~ಎಸ್.ಜಿ.ಶಿವಶಂಕರ್
ಹಾಸ್ಯಲೋಕದಲ್ಲಿ ಸಾಕಷ್ಟು ಪರಿಚಿತರಾದ ಶಿವಶಂಕರ್ ಅವರ ಲೇಖನ ಪ್ರಕಟಿಸಲು ನಮಗೆ ಹೆಮ್ಮೆ. ಲೇಖನ ನೀಡಿದ ಶಿವಶಂಕರ್ ಅವರಿಗೆ ಥ್ಯಾಂಕ್ಸ್
ಅರೆ..ಹಾಗ೦ದರೇನು? ಎಂದು ಹುಬ್ಬೇರಿಸಿದ್ದೀರೇನು? ನೀವು ಈ ಮಾತು ಈವರೆಗೆ ಕೇಳಿಯೇ ಇಲ್ಲವೆ? ಇಲ್ಲ ಎಂಬ ನಿಮ್ಮ ಮಾತನ್ನು ನಾನು ಖ೦ಡಿತಾ ನ೦ಬುವುದಿಲ್ಲ! ಎಲ್ಲಿಯಾದರೂ ಅಪರೂಪಕ್ಕಾದರೂ ಈ ಮಾತು ನೀವು ಕೇಳಿಯೇ ಇರುತ್ತೀರಿ. ಕೇಳಿದಾಗ ಈ ಪದದ ಅರ್ಥವಾಗಿರಬಹುದು ಇಲ್ಲ ಅರ್ಥವಾಗದೆ ಮರೆತಿರಬಹುದು!
ಕಿವಿಕಚ್ಚುವುದು ಎ೦ದಾಕ್ಷಣ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಕಿವಿಯನ್ನು ಕಚ್ಚುತ್ತಿರುವುದನ್ನು ಕಲ್ಪಿಸಿಕೊಳ್ಳಬೇಡಿ! ಈ ಪದ ನನ್ನ ಕಿವಿಯ ಮೇಲೆ ಬಿದ್ದುದು ಕೇವಲ ವಾರದ ಹಿ೦ದೆ. ಆಗಿನಿ೦ದಲೂ ಇದರ ಅರ್ಥ, ವ್ಯಾಪ್ತಿಗಳ ಬಗೆಗೇ ಚಿ೦ತಿಸುತ್ತಿರುವೆ ಎ೦ದರೆ ಸುಳ್ಳೆ೦ದು ತಿಳಿಯಲಾರಿರಿ!
ಒ೦ದು ದಿವ್ಯ ಬೆಳಿಗ್ಗೆ, ಸುಮಾರು ಒ೦ಬತ್ತೂವರೆಯ ಕಾಫಿಯ ಸಮಯಕ್ಕೆ ನನ್ನ ಕಾರ್ಯಾಗಾರದ ಹೊರಗೆ ನಿ೦ತಿದ್ದೆ. ಇದೇನು ಕಾಫಿ ಸಮಯ ಎನ್ನುವಿರಾ..? ಅದಕ್ಕೊ೦ದು ಸಮಯವು೦ಟೆ..? ಅದು ಒ೦ಬತ್ತೂವರೆಯೇ ಏಕಾಗಬೇಕು ಎ೦ಬ ಕೆಲವು ಸ೦ದೇಹಗಳು ನಿಮ್ಮನ್ನು ಕಾಡುತ್ತಿರಬಹುದು. ಇದಕ್ಕೊ೦ದಿಷ್ಟು ವಿವರಣೆ ಅವಶ್ಯಕತೆಯಿದೆ.
ಸುಮಾರು ಇಪ್ಪತ್ತು ವರ್ಷಗಳಿ೦ದ ನಾನೊ೦ದು ಕಾರ್ಖಾನೆಯಲ್ಲಿ ಇ೦ಜಿನಿಯರಾಗಿ ಕೆಲಸ ಮಾಡುತ್ತಿರುವೆ. ನಮ್ಮ ಕಾರ್ಖಾನೆಯ ಎಲ್ಲ ಚಟುವಟಿಕೆಗಳನ್ನೂ ಕಾಫಿ ಸಮಯ, ಲ೦ಚ್ ಸಮಯ, ಟೀ ಸಮಯ ಎ೦ದು ಗುರುತಿಸುವ ಪರಿಪಾಟವಿದೆ. ಈ ಸಮಯಗಳು ಕಾರ್ಖಾನೆಯ ಆಡಳಿತವರ್ಗ ನಿಗಧಿ ಮಾಡಿರುವ ಸಮಯಗಳು. ಹಾಗಾಗಿ ನಾನು ಬೆಳಗಿನ ಒಂಬತ್ತೂವರೆಯ ಸಮಯವನ್ನು ಕಾಫಿ ಸಮಯ ಎ೦ದು ಉಲ್ಲೇಖ ಮಾಡಿರುವ.
ನಾನು ಕಾರ್ಯಾಗಾರದ ಹೊರಗೆ ನಿಲ್ಲಲು ಕಾರಣವಿತ್ತು! ನಮ್ಮ ಕಾರ್ಖಾನೆಯ ಮುಖ್ಯಸ್ಥರು ನನ್ನ ಇಲಾಖೆಗೆ ಬರುತ್ತೇನೆ ಎಂದು ಫೋನಾಯಿಸಿದ್ದರಿಂದ ನಾನು ಅವರ ಬರವನ್ನು ಎದುರು ನೋಡುತ್ತಿದ್ದೆ. ಆಗ ನನ್ನ ಬಾಲ್ಯ ಸ್ನೇಹಿತ ವಿಶ್ವ ಅವಸರದಲ್ಲಿ ಬ೦ದು ಏದುಸಿರು ಬಿಡುತ್ತಾ ನಿ೦ತ.
ಯಾಕೆ ಈ ಅವಸರ..? ಎಲ್ಲಾದರೂ ಬಾ೦ಬ್ ಬಿದ್ದಿದೆಯಾ..? ಇಲ್ಲಾ ಬೆ೦ಕಿ ಹತ್ತಿದೆಯಾ..? ಅವನನ್ನು ತಮಾಷೆ ಮಾಡಿದೆ.
ಬಾ೦ಬೂ ಬೀಳುತ್ತೆ..ಬೆ೦ಕಿನೂ ಹತ್ತಿಕೊಳ್ಳುತ್ತೆ…ಇಲ್ಲಾ ಹತ್ತಿಸ್ತಾರೆ..? ನನ್ನ ಮಾತಿಗೆ ವ್ಯ೦ಗ್ಯವಾಡಿದ, ಅವನ ಮಾತಿನಲ್ಲಿ ಯಾರ ಬಗೆಗೋ ತೀವ್ರವಾದ ಅಸಮಾಧಾನ ಇರುವುದು ಗೋಚರಿಸಿತು!
ಯಾರು ಬಾ೦ಬು ಹಾಕ್ತಾರೆ..? ಯಾರು ಬೆ೦ಕಿ ಹಚ್ಚಿಸ್ತಾರೆ..? ಒಗಟಾಡಬೇಡ ಈಗ ಬಾಸು ಬರೋ ಸಮಯ..ಒಗಟಿಗೆ.. ಜಿಗುಟಿಗೆ ಸಮಯವಿಲ್ಲ ಎ೦ದೆ!
ಬಾಸಿಗಾದರೂ ಕಾಯಿ ಇಲ್ಲಾ ಎಲೆಕೋಸಿಗಾದರೂ ಕಾಯಿ..ಅದು ನನಗೆ ಸ೦ಬಂಧಿಸಿದಲ್ಲ..ನಾನೀಗ ಮುಖ್ಯವಾಗಿ ಬ೦ದಿದ್ದು ಆ ಆರ್ಮುಗ೦ ಇದ್ದಾನಲ್ಲ… ನಿನ್ನ ಅಸಿಸ್ಟೆ೦ಟ್ ಅವನ ಬಗ್ಗೆ ಒ೦ದು ಮಾತು…! ನಿನ್ನಲ್ಲೇ ಇಟ್ಕೋ…ಅವನು ಸಖತ್ ಕಿವಿಕಚ್ಚೋ ಮನುಷ್ಯ!
ಈ ಪದ ನನ್ನ ಕಿವಿಗೆ ಬಿದ್ದಾಗ ಕೊ೦ಚ ಗಲಿಬಿಲಿಯಾಯಿತು! ಆ ಪದ ನನಗೆ ಹೊಸದಾಗಿತ್ತು! ಅದರ ಅರ್ಥವೇನೋ ಸ್ಥೂಲವಾಗಿ ತಿಳಿದರೂ ಸ್ಪಷ್ಟತೆ ಬಾರದೆ ತಲೆ ತಿನ್ನತೊಡಗಿತು.
ಯಾಕೆ ಹಾಗೆ ಹೇಳ್ತಿದ್ದೀಯಾ..?
ಗೂಬೆ ತರ ಮಾತಾಡ್ಬೇಡ! ನನ್ನ ಬಗ್ಗೆ ನಿನ್ನ ಹತ್ರ ಏನಾದರೂ ಹೇಳುತ್ತಿರುತ್ತಾನಲ್ಲವಾ..?
ಹೌದು. ಅದನ್ನ ನಾನು ಈ ಕಿವಿಯಿ೦ದ ಕೇಳಿ ಆ ಕಿವೀಲಿ ಬಿಟ್ಟುಬಿಡ್ತೀನಿ…ನಾವು ಕಾಲೇಜ್ನಲ್ಲಿ ಪಾಠ ಕೇಳುವಾಗ, ಲೆಕ್ಚರರ್ಗಳ ಹಿತನುಡಿಗಳಿಗೆ ಮಾಡ್ತಿದ್ದ ಹಾಗೆ..!
ಅದೇ ರೀತಿ ನಿನ್ನ ಬಗೆಗೂ ನನಗೆ ಹೇಳ್ತಿರ್ತಾನೆ..? ಇಡೀ ಫ್ಯಾಕ್ಟರಿ ತು೦ಬಾ ಓಡಾಡ್ತಾ ಅಲ್ಲೀದು ಇಲ್ಲಿಗೆ ಇಲ್ಲೀದು ಅಲ್ಲಿಗೆ, ಅವರದ್ದು ಇವರಿಗೆ, ಇವರದ್ದು ಅವರಿಗೆ ವರದಿ ಒಪ್ಪಿಸೋ ನಾರದನ ವ೦ಶದವನು..ಅವನ ಬಗ್ಗೆ ಹುಷಾರು! ಅವನೇ ಕಿವಿಕಚ್ಚೋನು..! ಇನ್ನು ನೀನು ಕಾಯ್ತಿರೋ ನಿಮ್ಮ ಬಾಸು…ಆರ್ಮು೦ಗ೦ನ ತು೦ಬಾ ಪೋಷಣೆ ಮಾಡ್ತಿದ್ದಾನೆ… ನಮ್ಮೆಲ್ಲರ ಬಗೆಗೂ ಬಾಸಿನ ಕಿವಿ ಕಚ್ಚೋದೇ ಅವನ ಫುಲ್ಟೈಮು ಕೆಲಸ..
ದೂರದಲ್ಲಿ ಬಾಸು ಕಂಡಿದ್ದರಿ೦ದ ವಿಶ್ವ ಅಲ್ಲಿ೦ದ ಮಾಯವಾದ! ಬಾಸು ಹತ್ತಿರವಾಗುತ್ತಲೇ ಎಲ್ಲಿಯೋ ಇದ್ದ ಅರ್ಮುಗ೦ ನನ್ನ ಹಿ೦ದೆ ಪ್ರತ್ಯಕ್ಷನಾಗಿದ್ದ! ನಾನು ಬಾಸಿಗೆ ನಮಸ್ಕಾರ ಹೇಳುತ್ತಿರುದಕ್ಕೇ ಜೋಡಿ ವಾಲಗದೆ೦ತೆ ಅರ್ಮುಗಂ ಕೂಡ ನಮಸ್ಕಾರ ಹೇಳಿದ. ಆಗ ವಿಶ್ವನ ಮಾತು ನಿಜವೆನಿಸಿತು!
ವಿಶ್ವ ಹೇಳಿದ್ದು, ಆರ್ಮುಗಂನ ಸ್ವಭಾವ ಇವೆಲ್ಲವನ್ನೂ ಸಮೀಕರಿಸುತ್ತಾ ಕಿವಿಕಚ್ಚುವುದರ ಸ್ಪಷ್ಟ ಅರ್ಥವನ್ನು ಗ್ರಹಿಸಿಬಿಟ್ಟಿದ್ದೆ! ಕಿವಿಕಚ್ಚುವುದರ ಅರ್ಥ ಮಿ೦ಚಿನ೦ತೆ ಹೊಳೆದ ಕ್ಷಣ ಅನಿವರ್ಚನೀಯ ಆನ೦ದ! ಪುಣ್ಯ! ಆರ್ಕಿಮಿಡೀಸನ೦ತೆ ಯುರೇಕಾ..ಉರೇಕಾ.. ಎನ್ನುತ್ತಾ ರಸ್ತೆಯಲ್ಲಿ ಬೆತ್ತಲೆ ಓಡಲಿಲ್ಲ ಅಷ್ಟೆ!
ಕಿವಿಕಚ್ಚುವುದರ ಅರ್ಥ ಹೀಗಿದೆ: ಇದು ಯಾರಾದರೊಬ್ಬ ವ್ಯಕ್ತಿಯ ಮೇಲೆ ಇನ್ನೊಬ್ಬ ವ್ಯಕ್ತಿ ಇರುವ ಅಥವಾ ಇಲ್ಲದ ವಿಷಯಗಳನ್ನು ಗುಟ್ಟಾಗಿ ಹೇಳುವುದು. ಇನ್ನೂ ಸರಳವಾಗಿ ಹೇಳಬೇಕೆ೦ದರೆ ಈ ಪದ ಚಾಡಿ ಹೇಳುವವರನ್ನು ಕರೆಯುವ ಒ೦ದು ವಿಧಾನ! ಚಾಡಿಕೋರ ಎ೦ಬ ಪದದ ಸೌಮ್ಯ ರೂಪವಷ್ಟೆ! ಚಾಡಿ ಹೇಳುವವರನ್ನು ಕಿವಿಕಚ್ಚುವವರು ಎ೦ದು ಕರೆಯುವುದು ಕೆಲವು ಪ್ರದೇಶಗಳಲ್ಲಿ ವಾಡಿಕೆ ಇದೆ ಎ೦ಬುದು ನನ್ನ ಸ೦ಶೋಧನೆಯಿ೦ದ ಪ್ರಕಟವಾದ ವಿಷಯ.
ಈ ಕಿವಿಕಚ್ಚುವುದು ಒ೦ದು ವಿಷಿಷ್ಟವಾದ ಗುಣ. ಬಹುತೇಕ ಎಲ್ಲರೂ ಜೀವನದಲ್ಲಿ ಕನಿಷ್ಟ ಒ೦ದಲ್ಲ ಒ೦ದು ಬಾರಿಯಾದರೂ ಈ ಕೆಲಸ ಮಾಡಿರುತ್ತಾರೆ ಎ೦ದರೆ ನೀವು ಹುಬ್ಬೇರಿಸಿ ಹಣೆ ಗ೦ಟಿಕ್ಕಿಕೊಳ್ಳಬಹುದು. ಬಹುತೇಕರ ಬಾಲ್ಯದಲ್ಲಿ ಈ ಗುಣ ಪ್ರಕಟವಾಗುತ್ತದೆ. ಇದಕ್ಕೆ ಮೂಲ ಕಾರಣ ತಾನು ಒಳ್ಳೆಯವನು ಅಥವಾ ಒಳ್ಳೆಯವಳು ಎ೦ದು ಹೇಳಿಕೊಳ್ಳಲು, ಇನ್ನೊಬ್ಬರಿಗೆ ಹತ್ತಿರವಾಗಲು ಇಲ್ಲವೇ ಬೇರೊಬ್ಬರ ಮೇಲಿನ ಅಸೂಯೆಯಿ೦ದ ಈ ಕೆಲಸ ಮಾಡಿರುತ್ತೇವೆ. ವ್ಯಕ್ತಿತ್ವ ರೂಪುಗೊಳ್ಳುವಾಗ, ಸರಿ ತಪ್ಪುಗಳ ವಿಶ್ಲೇಷಣೆ ಮಾಡುವ ಶಕ್ತಿ ಬ೦ದಾಗ ಈ ಕಿವಿಕಚ್ಚುವಿಕೆ ಅಥವಾ ಚಾಡಿ ಹೇಳುವುದು ಕಮ್ಮಿಯಾಗುತ್ತದೆ. ಪ್ರೌಢತೆ ಬ೦ದಾಗ ಬುದ್ಧಿಪೂರ್ವಕವಾಗಿ ಈ ದೌರ್ಬಲ್ಯವನ್ನು ಬಹುತೇಕರು ಮೆಟ್ಟಿನಿಲ್ಲುತ್ತಾರೆ. ಕೆಲವರಿಗೆ ಈ ದೌರ್ಬಲ್ಯ ಕೊನೆಯವರೆಗೂ ಚ್ಯೂಯಿ೦ಗ್ ಗಮ್ಮಿನ೦ತೆ ಅ೦ಟಿಕೊ೦ಡುಬಿಡುತ್ತದೆ. ಅವರೇ ನನ್ನ ಲೇಖನದ ನಾಯಕ ನಾಯಕಿಯರು. ಇಂತವರ ಬಗೆಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು! ಅವರ ಮಾತು ನ೦ಬಿದರೆ ಕೋಲಾಹಲವೇ ಆಗಬಹುದು.
ಕಿವಿಕಚ್ಚುವವರು ಎಲ್ಲ ಕಾಲದಲ್ಲಿಯೂ ಇದ್ದರು, ಈಗಲೂ ಇದ್ದಾರೆ, ಮು೦ದೆಯೂ ಇರುತ್ತಾರೆ. ಕಾಲಕ್ಕೂ ಕಿವಿಕಚ್ಚುವಿಕೆಗೂ ಸ೦ಬ೦ಧವೇ ಇಲ್ಲ. ನಮ್ಮ ಪುರಾಣಗಳಲ್ಲ್ಲಿ ಬರುವ ನಾರದ ಮಹರ್ಷಿಗಳು ಕಿವಿಕಚ್ಚುವವರಿಗೆ ರೋಲ್ ಮಾಡೆಲ್ ಎ೦ದು ನನ್ನ ಖಚಿತ ಅಭಿಪ್ರಾಯ! ಪುರಾಣಗಳಲ್ಲಿ ನಾರದರು, ಕೈಲಾಸದ ಮಾತು ವೈಕು೦ಠದಲ್ಲಿ, ವೈಕು೦ಠದ ಮಾತು ಭೂಲೋಕದಲ್ಲಿ ಹೇಳುವುದರ ಮೂಲಕ ಹಲವು ಕಲಹಗಳ ಸೃಷ್ಠಿಗೆ ಕಾರಣರಾಗುತ್ತಾರೆ, ರಾಕ್ಷಸರ ಮಾತು ದೇವತೆಗಳಿಗೆ, ದೇವತೆಗಳ ಮಾತು ರಾಕ್ಷಸರಿಗೆ ತಿಳಿಸಿ ಅಲ್ಲೋಲಕಲ್ಲೋಲವನ್ನು೦ಟು ಮಾಡಿರುವ ಘಟನೆಗಳು ಪು೦ಖಾನುಪು೦ಖವಾಗಿ ಕಾಣುತ್ತವೆ.
ಕೆಲವರು, ಈ ಕಿವಿಕಚ್ಚುವ ಕೆಲಸದಲ್ಲಿ ಅದೆಷ್ಟು ಆನಂದವನ್ನು ಅನುಭವಿಸುತ್ತಾರೆ ಎಂದರೆ ಅದನ್ನು ನಮ್ಮಿಂದ ವರ್ಣಿಸಲಾಗದು, ಅದನ್ನು ಅವರೇ ಹೇಳಬೇಕು! ಏಕೆಂದರೆ ನನಗೆ ಕಿವಿಕಚ್ಚುವ ಅಭ್ಯಾಸವಿಲ್ಲ! ಕೆಲವರಂತೂ ಈ ಕಿವಿಕಚ್ಚುವ ಕಲೆಯನ್ನು ನಿರಂತರವಾಗಿ ಪೋಷಣೆ ಮಾಡುಕೊಂಡು ಬರುತ್ತಾರೆ! ಕಿವಿಕಚ್ಚುವವರಿಗೆ ತಮ್ಮ ಕಿವಿಯನ್ನು ನೀಡದವರು ಬೆರಳೆಣಿಕೆಯಷ್ಟು ಜನ ಮಾತ್ರ! ಅವರನ್ನು ಪ್ರಜ್ಞಾವಂತರು ಎಂದು ಕರೆಯಬಹುದು. ಈ ಪ್ರಜ್ಞಾವಂತರು ಮಾತ್ರ ತಮ್ಮ ಕಿವಿಯನ್ನು ಕಚ್ಚುವವರಿಗೆ ನೀಡುವುದಿಲ್ಲ! ಕಿವಿಕಚ್ಚುವವರಿಂದ ತಮ್ಮ ಕಿವಿಗಳನ್ನು ರಕ್ಷಿಸಿಕೊಳ್ಳಲು ವಿಶೇಷ ಎಚ್ಚರಿಕೆ ವಹಿಸುತ್ತಾರೆ.
ಕೆಲವರು ತಮ್ಮ ವೈಯುಕ್ತಿಕ ಲಾಭಕ್ಕಾಗಿ ಕಿವಿಕಚ್ಚಿದರೆ ಇನ್ನು ಕೆಲವರು ಯಾವುದೇ ಫಲಾಪೇಕ್ಷೆಯಿಲ್ಲದೆ ಕೇವಲ ಚಟಕ್ಕಾಗಿ ಕಿವಿಕಚ್ಚುತ್ತಾರೆ. ಈ ಕಿವಿಕಚ್ಚುವಿಕೆಯಿಂದಾಗಿ ದೇವಾನುದೇವತೆಗಳೇ ಯುದ್ಧ ಮಾಡಿದ್ದಾರೆ! ಇತಿಹಾಸದಲ್ಲಿ ಕಂಡುಬರುವ ಅನೇಕ ರಾಜರುಗಳು ಕಿವಿಕಚ್ಚಿಸಿಕೊಂಡು ಅಮಾಯಕರ ಜೀವಹರಣ ಮಾಡಿದ್ದಾರೆ!
ಆಧುನಿಕ ಕಾಲದಲ್ಲಿ, ಅಂದರೆ ಪ್ರಸ್ತುತ ಸಮಯದಲ್ಲಿ, ಕಿವಿ ಕಚ್ಚುವವರನ್ನೂ ಮತ್ತು ಕಚ್ಚಿಸಿಕೊಳ್ಳುವವರನ್ನೂ ಕಚೇರಿಗಳಲ್ಲಿ, ಕಾರ್ಖಾನೆಗಳಲ್ಲಿ, ವ್ಯಾಪಾರೀ ಸ್ಥಳಗಳಲ್ಲಿ ಕಾಣಬಹುದು.
ಅಂದ ಹಾಗೆ ನಿಮಗೆ ಈ ವಿಷಯ ಗೊತ್ತೆ..? ಎಂದು ಯಾರಾದರೂ ಮಾತು ಪ್ರಾರಂಭಿಸಿದರೆ ಅವರು ಖಂಡಿತವಾಗಿಯೂ ಕಿವಿಕಚ್ಚುವವರು! ಅವರಿಗೆ ಕಿವಿಕೊಟ್ಟರೆ ನೀವು ಕಿವಿಕಚ್ಚಿಸಿಕೊಂಡಂತೆಯೇ ಸರಿ!
ಕಿವಿಕಚ್ಚಿಸಿಕೊಳ್ಳುವವರು ಇಲ್ಲದಿದ್ದರೆ ಕಿವಿ ಕಚ್ಚುವವರಿಗೆ ಸ್ಕೋಪೇ ಇರುವುದಿಲ್ಲ! ಕಿವಿ ಕಚ್ಚುವವರು ಇರುವಂತೆಯೇ ಕಿವಿ ಕಚ್ಚಿಸಿಕೊಳ್ಳುವವರೂ ಇರುತ್ತಾರೆ! ಅಂತವರಿಗೆ ಯಾರ ಬಗೆಗಾದರೂ ಗೋಪ್ಯವೆನ್ನಿಸುವ ವಿಷಯ ಕೇಳಿಸಿಕೊಳ್ಳದಿದ್ದರೆ ನಿದ್ರೆಯೇ ಬರುವುದಿಲ್ಲ ಎನ್ನುವುದು ಅಕ್ಷರಶಃ ಸತ್ಯ! ಚಾಡಿ ಮಾತು ಕೇಳುವವರು ಯಾನೆ ಕಿವಿಕಚ್ಚಿಸಿಕೊಳ್ಳುವವರನ್ನು ಹಿತ್ತಾಳೆ ಕಿವಿಯವರು ಎಂದು ಕರೆಯುವುದುಂಟು. ಇವರು ಕಿವಿಕಚ್ಚುವವರನ್ನು ಪ್ರೋತ್ಸಾಹಿಸುತ್ತಾರೆ! ಈ ಇಬ್ಬರು ಅಂದರೆ ಕಿವಿಕಚ್ಚುವವರು ಮತ್ತು ಕಚ್ಚಿಸಿಕೊಳ್ಳುವವರ ಸ್ನೇಹ ಅದ್ವಿತೀಯವಾದದ್ದು. ಇಬ್ಬರೂ ಭೇಟಿಯಾಗುತ್ತಲೇ ಕಂಡೂ ಕಾಣದಂತಹ ಸನ್ನೆ, ಸೂಚನೆಗಳಿಂದ ಹಂಚಿಕೊಳ್ಳಲು ತಾಜಾ ವಿಷಯವಿರುವುದನ್ನು ವಿನಿಮಯ ಮಾಡಿಕೊಂಡುಬಿಟ್ಟಿರುತ್ತಾರೆ.
ನನ್ನ ಮೇಲಧಿಕಾರಿಯೊಬ್ಬರು ಕಿವಿಕಚ್ಚುವವರನ್ನು ತುಂಬಾ ಪ್ರೋತ್ಸಾಹಿಸುತ್ತಿದ್ದರು. ಅದರಲ್ಲಿಯೂ ಅವರಿಗೆ ಆಗದವರ ವಿಷಯವನ್ನು ಯಾರೇ ಹೇಳಿದರೂ ಅದನ್ನು ಅತ್ಯಾಸಕ್ತಿಯಿಂದ ಕೇಳುತ್ತಿದ್ದರು. ಹಾಗೆ ಕಿವಿಕಚ್ಚುವವರಿಗೆ ವಿಷೇಶ ಮನ್ನಣೆ ನೀಡುತ್ತಿದ್ದರು. ಇದು ಕಾರ್ಖಾನೆಯಲ್ಲಿ ಎಲ್ಲರಿಗೂ ತಿಳಿದ ವಿಷಯವೇ ಆಗಿತ್ತು! ಅದರೂ ಕಿವಿಕಚ್ಚುವವರಿಗಾಗಲೀ ಕಿವಿಕಚ್ಚಿಸಿಕೊಳ್ಳುವ ನಮ್ಮ ಬಾಸಿಗಾಗಲೀ ಯಾವುದೇ ರೀತಿಯ ಸಂಕೋಚವಾಗಲೀ, ಕೀಳರಿಮೆಯಾಗಲೀ ಇರಲಿಲ್ಲ!
ಕಿವಿಕಚ್ಚುವುದರಲ್ಲಿ ಲಿಂಗಭೇದವಿಲ್ಲ. ಹೆಂಗಸರೂ, ಗಂಡಸರೂ ಯಾರು ಬೇಕಾದರೂ ಕಿವಿಕಚ್ಚಬಹುದು ಇಲ್ಲವೇ ಕಚ್ಚಿಸಿಕೊಳ್ಳಬಹುದು! ಕಿವಿಕಚ್ಚುವುದರಲ್ಲಿ ಮಹಿಳೆಯರು ಸ್ವಲ್ಪ ಮುಂದೆ ಎಂದು ನನ್ನ ಅಂದಾಜು. ಇದರಿಂದ ಮಹಿಳಾ ಓದುಗರು ರೊಚ್ಚಿಗೇಳಬಹುದು! ನಿಧಾನವಾಗಿ ಯಾವುದೇ ಪೂರ್ವಾಗ್ರಹವಿಲ್ಲದೆ ಯೋಚಿಸಿದರೆ ನನ್ನ ಮಾತು ನಿಜ ಎಂದು ಖ೦ಡಿತವಾಗಿಯೂ ಒಪ್ಪುತ್ತೀರಿ! ಹೆಂಡತಿಯರು ತಮ್ಮ ಗಂಡಂದಿರ ಕಿವಿಕಚ್ಚುವುದು ತೀರಾ ಸಹಜ! ಮುಂದುವರಿದ ಇಂಗ್ಲೀಷ್ ಭಾಷಿಕರ ದೇಶಗಳಲ್ಲಿ ನಮ್ಮಲ್ಲಿ ಕಿವಿಕಚ್ಚುವುದು ಎಂಬ ಪದಕ್ಕೆ ಸಮಾನವಾಗಿ ಪಿಲ್ಲೋ ಟಾಕ್ ಎಂಬ ಮಾತಿದೆ. ಕನ್ನಡಕ್ಕೆ ತರ್ಜುಮೆ ಮಾಡಿದರೆ ಅದು ದಿಂಬಿನ ಮಾತು ಎಂದಾಗುತ್ತದೆ. ದಿಂಬು ಮಾತಾಡುವುದಿಲ್ಲವಾದರೂ ದಿಂಬಿಗೆ ತಲೆಯಿಡುವವರು ಮಾತಾಡುತ್ತಾರೆ! ದಿನದ ಚಟುವಟಿಕೆಗಳೆಲ್ಲಾ ಮುಗಿದು, ರಾತ್ರಿ ಮಲಗುವ ಸಮಯದಲ್ಲಿ ಹೆಂಡತಿಯರು ತಮ್ಮ ಗಂಡಂದಿರ ಕಿವಿಕಚ್ಚುವುದು ತೀರಾ ಸಾಮಾನ್ಯವಾದ ವಿಷಯ! ಹೆಂಡತಿ ಮಾತಿದೆ ಕಿವಿಗೊಡದ ಗಂಡೆದೆಯ ಗಂಡಸರು ಜಗತ್ತಿನಲ್ಲಿ ಇಲ್ಲವೇ ಇಲ್ಲ ಎಂದು ನಾನು ಗ೦ಟಾಘೋಷವಾಗಿ ಹೇಳಬಲ್ಲೆ!
ಈ ಲೇಖನ ಓದಿದ ಮೇಲೆ ಖಂಡಿತವಾಗಿಯೂ ಕಿವಿಕಚ್ಚುವವರನ್ನು ನೀವು ಗುರುತಿಸಬಲ್ಲಿರಿ ಮತ್ತು ಅವರ ಮಾತು ನಂಬಿದರೆ ಆಗುವ ತೊಂದರೆಗಳಿ೦ದ ಖಂಡಿತವಾಗಿಯೂ ನಿಮ್ಮನ್ನು ರಕ್ಷಣೆ ಮಾಡಿಕೊಳ್ಳುವಿರಿ ಎಂಬ ನಂಬಿಕೆಯಿಂದ ಲೇಖನಿಯನ್ನು ಕೆಳಗಿಡುತ್ತಿದ್ದೇನೆ!







0 Comments