ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಸು ಕುಡಿಕೆ: ಟೋಪಿ ವಿದ್ಯೆಯ ಮೂರು ಮುಖಗಳು

ಕಾಸು ಕುಡಿಕೆ-೯

ಜಯದೇವ ಪ್ರಸಾದ ಮೊಳೆಯಾರ

ಮುಖ: ರಾಜರತ್ನಂನ ಒಳಕೈ ವ್ಯವಹಾರ
‘ಕೋಟಿ ವಿದ್ಯೆಗಳಲಿ ಟೋಪಿ ವಿದ್ಯೆಯೇ ಮೇಲು,
ಟೋಪಿಯಿಂ ಕೋಟಿ ನಡೆವುದಲ್ಲದೆ,
ದೇಶದಾಟವೇ ಬೆರಗು ಶೇರಜ್ಞ!!’
ಅಕ್ಟೋಬರ್ ೧೬ ೨೦೦೯, ಬೆಳಗ್ಗೆ ೬ ಗಂಟೆ, ಅಮೇರಿಕದ ನ್ಯೂಯಾರ್ಕ್  ರಾಜ್ಯದ ಮಾನ್‌ಹಟನ್ ಪ್ರದೇಶದಲ್ಲಿ ಅಮೇರಿಕದ ಎಫ್ .ಬಿ.ಐ ಪೋಲೀಸರು ಶ್ರೀಲಂಕಾ ಮೂಲದ, ಕಪ್ಪು ಮೈಬಣ್ಣದ, ಕಪ್ಪು ಕೋಟಿನ ೫೨ ರ ಹರೆಯದ, ಸುಮಾರು ಎರಡು-ಮೂರು ಕ್ವಿಂಟಾಲ್ ತೂಕದ ರಾಜರತ್ನಂ ಎಂಬ ಮಹಾ ದಢೂತಿ ವ್ಯಕ್ತಿಯನ್ನು ಬಂಧಿಸಿ ಆತನ ಮನೆಯಿಂದ ಕರೆದುಕೊಂಡು ಹೋದರು – ತನಿಖೆಗಾಗಿ!
ಆರೋಪ.., ಶೇರುಗಳಲ್ಲಿ ಇನ್ಸೈಡರ್ ಟ್ರೇಡಿಂಗ್. !!!
ಏನಿದು ಇನ್ಸೈಡರ್ ಟ್ರೇಡಿಂಗ್?
ಒಂದು ಕಂಪೆನಿಯ ಲಾಭ ನಷ್ಟಗಳನ್ನೊಳಗೊಂಡ ಅಮೂಲ್ಯ ಮಾಹಿತಿ ಸಾರ್ವಜನಿಕರಿಗೆ ತಿಳಿಸುವ ಮೊದಲೇ ಕಂಪೆನಿಯೊಳಗಣ ಅದರ ಅರಿವಿರುವ ಒಬ್ಬ ವ್ಯಕ್ತಿ ಅದನ್ನು ಉಪಯೋಗಿಸಿಕೊಂಡು ಲಾಭಕ್ಕೋಸ್ಕರ ಶೇರು ಮಾರುಕಟ್ಟೆಯಲ್ಲಿ ನಡೆಸುವ ವ್ಯವಹಾರವೇ ‘ಇನ್ಸೈಡರ್ ಟ್ರೇಡಿಂಗ್’ ಅಥವ ‘ಒಳಕೈ ವ್ಯವಹಾರ.’ ಇದು ಕಾನೂನುಬಾಹಿರ, ಒಂದು ಕ್ರಿಮಿನಲ್ ಅಪರಾಧ ಮತ್ತು ಅಮಾಯಕ ಹೂಡಿಕೆದಾರರ ಹಗಲುದರೋಡೆ.
ಒಂದು ಉತ್ತಮ ಮಸಾಲ ಸಿನೆಮಾಕ್ಕೆ ಬೇಕಾದ ಎಲ್ಲಾ ಐಟಂಗಳೂ ಉಳ್ಳ ರಾಜರತ್ನಂನ ಈ ರೋಚಕ ಸತ್ಯ ಘಟನೆ ಮುಂದೊಂದು ದಿನ ಬಾಲಿವುಡ್ ಗಮನ ಸೆಳೆದು ಸಿನೆಮವಾಗಿ ಬಂದರೂ ಆಶ್ಚರ್ಯವಿಲ್ಲ.
ಈ ಮಸಾಲೆ ಸ್ಟೋರಿಯ ಆರಂಭ ಶ್ರೀಲಂಕಾದಲ್ಲಿ. . . .

೧೯೫೭ ರಲ್ಲಿ ಶ್ರೀಲಂಕಾದಲ್ಲಿ ಜನಿಸಿದ ರಾಜ್ ರಾಜರತ್ನಂ ಪ್ರಾಥಮಿಕ ವಿದ್ಯಾಭ್ಯಾಸದ ಅಲ್ಲೇ ಮಾಡುತ್ತಾನೆ. (ಸಿನೆಮಾ ಆದಲ್ಲಿ ಈ ಸೀನ್ Black & White ನಲ್ಲಿ ಬರುತ್ತೆ). ಆ ಬಳಿಕ ಲಂಡನ್‌ಗೆ ಕಲಿಯಲು ಹೋಗಿ ಅಲ್ಲಿಯೇ ಇಂಜಿನಿಯರಿಂಗ್ ಪದವಿ ಗಳಿಸಿ ಅಲ್ಲಿಂದ ಅಮೇರಿಕಾದ ಪೆನ್ಸಿಲ್ವೇನಿಯಾದ ಪ್ರಸಿದ್ಧ ವಾರ್ಟನ್ ಸ್ಕೂಲ್‌ನಲ್ಲಿ ೧೯೮೩ ರಲ್ಲಿ M.B.A ಪದವಿ ಪಡೆದನು. ಬಳಿಕ ಚೇಸ್ ಬ್ಯಾಂಕಿನಲ್ಲಿ ಕೆಲವು ಸಮಯ ಕೆಲಸ ಮಾಡಿ, ‘ನೀಧಾಮ್ & Co’ ಸಂಸ್ಥೆಯಲ್ಲಿ ಅನಲಿಸ್ಟ್ ಆಗಿ ೧೯೮೫ ರಲ್ಲಿ ಸೇರಿಕೊಂಡನು. ೧೯೯೧ ರಲ್ಲಿ, ತನ್ನ ೩೪ ನೇ ಸಣ್ಣ ವಯಸ್ಸಿನಲ್ಲೇ, ಅಲ್ಲೇ ಪ್ರೆಸಿಡೆಂಟ್ ಆಗಿ ಬೆಳೆದು ನಿಂತ ಮೇಧಾವಿ ಈತ. ೧೯೯೨ ರಲ್ಲಿ ಒಂದು ಹೆಜ್ ಫಂಡ್ (ಅಧಿಕ ಪ್ರತಿಫಲ ಸಿಗುವೆಡೆಯೆಲ್ಲಾ ಇನ್ವೆಸ್ಟ್ ಮಾಡುವ ಫಂಡ್- ಶೇರು, ತೈಲ, ಚಿನ್ನ, ಹೀಗೆ) ಅನ್ನು ಅಲ್ಲಿ ಸ್ಥಾಪಿಸಿ ಬಳಿಕ ಅದನ್ನು ತಾನೇ ಕೊಂಡುಕೊಂಡು ಅದನ್ನು  ‘ಗಾಲ್ಲಿಯಾನ್’ ಎಂದು ಮರುನಾಮಕರಣ ಮಾಡಿದ.
‘ಬಂಧನದಲ್ಲಿ ರಾಜ್ ರಾಜರತ್ನಂ’
ಇದೇ ಗಾಲ್ಲಿಯಾನ್ ಹೆಜ್ ಫಂಡ್ ಬಳಿಕ ಆತನನ್ನು ಅತ್ಯಂತ ಶ್ರೀಮಂತ ಶ್ರೀಲಂಕಾ ಮೂಲದ ವ್ಯಕ್ತಿಯಾಗಿ ರೂಪಿಸಿತು. ಅಮೇರಿಕದ ಮೇಲಿನ ೨೫೦ ಶ್ರೀಮಂತರ ಪಟ್ಟಿಯಲ್ಲಿ ಸೇರಿಸಿತು. ಬಂಧನದ ಮೊದಲು ಆತನ ವೈಯಕ್ತಿಕ ಸಂಪತ್ತು ಸುಮಾರು ೨ ಬಿಲಿಯನ್ ಡಾಲರ್ (೯೦೦೦ ಕೋಟಿ ರೂ) ಎಂದು ಹೇಳಲಾಗುತ್ತಿತ್ತು. ಆದರೆ ಇಷ್ಟು ಶೀಘ್ರವಾಗಿ ಇಷ್ಟು ಅಪಾರ ಧನರಾಶಿಯನ್ನು ಒಟ್ಟು ಹಾಕಿದ್ದಾದರೂ ಹೇಗೆ? ಸಿಂಪಲ್. . .  ಇನ್ಸೈಡರ್ ಟ್ರೇಡಿಂಗ್, ಒಳಕೈ ವ್ಯವಹಾರ !!
ನಮ್ಮ ನಿಮ್ಮಂತವರೆಲ್ಲ ಶೇರ್ ಎಂದರೆ ಸಾಕ್ಷಾತ್ ಹುಲಿ ಕಂಡಂತೆ ಥರ ಥರನೆ ನಡುಗುವ ಕಾಲದಲ್ಲಿ ರಾಜ್ ರಾಜರತ್ನಂ ಲಕ್ಷಗಟ್ಟಲೆ ಡಾಲರಗಳನ್ನು ತಣ್ಣನೆ ಕುಳಿತುಕೊಂಡು ಶೇರುಗಳ ಮೇಲೆ ಸುರಿಯುತ್ತಿದ್ದ.  ಅಲ್ಲದೆ ಲಾಭವನ್ನು ಎರಡೂ ಕೈಗಳಿಂದ ಬಾಚುತ್ತಿದ್ದ. ಅದಕ್ಕಾಗಿ ರಾಜ್ ಬೇರೆ ಬೇರೆ ಕಂಪೆನಿಗಳಲ್ಲಿ ತನ್ನ ಗೆಳೆಯರನ್ನು ಚೆನ್ನಾಗಿ ಸಾಕಿದ್ದ. ಅವರುಗಳು ಆತನಿಗೆ ನಿಯತ್ತಿನಿಂದ ಆಯಾ ಕಂಪೆನಿಗಳ ಒಳಗೆ ನಡೆಯುವ ಅತ್ಯಮೂಲ್ಯ ವಿಷಯಗಳನ್ನು ಜಗತ್ತು ಅರಿಯುವ ಮೊದಲೇ ರಾಜ್‌ನ ಕಿವಿಯಲ್ಲಿ ಗುಟ್ಟಾಗಿ ಊದುತ್ತಿದ್ದರು, ಮತ್ತು ತಮ್ಮ ಫೀಸನ್ನು ಕಿಸೆಗೇರಿಸುತ್ತ್ತಿದ್ದರು.
ಮೆಕೆನ್ಜಿ ಕಂಪೆನಿಯ ಭಾರತೀಯ ಮೂಲದ ಅನಿಲ್ ಕುಮಾರ್‌ಗೆ A.M.D ಕಂಪೆನಿಯನ್ನು I.B.M ಕೊಂಡುಕೊಳ್ಳುವ ಬಗ್ಗೆ ಗೊತ್ತಿತ್ತು. ಆತ ರಾಜರತ್ನಂನ ಸಹಪಾಠಿಯೂ ಹೌದು, ಗೆಳೆಯನೂ ಹೌದು ಹಾಗೂ ಗಾಲ್ಲಿಯಾನ್‌ನಲ್ಲಿ ಹೂಡಿಕೆದಾರನೂ ಹೌದು. ಈ ಮಾಹಿತಿಯನ್ನು ಆತ ರಾಜರತ್ನಂಗೆ ತಿಳಿಸಿದ. ರಾಜರತ್ನಂ ಭಾರಿ ಪ್ರಮಾಣದಲ್ಲಿ ಎ.ಎಮ್.ಡಿ ಶೇರುಗಳನ್ನು ಕೊಂಡುಕೊಂಡ. ಕಂಪೆನಿಯ ಸುದ್ದಿ ಸಾರ್ವಜನಿಕವಾದ ಕೂಡಲೇ ಶೇರಿನ ಬೆಲೆ ಮೇಲೇರಿತು. ರಾಜರತ್ನಂ ಆಗ ತಾನುಕೊಂಡ ಶೇರುಗಳನ್ನು ಮಾರಿ ಲಾಭ ಸಂಪಾದಿಸಿದ. ರಾಜ್ ಅನಿಲ್‌ಗೆ ಈ ಸೇವೆಗಾಗಿ ೧೭ ಲಕ್ಷ ಡಾಲರ್ ಕೊಟ್ಟ.
ಇಂಟೆಲ್ ಕಂಪೆನಿಯು ಕ್ಲಿಯರ್‌ವಯರ್ ಎಂಬ ಒಂದು ಚಿಕ್ಕ ಕಂಪೆನಿಯಲ್ಲಿ ದುಡ್ಡು ಹೂಡುತ್ತದೆ ಎಂಬ ಅತ್ಯಮೂಲ್ಯ ಸುದ್ದಿಯನ್ನು ರಾಜೀವ್ ಗೋಯಲ್ ಎಂಬ ಇನ್ನೊಬ್ಬ ಭಾರತೀಯ ಮೂಲದ ಇಂಟೆಲ್ ಉದ್ಯೋಗಿ ರಾಜರತ್ನಂಗೆ ತಿಳಿಸುತ್ತಾನೆ. ರಾಜ್ ಆ ಸುದ್ದಿಯನ್ನು ಉಪಯೋಗಿಸಿಕೊಂಡು ಕ್ಲಿಯರ್‌ವಯರ್ ಶೇರುಗಳಲ್ಲಿ ಸುಮಾರು ಐದೂವರೆ ಲಕ್ಷ ಡಾಲರ್ ಸಂಪಾದಿಸುತ್ತಾನೆ. ಪ್ರತಿಫಲವಾಗಿ ಗೋಯಲ್‌ಗೆ ಇನ್ನೊಂದೆಡೆ ಉತ್ತಮ ಹುದ್ದೆ ತೆಗೆಸಿಕೊಡುತ್ತಾನೆ. ರಾಜ್ ಮಜಾ ಮಾಡಿ ಚಿಂದಿ ಉಡಾಯಿಸತೊಡಗುತ್ತಾನೆ. (ಬಾಲಿವುಡ್‌ನವರು ಇಲ್ಲೊಂದು ಐಟಂ ಸಾಂಗ್ ಖಂಡಿತಾ ಹಾಕಬಹುದು)
ಇದೇ ರೀತಿ ಅಕಾಮಾಯ್ ಕಂಪೆನಿಯ ಒಬ್ಬ ಅಧಿಕಾರಿಯ ಸಹಾಯದಿಂದ ೬೦ ಲಕ್ಷ ಡಾಲರ್ ಕಿಸೆಗೇರಿಸಿದ. ಗೂಗಲ್ ಕಂಪೆನಿಯ ತ್ರೈಮಾಸಿಕ ಆದಾಯದ ಅಂಕೆ-ಸಂಖ್ಯೆಗಳನ್ನು ಮೊದಲೇ ತಿಳಿದುಕೊಂಡು ೮೦ ಲಕ್ಷ ಡಾಲರ್ ಸಂಪಾದಿಸಿದ. ಅಲ್ಲದೆ, ‘ಮೂಡಿ’ ಕಂಪೆನಿಯ ಒಬ್ಬ ಅನಲಿಸ್ಟ್ ಹಿಲ್ಟನ್ ಹೋಟೆಲ್ ಅನ್ನು ಬ್ಲಾಕ್‌ಸ್ಟೋನ್ ಕಂಪೆನಿಯು ಖರೀದಿಸುವುದೆಂದು ಪೂರ್ವಭಾವಿ ಸೂಚನೆ ನೀಡಿ ೪೦ ಲಕ್ಷ ಡಾಲರ್ ಸಂಪಾದನೆಗೆ ಸಹಕರಿಸಿದ. ರಾಬರ್ಟ್ ಮೊಫ಼್ಫಾಟ್ ಎಂಬ ಐ.ಬಿ.ಎಮ್ ಕಂಪೆನಿಯ ಸೀನಿಯರ್ ವೈಸ್ ಪ್ರೆಸಿಡೆಂಟ್ ಕೂಡಾ ಆತನ ಆಪ್ತ ಸುದ್ದಿಗಾರ.
ಈ ರೀತಿ ಒಳಕೈ ವ್ಯವಹಾರದಲ್ಲಿ ರಾಜರತ್ನಂ ೨೦ ಮಿಲಿಯನ್ ಡಾಲರ್‌ಗಳಿಗೂ ಮೀರಿ (ಸುಮಾರು ೧೦೦ ಕೋಟಿ ರೂ) ಲೂಟಿಹೊಡೆದಿದ್ದನೆಂದು ಎಫ್.ಬಿ.ಐ ಲಭ್ಯ ಪುರಾವೆಗಳ ಆಧಾರದ ಮೇಲೆ ಆರೋಪಿಸಿದೆ. ಅಸಲಿ ಕಮಾಯಿ ನಿಮ್ಮ ಊಹೆಗೆ ಬಿಟ್ಟದ್ದು.
ಇದು ರಾಜರತ್ನಂ ಹುಟ್ಟಿ ಬೆಳೆದು ಹೀರೋ ಆದ ಕತೆ. ಈ ಕತೆಗೆ ಈಗ ಒಂದು ಹೀರೋಯಿನ್ ಬೇಕಲ್ವಾ? ಅದೂ ಇದೆ ಬಿಡಿ, ಈ ಕುಟಿಲ ಕಾರಾನಾಮದಲ್ಲಿ ರಾಜರತ್ನಂ ಒಬ್ಬಂಟಿಯಾಗಿರಲಿಲ್ಲ. ನ್ಯೂ ಕಾಸಲ್ ಪಾರ್ಟ್ನರ್ಸ್ ಎಂಬ ಇನ್ನೊಂದು ಹೆಜ್ ಫಂಡ್‌ನಲ್ಲಿ ಕೆಲಸ ಮಾಡುವ ಡಾನಿಯೆಲ್ ಚೀಸಿ ಎಂಬವಳು ರಾಜ್ ಜೊತೆ ಈ ದರೋಡೆಯಲ್ಲಿ ಕೈಜೋಡಿಸುತ್ತಾಳೆ. ಅವಳು ಅಕಮಾಯ್, ಸನ್ ಮೈಕ್ರೋ ಇತ್ಯಾದಿ ಕಂಪೆನಿಗಳ ಬಗ್ಗೆಗಿನ ಸಿಹಿ ಸುದ್ದಿಗಳನ್ನು ಆತನಿಗೆ ನೀಡಿ ಮಾರುಕಟ್ಟೆ ಕೊಳ್ಳೆಹೊಡೆಯಲು ಸಹಾಯ ಮಾಡುತ್ತಾಳೆ, ತಾನೂ ಕೊಳ್ಳೆಹೊಡೆಯುತ್ತಾಳೆ. ಅವಳ ಜೊತೆಗೆ ನಿಕಟವಾಗಿ ಕೆಲಸ ಮಾಡುತ್ತಿದ್ದ ಇನ್ನೊಬ್ಬನೆಂದರೆ ಮಾರ್ಕ್ ಕುರ್ಲಾಂಡ್, ನ್ಯೂ ಕಾಸಲ್‌ನ ಪ್ರೆಸಿಡೆಂಟ್. ಅವರಿಬ್ಬರೂ ಮೊದಲು ಬೇರ್ ಸ್ಟೀರ್ನ್ಸ್ ನಲ್ಲಿ ಕೆಲಸಕ್ಕಿದ್ದರು.
ಹೀರೋ, ಹೀರೋಯಿನ್ ಆಯ್ತು. ಈಗ ಆಗುತ್ತದೆ ವಿಲನ್‌ನ ಎಂಟ್ರಿ. . .
ಈತ ರಾಜರತ್ನಂನ ಕೈಕೆಳಗೇ ಕೆಲಸ ಮಾಡುತ್ತಿದ್ದ, ಆತನಿಗೆ ಸುದ್ದಿ ಸಂಗ್ರಹಿಸುವಲ್ಲಿ ನೆರವಾಗುತ್ತಿದ್ದ ಒಬ್ಬ ನೌಕರ. ಮೊದ ಮೊದಲು ಚೆನ್ನಾಗಿದ್ದ ಬಾಂಧವ್ಯ ಯಾವುದೋ ಕಾರಣಕ್ಕೆ ಹುಳಿಯಾಗುತ್ತದೆ. ದೋಸ್ತ್ ಬಿಕಮ್ಸ್ ದುಶ್ಮನ್! ರಾಜ್‌ನನ್ನು ನಿರ್ನಾಮ ಮಾಡುವುದಕ್ಕೆ ಪಣತೊಡುತ್ತಾನೆ.  ತನ್ನ ಒಂದು ಕಣ್ಣು ಹೋದರೂ ಸರಿಯೇ ಈತನ ಎರಡೂ ಕಣ್ಣುಗಳನ್ನು ತೆಗೆದೇ ತೀರುತ್ತೇನೆ ಎಂದು ಅಮರೀಶ್ ಪುರಿಯಂತೆ ಮುಖ ಕೆಂಪುಮಾಡಿ ಘರ್ಜಿಸುತ್ತಾನೆ. F.B.I ಯ ಪೋಲಿಸರೊಡನೆ ಸಹಕರಿಸಿ ಕೇಸಿನಲ್ಲಿ ಸಾಕ್ಷಿಯಾಗುವ ಆಫರ್ ನೀಡುತ್ತಾನೆ. ಬದಲಾಗಿ, ಆತನಿಗೆ ಶಿಕ್ಷೆ ಕಡಿಮೆಯಾದೀತು. ಹೆಸರಿನ್ನೂ ಗುಪ್ತವಾಗೇ ಇರುವ ಈ ವಿಲನ್ ರಾಜ್‌ನ ಟೆಲಿಫೋನ್ ಟ್ಯಾಪ್ ಮಾಡಲು ಎಫ್.ಬಿ.ಐ ಗೆ ಸಹಾಯ ಮಾಡುತ್ತಾನೆ.
ಈ ಸುದ್ದಿಯೂ ರಾಜ್ ಮತ್ತು ಚೇಸಿಗೆ ಕ್ರಮೇಣ ತಿಳಿಯುತ್ತದೆ. ತಮ್ಮ ಆಟ ಮುಗಿಯಿತು ಇನ್ನು ಏನೂ ನಡೆಯೋಲ್ಲ ಎಂಬ ಆತಂಕ ಖಿನ್ನತೆ ಅವರನ್ನು ಆವರಿಸಿಕೊಳ್ಳುತ್ತದೆ. (ಇಲ್ಲಿ ಕೆಲವು ಸಾಡ್ ಸೀನ್, ಒಂದು ಸಾಡ್ ಸಾಂಗ್ ತುರುಕಬಹುದು, ‘ಜಾನೇ ಕಹಾಂ ಗಯೇ ಓ ದಿನ್. . ‘ ಥರಾ) ಈ ಟೆಲಿಫೋನ್ ಟ್ಯಾಪ್ ಮಾಡಿದ ಪೋಲಿಸರು ಸಾಕಷ್ಟು ಪುರಾವೆಗಳನ್ನು ರಾಜ್ ಮೇಲೆ ಒಟ್ಟು ಹಾಕಿ ಕೊನೆಗೊಮ್ಮೆ ಅಕ್ಟೋಬರ್ ೧೬ ರಂದು ಆತನನ್ನು ಎರೆಸ್ಟ್ ಮಾಡುತ್ತಾರೆ.
ಈಗ ಕೇಸು ಕೋರ್ಟಿನಲ್ಲಿ ನಡೆಯುತ್ತಿದೆ. ಒಟ್ಟು ೯ ಜನರ ವಿರುದ್ಧ ಕೇಸು ನಡೆಯುತ್ತಿದೆ ಚೇಸಿಯನ್ನು ಹೊರತುಪಡಿಸಿ ಬೇರೆ ಎಲ್ಲರೂ ಆತನಿಗೆ ತಿರುಗಿ ಬಿದ್ದು ಎಫ್ .ಬಿ.ಐ ಜೊತೆ ಕಡಿಮೆ ಶಿಕ್ಷೆಯ ಆಸೆಗೆ ಸಾಕ್ಷಿಯಾಗಿ ಸಹಕರಿಸುತ್ತಿದ್ದಾರೆ. (ಕತೆಯ ಈ ಭಾಗದಲ್ಲಿ ‘ದೋಸ್ತ್, ದೋಸ್ತ್ ನಾ ರಹಾ’ ಎಂಬ ರೀತಿಯ ಹಾಡು ಬಾಕ್‌ಗ್ರೌಂಡಿನಲ್ಲಿ ಮೊಳಗುತ್ತದೆ.)  ಸಧ್ಯಕ್ಕೆ ೧೦೦ ಮಿಲಿಯನ್ ಡಾಲರ್ ಜಾಮೀನಿನಲ್ಲಿ ಹೊರಬಂದ ರಾಜ್ ತನ್ನ ಮೇಲೆ ಸರಕಾರ ಹಾಕಿದ ಹತ್ತಾರು ಕೇಸುಗಳನ್ನು ಎದುರಿಸಲು ಹೆಸರಾಂತ ಲಾಯರ್‌ಗಳನ್ನು ನಿಯುಕ್ತಿಗೊಳಿಸಿದ್ದಾನೆ.
ಕತೆಯ ಹೀರೋನಿಗೆ ಯಾವತ್ತೂ ಕಷ್ಟಗಳು ಒಟ್ಟೊಟ್ಟಾಗಿಯೇ ಬರುತ್ತವೆ. ಅದೇ ರೀತಿ ಆತನ ವಿರುದ್ಧ ಶ್ರೀಲಂಕಾದಲ್ಲಿ ಎಲ್.ಟಿ.ಟಿ.ಇ ಗೆ ಧನಸಹಾಯವಿತ್ತ ಆರೋಪವೂ ಈಗ ಸೇರಿಕೊಂಡಿದೆ. ಅದರ ಮೇಲೂ ಕೇಸುಗಳು ಜಮೆಯಾಗಿವೆ. ಆತ ಶ್ರೀಲಂಕದ ಶೇರು ಬಜಾರಿನಲ್ಲೂ ಅತಿ ದೊಡ್ಡ ಹೂಡಿಕೆದಾರ. ಆತನ ಬಂಧನದ ಸುದ್ದಿ ಬರುತ್ತಲೇ ಶ್ರೀಲಂಕ ಮಾರುಕಟ್ಟೆ ಕುಸಿಯಿತು. ಗಾಲ್ಲಿಯಾನ್ ಈಗ ಮುಚ್ಚಿದೆ ಹಾಗೂ ರಾಜ್ ರಾಜರತ್ನಂ ಜಾಮೀನು ಮತ್ತು ಕೋರ್ಟ್ ಕೇಸಿನ ಖರ್ಚಿಗಾಗಿ ಸುಮಾರು ಸಂಪತ್ತನ್ನು ಕರಗಿಸಬೇಕಾಗಿ ಬಂತು.
ಇದು ಅಮೇರಿಕದ ಇತಿಹಾಸದಲ್ಲೇ ಶೇರಿನ ಇನ್ಸೈಡರ್ ಟ್ರೇಡಿಂಗ್‌ನ ಅತಿದೊಡ್ಡ ಸ್ಕಾಮ್ ಎಂಬುದನ್ನ ಕೇಳಿದ ನಮ್ಮ ದಲಾಲ್ ಸ್ಟ್ರೀಟ್‌ನ ಪಂಟರ್‌ಗಳು ಜೋರಾಗಿ ನಕ್ಕರಂತೆ! ಇಷ್ಟೆಲ್ಲಾ ಗದ್ದಲ ಮಾಡುವ ಜುಜುಬಿ ೧೦೦ ಕೋಟಿಯ ಈ ಕೇಸು ನಮ್ಮ ಮಾರುಕಟ್ಟೆಯಲ್ಲಿ ಹಾಡುಹಗಲಲ್ಲೇ ನಡೆಯುವ ಒಂದು ದಿನದ ಒಳಕೈ ವ್ಯವಹಾರಕ್ಕೂ ಕಡಿಮೆ!!
(ಮುಂದಿನವಾರ:   ಟೋಪಿವಿದ್ಯೆಯ ಎರಡನೇ ಮುಖ. . . . )

‍ಲೇಖಕರು avadhi

12 May, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading