ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಕಿಟಕಿ ಆಚೆಗೊಂದು ಲೋಕವಿದೆ’….ಮಾಲಾ ಭವಾನಿಶಂಕರ್

ಅಷ್ಟು  ಪುರುಸೊತ್ತು ನಿನಗಿರಲಿ, ಮಗಳೆ

ಮಾಲಾ ಭವಾನಿಶಂಕರ್

ನಮ್ಮ ಅಪಾರ್ಟ್ಮೇಂಟು ಫರ್ಸ್ಟ್ ಫ್ಲೂರಿನಲ್ಲಿತ್ತು. ಆಗಾಗ  ನನ್ನ ರೂಮಿನ ಕಿಟಕಿ ಬಳಿ ನಿಂತು , ಅಲ್ಲಿಂದ ಕಾಣುವ ಪುಟ್ಟ ಜಗತ್ತನ್ನು ನೋಡುತ್ತಾ ಮೈ ಮರೆಯುತ್ತಿದ್ದೆ. ಕಿಟಕಿಯಿಂದ  ಕಾಣುತ್ತಿದ್ದ ಮನೆಗಳ ಹಿಂದಿನ ಅಂಗಳಗಳು ಬಹಳ ಸುಂದರವಾಗಿದ್ದವು. ಹೂದೋಟ, ಪುಟ್ಟ ಕೊಳ, ಕೊಳದ ಪಕ್ಕದಲ್ಲಿನ ಚಿಕ್ಕ ಕಲ್ಲಿನ ಬೆಂಚು,  ದಟ್ಟ ಹಸಿರೆಲೆಗಳ ನಡುವೆಯೆಲ್ಲೋ ಅಡಗಿ ಕುಳಿತು ಇಂಪಾಗಿ ಹಾಡುತ್ತಿದ್ದ ಹಕ್ಕಿಗಳು, ಮಕ್ಕಳನ್ನು ಆಡಿಸುತ್ತಿದ್ದ ಅಮ್ಮನ ಧ್ವನಿ – ಇಷ್ಟು ಸಾಕಿತ್ತು ಪ್ರಯಾಸವೇ ಇಲ್ಲದೆ ಕಳೆದು ಹೋಗುವುದಕ್ಕೆ! ಎಷ್ಟೋ ಬಾರಿ ನನ್ನನ್ನು ಎಚ್ಚರಿಸುತಿದ್ದುದ್ಡು ಪುಟ್ಟ  ಆದ್ಯಾಳ “ಅಮ್ಮಾ…. ಸೂಸೂ….” !

ಆವತ್ತು ಬಹಳ ಹೊತ್ತು ಮಳೆ ಹುಯ್ದಿತ್ತು. ಕಾರ್ಮೋಡಗಳಿಗೆ ವಿಶ್ರಾಂತಿ ಕೊಡುವವನಂತೆ ಸೂರ್ಯ ಸ್ವಲ್ಪ ಸ್ವಲ್ಪವೇ ಕಾಣಿಸತೊಡಗಿದ . ಮಗಳಿಗೆ ಹಾಲು ಬೆರೆಸಿ ಕೊಟ್ಟು ನಾನೂ ಕಾಫೀ ಹೀರುತ್ತಾ ಕಿಟಕಿಯ ಬಳಿ ನಿಂತೆ. ನೀರುಂಡ ಗಿಡಮರಗಳು ಖುಷಿಯಿಂದ ಬೀಗುತ್ತಿದ್ದರೆ, ಹೂದೋಟದಲ್ಲಿನ ಕೆಮ್ಮಣ್ಣು, ಆ ಪುಟ್ಟ ಕೊಳ, ಆ ಕಲ್ಲಿನ ಬೆಂಚು, ಎಣ್ಣೆ ಹಚ್ಚಿ ಬಿಟ್ಟು ಸ್ವಲ್ಪ ಹೊತ್ತಿನ ನಂತರ ಬಿಸಿ ಬಿಸಿ ನೀರು ಹೊಯ್ಸಿಕೊಂಡ ಹಸುಗೂಸಿನಷ್ಟೆ ನಿಷ್ಕಲ್ಮಶ! ಇಷ್ಟು ಸಾಲದೆಂಬಂತೆ ಕಿಟಕಿ ಆಚೆಗಿನ ನನ್ನ ಈ ಪುಟ್ಟ ಜಗತ್ತಿಗೆ ಇನ್ನೊಂದು ವಿಸ್ಮಯದ  ಸೇರ್ಪಡೆಯಾಯಿತು- ಕಾಮನಬಿಲ್ಲು !! ಅಲ್ಲೇ ಪಕ್ಕದಲ್ಲಿದ್ದ ಮಂಚದ ಮೇಲೆ  ಮಗಳನ್ನು ನಿಲ್ಲಿಸಿ  ಕಾಮನಬಿಲ್ಲು ತೋರಿಸಿದೆ. ಟೀವಿ ಯಲ್ಲಿ, ಪುಸ್ತಕದಲ್ಲಿ ನೋಡುತ್ತಿದ್ದ ಕಾಮನಬಿಲ್ಲನ್ನು ನಿಜವಾಗಲೂ ನೋಡಿದಾಗ ಅವಳು ಕೇಳಿದ ಪ್ರಶ್ನೆ, ” ಅಮ್ಮ, ನಾನು ಅದರ ಮೇಲೆ ಜಾರಬಹುದಾ ?”. ನನಗೆ ಅರಿವಿಲ್ಲದಂತೆ ನನ್ನ ತುಟಿಯಂಚಿನಲ್ಲಿ ಕಿರುನಗೆಯೊಂದು ಮೂಡಿತ್ತು. ಅದರ ಜೊತೆ ಎಲ್ಲಿ ಹಟ ಹಿಡಿಯೂವಳೋ ಎಂದು ಮನಸ್ಸಿನಲ್ಲಿ ಆತಂಕ ಬೇರೆ! ಏನು ಉತ್ತರಿಸಲಿ ಎಂದು ಯೋಚಿಸುತ್ತಿರುವಾಗಲೇ ಮತ್ತೆರಡು ಬಾರಿ ಅದೇ ಪ್ರಶ್ನೆಯನ್ನು ಕೇಳಿದ್ದಳು.

ಇನ್ನೇನು ಮೂರು ವರ್ಷ ತುಂಬಲಿದ್ದ ಆ ಪೋರಿಗೆ ಸ್ವಲ್ಪ ಸ್ವಲ್ಪವೇ ವಾಸ್ತವವನ್ನು ಪರಿಚಯಿಸೋಣವೆಂದುಕೊಂಡು ‘ನಿಜ’  ಹೇಳಲು ತೀರ್ಮಾನಿಸಿದೆ. “ಇಲ್ಲ ಚಿನ್ನು, ಅದೆಲ್ಲ ಬರೀ ಕಥೆಗಳಲ್ಲಿ ಮಾತ್ರ. ಸ್ವಲ್ಪ ಮಳೆ ಜೊತೆ ಸ್ವಲ್ಪ ಬಿಸಿಲಿದ್ರೆ ರೇನ್‌ಬೋ ಕಾಣ್ಸುತೆ. ಅದನ್ನ ಮುಟ್ಟೋಕು ಆಗಲ್ಲ , ಅದರ ಮೇಲೆ ಜಾರೋಕು ಆಗಲ್ಲ !”. ಪಿಳಿ ಪಿಳಿ ಕಣ್ಣು ಬಿಡುತ್ತಾ ನನ್ನನ್ನೇ ನೋಡುತ್ತಿದ್ದ ಅವಳಿಗೆ ಮತ್ತೆರಡು ಬಾರಿ ಅದೇ ಉತ್ತರವನ್ನು ಕೊಟ್ಟೆ.  ‘ಆಶ್ಚರ್ಯ, ನಿರಾಸೆ, ಗೊಂದಲ, ಇನ್ನೊಂದೆರಡು ಪ್ರಶ್ನೆ’ – ಇವೆಲ್ಲವೂ ಇತ್ತು ಅವಳ ಮುಖದಲ್ಲಿ ! ವಾಸ್ತವವೇ ಇಷ್ಟು ನೋಡು. ಕಲ್ಪನೆಯಷ್ಟು ಸುಂದರವಲ್ಲ.  ಆಗಾಗ ನಮ್ಮ ಕನಸಿನ, ಕಲ್ಪನೆಯ ಲೋಕಕ್ಕೆ ಹೋಗಿಬಂದರೆ ಎಷ್ಟು ಚೆನ್ನ !  ‘ಅಷ್ಟು  ಪುರುಸೊತ್ತು ನಿನಗಿರಲಿ, ಮಗಳೆ’  ಎಂದು ಮನಸಿನಲ್ಲಿ ಹಾರೈಸಿದೆ. ಕಿಟಕಿ ಆಚೆ ನೋಡಿದೆ. ಮಳೆಯಲ್ಲಿ ಮಿಂದ ನನ್ನ ಪುಟ್ಟ ಜಗತ್ತು ಕಂಗೊಳಿಸುತ್ತಿತ್ತು !!

 

‍ಲೇಖಕರು avadhi

7 February, 2014

1 Comment

  1. bharathi b v

    Hmmm kaamana billanna hidyakkagalla …

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading