ಅದು ಸಿಜಿಕೆ ಸಾಯುವ ಎರಡು ದಿವಸದ ಹಿಂದಿನ ನಮ್ಮಿಬ್ಬರ ಕಡೆ ಭೇಟಿ

ಉಗಮ ಶ್ರೀನಿವಾಸ್
ಸುಮಾರು 20 ವರ್ಷಗಳ ಕೆಳಗೆ ತಿಪಟೂರಿನ ಬಯಲು ರಂಗಮಂದಿರದ ಜಗಲಿಯಲ್ಲಿ ಕುಳಿತು ನನಗೆ ಜಗತ್ತಿನ ಶ್ರೇಷ್ಟ ನಾಟಕಗಳನ್ನು ಪರಿಚಯಿಸಿದವರು ಗುರು ಸಮಾನರಾದ ಹೆಸರಾಂತ ರಂಗಕರ್ಮಿ ನಟರಾಜ್ ಹೊನ್ನವಳ್ಳಿ.
ಮೋಲಿಯರ್, ಬ್ರೆಕ್ಟ್, ಶೇಕ್ಸ್ ಫಿಯರ್, ಬಿಎಂಶ್ರೀ, ಕುವೆಂಪು ಹೀಗೆ ದೇಶೀಯ ಹಾಗೂ ಪಾಶ್ಚಿಮಾತ್ಯ ಜಗತ್ತಿನ ನಾಟಕಗಳ ನಿರಂತರ ಅಧ್ಯಯನ ನಾಟಕ ಕ್ಷೇತ್ರದತ್ತ ಆಕರ್ಷಣೆಗೊಳ್ಳುವಂತೆ ಮಾಡಿತು. ಸರಿ ಸುಮಾರು ಅದೇ ಸಮಯದಲ್ಲಿ ಹೊನ್ನವಳ್ಳಿ ಅವರ ನಿರ್ದೇಶನದಲ್ಲಿ ಲಂಕೇಶರ `ಗುಣಮುಖ’ ಹಾಗೂ `ಮಾಸ್ತಿ ಕಥೆಗಳು’ ನಾಟಕದಲ್ಲಿ ಅಭಿನಯಿಸಿದೆ.
ತಿಪಟೂರಿನಲ್ಲಿ ನಟರಾಜ್ ಹೊನ್ನವಳ್ಳಿ, ಸಿನಿಮಾ ನಟರಾದ ಅಚ್ಯುತಕುಮಾರ್, ಧರ್ಮೇಂದ್ರ ಅರಸ್ ಮುಂತಾದವರು ಆಯೋಜಿಸುತ್ತಿದ್ದ `ನೀನಾಸಂ’ ನಾಟಕಗಳ ಕೆಲಸದಲ್ಲೂ ತೊಡಗಿಕೊಳ್ಳುತ್ತಿದ್ದೆ. ಕರಪತ್ರ ಹಂಚುವುದು, ಟಿಕೆಟ್ ಮಾರಾಟ ಮಾಡುವುದು ರಂಗಪ್ರೀತಿಯನ್ನು ಹೆಚ್ಚಿಸುತ್ತಲೇ ಇತ್ತು. ನಾಟಕಗಳ ಕಸುವು ನನ್ನಲ್ಲಿ ಹೆಚ್ಚಾಗುವಷ್ಟರಲ್ಲೇ ಪತ್ರಿಕೋದ್ಯಮ ವೃತ್ತಿ ಆಯ್ಕೆ ಮಾಡಿಕೊಂಡು ಸಮಾಜವಾದ ತಾಯಿ ಬೇರು ಶಿವಮೊಗ್ಗಕ್ಕೆ ಹೋದೆ.
ಅಲ್ಲಿ ಪತ್ರಕರ್ತ ಗೆಳೆಯ ಹೊನ್ನಾಳಿ ಚಂದ್ರಶೇಖರ್ ನಡೆಸುತ್ತಿದ್ದ `ನಮ್ಮಟೀಮ್’ ಸಂಘಟನೆಯೊಂದಿಗೆ ಗುರುತಿಸಿಕೊಂಡು ನಾಟಕಗಳ ಆಯೋಜನೆ ಕೆಲಸದಲ್ಲಿ ನಿರಂತರವಾಗಿ ತೊಡಗಿಸಿಕೊಂಡೆ. ಕೆಲಸದ ನಿಮಿತ್ತ ಊರೂರು ಅಲೆಯುತ್ತಿದ್ದರೂ ನಾಟಕದ ಅಭಿರುಚಿ ನನ್ನಲ್ಲಿ ಬೆಳೆಯುತ್ತಲೇ ಇತ್ತು.
ಅದು 2003-04 ರ ಸುಮಾರು. ದಿವಂಗತ ಸಿಜಿಕೆ ಅವರ `ಕತ್ತಾಲ ಬೆಳದಿಂಗಳೊಳಗೆ’ ಎಂಬ ಆತ್ಮಕಥೆ ಹೊರಬಂದಿತ್ತು. ಒಂದು ಗುಕ್ಕಿನಲ್ಲಿ ಅಷ್ಟು ದೊಡ್ಡ ಪುಸ್ತಕವನ್ನು ಓದಿ ಮುಗಿಸಿ ಹೇಗೋ ಸಿಜಿಕೆ ಅವರ ಲ್ಯಾಂಡ್ ಲೈನ್ ಫೋನ್ ನಂಬರ್ ಸಂಪಾದಿಸಿ`ನಿಮ್ಮ ಆತ್ಮಕಥೆಯನ್ನು ಇಟ್ಟುಕೊಂಡು ಒಂದು ಟೆಲಿಸಿನಿಮಾ ಮಾಡುವ ಇರಾದೆ ಇದೆ’ ಎಂದು ಭಿನ್ನವಿಸಿಕೊಂಡೆ. ಅದಕ್ಕೆ ಸಿಜಿಕೆ ತುಂಬಾ ಆತ್ಮೀಯವಾಗಿ `ಬೆಂಗಳೂರಿಗೆ ಬಂದು ನನ್ನ ಕಾಣು ಉಗಮ ‘ ಎಂದು ಪ್ರೀತಿಯಿಂದ ಮಾತನಾಡಿ ಫೋನಿಟ್ಟರು.
ಅದೃಷ್ಟವೆಂಬಂತೆ ನನಗೆ ಶಿವಮೊಗ್ಗದಿಂದ ಬೆಂಗಳೂರಿಗೆ ವರ್ಗವಾಯಿತು. ಈ ಹಿಂದಿನ ಪರಿಚಯದಿಂದ ಸಿಜಿಕೆ ಅವರನ್ನು ಗಾಂಧಿ ಭವನದಲ್ಲಿ ಭೇಟಿಯಾಗಿ ಮುಖತಃ ಪರಿಚಯಿಸಿಕೊಂಡೆ. ಅವರ ಆತ್ಮೀಯ ಒಡನಾಟ ಪ್ರತಿ ನಿತ್ಯ ಅವರ ಗಾಂಧಿ ಭವನಕ್ಕೆ ನನ್ನನ್ನು ಹೋಗಲು ಪ್ರೇರೇಪಿಸಿತು. ನಾಟಕ, ಗೀತರೂಪಕ, ಬೀದಿ ನಾಟಕ ಹೀಗೆ ನಾಟಕ ಪ್ರಕಾರದ ಬಗ್ಗೆ ದಿನವಿಡಿ ನನ್ನೊಂದಿಗೆ ಮಾತನಾಡುತ್ತಿದ್ದರು. ನನ್ನದು ತುಮಕೂರು ಜಿಲ್ಲೆ ಎಂದು ಗೊತ್ತಾಗಿದ್ದೆ ತಡ `ಬೆಂಗಳೂರಿನಲ್ಲಿ ಇರಬೇಡ. ತುಮಕೂರಿಗೆ ಹೋಗಿ ಕೆಲಸ ಮಾಡು’ ಎಂಬುದು ಸಿಜಿಕೆ ಅವರ ದಿನನಿತ್ಯದ ಮಾತಾಗಿತ್ತು.

ಆಗಷ್ಟೆ ಶಿವಮೊಗ್ಗದಿಂದ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದ ನನಗೆ ತುಮಕೂರಿಗೆ ಮತ್ತೆ ವರ್ಗಾವಣೆ ಮಾಡಿಸಿಕೊಳ್ಳುವುದು ದೂರದ ಮಾತೇ ಆಗಿತ್ತು. ಆದರೂ ಅವರು ನನ್ನನ್ನು ತುಮಕೂರಿಗೆ ಕಳುಹಿಸುವ ವಿಷಯವನ್ನು ಪ್ರಸ್ತಾಪಿಸುತ್ತಲೇ ಇದ್ದರು. ಸಿಜಿಕೆ ಅವರೊಂದಿಗಿನ ಪ್ರತಿ ದಿನದ ಓಡಾಟ ನನಗೆ ಬೆಂಗಳೂರು ಆಪ್ತವಾಗಿಸಿಬಿಟ್ಟಿತ್ತು. ತುಮಕೂರಿಗೆ ಹೋಗಬೇಕೆಂಬ ಸಿಜಿಕೆ ಅವರ ಸೂಚನೆಯನ್ನು ನೆಪ ಹೇಳಿ ಧಿಕ್ಕರಿಸುತ್ತಲೇ ಇದ್ದೆ.
ಅದು ಇಂಥದ್ದೆ ಒಂದು ಮಧ್ಯಾಹ್ನ. ಆಗಷ್ಟೆ ಹೊಸದಾಗಿ ತೆಗೆದುಕೊಂಡಿದ್ದ ನನ್ನ ಮೊಬೈಲ್ ಗೆ ಫೋನ್ ಮಾಡಿ ಗಾಂಧಿಭವನದ ಬಳಿ ಬಾ ಅಂದು ಪೋನಿಟ್ಟಿದ್ದರು ಸಿಜಿಕೆ. ನಾನು ವಾಸವಿದ್ದ ಶ್ರೀನಗರದಿಂದ ಸಿಟಿ ಬಸ್ ಹತ್ತಿ ಯೂನಿವರ್ಸಿಟಿಯ ಗಾಂದಿಭವನಕ್ಕೆ ಹೋಗಬೇಕೆಂದರೆ ಕೊಂಕಣ ಸುತ್ತಿ ಮೈಲಾರ ತಲುಪಿದ ಅನುಭವವೇ ಆಗುತ್ತಿತ್ತು.
ಅದು ಸಿಜಿಕೆ ಸಾಯುವ ಎರಡು ದಿವಸದ ಹಿಂದಿನ ನಮ್ಮಿಬ್ಬರ ಕಡೆ ಭೇಟಿ. ಗಾಂಧಿಭವನದ ತಮ್ಮ ಚೇಂಬರ್ ನಲ್ಲಿ ಕುಳಿತು ಮನೆಯಿಂದ ತಂದಿದ್ದ ದೋಸೆಯನ್ನು ನನಗೆ ತಿನ್ನಲು ಕೊಟ್ಟು `ತುಮಕೂರಿಗೆ ಹೋಗಿ ನಾಟಕ ಮಾಡಿಸು’ ಎಂದೇಳಿ ನನ್ನನ್ನು ಸಂಸ ಬಯಲು ರಂಗಮಂದಿರಕ್ಕೆ ಬಿಟ್ಟು ಸಾಣೇಹಳ್ಳಿ, ದಾವಣಗೆರೆಗೆ ಹೋಗಿ ಬರುವೆ ಎಂದೇಳಿ ಹೊರಟರು.
ಆದರೆ ಸಿಜಿಕೆ ಅಲ್ಲಿಂದ ಜೀವಂತವಾಗಿ ಬರಲೇ ಇಲ್ಲ. ಅವರ ಪಾರ್ಥಿವ ಶರೀರವನ್ನು ಇರಿಸಿದ್ದ ಸಂಸ ಬಯಲು ರಂಗಮಂದಿರದಲ್ಲಿ ದರ್ಶನ ಪಡೆದು ಹೊರಟೆ. ಯಾಕೋ ಮೊದಲ ಬಾರಿಗೆ ಬೆಂಗಳೂರು ಖಾಲಿ ಅನ್ನಿಸಿತು. ಭಾರದ ಹೆಜ್ಜೆಯಲ್ಲಿ ನಾನು ಕೆಲಸ ಮಾಡುವ `ಕನ್ನಡಪ್ರಭ’ ಕಚೇರಿಗೆ ಹೋದೆ. ಅವತ್ತು ರಾತ್ರಿ ಪಾಳೆಯದಲ್ಲಿ ಕೆಲಸ ಮಾಡುತ್ತಿದ್ದೆ. ಆಗ ನಮ್ಮ ಪತ್ರಿಕೆ ಸಂಪಾದಕರಾಗಿದ್ದ ಹೆಚ್.ಆರ್. ರಂಗನಾಥ್(ಈಗ ಪಬ್ಲಿಕ್ ಟಿವಿ ಮುಖ್ಯಸ್ಥರು) ನನ್ನ ಹೆಗಲ ಮೇಲೆ ಕೈ ಹಾಕಿ 2 ವರ್ಷ ತುಮಕೂರಿಗೆ ಹೋಗಿ ವರದಿಗಾರನ ಕೆಲಸ ಮಾಡು ಎಂದು ಸೂಚಿಸಿದರು. ಸಿಜಿಕೆ ಅವರ ಆಶಯ ಕೂಡ ಇದೇ ಆಗಿದ್ದರಿಂದ ತುಮಕೂರಿಗೆ ಹೊರಟು ನಿಂತೆ.

ತುಮಕೂರು ನನ್ನ ಜಿಲ್ಲೆಯಾದರೂ 15 ವರ್ಷಗಳಿಂದ ಸಂಪರ್ಕ ಕಳೆದುಕೊಂಡಿದ್ದೆ. ನಾಟಕ ತಂಡ ಕಟ್ಟುವುದು ಕಷ್ಟದ ಮಾತೇ ಅಂದುಕೊಂಡು ಪತ್ರಿಕೋದ್ಯಮದ ಕೆಲಸದಲ್ಲಿ ತೊಡಗಿಕೊಂಡೆ. ಕಳೆದ 10 ವರ್ಷಗಳಿಂದ ತುಮಕೂರಿನಲ್ಲಿ `ನೀನಾಸಂ’ ನಾಟಕಗಳು ಪ್ರದರ್ಶನ ಕಾಣದೇ ಇರುವುದರ ಬಗ್ಗೆ ನನಗೆ ಮಾಹಿತಿ ಇತ್ತು.
ಅದೇ ಸಮಯದಲ್ಲಿ `ನೀನಾಸಂ’ ತಂಡ ತನ್ನ ತಿರುಗಾಟದ ಸ್ವರೂಪವನ್ನು ಬದಲಾಯಿಸಿತ್ತು. ಪ್ರತಿ ವರ್ಷ ಮೂರು ನಾಟಕಗಳನ್ನು ತೆಗೆದುಕೊಂಡು ರಾಜ್ಯಾದ್ಯಂತ ಪ್ರದರ್ಶನ ಮಾಡುತ್ತಿದ್ದ `ನೀನಾಸಂ’ ಅದೇ ಮೊದಲ ಸಲ `ಮರುತಿರುಗಾಟ’ ಆರಂಭಿಸಿತ್ತು. ಆ ಮರುತಿರುಗಾಟಕ್ಕೆ ವೆಂಕಟರಮಣ ಐತಾಳರು `ಕನ್ನಡ ರಾಮಾಯಣ’ ನಾಟಕ ಮಾಡಿಸಿದ್ದರು.
ಶಿವಮೊಗ್ಗದಲ್ಲಿ ಇದ್ದಾಗಲೇ ಸಂಸ್ಕೃತಿ ಶಿಬಿರದ ನೆಪದಲ್ಲಿ ಗೆಳೆಯರೊಟ್ಟಿಗೆ ಹೆಗ್ಗೋಡಿನ `ನೀನಾಸಂ’ ಗೆ ಹೋಗುತ್ತಿದ್ದೆ. ನಾನು ತುಮಕೂರಿಗೆ ವರ್ಗಾವಣೆಗೊಂಡು ಬಂದ ವಿಷಯ ಹೆಗ್ಗೋಡಿನವರಿಗೆ ಗೊತ್ತಿದ್ದರಿಂದ ನೀನಾಸಂ ಮ್ಯಾನೇಜರ್ `ಶ್ರೀಪಾದ’ ಫೋನ್ ಮಾಡಿ `ಮರುತಿರುಗಾಟವನ್ನು ತುಮಕೂರಿನಲ್ಲಿ ಮಾಡಿಸಲು ಸಾಧ್ಯವೇ. ನೀವು ತಂಡಕ್ಕೆ ದುಡ್ಡು ಕೊಡಬೇಕಾಗಿಲ್ಲ. ಅದನ್ನು ನಾಟಕ ಅಕಾಡೆಮಿಯವರು ಕೊಡುತ್ತಾರೆ. ಕಲಾವಿದರಿಗೆ ಊಟ, ವಸತಿ ಕೊಡಿಸಿದರೆ ಸಾಕು’ ಎಂದು ವಿನಂತಿಸಿಕೊಂಡರು.
ನಾನು ಕೂಡಲೇ ಒಪ್ಪಿಕೊಂಡು ಹತ್ತು ವರ್ಷಗಳ ಬಳಿಕ ತುಮಕೂರಿನಲ್ಲಿ `ನೀನಾಸಂ’ ನಾಟಕ ಪ್ರದರ್ಶಿಸಲು ಸಜ್ಜಾದೆ. ಬಿ.ಎಚ್. ರಸ್ತೆಯಲ್ಲಿರುವ ಸಿದ್ಧಗಂಗಾ ಎಲಿಮೆಂಟ್ರಿ ಸ್ಕೂಲ್ ನ ಬಯಲು ವೇದಿಕೆಯಲ್ಲಿ ನಾಟಕ ಆಯೋಜಿಸಿದೆ. ನಿರೀಕ್ಷೆಗೂ ಮೀರಿದ ಜನ ಬಂದು ನಾಟಕವನ್ನು ಯಶಸ್ವಿಗೊಳಿಸಿದರು. ನಾಟಕ ಯಶಸ್ಸಿನಿಂದ `ಝೆನ್ ಟೀಮ್’ ಸ್ಥಾಪಿಸಿ ಮುಂದೆ ನೀನಾಸಂ ಸೇರಿದಂತೆ ರಾಜ್ಯದ ಎಲ್ಲಾ ರೆಪರ್ಟರಿಗಳ ನಾಟಕಗಳನ್ನು ಮಾಡಿಸಿದೆ.
ಕಳೆದ 11 ವರ್ಷಗಳಿಂದ ಪ್ರಯೋಗಾತ್ಮಕ ನಾಟಕಗಳನ್ನು ಆಯೋಜಿಸುತ್ತಾ, ಪೌರಾಣಿಕ ರಂಗಭೂಮಿ, ಬೀದಿ ನಾಟಕಗಳ ಆಯೋಜನೆಯತ್ತ ಗಮನಹರಿಸುತ್ತಿದ್ದ ಸಂದರ್ಭದಲ್ಲಿ ತುಮಕೂರಿನ ಹಿರಿಯ ರಂಗಕರ್ಮಿಗಳಾದ ಡಾ. ಲಕ್ಷ್ಮಣದಾಸ್, ಹೆಚ್.ಎಂ. ರಂಗಯ್ಯ ಮುಂತಾದವರು ಬರೀ ನಾಟಕ ಆಯೋಜಿಸುವುದರಲ್ಲೇ ತೃಪ್ತಿ ಕಾಣಬೇಡ. ನಾಟಕವನ್ನು ನಿರ್ದೇಶಿಸು ಎಂದು ಆಗಾಗ ಪ್ರೀತಿಯಿಂದ ಚುಚ್ಚುತ್ತಲೇ ಇದ್ದರು. ಇದಕ್ಕೆ ಸಾಥ್ ನೀಡುವಂತೆ ನಾಟಕಮನೆ ಮಹಾಲಿಂಗು ಅವರು ನಮ್ಮ ತಂಡಕ್ಕೆ ನಾಟಕ ನಿರ್ದೇಶಿಸಿಕೊಡಿ ಎಂದು ಹೇಳುತ್ತಲೇ ಇದ್ದರು. ಆದರೆ ರಂಗ ಸಂಘಟನೆ ಖುಷಿಯಲ್ಲಿ ಮುಳುಗಿದ್ದ ನಾನು ನಾಟಕ ನಿರ್ದೇಶಿಸುವ ಗೋಜಿಗೆ ಹೋಗಲಿಲ್ಲ.
ಅದು ಇಂಥದ್ದೆ ಚಳಿಗಾಲದ ಸಂಜೆ. ತುಮಕೂರಿನ ಗುಬ್ಬಿ ವೀರಣ್ಣ ರಂಗಮಂದಿರದ ಕ್ಯಾಂಟಿನ್ ಬಳಿ ಕಾಫಿ ಕುಡಿಯುತ್ತಿದ್ದಾಗ ಈ ಸಲ ನಾಟಕ ನಿರ್ದೇಶಿಸಲೇಬೇಕು ಎಂಬ ಹುಕುಂ ನಮ್ಮ ಹಿರಿಯ ರಂಗ ವಿದ್ವಾಂಸರಿಂದ ಬಂತು. ಅವರ ಪ್ರೀತಿಪೂರ್ವಕ ಒತ್ತಡಕ್ಕೆ ಮಣಿದು ಪೂರ್ಣಚಂದ್ರ ತೇಜಸ್ವಿ ಅವರ `ಕಿರಗೂರಿನ ಗಯ್ಯಾಳಿಗಳು’ ನಾಟಕ ನಿರ್ದೇಶಿಸಲು ಒಪ್ಪಿದೆ.

ತುಮಕೂರಿನ ಗುಬ್ಬಿ ವೀರಣ್ಣ ರಂಗಮಂದಿರದ ಪಕ್ಕವಿರುವ ತಾಲೀಮು ಕೊಠಡಿಯಲ್ಲಿ ಪ್ರತಿ ದಿನ ರಿಹರ್ಸಲ್ ಶುರುಮಾಡಿಕೊಂಡೆ. ಒಂದು ವಾರ ಕಳೆಯುವಷ್ಟರಲ್ಲಿ ನಿರ್ದೇಶನದ ಸಹವಾಸವೇ ಬೇಡವೆಂದು ಓಡಿ ಹೋಗಲು ಯೋಚಿಸಿದೆ. ಆದರೆ ಅಷ್ಟರಲ್ಲಾಗಲೇ ಸಿಕ್ಕ ಕಲಾವಿದರ ಒಡನಾಟದಿಂದ ನಿರ್ದೇಶನದಿಂದ ವಿಮುಖನಾಗಲು ಸಾಧ್ಯವಾಗಲಿಲ್ಲ.
ಸುಮಾರು 1 ತಿಂಗಳ ಕಾಲ 17 ಕಲಾವಿದರನ್ನು ಇಟ್ಟುಕೊಂಡು ನಿರ್ದೇಶನ ಮಾಡಿದ್ದು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದೆ. 17 ಕಲಾವಿದರನ್ನು ಒಳಗೊಂಡ ತಂಡದಿಂದ ನಾನು ಬಹಳಷ್ಟು ಕಲಿತೆ. ನಿರ್ದೇಶನ ಮಾಡಲು ಹಿಂಜರಿಯುತ್ತಿದ್ದ ನನಗೆ ಈಗ ನಾಟಕ ನಿರ್ದೇಶಿಸುವ ಉಮೇದು ಹೆಚ್ಚಾಗಿದೆ. ವೃತ್ತಿ ಕೆಲಸದ ಜೊತೆ ರಂಗ ಸಂಘಟನೆಯಲ್ಲಿ ತೊಡಗಿದ್ದ ನನಗೆ ಈಗ ನಿರ್ದೇಶನ ಹುಚ್ಚು ಶುರುವಾಗಿರುವುದರಿಂದ ನಿರಂತರ ಓದು ಹೆಚ್ಚಾಗಿದೆ. ನಾಟಕ ಪ್ರೀತಿ ಬೆಳೆಯುವುದರ ಜೊತೆಗೆ ರಂಗಭೂಮಿ ಮತ್ತು ರಂಗಕಲಾವಿದರು ನನ್ನನ್ನು ಮತ್ತಷ್ಟು ಮಾನವೀಯಗೊಳಿಸಿದ್ದಾರೆ.
ಇವತ್ತು ತುಮಕೂರಿನಲ್ಲಿ 600 ಕ್ಕೂ ಹೆಚ್ಚು ಕಾಯಂ ಪ್ರೇಕ್ಷಕರನ್ನು ಹುಟ್ಟು ಹಾಕಿದ್ದೇವೆ. ನನ್ನ ನಾಟಕದಲ್ಲಿ ಅಭಿನಯಿಸಿರುವ ಹೊಸ ಹೊಸ ಕಲಾವಿದರಿಗೆ ಕೈ ತುಂಬಾ ಕೆಲಸ ಸಿಕ್ಕಿದೆ. ಕಲಾವಿದರು, ರಂಗಾಸಕ್ತಿ ಬೆಳೆಸಿಕೊಂಡಿರು ಹೊಸ ಕಾಲದ ಹುಡುಗರು, ಹಳೆ ಕಾಲದ ಹಾರ್ಮೋನಿಯಂ ಮೇಸ್ಟ್ರುಗಳು ಹೀಗೆ ಇದಕ್ಕಿಂತ ಪ್ರೀತಿ ಇನ್ನೇನು ಬೇಕು





Your genius sir
Danivariyada nimma kriyashelathe namma ranga parmpareyannu eñnastu srimantagolisali endu aashisi , abhimanadinda………
Chi na halli kirana
“ರಂಗಭೂಮಿ ಮತ್ತು ರಂಗಕಲಾವಿದರು ನನ್ನನ್ನು ಮತ್ತಷ್ಟು ಮಾನವೀಯಗೊಳಿಸಿದ್ದಾರೆ” ಎಂಥಹ ಉತ್ಕೃಷ್ಟವಾದ ಮಾತು. ಸಂಸ್ಕೃತಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ದೇಶ ಸದೃಢವಾಗಿರಲು,ಸುಭೀಕ್ಷೆಯಂದಿರಲು ಅನುವು ಮಾಡಿಕೊಡುತ್ತವಲ್ಲವೆ.ಸಾಂಸ್ಕೃತಿಕ ಚಟುವಟಿಕೆಗಳು ವಿಕಸನಕ್ಕೆ ಹಾದಿ, ಅವು ಸಮಾಜದ ಆಸ್ತಿ. ಮನುಷ್ಯನನ್ನು ಮನುಷ್ಯನನ್ನಾಗಿಸುವ,ಜೀವನಕ್ರಮವನ್ನು ತಿದ್ದಿ ಭವ್ಯತೆಗೊಯ್ಯುವೆಡೆಗೆ ಸಹಕಾರಿಯಾಗುವಂತಾದ್ದು ಮತ್ತು ಶಕ್ತಿಯುತವಾದ್ದು. ನಿಮ್ಮ ರಂಗಚಟುವಟಿಕೆಗಳು ಹೀಗೆ ಮುಂದುವರಿಯಲಿ.