ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಂವೀ ಅವರ ಲೇಖನಕ್ಕೆ ಬಶೀರ್ ಅವರ ಪ್ರತಿಕ್ರಿಯೆ

ಜ್ಞಾನಪೀಠ ವಿವಾದದ ಬಗ್ಗೆ ಕುಂವೀ ಅವರ ಲೇಖನ ’ಅವಧಿ’ಯಲ್ಲಿ ಪ್ರಕಟವಾಗಿತ್ತು. ಅದನ್ನು ಓದಿ ಬಿ ಎಂ ಬಶೀರ್ ತಮ್ಮ ಪ್ರತಿಕ್ರಿಯೆಯನ್ನು ಕಳಿಸಿದ್ದಾರೆ. ಅದು ಇಲ್ಲಿದೆ.

***

ಕುಂವೀ ಮಾತುಗಳ ಹಿಂದಿನ ವಿರೋಧಾಭಾಸಗಳು…

ಬಿ ಎಂ ಬಶೀರ್

ಜ್ಞಾನಪೀಠದ ಕುರಿತಂತೆ ತಾನೇಕೆ ಅಸಹನೆಯಿಂದ ಮಾತನಾಡಿದೆ ಎನ್ನುವುದನ್ನು ಕುಂ.ವೀ. ಅವರು ಈಗಾಗಲೇ ವಿವಿಧ ಮಾಧ್ಯಮಗಳಲ್ಲಿ ತೋಡಿಕೊಂಡಿದ್ದಾರೆ. ಇಷ್ಟಾದ ಬಳಿಕವೂ ಕುಂ.ವೀ. ವ್ಯಕ್ತಪಡಿಸಿದ ಟೀಕೆಗಳು ಸಮರ್ಥನೀಯವೆಂದು ಅನ್ನಿಸದೇ ಇರುವುದಕ್ಕೆ ಮುಖ್ಯ ಕಾರಣ ಅವರದೇ ಮಾತುಗಳಲ್ಲಿರುವ ವಿರೋಧಭಾಸಗಳು. ಏಕಾಏಕಿ ಜ್ಞಾನಪೀಠ ಪ್ರಶಸ್ತಿ ಟೀಕೆ, ಚರ್ಚೆಗೆ ಅರ್ಹವಾಗುವಷ್ಟು ತುರ್ತು ಸಂದರ್ಭ ನಮ್ಮ ನಡುವೆ ಇದೆಯೆ? ಎನ್ನುವುದನ್ನು ಕೇಳಿಕೊಂಡಷ್ಟು, ಜ್ಞಾನಪೀಠ ಕುರಿತಂತೆ ಕುಂವೀ ಮಾತುಗಳು ಪ್ರಜ್ಞಾಪೂರ್ವಕವಾಗಿ ಸಷ್ಟಿಯಾದವುಗಳು ಎಂದೇ ನನಗನ್ನಿಸುತ್ತದೆ.
ಅಂದಿನ ಮಾತುಗಳು ಯಾಕೆ ಹುಟ್ಟಿಕೊಂಡವು ಎನ್ನುವುದಕ್ಕೆ ಅವರು ನೀಡುವ ಮುಖ್ಯ ಕಾರಣ ಮೂರು. 1. ಪ್ರತಿ ಸಭೆಯಲ್ಲಿ ಕುಂವೀ ಅವರಿಗೂ ಜ್ಞಾನಪೀಠ ಸಿಗಲಿ ಎಂಬ ಹಾರೈಕೆ, ಸಿಟ್ಟಿಗೆ ಕಾರಣವಾಯಿತು. 2. ಶಾಲಾ ಕಾಲೇಜುಗಳಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಫೋಟೋಗಳನ್ನು ಛಾಪಿಸಿ, ಇವರೇ ಅಂತಿಮ ಎಂದು ಘೋಷಿಸುವುದು ಎಷ್ಟು ಸರಿ? ಇವರಿಗಿಂತ ಬೇರೆ ಲೇಖಕರಿಲ್ಲವೆ? ಎಂಬ ಭಾವನೆ ಮಕ್ಕಳಲ್ಲಿ ಮೂಡುವುದಿಲ್ಲವೆ ಎಂಬ ಕುಂವೀ ಅನಿಸಿಕೆ. 3. ಅನಂತಮೂರ್ತಿಯವರು ವಶೀಲಿ ಬಾಜಿ ಮೂಲಕವೇ ಆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಕುಂ. ವೀ. ಅವರ ಮೂರೂ ಅಸಹನೆಗಳೂ ಸಕಾರಣವುಳ್ಳದ್ದೇ. ಇದರಲ್ಲಿ ಎರಡು ಮಾತಿಲ್ಲ. ಆದರೆ ಕುಂವೀ ಅವರು ಜ್ಞಾನಪೀಠವನ್ನು ಸಾರಾಸಗಟಾಗಿ ತಿರಸ್ಕರಿಸಿಲ್ಲ. ಸಿಕ್ಕಿದರೆ ಬೇಕು ಎನ್ನುವ ಒಳಆಸೆಯೂ ಅವರಲ್ಲಿದೆ. ನನಗೆ ಸಿಕ್ಕಿದರೆ ಬೇಡ ಎಂದು ಬಹಿರಂಗವಾಗಿ ಹೇಳುವ ಯಾವ ಗಟ್ಟಿತನವನ್ನು ಅವರು ಪ್ರದರ್ಶಿಲ್ಲ್ಲ. ನನ್ನ ಮಟ್ಟಿಗೆ ಕುಂವೀ ಸಾಹಿತ್ಯ ಯಾವುದೇ ಜ್ಞಾನಪೀಠ ಗಳಿಗಿಂತಲೂ ಶ್ರೇಷ್ಠವಾದುದು. ಅದು ನನಗೆ ಕೊಟ್ಟ ಅನುಭವ ಪ್ರಶಸ್ತಿಗಿಂತ ಮಿಗಿಲಾದುದು. ಒಂದು ಪ್ರಶಸ್ತಿ ಸಿಕ್ಕಿತೆನ್ನುವ ಕಾರಣಕ್ಕಾಗಿ ಯಾರೂ ಒಬ್ಬ ಲೇಖಕನನ್ನು ಇಷ್ಟ ಪಡುವುದಿಲ್ಲ. ಪ್ರಶಸ್ತಿ ಸಿಕ್ಕಿದ ಕಾರಣಕ್ಕಾಗಿ ಓದುಗನಿಗೆ ಯಾವ ಲೇಖಕನೂ ಮಹತ್ವದವನಾಗುವುದಿಲ್ಲ. ತಾನು ಇಷ್ಟ ಪಟ್ಟ ಲೇಖಕನಿಗೆ ಪ್ರಶಸ್ತಿ ಸಿಕ್ಕಿದರೆ ಓದುಗನಿಗೆ ಸಂತೋಷವಾಗುತ್ತದೆ. ಜ್ನಾಪೀಠ ಕವಿಗಳೇ ಶ್ರೇಷ್ಠ ಎಂದು ವಿದ್ಯಾರ್ಥಿಗಳು ನಂಬುತ್ತಾರೆ ಎಂದಾದರೆ, ತೇಜಸ್ವಿಗೆ, ಲಂಕೇಶ್ ಗೆ ಇಷ್ಟು ಓದುಗರು ಎಲ್ಲಿ ಸಿಗುತ್ತಿದ್ದರು? ಕುಂವೀಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿದರೆ ಅವರಿಗೆ ಇಷ್ಟವಾಗುತ್ತದೆಯೋ ಇಲ್ಲವೋ, ಆದರೆ ನನಗಂತೂ ಖುಷಿಯಾಗುತ್ತೆ. ಯಾಕೆಂದರೆ ಅವರ ಕೆಲವು ಕೃತಿಗಳು ನನಗೆ ತುಂಬಾ ಇಷ್ಟ. ಆದರೆ ಇಲ್ಲಿ ಜ್ಞಾನಪೀಠದ ಬಗ್ಗೆ ಅಸಹನೆ ಪಡುತ್ತಲೇ ಕುಂವೀ ಒಳಗೊಳಗೆ ಅದು ತನಗೆ ಸಿಗಬೇಕಾಗಿತ್ತು, ಇನ್ನಾರೋ ಲಾಬಿ ಮಾಡಿ ಅದನ್ನು ಕಿತ್ತುಕೊಂಡಿದ್ದಾರೆ ಎಂಬ ರೀತಿಯಲ್ಲಿ ತಮ್ಮ ಅಸಹನೆಯನ್ನು ವ್ಯಕ್ತಪಡಿಸುತ್ತಾರೆ. ಇದು ಒಬ್ಬ ಸಜನಶೀಲ ಲೇಖಕನಿಗೆ ಒಪ್ಪುವಂತಹದಲ್ಲ.

ಅನಂತಮೂರ್ತಿಯ ವಿಚಾರಧಾರೆಗಳ ಕುರಿತಂತೆ ಟೀಕೆಗಳು ಹೊಸತೇನಲ್ಲ. ಲಂಕೇಶರಿಂದಲೂ ತೀವ್ರ ಟೀಕೆಗೊಳಗಾದವರು ಅನಂತಮೂರ್ತಿ. ಆದರೆ ಅದಕ್ಕೆ ಕಾರಣ ಜ್ಞಾನಪೀಠ ಅಲ್ಲ. ಕೆಲವು ಸಾಂಸ್ಕೃತಿಕ ಚರ್ಚೆಗಳ ಸಂದರ್ಭಗಳಲ್ಲಿ ಎದುರಾದ ಭಿನ್ನಮತ ಅವರ ನಡುವೆ ಬಿರುಕನ್ನು ತಂದಿತ್ತು. ಈಗಲೂ ಅನಂತಮೂರ್ತಿಯವರನ್ನು ಅತಿ ಹೆಚ್ಚು ಇಷ್ಟ ಪಡುವವರೂ, ಅವರೊಳಗಿನ ವಿಚಾರಗಳ ಕುರಿತಂತೆ ಭಿನ್ನಮತವನ್ನು ಹೊಂದಿಯೇ ಇದ್ದಾರೆ. ಇದು ಕನ್ನಡ ಸಾಹಿತ್ಯ ಲೋಕಕ್ಕೇ ಗೊತ್ತಿರುವುದು. ಅನಂತಮೂರ್ತಿಯನ್ನು ಸಂಪೂರ್ಣ ಒಪ್ಪಿಕೊಳ್ಳುವುದು ಕಷ್ಟ. ಹಾಗೆಯೇ ಅನಂತಮೂರ್ತಿಯವರನ್ನು ತಿರಸ್ಕರಿಸುವುದು ಅದಕ್ಕಿಂತ ಹೆಚ್ಚು ಕಷ್ಟ. ಸದ್ಯದ ಸಂದರ್ಭದಲ್ಲಿ ಅನಂತಮೂರ್ತಿ ತನ್ನ ಅನಿಸಿಕೆಗಳನ್ನು ಹೇಳಲು, ಒಬ್ಬಂಟಿಯಾಗಲು ಯಾವ ರೀತಿಯಲ್ಲೂ ಅಂಜಿಕೆ ವ್ಯಕ್ತಪಡಿಸಿಲ್ಲ. ಅದಕ್ಕಾಗಿ ಮಾಧ್ಯಮಗಳ ಮುಂದೆ ಅವರು ಯಾವತ್ತೂ ಹಲ್ಲು ಗಿಂಜಿಲ್ಲ. ಕುಂವೀ ಅವರು ಹೇಳಿದಂತೆಯೇ ಈ ಇಳಿವಯಸ್ಸಿನಲ್ಲೂ ಅನಂತಮೂರ್ತಿಯವರಲ್ಲಿ ಆನೆಯ ಶಕ್ತಿಯಿದೆ. ಬಹುಶಃ ಅದು ಹೊರಗಿನಿಂದ ಬಂದಿರುವುದಲ್ಲ, ಒಳಗಿನಿಂದ ಬಂದಿರುವುದು ಎಂದು ನನಗೆ ಅನ್ನಿಸುತ್ತದೆ. ಈ ಹೊತ್ತಿನಲ್ಲೂ ಅವರು ನಳನಳಿಸುವ ಆರೋಗ್ಯದಿಂದಿದ್ದರೆ ಅದಕ್ಕೂ ಅದೇ ಕಾರಣ. ತಾನು ನಂಬಿದ್ದನ್ನು ಅವರು ಹೇಳುತ್ತಾರೆ. ಅನಂತಮೂರ್ತಿಯವರ ಯಾವುದಾದರೂ ವಿಚಾರಗಳನ್ನು ಖಂಡಿಸಿ ಕುಂವೀ ಏರು ಧ್ವನಿಯಲ್ಲಿ ಮಾತನಾಡಿದ್ದರೆ ಅದು ಕುಂವೀ ವ್ಯಕ್ತಿತ್ವಕ್ಕೆ ಒಪ್ಪುವಂತಿರುತ್ತಿತ್ತು. ಅನಂತಮೂರ್ತಿಯವರೂ ಆ ಚರ್ಚೆಯಲ್ಲಿ, ಜಗಳದಲ್ಲಿ ಭಾಗಿಯಾಗುತ್ತಿದ್ದರೋ ಏನೋ. ಆದರೆ ನಾಡಿನ ಯಾವೊಂದು ಸಂಕಟದ ಸಂದರ್ಭದಲ್ಲೂ ಮಾತನಾಡದ ಕುಂವೀ ಇದೀಗ ಎಂದೋ ಸಿಕ್ಕಿದ ಜ್ಞಾನಪೀಠವನ್ನು ಹಿಡಿದುಕೊಂಡು ಒಬ್ಬ ಹಿರಿಯ ಸಾಹಿತಿಯ ಮೈಮೇಲೆ ಬೀಳುವುದು ಕ್ರೌರ್ಯವಾಗಿ ಬಿಡುತ್ತದೆ.
ಇಷ್ಟಕ್ಕೂ ಅನಂತಮೂರ್ತಿ, ಕಾರ್ನಾಡ್ ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು. ಅನಂತಮೂರ್ತಿ ಸಂಸ್ಕಾರ, ಭಾರತೀಪುರಗಳಂತಹ ಕಾದಂಬರಿಗಳ ಜೊತೆ ಜೊತೆಗೇ ವೈಚಾರಿಕ ಚಿಂತನೆಗಳಿಗೆ ರಾಷ್ಟ್ರಮಟ್ಟದಲ್ಲಿ ಹೊಸ ದಿಕ್ಕನ್ನು ಕೊಟ್ಟವರು. ಚರ್ಚೆಗಳನ್ನು ಹುಟ್ಟಿಸಿ ಹಾಕಿದವರು. ಇದನ್ನೆಲ್ಲ ನಾವು ಮರೆಯುವುದಕ್ಕಾಗುವುದಿಲ್ಲ. ಕೆಲವೊಮ್ಮೆ ಅವರ ವಿಚಾರಗಳು ನಮ್ಮನ್ನು ಏಕಾಏಕಿ ಗೊಂದಲಗೊಳಿಸುತ್ತವೆ ಎನ್ನುವುದೂ ಅಷ್ಟೇ ಸತ್ಯ ಆ ಕಾರಣಕ್ಕಾಗಿಯೇ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ ಮತ್ತು ಎದುರಿಸುತ್ತಲೇ ಇದ್ದಾರೆ. ಗಿರೀಶ್ ಕಾರ್ನಾಡ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಟಕ ಮಾತ್ರವಲ್ಲ, ಸಿನಿಮಾ, ವಿಚಾರಗಳಿಗಾಗಿ ಗುರುತಿಸಿದ ‘ಪ್ರತಿಷ್ಠಿತ’ ಜಾಣ, ಬುದ್ಧಿವಂತ ಲೇಖಕ. ಪ್ರತಿಷ್ಠಿತ ಎನ್ನುವುದನ್ನು ನಾನು ಉದ್ದೇಶಪೂರ್ವಕವಾಗಿ ಬಳಸಿದ್ದೇನೆ. ಯಾಕೆಂದರೆ, ಕರ್ನಾಟಕ ವೈವಿಧ್ಯಮಯ ಲೇಖಕರನ್ನು ಹೊಂದಿದೆ. ಲಂಕೇಶ್ ಅವರಿಗೆ ಲಂಕೇಶ್ ಸಾಟಿ. ಅಂತೆಯೇ ಅನಂತಮೂರ್ತಿ ಲಂಕೇಶರಿಗೆ ಸಮಾಂತರವಾಗಿರುವ ನದಿಯ ಇನ್ನೊಂದು ಪಾತ್ರ. ಹಾಗೆಯೇ ಕಾರ್ನಾಡ್ ಕೂಡ. ಈ ವೈವಿಧ್ಯತೆ ನಮ್ಮ ನಾಡಿಗೆ, ನಮ್ಮ ಸಾಹಿತ್ಯಕ್ಕೆ ಬೇಕು. ಕಾರ್ನಾಡ್ ಆ ವೈವಿಧ್ಯತೆಯ ಭಾಗ. ಸಿನಿಮಾ ನಿರ್ದೇಶಕರಾಗಿ, ನಟರಾಗಿ ಅವರು ಸಾಧಿಸಿದ ಸಾಧನೆ ವಿಶಿಷ್ಟ್ನವಾದುದು. ಅಂತಾರಾಷ್ಟ್ರೀಯ ವರ್ಚಸ್ಸಿರುವ ಲೇಖಕ ಅವರು. ಜ್ಞಾನಪೀಠಕ್ಕೆ ಮುನ್ನವೇ ಅವರು ತಮ್ಮ ಕ್ಷೇತ್ರದಲ್ಲಿ ಮಿಂಚಿದವರು. ಆನಂತರ ಅವರಿಗೆ ಜ್ಞಾನಪೀಠ ಸಿಕ್ಕಿತು. ಲಾಬಿಯಿಂದಲೇ ಸಿಕ್ಕಿತು ಎಂದೇ ಇಟ್ಟುಕೊಳ್ಳೋಣ. ಅರೆ! ರಾಷ್ಟ್ರಮಟ್ಟದಲ್ಲಿ ಅದೆಷ್ಟೋ ಹಿರಿಯ, ವರ್ಚಸ್ಸುಳ್ಳ ಸಾಹಿತಿಗಳ ನಡುವೆ ನಮ್ಮ ಸಾಹಿತಿಗಳು ಲಾಬಿ ಮಾಡಬಲ್ಲರು ಎನ್ನುವುದು ಸಣ್ಣ ವಿಷಯವೇನೂ ಅಲ್ಲ. ಇಂದು ಕನ್ನಡ ಶಾಸ್ತ್ರೀಯ ಭಾಷೆಯಾಗಬೇಕು ಎನ್ನುವಾಗ ಮೇಲಿನ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು ಸರಕಾರ ಲಾಬಿ ಮಾಡಿತು. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಾಹಿತ್ಯ, ಕಲೆ, ಭಾಷೆಗಳಿಗಾಗಿ ಲಾಬಿ ಮಾಡುವವರಿದ್ದರೆ ಅದು ನಮ್ಮ ಹೆಗ್ಗಳಿಕೆಯೇ ಸರಿ.
ಕುಂವೀ ಅವರ ಮೂರನೆಯ ಅಸಮಾಧಾನ, ಶಾಲಾ ಕಾಲೇಜುಗಳಲ್ಲಿ, ಕಚೇರಿಗಳಲ್ಲಿ ಬರೇ ಈ ಎಂಟು ಲೇಖಕರ ಫೋಟೋಗಳನ್ನು ತೂಗು ಹಾಕುವುದರ ಬಗ್ಗೆ. ಈ ಕಚೇರಿಗಳಲ್ಲಿ, ಶಾಲೆಗಳಲ್ಲಿ, ಬಸ್‌ಗಳಲ್ಲಿ ಫೋಟೋಗಳನ್ನು ತೂಗು ಹಾಕುವುದೇ ನನ್ನ ದಷ್ಟಿಯಲ್ಲಿ ಮಹಾಪರಾಧ. ಈ ಫೋಟೋಗಳು ನಿಧಾನಕ್ಕೆ ಒಂದು ಅಭಿಪ್ರಾಯವನ್ನೂ ರೂಪುಗೊಳಿಸುತ್ತದೆ. ಕುಂವೀ ಹೇಳಿದ ಮಾತಿನಲ್ಲಿ ಸತ್ಯವಿದೆ. ಆದರೆ ಈಗ ಇರುವ ಎಂಟು ಫೋಟೋಗಳು ಕನ್ನಡ ಸಾಹಿತ್ಯದ ಹರಿವನ್ನು ಪ್ರಾತಿನಿಧಿಕವಾಗಿ ತೋರಿಸುತ್ತದೆ. ನವೋದಯವನ್ನು ಪ್ರತಿನಿಧಿಸಿ ಕುವೆಂಪು ಇದ್ದಾರೆ. ಆ ಬಳಿಕದ ದಿನಗಳನ್ನು ಸ್ಮರಿಸಲು ಮಾಸ್ತಿ, ಬೇಂದ್ರೆ, ಗೋಕಾಕ್‌ನಂಥವರು ಇದ್ದಾರೆ. ಹಾಗೆಯೇ ಆಧುನಿಕ ಕಾಲಘಟ್ಟವನ್ನು ಸ್ಮರಿಸಲು ಅನಂತಮೂರ್ತಿ, ಕಾರ್ನಾಡ್ ಇದ್ದಾರೆ. ಆದರೂ ಮಕ್ಕಳ ಮನಸ್ಸಿನಲ್ಲಿ ಈ ಸಾಹಿತಿಗಳ ಕುರಿತಂತೆ ಪೂರ್ವಾಗ್ರಹವನ್ನು ಈ ಫೋಟೋಗಳು ಬಿತ್ತಬಹುದು. ಈ ಲೇಖಕರಷ್ಟೇ ಕನ್ನಡದ ಅಧಿಪತಿಗಳು ಎಂದು ಅವರನ್ನು ತಪ್ಪು ದಾರಿಯೆಡೆಗೆ ಕೊಂಡೊಯ್ಯಬಹುದು. ಆ ಕಾರಣಕ್ಕೆ ಈ ಎಲ್ಲ ಫೋಟೋಗಳನ್ನು ತೆಗೆಯಬೇಕು ಎಂದು ಕುಂವೀ ಹೇಳಿದರೆ ಅದನ್ನು ನಾನು ಬೆಂಬಲಿಸುತ್ತೇನೆ. ಆದರೆ ಕುಂವೀ ಅವರಿಗೆ ಗೊತ್ತೇ ಇರುವ ಒಂದು ಸಂಗತಿ ಇಂದು ಶಾಲೆಯ ಒಳಗೆ ಮತ್ತು ಶಾಲೆಯ ಅಂಗಳಗಳಲ್ಲಿ ನಡೆಯುತ್ತಿವೆ. ಅದೇನೆಂದರೆ ಕೆಲವು ರಾಜಕೀಯ ಅಜೆಂಡಾಗಳು ತಮ್ಮ ತಮ್ಮ ವಿಚಾರಧಾರೆಗಳನ್ನು ತುರುಕಲು ಯತ್ನಿಸುತ್ತಿರುವುದು. ಈ ಎಂಟು ಫೋಟೋಗಳನ್ನು ಕಿತ್ತೊಗೆಯೋದು ಸುಲಭ. ಆದರೆ ನಾಳೆ ಈ ಎಂಟು ಫೋಟೋಗಳ ಬದಲಿಗೆ ಬಂದು ಯಾವ ಫೋಟೋಗಳು ಕುಳಿತುಕೊಳ್ಳುತ್ತವೆ ಎನ್ನುವುದರ ಕುರಿತಂತೆ ಕುಂವೀ ಅವರಿಗೆ ಅರಿವಿದೆಯೆ? ಅಥವಾ ಈ ಎಂಟು ಫೋಟೋಗಳ ಮಧ್ಯೆ ಇನ್ನಷ್ಟು ಫೋಟೋಗಳು ಬಂದು ಕೂರಬೇಕು ಎಂದಾಗ, ನನ್ನ ಅಥವಾ ಕುಂವೀ ಮನದಲ್ಲಿರುವ ಫೋಟೋಗಳೇ ಬೇರೆಯಾಗಿರುತ್ತವೆ. ಉದಾಹರಣೆಗೆ ಅಲ್ಲಿ ಇನ್ನಷ್ಟು ಪೋಟೋಗಳು ಎಂದಾಗ ನನಗೆ ದೇವನೂರು, ಕುಂವೀ, ನಿಸಾರ್ ಅಹಮದ್, ಕಣವಿ, ಜಿಎಸ್‌ಎಸ್, ಬೊಳುವಾರು, ಸಾರಾ ಅಬೂಬಕರ್ ಮೊದಲಾದವರ ಚಿತ್ರಗಳು ಕಣ್ಣಲ್ಲಿ ಮೂಡುತ್ತವೆ. ಆದರೆ ಇಂದು ಶಾಲೆಗಳಲ್ಲಿರುವ ಶಿಕ್ಷಕರು ಎಂತೆಂತಹ ಕೊಳೆದ ರಾಜಕೀಯ ಅಜೆಂಡಾಗಳನ್ನು ಹೊತ್ತವರಿದ್ದಾರೆ ಎನ್ನುವುದನ್ನು ನಾನಿಲ್ಲಿ ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಇನ್ನಷ್ಟು ಫೋಟೋಗಳು ಇಡಬೇಕೆಂದಾಗ, ಆ ಸಾಲಿಗೆ ಮೊತ್ತ ಮೊದಲಾಗಿ ಬಂದು ವಕ್ಕರಿಸುವುದು ಆವರಣ, ಕವಲುವಿನಂತಹ ಮನುಷ್ಯ ವಿರೋಧಿ ಬರಹಗಳನ್ನು ಬರೆದ ಭೈರಪ್ಪರ ಫೋಟೋ. ಬಳಿಕ, ಹೊ.ವೆ. ಶೇಷಾದ್ರಿ, ಗೊಳ್ವಾಳ್ಕರ್, ವೀರಸಾವರ್ಕರ್ ಬಂದು ಕೂತರೂ ಅದರಲ್ಲಿ ಅಚ್ಚರಿಯಿಲ್ಲ.
 
ವಿವೇಕಾನಂದರನ್ನು ಕಲಿಸುವ ನೆಪದಲ್ಲಿ ಮನುಶಾಸ್ತ್ರದ ಪಾಠಗಳನ್ನು ಇಂದು ಶಾಲೆಗಳಲ್ಲಿ ಕಲಿಸುವ ಪ್ರಯತ್ನ ನಡೆಯುತ್ತಿದೆ. ನಾವಿಂದು ದೊಡ್ಡ ಧ್ವನಿಯಲ್ಲಿ ಒಟ್ಟಾಗಿ ಮಾತನಾಡಬೇಕಾದುದು ಇದರ ಕುರಿತಂತೆ. ಹಾಗೆಯೇ ಈ ಎಂಟು ಫೋಟೋಗಳನ್ನು ತೆಗೆಯುವುದು ಹೌದು. ಹಾಗೆಯೇ ಆ ಜಾಗದಲ್ಲಿ ಇನ್ನಾವ ಫೋಟೋಗಳೂ ಬಂದು ಕೂರದ ಹಾಗೆಯೂ ನಾವು ಜಾಗರೂಕತೆ ವಹಿಸಬೇಕಾಗುತ್ತದೆ. ಯಾಕೆಂದರೆ ಎಲ್ಲಿ ಜಾಗ ಖಾಲಿ ಇದೆಯೋ ಅಲ್ಲಿ ಮನು ವಾದಿಗಳು ತಮ್ಮದನ್ನು ತುರುಕಲು ತುದಿಗಾಲಿನಲ್ಲಿ ನಿಂತಿದ್ದಾರೆ. ನಮ್ಮ ವಿದ್ಯಾರ್ಥಿಗಳು ಮತ್ತೆ ಅವರ ಕೈವಶವಾಗಬಾರದು. ಆದುದರಿಂದ ಆ ಫೋಟೋಗಳನ್ನು ಕಿತ್ತು ಹಾಕುವುದು ಒಳ್ಳೆಯದು. ಜೊತೆಗೇ ಆ ಜಾಗದಲ್ಲಿ ಬರೇ ಗಾಂಧಿ ಮತ್ತು ಅಂಬೇಡ್ಕರ್ ಅವರ ಫೋಟೋವನ್ನಷ್ಟೇ ಪ್ರತಿಷ್ಠಾಪಿಸಬೇಕು. ಹೀಗೆ ಒತ್ತಾಯಿಸುವ ದಿಟ್ಟತನ ಕುಂವೀ ಅವರಲ್ಲಿ ಬೇಕಾಗಿದೆ. ಇದು ಇಲ್ಲಿಗೆ ಮುಗಿಯಬೇಕಾಗಿಲ್ಲ. ಕನ್ನಡ ರಾಜ್ಯೋತ್ಸವದಂತಹ ನಾಡಹಬ್ಬಗಳಲ್ಲಿ ಹೇಗೆ ವೈದಿಕ ಸಂಕೇತಗಳು ತುರುಕಲ್ಪಟ್ಟಿವೆ ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ನಾಡಿನ ರೂಪಕವಾಗಿ ಸರಕಾರಿ ಶಾಲೆಗಳಲ್ಲಿ ದುರ್ಗೆಯ, ಚಾಮುಂಡೇಶ್ವರಿಯ ಪೋಟೋಗಳನ್ನಿಟ್ಟು, ಅದರ ಮುಂದೆ ಬ್ರಾಹ್ಮಣರ ಕೈಯಿಂದ ತೆಂಗಿನಕಾಯಿ ಒಡೆಸುವ, ಮಂಗಳಾರತಿ ಎತ್ತುವ ಕಾರ್ಯಕ್ರಮಗಳೂ ಜರಗುತ್ತಿವೆ. ರಾಷ್ಟ್ರೀಯ ಸಂಕೇತಗಳ ಬದಲಾಗಿ, ಅಲ್ಲಿ ವೈದಿಕ ಸಂಕೇತಗಳನ್ನು ತುರುಕುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ. ಶಾಲೆಯೆನ್ನುವುದು ಎಲ್ಲ ಜಾತಿ ಧರ್ಮಗಳು ಒಟ್ಟು ಸೇರುವ ಬಯಲು. ಅಲ್ಲಿ ಇಂತಹ ಸಂಕೇತಗಳನ್ನು, ಫೋಟೋಗಳನ್ನು ತಂದಿಟ್ಟು ಕೆಲವರನ್ನು ಅನ್ಯರನ್ನಾಗಿಸುವ ಪ್ರಯತ್ನ ನಡೆಯುತ್ತಿದೆ. ಶಾಲೆಗಳಲ್ಲಿ ನಡೆಯುತ್ತಿರುವ ಇಂತಹ ಗಂಭೀರ ಪ್ರಮಾದಗಳನ್ನು ಬದಿಗಿಟ್ಟು ಬರೇ ಎಂಟು ಫೋಟೋಗಳು ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡಬಹುದು ಎಂಬ ರೀತಿಯಲ್ಲಿ ಕುಂವೀ ಆತಂಕ ವ್ಯಕ್ತಪಡಿಸುವುದು ನಿಜಕ್ಕೂ ಅಚ್ಚರಿಯೇ ಸರಿ.
 
ಅಷ್ಟೇ ಅಲ್ಲ, ಬೆಂಗಳೂರಿನ ಹೆಚ್ಚಿನ ಸರಕಾರಿ ಕಚೇರಿಗಳನ್ನೊಮ್ಮೆ ಕುಂವೀ ಅವರು ಕಣ್ಣು ಬಿಟ್ಟು ನೋಡಲಿ. ಅಲ್ಲಿ ಪ್ರತಿಷ್ಠಾಪನೆಗೊಂಡಿರುವ ವೈದಿಕ ದೇವರ ಫೋಟೋಗಳು ಏನನ್ನು ಪ್ರತಿಪಾದಿಸುತ್ತವೆ ಸಂವಿಧಾನವೇ ದೇವರು ಎಂದು ತಿಳಿದುಕೊಂಡ ಕಚೇರಿಗಳಲ್ಲಿ ಪ್ರತಿವಾರ ಪೂಜೆಗಳು, ಹೋಮ ಹವನಗಳು ನಡೆಯುತ್ತವೆ. ತಮ್ಮ ಕೆಲಸದ ಅವಧಿಯಲ್ಲಿ ಗಂಟೆ ಬಾರಿಸಿ, ಪ್ರಸಾದ ಹಂಚುತ್ತಿರುತ್ತಾರೆ. ಇಂದು ನಾವು ಆದ್ಯತೆಯಿಂದ ಮಾತನಾಡಬೇಕಾದುದು ಇವುಗಳ ಕುರಿತಂತೆ. ಆ ಫೋಟೋಗಳನ್ನು ಕಿತ್ತೆಸೆದು ಅಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಫೋಟೋಗಳನ್ನು ಪ್ರತಿಷ್ಠಾಪಿಸುವ ಕಡೆಗೆ ನಾವು ಹೊರಳಬೇಕು. ಕುಂವೀ ಮಾತುಗಳು ಸಂಘಪರಿವಾರಕ್ಕೆ ಯಾಕೆ ಇಷ್ಟವಾಗುತ್ತದೆ ಎಂದರೆ, ತಮ್ಮ ಮಾತುಗಳಲ್ಲಿ ಕುಂವೀ ಅವರು ಗೊತ್ತಿದ್ದೋ ಗೊತ್ತಿಲ್ಲದೆಯೋ ಅವರಿಗೆ ಲಾಭವಾಗುವ ಕೆಲವು ಮಾರ್ಗಗಳನ್ನು ತೆರೆದಿಟ್ಟಿದ್ದಾರೆ. ಮುಖ್ಯವಾಗಿ ಜ್ಞಾನಪೀಠಿಗಳ ಸಾಲಿನಲ್ಲಿ ಆವರಣ, ಕವಲು ಎಂಬಂತಹ ಆರೆಸ್ಸೆಸ್‌ನ ಅಜೆಂಡಾಗಳನ್ನೇ ಕಾದಂಬರಿ ರೂಪದಲ್ಲಿ ಬರೆದ ಭೈರಪ್ಪನ್ನು ಪ್ರತಿಷ್ಠಾಪಿಸುವುದಕ್ಕೆ ಸಾಧ್ಯವಾಗುತ್ತದೆ. ಈಗಾಗಲೇ ಕೆಲವು ಪತ್ರಿಕೆಗಳು ಜ್ಞಾನಪೀಠಕ್ಕೆ ಪರ್ಯಾಯವಾಗಿ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಮುಂದೆ ತರಲು ಕಾರ್ಯಯೋಜನೆಯನ್ನು ಹಾಕಿಕೊಂಡಿವೆ. ಇಂತಹ ಒಳ ರಾಜಕಾರಣಕ್ಕೆ ಕುಂವೀ ಮಾತುಗಳು ಬಲಿಯಾಗಬಾರದು ಎನ್ನುವ ಕಾರಣಕ್ಕಾಗಿಯೇ ನಾನು ಅವರ ಹೇಳಿಕೆಗಳನ್ನು ಬಲವಾಗಿ ಖಂಡಿಸಿದ್ದೇನೆ. ಈಗಲೂ ಖಂಡಿಸುತ್ತೇನೆ.
 

‍ಲೇಖಕರು G

19 February, 2014

9 Comments

  1. Ananda Prasad

    ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತ ಇದೆ. ಜ್ಞಾನಪೀಠ ಪ್ರಶಸ್ತಿ ನಾನ್ಸೆನ್ಸ್ ಪ್ರಶಸ್ತಿಯೆನೋ ಅಲ್ಲ. ಇದುವರೆಗಿನ ಬೇರೆಬೇರೆ ಭಾಷೆಗಳ ಜ್ಞಾನಪೀಠ ಪ್ರಶಸ್ತಿ ವಿಜೇತರ ಪಟ್ಟಿ ಮತ್ತು ಅವರ ಸಾಹಿತ್ಯ ನೋಡಿದರೆ ಇದು ಎಲ್ಲೆಯೂ ಅಯೋಗ್ಯರಿಗೆ, ಪ್ರತಿಭೆ ಹಾಗೂ ಸಾಧನೆ ಮಾಡಿರದವರಿಗೆ ಸಿಕ್ಕಿಲ್ಲ. ಭಾರತದ ಬೇರೆ ಬೇರೆ ಭಾಷೆಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದವರ ಸಾಹಿತ್ಯ ಓದುವುದೆಂದರೆ ಉತೃಷ್ಟ ಸಾಹಿತ್ಯವನ್ನು ಓದಿದ ಅನುಭವ ಆಗುತ್ತದೆ. ಹೀಗಾಗಿಯೇ ಇದು ಭಾರತದ ಅತ್ಯುಚ್ಛ ಸಾಹಿತ್ಯ ಪ್ರಶಸ್ತಿಯಾಗಿ ಪರಿಗಣಿತವಾಗಿದೆ. ಈ ಪ್ರಶಸ್ತಿಯು ಸಂಕುಚಿತ ಮನೋಭಾವನೆ ಬಿತ್ತುವ, ಪ್ರತಿಗಾಮಿ ಹಾಗೂ ಪುರೋಹಿತಶಾಹೀ ಮನೋಭಾವದ ಲೇಖಕರಿಗೆ ಸಿಕ್ಕಿಲ್ಲ. ಸಾಹಿತ್ಯವು ಸಂಕುಚಿತ ಮನೋಭಾವನೆ, ಪ್ರತಿಗಾಮಿ ಮನೋಭಾವನೆ ಹಾಗೂ ಪುರೋಹಿತಶಾಹೀ ಮನೋಭಾವನೆಯನ್ನು ಬಿತ್ತಬಾರದು. ಇದು ಸಾಹಿತ್ಯದ ಸಾರ್ವಕಾಲಿಕ ಗುಣ ಆಗಿರಬೇಕು. ಈ ಹಿನ್ನೆಲೆಯಿಂದ ನೋಡಿದರೆ ಜ್ಞಾನಪೀಠ ಪ್ರಶಸ್ತಿ ಸಂಕುಚಿತ ಮನೋಭಾವನೆ ಬಿತ್ತುವ, ಪುರೋಹಿತಶಾಹೀ ಮನೋಭಾವನೆ ಬಿತ್ತುಅವ ಲೇಖಕರಿಗೆ ಒಮ್ಮೆಯೂ ಸಿಕ್ಕಿಲ್ಲ. ಹೀಗಾಗಿಯೇ ಈ ಪ್ರಶಸ್ತಿಯು ತನ್ನ ಘನತೆಯನ್ನು ಕಾಯ್ದುಕೊಂಡಿದೆ.

  2. mmshaik

    yes..nannadu ade abhipraya..namma kavigaLu yaake vishaala bhavane hondilla..?!photo haakiddu jnynapeeta padeda kavigaLu karnaatakada hemmeya kavigaLu..anta haakirodu. avarste kannadada kavigaLu anta haakilla..satya taane.. kumvi avare adakkeke aatanka..? aatankakke oLpaduvva aneka ghatanegLu nadeyuttiruvaaga..

  3. h a patil

    – ಜ್ಞಾನಪೀಠ ಪ್ರಶಸ್ತಿ ರಾಷ್ಟ್ರೀಯ ಪ್ರಶಸ್ತಿಯೇನೂ ಅಲ್ಲ, ಅದು ಜೈನ ಸಮುದಾಯದ ಪ್ರತಿಷ್ಟಾನವೊಂದು ಕೊಡಮಾಡುವ ಆಗಿನ ಕಾಲದ ಬಹು ದೊಡ್ಡ ಮೊತ್ತದ ಪ್ರಶಸ್ತಿ, ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ಗಳಾದರೆ ವಶೀಲಿಬಾಜಿ ಮಾಡುತ್ತಾರೆ ಆ ಮೂಲಕ ಪಡೆಯುತ್ತಾರೆ ಎಂಬ ವಾದವನ್ನೇನೋ ಒಪ್ಪಬಹುದು. ಆದರೆ ಸಮುದಾಯವೊಂದರ ಪ್ರತಿಷ್ಟಾನದಲ್ಲಿ ಲಾಬಿ ನಡೆದಿದೆ ಎಂದು ಆರೋಪಿಸುವುದು ಆ ಪ್ರತಿಷ್ಟಾನಕ್ಕೆ ಮಾಡುವ ಅವಮಾನವೆನಿಸುತ್ತದೆ. ಇನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಫೋಟೋಗಳನ್ನು ಶಾಲೆಗಳಲ್ಲಿ ಮತ್ತು ಇತರೆಡೆ ತೂಗು ಹಾಕುವುದು ಅದು ಆ ಫೋಟೊಗಳನ್ನು ತೂಗು ಹಾಕುವವರ ವಿವೇಚನೆಗೆ ಬಿಟ್ಟ ವಿಷಯ. ಅದಕ್ಕೂ ಜ್ಞಾನಪೀಠ ಪುರಸ್ಕೃತರನ್ನು ಹೊಣೆಗಾರರನ್ನಾಗಿ ಮಾಡುವುದು ಎಷ್ಟರಮಟ್ಟಿಗೆ ಸರಿ ಎನ್ನುವ ಸಂಶಯ ಕಾಡುತ್ತದೆ.

  4. RudraSimha

    kumvi ravru thamma lekandalli “nonsense” pada yake balke ‘madide’ ennuva bagge thilisilla…., bashiravara abiprayakke nanna sahamthavide, sarakaari kacherigalalli puje homa havana maduvudu sammidhana virodhi……,

  5. Naren

    Anathamurthy yavara bagge kannadigarige gourava irabeku, ide. Adu kannada sahithigaligu kooda anvahisuthade. Knnada sahithigalu swalpa jaathi, hana mathu ahankaaragalannu badigothhi, kannadada bagge gourava belesuvudu uttama. URA avara barahgalannu oledida yava obba saamnya kanndiganu saha avara jananapeetavannu samshayadinda nodalara! kum vee URA awara yella barahagalannu odiruvare??

  6. anche kotresh

    KUM VEE AVARA MAATU 100 KKE 50 PERCENT SATYA

  7. M.A.Sriranga

    ಬಶೀರರ ಲೇಖನಕ್ಕೆ ಸಂಬಂಧಿಸಿದಂತೆ —–(‘ಲಂಕೇಶರಿಂದಲೂ ಟೀಕೆಗೆ ಒಳಗಾದವರು ಅನಂತಮೂರ್ತಿ’–ಬಶೀರ್) ಲಂಕೇಶರು ಕನ್ನಡ ಸಾಹಿತಿಗಳಿಗೆ, ಕನ್ನಡ ಸಾಹಿತ್ಯಕ್ಕೆ ಒಂದು ಸಾಕ್ಷಿ ಪ್ರಜ್ಞೆಯೇ?. ಹೇಗೆ? ಅನಂತಮೂರ್ತಿಯವರ ಹುಟ್ಟುಹಬ್ಬದ ಒಂದು ಸಂದರ್ಭದಲ್ಲಿ ಅವರ ಜತೆ ಅಕಾರಣವಾಗಿ ಜಗಳ ತೆಗೆದು ಲಂಕೇಶರು ಅವಮಾನ ಮಾಡಿದ್ದರು. ಅನಂತಮೂರ್ತಿಯವರನ್ನು ಯಾರು ಆಹ್ವಾನಿಸಿದ್ದರೋ ಅವರಿಗೇ ಲಂಕೇಶರ ಈ ”ಸಾಕ್ಷಿ ಪ್ರಜ್ಞೆಯ ಟೀಕೆ ಬೇಸರ ಹುಟ್ಟಿಸಿತ್ತು”. ಇದರ ಬಗ್ಗೆ ಲಂಕೇಶರ ಪರಮ ಆಪ್ತರೇ ತಮ್ಮ ಪುಸ್ತಕಗಳಲ್ಲಿ ದಾಖಲಿಸಿದ್ದಾರೆ. ತಾವು ಓದಿರಬಹುದು. ಅನಂತಮೂರ್ತಿಯವರು ಅಲ್ಲಿ ಯಾವುದೇ ಭಾಷಣ ಮಾಡುವುದಕ್ಕೆ ಬಂದಿರಲಿಲ್ಲ. ಕುಂವೀ ಅವರು ತಮ್ಮ ಟೀಕೆಯನ್ನು ಕೇವಲ ಜ್ಞಾನಪೀಠ ಮತ್ತು ಲಾಬಿಗೆ ಸೀಮಿತಗೊಳಿಸಿದ್ದರು. ಆದರೆ ಬಶೀರ್ ಅವರು ಅದನ್ನು ತಮ್ಮ ”ಅಹಿಂದ” ಅಜೆಂಡಾ ತನಕ ವಿಸ್ತರಿಸಿದ್ದಾರೆ. ರಾಜ್ಯೋತ್ಸವದಂದು ದುರ್ಗೆ,ಚಾಮುಂಡೇಶ್ವರಿಯ ಫೋಟೋಗಳನ್ನು ಪೂಜಿಸುವ ಸಂಪ್ರದಾಯ ಬಿಡಬೇಕೆಂದು ಖಂಡ ತುಂಡವಾಗಿ ಹೇಳಿದ್ದಾರೆ. ಇದೇ ಧೈರ್ಯವನ್ನು ಇತರೆ ಧರ್ಮಗಳ ಬಗ್ಗೆಯೂ ಸಮಯ ಬಂದಾಗ ಹೇಳಬಲ್ಲರೆ? ಅದೂ ಬೇಡ, ಕುಂವೀ,ಅನಂತಮೂರ್ತಿ ಮತ್ತು ಕಾರ್ನಾಡರ ಜಾಗದಲ್ಲಿ ”ಅಹಿಂದ”ದವರು ಇದ್ದಿದ್ದರೆ ಇದೇ ರೀತಿ ಲೇಖನ ಬರೆಯುತ್ತಿದ್ದರೆ?—-ಮು ಅ ಶ್ರೀರಂಗ ಬೆಂಗಳೂರು.

  8. M.A.Sriranga

    ಪ್ರಿಯರಾದ ಬಶೀರ್ ಅವರೇ – ತಾವು ಸಾಕ್ಷಿ ಪ್ರಜ್ಞೆ ಎಂದು ಭಾವಿಸಿರುವ ಸಾಹಿತಿಗಳ ಆತ್ಮ ಕಥೆ ಓದಿರುತ್ತೀರಿ ಎಂದು ನಂಬಿದ್ದೇನೆ. ಅವುಗಳನ್ನು ಓದಿದಮೇಲೂ ಅವರುಗಳನ್ನು ನಿಮ್ಮ role model ಆಗಿ ಇಟ್ಟುಕೊಳ್ಳಲು ಆಸೆ ಪಡುತ್ತೀರಾ?

  9. ಟಿ.ಕೆ.ಗಂಗಾಧರ ಪತ್ತಾರ

    “ಶಾಲಾ ಕಾಲೇಜುಗಳಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಫೋಟೋಗಳನ್ನು ಛಾಪಿಸಿ, ಇವರೇ ಅಂತಿಮ ಎಂದು ಘೋಷಿಸುವುದು ಎಷ್ಟು ಸರಿ?”-ಈ ಕುಂ.ವೀ.ಪ್ರಶ್ನೆಯೇ ಅನುಚಿತ. “ಇವರೇ ಅಂತಿಮ ಎಂಬ ಘೋಷಣೆ ಎಲ್ಲಿದೆ? ಸ್ವಾಮೀ”. ಇದುವರೆಗೆ ಜ್ಞಾನಪೀಠ ಪುರಸ್ಕೃತರಿವರೆಂದು ವಿದ್ಯಾರ್ಥಿಗಳ ತಿಳುವಳಿಕೆಗಾಗಿ ಫೋಟೋ ಹಾಕುವುದೂ ತಪ್ಪೇ?. ಒಂಬತ್ತು, ಹತ್ತು ಹೀಗೆ ಇನ್ನೂ ಎಷ್ಟು ಜ್ಞಾನಪೀಠಗಳು ಬಂದರೂ ಆಗ ಪರಿಷ್ಕೃತ ಜ್ಞಾನಪೀಠಿಗಳ ಫೋಟೋ ಬರುವುದಿಲ್ಲವೇ? ಇವರು ಮೂವರು ರಾಷ್ಟ್ರಕವಿಗಳು-ಎಂದು ಗೋವಿಂದ ಪೈ, ಕುವೆಂಪು, ಜಿ.ಎಸ್.ಎಸ್.ಫೋಟೋ ಹಾಕುವುದೂ ತಪ್ಪೇನು?. ‘ಸುಗತ’ ಮಹಾನುಭಾವರಂತೂ ಜಿ.ಎಸ್.ಎಸ್.ಕನ್ನಡದ ಕೊನೆಯ ರಾಷ್ಟ್ರಕವಿ ಎಂದು ಭರತವಾಕ್ಯ ಬರೆದೇಬಿಟ್ಟರು! ಕಾಕತಾಳೀಯವೆಂಬಂತೆ ರಾಷ್ಟ್ರಕವಿ-ಆಯ್ಕೆ ಸಮಿತಿಯ-‘ಕೋಚೆ’ಯವರು ತಮ್ಮದೇ ಪರಮಾಧಿಕಾರವೆಂಬಂತೆ -ರಾಷ್ಟ್ರಕವಿ-ಬಿರುದು ನೀಡುವ ಅಗತ್ಯವೇನಿದೆ? ಎಂದು ಸರ್ಕಾರವನ್ನೇ ದಿಕ್ಕುತಪ್ಪಿಸಿಬಿಟ್ಟರು. ಜಿ.ಎಸ್.ಎಸ್.ರವರಷ್ಟೇ ಸಮರ್ಥರಾದ ಕವಿಗಳು ನಮ್ಮಲ್ಲಿಲ್ಲವೆಂಬ ಇವರ ತೀರ್ಮಾನಕ್ಕೆ ಮಾನದಂಡವೇನೋ?, ಕನ್ನಡಿಗರು ಏನು ಹೇಳಿದರೂ ತಲೆಯಾಡಿಸಿ ಒಪ್ಪಿಬಿಡುವ “ಕುರಿಗಳು” ಎಂದು ಇವರು ಭಾವಿಸಿರುವುದು ಸಮಕಾಲೀನ ಸಾಹಿತ್ಯ ಸಂದರ್ಭದ ಬಹುದೊಡ್ಡ ದುರಂತ! ಇಂತಹವರ ಬೇಕಾಬಿಟ್ಟಿ ಏಕಮುಖ ತೀರ್ಮಾನಗಳಿಂದ ಎಷ್ಟೋ ಸಮರ್ಥರು ರಾಷ್ಟ್ರಕವಿ ಬಿರುದುವಂಚಿತರಾಗಬೇಕಾಯ್ತು. ನಮ್ಮ ವಾಙ್ಮಯಲೋಕದಲ್ಲಿನ ಇತ್ತೀಚಿನ ವಿದ್ಯಮಾನಗಳೇ ವಿಚಿತ್ರವಾಗಿವೆ. ಅವಧಿಯಲ್ಲಿ “ಶಾಖಾಹಾರ-ಪವಿತ್ರ, ಮಾಂಸಾಹಾರ-ಅಪವಿತ್ರ”-ದಂತಹ ವಿಚಿತ್ರಗಳು ಚರ್ಚೆಗಳ ಅಗತ್ಯವಿದೆಯೇ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading