ಕಿ.ರಂ.ನಾಗರಾಜ; ಸಂಸ್ಕೃತಿಗಳ ಶ್ರೇಷ್ಠ ಅನ್ವೇಷಕ
(ಡಿ.೨೪ ಅವರ ಜನ್ಮದಿನ)
ಬಹಳ ವರ್ಷಗಳ ಹಿಂದೆ. ಅದು ಕಾವ್ಯ ನನ್ನೊಳಗೆ ಹುಟ್ಟಿ ಬರೆಯೆಂದು ಒತ್ತಾಯಿಸಿ ಬರೆಸಲು ಶುರು ಮಾಡಿದ ಕಾಲ. ಹಳ್ಳಿಗಾಡಿನಲ್ಲಿ ಇದ್ದುಕೊಂಡು ಸಮರ್ಪಕವಾದ ಏನೊಂದನ್ನೂ ಓದಲು ಆಗದೆ, ಮೂರು ಮೈಲಿ ದೂರ ಮಾಲೂರು ಪೇಟೆಗೆ ಭಾನುವಾರದಂದು ನಡೆದುಕೊಂಡು ಹೋಗಿ ಮುನಿಸಿಪಲ್ ಆಫೀಸಿನಲ್ಲಿ ತರಿಸುತ್ತಿದ್ದ ದಿನ ಪತ್ರಿಕೆಗಳ ಪುರವಣಿಗಳನ್ನೆಲ್ಲ ಗಬಗಬ ಓದಿ ಬಸ್ ಸ್ಟಾಂಡಿಗೆ ಬಂದು ಅಂಗಡಿಯಲ್ಲಿ ತೂಗುಹಾಕಿದ ಸಾಪ್ತಾಹಿಕ, ಮಾಸಿಕಗಳನ್ನು ಅಜಮಾಯಿಶಿ ಮಾಡಿ ನೋಡಿ, ಅವುಗಳಲ್ಲಿ ಯಾವುದರಲ್ಲಾದರೂ ನನ್ನದೋ, ನನಗೆ ಬೇಕಾದವರದೋ ಏನಾದರೂ ಇದ್ದರೆ ಕೊಂಡು, ದಾರಿಯುದ್ದ ಓದುತ್ತಾ ಮಧ್ಯಾಹ್ನದ ಊಟದ ಸಮಯಕ್ಕೆ ಊರಿಗೆ ಮರಳುತ್ತಿದ್ದೆ. ಕಾಲಿಗೆ ಕಣ್ಣಿದ್ದವೆಂಬಂತೆ ದಾರಿ ಕಾಲಿಗೆ ಒಗ್ಗಿಹೋಗಿತ್ತು. ಆಗೆಲ್ಲ ಒಂದು ರೂಪಾಯಿ ಕೈಲಿದ್ದರೆ ಹೆಚ್ಚು. ಬಸ್ಸಿಗೆ ನಾಲ್ಕು ನಾಲ್ಕು ಆಣೆ – ಎಂಟಾಣೆ – ತೆತ್ತು ಮೈಲಿ ದೂರದ ಚವ್ವೇನಹಳ್ಳಿ ಗೇಟಿನಲ್ಲಿ ಬಸ್ಸಿಳಿದು ಹತ್ತಿ ಮಾಡುವುದಕ್ಕಿಂತ ಮೂರು ಮೈಲಿ ನಡಿಗೆಯೇ ವಾಸಿ ಎಂದು ನಾನು ನಿರ್ಧರಿಸಿಕೊಂಡಿದ್ದೆ.
ಆಗ ಯು ಆರ್ ಅನಂತಮೂರ್ತಿಯವರು ಮೈಸೂರಿನಲ್ಲಿದ್ದರು. ರುಜುವಾತು ಪತ್ರಿಕೆಯೂ ಅಲ್ಲಿಂದ ಪ್ರಕಟವಾಗುತ್ತಿತ್ತು. ಸರ್ವಮಂಗಳ, ಮೀನಾ ಮೈಸೂರು ಅವರೂ ಮೈಸೂರಿನಲ್ಲೇ ಇದ್ದರು. ಅನಂತಮೂರ್ತಿಯವರ ಹೆಸರಿಗೇ ಒಂದು ಕವಿತೆ ಕಳುಹಿಸಿ ಅವರಿಗೆ ಪ್ರಿಯವಾದರೆ ರುಜುವಾತಿನಲ್ಲಿ ಪ್ರಕಟಿಸಲು ಕೋರಿದ್ದೆ. ಅದು ಮುಂದೆ ರುಜುವಾತಿನಲ್ಲಿ ಪ್ರಕಟವಾಯಿತು ಸಹ. ಪ್ರಕಟಣೆಗೆ ಮುನ್ನ ಅನಂತಮೂರ್ತಿ ನನಗೊಂದು ಇನ್‌ಲ್ಯಾಂಡ್ ಲೆಟರಿನ ತುಂಬ ಒಳ್ಳೆಯ ಮಾತುಗಳುಳ್ಳ ಪತ್ರ ಬರೆದಿದ್ದರು. ಅದರ ಮೇಲೆ ಫೌಂಟನ್ ಪೆನ್ ಕಾರಿದ ಮಸಿಯ ತೊಟ್ಟು ಅರಳಿದ್ದ ಯಂಗ್ ಪ್ರಾಕ್ಟೀಶನರ್‌ಗೆ ತುಂಬ ಉಪಯುಕ್ತವಾದ ಆ ಪತ್ರ ಇನ್ನೂ ನನ್ನ ನೆನಪಲ್ಲಿದೆ.
ಆಮೇಲೆ ಒಮ್ಮೆ ನನ್ನ ಹೆಂಡತಿಯ ತಾಯಿಯ ತವರು ಮನೆಯಾದ ಮೈಸೂರಿಗೆ ಹೋಗುವ ಪ್ರಮೇಯ ಒದಗಿ ಬಂತು. ಅಷ್ಟು ದೂ…ರ ಹೋಗಿರುವಾಗ ಅನಂತಮೂರ್ತಿಯವರನ್ನು ಕಂಡು ಮಾತಾಡಿಸುವ ಆಸೆ ಹುಟ್ಟಿತು. ನನ್ನ ಹೆಂಡತಿಯ ತಮ್ಮನಿಗೆ ಮೈಸೂರಿನ ಪರಿಚಯ ಕೊಂಚ ಇತ್ತಾಗಿ ಅವನೂ ನಾನೂ ಅವರ ಮನೆಗೆ ಹೋದೆವು. ಆಗ ಅವರಿಗೆ ಕೊಂಚ ಅಸೌಖ್ಯವಿತ್ತು. ಹಾಗಾಗಿ ಅಲ್ಲಿದ್ದ ಮೀನಾ ನಮಗೆ ಮೂರು ಘಂಟೆಯ ನಂತರ ಬಂದು ಕಾಣುವ ಸೂಚನೆ ಕೊಟ್ಟರು. ಅಂತೆಯೇ ಮೂರೂಕಾಲಿಗೆ ಅವರ ಮನೆಗೆ ಹೋದೆವು. ಆ ವೇಳೆಗೆ ಅನಂತಮೂರ್ತಿ ಎದ್ದಿದ್ದರು. ತಮ್ಮ ಅನಾರೋಗ್ಯದ ಬಗ್ಗೆ ಒಂದೆರಡು ಮಾತು ಹೇಳಿಕೊಂಡರು. ಆ ಮೇಲೆ ನಮ್ಮನ್ನು ಕುರಿತು ಸವಿಸ್ತಾರ ಕೇಳಿ ತಿಳಿದುಕೊಂಡರು. ನನ್ನೊಡನೆ ಸುಮಾರು ಒಂದೊಂದೂವರೆ ತಾಸು ಉತ್ಸಾಹದಿಂದ ಕಾವ್ಯದ ಕುರಿತು, ಸಾಹಿತ್ಯದ ಅಧ್ಯಯನದ ಕುರಿತು ಮಾತಾಡಿದರು. ಆ ಮೇಲೆ ನಿಮಗೆ ಬೆಂಗಳೂರು ಹತ್ತಿರವಲ್ಲವೇ? ಅಲ್ಲಿ ಕಿರಂ ನಾಗರಾಜರಿದ್ದಾರೆ. ಆತ ಕಾವ್ಯದ – ಅದು ಯಾವುದೇ ಪ್ರಕಾರದ್ದಿರಲಿ, ಯುಗದ್ದಿರಲಿ – ಅದ್ಭುತ ಅನುಸಂಧಾನಕಾರ. ನಿಜಕ್ಕೂ ಆತ ಅಪೂರ್ವ ಕವಿಮಿತ್ರ. ನೀವು ಅವರನ್ನು ಕಾಣಿ. ನಿಮಗೆ ಹೆಚ್ಚು ಹೆಚ್ಚು ಸಮಯ ದೊರೆತರೆ ಅವರ ಜೊತೆ ಹೆಚ್ಚು ಹೆಚ್ಚು ಮಾತಾಡಿ ಎಂದರು. ಈಚೆಗೆ ಒಂದು ಇ-ಮೇಲಿನಲ್ಲಿ ಅದನ್ನು ಅವರಿಗೆ ನೆನಪಿಸಿದೆ. ಅವರಿಗೆ ಆ ದಿನಗಳ ನೆನಪಿನಲ್ಲಿ ಸಂತೋಷವಾದಂತೆ ತೋರಿತು.
ಇದು ಸುಮಾರು ೮೦ರ ದಶಕದ ಪೂರ್ವಭಾಗದಲ್ಲಿ ನಡೆದದ್ದು. ನಂತರದ ದಿನಗಳಲ್ಲಿ ಕನ್ನಡ ಕಾವ್ಯ ಹಲವು ಒಳದಾರಿಗಳನ್ನು ಮಾಡಿಕೊಂಡು, ಅದ್ಭುತ ಶಕ್ತಿವಂತರೂ, ಪ್ರತಿಭಾವಂತರೂ ಆದ ಹಲವಾರು ಕವಿಗಳ ಹೆತ್ತು ಮುನ್ನಡೆದಿದೆ. ಬಂಡಾಯ ದಲಿತ ಆಧುನಿಕೋತ್ತರ ಮುಂತಾದ ಧಾರೆಗಳು, ಮಹಾಕಾವ್ಯಗಳು ಕನ್ನಡವನ್ನು ಶ್ರೀಮಂತಗೊಳಿಸಿವೆ. ಆದರೂ ಅಂದು ಅನಂತಮೂರ್ತಿ ಕಿರಂ ಬಗ್ಗೆ ನುಡಿದ ಮಾತುಗಳು ಯಥಾವತ್ತು ಉಳಿದಿವೆ. ಮತ್ತು ಕಿರಂ ಕನ್ನಡ ಕಾವ್ಯದ ಕಷ್ಟದ ದಿನಗಳಲ್ಲಿಯೂ, ಅದು ಬಿರುಗಾಳಿಗೆ ಸಿಲುಕಿದ ಹಡಗಿನಂತೆ ದಿಕ್ಕು ತಪ್ಪುತ್ತಿದೆ ಎನ್ನಿಸಿದಾಗಲೂ ಕಾವ್ಯದ ಅನ್ವೇಷಕರಿಗೆ ದಾರಿ ತೋರುತ್ತ ಉಳಿದಿದ್ದವರಂತೆ ಈಗಲೂ ಕಂಡಿದ್ದಾರೆ. ಅವರು ಒಬ್ಬ ಬ್ರಿಲಿಯಂಟ್ ಸಂಸ್ಕೃತಿ ಚಿಂತಕನಾದ್ದರಿಂದ, ಗತಿಶೀಲತೆಯನ್ನು ಉಳಿಸಿಕೊಂಡು ಬಂದದ್ದರಿಂದ ನಮ್ಮ ನಡುವೆ ಭಿನ್ನವಾಗಿ ಉಳಿದಿದ್ದವರು. ಈಗಲೂ ಅವರು ಬಿತ್ತಿದ ಕಾವ್ಯ ಚಿಂತನೆಯ ಭಿನ್ನ ಮಾರ್ಗದ ಬೀಜಗಳು ಹಲವೆಡೆ ಅವರು ಅನವರತ ಉದ್ದೇಶಿಸಿದ್ದ ಕಾಯಕಕ್ಕೆ ಆಮ್ಲಜನಕವನ್ನು ಒದಗಿಸುತ್ತಿವೆ.
ಕಿತ್ತಾನೆ ರಂಗಪ್ಪ ನಾಗರಾಜ ಎಲ್ಲರಿಗೂ ಕಿರಂ ಎಂದೇ ಪರಿಚಿತರು. ೨೫ನೇ ಡಿಸೆಂಬರ್ ೧೯೪೪ರಲ್ಲಿ ಹುಟ್ಟಿದ ಕಿರಂ ಬೆಂಗಳೂರು ವಿವಿಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದವರು. ಕಾವ್ಯಮಂಡಲವನ್ನು ಹುಟ್ಟುಹಾಕಿದವರು. ಸಂಸ್ಕೃತಿಯ ಆಳಕ್ಕಿಳಿಯುವ ಅಲ್ಲಿನ ಬೇರೆಯವರಿಗೆ ಗೋಚರಿಸದ ಸತ್ಯ ಸೌಂದರ್ಯಗಳ ಮುತ್ತುಗಳನ್ನು ಹೆಕ್ಕಿ ತರುವ ಕಾಯಕವನ್ನು ಹೊತ್ತುಕೊಂಡಿದ್ದ ಕಿರಂ ತಮ್ಮ ಕೆಲಸದ ಬಗ್ಗೆ ಎಂದೂ ಉದಾಸೀನ ತಳೆದಿರಲಿಲ್ಲ. ಮುತ್ತು ಸಿಕ್ಕುವವರೆಗೂ ಮುಳುಗಿಯೇ ಇರುವೆನೆಂಬ ಅವರು ಹೊತ್ತು ತಂದಿರುವುದು ಜೀವಂತ ಸಂಸ್ಕೃತಿಗಳ ಸಾರವನ್ನು. ಅಲ್ಲಿ ಅವರೊಬ್ಬ ಸಮೃದ್ಧ ಬೆಳೆ ತೆಗೆವ ಸಾವಯುವ ಕೃಷಿಕ. ಅವರಿಗೆ ರಸಗೊಬ್ಬರಗಳ ಆಳ ಪರಿಚಯವಿತ್ತು. ಅದರ ಬಗ್ಗೆ ಎಚ್ಚರವೂ ಇತ್ತು. ಆ ಜ್ಞಾನವನ್ನು ಛಾಪಿಸಿ ಪುಸ್ತಕಗಳಲ್ಲಿ ಕಿರಂ ಹೂತಿಟ್ಟವರಲ್ಲ. ಬದಲಿಗೆ ಅದನ್ನು ತನ್ನ ಬಗಲಿಗೆ ನೇತುಹಾಕಿಕೊಂಡಿರುವ ಜೋಳಿಗೆಯಲ್ಲಿ ತುಂಬಿಕೊಂಡು ಊರೂರು ಅಲೆದು ಬಿತ್ತುವ ಕೈಗಳಿಗೆ ದಾಟಿಸುವ ಜಂಗಮ ಫಕೀರರಾದವರು. ಕಿರಂ ಕೇಳುತ್ತಿದ್ದುದೊಂದೇ: ಕೇಳುವ ಕಿವಿಯಿರುವ ಅಲೋಚಿಸುವ ಮನಸ್ಸು.
ಕಿರಂ ತೋಂಡೀ ಸಂಪ್ರದಾಯದ ಪ್ಯಾಶನೇಟ್ ಶಿಕ್ಷಕ. ಅವರಂಥಹ ಒಳ್ಳೆಯ ತೋಂಡೀಗಳ ಮಾತು ಮಾತನ್ನು ಶುದ್ಧಮಾಡುತ್ತದೆ. ಅಲ್ಲಮನ ಮಾತಿನಲ್ಲಿ ಹೇಳಲೆಂದರೆ, “ಅರಿದೆವರಿದೆವೆಂದಿರಿ, ಅರಿದ ಪರಿಯೆಂತು ಹೇಳಿರೇ”. ಈಗ ಕೇಳಿದರೂ ಕಿರಂ ಹೇಳುತ್ತಾರೆ, ಅದೇ ಧಾಟಿಯಲ್ಲಿ: ಅರಿದೆವರಿದೆವು ನಾವು, ಅದನ್ನೀ ಪರಿಯಲ್ಲಿ. ಆದರೆ ಅದೇ ಸಮಯ ಅಥವಾ ಕೆಲಕಾಲದಲ್ಲೇ ತಮ್ಮದೇ ಆದ ಆಲೋಚನೆಯ ಅದನ್ನು ಮುರಿದು ಇಡೀ ಕಟ್ಟಡವನ್ನು ಬೇರೊಂದು ಬುನಾದಿಯ ಮೇಲೆ ಬೇರೆಯೇ ದೃಷ್ಟಿಕೋನದಲ್ಲಿ ಪುನರ್ನಿಮಿಸಿಬಿಡುತ್ತಾರೆ.
ದಶಕಗಳಿಂದ ನುಡಿವ ನಾಲಗೆಯ ಗ್ರಹಿಕೆಗೆ ಅನುಸಾರವಾಗಿ ಕೃತಿಗಳನ್ನು ದೇಸಿ ಅಥವಾ ಮಾರ್ಗ, ಪೌರಾತ್ಯ ಅಥವಾ ಪಾಶ್ಚಿಮಾತ್ಯ ಮಾರ್ಗಗಳಿಂದ ಪ್ರೇರಿತವಾದ ಮುಂತಾಗಿ ಯಾವುದೇ ನಿಖರ ಅಳತೆಗೋಲಿಲ್ಲದೆ ವರ್ಗೀಕರಣಗೊಂಡ ಕನ್ನಡ ಸಾಹಿತ್ಯವನ್ನು ಇಂತಹ ಕೃತಕ ಗಡಿಗಳಿಂದ ವಿಮೋಚನೆಗೊಳಿಸಿದ್ದು ಕಿರಂರ ಮಹಾನ್ ಸಾಧನೆ ಎನ್ನುವುದು ಅವರ ಸಂಸ್ಕೃತಿ-ವಿಮರ್ಶೆಯನ್ನು ಸೂಕ್ಷ್ಮವಾಗಿ ಗಮನಿಸಿದ ಯಾರಿಗಾದರೂ ಅರಿವಿಗೆ ಬರುವಂಥದ್ದು. ಕಿರಂ ಪಠ್ಯಗಳೊಳಕ್ಕೆ ಪ್ರವೇಶಿಸಲು ಅಗತ್ಯವಾದ ಪರಿಕರಗಳನ್ನು ಕನ್ನಡದ ವಿದ್ಯಾರ್ಥಿಗಳಿಗೆ ಒದಗಿಸಿಕೊಟ್ಟರು. ಆ ಮೂಲಕ ಓದುಗನಿಗೆ ಗಡಿದಾಟುವ ಶಕ್ತಿಯನ್ನು ತಂದು ತುಂಬಿದರು. ಸಾಹಿತ್ಯಕ-ಸಾಂಸ್ಕೃತಿಕ ಕೃತಿಗಳಿಗೆ ಜಂಗಮ ಸಿದ್ಧಾಂತವನ್ನು ಅಳವಡಿಸಿದರು. ಆ ಶಾಶ್ವತವಾಗಲಿರುವ ಒಂದು ಘಳಿಗೆಯ ಸುಖವನ್ನು ಉಣಿಸಿದರು. ಅಲ್ಲಮನೆನ್ನುವಂತೆ ಹಿಂದಿನ ಅನಂತವನು, ಮುಂದಿನ ಅನಂತವನು ಆ ಒಂದು ಘಳಿಗೆಯ ಬಿಂದುವಿನಲ್ಲಿ ಎದೆಗೆ ತುಂಬಿಕೊಳ್ಳುವ ಬಗೆಯನ್ನು ತೆರೆದು ತೋರಿದರು. ಕಿರಂರ ಬಗೆಯಿಂದ ಹೊಸಬಗೆಯ ಬಗೆಯುವುದನ್ನು ಕಲಿತವರು ಬಹುಸಂಖ್ಯೆಯ ವಿದ್ಯಾರ್ಥಿಗಳು, ಅವರಿಂದ ಹೊರಬಂದ ಮೌಲಿಕ ಕೃತಿಗಳ ಸಂಖ್ಯೆಯೂ ಬಹಳವೇ.
ತೋಂಡಿಯನ್ನು ವಿಸ್ತರಣೆಯ ವಿಧಾನವಾಗಿಸಿಕೊಂಡಿದ್ದ ಕಿರಂ ಪೆನ್ನು ಹಿಡಿದಿದ್ದು ಬಹಳ ಕಡಿಮೆ. ಸಾಹಿತ್ಯದ ಸುದೀರ್ಘ ಒಡನಾಟದಲ್ಲಿ ಅವರು ರಚಿಸಿದ ಕೃತಿಗಳು ಕೆಲವೇ ಕೆಲವು. ಪೊಲೀಸರು ತನ್ನನ್ನು ಕೊಲ್ಲಲು ಹಿಂದೆ ಬಿದ್ದಿದ್ದಾರೆಂದು ನಂಬಿದ ಪರ್ಸೆಕ್ಯೂಷನ್ ಸಿಂಡ್ರೋಂನಿಂದ ಬಳಲಿ ಆತ್ಮಹತ್ಯೆಗೆ ಶರಣಾಗಿದ್ದ ಕನ್ನಡದ ನಾಟಕಕಾರ ಸಂಸರನ್ನು ಕುರಿತ ನೀಗಿಕೊಂಡ ಸಂಸ ಮತ್ತು ಕನಕದಾಸರನ್ನು ಕುರಿತ ಕಾಲಜ್ಞಾನಿ ಕನಕ ಇವು ಅವರ ನಾಟಕಗಳು. ತುರ್ತುಪರಿಸ್ಥಿತಿಯ ಕುರಿತ ಕವಿತೆಗಳ ಸಂಕಲನವೊಂದನ್ನು ಅವರು ಸಂಪಾದಿಸಿದ್ದರು.
ಕಿರಂ ಬರೆದದ್ದಕ್ಕಿಂತ ಅವರ ಚಿಂತನೆಗಳು ಮತ್ತು ವ್ಯಾಖ್ಯಾನಗಳೇ ಹೆಚ್ಚು ಸಂಖ್ಯೆಯ ಮತ್ತು ವಿವಿಧ ಪ್ರಕಾರದ ಮೌಲಿಕ ಕೃತಿಗಳ ಸೃಷ್ಟಿಗೆ ಕಾರಣವಾದವು. ಕಿರಂರ ಹೆಚ್ಚುಗಾರಿಕೆ ಇರುವುದು ಅವರು ಭಿನ್ನ ಕಾಲಘಟ್ಟಗಳ ಕೃತಿಗಳ ಅನುಸಂಧಾನದಲ್ಲಿ ತೊಡಗುತ್ತಿದ್ದ ವಿಧಾನಗಳಲ್ಲಿ. ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕವೆಂಬ ಗಡಿರೇಖೆಗಳನ್ನು ಅವರು ಲಂಘಿಸುತ್ತಿದ್ದ ಬಗೆಗಳಲ್ಲಿ. ಒಮ್ಮೆ ಬಸವಣ್ಣ ಆಧುನಿಕ ಕಣ್ರೀ. ಅವನು ನೆಹರೂ ಥರ ಅಂದರು. ಇನ್ನೊಮ್ಮೆ ಅಲ್ಲಮ ತುಂಬ ಮಾಡ್ರನ್‌ರೀ, ನಮ್ಮ ಗಾಂಧಿ ಥರ ಅವನು ಅಂದರು. ಕಾಲಗಳ ನಡುವೆ ಕಾವ್ಯದ ಹಡಗಿನಲ್ಲಿ ಪ್ರಯಾಣ ಮಾಡಿದರು. ತುಂಬ ನಮ್ಮಂಥವರನ್ನೂ ತುಂಬಿಕೊಂಡು ವಿಶ್ವರೂಪ ದರ್ಶನವನ್ನೂ ಮಾಡಿಸಿದರು. ಸದಾ ಜಂಗಮಿಸುತ್ತಿದ್ದ ಕಿರಂ ನಂಬಿದ್ದು ಸ್ಥಾವರಕ್ಕಳಿವುಂಟು, ಜಂಗಮಕ್ಕಲ್ಲ ಎನ್ನುವುದನ್ನು.
ಕೋಲಾರದ ಡಾ.ಎಲ್ ಬಸವರಾಜು ಪ್ರತಿಷ್ಠಾನ ಕೊಡುವ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ಕಿರಂರನ್ನು ಅಭಿನಂದಿಸಿ ಪುರಸ್ಕರಿಸಲು ಒಂದು ಸಮಾರಂಭ ಏರ್ಪಡಿಸಲಾಗಿತ್ತು. ಅದರಲ್ಲಿ ಡಾ. ಕೆ.ವಿ.ನಾರಾಯಣ ಅಭಿನಂದನಾ ಭಾಷಣ ಮಾಡುತ್ತ ನುಡಿದದ್ದು ಸಂಸ್ಕೃತಿಯ ಅನುಸಂಧಾನದಲ್ಲಿ ಆಗಲಿ ಕಾವ್ಯಾನುಸಂಧಾನದಲ್ಲಿ ಆಗಲಿ, ಕಿರಂ ಒಬ್ಬ ಎನ್‌ಫ್ಯಾಂಟ್ ಟೆರಿಬಲ್ ಎಂದು. ವಿಶ್ವ ಸಾಹಿತ್ಯದಲ್ಲಿ ಶ್ರೇಷ್ಠವಾಗಿರುವುದೆಲ್ಲ (ಉಪನಿಷತ್ತುಗಳ ರೀತಿ, ಜಾನಪದ ಮಹಾಕಾವ್ಯಗಳ ರೀತಿ) ಮೌಖಿಕ ಸಂಪ್ರದಾಯದಲ್ಲಿದೆ ಎಂದು ಹೇಳಲಾಗಿದೆ. ಕಿರಂ ಅದನ್ನು ತೀವ್ರವಾಗಿ ಪ್ರೀತಿಸಿದವರು. ವಾಗ್ವಾದದ ಮೂಲಕ ಅರಿವಿನ ವಿಸ್ತರಣೆಯಲ್ಲಿ ತೊಡಗಿದವರು. ಅಕ್ಷರ ಸಂಸ್ಕೃತಿಗೆ ವಿರುದ್ಧವಾಗಿ ತೋಂಡಿಯು ಜನ ಮಾನಸವನ್ನು ಸಮೂಹ ತತ್ವದ ಆಧಾರದ ಮೇಲೆ ಒಟ್ಟುಗೂಡಿಸುತ್ತದೆ. ಜ್ಞಾನದ ಹಂಚಿಕೆ ಸಾರ್ವಜನಿಕವಾಗಿರುತ್ತದೆ. ಅಲ್ಲಿ ಜ್ಞಾನದ ಖಾಸಗಿ ಸಂಚಯನವಿರುವುದಿಲ್ಲ, ಆತ್ಮರತಿಗೆ ಅಲ್ಲಿ ಪ್ರವೇಶವಿರುವುದಿಲ್ಲ. ಅಲ್ಲಿ ಸಂವಾದವಿರುತ್ತದೆ. ಈ ಸಂವಾದವೇ ಕಾವ್ಯವನ್ನು ಅದರ ಸಂಕಲೆಗಳಿಂದ ವಿಮೋಚನೆಗೊಳಿಸುತ್ತದೆ. ಆದರ್ಶ ಕಾವ್ಯಾಸ್ವಾದನೆಗೆ ಭೂಮಿಕೆ ಒದಗಿಸುತ್ತದೆ. ಹೃದಯಗಳು, ಆತ್ಮಗಳು ಆ ಭೂಮಿಕೆಯಲ್ಲಿ ನೆರೆದು ಕವಿಯ ಮನೋಜಗತ್ತಿನುದ್ದಗಲ ಚರಿಸಿ ಅವನ ಮತ್ತು ಆ ಜಗತ್ತಿನ ಸಾಂಸ್ಕೃತಿಕ ಜಗತ್ತನ್ನು ಸಂಭ್ರಮದಿಂದ ನೋಡಿ ಆನಂದಿಸತೊಡಗುತ್ತವೆ.
(ಈ ಲೇಖನ ಡೆಕ್ಕನ್ ಹೆರಾಲ್ಡ್‌ನ ಮೇ ೨೩, ೨೦೦೪ ರ ಭಾನುವಾರದ ಸಂಚಿಕೆಯಲ್ಲಿ ಪ್ರಕಟವಾದ ಲೇಖನದ ಪರಿಷ್ಕೃತ ರೂಪ. ಕಿರಂ ಆಗಿದ್ದರು, ಈಗಿಲ್ಲ. ಕಿ ರಂ ೭ನೇ ಅಗಸ್ಟ್ ೨೦೧೦ರಂದು ತೀವ್ರ ಹೃದಯಾಘಾತದಿಂದ ತೀರಿಕೊಂಡರು. ಡಿ.ವಿ.ಪ್ರಹ್ಲಾದ್ ತಂದ ಸಂಚಯದ ನೆನಪಿನ ಸಂಚಿಕೆ ಸುಂದರವಾಗಿದೆ. ಈ ಲೇಖನಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ.)]]>
ಕಿ ರ೦ ಒ೦ದು ನೆನಪು – ವಿಜಯ ರಾಘವನ್
ನಿಮಗೆ ಇವೂ ಇಷ್ಟವಾಗಬಹುದು…





kiram bagge barediruva lekhana tumbaa chennaagide. kiram avarannu nenapisikollalu avakaasha maadikottiddakke vandanegalu.
mastru ende parichitarada kiram heggodina neenasamnavara october shibiravannu avarendu tappisikolluttiralilla .avariddare andarene yavude samvada karyakrama kale kattuttittu nanu omme neenasam shibiradalli palgondu kiramra vagjhariyalli teli hogidde. article tumba chennagu hagu ee sandarbhakke avarannu nenapisuvante maditu thanq
Keeram Avarua bagge chanda barediddeeri. Nimma baravanige mattu neevu avara bagge preeti-abhimaanadinda barediruvudu nange atyanta ishtavaayitu. Nimma krishi beleyali. Nimminda olleya kelasa aagali.