್ತಿರವಾದರು.

ಮೂರೂವರೆ ಅಡಿ ದೂರದಿಂದ ನೋಡಿದ ಅವರಿಗೆ ನಿಜಕ್ಕೂ ಆಶ್ಚರ್ಯವಾಯಿತು. ಕಣ್ಣಳತೆ ಕೂಗಳತೆಯಿಂದ ಸಾಕಷ್ಟು ದೂರವಿದ್ದರೂ ಮುಖ್ಯಮಂತ್ರಿಗಳು ತಮ್ಮ ಸಹಚರಿಯ ವರ್ತನೆಯನ್ನು ಸರಿಯಾಗಿ ಊಹಿಸಿದ್ದರು. ಅವರು ಹೇಳಿದಂತೆ ಸಿವಂಗಿ ಕಿಟಿಕಿ ಪಕ್ಕದಲ್ಲಿ ತಮ್ಮ ಎಡಮೊಣಕೈಯನ್ನು ಸೀಟಿಗಾನಿಸಿದ್ದರು, ಮುಂಗೈಯನ್ನು ಗಲ್ಲದ ಮೇಲಿರಿಸಿಕೊಂಡಿದ್ದರು. ಶ್ರಮವಹಿಸಿ ಭೂಮಿಯ ಮೇಲ್ಮೈ ವೀಕ್ಷಿಸುತ್ತಿದ್ದರು. ಅದೂ ರೆಪ್ಪೆಯಾರಿಸದಂತೆ, ಅದೂ ಎಳೆತನದ ಕುತೂಹಲದಿಂದ. ಆ ಕ್ರಿಯೆಯಲ್ಲಿ ತಾವೆಷ್ಟು ಮೈಮರೆತಿದ್ದರೆಂದರೆ ಸಾರ್ ಎಂಬ ಪದವನ್ನು ತಾವು ಎರಡು ಸಲ ಉಚ್ಚರಿಸಬೇಕಾಯಿತು. ಹ್ಹಾಂ ಎಂದು ಉದ್ಗರಿಸಿ ತಮ್ಮದು ಸೂಕ್ಷ್ಮಪ್ರವೃತ್ತಿ ಎಂದು ಸಾಬೀತುಪಡಿಸಿದರು. ಕೈಕೆಳಗಿನ ನೌಕರರು ತಮ್ಮೊಂದಿಗೆ ತುಂಬಾ ಎಚ್ಚರಿಕೆಯಿಂದ ವ್ಯವಹರಿಸುವುದು ಮುಖ್ಯ ಎಂಬ ಸಂದೇಶ ಅವರ ಉದ್ಗಾರದಿಂದ ವ್ಯಕ್ತವಾಯಿತು. ತನ್ನಂಥ ಮಾಮೂಲಿ ಸೌಂದರ್ಯಶಾಸ್ತ್ರದ ಪ್ರಾಧ್ಯಾಪಕ, ಪ್ರಸಾದನ ಸಲಹೆಗಾರ ಇಂಥ ಅತಿಗಣ್ಯವ್ಯಕ್ತಿಗಳ ಸಂಗಡ ಒಡನಾಡುವುದು ಕಷ್ಟದ ವಿಷಯವೆಂದು ಆ ಕ್ಷಣ ಅರ್ಥಮಾಡಿಕೊಂಡರು. ಇನ್ನೇನು ಮೈಮರೆತರೆನ್ನುವಷ್ಟರಲ್ಲಿ ಇದ್ದಕ್ಕಿದ್ದಂತೆ ವಾಸ್ತವಕ್ಕೆ ಮರಳಿದರು. ಸಿವಂಗಿಯವರ ಮುಖದಲ್ಲಿ ಪ್ರಜ್ವಲಿಸುತ್ತಿದ್ದ ಪ್ರಶ್ನಾರ್ಥಕ ಚಿಹ್ನೆಯಿಂದ ಗಲಿಬಿಲಿಗೊಂಡರು.

ಸಾರ್ ಸನ್ಮಾನ್ಯ ಮುಖ್ಯಮಂತ್ರಿಗಳು ತಮ್ಮ ನಿರೀಕ್ಷೆಯಲ್ಲಿರುವರು ಎಂದು ಸೌಜನ್ಯಯುತವಾಗಿ ಹೇಳಿದರು. ಸನ್ಮಾನ್ಯ ಎಂಬ ವಿಶೇಷಣ ಬಳಸಿದ್ದುದರ ಸರಿತಪ್ಪನ್ನು ಮನಸ್ಸಿನಲ್ಲಿ ವಿಶ್ಲೇಷಿಸಿಕೊಳ್ಳುತ್ತಿರುವಷ್ಟರಲ್ಲಿ ಶ್ರೀಯುತರು ಓಹ್ ಹೌದೇನು ಎಂದು ಉದ್ಗರಿಸಿದರು. ಪಕ್ಕದಲ್ಲಿ ಕೂತು ನಿದ್ರೆಯನ್ನು ಅಭಿನಯಿಸುತ್ತಿದ್ದ ಸಹಪ್ರಯಾಣಿಕನನ್ನು ಎಚ್ಚರಿಸುವುದರ ಔಚಿತ್ಯ ಕುರಿತಂತೆ ತಾವು ಯೋಚಿಸುತ್ತಿರುವಂತೆ ಗೋಚರಿಸಿದರು. ಅದನ್ನು ಅರ್ಥಮಾಡಿಕೊಂಡ ಮೊಖ್ತೇಸರ್ ಕೈಯಿಂದ ಮೆಲ್ಲಗೆ ಸ್ಪರ್ಶಿಸಿದೊಡನೆ ಆತ ಬೆಚ್ಚಿದಂತೆ ಕಂಡರು. ಸಾರಿ ಎಂಬ ಪದ ತಮ್ಮ ನೆರವಿಗೆ ಬಂತು. ಸ್ಥೂಲಕಾಯವಿದ್ದ ಅವರು ಏಳಲು ಎದ್ದು ಈಚೆ ಬರಲು ತೆಗೆದುಕೊಂಡ ಸಮಯ ಹದಿನೈದು ಹೆಜ್ಜೆ ನಡೆಯುವಷ್ಟಿತ್ತು.

ಬಳಿಕ ಸಿವಂಗಿ ನಿಧಾನವಾಗಿ ಈಚೆ ಬಂದರು. ತಮ್ಮ ಮೊಣಕಾಲುಗಳನ್ನು ಲಘುವ್ಯಾಯಾಮದಿಂದ ಸರಿಪಡಿಸಿಕೊಂಡರು. ಸೌಜನ್ಯ ಅತಿಗಣ್ಯರ ಮುಖ್ಯ ಸಮಸ್ಯೆ ಎನ್ನುವುದಕ್ಕೆ ಶ್ರೀಯುತರು ಈಚೆ ಬಂದು ಆಚೆ ನಡೆಯಲಾರಂಭಿಸಿದ್ದು ನಿದರ್ಶನ. ತಿರುಗಿದ ಅವರ ಬೆನ್ನು ಬೆವೆತಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿ ಅಂಗಿ ಒದ್ದೆಯಾಗಿತ್ತು. ವಾತಾನುಕೂಲಿತ ವ್ಯವಸ್ಥೆಯಲ್ಲೂ ಬೆವೆತಿರುವರೆಂದರೆ ಶ್ರೀಯುತರು ಗಹನ ಚಿಂತೆಯಲ್ಲಿದ್ದಿರಬಹುದು. ಅವರು ಪ್ರಯಾಸಪಟ್ಟು ನಡೆಯುತ್ತಿರುವರೆಂದರೆ ಶ್ರೀಯುತರ ಮೊಣಕಾಲು ಚಿಪ್ಪುಗಳಲ್ಲಿನ ಕಾರ್ಟ್ ನೇಜ್ ದ್ರವ ಕ್ಷೀಣಿಸಿರಲೂಬಹುದು. ತಾಸಿಗೆ ಒಂಭೈನೂರು ಕಿಲೋಮೀಟರ್ ವೇಗದಲ್ಲಿ ಹಾರುತ್ತಿದ್ದ ಬೋಯಿಂಗ್ ವಿಮಾನದಲ್ಲಿ ಈಗಣ್ಯರು ತಾಸಿಗೆ ಅರ್ಧಕಿಲೋಮೀಟರ್ ವೇಗದಲ್ಲಿ ನಡೆದು ಆಗಣ್ಯರನ್ನು ತಲುಪಿದರು. ಅವರ ನಡುವೆ ನಡೆಯಲಿರುವ ಸಂವಾದ ಊಹಿಸಿಕೊಳ್ಳುವಷ್ಟು ವ್ಯವಧಾನ ಮೊಖ್ತೇಸರ್ಗೆ ಇರಲಿಲ್ಲ. ನಿಟ್ಟುಸಿರು ಚೆಲ್ಲಿ ಸ್ವಸ್ಥಾನ ಸೇರಿದರು. ಆದರೂ ಅವರತ್ತ ದೃಷ್ಟಿ ಕೇಂದ್ರೀಕರಿಸಿದರು.

ವಾಸ್ತವದ ಸಂಗತಿ ಎಂದರೆ ತಾವು ಸೌಂದರ್ಯಶಾಸ್ತ್ರ, ಪ್ರಸಾದನಶಾಸ್ತ್ರಗಳಲ್ಲಿ ಪರಿಣತರೆನ್ನಿಸಿದ್ದಕ್ಕೆ ಕಾರಣ ತಮ್ಮ ಶ್ರೀಮತಿ ಘೂರ್ಣಿಕಾ. ಆಕೆ ಕಪಿತ್ಥನಗರದಲ್ಲಿನ ಘೃತಾಚಿ ಕಂಪನಿ ಆಫ್ ಬ್ಯೂಟಿ ಪಾರ್ಲರ್ಸ್ ಒಡತಿ. ಆಕೆಯನ್ನು ವರಿಸುವುದಕ್ಕೂ ಪೂರ್ವದಲ್ಲಿ ತಾವು ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರವನ್ನು ಒಟ್ಟಿಗೆ ಅಧ್ಯಯನ ಮಾಡುತ್ತಿದ್ದರು. ಅವೆರಡೂ ತಮ್ಮ ಆಸಕ್ತಿಕೇಂದ್ರಗಳು. ಆದ್ದರಿಂದ ಸಹಜವಾಗಿಯೇ ಅವರು ಸಿವಂಗಿ ಹಾಗೂ ಮುಖ್ಯಮಂತ್ರಿಗಳ ನಡುವಿನ ಸಂಭಾಷಣೆ ಊಹಿಸಿಕೊಂಡರು. ಕಳೆದ ರಾತ್ರಿ ನಿರ್ಗಮಿಸುವ ವೇಳೆಯಲ್ಲಿ ಯುವತಿ ಕೇಳಿದ್ದಕ್ಕೆ ರಾಜ್ಯದ ಪ್ರಥಮಪ್ರಜೆಯ ಕೋಣೆಯನ್ನು ಆಕೆ ಸಂಗಡ ನಡೆದು ತೋರಿಸಿದ್ದರು. ಆ ಕ್ಲುಪ್ತ ಅವಧಿಯಲ್ಲಿ ಆಕೆಯ ದೇಹ ಸೂಸುತ್ತಿದ್ದ ಪರಿಮಳದಲ್ಲಿ ಬೆವರು ಸಮ್ಮಿಶ್ರಣಗೊಂಡಿರುವುದನ್ನು ಗ್ರಹಿಸಿದ್ದರು. ಆ ದಿವಸ ಆಕೆ ಸ್ನಾನ ಮಾಡಿಲ್ಲದಿರಬಹುದು, ಅಥವಾ ಬಿಡುವಿಲ್ಲದ ಓಡಾಟದಿಂದ ಬೆವೆತಿರಲೂಬಹುದೆಂದು ಊಹಿಸಿದ್ದರು. ಆಕೆ ಮೊರೊಕ್ಕೋದವಳು, ಹಾಗೆಯೇ ಸಯ್ಗೆ ನೇಮಿಸಿರಬಹುದಾದ ಗೂಢಾಚಾರಳು ಎಂದು ತಮ್ಮ ಘ್ರಾಣೇಂದ್ರಿಯ ಗ್ರಹಿಸಿತ್ತು. ಈ ಸೂಕ್ಷ್ಮದ ಸುಳಿವು ಮುಖ್ಯಮಂತ್ರಿಗಳಿಗೆ ನೀಡಬಹುದಿತ್ತು, ಆದರೆ ಸಮಯಾಭಾವದಿಂದಾಗಿ, ಅದು ತಮ್ಮ ಕಾರ್ಯವ್ಯಾಪ್ತಿಗೆ ಸಂಬಂಧಿಸಿದ್ದಲ್ಲವೆಂಬ ಕಾರಣಕ್ಕಾಗಿ ಸಾಧ್ಯವಾಗಲಿಲ್ಲ. ಆ ರಾತ್ರಿ ಆಕೆ ಅವರನ್ನು ಪ್ರಭಾವಿಸಿ ಏನನ್ನು ಪರಿಗ್ರಹಿಸಿದಳೊ! ಅಸಂಗತ ಯೋಚನೆಯಿಂದಾಗಿ ಮೊಖ್ತೇಸರ್ ಭಯ ಆತಂಕ ಅನುಭವಿಸಿದರು ನಿರಂತರ. ಹ್ಹಾಂ! ಅಂದ ಹಾಗೆ ಎದುರು ದಿಕ್ಕಿನಿಂದ ಇನ್ನೋರ್ವ ಯುವತಿ ಮುಖ್ಯಮಂತ್ರಿಗಳ ಕೋಣೆಯನ್ನು ಮಿಂಚಿನಂತೆ ಪ್ರವೇಶಿಸಿದಳು. ಆಕೆ ಯಾರಿದ್ದರಬಹುದು? ಆಕೆ ಯಾವ ದೇಶದವಳಿದ್ದಿರಬಹುದು? ಅವರೀರ್ವ ಒಟ್ಟಿಗೆ ತಮ್ಮ ಅನ್ನದಾತರಲ್ಲಿ ಯಾವ ಯಾವ ಸಂವೇದನೆಗಳನ್ನು ಕೊಳ್ಳೆ ಹೊಡಿದಿರಬಹುದು? ಮಹಿಷ್ಮತಿರಾಜ್ಯದ ಆಡಳಿತಕ್ಕೆ ಸಂಬಂಧಿಸಿದ ರಹಸ್ಯಗಳನ್ನು ಸಂಗ್ರಹಿಸಲು ಲಲನೆಯರು ಅತ್ಯಾಧುನಿಕ ಯಂತ್ರಪರಿಕರಗಳನ್ನು ಉಪಯೋಗಿಸಿರಬಹುದೆ, ಅಥವಾ ತಮ್ಮ ಪಂಚೇಂದ್ರಿಯಗಳನ್ನೇ ವಿದ್ಯುನ್ಮಾನ ಪರಿಕರಗಳನ್ನಾಗಿ ಪರಿವರ್ತಿಸಿಕೊಂಡಿರಬಹುದೆ?

ತಮ್ಮನ್ನು ಬೀಳ್ಕೊಡಲು ಅಭಿಸಾರ್ ವಿಮಾನ ನಿಲ್ದಾಣದವರೆಗೆ ಆಗಮಿಸಿದ್ದ ಘೂರ್ಣಿಕಾ ರ್ರೀ ನಿಮ್ಮ ಸ್ವಭಾವ ಕೆಲವೊಮ್ಮೆ ಸಂದೇಹಾಸ್ಪದ. ಇದು ನನ್ನ ಸ್ವಾನುಭವ. ಆದ್ದರಿಂದ ನಿಮ್ಮ ಪರಿಧಿ ಉಲ್ಲಂಘಸದಿರಿ, ಅದರಿಂದ ನಿಮ್ಮ ಭವಿಷ್ಯಕ್ಕೆ ಪ್ರಮಾದ ಎಂದು ಕಿವಿ ಮಾತು ಹೇಳಿದ್ದಳು. ಆದ್ದರಿಂದ ಮೊಖ್ತೇಸರ್ ತಮ್ಮೆರಡೂ ಕಣ್ಣುಗಳ ದೃಷ್ಟಿಯನ್ನು ನಾಸಿಕಾಗ್ರದ ಕಡೆ ಕೇಂದ್ರೀಕರಿಸಿದರು.

***

ಮಹಿಷ್ಮತಿರಾಜ್ಯಕ್ಕೆ ಐಎಎಸ್ ಅಧಿಕಾರಿಗಳು ಆಗಮಿಸಿದವರೆಷ್ಟೋ, ನಿರ್ಗಮಿಸಿರುವವರೆಷ್ಟೋ! ಆದರೆ ಓಘವಂತ್ ಸಿವಂಗಿ ಅವರೆಲ್ಲರಿಗಿಂತ ಭಿನ್ನ. ಜನಪ್ರತಿನಿಧಿಗಳ ಸಹೋದ್ಯೋಗಿಗಳ ಗುಣಸ್ವಭಾವವನ್ನು ಬದಲಿಸುವಲ್ಲಿ ಪರಿಣಿತರು. ಕೌಶಲ್ಯಪೂರ್ಣ ಮಾತುಗಾರಿಕೆಯಿಂದ ಅನಕ್ಷಸ್ಥರನ್ನು ಅಕ್ಷರಸ್ಥರನ್ನಾಗಿಯೂ, ಅಕ್ಷರಸ್ಥರನ್ನು ಅನಕ್ಷರಸ್ಥರನ್ನಾಗಿಯೂ, ಒಳ್ಳೆಯವರನ್ನು ಕೆಟ್ಟವರನ್ನಾಗಿಯೂ, ಕೆಟ್ಟವರನ್ನು ಒಳ್ಳೆಯವರನ್ನಾಗಿಯೂ ಬದಲಿಸಬಲ್ಲ ಚತುರಮತಿಗಳು. ಸೇವೆ ಸಲ್ಲಿಸುವ ರಾಜ್ಯದ ಪ್ರಾದೇಶಿಕ ಭಾಷೆಗಳನ್ನು ಕೆಲವು ದಿವಸಗಳಲ್ಲಿ ಕಲಿತು ವ್ಯವಹರಿಸಬಲ್ಲರು. ಅಷ್ಟು ನಯನಾಜೂಕು ತಮ್ಮದು. ವಿಮಾನದಲ್ಲಿನ ಅವರ ವರ್ತನೆಯನ್ನು ಗಮನಿಸಿದರೆ ಇದು ಸ್ಪಷ್ಟವಾಗುವುದು.

ಉದ್ವಿಗ್ನಗೊಳ್ಳದೆ ಎದ್ದರು. ಹ್ಹಾ ಹೌದೇನು ಎಂದು ಉದ್ಗರಿಸಿದರು. ಸಹಪ್ರಯಾಣಿಕ ಬೇಸರಗೊಳ್ಳದಂತೆ ಈಚೆ ಬಂದರು. ತಾವು ತಲುಪಲಿರುವ ಗುರಿಯನ್ನು ದೂರದಿಂದ ಅಳೆದು ತೂಗಿದರು. ಎಷ್ಟು ವೇಗದಲ್ಲಿ ಚಲಿಸಬೇಕೆಂದು ಮನಸ್ಸಿನಲ್ಲಿ ನಿರ್ಧರಿಸಿದರು. ಸೌಜನ್ಯಮೂರ್ತಿಯಂತೆ ಎದುರಾದ ಸ್ಥೂಲಕಾಯದ ಮಂಗೋಲಿಯನ್ ಮಹಿಳೆ ಹತ್ತಿರವಾದೊಡನೆ ಸಾರಿ ಎಕ್ಸ್ಕ್ಯೂಜ್ಮಿ ಎಂಬ ಎರಡೇ ಎರಡು ಆಂಗ್ಲಪದಗಳಿಂದ ಆಕೆಯನ್ನು ಸಮ್ಮೋಹಕಗೊಳಿಸಿದರು. ಗಗನಸಖಿಯಿದ್ದ ಆಕೆಯ ದೇಹಕ್ಕೆ ಸ್ವಲ್ಪವೂ ಸೋಂಕದ ರೀತಿಯಲ್ಲಿ ಪಕ್ಕಕ್ಕೆ ಸರಿದರು. ಭಾರವಾದ ಹೆಜ್ಜೆ ಇರಿಸಿದರೆಲ್ಲಿ ವಿಮಾನ ಹಾರಾಟದಲ್ಲಿ ಏರುಪೇರಾಗುವುದೋ ಎಂಬ ಎಚ್ಚರಿಕೆಯಿಂದ ತಮ್ಮ ಚಲನೆಯನ್ನು ಮುಂದುವರೆಸಿದರು. ನಾಲ್ಕೂವರೆ ಅಡಿ ದೂರದಲ್ಲಿದ್ದ ಮುಖ್ಯಮಂತ್ರಿಗಳ ಆಸನವನ್ನು ಗಮನಿಸಿ ಚಲನೆಯನ್ನು ಸ್ಥಗಿತಗೊಳಿಸಿದರು. ಗೌರವಾನ್ವಿತರು ಕೇಳಲಿರುವ ಪ್ರಶ್ನೆಗಳನ್ನು ಅವುಗಳಿಗೆ ಸಂಭವನೀಯ ಉತ್ತರಗಳನ್ನು, ಅದಕ್ಕೆ ಸಂಬಂಧಿಸಿದ ಅಲಂಕಾರಯುಕ್ತ ಪದಜಾಲವನ್ನು ಮನಸ್ಸಿನಲ್ಲಿ ಸಿದ್ದಪಡಿಸಿಕೊಳ್ಳಲು ತಾವು ತೆಗೆದುಕೊಂಡ ಸಮಯ ಕೇವಲ ಒಂದೆರಡು ಸೆಕೆಂಡುಗಳು ಮಾತ್ರ. ಭಾವನೆಗಳ ಅಭಿವ್ಯಕ್ತಿಗೆ ಸಂಬಂಧಿಸಿದಂತೆ ಆಂಗಿಕ ಸ್ವರೂಪವನ್ನು ಬದಲಿಸಿಕೊಂಡರು. ಎಡಗೈಯಿಂದ ತಲೆಗೂದಲು ಸರಿಪಡಿಸಿಕೊಳ್ಳುವುದನ್ನು ಮರೆಯಲಿಲ್ಲ. ಬರೆಯುವ ಟಿಪ್ಪಣಿಸಿಕೊಳ್ಳುವ ಪರಿಕರಗಳು ತಮ್ಮ ಬಳಿ ಇರುವುದನ್ನು ಖಚಿತಪಡಿಸಿಕೊಂಡ ಬಳಿಕ ಚಲನೆಗೆ ಚಾಲನೆ ನೀಡಿದರು.

ಆಸನ ಹತ್ತಿರವಾದೊಡನೆ ಕನ್ನಡಕ ಧರಿಸಿದರು. ಶ್ರೀಯುತರ ವಿವಿಧವರ್ಣದ ಕೂದಲು ವಿರಳವಿದ್ದ ಹಿಂದಲೆಯಲ್ಲಿನ ನೊಣ ಕುರುಕ್ಷೇತ್ರದಿದ್ದಿರಬಹುದೆಂದು ಸಂದೇಹಿಸಿದರು. ಜೊತೆಗೆ ವಿಮಾನದಲ್ಲಿನ ನೈರ್ಮಲ್ಯ ಕುರಿತಂತೆ ಬೇಸರ ಮಾಡಿಕೊಂಡರು. ಆದರೆ ಛೇ ಎಂದು ಉದ್ಗರಿಸದಂತೆ ಎಚ್ಚರವಹಿಸಿದರು. ಒಂದೇ ಒಂದು ಹೆಜ್ಜೆ ಇರಿಸಿ ಸಮೀಪಿಸಿದರು. ನೋಡುತ್ತಾರೆ!

ಶ್ರೀಯುತರು ಯೋಗಮುದ್ರೆಯಲ್ಲಿರುವಂತೆ ಭಾಸವಾದರು. ರೆಪ್ಪೆಗಳನ್ನು ಮುಚ್ಚಿದ್ದರಿಂದ ಸಣ್ಣಪ್ರಮಾಣದ ಗೊರಕೆ ಕೇಳಿಸಿತು. ಪುಣ್ಯಕ್ಕೆ ಪಕ್ಕದಲ್ಲಿ ಸಹಪ್ರಯಾಣಿಕನಿರಲಿಲ್ಲ. ಇದ್ದರೂ ಅವರು ರಾಜ್ಯದ ಪ್ರಥಮಪ್ರಜೆ ಎಂದು ಭಾವಿಸುವುದಕ್ಕೆ ಆಸ್ಪದವಿರಲಿಲ್ಲ, ಕಾರಣ ಗೌರವಾನ್ವಿತರ ದೇಹದ ಮೈಲ್ಮೈಲಕ್ಷಣ ಕಿರಾಣಿದಿನಸು ವ್ಯಾಪಾರಿಯನ್ನು ಹೋಲುತ್ತಿತ್ತು. ಅವರು ಅಷ್ಟು ಸರಳರಿರುವುದು ಮಹಿಷ್ಮತಿರಾಜ್ಯದ ಸೌಭಾಗ್ಯ. ಅವರನ್ನು ಎಚ್ಚರಿಸಿ ಗಮನವನ್ನು ಸೆಳೆಯುವ ಪರಿ ಎಂತು? ತುಸು ಬಾಗಿದರು ಮುಂದಕ್ಕೆ. ಸ್ಲಲ್ಪವೇ ಸ್ವಲ್ಪ ಕೆಮ್ಮಿದರು. ಸದ್ದಿಗೆ ಬೆಚ್ಚದೆ ಕಣ್ಣುಗಳನ್ನು ಮಾತ್ರ ತೆರೆದರು. ಪುನಃ ಕೆಮ್ಮಿದರು, ಕತ್ತನ್ನು ನಿಧಾನವಾಗಿ ಹೊರಳಿಸಿದರು. ಇನ್ನೊಮ್ಮೆ ಕೆಮ್ಮಿದರು, ಕಣ್ಣರಳಿಸಿ ನೋಡಿದರು. ನಿಚ್ಚಳವಾಗಿ ಗುರುತಿಸಿದರು. ಓಹೋ ಸಿವಂಗಿ! ಬನ್ನಿ, ನಿಮ್ಮ ನಿರೀಕ್ಷೆಯಲ್ಲಿದ್ದೆ ಎಂದರು.

ಅಷ್ಟರಲ್ಲಿ ವಿಮಾನ ತುಸು ಹೊಯ್ದಾಡಿತು. ಪ್ರಯಾಣಿಕರು ಒಂದುಕ್ಷಣ ಹೌಹಾರಿದರು. ಚಿಕ್ಕಮಕ್ಕಳನ್ನು ಹೊರತುಪಡಿಸಿ. ‘ಹೆದರದಿರಿ ಪ್ರಯಾಣಿಕರೆ, ಕಾರ್ಮೋಡಗಳು ದಟೈಸಿರುವುದರಿಂದ ಇದೆಲ್ಲ ಸಹಜ, ನಿಮ್ಮ ಸುರಕ್ಷತೆ ನಮ್ಮ ಕರ್ತವ್ಯ!’ ಎಂದು ಧ್ವನಿವರ್ಧಕ ಪ್ರಸಾರ ಮಾಡಿತು. ನಿಜ, ಮೋಡಗಳ ಹಿಂಡು ಪ್ರವೇಶಿಸಿದೊಡನೆ ವಿಮಾನದಲ್ಲಿ ಮಬ್ಬು ಅವರಿಸಿ ಒಡನೆ ಕಣ್ಮರೆಯಾಯಿತು. ಶ್ರೀಯುತರು ವಾಸ್ತವಕ್ಕೆ ಮರಳಿದರು. ಕುಳಿತುಕೊಳ್ಳುವಂತೆ ರೆಪ್ಪೆ ಅಲುಗಿಸಿ ಸೂಚಿಸಿದರು. ಆದರೆ ಸಿವಂಗಿ ವಿನಯಪೂರ್ಣವಾಗಿ ಹಿಂಜರಿದರು. ಒತ್ತಾಯಿಸಿದ್ದರಿಂದ ಕುಳಿತುಕೊಳ್ಳುವುದು ಅನಿವಾರ್ಯವೆನಿಸಿತು. ಕುಳಿತರು. ಉಕ್ಕಡ್ ಎಡಗೈಯಿಂದ ಅವರ ಕೈಗಳನ್ನು ಸ್ಪರ್ಶಿಸಿದರು.

ಅಧಿವೇಶನ ಆರಂಭಿಸುವುದಕ್ಕೂ ಮೊದಲು ಕೆಲವು ಉಪದ್ರವಿ ಶಾಸಕರನ್ನು ವಿದೇಶಪ್ರವಾಸಕ್ಕೆ ಕಳಿಸುವುದು ಅನಿವಾರ್ಯ ಸಿವಂಗಿ. ಸಚಿವಸ್ಥಾನದ ಮೇಲೆ ಕಣ್ಣಿಟ್ಟಿರುವವರು ಯಾರು? ಅವರ ಬೆಂಬಲಿಗ ಶಾಸಕರು ಯಾರು? ಅಂಥವರನ್ನು ಪತ್ತೆ ಹಚ್ಚುವುದು, ಅವರಲ್ಲಿ ವಿದೇಶದ ಪ್ರವಾಸದ ರುಚಿ ಹಚ್ಚುವುದು ನಿಮ್ಮ ಜವಾಬ್ದಾರಿ ಸಿವಂಗಿ. ವಿರೋಧಪಕ್ಷದ ಸದಸ್ಯರು ಸಹ ಪಟ್ಟಿಯಲ್ಲಿರಲಿ. ಏಕೆಂದರೆ ವಿದೇಶಪ್ರವಾಸ ಜನಪ್ರತಿನಿಧಿಗಳ ಬೇಸಿಕ್ ಇನ್ಸ್ಟಿಂಕ್ಟ್. ಇದು ಮುಖ್ಯಮಂತ್ರಿಗಳ ಚಿತಾವಣಿ ಎಂದು ಯಾರೂ ತಿಳಿಯದಂತೆ ಎಚ್ಚರವಹಿಸಬೇಕು. ಸ್ವಲ್ಪ ಮೈಮರೆತರೆ ಆಡಳಿತ ಸುಸೂತ್ರ ನಡೆಯಲಾರದು ಎಂದು ಅವರಿಗೆ ಮಾತ್ರ ಕೇಳಿಸುವಂತೆ ಹೇಳಿದರು. ಕಾರ್ಯದರ್ಶಿ ತಮ್ಮ ಬಲಗೈಯ ಮೂರು ಬೆರಳುಗಳನ್ನು ತುಟಿಗಳ ಮೇಲಿರಿಸಿಕೊಂಡಿರುವುದನ್ನು ಖಚಿತ ಪಡಿಸಿಕೊಂಡರು. ಜೊತೆಗೆ ಅವರು ಹ್ಹೂಗುಟ್ಟುತ್ತಿರುವುದನ್ನು ಗಮನಿಸಿದರು. ನಂತರ ತಾವೇ ಅಂದ ಹಾಗೆ ಈ ವಿಷಯ ಮಾಧ್ಯಮದವರಿಗೆ ತಿಳಿಯದಂತೆ ಜಾಗ್ರತೆವಹಿಸಬೇಕು ಸಿವಂಗಿ ಎಂದು ಹೇಳುವುದನ್ನು ಮರೆಯಲಿಲ್ಲ.

ಮುಖ್ಯಮಂತ್ರಿಗಳ ಮಾತನ್ನು ಅಗತ್ಯಕ್ಕಿಂತ ಹೆಚ್ಚು ಆಲಿಸಿದರು. ಕಣ್ಣುಮುಚ್ಚಿ ಏನನ್ನೋ ಯೋಚಿಸಿದರು. ತುಟಿಗಳಿಗೆ ಚಲನೆ ನೀಡಿದರು. ಕೈಬೆರಳುಗಳನ್ನು ಅಲುಗಾಡಿಸಿದರು. ಕೆರೆಗಳ ಡಿನೋಟಿಫೈ! ಸಯ್ಗೆಯವರ ಡುಡುಂಭ! ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ನಿವೇಶನಗಳು! ಅತಿಹಿರಿಯ ನಾಗರಿಕರೂ ಅನುಭವಿ ರಾಜಕಾರಣಿಯೂ ಆದಂಥ ಅಲಾಯುಧರಿಗೆ ನಾಂತರೀಯಕ್ ಆಸ್ಪತ್ರೆಯಲ್ಲಿ ಪುನರ್ವಸತಿ ಕಲ್ಪಿಸಿರುವುದು! ಈ ಕೆಲಸಗಳು ನೈತಿಕವೋ! ಅನೈತಿಕವೋ! ಇದರಿಂದ ರಾಜ್ಯದ ಬೊಕ್ಕಸಕ್ಕೆ ತಗುಲುವ ವೆಚ್ಚ! ಸಾಮಾನ್ಯ ಪ್ರಜೆಯ ಮೇಲೆ ತೆರಿಗೆ ಹೊರೆ! ಸರ್ಕಾರದ ಕಾರ್ಯದರ್ಶಿಯಾಗಿ ತಾವು ಇವುಗಳನ್ನು ನಿಯಂತ್ರಿಸುವುದು ಸಾಧ್ಯವೆ! ಇದರಿಂದ ವೈಯಕ್ತಿಕ ಲಾಭನಷ್ಟ! ಯೋಚಿಸಿದರು. ಅವರಿಗೆ ಕೇಳಿಸುವಂತೆ ನಿಟ್ಟುಸಿರುಬಿಟ್ಟರು. ಪ್ರಶ್ನಾರ್ಥಕ ಚಿಹ್ನೆಯಾಗಿ ಮಾರ್ಪಟ್ಟರು. ಅರಣ್ಯವಾಸದಲ್ಲಿ ಧರ್ಮರಾಯನಿಗೆ ಪ್ರಶ್ನೆ ಕೇಳಿದಂಥ ಯಕ್ಷನಂತೆ ಸಿವಂಗಿ ಗೋಚರಿಸಬಹುದೆಂದು ಮುಖ್ಯಮಂತ್ರಿಗಳು ನಿರೀಕ್ಷಿಸಿರಲಿಲ್ಲ.

ಸಿವಂಗಿ, ಏನೋ ಯೋಚಿಸುತ್ತಿರುವಂತಿದೆಯಲ್ಲ! ಒಂದು ವಿಷಯ ನೆನಪಿಟ್ಟುಕೊಳ್ಳಿ, ಅದೆಂದರೆ ಮುಖ್ಯಮಂತ್ರಿಯಾದವನಿಗೆ ರಾಜ್ಯದ ಹಿತ ಮಾತ್ರ ಮುಖ್ಯವಾಗಬಾರದು. ಪಕ್ಷದ ಹಿತವೂ ಮುಖ್ಯವಾಗಬೇಕು. ನಮ್ಮ ಗೆಲುವಿನ ಹಿಂದೆ ಶ್ರಮಿಸಿರುವ ಕಾಣದ ಕೈಗಳನ್ನು ರಕ್ಷಿಸುವುದು ನಮ್ಮ ನೈತಿಕ ಹೊಣೆ. ಐಎಎಸ್ ಅಧಿಕಾರಿಯಂತೆ ಯೋಚಿಸಬೇಡಿ. ವೃತ್ತಿಪರ ರಾಜಕಾರಣಿಯಂತೆ ಯೋಚಿಸಿ, ಆಗ ನಿಮಗೇ ಅರ್ಥವಾಗುವುದು ಎಂದರು.

ಸಿವಂಗಿ ಇನ್ನಷ್ಟು ಗೊಂದಲ ಅನುಭವಿಸಿದರು. ರಾಜ್ಯದ ಕಾರ್ಯದರ್ಶಿ ಎಂದರೆ ಆಳುವ ವ್ಯವಸ್ಥೆಯ ಕೈಗೊಂಬೆ. ಅವರು ಆಡಿಸಿದಂತೆ ಆಡುವುದು ತಮ್ಮ ಕರ್ತವ್ಯವೆಂದು ನಿಧಾನವಾಗಿ ಅರ್ಥಮಾಡಿಕೊಂಡರು. ತಮ್ಮ ಬಂಧುಬಳಗದವರಲ್ಲಿ ಯಾರು ಯಾರಿಗೆ ನಿವೇಶನ ಕೊಡಿಸಬಹುದೆಂದೂ ಲೆಕ್ಕ ಹಾಕಿದರು.

ಸಾರ್ ನನ್ನ ಮೌನವನ್ನು ತಾವು ಅಪಾರ್ಥ ಮಾಡಿಕೊಂಡಿದ್ದರೆ ದಯವಿಟ್ಟು ಕ್ಷಮಿಸಿ. ಭುವನವಿಜಯಕ್ಕೂ ನಾಂತರೀಯಕ್ ಆಸ್ಪತ್ರೆಗೂ ನಡುವೆ ಇರುವ ವ್ಯತ್ಯಾಸವನ್ನು ಊಹಿಸಿಕೊಳ್ಳುತ್ತಿದ್ದೆ ಎಂದು ಹೇಳಿದರು ತುಟಿ ಜಾರಿ. ಒಡನೆಯೇ ನಿಮ್ಮ ಅಸಹಾಯಕತೆ ಅನಿವಾರ್ಯತೆ ಅರ್ಥವಾಯಿತು ಸಾರ್. ಕಪಿತ್ಥನಗರ ತಲುಪಿದೊಡನೆ ನಿಮ್ಮ ಯೋಜನೆಯನ್ನು ಕಾರ್ಯಗತಗೊಳಿಸುವೆ. ಯಶಸ್ಸೂ ಸಾಧಿಸುವೆ. ಅದಕ್ಕನುಗುಣವಾಗಿ ರಾಜ್ಯಪಾಲರ ಭಾಷಣ ಸಿದ್ದಪಡಿಸಬೇಕಿದೆ. ನೀವೂ ಘನವೆತ್ತರ ಸಂಗಡ ಒಂದು ಸುತ್ತು ಮಾತುಕತೆ ನಡೆಸಿದರೆ ಒಳ್ಳೆಯದು ಎಂದು ನಿಧಾನವಾಗಿ ತಮ್ಮ ದಾರಿಯನ್ನು ಅರ್ಥಮಾಡಿಕೊಂಡರು.

ಅವರ ಮಾತಿನಿಂದ ಮುಖ್ಯಮಂತ್ರಿಗಳು ಪ್ರಸನ್ನವದನರಾದರು. ಕಣ್ಣಿನಿಂದ ತೆಗೆದ ಕನ್ನಡಕದ ಗಾಜುಗಳನ್ನು ಖಾದಿವಸ್ತ್ರದಿಂದ ಒರೆಸಿಕೊಂಡರು. ಘನವೆತ್ತರ ನಡೆನುಡಿಗಳನ್ನು ಕಲ್ಪಿಸಿಕೊಳ್ಳುತ್ತ..

ಶ್ರೀ ಗುಣಾಧಮ ಕಲ್ಗೋದ್ಗಿಂತ ಪರಜಾತ್ ನಿರಾಕಾರ್ ಪರವಾಯಿಲ್ಲ. ಆದರೆ ಅವರ ಪತ್ನಿ ಸಮಸ್ಯಾತ್ಮಕ ಮಹಿಳೆ. ಆಕೆಗಿಂತ ಆಕೆ ಸಾಕಿರುವ ಕಾಶ್ಯಪಿ ಸಮಸ್ಯಾತ್ಮಕ ಹಸು. ನಿರಾಕಾರ್ ನಮ್ಮ ದಾರಿಗೆ ಬರಬೇಕಾದರೆ ನಾವು ಇವರಿಬ್ಬರನ್ನು ಸರಿಮಾಡಬೇಕು ಎಂದು ಹೇಳಿದರು. ಈ ಮಾತು ಸಿವಂಗಿ ಮನಸ್ಸಿಗೆ ನೋವನ್ನುಂಟು ಮಾಡಿತು. ಮುಖ್ಯಮಂತ್ರೀಜಿ ತಮ್ಮ ತೀರ್ಥರೂಪ ಸಮಾನರು ಅಸಾಮಾನ್ಯ ವ್ಯಕ್ತಿತ್ವದವರು, ಅಲ್ಲದೆ ಲಕ್ವಾಪೀಡಿತರಾಗಿ ಅಮೇರಿಕಾದಲ್ಲಿನ ಸುವ್ಯವಸ್ಥಿತ ಆಸ್ಪತ್ರೆಯಲ್ಲಿ ಪುನರ್ವಸತಿ ಕಂಡುಕೊಂಡಿರುವವರು, ಅದೂ ಸರ್ಕಾರದ ಖರ್ಚಿನಲ್ಲಿ. ಅಂಥವರನ್ನು ನಿರುಪದ್ರವಿ ಹೊಸರಾಜ್ಯಪಾಲರೊಂದಿಗೆ ತುಲನೆ ಮಾಡುವುದೆಂದರೇನು? ಅವರ ಕ್ಷೇಮ ವಿಚಾರಿಸಲೆಂದು ಒಂದು ತಿಂಗಳು ರಜೆ ಪಡೆಯಬೇಕೆಂಬುದು ತಮ್ಮ ಮನಸ್ಸಿನ ಬಯಕೆ, ಆದರೆ ಸದ್ಯದ ಪರಿಸ್ಥಿತಿಯಲ್ಲಿ ಹೇಳುವುದು ಕೇಳುವುದು ಸಾಧ್ಯವಾಗುತ್ತಿಲ್ಲ. ಆದರೂ ಪ್ರಯತ್ನಿಸಬೇಕಿದೆ. ಇವರೀರ್ವರಲ್ಲಿ ಮನಸ್ತಾಪ ಸೃಷ್ಠಿಸಿದಲ್ಲಿ ಪರಿಣಾಮ ಏನಾಗುವುದು?

ಸಾರ್ ಒಳ್ಳೆಯ ಮಾತಾಡಿದಿರಿ, ದುಮಂಗಲನ ನೆರವಿನಿಂದ ಕಾಶ್ಯಪಿಯನ್ನು ಅಪಹರಿಸಿದರೆ ಹೇಗೆ! ಎಂದರು. ಕೇಳಿದೊಡನೆ ಅವರು ಮುಖ ಅರಳಿಸಿಕೊಂಡರು. ಮುಖದಲ್ಲಿ ಕೊಲೆ ಸುಲಿಗೆ ಅಪಹರಣ ಸಂಬಂಧೀ ಅಪರಾಧಿ ಭಾವನೆಗಳು ಗೋಚರಿಸಿ ಮರೆಯಾದವು. ಐಎಎಸ್ ಅಧಿಕಾರಿಯಾಗಿದ್ದರೂ ತಮ್ಮ ಕಾರ್ಯದರ್ಶಿ ನುರಿತ ಮಾಫಿಯಾ ವ್ಯಕ್ತಿಯಂತೆ ಯೋಚಿಸಬಲ್ಲರು.

ಅದೇನು ದೊಡ್ಡ ವಿಷಯವಲ್ಲ ಸಿವಂಗಿ. ದಿನಂಪ್ರತಿ ಗೋಮೂತ್ರ ಸೇವಿಸುತ್ತಿರುವ ವ್ಯಕ್ತಿ ಅವನು, ಯಾರಾದರೂ ಸುಪಾರಿ ನೀಡಿದರೆ ನಮ್ಮಿಬ್ಬರನ್ನು ಅಪಹರಿಸಿ ಲಕ್ಷದ್ವೀಪಗಳಲ್ಲಿ ಅಡಗಿಸಿಡಬಲ್ಲ. ಆದರೆ ನಿಷ್ಪಾಪಿ ಹಸುಗಳ ತಂಟೆಗೆ ಮಾತ್ರ ಹೋಗಲಾರ. ಆದ್ದರಿಂದ ಬೇರೆ ಏನಾದರು ಮಾಡಬೇಕು! ಯೋಚಿಸಿದರಾಯಿತು. ನಿಮ್ಮಲ್ಲೂ ರಾಜಕಾರಣಿ ಗುಣಗಳಿವೆಯಲ್ಲ, ಅಷ್ಟು ಸಾಕು ಎಂದರು.

ಸಿವಂಗಿಯ ಮುಖ ವಿವರ್ಣಗೊಂಡಿತು. ಏನೋ ಹೇಳಲು ಯೋಚಿಸುತ್ತಿರುವಷ್ಟರಲ್ಲಿ! ವಿಮಾನದ ಸ್ಕ್ರೀನ್ ಡೋರ್ ತೆರೆಯಿತು. ಅದರಿಂದ ಗಗನಸಖಿಯರ ವಿವಿಧಾಕೃತಿಗಳು ಕಾಣಿಸಿದವು. ಅವು ತ್ಯಾಜ್ಯವಸ್ತುಗಳ ಸಂಗ್ರಹಣಾ ಕಾರ್ಯ ಆರಂಭಿಸಿದವು.

‘ಪ್ರಯಾಣಿಕರೆ ನೀವು ಪ್ರಯಾಣಿಸುತ್ತಿರುವ ವಿಮಾನ ಕಪಿತ್ಥನಗರದ ಅಭಿಸಾರ್ ವಿಮಾನಾಶ್ರಯಕ್ಕೆ ಹತ್ತಿರವಿರುವುದು. ನೀವು ಸೀಟಿನ ಬೆಲ್ಟ್ ಕಟ್ಟಿಕೊಳ್ಳುವುದನ್ನು ಮರೆಯದಿರಿ. ಸಯ್ಗೆ ಇಂಟರ್ನ್ಯಾಷನಲ್ ಏರೋನಾಟಿಕಲ್ ಕಂಪನಿಗೆ ಪ್ರಯಾಣಿಕರ ಸುರಕ್ಷತೆ ಮುಖ್ಯ. ಅತ್ಯುತ್ತಮ ಸೇವೆ ನಮ್ಮ ಕಂಪನಿಯ ಗುರಿ. ಕಂಪನಿಯ ಎಂಡಿ ಛದ್ಮಭೂಷಣ ಕಡದುಕ್ಷ್ ಸಯ್ಗೆ ನಿಮ್ಮೆಲ್ಲರಿಗೆ ಧನ್ಯವಾದಗಳನ್ನು ಅರ್ಪಿಸಿರುವರು. ದಯವಿಟ್ಟು ಸ್ವೀಕರಿಸಿ. ಸಯ್ಗೆ ಕಂಪನಿಯ ಅತ್ಯುಚ್ಚಗುಣಮಟ್ಟದ ಉತ್ಪನ್ನಗಳನ್ನು ಮಾತ್ರ ಖರೀದಿಸಿರಿ, ನಿತ್ಯಬಳಸಿರಿ, ಪ್ರೋತ್ಸಾಹಿಸಿರಿ, ಹ್ಹಾ ಅಂದ ಹಾಗೆ ನಮ್ಮ ಕಂಪನಿ ಹೊಸದಾಗಿ ದಾಂಡಿ ಉಪ್ಪು ಬಿಡುಗಡೆ ಮಾಡಿದೆ. ಅದರಲ್ಲಿ ಅಯೋಡಿನ್ ಮಾತ್ರವಲ್ಲದೆ ಜೀವಸತ್ವಗಳು ಪೋಷಕಾಂಶಗಳಿವೆ’ ಎಂದು ದ್ವನಿವರ್ಧಕದಲ್ಲಿ ಸಮ್ಮೋಹಕ ಸಂದೇಶ ಪ್ರಸಾರವಾಯಿತು.

‘ಓಹ್ ಸಯ್ಗೆ! ನೀನು ಸರ್ವಾಂತರ್ಯಾಮಿ ಕಣಯ್ಯಾ!’ ಉದ್ಗರಿಸಿದರು ಉಕ್ಕಡ್.

 

ಕಾದಂಬರಿಯ ಆಯ್ದ ಭಾಗ ಇಲ್ಲಿಗೆ ಮುಗಿಯಿತು 

ಅವಧಿಯ ಮೇಲಿನ ವಿಶ್ವಾಸದಿಂದ ಈ ಕಾದಂಬರಿಯ ಆಯ್ದ ಭಾಗವನ್ನು ಪ್ರಕಟಣೆಗೆ ನೀಡಿದ 

ಕುಂ ವೀರಭದ್ರಪ್ಪನವರಿಗೆ ಅವಧಿಯ ವಂದನೆಗಳು 

ಸಧ್ಯದಲ್ಲೇ ಪುಸ್ತಕ ಮಾರುಕಟ್ಟೆಗೆ ಬರಲಿದೆ 

ಕೊಂಡು ಓದಿ 

‍ಲೇಖಕರು Admin

25 January, 2016

1 Comment

  1. kumbar Veerabhadrappa

    ನನ್ನ ಹೊಸ ಕಾದಂಬರಿ ಒಳಚರಂಡಿಯ ಆರಂಭದ ಭಾಗವನ್ನು ಪ್ರಕಟಿಸಿದ ಅವಧಿಗೆ ಕೃತಜ್ಞತೆಗಳು
    ಕುಂವೀ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading