ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಕಿಡಿ ಹೊತ್ತಿಸುವ ಆತ್ಮಕಥನದ ಪುಟಗಳು’

ಮೂಲ : ಸುಕಾಂತ್ ದೀಪಕ್
(Source Book: A Book of Light edited by Jerry Pinto)

ಕನ್ನಡಕ್ಕೆ: ಪ್ರಸಾದ್‌ ನಾಯ್ಕ್

ಅದು ಅಪರಾತ್ರಿ ಮೂರರಿಂದ ಮೂರೂವರೆಯ ಹೊತ್ತು. 

ಒಳಗಿನಿಂದ ಚಿಲಕವನ್ನು ಹಾಕಿ ಭದ್ರಪಡಿಸಿದ್ದ ನನ್ನ ಕೋಣೆಯ ಬಾಗಿಲನ್ನು ಆತ ಜೋರಾಗಿ ಬಡಿಯುತ್ತಿದ್ದ. ನನ್ನ ಹೆಸರನ್ನೂ ಎಡೆಬಿಡದೆ ಕರೆಯುತ್ತಿದ್ದ. ಅಲ್ಲಲ್ಲ, ಪಿಸುಗುಡುತ್ತಿದ್ದ. ನಾನಂತೂ ಆ ಸದ್ದು ನನ್ನ ಕಿವಿಗೆ ಬೀಳುತ್ತಲೇ ಇಲ್ಲವೆಂಬಂತೆ ಕೆಲವೊಮ್ಮೆ ನಾಟಕವಾಡುತ್ತಿದ್ದೆ. ಆಗೆಲ್ಲಾ ಬಾಗಿಲು ತಟ್ಟುವಿಕೆಯು ನಿಲ್ಲದೆ ಮುಂದುವರೆಯುತ್ತಿತ್ತು. ನಾನಾಗ ಹಾಸಿಗೆಯಿಂದ ಎದ್ದು ಬಾಗಿಲಿನತ್ತ ಹೋಗುತ್ತಿದ್ದೆ. ಆದರೆ ಬಾಗಿಲನ್ನು ಮಾತ್ರ ತೆರೆಯುತ್ತಿರಲಿಲ್ಲ. ʻಆ ಸರಳಿನಿಂದ ನನ್ನ ತಲೆಯ ಮೇಲೆ ಹೊಡೆದುಬಿಡು. ನೀನು ನಿನ್ನ ಹಾಸಿಗೆಯಡಿಯಲ್ಲಿ ಅದನ್ನು ಬಚ್ಚಿಟ್ಟಿರುವೆಯೆಂಬುದು ನನಗ್ಗೊತ್ತು. ಅದು ನಿನ್ನಿಂದ ಸಾಧ್ಯವೆಂಬುದೂ ನನಗ್ಗೊತ್ತು’, ಎಂದು ಬೇಡುವ ದನಿಯಲ್ಲಿ ಹೇಳಿಕೊಳ್ಳುತ್ತಿದ್ದಾನೆ ಆತ. ಹೀಗಾದಾಗಲೆಲ್ಲಾ ಅಲ್ಲಿಂದ ತೊಲಗುವಂತೆ ಪ್ರತೀಬಾರಿಯೂ ನಾನವನಲ್ಲಿ ಸ್ಪಷ್ಟವಾಗಿ ಹೇಳುತ್ತೇನೆ. ಆತನೆಂದರೆ ನನಗೆ ಮನೆಯ ನಾಯಿಗಿಂತಲೂ ಕಡೆ. 

ಆತ ನನ್ನಪ್ಪ. 

7 ಜೂನ್ 2006 ರ ಆ ಮುಂಜಾವಿನಂದು ವಿಹಾರಕ್ಕೆಂದು ತೆರಳಿದ್ದ ಅಪ್ಪ ಮತ್ತೆ ಬರಲೇ ಇಲ್ಲ. ಆತ ಯಾವತ್ತೂ ಮರಳಿಬರಲಾರನೆಂಬುದು ನನಗೂ, ನನ್ನ ತಾಯಿಗೂ, ಅಕ್ಕನಿಗೂ ಖಾತ್ರಿಯಾದಾಗ ನಾವು ನೆಮ್ಮದಿಯ ನಿಟ್ಟುಸಿರಿಟ್ಟಿದ್ದೆವು. ಆ ಸುದ್ದಿಯು ನಮಗೊಂದು ಬಗೆಯ ಉತ್ಸವವೇ ಆಗಿತ್ತು. 

‘ಎದ್ದು ಹೋದವನು ಮತ್ಯಾವತ್ತೂ ಮುಖ ತೋರಿಸದಿದ್ದರೆ ಸಾಕು’, ಅಕ್ಕ ಗೊಣಗಿಕೊಂಡಳು. ಇತ್ತ ನನ್ನ ನಿರೀಕ್ಷೆಯೂ, ಹೊಟ್ಟೆಪಾಡಿಗೆಂದು ರಸಾಯನಶಾಸ್ತ್ರವನ್ನು ಬೋಧಿಸುತ್ತಿದ್ದರೂ ಕಲೆಯ ಬಗ್ಗೆ ವಿಶೇಷವಾದ ಪ್ರೀತಿಯಿದ್ದ ಅಮ್ಮನ ಭಾವನೆಯೂ ಅದೇ ಆಗಿತ್ತು. 

* * *

ಸ್ವದೇಶ್ ದೀಪಕ್ ರಿಗಿದ್ದ ಬೈಪೋಲಾರ್ ಡಿಸಾರ್ಡರ್ ಮೊದಲ ಬಾರಿಗೆ ಪತ್ತೆಯಾಗಿದ್ದು 1990 ರಲ್ಲಿ. ಆ ಹೊತ್ತಿಗೆ ಆತ ಎಲ್ಲರಿಗೂ ಒಂದು ಅಸಹ್ಯವೆಂಬಂತೆ ಬದಲಾಗಿದ್ದ. ಕುಟುಂಬಕ್ಕೂ, ಸಂಬಂಧಿಕರಿಗೂ, ಗೆಳೆಯರ ಬಳಗದಲ್ಲೂ. ತನ್ನ ಕೋಣೆಯಲ್ಲಿದ್ದ ಕ್ವೀನ್ ಸೈಜ್ ಹಾಸಿಗೆಯೊಂದರಲ್ಲಿ ಮಲಗಿ ಛಾವಣಿಯನ್ನು ತಾಸುಗಟ್ಟಲೆ ದಿಟ್ಟಿಸಿ ನೋಡುತ್ತಿದ್ದ ಈ ಖ್ಯಾತ ಲೇಖಕ 2004 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರಕ್ಕೆ ಪಾತ್ರನಾಗುವ ಬಗ್ಗೆ ಪ್ರಾಯಶಃ ಆತನಿಗೂ ತಿಳಿದಿರಲಿಕ್ಕಿಲ್ಲವೇನೋ. ನಾನು ಸುಮ್ಮನೆ ಆ ಕೋಣೆಯತ್ತ ಇಣುಕಿ, ಏನೂ ಆಗಲಿಲ್ಲವೆಂಬಂತೆ ನನ್ನ ಕೋಣೆಗೆ ವಾಪಾಸ್ಸಾಗುತ್ತಿದ್ದೆ. ಒಳಗೊಳಗೇ ಭಯವಾಗುತ್ತಿದ್ದರೂ ಅಂಥದ್ದೇನೂ ಇಲ್ಲವೆಂಬಂತೆ ನಾಟಕವಾಡುತ್ತಿದ್ದೆ. ಅಷ್ಟಕ್ಕೂ ಪ್ರಾರ್ಥಿಸುವಂಥದ್ದೇನೂ ಇರಲಿಲ್ಲ. ಆ ದಿನಗಳಲ್ಲೇ ನನ್ನ ಕೋಣೆಯ ಗೋಡೆಗಳ ಮೇಲೆ ಲೆನಿನ್ ಮತ್ತು ಮಾಕ್ರ್ಸ್‍ರವರ ಚಿತ್ರಗಳು ಆವರಿಸಿಕೊಂಡಿದ್ದವು. ಹಾಗೆಯೇ ಬಿಕಿನಿ ಸುಂದರಿ ಸಿಂಡಿ ಕ್ರಾಫರ್ಡ್ ಚಿತ್ರವೂ ಬಗಲಿನಲ್ಲಿತ್ತು. 

ಸ್ವದೇಶ್ ಮೊಟ್ಟಮೊದಲ ಬಾರಿ ಆತ್ಮಹತ್ಯೆ ಯತ್ನವನ್ನು ಮಾಡಿದ್ದು 1999 ರಲ್ಲಿ. ಬಾತ್ ರೂಮಿನಲ್ಲಿ ಅದೇನೋ ಭಯಂಕರ ಸದ್ದು. ಅಮ್ಮ ಮತ್ತು ಅಕ್ಕ ಆ ಸದ್ದನ್ನು ಕೇಳಿದೊಡನೆ ಎದ್ದೆವೋ ಬಿದ್ದೆವೋ ಎಂಬಂತೆ ಸ್ನಾನಗೃಹದತ್ತ ಓಡಿಹೋಗಿದ್ದರು. ನಾನು ಎಚ್ಚರವಾಗಿದ್ದರೂ ಮಿಸುಕಾಡಲಿಲ್ಲ. ಅಷ್ಟಕ್ಕೂ ಅದು ರಾತ್ರಿಯ ಹೊತ್ತಾಗಿತ್ತು. ನಾನು ಆ ಹೊತ್ತಿಗೆ ಮಲಗಿರಬೇಕಿತ್ತು. ಇಂಥವೆಲ್ಲಾ ನನಗೆ ಗೊತ್ತಿರಬೇಕಾದ ವಯಸ್ಸೂ ಅದಲ್ಲವಲ್ಲಾ. ವೈದ್ಯೆಯಾಗಿದ್ದ ನನ್ನ ಕಸಿನ್ ಒಬ್ಬರನ್ನು ತುರ್ತಾಗಿ ಅಂದು ಕರೆ ಹೋಯಿತು. ಸ್ವಲ್ಪ ಹೊತ್ತಿನ ನಂತರ ಆಕೆ ತನ್ನ ಪತಿಯೊಂದಿಗೆ ನಮ್ಮ ಮನೆಗೆ ಬಂದರು. ಆತನೂ ವೈದ್ಯನಾಗಿದ್ದ. ತನ್ನದೇ ಜೀವವನ್ನು ಕಳೆದುಕೊಳ್ಳುವ ಅಪ್ಪನ ಆಸೆಗೆ ಈ ವೈದ್ಯರು ತಣ್ಣೀರೆರಚಿದ್ದರು. ಇಬ್ಬರೂ ನಿದ್ದೆಯ ಮಂಪರಿನಲ್ಲಿದ್ದ ಹೊರತಾಗಿಯೂ ವೈದ್ಯರಾಗಿ ಏನೆಲ್ಲಾ ಮಾಡಬೇಕಿತ್ತೋ, ಅವಷ್ಟನ್ನೂ ಮಾಡಿ ಹೋದರು. ಇವೆಲ್ಲವೂ ನಡೆಯುವಷ್ಟರಲ್ಲಿ ಎರಡು ತಾಸುಗಳು ಕಳೆದುಹೋಗಿದ್ದವು. ಆದದ್ದಾಗಲಿ, ನಾನು ಒಂದಿಂಚೂ ಅಂದು ಕದಲಲಿಲ್ಲ.   

ಅಪ್ಪನನ್ನು ಮನೋವೈದ್ಯರ ಬಳಿ ಚಿಕಿತ್ಸೆಗೆಂದು ಕರೆದೊಯ್ಯಬೇಕಾಗಿರುವ ಸಮಯವು ಬಂದಾಗಿದೆಯೆಂಬುದು ನನ್ನ ಕಸಿನ್ ಅಭಿಪ್ರಾಯವಾಗಿತ್ತು. ಈ ಸಲಹೆಯಂತೆ ಅಪ್ಪನನ್ನು ಚಂಡೀಗಢದಲ್ಲಿರುವ ಪೋಸ್ಟ್ ಗ್ರಾಜ್ಯುಯೇಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಆಂಡ್ ರಿಸರ್ಚ್ (ಪಿ.ಜಿ.ಐ) ಕೇಂದ್ರಕ್ಕೆ ಕರೆದೊಯ್ಯಲಾಯಿತು. ಡ್ರೈವ್ ಮಾಡಿಕೊಂಡು ಹೋಗುವುದಾದರೆ ಇದು ಅಂಬಾಲಾದಿಂದ ಸುಮಾರು ಒಂದು ತಾಸಿನಷ್ಟು ದೂರವಿದೆ. ಅಸಲಿಗೆ ನಾವು ಅಂಬಾಲಾದಲ್ಲೇ ನೆಲೆಸಿದ್ದೆವು (ನಾನು ಸದ್ಯ ನೆಲೆಸಿರುವ ಮನೆಯೂ ಅದೇ). ಅಪ್ಪನಿಗೆ ಅಲ್ಲಿ ತರಹೇವಾರಿ ಮಾತ್ರೆಗಳನ್ನು ತಿನ್ನಿಸಿದರು. ಮಾತ್ರೆಗಳನ್ನು ತಿಂದುಕೊಂಡು ಆತ ದಿನವಿಡೀ ಗಂಟೆಗಟ್ಟಲೆ ಗಾಢನಿದ್ರೆಯಲ್ಲಿರುತ್ತಿದ್ದ. ಕೆಲ ದಿನಗಳ ನಂತರ ಅಪ್ಪ ಮಾತ್ರೆ ನುಂಗುವುದನ್ನೇ ಸಂಪೂರ್ಣವಾಗಿ ನಿಲ್ಲಿಸಿಬಿಟ್ಟ. ನರಳುವಿಕೆಯ ಅವಧಿಯು ಮತ್ತೆ ಬಂದಿತ್ತು. ಆದರೆ ಅದು ಅವನಿಗಷ್ಟೇ ಸೀಮಿತವಾಗಿರಲಿಲ್ಲ. 

1991 ರಲ್ಲಿ ಅಪ್ಪ `ಕೋರ್ಟ್ ಮಾರ್ಷಲ್’ ಎಂಬ ನಾಟಕವನ್ನು ಬರೆದಿದ್ದ. ಅದು ದೇಶದೆಲ್ಲೆಡೆ ವಿಮರ್ಶಕರಿಂದ ಭಾರೀ ಪ್ರಶಂಸೆಯನ್ನು ಗಳಿಸಿಕೊಂಡಿತ್ತು. ಕೋಲ್ಕತ್ತಾದಲ್ಲಿ ನಡೆದಿದ್ದ ಈ ನಾಟಕದ ಮೊದಲ ಪ್ರದರ್ಶನದಲ್ಲೇ ಅಪ್ಪ ಆಕೆಯನ್ನು ಭೇಟಿಯಾಗಿದ್ದು. ಅಪ್ಪ ಆಕೆಯನ್ನು `ಮಾಯಾವನಿ’ ಎಂದು ಕರೆಯುತ್ತಿದ್ದ. ಅವಳನ್ನೆಂದೂ ಮರೆಯಲಿಲ್ಲ ಆತ. ಆ ಪದದ ಆಂಗ್ಲ ಅನುವಾದದ ಬಗ್ಗೆ ಅಪ್ಪನ ಬಳಿ ಕೇಳಿದ್ದು ನನಗಿನ್ನೂ ನೆನಪಿದೆ. ಅಪ್ಪ ನನ್ನ ಕಣ್ಣುಗಳನ್ನೇ ದುರುಗುಟ್ಟಿ ನೋಡುತ್ತಾ ಹೇಳಿದ್ದ: ‘ಮಾಯಾವನಿ ಎಂಬ ಪದದಲ್ಲಿರುವ ಶಕ್ತಿಯನ್ನು ಹಿಡಿದಿಡುವಷ್ಟು ಸಾಮಥ್ರ್ಯವು ಇಂಗ್ಲಿಷ್ ಭಾಷೆಗಿದೆ ಎಂದು ನಿನಗೆ ನಿಜಕ್ಕೂ ಅನ್ನಿಸುತ್ತೇನೋ?’. ಹೀಗೆ ಅಂದು ನನಗೆ ಹೇಳುತ್ತಿದ್ದ ಮನುಷ್ಯ ಅಂಬಾಲಾದ ಕಾಲೇಜೊಂದರಲ್ಲಿ ಎಂ.ಎ ಇಂಗ್ಲಿಷ್ ವಿದ್ಯಾರ್ಥಿಗಳಿಗೆ ಇಪ್ಪತ್ತಾರು ವರ್ಷಗಳ ಕಾಲ ಇಂಗ್ಲಿಷ್ ಭಾಷೆಯನ್ನು ಬೋಧಿಸಿದಾತ (ಕೊನೆಗೆ ನಾನೇ ನನ್ನ ಪರಿಮಿತ ಜ್ಞಾನದಲ್ಲಿ ಈ ಪದಕ್ಕೊಂದು ಅನುವಾದವನ್ನು ಸಿದ್ಧಪಡಿಸಿದ್ದೆ. ‘ಮಾಯಾವನಿ’ ಎಂದರೆ ‘ಭ್ರಮಾಲೋಕದ ಮಾಯಗಾತಿ’).  

ಅಪ್ಪನ ಅನಾರೋಗ್ಯದ ಬಗ್ಗೆಯೂ ನನಗೆ ಅವನಲ್ಲಿ ಕೇಳಿದ ನೆನಪು. ಅಷ್ಟಕ್ಕೂ ಅಂಥದ್ದೇನು ದೊಡ್ಡರೋಗ ಬಂದಿತ್ತು ಅವನಿಗೆ? ಖಾಯಿಲೆಯನ್ನು ಗುಣಪಡಿಸಬಹುದು ಎಂದು ವೈದ್ಯರು ಹೇಳಿದ್ದರೂ ಅಪ್ಪ ಔಷಧಿಗಳನ್ನೇಕೆ ತೆಗೆದುಕೊಳ್ಳುತ್ತಿರಲಿಲ್ಲ? “ಬಹಳ ಅಪರೂಪಕ್ಕೆ ಒಂದೊಳ್ಳೆಯ ಪ್ರಶ್ನೆ ಕೇಳಿದೆ ಮಾರಾಯ. ಮಾಟಮಂತ್ರದ ಪರಿಣಾಮಗಳನ್ನು ಗುಣಪಡಿಸಲಾಗುತ್ತದೋ? ಅಷ್ಟಕ್ಕೂ ಜುಜುಬಿ ಮಾತ್ರೆಗಳಿಂದ ಅವುಗಳನ್ನು ಗುಣಪಡಿಸಿಕೊಳ್ಳುವ ದರ್ದು ಯಾರಿಗೆ ಬೇಕು? ನಾನು ಅವಳನ್ನು ಅವಮಾನಿಸಿದ್ದರಿಂದಲೇ ಖಾಯಿಲೆ ಬಿದ್ದೆ. ಅವಳ ಪ್ರೀತಿಯನ್ನು ಮನಸಾರೆ ಒಪ್ಪಿಕೊಳ್ಳಲಾರದೆ ಹೋದೆ”, ಎಂದಿದ್ದ ಅಪ್ಪ. 

‘ಹಾಗಾದ್ರೆ ನಾನು ಯಾವ ಹೆಣ್ಣಿನ ಪ್ರೀತಿಯನ್ನೂ ನಿರಾಕರಿಸಬಾರದೇ?’, ನನ್ನ ಪ್ರಶ್ನೆ. 

‘ಹೆಣ್ಣೊಬ್ಬಳು ತಾನಾಗಿಯೇ ನಿನ್ನಲ್ಲಿ ಆಸಕ್ತಿಯನ್ನು ತೋರ್ಪಡಿಸುವಾಗ ಮಾತ್ರ ಇವೆಲ್ಲಾ ಆಗೋದು. ನೀನಂತೂ ಥೇಟು ನಿನ್ನಮ್ಮನ ಥರ. ಬಹುತೇಕ ಪರಿಪೂರ್ಣವೆಂಬಷ್ಟಿನ ಸೌಂದರ್ಯ. ನನ್ನಲ್ಲಿರುವ ಹಸಿಹಸಿ ವ್ಯಕ್ತಿತ್ವ, ನನ್ನಲ್ಲಿರುವ ಕೆಟ್ಟ ಮಾತು, ನನ್ನ ಅಪರಿಪೂರ್ಣತೆ, ಮೋಡಿಗಳು ನಿನ್ನಲ್ಲಿಲ್ಲ. ಮಾಟಮಂತ್ರಗಳನ್ನು ಒಂದಷ್ಟೂ ತಿಳಿದಿರದ ಹೆಂಗಸರು ಮಾತ್ರ ನಿನ್ನನ್ನು ಸೆಳೆಯಬಲ್ಲರು. ಈ ವಿಚಾರದಲ್ಲಿ ನೀನು ಅದೃಷ್ಟವಂತ. ಆದರೂ ಗಂಭೀರವಾಗಿ ಒಂದು ಸಂಗತಿಯನ್ನು ಹೇಳುತ್ತೇನೆ ಕೇಳು. ಪ್ರೀತಿ ಬೇಕು ಎಂದ ಹೆಂಗಸರಿಗೆಲ್ಲಾ ಖಂಡಿತವಾಗಿ ನಿನ್ನೊಳಗಿರುವ ಪ್ರೀತಿಯನ್ನು ಕೊಡು’, ಅಪ್ಪ ಹೇಳಿದ. 

ಹೀಗೆ ಹೇಳಿದ ಅಪ್ಪ ಮನಸಾರೆ ನಕ್ಕುಬಿಟ್ಟ. ನಾನೂ ಕೂಡ ನಕ್ಕೆ. ಅವನಲ್ಲಿರುವ ಕ್ರೌರ್ಯ ನನ್ನ ಅಮ್ಮನಿಗೂ, ಅಕ್ಕನಿಗೂ ಆಗದು. ಆದರೆ ನನಗೋ ಅದರ ಮೇಲೆ ವಿಪರೀತ ಮೋಹ. 

ಅಪ್ಪ ಕ್ರಮೇಣ ಕಾಲೇಜಿಗೆ ಹೋಗುವುದನ್ನೂ ನಿಲ್ಲಿಸಿಬಿಟ್ಟಿದ್ದ. ಅಷ್ಟು ಮಾಡಲೂ ಪ್ರಾಣ ಹೋಗುವಷ್ಟು ಸುಸ್ತಾಗುತ್ತೆ ಎಂದೆಲ್ಲಾ ಹೇಳುತ್ತಿದ್ದ. ಆರಂಭದ ವರ್ಷಗಳಲ್ಲಿ ಈ ಲಕ್ಷಣಗಳೆಲ್ಲಾ ಬೈಪೋಲಾರ್ ಡಿಸಾರ್ಡರಿಗಿಂತಲೂ ಖಿನ್ನತೆಯತ್ತ ಬೊಟ್ಟುಮಾಡಿ ತೋರಿಸುತ್ತಿದ್ದವು. ಸುಡುವಷ್ಟು ಕೋಪ ಮತ್ತು ನಮ್ಮನ್ನೆಲ್ಲಾ ತನ್ನ ಕಟುವಾದ ಮಾತುಗಳಿಂದಷ್ಟೇ ಕೊಲ್ಲಬಲ್ಲ ಸಾಮಥ್ರ್ಯವಿದ್ದ ಅಪ್ಪ, ಈಗ ನಾವೇನೇ ಅಂದರೂ ತೆಪ್ಪಗೆ ಕೇಳಿಸಿಕೊಳ್ಳುತ್ತಿದ್ದ. ಅಮ್ಮನ ಅಸಮಾಧಾನವೂ ಗೊಣಗಾಟವಾಗಿ ಆಗಾಗ ಬದಲಾಗುತ್ತಿತ್ತು. ‘ಮನೆಯಾಕೆ ಕಷ್ಟಪಟ್ಟು ದುಡಿದು ಹಾಕುತ್ತಿದ್ದರೆ ನೀನಿಲ್ಲಿ ಮೋಜು ಮಾಡುತ್ತಿರುವೆಯಲ್ಲಾ ನಾಚಿಕೆಗೆಟ್ಟವನೇ’, ಎಂದೆಲ್ಲಾ ಅಮ್ಮ ಬುಸುಗುಡುತ್ತಿದ್ದಳು. ಈ ಬಗ್ಗೆ ಪ್ರತಿಕ್ರಿಯೆಯನ್ನೇ ನೀಡದೆ ಅಪ್ಪ ತೆಪ್ಪಗಿರುತ್ತಿದ್ದ. ಕ್ರಮೇಣ ಅಪ್ಪನ ನಡಿಗೆಯೂ ನಿಧಾನವಾಗಿ, ಕತ್ತಲು ಮತ್ತು ಫಿಲ್ಟರ್ ಇಲ್ಲದ ಸಿಗರೇಟು ಸುಟ್ಟ ಹೊಗೆಯಿಂದ ಆವೃತವಾಗಿದ್ದ ತನ್ನ ಕೋಣೆಯಲ್ಲೇ ಬಚ್ಚಿಟ್ಟುಕೊಳ್ಳುವವನಂತೆ ಅಪ್ಪ ಮರೆಯಾಗುತ್ತಿದ್ದ. 

ಈ ವಿಚಾರದಲ್ಲಿ ನಾನು ಅಮ್ಮನ ಜೊತೆಗಿದ್ದೆ. ಅಪ್ಪನ ಕೇವಲ ಇರುವಿಕೆಯೇ ನನಗೆ ವಿಷದಂತಾಗಿತ್ತು. ಅಲ್ಲಾ… ನೋಡಲು ಅಷ್ಟು ಕಟ್ಟುಮಸ್ತಾಗಿರುವ ಆಸಾಮಿಯೊಬ್ಬ ತಾನೊಬ್ಬ ಮಹಾರೋಗಿಷ್ಟನೆಂಬಂತೆ ದಿನವಿಡೀ ಮಲಗಿರುತ್ತಾನಲ್ವಾ ಎಂದು ಒಳಗೊಳಗೇ ಅಪ್ಪನ ಬಗ್ಗೆ ತೀವ್ರವಾಗಿ ಕಾರಿಕೊಳ್ಳುತ್ತಿದ್ದೆ. 

ನನ್ನ ಕಾಲೇಜು ದಿನಗಳು ಆರಂಭವಾಗಿದ್ದವು. ಅಪ್ಪ ಬೋಧಿಸುತ್ತಿದ್ದ ಕಾಲೇಜಿಗೇ ನಾನು ಹೋಗುತ್ತಿದ್ದೆ. ಅಸಲಿಗೆ ಅಲ್ಲಿ ಪ್ರವೇಶವನ್ನು ಪಡೆಯಲು ನನಗೆ ಎಳ್ಳಷ್ಟೂ ಇಷ್ಟವಿರಲಿಲ್ಲ. ಅಪ್ಪನ ಬಗ್ಗೆ ಕಾಲೇಜಿನ ಉಪನ್ಯಾಸಕರು ಕೇಳಿದರೆ? ಇನ್ನು ಆ ಕಾಲೇಜಂತೂ ಭಾರೀ ದೇಸಿ ಎಂಬಂತಿತ್ತು. ನನ್ನ ಬಹಳಷ್ಟು ಮಿತ್ರರು ಉನ್ನತ ವಿದ್ಯಾಭ್ಯಾಸಕ್ಕೆಂದು ದೊಡ್ಡ ಶಹರಗಳತ್ತ ತೆರಳಿದರೆ ನಾನಿಲ್ಲೇ ಉಳಿದುಕೊಂಡಿದ್ದೆ. ಕಾಲೇಜಿನಲ್ಲಿ ಉಪನ್ಯಾಸಕರನ್ನೂ ಸೇರಿದಂತೆ ನಾನು ಯಾರ ಜೊತೆಗೂ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಬಹಳಷ್ಟು ಉಪನ್ಯಾಸಕರು ನನ್ನ ಗೆಳೆಯರಂತೆಯೇ ಕಾಣುತ್ತಿದ್ದರು. ಶುದ್ಧ ಅವಿವೇಕಿಗಳಂತೆ! ಇನ್ನು ಕಲಿಸಲು ಸಾಮಥ್ರ್ಯವಿದ್ದ ಈ ಒಬ್ಬ ಮಾತ್ರ ಕಾಲೇಜಿನತ್ತ ತಲೆ ಹಾಕುತ್ತಲೂ ಇರಲಿಲ್ಲ. 

ಒಮ್ಮೆ ಸಿಗರೇಟನ್ನು ಖರೀದಿಸಲು ನಾನು ಕಾಲ್ನಡಿಗೆಯಲ್ಲಿ ಹೊರಟಿದ್ದೆ. ಮನೆಗೆ ವಾಪಾಸ್ಸಾದರೆ ನೆರೆಹೊರೆಯ ಸದಸ್ಯನೊಬ್ಬ ಬಂದು ನೀವು ತುರ್ತಾಗಿ ಮೊಂಗಾ ಆಸ್ಪತ್ರೆಗೆ ಹೋಗಿ ಎಂದು ಹೇಳಿದ. ಸ್ವದೇಶ್ ದೀಪಕ್ ಈ ಬಾರಿ ತನ್ನನ್ನು ತಾನು ಬೆಂಕಿಗೆ ಆಹುತಿ ಮಾಡಿಕೊಳ್ಳಲು ಯತ್ನಿಸಿದ್ದನಂತೆ. ಈ ಸುದ್ದಿಯನ್ನು ಕೇಳಿ ನನ್ನ ಮುಖಭಾವಗಳೇನೂ ಬದಲಾಗಲಿಲ್ಲ. ‘ಥೂ, ಮತ್ತದೇ ಗೋಳು’, ನಾನು ನನ್ನಷ್ಟಕ್ಕೇ ಹೇಳಿಕೊಂಡೆ. 

ಅಂತೂ ನನ್ನ ಎನ್ಫೀಲ್ಡ್ ಬೈಕನ್ನು ಹತ್ತಿಕೊಂಡು, ಉದ್ದೇಶಪೂರ್ವಕವಾಗಿಯೇ ತಲುಪಲು ಹೆಚ್ಚು ದಾರಿ ತಗಲುವ ದಾರಿಯೊಂದನ್ನು ಹಿಡಿದು, ನೇರವಾಗಿ ಆಸ್ಪತ್ರೆಯ ಗೇಟಿನ ಬಳಿ ಬೈಕನ್ನು ನಿಲ್ಲಿಸಿದೆ. ಭಾರೀ ತುರ್ತು ಎಂಬ ಕಾರಣಕ್ಕಲ್ಲ. ಅಂಥಾ ಕಾಳಜಿಯಾಗಲಿ, ಭಾವನೆಯಾಗಲಿ ನನ್ನಲ್ಲಿರಲಿಲ್ಲ. ಬಹುಷಃ ಆಸ್ಪತ್ರೆಯ ಮುಖ್ಯದ್ವಾರದ ಬಳಿ ಕುಳಿತಿದ್ದ ಕೆಲ ಅಮಾಯಕರನ್ನು ಭಯಪಡಿಸುವ ಪುಂಡಾಟಿಕೆಯಷ್ಟೇ ನನ್ನದಾಗಿತ್ತು. 

ಹೋಗಿ ನೋಡಿದರೆ ನನ್ನಮ್ಮ ಅಪ್ಪನ ಪಕ್ಕ ಕುಳಿತಿದ್ದಳು. ವೈದ್ಯರಾಗಿದ್ದ ಕಸಿನ್ ಗಳೂ ಜೊತೆಗಿದ್ದರು. ಅಪ್ಪ ಪ್ರಜ್ಞಾವಸ್ಥೆಯಲ್ಲಿದ್ದ. ‘ಏನಾಯಿತು?’, ನಾನು ಯಾವುದೇ ಅಳುಕಿಲ್ಲದೆ ಅಪ್ಪನಿಗೆ ಕೇಳಿದೆ. 

‘ಇಷ್ಟು ದಡ್ಡತನದ ಪ್ರಶ್ನೆಗೇನು ಉತ್ತರಿಸುವುದು? ಕೊಂಚ ಸುಧಾರಿಸಬಹುದು ನೀನು’, ಎಂದುಬಿಟ್ಟ ಅಪ್ಪ. 

ಅಪ್ಪನ ಮಾತನ್ನು ಕೇಳಿ ಅಲ್ಲಿದ್ದ ವೈದ್ಯೆಯೊಬ್ಬಳು ನಕ್ಕಳು. ಅದ್ಯಾಕೋ ಏನೋ, ಕೂಡಲೇ ನಾಚಿಕೊಂಡಳು ಕೂಡ. 

ಆ ಭಂಡ ಕುಚೋದ್ಯವು ನನ್ನಲ್ಲಿ ಯಾವ ಮಟ್ಟಿನ ರೋಷವನ್ನು ಹುಟ್ಟಿಸಿತೆಂದರೆ ಅಪ್ಪನನ್ನು ಕೊಂದೇಬಿಡುವೆನೆಂಬಷ್ಟು ಮೈಯೆಲ್ಲಾ ಉರಿದುಹೋಯಿತು. ಕೊನೆಗೂ ಕೆಲ ದಿನಗಳ ನಂತರ ಅಪ್ಪನನ್ನು ಆಸ್ಪತ್ರೆಯಿಂದ ಮನೆಗೆ ಕರೆದೊಯ್ಯಲಾಯಿತು. 

***********

ಸುಮಾರು ಒಂದು ವರ್ಷದ ನಂತರ ಈ ಘಟನೆಯ ಬಗ್ಗೆ ಅಪ್ಪನೇ ಸ್ವತಃ ನನಗೆ ನೆನಪಿಸಿದ. ಅಂದು ನನಗೆ ಬಂದ ಕೋಪಕ್ಕೆ ಸುಟ್ಟರೋಗಿಗಳ ವಿಭಾಗಕ್ಕೆ ಬೇರ್ಯಾವುದೋ ಆಸ್ಪತ್ರೆಯಿಂದ ಬಂದಿದ್ದ ಆ ಸ್ಫುರದ್ರೂಪಿ ವೈದ್ಯೆಯ ಉಪಸ್ಥಿತಿಯೊಂದೇ ಕಾರಣವಾಯಿತೇ ಎಂದು ಕೇಳಿದ. ನಾನು ಹೌದೆಂದು ಒಪ್ಪಿಕೊಂಡೆ. ನನ್ನ ಅಳುಕಿಲ್ಲದ ಉತ್ತರವು ಅಪ್ಪನಿಗೆ ಖುಷಿ ಕೊಟ್ಟಿತ್ತು. 

ಪ್ರತೀಕಾರಕ್ಕಾಗಿ ನನ್ನ ಸರದಿಯು ಬರುವಷ್ಟರಲ್ಲಿ ಕೆಲ ಕಾಲವು ಕಳೆದುಹೋಗಿತ್ತು. ನಾವಿರುವ ಮನೆಯು ನೋಡಲು ನಿತ್ಯ ನಿರ್ವಹಣೆಯ ಯಾವುದೇ ಸಮರ್ಪಕ ವ್ಯವಸ್ಥೆಗಳಿಲ್ಲದ, ಕಾಲೋನಿಯಲ್ ಕಾಲದ ದೈತ್ಯ ಬಂಗಲೆಯಂತಿದೆ. ಥೇಟು ಹಾರರ್ ಚಲನಚಿತ್ರಗಳಲ್ಲಿ ಸಾಮಾನ್ಯವಾಗಿ ತೋರಿಸಲ್ಪಡುವ ಭೂತಬಂಗಲೆಗಳಂತೆ. ನಮ್ಮ ಸ್ಟೋರ್ ರೂಮಿನಲ್ಲಿ ಸಾಮಾನ್ಯವಾಗಿ ಕೆಲ ಹೆಚ್ಚುವರಿ ಗ್ಯಾಸ್ ಸಿಲಿಂಡರ್ ಗಳನ್ನು ಅಡುಗೆಯ ಅವಶ್ಯಕತೆಗೆಂದೇ ಇಡಲಾಗುತ್ತಿತ್ತು (ಪ್ರಸ್ತುತ ನಾನು ಏಕಾಂಗಿಯಾಗಿದ್ದರೂ ಆ ಸಿಲಿಂಡರ್ ಗಳು ಇಂದಿಗೂ ಅಲ್ಲೇ ಇವೆ). ಒಮ್ಮೆ ಅಪ್ಪ ಆ ಕೋಣೆಯತ್ತ ಸುಮ್ಮನೆ ನಡೆದುಹೋಗಿದ್ದ. ಹೋದವನು ಬಹಳ ಹೊತ್ತಾದರೂ ಬರಲಿಲ್ಲವಾದ್ದರಿಂದ ಅಪ್ಪನನ್ನು ಹುಡುಕಿಕೊಂಡು ಅಮ್ಮ ಅತ್ತ ತೆರಳುವಂತಾಯಿತು. ಕಳ್ಳ ಹೆಜ್ಜೆಯನ್ನಿಡುತ್ತಾ ಕೆಟ್ಟ ಹಿಂದಿ ಸಿನೆಮಾಗಳಲ್ಲಿ ಕಾಣಸಿಗುವ ಗೂಢಾಚಾರಿಕೆಯ ಸಾಹಸಿಯಂತೆ ಅಮ್ಮ ಅಂದು ಅಪ್ಪನ ತಲಾಶೆಯಲ್ಲಿ ಹೋಗಿದ್ದಳು. 

ನನಗೆ ಅಚಾನಕ್ಕಾಗಿ ಅಮ್ಮನ ಕಿರುಚಾಟದ ಸದ್ದು ಕೇಳಿಸಿತು. ಈ ಬಾರಿ ಕೂಡಲೇ ಅವಳತ್ತ ಧಾವಿಸಿದೆ. ಅಪ್ಪ ಬೆಂಕಿಕಡ್ಡಿಯೊಂದನ್ನು ಗೀರುತ್ತಾ ಸಿಲಿಂಡರ್ ಗಳನ್ನು ಸ್ಫೋಟಿಸಿ ಸಾವನ್ನಪ್ಪಿಕೊಳ್ಳಲು ಆ ಪುಟ್ಟ ಕೋಣೆಯಲ್ಲಿ ಹೆಣಗುತ್ತಿದ್ದ. ಅವನ ಬಲಗೈಯು ಇನ್ನೂ ಬ್ಯಾಂಡೇಜುಗಳ ಮರೆಯಲ್ಲೇ ಇದ್ದಿದ್ದರಿಂದಾಗಿ ಹಳೇ ಬೆಂಕಿಕಡ್ಡಿಯನ್ನು ನೆಟ್ಟಗೆ ಗೀರುವುದಕ್ಕೂ ಆತ ಕಷ್ಟ ಪಡುತ್ತಿದ್ದ. 

“ಕೊಂಚ ಸುಧಾರಿಸಬಹುದು ನೀನು”, ನಾನು ಖಾರವಾಗಿಯೇ ಹೇಳಿದೆ. ನನ್ನ ಮಾತು ಅವನನ್ನು ತೀವ್ರವಾಗಿ ಘಾಸಿಗೊಳಿಸಿದ್ದು ಅವನ ನೋಟದಿಂದಲೇ ನನಗೆ ಸ್ಪಷ್ಟವಾಗಿತ್ತು. 

ಅಪ್ಪನ ಕೈಯಿಂದ ಬೆಂಕಿಪೊಟ್ಟಣವನ್ನು ಕಸಿದುಕೊಂಡು ನಾನು ಹೊರ ನಡೆದೆ. ಎಂದಿನಂತೆ ಕಸಿನ್ ವೈದ್ಯದ್ವಯರಿಗೆ ಕರೆ ಹೋಯಿತು. ಹಲವು ವರ್ಷಗಳಿಂದ ಅಪ್ಪನ ಜೊತೆಗಿದ್ದು ಅಮ್ಮನೂ ಕೂಡ ಧಾರಾಳವಾಗಿ ಹಿಂದಿ ಭಾಷೆಯ ವಾಚಾಮಗೋಚರ ಬೈಗುಳಗಳನ್ನು ಕಲಿತುಕೊಂಡಿದ್ದಳು. ಇತ್ತ ದೇಹದಲ್ಲಿ ಕಸುವೇ ಇಲ್ಲದಿದ್ದ ವ್ಯಕ್ತಿಯೊಬ್ಬ ಇಷ್ಟಲ್ಲಾ ಕಸರತ್ತುಗಳನ್ನು ಮಾಡಿದ್ದನ್ನು ನೋಡಿದ ಮೇಲಂತೂ, ಕಲಿತ ಬೈಗುಳಗಳನ್ನೆಲ್ಲಾ ಅಮ್ಮ ಎರ್ರಾಬಿರ್ರಿಯಾಗಿ ಕಾರುತ್ತಾ ತನ್ನ ಅಸಮಾಧಾನವನ್ನು ಹೊರಹಾಕಿದಳು. 

ಕೂಡಲೇ ವೈದ್ಯರು ನಮ್ಮ ಮನೆಯತ್ತ ದಾಪುಗಾಲಿಕ್ಕಿದ್ದರು. ನನ್ನ ಕಸಿನ್ ವೈದ್ಯೆಯ ಗಂಡ ಎಂದಿನಂತೆ ಶಾಂತಚಿತ್ತನಾಗಿದ್ದ. ಆತ ಅಪ್ಪನನ್ನು ಸ್ಟಡಿ ರೂಮಿಗೆ ಕರೆದೊಯ್ದು ಸೂಸೈಡ್ ನೋಟ್ ಒಂದನ್ನು ಬರೆಯಲು ಹೇಳಿದ. ಆ ಪತ್ರದಲ್ಲಿ ದಿನಾಂಕವನ್ನು ಹಾಕಬಾರದೆಂಬುದು ಅವನ ಸೂಚನೆಯಾಗಿತ್ತು. ಅವನ ಸಲಹೆಯು ಅಪ್ಪನಿಗೆ ತಮಾಷೆಯಾಗಿ ಕಂಡಿರಬೇಕು. “ಥ್ಯಾಂಕ್ಸ್. ಇವತ್ತಲ್ಲಾ ನಾಳೆ ಇದು ಆಗುವಂತೆ ನೋಡಿಕೊಳ್ಳುತ್ತೀಯ ಅಲ್ವಾ?”, ವೈದ್ಯನನ್ನು ಕಿಚಾಯಿಸುವಂತೆ ಉಸುರಿದ ಅಪ್ಪ. 

ವೈದ್ಯನಿಗೆ ಅಪ್ಪನ ಪ್ರಶ್ನೆಗೆ ಉತ್ತರಿಸುವ ಬಗ್ಗೆ ಆಸಕ್ತಿಯಿದ್ದಂತೆ ಕಾಣಲಿಲ್ಲ. ಬದಲಾಗಿ ಅಪ್ಪನಿಗೆ ತೆಪ್ಪಗೆ ಬರೆಯಲು ಹೇಳಿದ. ಆದರೆ ಯಾವಾಗ ಆತ್ಮಹತ್ಯಾ ಪತ್ರವನ್ನು ಆತ ಡಿಕ್ಟೇಟ್ ಮಾಡಲು ಆರಂಭಿಸಿದನೋ, ಅಪ್ಪನಿಗೆ ಕೋಪದಿಂದ ಮೈಯೆಲ್ಲಾ ಉರಿದುಹೋಯಿತು. “ಸ್ವಲ್ಪ ಸುಮ್ಮನಿರ್ತೀಯಾ? ನನಗೆ ಡಿಕ್ಟೇಷನ್ ಅವಶ್ಯಕತೆಯಿದೆಯೆಂದು ನೀನು ಲೆಕ್ಕಹಾಕಿದ್ದಾದರೂ ಹೇಗೆ? ಅದರಲ್ಲೂ ನಿನ್ನಂಥವನಿಂದ?”, ಕಿಡಿಕಾರಿದ ಅಪ್ಪ. ವೈದ್ಯನ ಪೆಚ್ಚಾದ ಮುಖವನ್ನು ನೋಡುವ ಸುವರ್ಣಾವಕಾಶ ಮಾತ್ರ ದುರಾದೃಷ್ಟವಶಾತ್ ಅಂದು ನನಗೆ ತಪ್ಪಿಹೋಯಿತು.  

ಅಮ್ಮ ಕೂಡಲೇ ಅಕ್ಕನಿಗೆ ಕರೆ ಮಾಡಿ ಆಗಿದ್ದೆಲ್ಲವನ್ನೂ ಹೇಳಿದ್ದಳು. ಆ ದಿನಗಳಲ್ಲಿ ಅಕ್ಕ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಉದ್ಯೋಗಿಯಾಗಿದ್ದಳು. ಅಧಿಕಪ್ರಸಂಗದ ಮಾತುಗಳ ಗೋಜಿಗೆ ಹೋಗದೆ ಅಕ್ಕ ಎಲ್ಲವನ್ನೂ ತಾಳ್ಮೆಯಿಂದ ಕೇಳಿದಳು. ಕೂಡಲೇ ಪಿ.ಜಿ.ಐ ಆಸ್ಪತ್ರೆಯ ಹಿರಿಯ ತಜ್ಞರನ್ನು ಸಂಪರ್ಕಿಸಲಾಯಿತು. ಅಸಲಿಗೆ ಆಸ್ಪತ್ರೆಯ ಮನೋವಿಭಾಗದ ವಾರ್ಡುಗಳಲ್ಲಿ ಖಾಲಿ ಹಾಸಿಗೆಯೇ ಇರಲಿಲ್ಲ. ಬಹುಷಃ ಅಕ್ಕ ತನ್ನ ಸಹೋದ್ಯೋಗಿಗಳ ನೆರವನ್ನು ಪಡೆದುಕೊಂಡಿದ್ದಳೇನೋ. ಹಿರಿಯ ಸಂಪಾದಕನೊಬ್ಬ ಆಸ್ಪತ್ರೆಯ ನಿರ್ದೇಶಕರಿಗೆ ಕರೆ ಮಾಡಿ ಸುಟ್ಟರೋಗಿಗಳ ವಾರ್ಡಿನಲ್ಲಿ ಹಾಸಿಗೆಯೊಂದರ ವ್ಯವಸ್ಥೆಯನ್ನು ಮಾಡಿಸಿದ. ಹಾಗೆಯೇ ಸ್ವದೇಶ್ ದೀಪಕ್ ನ ಆರೋಗ್ಯದ ಮೇಲೆ ನಿಗಾ ಇಡುವಂತೆ ಓರ್ವ ಮನೋವೈದ್ಯರನ್ನೂ ನೇಮಿಸಲಾಯಿತು. ಇವೆಲ್ಲವನ್ನೂ ಅದ್ಯಾವ ಮಟ್ಟಿನಲ್ಲಿ ಸಿದ್ಧಪಡಿಸಲಾಗಿತ್ತೆಂದರೆ ತೀರಾ ಕೃತಕವೆಂದು ಭಾಸವಾಗುವಷ್ಟು. 

ನಾನು ಈ ಬಾರಿ ಅಪ್ಪನಿಂದ ಕೊಂಚ ಹೆಚ್ಚೇ ದೂರ ಉಳಿದುಬಿಟ್ಟೆ. ಆಸ್ಪತ್ರೆಗೆ ಹೋಗಿ ಪದೇ ಪದೇ ಆತನನ್ನು ನೋಡುವ ಬಗ್ಗೆ ನನಗೆ ಆಸಕ್ತಿ ಉಳಿದಿರಲಿಲ್ಲ. ಶಾಲೆ ಮುಗಿಸಿ ನಿತ್ಯವೂ ಆಸ್ಪತ್ರೆಯತ್ತ ತೆರಳುತ್ತಿದ್ದ ಅಮ್ಮ ಅದನ್ನೇ ತನ್ನ ಮನೆಯೆಂಬಂತೆ ಮಾಡಿಕೊಂಡಿದ್ದಳು. ಹಿರಿಯ ಪೋಲೀಸ್ ಅಧಿಕಾರಿಯೊಬ್ಬ ವಾರ್ಡಿನಲ್ಲಿ ಕಾಯಲು ದಿನನಿತ್ಯವೂ ಪೇದೆಯನ್ನು ನೇಮಿಸಿ ಹೋಗುತ್ತಿದ್ದ. ಅಮ್ಮ ಚಂಡೀಗಢಕ್ಕೆ ಮರಳುವವರೆಗೂ ಆ ಪೇದೆಯು ಅಲ್ಲಿ ಕಾಯುತ್ತಾ ನಿಂತಿರಬೇಕಿತ್ತು.  

ಅಪ್ಪ ಸುಟ್ಟರೋಗಿಗಳ ವಾರ್ಡಿನಲ್ಲಿ ಸುಮಾರು ನಾಲ್ಕು ತಿಂಗಳುಗಳ ಕಾಲ ದಾಖಲಾಗಿದ್ದ. ಆತನ ದೇಹದ ಮೇಲೆ ಆಗಲೇ ಆಗಿದ್ದ ಗಾಯಗಳು ಸಂಪೂರ್ಣವಾಗಿ ಗುಣವಾಗಿರಲಿಲ್ಲ. ಹೀಗಾಗಿ ಇವುಗಳ ಉಪಚಾರವೂ ಜೊತೆಜೊತೆಗೇ ನಡೆಯುತ್ತಿತ್ತು. ಆದರೆ ಅಪ್ಪನ ದುರಾದೃಷ್ಟವೆಂಬಂತೆ ಯಾವ ಸ್ಫುರದ್ರೂಪಿ ವೈದ್ಯೆಯೂ ಈ ಬಾರಿ ಅಪ್ಪನ ಆರೈಕೆ ಮಾಡಲು ಬಂದಿರಲಿಲ್ಲ. ಬದಲಾಗಿ ಅಲ್ಲಿ ಇದ್ದಿದ್ದು ಖ್ಯಾತ ವೈದ್ಯರಾಗಿದ್ದ ಡಾ. ಚಾರಿ. ಅಲ್ಲಲ್ಲಿ ಕೇಳಿಬರುತ್ತಿದ್ದ ಊಹಾಪೋಹಗಳನ್ನು ನಂಬುವುದೇ ಆಗಿದ್ದರೆ ಡಾ. ಚಾರಿಯವರು ದಿವಂಗತ ಪ್ರಧಾನಮಂತ್ರಿಗಳಾಗಿದ್ದ ರಾಜೀವ್ ಗಾಂಧಿಯವರ ಛಿದ್ರವಾದ ಮುಖವನ್ನು ಮತ್ತೆ ಕಟ್ಟಿಕೊಟ್ಟಿದ್ದರಂತೆ. ಸೂಸೈಡ್ ಬಾಂಬರ್ ಒಬ್ಬ ನಡೆಸಿದ್ದ ಭೀಕರ ಬಾಂಬ್ ಸ್ಫೋಟವು ರಾಜೀವ್ ಗಾಂಧಿಯವರನ್ನು ಬರ್ಬರವಾಗಿ ಹತ್ಯೆ ಮಾಡಿತ್ತು.

ಸ್ವದೇಶನ ಸಹೋದರಿಯೊಬ್ಬಳು ಆಸ್ಪತ್ರೆಯಲ್ಲಿ ಸದಾ ಅಮ್ಮನೊಂದಿಗೆ ಇರುತ್ತಿದ್ದರು. ಆಕೆಯೊಂದಿಗೆ ನಮಗೆ ಹೇಳಿಕೊಳ್ಳುವಂಥಾ ಆತ್ಮೀಯತೆಯೇನೂ ಇರಲಿಲ್ಲ. ಅಸಲಿಗೆ ಆ ಇಬ್ಬರು ಕಸಿನ್ ವೈದ್ಯ ದಂಪತಿಗಳನ್ನು ಹೊರತುಪಡಿಸಿದರೆ ಅಪ್ಪನ ಕುಟುಂಬದಲ್ಲಿ ಯಾರ ಜೊತೆಗೂ ನಮಗೆ ಗಾಢವಾದ ಬಂಧವೆನ್ನುವುದು ಇರಲಿಲ್ಲ. ಆಕೆ ದಿನವಿಡೀ ಅಪ್ಪನ ಆರೋಗ್ಯಕ್ಕಾಗಿ ಕಾಣದ ದೇವರಲ್ಲಿ ಮೊರೆಯಿಡುತ್ತಿದ್ದಳು. ಆಕೆಯಾದರೂ ಏನು ತಾನೇ ಮಾಡಿಯಾಳು? ಪ್ರಾರ್ಥನೆಯಲ್ಲಿ ಭಾರೀ ನಂಬಿಕೆಯನ್ನಿಟ್ಟುಕೊಂಡಿದ್ದ ಪೀಳಿಗೆಗೆ ಸೇರಿದವಳಾಗಿದ್ದಳು ಆಕೆ. ಆಕೆಯ ಸ್ಪರ್ಶದಲ್ಲಿ ಅದೆಂಥದ್ದೋ ದೈವಿಕ ಗುಣವಿದೆಯೆಂದು ಸ್ವದೇಶನಿಗೆ ನಂಬಿಕೆಯಿತ್ತು. ಹೀಗಾಗಿ ಆಕೆ ತನ್ನ ಕೈಯನ್ನು ಹಣೆಯ ಮೇಲಿರಿಸಲೆಂದೇ ಅಪ್ಪ ಕಾತರದಿಂದ ಕಾಯುತ್ತಿದ್ದ. ಆಕೆ ಹಾಗೆ ಮಾಡಿದಾಗಲೆಲ್ಲಾ ದಿವ್ಯ ನಗೆಯೊಂದು ಆತನ ಮೊಗದಲ್ಲಿ ಮೂಡಿ ಮರೆಯಾಗುತ್ತಿತ್ತು. 

ಇತ್ತ ಆಸ್ಪತ್ರೆಯ ಮನೋವಿಭಾಗದ ವಾರ್ಡಿನಲ್ಲಿ ಸ್ವದೇಶ್ ದೀಪಕ್ ನ ಬಲು ಸ್ವಾರಸ್ಯಕರ ಪ್ರಕರಣದ ಬಗ್ಗೆ ವಿಶೇಷವಾದ ಸಮಾಲೋಚನೆಯೊಂದು ನಡೆಯುತ್ತಿತ್ತು. ಸದಾ ಇಂಗ್ಲಿಷ್ ಭಾಷೆಯಲ್ಲೇ ವ್ಯವಹರಿಸಲು ಇಷ್ಟಪಡುವ ಖ್ಯಾತ ಹಿಂದಿ ಲೇಖಕನೊಬ್ಬ ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುವುದು ನಿತ್ಯವೂ ಘಟಿಸುವ ಸಾಮಾನ್ಯ ಸಂಗತಿಯೇನೂ ಆಗಿರಲಿಲ್ಲ. ಮೇಲಾಗಿ ತಾನು ಯಾರದ್ದೋ ಮಾಟಕ್ಕೊಳಗಾಗಿ ಹೀಗಾಗಿರುವೆ ಎಂಬ ಭ್ರಮೆಯಲ್ಲಿರುವ ಮಹಾಪ್ರತಿಭಾವಂತ ಬೇರೆ. ಎಲ್ಲಾ ವೈದ್ಯರೂ ಈ ಪ್ರಕರಣವನ್ನು ತಮ್ಮ ಸುಪರ್ದಿಗೆ ಪಡೆದುಕೊಳ್ಳಲು ಹಾತೊರೆಯುತ್ತಿದ್ದರು. ಕನಿಷ್ಠಪಕ್ಷ ಇಂಥದ್ದೊಂದು ಅಪರೂಪದ ಭೂತೋಚ್ಚಾಟನೆಯ ಪ್ರಕರಣವನ್ನು ನೋಡಿಕೊಳ್ಳುತ್ತಿರುವ ತಂಡದ ಭಾಗವಾದರೂ ಆಗಬೇಕು ಎಂಬ ಪ್ರಯತ್ನಗಳು ಅನೇಕರಿಂದ ತೆರೆಮರೆಯಲ್ಲಿ ನಡೆಯುತ್ತಿದ್ದವು.   

ಕೊನೆಗೂ ಈ ಪ್ರಕರಣವು ಸಾಗಿದ್ದು ಡಾ. ಪ್ರತಾಪ್ ಶರಣ್ ಎಂಬ ವಕೀಲರ ಕಡೆ. ಡಾ. ಪ್ರತಾಪ್ ಓರ್ವ ಕುಳ್ಳಗಿನ, ಸಣಕಲು ದೇಹದ, ಕನ್ನಡಕಧಾರಿ ವ್ಯಕ್ತಿಯಾಗಿದ್ದ. “ಸ್ವದೇಶ್ ದೀಪಕ್ ಈವರೆಗೆ ಬರೆದಿರುವ ಎಲ್ಲಾ ಸಣ್ಣಕಥೆಗಳನ್ನೂ, ನಾಟಕಗಳನ್ನೂ, ಕಾದಂಬರಿಗಳನ್ನೂ ನಾಳೆ ತಂದುಬಿಡಿ”, ಎಂದು ಅಮ್ಮನಿಗೆ ಅಪ್ಪಣೆಯನ್ನು ನೀಡಲಾಯಿತು. ಜೊತೆಗೇ ಒಂದು ಚಿಕ್ಕ ಮೌನದ ನಂತರ ತನ್ನ ಮಾತನ್ನು ಮುಂದುವರಿಸುತ್ತಾ “ನಾನೀಗ ಯಾವುದರೊಂದಿಗೆ ವ್ಯವಹರಿಸುತ್ತಿದ್ದೇನೆ ಎಂಬುದನ್ನು ನನಗೆ ಸವಿವರವಾಗಿ ತಿಳಿದುಕೊಳ್ಳಬೇಕು”, ಎಂದಿದ್ದರು ಆತ. ಅದರ ಬದಲಾಗಿ ಸ್ವದೇಶ್ ಯಾವ್ಯಾವ ಸಂಗತಿಗಳ ಬಗ್ಗೆ ಬರೆದಿದ್ದಾರೆ ಎಂದು ತಾನೇ ಸಂಕ್ಷಿಪ್ತವಾಗಿ ಹೇಳಬಲ್ಲೆ ಎಂಬ ಅಮ್ಮನ ಸಲಹೆಯು ಆತನಿಗೆ ಅಷ್ಟಾಗಿ ರುಚಿಸಿದಂತೆ ಕಾಣಲಿಲ್ಲ. “ನಾನೊಬ್ಬ ಅಕ್ಷರಸ್ಥ. ನನಗೆ ಓದಲು ಬರುತ್ತದೆ. ನೀವು ಸುಮ್ಮನೆ ನಾನು ಹೇಳಿದಷ್ಟು ಮಾಡಿ”, ಎಂದು ಹೇಳಿದ ಡಾ. ಪ್ರತಾಪ್ ಅಮ್ಮನ ಪ್ರತಿಕ್ರಿಯೆಗೂ ಕಾಯದೆ ಅಲ್ಲಿಂದ ನಡೆದುಹೋಗಿದ್ದರು.  

ಪುಸ್ತಕಗಳು ಕೈಸೇರಿದ ಒಂದು ವಾರದ ನಂತರ ಡಾ. ಪ್ರತಾಪ್ ಅಪ್ಪನನ್ನು ಭೇಟಿಯಾಗಲು ತಯಾರಾಗಿ ಬಂದಿದ್ದರು. ʻಎಲ್ಲರೂ ನನ್ನ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ. ಯಾರಿಗೂ ನನ್ನ ಪ್ರಕರಣದ ಬಗ್ಗೆ ಆಸಕ್ತಿಯಿಲ್ಲ. ಇವೆಲ್ಲದರ ಹಿಂದೆ ಮಾಯಾವನಿಯ ಕೈವಾಡವಿದೆ ಮತ್ತು ಇದಕ್ಕಾಗಿ ಆಕೆಗೆ ಶಿಕ್ಷೆಯನ್ನು ನೀಡುವುದು ತರವಲ್ಲ ಎಂಬ ನನ್ನ ಮಾತನ್ನು ಒಪ್ಪಿಕೊಳ್ಳಲು ಯಾರೂ ತಯಾರಿಲ್ಲ…’, ಆತನನ್ನು ನೋಡುತ್ತಲೇ ಅಪ್ಪ ಗೊಣಗಿದ. 

ಡಾ. ಪ್ರತಾಪ್ ಯಾವಾಗಲೂ ಸಣ್ಣ ವಾಕ್ಯಗಳಲ್ಲಿ ತಮ್ಮ ಮಾತುಗಳನ್ನು ಪೋಣಿಸುತ್ತಿದ್ದರು. ನಡುನಡುವೆ ಇಣುಕುತ್ತಿದ್ದ ಪುಟ್ಟ ಮೌನಗಳ ಬಗ್ಗೆ ಅವರಿಗೆ ವಿಶೇಷವಾದ ಪ್ರೀತಿಯಿದ್ದಂತಿತ್ತು. ‘ನನ್ನ ಹೆಸರು ಡಾ. ಪ್ರತಾಪ್ ಶರಣ್. ನಾನು ನಿಮ್ಮ ಡಿಫೆನ್ಸ್ ಲಾಯರ್. ಇವೆಲ್ಲದರ ಹಿಂದೆ ಮಾಯಾವನಿಯ ಕೈವಾಡವಿದೆ ಎಂಬ ನಿಮ್ಮ ಮಾತನ್ನು ನಾನು ಸಂಪೂರ್ಣವಾಗಿ ನಂಬುತ್ತೇನೆ. ಆಕೆಗೆ ಶಿಕ್ಷೆಯಾಗಬಾರದು ಎಂಬ ನಿಮ್ಮ ಅಭಿಪ್ರಾಯದ ಬಗೆಗೂ ನನ್ನ ಸಹಮತವಿದೆ’, ಸಮಾಧಾನವಾಗಿ ಉತ್ತರಿಸಿದರು ಡಾ. ಪ್ರತಾಪ್.

ವಕೀಲರಿಂದ ಇಂಥದ್ದೊಂದು ಪ್ರತಿಕ್ರಿಯೆಯನ್ನು ನಿರೀಕ್ಷಿಸದಿದ್ದ ಸ್ವದೇಶ್ ದೀಪಕ್ ಸ್ವತಃ ದಂಗಾಗಿದ್ದರು. ಡಾ. ಪ್ರತಾಪ್ ಶರಣ್ ರನ್ನು ಇಷ್ಟಪಡದಿರಲು ಅವರಿಗೀಗ ಕಾರಣವೇ ಇರಲಿಲ್ಲ. 

ಇತ್ತ ಅಂಬಾಲಾದಿಂದ ಚಂಡೀಗಢಕ್ಕೆ ನಿತ್ಯವೂ ನಲವತ್ತು ಕಿಲೋಮೀಟರುಗಳ ದಾರಿಯನ್ನು ಪ್ರಯಾಣಿಸುವ ಅನಿವಾರ್ಯತೆಯು ಅಮ್ಮನನ್ನು ಹೈರಾಣಾಗಿಸಿತ್ತು. ಆದರೂ ಅಮ್ಮ ಈ ಬಗ್ಗೆ ಒಮ್ಮೆಯೂ ದನಿಯೆತ್ತಿ ಮಾತಾಡಲಿಲ್ಲ. ಆಕೆಯೊಳಗಿದ್ದ ರೋಷವು ತಪ್ಪಿಯೂ ಸ್ಫೋಟಗೊಳ್ಳಲಿಲ್ಲ. ನಿತ್ಯವೂ ಆಕೆ ಅಪ್ಪನನ್ನು ಸ್ನಾನ ಮಾಡಿಸುತ್ತಿದ್ದಿದ್ದಲ್ಲದೆ, ಔಷಧಿಗಳನ್ನು ತರಲೆಂದೇ ಪಕ್ಕದಲ್ಲಿದ್ದ ಪ್ರತ್ಯೇಕ ಕಟ್ಟಡವೊಂದಕ್ಕೆ ಅಗತ್ಯವಿದ್ದಾಗಲೆಲ್ಲಾ ಹೋಗುತ್ತಿದ್ದಳು. 

ಆದರೆ ತನ್ನ ಹಲ್ಲೊಂದು ನೋಯುತ್ತಿದೆಯೆಂದು ಅಪ್ಪ ಹೇಳುತ್ತಿದ್ದಾಗ ಮಾತ್ರ ಅದೇಕೋ ಅಮ್ಮನ ತಾಳ್ಮೆಯ ಅಣೆಕಟ್ಟು ಏಕಾಏಕಿ ಧ್ವಂಸಗೊಂಡಿತ್ತು. ‘ಯೂ ಬಾಸ್ಟರ್ಡ್… ನೋಡು ನನ್ನನ್ನೊಮ್ಮೆ… ಹೇಗಾಗಿಬಿಟ್ಟಿದೆ ನನ್ನ ಪರಿಸ್ಥಿತಿ… ನಾನು ಅದೆಷ್ಟು ಸುಂದರವಾಗಿದ್ದೆ ಒಂದು ಕಾಲದಲ್ಲಿ. ಈಗ ಅಕ್ಷರಶಃ ಬೀದಿ ಭಿಕಾರಿಯಂತಾಗಿದ್ದೇನೆ. ನೆಟ್ಟಗೆ ಸಾಯೋದು ಇಲ್ವಲ್ಲೇನೋ ಪಾಪಿ?’, ಎಂದು ಅರಚಿದ್ದಳು ನನ್ನಮ್ಮ. 

ರೋಗಿಯೊಬ್ಬಳ ಆರೈಕೆ ಮಾಡುತ್ತಿದ್ದ ತರುಣ ವೈದ್ಯನೊಬ್ಬ ತನ್ನ ಕೆಲಸವನ್ನು ನಿಲ್ಲಿಸಿ ವಾರ್ಡಿನಿಂದಲೇ ಹೊರ ನಡೆದ. ಏಕಾಏಕಿ ಆ ಪುಟ್ಟ ಕೋಣೆಯಲ್ಲಿ ಸ್ಮಶಾನಮೌನವು ತಾಂಡವವಾಡಿತು. ಅಷ್ಟರಲ್ಲಿ ಯಾವುದೋ ರೋಗಿಯ ಜೊತೆಗಿದ್ದ, ಗ್ರಾಮೀಣ ಭಾಗದ ಮುದುಕಿಯೊಬ್ಬಳು ಅಮ್ಮನ ಬಳಿ ಬಂದು ಸುಮ್ಮನೆ ಕುಳಿತುಕೊಂಡಳು. ಅವಳ ಹಸ್ತವು ಅಮ್ಮನ ಭುಜವನ್ನು ಪ್ರೀತಿಯಿಂದ ನೇವರಿಸುತ್ತಿತ್ತು. ಒಟ್ಟಿನಲ್ಲಿ ಮಾತಿನ ಹಂಗಿನ ಬೀಳದೆ ಆ ನಿಮಿಷಗಳು ಸುಮ್ಮನೆ ಕಳೆದುಹೋಗಿದ್ದವು.  

‍ಲೇಖಕರು Admin

11 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading